ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರಿದ್ದಾನೆಂಬ ನಂಬಿಕೆ ತರ್ಕಬದ್ಧವೋ?

ದೇವರಿದ್ದಾನೆಂಬ ನಂಬಿಕೆ ತರ್ಕಬದ್ಧವೋ?

ದೇವರಿದ್ದಾನೆಂಬ ನಂಬಿಕೆ ತರ್ಕಬದ್ಧವೋ?

ಸೂಕ್ಷ್ಮ ಪರಮಾಣು ಕಣಗಳಿಂದ ಹಿಡಿದು ಬೃಹತ್ತಾದ ಗ್ಯಾಲಕ್ಸಿಗಳನ್ನು ಕರಾರುವಕ್ಕಾದ ನಿಯಮಗಳು ನಿಯಂತ್ರಿಸುತ್ತವೆ. ಆ ನಿಯಮಗಳನ್ನು ಯಾರು ರಚಿಸಿದರೆಂದು ಎಂದಾದರೂ ಯೋಚಿಸಿದ್ದೀರೋ? ಜೀವರಾಶಿಗಳ ವೈವಿಧ್ಯತೆ, ಸಂಕೀರ್ಣತೆ, ವಿಸ್ಮಯಕಾರಿ ವಿನ್ಯಾಸದ ಬಗ್ಗೆ ಯಾವತ್ತಾದರೂ ಚಿಂತಿಸಿದ್ದೀರೋ? ಅಂತರಿಕ್ಷದಲ್ಲಿ ನಡೆದ ಒಂದು ಮಹಾ ಸ್ಫೋಟ ಮತ್ತು ವಿಕಾಸದಿಂದ ವಿಶ್ವವೂ ಅದರಲ್ಲಿರುವ ಜೀವರಾಶಿಯೂ ಅಸ್ತಿತ್ವಕ್ಕೆ ಬಂತೆಂಬುದು ಅನೇಕರ ಅಭಿಪ್ರಾಯ. ಇತರರಾದರೊ ಇದೆಲ್ಲದ್ದಕ್ಕೂ ಬುದ್ಧಿವಂತ ಸೃಷ್ಟಿಕರ್ತನೇ ಕಾರಣನೆಂದು ಆತನಿಗೆ ಕೀರ್ತಿ ಸಲ್ಲಿಸುತ್ತಾರೆ. ಇವುಗಳಲ್ಲಿ ಯಾವ ದೃಷ್ಟಿಕೋನ ನಿಮಗೆ ತರ್ಕಬದ್ಧವೆನಿಸುತ್ತದೆ?

ಜನರಿಗೆ ಯಾವುದೇ ದೃಷ್ಟಿಕೋನ ಇರಲಿ ಅದರಲ್ಲಿ ನಂಬಿಕೆಯು ಪಾತ್ರವಹಿಸುತ್ತದೆ. ಉದಾಹರಣೆಗೆ ದೇವರಿದ್ದಾನೆಂಬ ನಿಶ್ಚಿತಾಭಿಪ್ರಾಯಕ್ಕೆ ನಂಬಿಕೆಯೇ ಆಧಾರ. ಏಕೆಂದರೆ ಬೈಬಲ್‌ ಹೇಳುವಂತೆ “ಯಾವ ಮನುಷ್ಯನೂ ಎಂದಿಗೂ ದೇವರನ್ನು ಕಂಡಿಲ್ಲ.” (ಯೋಹಾನ 1:18) ಹಾಗೆಯೇ ಈ ವಿಶ್ವದ ರಚನೆ ಆದದ್ದನ್ನಾಗಲಿ ಜೀವ ಉಗಮವಾದದ್ದನ್ನಾಗಲಿ ಯಾವ ಮನುಷ್ಯನೂ ನೋಡಿಲ್ಲ. ಅಲ್ಲದೆ, ಒಂದು ಜೀವಿ ವಿಕಾಸವಾಗುತ್ತಾ ಶ್ರೇಷ್ಠವಾದ ಇನ್ನೊಂದು ಜೀವಿ ಅಥವಾ ಭಿನ್ನ ಪ್ರಭೇದದ ಜೀವಿ ಆಗುವುದನ್ನು ಸಹ ಯಾರೂ ನೋಡಿಲ್ಲ. ವಾಸ್ತವದಲ್ಲಿ, ವಿಕಾಸವಾಗುವ ಹಂತದಲ್ಲಿರುವ ಪ್ರಾಣಿಗಳ ಪಳೆಯುಳಿಕೆಗಳು ಸಿಕ್ಕಿಲ್ಲ ಬದಲಾಗಿ ಎಲ್ಲ ಲಕ್ಷಣಗಳು ಪೂರ್ಣರೂಪದಲ್ಲಿರುವ ಪ್ರಾಣಿಗಳ ಪಳೆಯುಳಿಕೆಗಳೇ ಸಿಕ್ಕಿವೆ. * ಹೀಗಿರುವುದರಿಂದ ಮುಖ್ಯ ಪ್ರಶ್ನೆಯೇನೆಂದರೆ, ಯಾವುದಕ್ಕೆ ಭದ್ರ ಬುನಾದಿಯಿದೆ—ಜೀವವಿಕಾಸವಾಯಿತು ಎಂಬ ನಂಬಿಕೆಗೋ ಸೃಷ್ಟಿಕರ್ತನಿದ್ದಾನೆ ಎಂಬ ನಂಬಿಕೆಗೋ?

ನಿಮ್ಮ ನಂಬಿಕೆಗೆ ಬಲವಾದ ಸಾಕ್ಷ್ಯವಿದೆಯೋ?

ನಿಜ ‘ನಂಬಿಕೆಯು ಕಣ್ಣಿಗೆ ಕಾಣದಿರುವ ನಿಜತ್ವಗಳ ಪ್ರತ್ಯಕ್ಷ ನಿದರ್ಶನ ಆಗಿದೆ’ ಎನ್ನುತ್ತದೆ ಬೈಬಲ್‌. (ಇಬ್ರಿಯ 11:1) ದ ನ್ಯೂ ಇಂಗ್ಲಿಷ್‌ ಬೈಬಲ್‌ ಆ ವಚನವನ್ನು ಹೀಗೆ ಭಾಷಾಂತರಿಸುತ್ತದೆ: “ನಂಬಿಕೆಯು . . . ನಮಗೆ ಕಾಣದಂಥ ನಿಜತ್ವಗಳ ಬಗ್ಗೆ ವಿಶ್ವಾಸವನ್ನು ಹುಟ್ಟಿಸುತ್ತದೆ.” ಕಣ್ಣಿಗೆ ಕಾಣದ ಹಲವಾರು ನಿಜತ್ವಗಳನ್ನು ನೀವು ಸಹ ದೃಢವಾಗಿ ನಂಬುತ್ತೀರೆಂಬುದರಲ್ಲಿ ಎರಡು ಮಾತಿಲ್ಲ.

ಇದಕ್ಕೊಂದು ದೃಷ್ಟಾಂತ ತೆಗೆದುಕೊಳ್ಳೋಣ: ಮಹಾ ಅಲೆಕ್ಸಾಂಡರ್‌, ಜೂಲಿಯಸ್‌ ಸೀಸರ್‌, ಯೇಸು ಕ್ರಿಸ್ತ ಎಂಬ ವ್ಯಕ್ತಿಗಳು ಒಂದಾನೊಂದು ಕಾಲದಲ್ಲಿ ಭೂಮಿ ಮೇಲೆ ಬದುಕಿದ್ದರೆಂದು ಅನೇಕ ಗೌರವಾನ್ವಿತ ಇತಿಹಾಸಕಾರರು ನಂಬುತ್ತಾರೆ. ಅವರ ಈ ನಂಬಿಕೆಗೆ ಆಧಾರವಿದೆಯೋ? ಖಂಡಿತ ಇದೆ. ಅವರು ವಿಶ್ವಸನೀಯ ಐತಿಹಾಸಿಕ ಪುರಾವೆಗೆ ಬೊಟ್ಟುಮಾಡುತ್ತಾರೆ.

ವಿಜ್ಞಾನಿಗಳು ಸಹ ಕಣ್ಣಿಗೆ ಕಾಣದಿರುವ ನಿಜತ್ವಗಳನ್ನು ನಂಬುತ್ತಾರೆ. ಯಾಕಂದರೆ ಆ ನಿಜತ್ವಗಳಿಗೆ “ಪ್ರತ್ಯಕ್ಷ ನಿದರ್ಶನ” ಅಂದರೆ ಪ್ರತ್ಯಕ್ಷ ಸಾಕ್ಷ್ಯ ಇದೆ. ಉದಾಹರಣೆಗೆ, ಈ ವಿಶ್ವದ ಮೂಲ ಘಟಕಗಳಾದ ಧಾತುಗಳ ನಡುವಿನ ಸಂಬಂಧವು 19ನೇ ಶತಮಾನದ ರಷ್ಯನ್‌ ರಸಾಯನಶಾಸ್ತ್ರಜ್ಞ ದ್ಮಿತ್ರಿ ಮೆಂಡೆಲ್ಯೇವ್‌ರ ಗಮನಸೆಳೆಯಿತು. ಈ ಧಾತುಗಳಲ್ಲಿ ಹೋಲಿಕೆಗಳಿವೆಯೆಂದೂ ಅವುಗಳನ್ನು ಪರಮಾಣು ತೂಕ ಹಾಗೂ ರಾಸಾಯನಿಕ ಲಕ್ಷಣಗಳಿಗನುಸಾರ ವ್ಯವಸ್ಥಿತ ಕ್ರಮದಲ್ಲಿ ವರ್ಗೀಕರಿಸಬಹುದೆಂದೂ ಅವರು ಕಂಡುಹಿಡಿದರು. ಈ ಧಾತುಗಳ ವ್ಯವಸ್ಥಿತ ಕ್ರಮದ ಬಗ್ಗೆ ಅವರಿಗೆ ಎಷ್ಟು ನಂಬಿಕೆಯಿತ್ತೆಂದರೆ ಅವರು ‘ಧಾತುಗಳ ಆವರ್ತ ಕೋಷ್ಟಕ’ವನ್ನು ರಚಿಸಿದರು. ಮಾತ್ರವಲ್ಲ ಆ ಕಾಲದಲ್ಲಿ ಇನ್ನೂ ಅಜ್ಞಾತವಾಗಿದ್ದ ಹಲವಾರು ಧಾತುಗಳು ಅಸ್ತಿತ್ವದಲ್ಲಿವೆಯೆಂದು ಆ ಕೋಷ್ಟಕದಲ್ಲಿ ಕರಾರುವಾಕ್ಕಾಗಿ ಮುನ್ಸೂಚಿಸಿದರು.

ಪುರಾತತ್ತ್ವಜ್ಞರು ಸಾವಿರಾರು ವರ್ಷಗಳಿಂದಲೂ ನೆಲದಡಿ ಹೂತುಹೋಗಿರುವ ವಸ್ತುಗಳ ಆಧಾರದ ಮೇಲೆ ಪುರಾತನ ನಾಗರೀಕತೆಗಳ ಬಗ್ಗೆ ಕೆಲವು ವಿಷಯಗಳನ್ನು ಬೆಳಕಿಗೆ ತರುತ್ತಾರೆ. ಪುರಾತತ್ತ್ವಜ್ಞನೊಬ್ಬನಿಗೆ ಭೂಅಗೆತದಲ್ಲಿ ಹಲವಾರು ಕಲ್ಲುಬಂಡೆಗಳು ಸಿಗುತ್ತವೆಂದು ಇಟ್ಟುಕೊಳ್ಳಿ. ಒಂದೇ ಗಾತ್ರದಲ್ಲಿ ಕಡಿಯಲ್ಪಟ್ಟ ಆ ಕಲ್ಲುಬಂಡೆಗಳನ್ನು ನೆಲದಡಿ ಒಂದರ ಮೇಲೊಂದರಂತೆ ನೀಟಾಗಿ ಜೋಡಿಸಲಾಗಿದೆ. ಅದು ಕೂಡ ನೈಸರ್ಗಿಕವಾಗಿ ಆಗದಂಥ ಒಂದು ವಿಶಿಷ್ಟ ಜ್ಯಾಮಿತೀಯ ವಿನ್ಯಾಸದಲ್ಲಿ. ಇದೆಲ್ಲವನ್ನು ನೋಡಿ ಆ ಪುರಾತತ್ತ್ವಜ್ಞನು ಯಾವ ತೀರ್ಮಾನಕ್ಕೆ ಬರುವನು? ಕಲ್ಲುಗಳ ಆ ವಿನ್ಯಾಸ ಮತ್ತು ಜೋಡಣೆ ಆಕಸ್ಮಿಕವಾಗಿ ಆಯಿತೆಂದು ಹೇಳುವನೋ? ಖಂಡಿತ ಇಲ್ಲ. ಬದಲಿಗೆ ಇದು ಗತಕಾಲದಲ್ಲಿ ನಡೆದ ಮಾನವ ಚಟುವಟಿಕೆಗಳಿಗೆ ಸಾಕ್ಷ್ಯವೆಂದು ಪರಿಗಣಿಸುವನು. ಇದು ತರ್ಕಬದ್ಧ ತೀರ್ಮಾನವೂ ಹೌದು.

ಈ ತರ್ಕಕ್ಕನುಸಾರ ನೈಸರ್ಗಿಕ ಜಗತ್ತಿನಲ್ಲಿ ಕಂಡುಬರುವ ವಿನ್ಯಾಸದ ಹಿಂದೆಯೂ ಯಾರಾದರೂ ಇರಲೇಬೇಕಲ್ಲವೇ? ಗಣ್ಯ ವಿಜ್ಞಾನಿಗಳನ್ನು ಸೇರಿಸಿ ಅನೇಕರು ಈ ಅಭಿಪ್ರಾಯ ತಳೆದಿದ್ದಾರೆ.

ಆಕಸ್ಮಿಕವೋ ಉದ್ದೇಶಪೂರ್ವಕ ನಿರ್ಮಾಣವೋ?

ಹಲವಾರು ವರ್ಷಗಳ ಹಿಂದೆ ಬ್ರಿಟಿಷ್‌ ಗಣಿತಜ್ಞ, ಭೌತವಿಜ್ಞಾನಿ ಹಾಗೂ ಖಗೋಳಶಾಸ್ತ್ರಜ್ಞರಾದ ಸರ್‌ ಜೇಮ್ಸ್‌ ಜೀನ್ಸ್‌ ಬರೆದದ್ದೇನೆಂದರೆ, ಹೆಚ್ಚುತ್ತಿರುವ ವೈಜ್ಞಾನಿಕ ಜ್ಞಾನದ ಬೆಳಕಿನಲ್ಲಿ ‘ಈ ವಿಶ್ವವನ್ನು ಪಕ್ಕಾ ಗಣಿತಜ್ಞನೊಬ್ಬನು ರಚಿಸಿರಲೇಬೇಕೆಂದು ತೋರುತ್ತದೆ.’ ಆತನ ಸಾಮರ್ಥ್ಯಗಳನ್ನು ಮತ್ತು ಗುಣಗಳನ್ನೇ ನಮ್ಮ ಮನಸ್ಸು ಪ್ರತಿಬಿಂಬಿಸುತ್ತದೆ.

ಸರ್‌ ಜೀನ್ಸ್‌ ಮಾತ್ರವಲ್ಲದೆ ಇತರ ವಿಜ್ಞಾನಿಗಳು ಸಹ ಅದೇ ತೀರ್ಮಾನಕ್ಕೆ ಬಂದಿದ್ದಾರೆ. “ವಿಶ್ವದಲ್ಲಿರುವ ಅಚ್ಚುಕಟ್ಟಾದ ಸಂಯೋಜನೆಯನ್ನು ನೋಡಿ ಆಧುನಿಕ ಖಗೋಳಶಾಸ್ತ್ರಜ್ಞರ ಪೈಕಿ ಅನೇಕರು ವಿಶ್ವವನ್ನು ರಚಿಸಲಾಗಿದೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ” ಎಂದು ಬರೆದರು ಭೌತವಿಜ್ಞಾನಿ ಪಾಲ್‌ ಡೇವಿಸ್‌. ಅತ್ಯಂತ ಪ್ರಸಿದ್ಧ ಭೌತವಿಜ್ಞಾನಿ ಮತ್ತು ಗಣಿತಜ್ಞರಾದ ಆಲ್ಬರ್ಟ್‌ ಐನ್‌ಸ್ಟೈನ್‌ ಬರೆದದ್ದು: “[ನೈಸರ್ಗಿಕ ಜಗತ್ತನ್ನು] ನಾವು ಗ್ರಹಿಸಬಹುದು, ಅರ್ಥಮಾಡಿಕೊಳ್ಳಬಹುದು ಎಂಬುದೇ ಒಂದು ಚಮತ್ಕಾರ.” ಇನ್ನೂ ಅನೇಕರಿಗೆ ಜೀವವನ್ನು ಅಂದರೆ ಜೀವಿಗಳ ಮೂಲಭೂತ ಘಟಕಗಳಿಂದ ಹಿಡಿದು ವಿಸ್ಮಯಕಾರಿ ಮಾನವ ಮಿದುಳನ್ನು ನಾವು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿರುವುದು ಸಹ ಒಂದು ಚಮತ್ಕಾರವೇ.

ಡಿಎನ್‌ಎ ಮತ್ತು ಮಾನವ ಮಿದುಳು

ಜೀವಿಗಳ ವಂಶವಾಹಿ ಮಾಹಿತಿ ಸಂಗ್ರಹವೇ ಡಿಎನ್‌ಎ. * ಇದರ ಮೂಲಕವೇ ಆನುವಂಶೀಯ ಲಕ್ಷಣಗಳು ಪೀಳಿಗೆಯಿಂದ ಪೀಳಿಗೆಗೆ ದಾಟುತ್ತವೆ. ಈ ಡಿಎನ್‌ಎ ರಾಸಾಯನಿಕ ಸಂಕೇತ ರೂಪದಲ್ಲಿದ್ದು, ಆ ಸಂಕೇತವನ್ನು ಬಿಡಿಸಿ ಅದರಲ್ಲಿರುವ ಮಾಹಿತಿಗನುಸಾರ ಕಾರ್ಯವೆಸಗುವ ಕ್ಷಮತೆಯುಳ್ಳ ಕಣಗಳಲ್ಲಿರುತ್ತದೆ. ಡಿಎನ್‌ಎಯನ್ನು ನೀಲಿನಕ್ಷೆಗೆ ಇಲ್ಲವೆ ಪಾಕಸೂತ್ರಕ್ಕೆ ಹೋಲಿಸಲಾಗಿದೆ ಏಕೆಂದರೆ ಅದೊಂದು ಮಾಹಿತಿಯ ಆಗರ. ಈ ಮಾಹಿತಿಯ ಪ್ರಮಾಣವೆಷ್ಟು? ಡಿಎನ್‌ಎಯ ಮೂಲ ಘಟಕಗಳಾದ ನ್ಯೂಕ್ಲಿಯೋಟೈಡ್‌ಗಳನ್ನು ಅಕ್ಷರಗಳಾಗಿ ಪರಿವರ್ತಿಸುವಲ್ಲಿ, ಅವು “ಒಂದು ಮಿಲಿಯಕ್ಕಿಂತಲೂ ಹೆಚ್ಚು ಪುಟಗಳಿರುವ ಪುಸ್ತಕವನ್ನು ತುಂಬಿಸಬಲ್ಲದು” ಎನ್ನುತ್ತದೆ ಒಂದು ಕೃತಿ.

ಈ ಡಿಎನ್‌ಎ ಕಣಗಳು ಹೆಚ್ಚಿನ ಜೀವಿಗಳಲ್ಲಿ ಎಳೆಗಳಂತಿರುವ ಕ್ರೊಮೋಸೋಮ್‌ (ವರ್ಣತಂತು)ಗಳಲ್ಲಿರುತ್ತವೆ. ಈ ಕ್ರೊಮೋಸೋಮ್‌ಗಳು ಒಂದೊಂದೂ ಜೀವಕೋಶದ ನ್ಯೂಕ್ಲಿಯಸ್‌ನಲ್ಲಿ (ಕೋಶಕೇಂದ್ರದಲ್ಲಿ) ಸುರಕ್ಷಿತವಾಗಿರುತ್ತವೆ. ಆ ನ್ಯೂಕ್ಲಿಯಸ್‌ನ ಸರಾಸರಿ ವ್ಯಾಸ 1 ಇಂಚಿನ 0.0002ನೇ ಭಾಗ ಆಗಿರುತ್ತದೆ. ಸ್ವಲ್ಪ ಯೋಚಿಸಿ. ನಿಮ್ಮ ಅಪೂರ್ವ ದೇಹ ರಚನೆಯ ಮಾಹಿತಿಯು, ಸೂಕ್ಷ್ಮದರ್ಶಕದಿಂದ ಮಾತ್ರ ನೋಡಬಹುದಾದ ಪುಟ್ಟ ಪುಟ್ಟ ಪೊಟ್ಟಣಗಳಲ್ಲಿವೆ! ಇದು “ಜಗತ್ತಿನಲ್ಲೇ ಅತ್ಯಂತ ಹೆಚ್ಚಿನ ಮಾಹಿತಿಯನ್ನು ಶೇಖರಿಸಿ/ಮರಳಿಪಡೆಯುವ ವ್ಯವಸ್ಥೆ” ಎಂದು ವಿಜ್ಞಾನಿಯೊಬ್ಬನು ಸೂಕ್ತವಾಗಿ ಹೇಳಿದನು. ಇದಕ್ಕೆ ಹೋಲಿಸುವಾಗ ಕಂಪ್ಯೂಟರ್‌ ಚಿಪ್‌, ಡಿ.ವಿ.ಡಿ ಮುಂತಾದವುಗಳಲ್ಲಿ ಶೇಖರಿಸಿಡಲಾಗುವ ಮಾಹಿತಿ ಏನೇನೂ ಅಲ್ಲವೆಂಬುದು ಬೆಚ್ಚಿಬೀಳಿಸುವ ಸಂಗತಿ. ಅಷ್ಟೇ ಅಲ್ಲ, ಡಿಎನ್‌ಎ ಬಗ್ಗೆ ನಮಗೆ ತಿಳಿದಿರದ ಇನ್ನೂ ಎಷ್ಟೋ ಸಂಗತಿಗಳಿವೆ. “ಅದರ ಬಗ್ಗೆ ಒಂದು ಹೊಸ ಸಂಗತಿಯನ್ನು ಕಂಡುಹಿಡಿದಾಗ ಅದರಲ್ಲಿ ಏನಾದರೂ ಜಟಿಲತೆ ಇದ್ದು ಅದರ ಬಗ್ಗೆ ಇನ್ನೂ ಹೆಚ್ಚನ್ನು ತಿಳಿದುಕೊಳ್ಳಬೇಕಾಗುತ್ತದೆ” ಎನ್ನುತ್ತದೆ ನ್ಯೂ ಸೈಯಂಟಿಸ್ಟ್‌ ಪತ್ರಿಕೆ. *

ಇಷ್ಟು ಪರಿಪೂರ್ಣ ವಿನ್ಯಾಸ ಮತ್ತು ವ್ಯವಸ್ಥಿತಕ್ರಮ ಆಕಸ್ಮಿಕವಾಗಿ ಆಯಿತೆಂದು ಹೇಳುವುದು ತರ್ಕಬದ್ಧವೋ? ಹತ್ತು ಲಕ್ಷ ಪುಟಗಳಿರುವ ಪುಸ್ತಕವೊಂದು ನಿಮ್ಮ ಕೈಗೆ ಹೇಗೋ ಸಿಕ್ಕಿತ್ತೆಂದು ನೆನಸಿ. ಆ ಪುಸ್ತಕದಲ್ಲಿ ತುಂಬ ತಾಂತ್ರಿಕ ಪದಗಳಿವೆ ಮತ್ತು ಪರಿಣಾಮಕಾರಿಯಾದ ಸುಂದರ ಸಂಕೇತ ಭಾಷೆಯಲ್ಲಿ ಅದನ್ನು ಬರೆಯಲಾಗಿದೆ. ಅದರ ಗಾತ್ರ ತುಂಬ ಚಿಕ್ಕದ್ದು. ಎಷ್ಟೆಂದರೆ ಅದನ್ನು ಓದಲಿಕ್ಕಾಗಿ ನಿಮಗೆ ಹೆಚ್ಚು ಸಮರ್ಥವಾದ ಸೂಕ್ಷ್ಮದರ್ಶಕ ಬೇಕು. ಆ ಪುಸ್ತಕದಲ್ಲಿ, ಬುದ್ಧಿಶಕ್ತಿಯುಳ್ಳ ಒಂದು ಯಂತ್ರವನ್ನು ತಯಾರಿಸುವುದು ಹೇಗೆಂಬ ನಿಖರ ಸೂಚನೆಗಳೂ ಇವೆ. ಆ ಯಂತ್ರಕ್ಕೆ ಸರಿಯಾದ ಸಮಯದಲ್ಲಿ ಸರಿಯಾದ ವಿಧದಲ್ಲೇ ಜೋಡಿಸಬೇಕಾದ ಬಿಲಿಯಗಟ್ಟಲೆ ಭಾಗಗಳಿದ್ದು, ಸ್ವ-ರಿಪೇರಿ ಮಾಡುವ, ಸ್ವ-ನಕಲು ಮಾಡುವ ಸಾಮರ್ಥ್ಯವಿದೆ. ಇಂಥ ಪುಸ್ತಕವು ತನ್ನನ್ನು ತಾನೇ ಬರೆಸಿಕೊಂಡಿತೆಂಬ ತೀರ್ಮಾನಕ್ಕೆ ಬರುವಿರಾ? ನಿಮಗೆ ಅಂಥ ಯೋಚನೆಯೇ ಬರಲಿಕ್ಕಿಲ್ಲ ಅಲ್ಲವೆ?

ಬ್ರಿಟಿಷ್‌ ತತ್ತ್ವಜ್ಞಾನಿ ಆ್ಯಂಟನಿ ಫ್ಲ್ಯು ಎಂಬವನು ಹಿಂದೆ ನಾಸ್ತಿಕತೆಯ ಸಮರ್ಥಕನಾಗಿದ್ದನು. ಆದರೆ ಜೀವಕೋಶದೊಳಗಿನ ಚಟುವಟಿಕೆಯ ಕುರಿತ ಇತ್ತೀಚಿನ ಸಂಶೋಧನೆಯನ್ನು ಪರಿಶೀಲಿಸಿದ ಬಳಿಕ ಅವನಂದದ್ದು: “ಒಂದು ಜೀವದ ಆರಂಭಕ್ಕಾಗಿ ಅಗತ್ಯವಿರುವ ವ್ಯವಸ್ಥೆಗಳ ಜಟಿಲತೆಯು ವಿಸ್ಮಯಕಾರಿ. ಖಂಡಿತವಾಗಿಯೂ ಇದರಲ್ಲಿ ಬುದ್ಧಿಶಕ್ತಿಯುಳ್ಳಾತನೊಬ್ಬನ ಹಸ್ತವಿದೆಯೆಂದು [ಗೊತ್ತಾಗುತ್ತದೆ].” ಅವನ ಜೀವನತತ್ತ್ವ ಏನೆಂದರೆ, “ಸರಿಯಾದ ಸಾಕ್ಷ್ಯಾಧಾರಗಳಿರುವ ಒಂದು ವಾದಸರಣಿಯ ಅಂತಿಮ ತೀರ್ಮಾನ ಇಷ್ಟವಾಗಲಿ ಇಲ್ಲದಿರಲಿ ಅದನ್ನು ಸ್ವೀಕರಿಸಬೇಕು.” ಇದು ಅವನ ಯೋಚನಾಧಾಟಿಯಲ್ಲಿ ಪೂರ್ಣ ಬದಲಾವಣೆಗೆ ನಡೆಸಿತು. ದೇವರಿದ್ದಾನೆಂದು ಅವನೀಗ ನಂಬುತ್ತಾನೆ.

ಅನೇಕ ವಿಜ್ಞಾನಿಗಳು ಮಾನವ ಮಿದುಳನ್ನೂ ನೋಡಿ ಬೆಕ್ಕಸಬೆರಗಾಗುತ್ತಾರೆ. ಡಿಎನ್‌ಎ ಮಾಹಿತಿಯನ್ನಾಧರಿಸಿ ರಚನೆಯಾಗುವ ಮಿದುಳನ್ನು “ವಿಶ್ವದಲ್ಲೇ ಅತ್ಯಂತ ಜಟಿಲವಾದ ವಸ್ತು” ಎಂದು ವರ್ಣಿಸಲಾಗಿದೆ. ಅದರ ತೂಕ ಸುಮಾರು 1.4 ಕಿಲೋ. ನ್ಯೂರಾನ್‌ ಹಾಗೂ ಇತರ ಘಟಕಗಳಿಂದ ರಚಿತವಾದ ಅದರ ಬಣ್ಣ ಬೂದು ಮಿಶ್ರಿತ ತಿಳಿಗುಲಾಬಿ. ಈಗಿನ ಅತ್ಯಾಧುನಿಕ ಸೂಪರ್‌ ಕಂಪ್ಯೂಟರ್‌ ಸಹ ಖಂಡಿತ ಅದಕ್ಕೆ ತೃಣಸಮಾನ. ನರವಿಜ್ಞಾನಿಯೊಬ್ಬನ ಅಭಿಪ್ರಾಯಕ್ಕನುಸಾರ ಮಿದುಳು ಹಾಗೂ ಮನಸ್ಸಿನ ಕುರಿತು ವಿಜ್ಞಾನಿಗಳು ಹೆಚ್ಚೆಚ್ಚನ್ನು ಕಲಿಯುತ್ತಾ ಹೋದಂತೆ “ಅದು ಇನ್ನಷ್ಟು ಅತ್ಯುತ್ಕೃಷ್ಟವಾದದ್ದೂ ನಿಗೂಢವಾದದ್ದೂ” ಆಗುತ್ತಿದೆ.

ಇದನ್ನು ಪರಿಗಣಿಸಿ: ನಾವು ಉಸಿರಾಡಲು, ನಗಲು, ಅಳಲು, ಪದಬಂಧಗಳನ್ನು ಬಿಡಿಸಲು, ಕಂಪ್ಯೂಟರ್‌ ತಯಾರಿಸಲು, ಸೈಕಲ್‌ ಓಡಿಸಲು ಮತ್ತು ರಾತ್ರಿಯಲ್ಲಿ ಆಕಾಶವನ್ನು ನೋಡಿ ವಿಸ್ಮಯಪಡಲು ಶಕ್ತರಾಗುವುದು ಮಿದುಳಿನಿಂದಾಗಿಯೇ. ಈ ಸಾಮರ್ಥ್ಯಗಳೆಲ್ಲ ಆಕಸ್ಮಿಕವಾಗಿ ವಿಕಾಸವಾಗುತ್ತಾ ಬಂದವೆಂದು ಹೇಳುವುದು ತರ್ಕಬದ್ಧವೂ ನ್ಯಾಯವೂ ಆಗಿದೆಯೋ?

ಸಾಕ್ಷ್ಯಾಧಾರಿತ ನಂಬಿಕೆ

ನಮ್ಮ ಬಗ್ಗೆ ತಿಳಿದುಕೊಳ್ಳಲು ವಿಕಾಸವಾದಿಗಳಂತೆ ನಾವು ಮಾನವನಿಗಿಂತಲೂ ಕೆಳಮಟ್ಟದ ಜೀವಿಗಳಾದ ಮಂಗಗಳನ್ನೋ ಇತರ ಪ್ರಾಣಿಗಳನ್ನೋ ಪರೀಕ್ಷಿಸಿ ನೋಡಬೇಕೋ? ಇಲ್ಲವೆ ನಮಗಿಂತಲೂ ಉನ್ನತನಾದ ದೇವರೆಡೆಗೆ ನೋಡಬೇಕೋ? ಪ್ರಾಣಿಗಳಿಗೂ ನಮಗೂ ಕೆಲವೊಂದು ಹೋಲಿಕೆಗಳಿವೆ ನಿಜ. ಉದಾಹರಣೆಗೆ ನಾವು ಊಟಮಾಡುತ್ತೇವೆ, ಕುಡಿಯುತ್ತೇವೆ, ನಿದ್ರೆಮಾಡುತ್ತೇವೆ, ಸಂತಾನೋತ್ಪತ್ತಿಯನ್ನೂ ಮಾಡುತ್ತೇವೆ. ಹಾಗಿದ್ದರೂ ನಾವು ಪ್ರಾಣಿಗಳಿಗಿಂತ ಅನೇಕ ವಿಧಗಳಲ್ಲಿ ಎಷ್ಟೋ ಭಿನ್ನರು. ನಮ್ಮಲ್ಲಿರುವಂಥ ವಿಶಿಷ್ಟ ಗುಣಲಕ್ಷಣ, ಸಾಮರ್ಥ್ಯಗಳು ತಾನೇ, ಅವು ನಮಗಿಂತಲೂ ಶ್ರೇಷ್ಠಜೀವಿಯಾದ ದೇವರಿಂದಲೇ ಬಂದಿರಬೇಕೆಂದು ತೋರಿಸುತ್ತವೆ. ಈ ವಿಚಾರವನ್ನೇ ಬೈಬಲು ಚುಟುಕಾಗಿ ತಿಳಿಸಿತು. ನೈತಿಕ ಹಾಗೂ ಆಧ್ಯಾತ್ಮಿಕ ವಿಷಯಗಳಲ್ಲಿ ದೇವರು ಮಾನವಕುಲವನ್ನು ‘ತನ್ನ ಸ್ವರೂಪದಲ್ಲಿ’ ರಚಿಸಿದನೆಂದು ಅದು ಹೇಳುತ್ತದೆ. (ಆದಿಕಾಂಡ 1:27) ದೇವರ ಕೆಲವೊಂದು ಗುಣಗಳ ಬಗ್ಗೆ ಯೋಚಿಸಿನೋಡಿ. ಅವುಗಳಲ್ಲಿ ಕೆಲವೊಂದನ್ನು ಧರ್ಮೋಪದೇಶಕಾಂಡ 32:4; ಯಾಕೋಬ 3:17, 18; 1 ಯೋಹಾನ 4:7, 8ರಲ್ಲಿ ದಾಖಲಿಸಲಾಗಿದೆ.

ನಮ್ಮ ಸುತ್ತಲಿನ ಜಗತ್ತನ್ನು ಪರಿಶೋಧಿಸಿ ನೋಡಲು ಮತ್ತು ನಮ್ಮ ಪ್ರಶ್ನೆಗಳಿಗೆ ತೃಪ್ತಿಕರ ಉತ್ತರಗಳನ್ನು ಕಂಡುಹಿಡಿಯಲು ಸೃಷ್ಟಿಕರ್ತನು ನಮಗೆ “ಬುದ್ಧಿಸಾಮರ್ಥ್ಯವನ್ನು” ಕೊಟ್ಟಿದ್ದಾನೆ. (1 ಯೋಹಾನ 5:20) ಭೌತವಿಜ್ಞಾನಿ ಮತ್ತು ನೊಬೆಲ್‌ ಪಾರಿತೋಷಕ ಪುರಸ್ಕೃತ ವಿಲ್ಯಮ್‌ ಡಿ. ಫಿಲಿಪ್ಸ್‌ ಬರೆದದ್ದು: “ವಿಶ್ವದ ವ್ಯವಸ್ಥಿತಕ್ರಮ, ಸೌಂದರ್ಯ ಮತ್ತು ಅದನ್ನು ಅರ್ಥಮಾಡಿಕೊಳ್ಳಸಾಧ್ಯವಿರುವ ಸಂಗತಿಯ ಕುರಿತು ಯೋಚಿಸುವಾಗ ಉಚ್ಚಮಟ್ಟದ ಬುದ್ಧಿಜೀವಿಯೊಬ್ಬನು ಇದೆಲ್ಲವನ್ನೂ ರಚಿಸಿದನೆಂಬ ತೀರ್ಮಾನಕ್ಕೆ ಬರುತ್ತೇನೆ. ಅಣುಗೂಡಿಕೆಯ [ಒಂದೇ ತೆರನಾದ ಪದಾರ್ಥಗಳು, ಅಣುಗಳು ಪರಸ್ಪರ ಆಕರ್ಷಣೆಯಿಂದ ಒಂದುಗೂಡಿಕೊಂಡಿರುವುದು] ಕುರಿತು ನನಗಿರುವ ವೈಜ್ಞಾನಿಕ ಜ್ಞಾನ ಮತ್ತು ಭೌತಶಾಸ್ತ್ರದ ಸೊಗಸಾದ ಸರಳತೆಯು ದೇವರಿದ್ದಾನೆಂಬ ನನ್ನ ನಂಬಿಕೆಯನ್ನು ಬಲಪಡಿಸುತ್ತದೆ.”

ಸುಮಾರು ಎರಡು ಸಾವಿರ ವರ್ಷಗಳ ಹಿಂದೆ, ಪ್ರಾಕೃತಿಕ ಜಗತ್ತನ್ನು ವಿವೇಚನೆಯಿಂದ ಅವಲೋಕಿಸಿದ ಒಬ್ಬನು ಬರೆದದ್ದು: “[ದೇವರ] ಅದೃಶ್ಯ ಗುಣಗಳು ಲೋಕವು ಸೃಷ್ಟಿಯಾದಂದಿನಿಂದ ಸ್ಪಷ್ಟವಾಗಿ ಕಂಡುಬರುತ್ತವೆ. ಏಕೆಂದರೆ ಸೃಷ್ಟಿಮಾಡಲ್ಪಟ್ಟವುಗಳಿಂದ ಆತನ ಅನಂತ ಶಕ್ತಿ ಮತ್ತು ದೇವತ್ವವನ್ನು ಸಹ ಗ್ರಹಿಸಲಾಗುತ್ತದೆ.” (ರೋಮನ್ನರಿಗೆ 1:20) ಈ ಮಾತುಗಳನ್ನು ಬರೆದ ಕ್ರೈಸ್ತ ಅಪೊಸ್ತಲ ಪೌಲನು ಒಬ್ಬ ಮೇಧಾವಿಯೂ ಮೋಶೆಯ ಧರ್ಮಶಾಸ್ತ್ರದಲ್ಲಿ ಉನ್ನತ ಶಿಕ್ಷಣಪಡೆದಿದ್ದವನೂ ಆಗಿದ್ದನು. ಸಾಕ್ಷ್ಯಾಧಾರಿತವಾದ ಅವನ ನಂಬಿಕೆಯಿಂದಾಗಿ ದೇವರಿದ್ದಾನೆಂಬ ನಿಜತ್ವ ಅವನಿಗೆ ಮನದಟ್ಟಾಗಿತ್ತು. ಅವನಲ್ಲಿದ್ದ ತೀಕ್ಷ್ಣ ನ್ಯಾಯಪ್ರಜ್ಞೆಯು ದೇವರಿಗೆ ಆತನ ಎಲ್ಲ ಸೃಷ್ಟಿಕಾರ್ಯಗಳಿಗಾಗಿ ಕೀರ್ತಿ ಸಲ್ಲಿಸುವಂತೆ ಪ್ರಚೋದಿಸಿತು.

ದೇವರಿದ್ದಾನೆಂಬ ನಂಬಿಕೆ ಖಂಡಿತ ತರ್ಕಬದ್ಧವಾಗಿದೆ ಎಂಬುದು ನಿಮಗೂ ಮನವರಿಕೆಯಾಗಲಿ ಎನ್ನುವುದು ನಮ್ಮ ಆಶಯ. ಅಷ್ಟುಮಾತ್ರವಲ್ಲದೆ ಅಪೊಸ್ತಲ ಪೌಲನು ಹಾಗೂ ಈಗಾಗಲೇ ಲಕ್ಷಾಂತರ ಮಂದಿ ಮಾಡಿರುವಂತೆ ನೀವು ಸಹ ದೇವರಿದ್ದಾನೆಂದು ಬರೇ ನಂಬುವುದಕ್ಕಿಂತ ಹೆಚ್ಚನ್ನು ಮಾಡುವಂತಾಗಲಿ. ಅದೇನೆಂದರೆ ಯೆಹೋವ ದೇವರು ಅದೃಶ್ಯನಾದರೂ ಒಬ್ಬ ನೈಜ ವ್ಯಕ್ತಿಯಾಗಿದ್ದಾನೆಂದೂ ಮಾನವರಿಗೆ ಹಿಡಿಸುವಂಥ ಮತ್ತು ಅವರನ್ನು ತನ್ನೆಡೆಗೆ ಸೆಳೆಯುವಂಥ ಗುಣಗಳು ಆತನಲ್ಲಿವೆಯೆಂದೂ ನೀವು ತಿಳಿಯುವಂತಾಗಲಿ.—ಕೀರ್ತನೆ 83:18; ಯೋಹಾನ 6:44; ಯಾಕೋಬ 4:8. (g10-E 02)

[ಪಾದಟಿಪ್ಪಣಿಗಳು]

^ 2006ರ ಅಕ್ಟೋಬರ್‌-ಡಿಸೆಂಬರ್‌ ಎಚ್ಚರ! ಪತ್ರಿಕೆಯಲ್ಲಿ “ಜೀವವಿಕಾಸವು ವಾಸ್ತವಾಂಶವೇ?” ಲೇಖನ ನೋಡಿ.

^ ಡಿಎನ್‌ಎ ಅಂದರೆ ಡಿಆಕ್ಸಿರೈಬೋನ್ಯೂಕ್ಲಿಯಿಕ್‌ ಆ್ಯಸಿಡ್‌.

^ ಚಾರ್ಲ್ಸ್‌ ಡಾರ್ವಿನ್‌ ಜೀವವಿಕಾಸದ ಕುರಿತ ತನ್ನ ವಿಚಾರಗಳನ್ನು ಮಂಡಿಸಿದಾಗ ಜೀವಕೋಶದ ಸಂಕೀರ್ಣತೆಯ ಬಗ್ಗೆ ಅವನಿಗೇನೂ ಗೊತ್ತಿರಲಿಲ್ಲ.

[ಪುಟ 20ರಲ್ಲಿರುವ ಚೌಕ]

ಧರ್ಮದ ಹೆಸರಿನಲ್ಲಾಗುವ ದುಷ್ಕೃತ್ಯಗಳು ದೇವರಿಲ್ಲವೆಂದು ಹೇಳಲು ಕಾರಣವೋ?

ಒಬ್ಬ ಸೃಷ್ಟಿಕರ್ತನಿದ್ದಾನೆಂದು ನಂಬದಿರಲು ಅನೇಕರು ಕೊಡುವ ಒಂದು ಕಾರಣ ಇದು: ಅನೇಕ ಧರ್ಮಗಳು ದೇವರ ಹೆಸರಿನಲ್ಲಿ ಹಲವಾರು ಘೋರ ಅಪರಾಧಗಳನ್ನೆಸಗಿವೆ. ದೇವರಿಲ್ಲವೆಂದು ನಂಬಲು ಇದೊಂದು ದೃಢ ಕಾರಣವೋ? ಇಲ್ಲ. ಆ್ಯಂಟನಿ ಫ್ಲ್ಯೂ ಬರೆದಂಥ ದೇವರೊಬ್ಬನು ಇದ್ದಾನೆ (ಇಂಗ್ಲಿಷ್‌) ಎಂಬ ಪುಸ್ತಕದ ಮುನ್ನುಡಿಯಲ್ಲಿ ರಾಯ್‌ ಅಬ್ರಹಾಮ್‌ ವರ್ಗೀಸ್‌ ಹೇಳಿದ್ದು: “ನ್ಯೂಕ್ಲಿಯರ್‌ ಶಸ್ತ್ರಗಳು ಹೆಚ್ಚಾಗುತ್ತಿರುವ ಅಪಾಯವು E=mc2 * ಸೂತ್ರ ಸರಿಯೋ ಎಂಬುದರ ಬಗ್ಗೆ ಹೇಗೆ ಸಂದೇಹ ಹುಟ್ಟಿಸುವುದಿಲ್ಲವೋ ಹಾಗೆಯೇ ಧರ್ಮಗಳು ದೌರ್ಜನ್ಯ ಅತ್ಯಾಚಾರಗಳನ್ನು ನಡೆಸುತ್ತಿವೆ ಎಂಬುದು ದೇವರೊಬ್ಬನಿದ್ದಾನೆ ಎಂದು ಸಂದೇಹಿಸಲು ಕಾರಣವೇ ಅಲ್ಲ.”

[ಪಾದಟಿಪ್ಪಣಿ]

^ ಶಕ್ತಿಯ ಪರಿಮಾಣವು ದ್ರವ್ಯರಾಶಿ ಹಾಗೂ ಬೆಳಕಿನ ವೇಗದ ವರ್ಗದ ಗುಣಲಬ್ದಕ್ಕೆ ಸಮಾನವಾಗಿದೆ.

[ಪುಟ 19ರಲ್ಲಿರುವ ಚಿತ್ರಗಳು]

ಪುರಾತನ ಕಟ್ಟಡಗಳ ವಿನ್ಯಾಸ ನೋಡಿ ಅದನ್ನು ಮಾನವರು ರಚಿಸಿದರೆಂದು ಹೇಳುತ್ತೇವೆ. ಹಾಗಾದರೆ ಪ್ರಕೃತಿಯಲ್ಲಿನ ವಿನ್ಯಾಸವನ್ನು ಯಾರು ರಚಿಸಿದರೆಂದು ಹೇಳುತ್ತೇವೆ?

[ಪುಟ 19ರಲ್ಲಿರುವ ಚಿತ್ರ]

ಆಲ್ಬರ್ಟ್‌ ಐನ್‌ಸ್ಟೈನ್‌

[ಪುಟ 20,21ರಲ್ಲಿರುವ ಚಿತ್ರಗಳು]

ಡಿಎನ್‌ಎ ತೀರ ಚಿಕ್ಕದಾದ ಪುಸ್ತಕದಂತಿದ್ದು, ಬುದ್ಧಿವಂತ ಜೀವಿಗಳ ರಚನೆ ಬಗ್ಗೆ ಅದರಲ್ಲಿ ನಿಖರ ಸೂಚನೆಗಳಿವೆ

[ಪುಟ 21ರಲ್ಲಿರುವ ಚಿತ್ರಗಳು]

ಮಾನವನ ಮಿದುಳನ್ನು “ವಿಶ್ವದಲ್ಲೇ ಅತ್ಯಂತ ಜಟಿಲವಾದ ವಸ್ತು” ಎಂದು ವರ್ಣಿಸಲಾಗಿದೆ

[ಪುಟ 18ರಲ್ಲಿರುವ ಚಿತ್ರ ಕೃಪೆ]

© The Print Collector/age fotostock