ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸರಳ, ಸಂತುಲಿತ ಬಾಳ್ವೆ ನಡೆಸಿ

ಸರಳ, ಸಂತುಲಿತ ಬಾಳ್ವೆ ನಡೆಸಿ

ಸರಳ, ಸಂತುಲಿತ ಬಾಳ್ವೆ ನಡೆಸಿ

ಸರಳ, ಸಂತುಲಿತ ಬಾಳ್ವೆ ನಿಜಕ್ಕೂ ಲಾಭಕರ. ಆದರೆ ಈ ರೀತಿ ಜೀವನ ನಡೆಸುವುದು ಹೇಗೆ? ಮೊದಲು, ನೀವು ನಿಮ್ಮ ಆದ್ಯತೆಗಳನ್ನು ಪರಿಗಣಿಸಬೇಕಾಗಬಹುದು. ಅದು ಹೇಗೆ?

ಸ್ವತಃ ಹೀಗೆ ಕೇಳಿಕೊಳ್ಳಿ: ‘ಈ ತನಕ ನಾನೇನು ಸಾಧಿಸಿದ್ದೇನೆ? ಇನ್ನೇನು ಸಾಧಿಸಲಿಕ್ಕಿದೆ?’ ನಿಮ್ಮ ಮುಖ್ಯ ಗುರಿಗಳನ್ನು ಕೆಳಗೆ ಪಟ್ಟಿಮಾಡಿ:

1.

2.

3.

ಇಂದು ಅನೇಕ ಜನರು ಜೀವನವನ್ನು ನಶ್ವರವೆಂದೆಣಿಸುತ್ತಾರೆ ಹಾಗೂ ಅದರ ಬಗ್ಗೆ ಪ್ರಾಪಂಚಿಕ ನೋಟವನ್ನು ಹೊಂದಿದ್ದಾರೆ. ಆದ್ದರಿಂದ, “ನಾವು ತಿನ್ನೋಣ, ಕುಡಿಯೋಣ, ನಾಳೆ ಸಾಯುತ್ತೇವಲ್ಲ” ಎಂದವರು ಹೇಳುತ್ತಾರೆ. (1 ಕೊರಿಂಥ 15:32) ವಸ್ತುಗಳನ್ನು ಖರೀದಿಸಲು ಹೆಚ್ಚೆಚ್ಚು ಹಣವನ್ನು ಲಭ್ಯಗೊಳಿಸುವ ಇಂದಿನ ಕೆಲಸದ ಶೈಲಿಯೇ ಅತ್ಯುತ್ತಮ ಜೀವನವೆಂದು ಅವರು ನಂಬಿದ್ದಾರೆ. ಆದರೆ ಬೈಬಲ್‌ ಈ ನೋಟವನ್ನು ಒಪ್ಪುವುದಿಲ್ಲ.

ಐಶ್ವರ್ಯವನ್ನು ಕೂಡಿಸಿಟ್ಟರೂ ಅದನ್ನು ಆನಂದಿಸಲಾಗದೇ ಮೃತಪಟ್ಟ ವ್ಯಕ್ತಿಯ ಕುರಿತು ಯೇಸು ಒಂದು ದೃಷ್ಟಾಂತದಲ್ಲಿ ತಿಳಿಸಿ ಬಳಿಕ ಹೀಗಂದನು: “ತನಗಾಗಿ ನಿಧಿಯನ್ನು ಕೂಡಿಸಿಟ್ಟು ದೇವರ ವಿಷಯದಲ್ಲಿ ಐಶ್ವರ್ಯವಂತನಾಗದೆ ಇರುವವನು ಆ ಮನುಷ್ಯನಂತಿದ್ದಾನೆ.” (ಲೂಕ 12:16-21) ತನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಆ ಮನುಷ್ಯನು ಕಷ್ಟಪಟ್ಟು ದುಡಿದದ್ದು ತಪ್ಪಾಗಿತ್ತೋ? ಖಂಡಿತ ಇಲ್ಲ. ಅವನು ಪ್ರಾಪಂಚಿಕತೆಯ ಮೇಲೆ ಗಮನನೆಟ್ಟಿದ್ದೇ ಸಮಸ್ಯೆಯಾಗಿತ್ತು. ಅವನು ಯೋಜನೆಗಳನ್ನು ಹಾಕುವಾಗ ದೇವರ ದೃಷ್ಟಿಕೋನವನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಫಲಿತಾಂಶವಾಗಿ, ಅವನ ಐಶ್ವರ್ಯ, ದುಡಿಮೆ ಎಲ್ಲವೂ ಅವನಿಗೆ ಬಾಳುವ ಪ್ರಯೋಜನಗಳನ್ನು ತರಲಿಲ್ಲ. ಎಂಥ ದುರಂತ!—ಪ್ರಸಂಗಿ 2:17-21; ಮತ್ತಾಯ 16:26.

ಯೇಸುವಾದರೋ ಶಾಶ್ವತ ಪ್ರತಿಫಲಕ್ಕೋಸ್ಕರ ದುಡಿಯುವಂತೆ ನಮ್ಮನ್ನು ಆಮಂತ್ರಿಸುತ್ತಾನೆ. “ನಶಿಸಿಹೋಗುವ ಆಹಾರಕ್ಕಾಗಿ ಅಲ್ಲ” ಬದಲಾಗಿ, “ನಿತ್ಯಜೀವಕ್ಕಾಗಿ ಉಳಿಯುವಂಥ ಆಹಾರಕ್ಕಾಗಿ ದುಡಿಯಿರಿ” ಎಂದವನು ಪ್ರೋತ್ಸಾಹಿಸಿದನು. (ಯೋಹಾನ 6:27) ಈ ಮಾತನ್ನು ಹೇಳುವ ಮುಂಚೆ, “ದೇವರು ಲೋಕವನ್ನು ಎಷ್ಟೊಂದು ಪ್ರೀತಿಸಿದನೆಂದರೆ ಆತನು ತನ್ನ ಏಕೈಕಜಾತ ಪುತ್ರನನ್ನು ಕೊಟ್ಟನು; ಅವನಲ್ಲಿ ನಂಬಿಕೆಯಿಡುವ ಯಾವನೂ ನಾಶವಾಗದೆ ನಿತ್ಯಜೀವವನ್ನು ಪಡೆದುಕೊಳ್ಳಬೇಕೆಂದು ಅವನನ್ನು ಕೊಟ್ಟನು” ಎಂದವನು ಹೇಳಿದ್ದನು. (ಯೋಹಾನ 3:16) ಎಂಥ ಅದ್ಭುತಕರ ಪ್ರತಿಫಲ!

ನೀವು ಚಿಂತೆಯನ್ನು ಹೇಗೆ ಮೆಟ್ಟಿನಿಲ್ಲಬಲ್ಲಿರಿ?

ಮಾನವರು ಭೌತಿಕ ವಿಷಯಗಳ ಬಗ್ಗೆ ಚಿಂತಿಸುತ್ತಿರುತ್ತಾರೆ ಎಂಬುದು ಯೇಸುವಿಗೂ ಗೊತ್ತಿತ್ತು. ಆದ್ದರಿಂದ ಅವನು ತನ್ನ ಶಿಷ್ಯರಿಗೆ ಉತ್ತೇಜಿಸಿದ್ದು: “ಏನು ಊಟಮಾಡಬೇಕು? ಏನು ಕುಡಿಯಬೇಕು? ಎಂದು ಚಿಂತೆಮಾಡುವುದನ್ನು ಬಿಟ್ಟುಬಿಡಿರಿ ಮತ್ತು ಕಳವಳದ ಅನಿಶ್ಚಿತತೆಯನ್ನು ಬಿಟ್ಟುಬಿಡಿರಿ; ಏಕೆಂದರೆ ಲೋಕದ ಜನಾಂಗಗಳು ಇವುಗಳನ್ನು ತವಕದಿಂದ ಬೆನ್ನಟ್ಟುತ್ತಿವೆ. ಆದರೆ ಇವು ನಿಮಗೆ ಬೇಕಾಗಿವೆ ಎಂಬುದು ನಿಮ್ಮ ತಂದೆಗೆ ತಿಳಿದಿದೆ. ಆದರೆ ನೀವು ಆತನ ರಾಜ್ಯವನ್ನು ಹುಡುಕುತ್ತಾ ಇರಿ, ಆಗ ಇವೆಲ್ಲವೂ ನಿಮಗೆ ಕೂಡಿಸಲ್ಪಡುವವು.”—ಲೂಕ 12:29-31.

ಈ ಭರವಸದಾಯಕ ಮಾತುಗಳಿಂದ ಪ್ರಚೋದಿತರಾಗಿ ಅಸಂಖ್ಯಾತ ಕ್ರೈಸ್ತರು ತಮ್ಮ ಜೀವನಗಳನ್ನು ಸರಳಗೊಳಿಸಿದ್ದಾರೆ. ಮಲೇಷಿಯದಲ್ಲಿ ನೆಲೆಸಿರುವ ಜೂಲಿಯಟ್‌ ಹೇಳುವುದು: “ನನ್ನ ಉದ್ಯೋಗ ನನ್ನೆಲ್ಲಾ ಶಕ್ತಿಯನ್ನು ಬಸಿದು ಬರಿದು ಮಾಡಿತು, ನನ್ನನ್ನು ನಿರಾಶೆಯ ಕೂಪಕ್ಕೆ ತಳ್ಳಿತು. ಆದಕಾರಣ ನಮ್ಮ ಜೀವನವನ್ನು ಸರಳೀಕರಿಸಲು ಸಹಾಯ ಮಾಡುವಂತೆ ನಾನು ಮತ್ತು ನನ್ನ ಪತಿ ಯೆಹೋವನಿಗೆ ಪ್ರಾರ್ಥಿಸಿದೆವು. ಅದಕ್ಕೆ ಥಟ್ಟನೆ ಉತ್ತರ ಸಿಕ್ಕಿತು. ಒಂದು ತಿಂಗಳೊಳಗೇ, ಅಶಕ್ತ ಮಕ್ಕಳಿಗೆ ಕಲಿಸುವ ಅರೆಕಾಲಿಕ ಉದ್ಯೋಗ ನನಗೆ ಸಿಕ್ಕಿತು.” ಚಾವಣಿ ನಿರ್ಮಾಣದ ಗುತ್ತಿಗೆದಾರನಾಗಿರುವ ಆಸ್ಟ್ರೇಲಿಯದ ಸ್ಟೀವ್‌ ಎಂಬಾತನು, ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತನ್ನ ಕುಟುಂಬದೊಟ್ಟಿಗೆ ಹೆಚ್ಚು ಸಮಯ ಕಳೆಯಲಿಕ್ಕಾಗಿ ತನ್ನ ಕೆಲಸದಲ್ಲಿ ಹೊಂದಾಣಿಕೆಗಳನ್ನು ಮಾಡಿಕೊಂಡನು. ಅವನ ಪತ್ನಿ ಮೊರೀನ್‌ ವಿವರಿಸುವುದು: “ಅವರೀಗ ಬಹಳ ಸಂತೋಷವಾಗಿದ್ದಾರೆ, ಆದ್ದರಿಂದ ನಮಗೂ ತುಂಬ ಸಂತೋಷ. ಅವರು ಹೆಚ್ಚು ಸಮಯ ಮನೆಯಲ್ಲಿರುವುದನ್ನು ಮಕ್ಕಳು ಇಷ್ಟಪಡುತ್ತಾರೆ. ನನಗೂ ಇಷ್ಟ. ಜೀವನ ಸರಳವಾಗಿಡಿ, ಆಗ ಇಡೀ ಕುಟುಂಬ ಏಳಿಗೆಹೊಂದುತ್ತದೆ.”

ಆದರೆ, ನೀವು ನಿಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದು ಮನೆಯನ್ನೂ ಕಳೆದುಕೊಳ್ಳುವ ಸನ್ನಿವೇಶದಲ್ಲಿರುವಲ್ಲಿ, ಯೇಸು ಹೇಳಿದ ಮಾತುಗಳನ್ನು ಅನುಸರಿಸಲು ನಿಮಗೆ ತುಂಬ ನಂಬಿಕೆ ಬೇಕಾದೀತು. ಆದಾಗ್ಯೂ ಆಧ್ಯಾತ್ಮಿಕ ವಿಷಯಗಳಿಗೆ ಆದ್ಯತೆ ಕೊಡುವ ಮೂಲಕ ಮತ್ತು ದೇವರಲ್ಲಿ ಭರವಸೆಯಿಡುವ ಮೂಲಕ ನೀವು ಕೂಡ ಸರಳ, ಸಂತುಲಿತ ಬಾಳ್ವೆ ನಡೆಸಬಲ್ಲಿರಿ. ಹೀಗೆ ಮಾಡುವಲ್ಲಿ ದೇವರ ನೀತಿಯುತ ಹೊಸ ಲೋಕದಲ್ಲಿ “ವಾಸ್ತವವಾದ ಜೀವನವನ್ನು” ಅಂದರೆ ಶಾಶ್ವತವಾಗಿ ಬದುಕುವ ಆಶೀರ್ವಾದವನ್ನು ಪಡೆಯಲು ನಿಮಗೆ ಸಹಾಯವಾಗುವುದು. ಅಲ್ಲಿ ಪ್ರತಿಯೊಂದು ಕೆಲಸವೂ ಆನಂದದಾಯಕವಾಗಿರುವುದು ಮತ್ತು ಯಾವುದೇ ದುಡಿಮೆ ವ್ಯರ್ಥವಾಗದು.—1 ತಿಮೊಥೆಯ 6:17-19; ಯೆಶಾಯ 65:21-23.

ಬೈಬಲ್‌ ವಾಗ್ದಾನಿಸುವ ಈ ‘ವಾಸ್ತವವಾದ ಜೀವನದ’ ಬಗ್ಗೆ ಹೆಚ್ಚನ್ನು ಕಲಿಯಲು ನೀವು ಬಯಸುತ್ತೀರೋ? ಹಾಗಿರುವಲ್ಲಿ, ನಿಮ್ಮ ಪ್ರದೇಶದಲ್ಲಿರುವ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿ ಇಲ್ಲವೆ ಈ ಪತ್ರಿಕೆಯ 5ನೇ ಪುಟದಲ್ಲಿರುವ ಸೂಕ್ತ ವಿಳಾಸಕ್ಕೆ ಪತ್ರ ಬರೆಯಿರಿ. (g10-E 01)

[ಪುಟ 31ರಲ್ಲಿರುವ ಸಂಕ್ಷಿಪ್ತ ವಿವರಣೆ]

ದೇವರು ತರುವ ಹೊಸ ಲೋಕದಲ್ಲಿ ಪ್ರತಿಯೊಂದು ಕೆಲಸ ಆನಂದದಾಯಕವೂ ಪ್ರತಿಫಲದಾಯಕವೂ ಆಗಿರುವುದು

[ಪುಟ 30ರಲ್ಲಿರುವ ಚೌಕ]

ಮನೆಯ ಹೊರಗೆ ಕೆಲಸವನ್ನು ಸೃಷ್ಟಿಸಿಕೊಳ್ಳಬಲ್ಲಿರೋ?

ಈ ಕೆಳಗಿನ ಸಲಹೆಗಳು ನಿರುದ್ಯೋಗದ ಸಮಸ್ಯೆಯೇಳುವಾಗ ಲೋಕದ ಕೆಲವು ಭಾಗಗಳಲ್ಲಿ ನೆರವಾಗಬಲ್ಲವು:

● ಮನೆ ನೋಡಿಕೊಳ್ಳುವ ಕೆಲಸ (ಜನರು ವ್ಯವಹಾರದ ನಿಮಿತ್ತ ಇಲ್ಲವೆ ರಜೆಯಲ್ಲಿ ಬೇರೆಕಡೆ ಹೋಗಿದ್ದು, ತಮ್ಮ ಮನೆಯ ಜೋಕೆಯನ್ನು ಬಯಸುವಲ್ಲಿ)

● ಶುಚಿಗೊಳಿಸುವ ಕೆಲಸ: ಅಂಗಡಿಗಳು; ಕಛೇರಿಗಳು; ಮನೆಗಳು ಮತ್ತು ಅಪಾರ್ಟ್‌ಮೆಂಟ್‌ಗಳು (ನಿರ್ಮಾಣಾನಂತರ, ಅಗ್ನಿದುರಂತದ ನಂತರ, ಜನರು ನಿವೇಶನವನ್ನು ಖಾಲಿ ಮಾಡಿದ ನಂತರ); ಮನೆಕೆಲಸ (ಬೇರೆಯವರ ಮನೆಗಳಲ್ಲಿ); ಕಿಟಕಿಗಳು (ವ್ಯಾಪಾರದ ಸ್ಥಳಗಳಲ್ಲಿ ಹಾಗೂ ಮನೆಗಳಲ್ಲಿ)

● ರಿಪೇರಿ ಕೆಲಸ: ಸೈಕಲ್‌ಗಳು; ಎಲ್ಲ ಬಗೆಯ ಉಪಕರಣಗಳು

● ಕೈಕೆಲಸ: ಮನೆಯ ಹೊರಭಾಗಕ್ಕೆ ಮರ ಅಥವಾ ಲೋಹದ ಹೊದಿಕೆ ಹಾಕುವುದು; ಕಪಾಟು, ಬಾಗಿಲು, ದ್ವಾರಮಂಟಪಗಳನ್ನು ನಿರ್ಮಿಸುವುದು; ಬಣ್ಣಬಳಿಯುವುದು; ಬೇಲಿಹಾಕುವುದು; ಚಾವಣಿ ನಿರ್ಮಿಸುವುದು

● ಬೇಸಾಯ ಕೆಲಸ: ಬಿತ್ತನೆ, ಕೊಯ್ಲು

● ಹೂದೋಟ ರಚನೆ ಮತ್ತು ಗಿಡಗಳ ಆರೈಕೆಯ ಕೆಲಸ: ಕಛೇರಿಗಳಲ್ಲಿ, ಬ್ಯಾಂಕುಗಳಲ್ಲಿ, ಸಭಾಂಗಣಗಳಲ್ಲಿ, ವ್ಯಾಪಾರ ಮಳಿಗೆ ಮತ್ತು ಅಂಗಳಗಳಲ್ಲಿ

● ಆಸ್ತಿ ನಿರ್ವಹಣೆಯ ಕೆಲಸ: ಉಸ್ತುವಾರಿ, ಮೇಲ್ವಿಚಾರಣೆ (ಕೆಲವೊಮ್ಮೆ ಉಚಿತ ವಸತಿ ವ್ಯವಸ್ಥೆ ಇರುತ್ತದೆ)

● ಮೊಸೇಯಿಕ್‌ ಮತ್ತು ಟೈಲ್ಸ್‌ ಹಾಕುವುದು

● ವಾರ್ತಾ ಪತ್ರಿಕೆಗಳನ್ನು ವಿತರಿಸುವುದು (ವಯಸ್ಕರು ಮತ್ತು ಮಕ್ಕಳು) ಮತ್ತು ಜಾಹೀರಾತುಗಳನ್ನು, ಪುರಸಭೆಯ ಬಿಲ್‌ಗಳನ್ನು ಮನೆಗಳಿಗೆ ತಲಪಿಸುವುದು

● ಸಾಗಣೆ, ದಾಸ್ತಾನು

● ತೋಟವಿನ್ಯಾಸ, ಮರಗಳ ಸಮರಿಕೆ, ಹುಲ್ಲುಹಾಸನ್ನು ನೋಡಿಕೊಳ್ಳುವುದು, ಮರ ಕಡಿಯುವುದು

● ಶಾಲಾ ಬಸ್ಸಿನ ಚಾಲಕ

● ಛಾಯಾಚಿತ್ರಗ್ರಹಣ (ಭಾವಚಿತ್ರಗಳು ಮತ್ತು ಸಾರ್ವಜನಿಕ ಸಮಾರಂಭಗಳು)

● ಮನೆ/ಆಫೀಸುಗಳ ಒಳ ಅಲಂಕರಣ

● ಕೆಲಸದ ವಿನಿಮಯ: ಕಾರನ್ನು ದುರಸ್ತಿಮಾಡಿಕೊಟ್ಟು ಎಲೆಕ್ಟ್ರಿಕಲ್‌ ಕೆಲಸ ಮಾಡಿಸಿಕೊಳ್ಳುವುದು, ಹೊಲಿಗೆ ಕೆಲಸಮಾಡಿಕೊಟ್ಟು ಕೊಳಾಯಿ ಕೆಲಸ ಮಾಡಿಸಿಕೊಳ್ಳುವುದು

ಹೆಚ್ಚಿನ ಮಾಹಿತಿಗಾಗಿ 1996, ಏಪ್ರಿಲ್‌ 8ರ ಎಚ್ಚರ! ಪತ್ರಿಕೆಯ ಪುಟ 3-11ನ್ನು ನೋಡಿ.

[ಪುಟ 31ರಲ್ಲಿರುವ ಚೌಕ/ಚಿತ್ರ]

ಮನೆಯಲ್ಲೇ ಕೆಲಸವನ್ನು ಸೃಷ್ಟಿಸಿಕೊಳ್ಳಲು ಮಾರ್ಗಗಳು

ಆಸುಪಾಸಿನಲ್ಲಿನ ಜನರ ಅಗತ್ಯಗಳನ್ನು ತಿಳಿದುಕೊಳ್ಳಿ. ನೆರೆಹೊರೆಯವರನ್ನು ಕೇಳಿ. ನೀವೇ ಮೊದಲ ಹೆಜ್ಜೆ ತೆಗೆದುಕೊಳ್ಳಿ.

● ಬೇಬಿಸಿಟ್ಟಿಂಗ್‌, ಮಗುವಿನ ಆರೈಕೆ

● ಮನೆಯಲ್ಲಿ ತರಕಾರಿ ಅಥವಾ ಹೂವುಗಳನ್ನು ಬೆಳೆಸಿ ಮಾರುವುದು; ಹಣ್ಣಿನರಸ ತಯಾರಿಸಿ ಮಾರುವುದು

● ಬಟ್ಟೆ ಹೊಲಿಯುವುದು, ಅಳತೆಗೆ ತಕ್ಕಂತೆ ಮಾರ್ಪಡಿಸುವುದು ಮತ್ತು ಸರಿಪಡಿಸುವುದು

● ಕಂಪೆನಿ ಇಲ್ಲವೆ ತಯಾರಕರ ಚಿಲ್ಲರೆ ಕೆಲಸ ಮಾಡಿಕೊಡುವುದು

● ಉಪ್ಪಿನಕಾಯಿ, ಹಪ್ಪಳ ತಯಾರಿಸುವುದು, ಊಟತಿಂಡಿ ತಯಾರಿಸುವುದು

● ರಜಾಯಿ ಹೊಲಿಯುವುದು, ಕುಸುರಿ ಕೆಲಸ, ಹೆಣಿಗೆ; ಕುಚ್ಚು ಹಾಕುವುದು, ಕುಂಬಾರಗೆಲಸ; ಇತರ ಕರಕುಶಲ ಕೆಲಸಗಳು

● ಪೀಠೋಪಕರಣಗಳಿಗೆ ಗವಸು ಹಾಕುವುದು

● ವ್ಯಾಪಾರ ಇಲ್ಲವೆ ಸಂಸ್ಥೆಗಳ ಲೆಕ್ಕಾಚಾರ ನೋಡಿಕೊಳ್ಳುವುದು, ಟೈಪಿಂಗ್‌, ಗೃಹ ಕಂಪ್ಯೂಟರ್‌ ಸೇವೆಗಳು

● ಜೇನುಸಾಕಣೆ

● ಕೇಶವಿನ್ಯಾಸ

● ಊಟ ವಸತಿಗಳನ್ನು ಒದಗಿಸುವುದು

● ಟ್ಯೂಷನ್‌ ಕೊಡುವುದು

● ಕಾರುಗಳನ್ನು ತೊಳೆಯುವುದು, ಪಾಲಿಷ್‌ ಮಾಡುವುದು (ಗಿರಾಕಿಯು ನಿಮ್ಮ ಮನೆಗೆ ಕಾರನ್ನು ತರುತ್ತಾನೆ)

● ಸಾಕು ಪ್ರಾಣಿಗಳನ್ನು ಅಂದಗೊಳಿಸುವುದು ಮತ್ತು ಅವುಗಳಿಗೆ ತರಬೇತಿ ಕೊಡುವುದು

● ವಾಚ್‌ ರಿಪೇರಿ

ಸೂಚನೆ: ಮೇಲೆ ತಿಳಿಸಲಾಗಿರುವ ಹೆಚ್ಚಿನ ಕೆಲಸಗಳ ಬಗ್ಗೆ ನಿಮ್ಮ ಮನೆ ಹೊರಗೆ ಒಂದು ಬೋರ್ಡ್‌ ಹಾಕುವ ಮೂಲಕ ಜಾಹೀರಾತು ಮಾಡಬಹುದು.