ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸ್ವಲ್ಪ ಹಣದಲ್ಲಿ ಜೀವನ ನಡೆಸುವುದು ಹೇಗೆ?

ಸ್ವಲ್ಪ ಹಣದಲ್ಲಿ ಜೀವನ ನಡೆಸುವುದು ಹೇಗೆ?

ಸ್ವಲ್ಪ ಹಣದಲ್ಲಿ ಜೀವನ ನಡೆಸುವುದು ಹೇಗೆ?

ಸ್ವಲ್ಪ ಹಣದಲ್ಲಿ ಯಶಸ್ವಿಯಾಗಿ ಜೀವನ ನಡೆಸಲು ಯೋಜನೆ ಅತ್ಯಗತ್ಯ. ಇದನ್ನು ಯೇಸು ಒತ್ತಿಹೇಳಿದನು. ಆತನು ಕೇಳಿದ್ದು: “ನಿಮ್ಮಲ್ಲಿ ಯಾವನಾದರೂ ಒಂದು ಬುರುಜನ್ನು ಕಟ್ಟಲು ಬಯಸುವುದಾದರೆ, ಮೊದಲು ಕುಳಿತುಕೊಂಡು ಅದನ್ನು ಕಟ್ಟಿಮುಗಿಸಲು ಸಾಕಾಗುವಷ್ಟು ಹಣ ತನ್ನಲ್ಲಿದೆಯೋ ಎಂದು ಲೆಕ್ಕಮಾಡುವುದಿಲ್ಲವೆ?” (ಲೂಕ 14:28, 29) ಈ ತತ್ವವನ್ನು ನೀವೂ ಪಾಲಿಸಬಹುದು. ಒಂದು ಬಜೆಟನ್ನು ತಯಾರಿಸಿ. ಹಾಗೆ ಮಾಡಿದರೆ ಖರ್ಚುಗಳನ್ನು ಭರಿಸಲು ‘ಹಣ ನಿಮ್ಮಲ್ಲಿದೆಯೋ ಎಂದು ಲೆಕ್ಕಮಾಡಲು’ ಶಕ್ತರಾಗುವಿರಿ. ಆದರೆ ಬಜೆಟ್‌ ತಯಾರಿಸುವುದು ಹೇಗೆ? ಇದನ್ನು ಪ್ರಯತ್ನಿಸಿ ನೋಡಿ:

ನೀವು ಮನೆಗೆ ತರುವ ಸಂಬಳದಲ್ಲಿ, ಯಾವ್ಯಾವುದಕ್ಕೆ ಎಷ್ಟೆಷ್ಟು ಹಣ ಎಂಬದನ್ನು ನಿಗದಿಪಡಿಸಿ ಬರೆದಿಡಿ. (ಪುಟ 8ರ ಚೌಕ ನೋಡಿ.) ಯಾವುದಕ್ಕೆಲ್ಲ ಹಣ ವ್ಯಯವಾಗುತ್ತದೆ, ಅನಾವಶ್ಯಕ ವಸ್ತುಗಳಿಗಾಗಿ ಎಷ್ಟು ಹಣ ಪೋಲಾಗುತ್ತದೆ ಎಂದು ಇದರಿಂದ ಗೊತ್ತಾಗುತ್ತದೆ. ಆಗ, ಎಲ್ಲೆಲ್ಲಿ ಹಣ ಉಳಿಸಬಹುದೆಂದು ನಿರ್ಧರಿಸಲು ನಿಮಗೆ ಸಹಾಯವಾಗುವುದು.

ಪ್ರಾಯೋಗಿಕವಾದ ಬಜೆಟನ್ನು ತಯಾರಿಸಲಿಕ್ಕಾಗಿ ಮುಂದಿನ ಸಲಹೆಗಳನ್ನು ಕಾರ್ಯರೂಪಕ್ಕೆ ಹಾಕಿ.

ವಿವೇಚನೆಯಿಂದ ಖರೀದಿಮಾಡಿ

ರೌಲ್‌ ಕೆಲಸ ಕಳಕೊಂಡಾಗ ಅವನ ಹೆಂಡತಿ ಬರ್ಟಾ, ಖರೀದಿಮಾಡುವ ವಿಧಾನವನ್ನು ಬದಲಾಯಿಸಿದಳು. “ಡಿಸ್ಕೌಂಟ್‌ ಕೂಪನ್‌ಗಳನ್ನು ಕೊಡುತ್ತಿದ್ದ ಮತ್ತು ಒಂದರ ಬೆಲೆಯಲ್ಲಿ ಎರಡು ಸಾಮಾನುಗಳ ವಿಶೇಷ ಕೊಡುಗೆಗಳಿದ್ದ ಅಂಗಡಿಗಳಲ್ಲಿ ಖರೀದಿಮಾಡುತ್ತಿದ್ದೆ” ಅನ್ನುತ್ತಾಳಾಕೆ. ಇನ್ನೂ ಕೆಲವು ವಿಧಾನಗಳು ಇಲ್ಲಿವೆ:

ಯಾವ ಆಹಾರ ಪದಾರ್ಥಗಳನ್ನು ರಿಯಾಯಿತಿ ದರದಲ್ಲಿ ಮಾರಲಾಗುತ್ತಿದೆಯೆಂದು ನೋಡಿ ಇಡೀ ವಾರಕ್ಕಾಗಿ ಏನು ಅಡಿಗೆಮಾಡುವಿರಿ ಎಂಬದನ್ನು ಯೋಜಿಸಿ.

● ಹೋಟೆಲು ಊಟಮಾಡುವ ಬದಲು ಮನೆ ಊಟಮಾಡಿ.

● ರಿಯಾಯಿತಿ ದರದಲ್ಲಿ ಸಿಗುವ ಇಲ್ಲವೆ ವರ್ಷದ ನಿರ್ದಿಷ್ಟ ತಿಂಗಳುಗಳಲ್ಲಿ ಕಡಿಮೆ ಬೆಲೆಗೆ ಸಿಗುವ ವಸ್ತುಗಳನ್ನು ಖರೀದಿಸಿಡಿ.

● ದೊಡ್ಡ ಪ್ರಮಾಣದಲ್ಲಿ ಖರೀದಿಮಾಡಿ. ಆದರೆ ಬೇಗ ಹಾಳಾಗುವಂಥವುಗಳನ್ನು ಜಾಸ್ತಿ ಶೇಖರಿಸಿಡಬೇಡಿ.

● ಫ್ಯಾಕ್ಟರಿಯಿಂದ ನೇರವಾಗಿ ತಂದು ಮಾರಾಟಕ್ಕಿಡಲಾಗುವ ಗುಣಮಟ್ಟದ ಬಟ್ಟೆಗಳನ್ನು ಖರೀದಿಸಿ.

● ವಸ್ತುಗಳು ಕಡಿಮೆ ಬೆಲೆಗೆ ಸಿಗುವಂಥ ಸ್ಥಳಗಳಿಗೆ ಹೋಗಿ ಖರೀದಿಮಾಡಿ. ಆದರೆ ನೀವು ಉಳಿಸುವ ಹಣ ಅಲ್ಲಿಗೆ ಹೋಗಿಬರುವ ಪ್ರಯಾಣಕ್ಕೆ ಖರ್ಚಾಗುವುದಿಲ್ಲವೆಂದು ಖಚಿತಪಡಿಸಿಕೊಳ್ಳಿ.

● ಆಗಾಗ್ಗೆ ಹೋಗಿ ಖರೀದಿಮಾಡುವುದನ್ನು ಕಡಿಮೆಗೊಳಿಸಿ. *

ಬರೆದಿಡಿ

ಸುಪ್ರೀತ್‌ ಹೇಳುವುದು: “ನಾವೊಂದು ಬಜೆಟ್‌ ಮಾಡಲೇಬೇಕಿತ್ತು. ಆದುದರಿಂದ ನಾವು ಒಮ್ಮೆಲೆ ಪಾವತಿಸಬೇಕಾದ ಹಣ ಮತ್ತು ಇಡೀ ತಿಂಗಳ ಖರ್ಚಿಗಾಗಿ ಕೈಯಲ್ಲಿರಬೇಕಾದ ಹಣ ಎಷ್ಟೆಂಬದನ್ನು ಬರೆದಿಡುತ್ತಿದ್ದೆ.” ಅವನ ಪತ್ನಿ ಅನಿತಾ ಹೇಳಿದ್ದು: “ನನ್ನ ಖರ್ಚು ಇಂತಿಷ್ಟರೊಳಗೆ ಆಗಬೇಕೆಂದು ಮನಸ್ಸಿನಲ್ಲಿಟ್ಟು ಮಾರ್ಕೆಟಿಗೆ ಹೋಗುತ್ತಿದ್ದೆ. ಮಕ್ಕಳಿಗಾಗಿ ಇಲ್ಲವೆ ಮನೆಗಾಗಿ ಏನಾದರೂ ಬೇಕಾದಾಗ ನಮ್ಮ ಬಜೆಟನ್ನು ನೋಡಿ, ‘ಈಗ ಹಣವಿಲ್ಲ. ಮುಂದಿನ ತಿಂಗಳು ನೋಡೋಣ’ ಎಂದು ಸುಮ್ಮನಾಗುತ್ತಿದ್ದೆ. ಹೀಗೆ ಬಜೆಟನ್ನು ಬರೆದಿಟ್ಟದ್ದರಿಂದ ತುಂಬ ಸಹಾಯವಾಗುತ್ತಿತ್ತು.”

ಮೊದಲು ಯೋಚಿಸಿ ಆಮೇಲೆ ಖರೀದಿಸಿ

ಖರೀದಿಸುವ ಮುಂಚೆ ಹೀಗೆ ಕೇಳಿಕೊಳ್ಳುವ ರೂಢಿಮಾಡಿ: ‘ನನಗೆ ಇದರ ಅಗತ್ಯವಿದೆಯೋ? ಹಳೇ ವಸ್ತು ನಿಜವಾಗಿಯೂ ಹಾಳಾಗಿದೆಯೋ ಅಥವಾ ಸುಮ್ಮನೆ ಹೊಸ ವಸ್ತು ಬೇಕೆಂದು ಖರೀದಿಸುತ್ತಿದ್ದೇನೋ?’ ನೀವು ಆಗೊಮ್ಮೆ ಈಗೊಮ್ಮೆ ಬಳಸಲಿರುವ ವಸ್ತುವನ್ನು ಖರೀದಿಸುವ ಬದಲು ಬಾಡಿಗೆಗೆ ತಕ್ಕೊಳ್ಳಬಹುದೋ? ಅಥವಾ ನೀವದನ್ನು ಆಗಾಗ್ಗೆ ಬಳಸಲಿದ್ದೀರೆಂದು ನಿಮಗನಿಸುವಲ್ಲಿ ಈಗಾಗಲೇ ಬಳಸಲಾಗಿರುವ ಆದರೆ ಸುಸ್ಥಿತಿಯಲ್ಲಿರುವ ವಸ್ತುವನ್ನು ಖರೀದಿಸಿದರೆ ಆದೀತೋ?

ಮೇಲೆ ತಿಳಿಸಲಾದ ಕೆಲವೊಂದು ವಿಷಯಗಳು ಕ್ಷುಲ್ಲಕವಾಗಿ ತೋರಬಹುದಾದರೂ ಅದರಿಂದ ಉಳಿತಾಯ ಆಗುವುದಂತೂ ಖಂಡಿತ! ಇದೆಲ್ಲ ಮಾಡುವುದರ ಉದ್ದೇಶ? ಚಿಕ್ಕಪುಟ್ಟ ವಿಷಯಗಳಲ್ಲಿ ಹಣ ಉಳಿಸುವ ರೂಢಿ ಬೆಳೆಸಿಕೊಂಡರೆ ದೊಡ್ಡ ವಿಷಯದಲ್ಲೂ ಅದನ್ನೇ ಮಾಡುವಿರಿ.

ಉಪಾಯಗಳನ್ನು ಕಂಡುಹಿಡಿಯಿರಿ

ಅನಾವಶ್ಯಕ ಖರ್ಚುಗಳನ್ನು ಕಡಿಮೆಮಾಡಲಿಕ್ಕಾಗಿ ಹೊಸ ಹೊಸ ಮಾರ್ಗಗಳ ಬಗ್ಗೆ ಯೋಚಿಸಿ. ಉದಾಹರಣೆಗೆ, ಅನಿತಾ ಹೇಳಿದ್ದು: “ನಮ್ಮ ಬಳಿ ಎರಡು ಕಾರುಗಳಿದ್ದವು. ಒಂದನ್ನು ಮಾರಿಬಿಟ್ಟೆವು. ಎಲ್ಲರೂ ಒಂದೇ ಕಾರಲ್ಲಿ ಪ್ರಯಾಣಿಸುತ್ತಿದ್ದೆವು ಇಲ್ಲವೆ ಬೇರೆಯವರ ಜೊತೆ ಹೋಗುತ್ತಿದ್ದೆವು. ಗಾಡಿ ತಕ್ಕೊಂಡು ಹೋದರೆ ಆದಷ್ಟು ಹೆಚ್ಚು ಕೆಲಸಗಳನ್ನು ಮಾಡಿಮುಗಿಸಿ ಪೆಟ್ರೋಲ್‌ ಖರ್ಚನ್ನು ಉಳಿಸಲು ಪ್ರಯತ್ನಿಸುತ್ತಿದ್ದೆವು. ತುಂಬ ಅಗತ್ಯವಿರುವ ವಿಷಯಗಳಿಗೆ ಮಾತ್ರ ಹಣ ಖರ್ಚುಮಾಡುತ್ತಿದ್ದೆವು.” ಹಣ ಉಳಿಸುವ ಕೆಲವು ಉಪಾಯಗಳು ಹೀಗಿವೆ:

● ನಿಮ್ಮದೇ ಆದ ಕೈತೋಟ ಮಾಡಿ ತರಕಾರಿಗಳನ್ನು ಬೆಳೆಸಿ.

● ಎಲೆಕ್ಟ್ರಾನಿಕ್‌ ಸಾಧನಗಳನ್ನು ಉತ್ಪಾದಕರ ಸೂಚನೆಗಳಿಗನುಸಾರ ಬಳಸಿದರೆ ಅವು ಹೆಚ್ಚು ಕಾಲ ಬಾಳಿಕೆ ಬರುವವು.

● ಮನೆಗೆ ಬಂದ ಕೂಡಲೇ ಬಟ್ಟೆ ಬದಲಾಯಿಸಿ. ಹೀಗೆ ಒಳ್ಳೇ ಉಡುಪುಗಳು ಹೆಚ್ಚು ಕಾಲ ಹೊಸದಾಗಿಯೇ ಇರುವವು.

ಒಂಟಿದ್ವೀಪ ಆಗಬೇಡಿ!

ಉದ್ಯೋಗ ಕಳಕೊಂಡವರಲ್ಲಿ ಅನೇಕರು ಅಂತರ್ಮುಖಿಗಳಾಗಿ, ತಮ್ಮನ್ನೇ ಎಲ್ಲರಿಂದ ದೂರವಿರಿಸುತ್ತಾ ಒಂಟಿದ್ವೀಪದಂತಾಗುತ್ತಾರೆ. ಆದರೆ ಸುಪ್ರೀತ್‌ಗೆ ಹಾಗಾಗಲಿಲ್ಲ! ಅವನ ಬೆಳೆದ ಮಕ್ಕಳೂ ಕುಟುಂಬದ ಇತರರೂ ಅವನಿಗೆ ಸಹಾನುಭೂತಿ, ಬೆಂಬಲ ಕೊಟ್ಟರು. “ಏನೇ ಆದರೂ ಎಲ್ಲವನ್ನೂ ಪರಸ್ಪರ ಹಂಚಿಕೊಳ್ಳಲು ಕಲಿತೆವು. ಇದರಿಂದಾಗಿ ನಾವೆಲ್ಲರೂ ಹೆಚ್ಚು ಆಪ್ತರಾದೆವು. ‘ಈ ಸಮಸ್ಯೆಯನ್ನು ಒಟ್ಟಿಗೆ ಎದುರಿಸೋಣ’ ಎಂಬ ಭಾವನೆ ನಮ್ಮೆಲ್ಲರಲ್ಲೂ ಇತ್ತು” ಅನ್ನುತ್ತಾನೆ ಅವನು.

ಸುಪ್ರೀತ್‌ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹದಲ್ಲಿ ಕೂಟಗಳಿಗೆಂದು ಜೊತೆ ಕ್ರೈಸ್ತರೊಂದಿಗೆ ಕ್ರಮವಾಗಿ ಸೇರಿಬರುತ್ತಿದ್ದನು. ಇದರಿಂದಲೂ ಅವನಿಗೆ ಮನೋಬಲ ಸಿಕ್ಕಿತು. “ಕ್ರೈಸ್ತ ಕೂಟಗಳು ಮುಗಿಯುವಷ್ಟರಲ್ಲಿ ನನಗೆ ತುಂಬ ಪ್ರೋತ್ಸಾಹ ಸಿಕ್ಕಿರುತ್ತಿತ್ತು. ಎಲ್ಲರೂ ತುಂಬ ದಯೆ ಮತ್ತು ಪರಿಗಣನೆ ತೋರಿಸುತ್ತಿದ್ದರು. ಅವರು ಕೊಟ್ಟ ಸಹಾಯ-ಸಾಂತ್ವನ ಅವರೆಲ್ಲರೂ ನಮ್ಮ ಜೊತೆ ಇದ್ದಾರೆ ಎಂದು ಧೈರ್ಯತುಂಬಿಸಿತು.”—ಯೋಹಾನ 13:35.

ದೇವರ ಮೇಲಿನ ನಂಬಿಕೆ ತರುವ ಪ್ರಯೋಜನ

ಕೆಲಸ ಕಳಕೊಂಡಿರುವ ಕಾರಣ ಲಕ್ಷಾಂತರ ಮಂದಿಯಲ್ಲಿ ಕಹಿಭಾವನೆಯೂ ಧಣಿಗಳು ತಮಗೆ ದ್ರೋಹವೆಸಗಿದ್ದಾರೆ ಎಂಬ ನೋವೂ ಮನೆಮಾಡಿದೆ. ಈ ಹಿಂದೆ ತಿಳಿಸಲಾದ ರೌಲ್‌ ತನ್ನ ಸ್ವದೇಶವಾದ ಪೆರು ಮತ್ತು ನ್ಯೂ ಯಾರ್ಕ್‌ನಲ್ಲಿ ಹೀಗೆ ಎರಡು ಸಲ ಅನಿರೀಕ್ಷಿತವಾಗಿ ಕೆಲಸ ಕಳಕೊಂಡಾಗ ತುಂಬ ದುಃಖಪಟ್ಟನು. ಎರಡನೇ ಸಲ ಕೆಲಸ ಕಳಕೊಂಡಾಗ ರೌಲ್‌ “ಈಗಿನ ಜಗತ್ತಿನಲ್ಲಿ ಯಾವುದೂ ಸ್ಥಿರವಲ್ಲ” ಎಂಬ ತೀರ್ಮಾನಕ್ಕೆ ಬಂದನು. ಎಷ್ಟು ಹುಡುಕಿದರೂ ತಿಂಗಳುಗಟ್ಟಲೆ ಅವನಿಗೆ ನೌಕರಿಯೇ ಸಿಗಲಿಲ್ಲ. ಅವನು ನಿಭಾಯಿಸಿದ್ದು ಹೇಗೆ? “ನನಗೆ ದೇವರೊಂದಿಗೆ ಆಪ್ತ ಸ್ನೇಹ ಇದದ್ದರಿಂದ ನಿಜವಾದ ಭದ್ರತೆಗಾಗಿ ಆತನಲ್ಲಿ ಭರವಸೆಯಿಟ್ಟೆ” ಎಂದು ರೌಲ್‌ ತಿಳಿಸಿದನು.

ರೌಲ್‌ ಒಬ್ಬ ಯೆಹೋವನ ಸಾಕ್ಷಿ. ಅವನು ಮಾಡುತ್ತಿದ್ದ ಬೈಬಲ್‌ ಅಧ್ಯಯನವು, ಸ್ವರ್ಗದಲ್ಲಿರುವ ದೇವರು ಪರಾಮರಿಸುವ ತಂದೆಯಾಗಿದ್ದಾನೆ ಎಂಬ ಬಲವಾದ ನಂಬಿಕೆಯನ್ನು ಬೆಳೆಸಿಕೊಳ್ಳಲು ಸಹಾಯಮಾಡಿತು. ಆ ತಂದೆಯು, “ನಾನು ಎಂದಿಗೂ ನಿನ್ನ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ” ಎಂಬ ಮಾತುಕೊಟ್ಟಿದ್ದಾನೆ. (ಇಬ್ರಿಯ 13:5) ರೌಲ್‌ನ ಮನೆಯ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ. “ನಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಲಿಕ್ಕಾಗಿ ಯಾವಾಗಲೂ ಪ್ರಾರ್ಥಿಸುತ್ತಿದ್ದೆವು. ದೇವರು ನಮಗೇನು ಒದಗಿಸುತ್ತಿದ್ದನೋ ಅದರಲ್ಲಿ ತೃಪ್ತರಾಗಿರಲು ಕಲಿತೆವು” ಅನ್ನುತ್ತಾನೆ ಅವನು. ರೌಲ್‌ನ ಹೆಂಡತಿ ಬರ್ಟಾ ಕೂಡಿಸಿ ಹೇಳಿದ್ದು: “ರೌಲ್‌ಗೆ ಕೆಲಸ ಸಿಗಬಹುದಾ ಇಲ್ಲವಾ ಎಂಬ ಯೋಚನೆಯಿಂದ ನನಗೆ ಒಮ್ಮೊಮ್ಮೆ ತುಂಬ ಹೆದರಿಕೆ ಆಗುತ್ತಿತ್ತು. ಆದರೆ ನಮಗೆ ಪ್ರತಿದಿನಕ್ಕೆ ಬೇಕಾದದ್ದನ್ನು ಒದಗಿಸುವ ಮೂಲಕ ಯೆಹೋವನು ನಮ್ಮ ಪ್ರಾರ್ಥನೆಗಳಿಗೆ ಉತ್ತರಕೊಟ್ಟನು. ನಮ್ಮ ಬಳಿ ಮುಂಚೆ ಇದ್ದಷ್ಟು ಹೆಚ್ಚು ಹಣ ಮತ್ತು ಸ್ವತ್ತು ಇರಲಿಲ್ಲ. ನಮ್ಮ ಜೀವನ ತುಂಬ ಸರಳವಾಗಿಬಿಟ್ಟಿತ್ತು.

ಸುಪ್ರೀತ್‌ ಸಹ ಒಬ್ಬ ಯೆಹೋವನ ಸಾಕ್ಷಿ ಆಗಿದ್ದಾನೆ. ಹೀಗಿರುವುದರಿಂದ ಅವನ ವೈಯಕ್ತಿಕ ಬೈಬಲ್‌ ಅಧ್ಯಯನವು ಅವನು ತನ್ನ ಕಷ್ಟಕರ ಸ್ಥಿತಿಯನ್ನು ನಿಭಾಯಿಸಿದ ರೀತಿಯನ್ನು ಗಾಢವಾಗಿ ಪ್ರಭಾವಿಸಿತು. ಅವನನ್ನುವುದು: “ಕೆಲಸ, ಸ್ಥಾನಮಾನ, ಬ್ಯಾಂಕ್‌ ಅಕೌಂಟ್‌ ಇದ್ದರೆ ಭದ್ರವಾಗಿದ್ದೇವೆಂದು ಕೆಲವೊಮ್ಮೆ ನೆನಸುತ್ತೇವೆ. ಆದರೆ ಯೆಹೋವ ದೇವರಿಂದ ಮಾತ್ರ ಭದ್ರತೆ ಸಿಗಸಾಧ್ಯವಿದೆ, ಆತನೊಂದಿಗಿನ ಮಿತ್ರತ್ವ ಮಾತ್ರ ನಮಗೆ ನಿಜವಾದ ಭದ್ರತೆ ಕೊಡುತ್ತದೆಂಬ ಪಾಠವನ್ನು ಅನುಭವದಿಂದ ಕಲಿತೆ.” * (g10-E 07)

[ಪಾದಟಿಪ್ಪಣಿ]

^ ಸುಮಾರು 60% ಸಾಮಾನುಗಳನ್ನು ಜನರು ಯೋಜನೆಮಾಡದೆ ಖರೀದಿಸುತ್ತಾರೆ ಎಂದು ಒಂದು ಸಮೀಕ್ಷೆ ತೋರಿಸಿಕೊಟ್ಟಿತು.

^ ಹಣ ನಿರ್ವಹಣೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಪತ್ರಿಕೆಯ ಜೊತೆ ಪತ್ರಿಕೆಯಾದ ಕಾವಲಿನಬುರುಜುವಿನ ಜನವರಿ-ಮಾರ್ಚ್‌ 2010ರ ಸಂಚಿಕೆಯಲ್ಲಿ ಪುಟ 18-20 ನೋಡಿ.

[ಪುಟ 9ರಲ್ಲಿರುವ ಸಂಕ್ಷಿಪ್ತ ವಿವರಣೆ]

“ನಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಲಿಕ್ಕಾಗಿ ಯಾವಾಗಲೂ ಪ್ರಾರ್ಥಿಸುತ್ತಿದ್ದೆವು. ದೇವರು ನಮಗೇನು ಒದಗಿಸುತ್ತಿದ್ದನೋ ಅದರಲ್ಲಿ ತೃಪ್ತರಾಗಿರಲು ಕಲಿತೆವು”

[ಪುಟ 8ರಲ್ಲಿರುವ ಚೌಕ/ಕೋಷ್ಟಕ]

ಬಜೆಟ್‌ ಮಾಡುವ ವಿಧ

(1) ಪ್ರತಿ ತಿಂಗಳು ಮಾಡಲೇಬೇಕಾದ ಖರ್ಚುಗಳನ್ನು ಬರೆದಿಡಿ. ನೀವು ಒಂದು ಇಡೀ ತಿಂಗಳು ಆಹಾರ, ಮನೆ (ಬಾಡಿಗೆ ಅಥವಾ ಸಾಲ), ಮಾಸಿಕ ಬಿಲ್‌ಗಳು (ಕರೆಂಟ್‌, ಫೋನ್‌, ನೀರು ಇತ್ಯಾದಿ), ವಾಹನ ಮುಂತಾದವುಗಳಿಗೆ ಮಾಡಿದ ಖರ್ಚನ್ನು ಬರೆದಿಡಿ. ವಾರ್ಷಿಕವಾಗಿ ತೆರಬೇಕಾದ ಬಿಲ್‌ಗಳನ್ನು 12ರಿಂದ ಭಾಗಿಸಿ ತಿಂಗಳಿಗೆ ಎಷ್ಟಾಗುತ್ತದೆಂದು ಬರೆದಿಡಿ.

(2) ಖರ್ಚುಗಳನ್ನು ಬೇರೆ ಬೇರೆ ವರ್ಗಗಳಾಗಿ ವಿಂಗಡಿಸಿ. ಉದಾಹರಣೆಗೆ ಆಹಾರ, ಮನೆ, ವಾಹನ, ಪ್ರಯಾಣ ಎಂದು ವರ್ಗೀಕರಿಸಿ.

(3) ಪ್ರತಿ ವರ್ಗಕ್ಕೆ ಪ್ರತಿ ತಿಂಗಳು ನಿಮ್ಮ ಉಳಿತಾಯ ಹಣದಲ್ಲಿ ಎಷ್ಟನ್ನು ಹಾಕಬೇಕಾಗಬಹುದೆಂದು ಲೆಕ್ಕಮಾಡಿ. ವಾರ್ಷಿಕವಾಗಿ ಪಾವತಿಸುವ ಬಿಲ್‌ಗಳಿಗಾಗಿ ನೀವು ಪ್ರತಿ ತಿಂಗಳು ಎಷ್ಟು ಹಣ ತೆಗೆದಿಡಬೇಕೆಂದು ಲೆಕ್ಕಮಾಡಿ.

(4) ಮನೆಯಲ್ಲಿರುವವರೆಲ್ಲರ ನಿವ್ವಳ ಸಂಪಾದನೆ ಎಷ್ಟೆಂಬುದನ್ನು ಬರೆದಿಡಿ. ಇದರಲ್ಲಿ ಎಷ್ಟು ಹಣ ತೆರಿಗೆಗೆ ಹೋಗುತ್ತದೆಂದು ನೋಡಿ. ಬಾಕಿ ಹಣ ಮತ್ತು ಖರ್ಚುಗಳನ್ನು ಹೋಲಿಸಿ ನೋಡಿ.

(5) ಪ್ರತಿಯೊಂದು ವರ್ಗದ ಖರ್ಚಿನ ಹಣವನ್ನು ಪ್ರತಿ ತಿಂಗಳು ತೆಗೆದಿರಿಸಿ. ನಗದು ಬಳಸುತ್ತಿರುವಲ್ಲಿ, ಪ್ರತಿಯೊಂದು ವರ್ಗಕ್ಕೆ ಒಂದೊಂದು ಲಕೋಟೆ ಇಡುವುದು ಸುಲಭೋಪಾಯ. ನಂತರ ಪ್ರತಿ ತಿಂಗಳು ನಿಗದಿತ ಹಣವನ್ನು ಆಯಾ ಲಕೋಟೆಯಲ್ಲಿ ಹಾಕಿ.

ಎಚ್ಚರಿಕೆ: ನಿಮ್ಮ ಬಳಿ ಕ್ರೆಡಿಟ್‌ ಕಾರ್ಡ್‌ ಇರುವಲ್ಲಿ ಅದನ್ನು ಜವಾಬ್ದಾರಿಯುತವಾಗಿ ಬಳಸಿ. ‘ಈಗ ಖರೀದಿಸಿ ಆಮೇಲೆ ಪಾವತಿಸಿ’ ಎಂಬ ಮಂತ್ರಕ್ಕೆ ಮಾರುಹೋಗಿ ಎಷ್ಟೋ ಜನರ ಬಜೆಟ್‌ ಬುಡಮೇಲು ಆಗಿದೆ!

[ಕೋಷ್ಟಕ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ನಿವ್ವಳ ಮಾಸಿಕ ಆದಾಯ

ನಿವ್ವಳ ಮಾಸಿಕ ಸಂಬಳ ರೂ. .... ಇತರೆ ರೂ. ....

ಮನೆಯಲ್ಲಿ ಇತರರ

ನಿವ್ವಳ ಸಂಬಳ ರೂ. ಆದಾಯದ ನಿವ್ವಳ ಮೊತ್ತ

ರೂ. .....

ಬಜೆಟ್‌ಗನುಸಾರ ನಿಜವಾಗಿ ಆದ

ಮಾಸಿಕ ಖರ್ಚು ಮಾಸಿಕ ಖರ್ಚು

ರೂ..... ಬಾಡಿಗೆ ಅಥವಾ ಸಾಲ ರೂ.....

ರೂ..... ವಿಮೆ/ತೆರಿಗೆಗಳು ರೂ.....

ರೂ..... ಮಾಸಿಕ ಶುಲ್ಕಗಳು ರೂ.....

ರೂ..... ವಾಹನ ರೂ.....

ರೂ..... ಮನೋರಂಜನೆ/ಪ್ರಯಾಣ ರೂ.....

ರೂ..... ಫೋನ್‌ ರೂ.....

ರೂ..... ಆಹಾರ ರೂ.....

ರೂ..... ಇತರೆ ರೂ.....

ಒಟ್ಟು ಮೊತ್ತ ಒಟ್ಟು ಮೊತ್ತ

ರೂ. ರೂ. .....

ಆದಾಯ ಮತ್ತು ಖರ್ಚನ್ನು ಹೋಲಿಸಿ

ನಿವ್ವಳ ಮಾಸಿಕ ಆದಾಯ ರೂ. .....

ಕಳೆ−

ಮಾಸಿಕ ಖರ್ಚು ರೂ. ಶೇಷ

ಶೇಷ ರೂ. ..... ರೂ. .....