ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆಯನ್ನು ತೋರಿಸುವುದರ ಅರ್ಥವೇನು?

ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆಯನ್ನು ತೋರಿಸುವುದರ ಅರ್ಥವೇನು?

ಬೈಬಲಿನ ದೃಷ್ಟಿಕೋನ

ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆಯನ್ನು ತೋರಿಸುವುದರ ಅರ್ಥವೇನು?

ಯೇಸು ಕ್ರಿಸ್ತನು ತನ್ನ ಪ್ರಸಿದ್ಧ ಪರ್ವತ ಪ್ರಸಂಗದಲ್ಲಿ ಹೇಳಿದ್ದು: “ದುಷ್ಟನನ್ನು ಎದುರಿಸಬೇಡಿ; ನಿನ್ನ ಬಲಗೆನ್ನೆಯ ಮೇಲೆ ಹೊಡೆಯುವವನಿಗೆ ಮತ್ತೊಂದು ಕೆನ್ನೆಯನ್ನೂ ಒಡ್ಡು.”—ಮತ್ತಾಯ 5:39.

ಈ ಮಾತುಗಳ ಮೂಲಕ ಯೇಸು ಏನು ಹೇಳಬಯಸಿದನು? ಕ್ರೈಸ್ತರು ಮೂಕ ಬಲಿಪಶುಗಳಂತೆ ಇರಬೇಕೆಂದು ಹೇಳುತ್ತಿದ್ದನೋ? ತಮ್ಮ ಮೇಲಾಗುವ ಯಾವುದೇ ದೌರ್ಜನ್ಯವನ್ನು ಸಹಿಸಿಕೊಂಡು ಸುಮ್ಮನಿರಬೇಕೆಂದೋ? ಕಾನೂನಿನ ನೆರವು ಕೋರುವುದು ತಪ್ಪೆಂದೋ?

ಯೇಸು ಏನು ಹೇಳಬಯಸಿದನು?

ಇದನ್ನು ಅರ್ಥಮಾಡಿಕೊಳ್ಳಲು ಆ ಮಾತುಗಳನ್ನು ಯೇಸು ಹೇಳಿದಾಗ ಯಾವುದನ್ನು ಮನಸ್ಸಿನಲ್ಲಿಟ್ಟಿದ್ದನೆಂದು, ಯಾರೊಂದಿಗೆ ಮಾತಾಡುತ್ತಿದ್ದನೆಂದು ನಾವು ತಿಳಿಯಬೇಕು. ಯೇಸು ಆ ಬುದ್ಧಿವಾದ ಕೊಡುವ ಮುಂಚೆ, ಪವಿತ್ರ ಶಾಸ್ತ್ರಗ್ರಂಥದಿಂದ ತನ್ನ ಕೇಳುಗರಿಗೆ ಈಗಾಗಲೇ ತಿಳಿದಿದ್ದ ವಿಷಯವನ್ನು ಉಲ್ಲೇಖಿಸುತ್ತಾ ಹೀಗಂದನು: “‘ಕಣ್ಣಿಗೆ ಪ್ರತಿಯಾಗಿ ಕಣ್ಣು ಹಲ್ಲಿಗೆ ಪ್ರತಿಯಾಗಿ ಹಲ್ಲು’ ಎಂದು ಹೇಳಿರುವುದನ್ನು ನೀವು ಕೇಳಿಸಿಕೊಂಡಿದ್ದೀರಿ.”—ಮತ್ತಾಯ 5:38.

ಶಾಸ್ತ್ರಗ್ರಂಥದಿಂದ ಯೇಸು ಉಲ್ಲೇಖಿಸಿದ ಆ ಮಾತುಗಳು ವಿಮೋಚನಕಾಂಡ 21:24 ಮತ್ತು ಯಾಜಕಕಾಂಡ 24:20ರಲ್ಲಿವೆ. “ಕಣ್ಣಿಗೆ ಪ್ರತಿಯಾಗಿ ಕಣ್ಣು” ಎಂಬ ಶಿಕ್ಷೆಯನ್ನು ದೇವರ ನಿಯಮಕ್ಕನುಸಾರ ಹೇಗೆ ವಿಧಿಸಲಾಗುತ್ತಿತ್ತು ಎಂಬುದನ್ನು ಗಮನಿಸೋಣ. ಮೊದಲು ಅಪರಾಧಿಯನ್ನು ಯಾಜಕರ ಹಾಗೂ ನ್ಯಾಯಾಧಿಪತಿಗಳ ಮುಂದೆ ವಿಚಾರಣೆಗಾಗಿ ನಿಲ್ಲಿಸಲಾಗುತ್ತಿತ್ತು. ಯಾವ ಸನ್ನಿವೇಶದಲ್ಲಿ ಅಪರಾಧ ನಡೆಯಿತು ಹಾಗೂ ಇದು ಉದ್ದೇಶಪೂರ್ವಕವಾಗಿ ಮಾಡಲ್ಪಟ್ಟಿತ್ತೊ ಎಂದು ತೂಗಿನೋಡಿದ ನಂತರವೇ ಅವರು ಆ ಶಿಕ್ಷೆಯನ್ನು ವಿಧಿಸುತ್ತಿದ್ದರು.—ಧರ್ಮೋಪದೇಶಕಾಂಡ 19:15-21.

ಸಮಯ ಸಂದಂತೆ ಯೆಹೂದ್ಯರು ಆ ನಿಯಮವನ್ನು ತಪ್ಪಾಗಿ ಅನ್ವಯಿಸತೊಡಗಿದರು. 19ನೇ ಶತಮಾನದಲ್ಲಿ ಆ್ಯಡಮ್‌ ಕ್ಲಾರ್ಕ್‌ ಎಂಬವರು ಬೈಬಲಿನ ಕುರಿತು ಬರೆದ ವ್ಯಾಖ್ಯಾನದಲ್ಲಿ ಹೇಳಿದ್ದು: “ಯೆಹೂದ್ಯರು, ಇತರರ ಮೇಲೆ ತಮಗಿದ್ದ ಕಹಿಭಾವನೆಯನ್ನು ಹಾಗೂ ಹಗೆ ಸಾಧಿಸಲಿಕ್ಕಾಗಿ ನಡೆಸುತ್ತಿದ್ದ ಕ್ರೂರ ಕೃತ್ಯಗಳನ್ನು ಸಮರ್ಥಿಸಲು ಈ [ಕಣ್ಣಿಗೆ ಪ್ರತಿಯಾಗಿ ಕಣ್ಣು ಹಲ್ಲಿಗೆ ಪ್ರತಿಯಾಗಿ ಹಲ್ಲು] ನಿಯಮವನ್ನು ಆಧಾರವಾಗಿ ಬಳಸುತ್ತಿದ್ದರೆಂದು ತೋರುತ್ತದೆ. ಅನೇಕವೇಳೆ ಅತಿ ಕ್ರೂರವಾದ ವಿಧಗಳಲ್ಲಿ ಸೇಡನ್ನು ತೀರಿಸಲಾಗುತ್ತಿತ್ತು. ಮಾಡಲಾದ ಕೇಡಿಗಿಂತ ಹೆಚ್ಚಿನ ಕೇಡನ್ನು ಹಿಂತಿರುಗಿಸಲಾಗುತ್ತಿತ್ತು.” ಆದರೆ ಶಾಸ್ತ್ರಗ್ರಂಥವು ಇಂಥ ಕೃತ್ಯಗಳಿಗೆ ಆಧಾರ ಕೊಡುತ್ತಿರಲಿಲ್ಲ.

“ಮತ್ತೊಂದು ಕೆನ್ನೆಯನ್ನೂ ಒಡ್ಡು” ಎಂದು ಯೇಸು ತನ್ನ ಪರ್ವತ ಪ್ರಸಂಗದಲ್ಲಿ ಬೋಧಿಸಿದ ವಿಷಯವು ದೇವರು ಇಸ್ರಾಯೇಲ್‌ ಜನಾಂಗಕ್ಕೆ ಕೊಟ್ಟ ನಿಯಮದ ನೈಜ ಅರ್ಥವನ್ನು ಬಿಂಬಿಸುತ್ತದೆ. ಯೇಸು ತನ್ನ ಹಿಂಬಾಲಕರಿಗೆ ಹೇಳಿದ ಈ ಮಾತಿನ ಅರ್ಥ, ಯಾರಾದರೂ ಕಪಾಳಕ್ಕೆ ಹೊಡೆದರೆ ಇನ್ನೊಂದು ಕಪಾಳ ತೋರಿಸಿ ‘ಈಗ ಇಲ್ಲಿಯೂ ಹೊಡಿ’ ಎಂದವರು ಹೇಳಬೇಕೆಂದಲ್ಲ. ಇಂದು ಹೇಗೋ ಹಾಗೆಯೇ ಬೈಬಲ್‌ ಕಾಲದಲ್ಲೂ ಒಬ್ಬ ವ್ಯಕ್ತಿಯ ಕೆನ್ನೆಗೆ ಹೊಡೆಯುತ್ತಿದ್ದದ್ದರ ಉದ್ದೇಶ ಶಾರೀರಿಕ ಹಾನಿ ಮಾಡುವುದಲ್ಲ ಬದಲಾಗಿ ಅವನನ್ನು ಅವಮಾನಿಸಿ ಜಗಳಕ್ಕೆಳೆಯುವುದೇ ಆಗಿತ್ತು.

ಹಾಗಾದರೆ ಯೇಸು ಹೇಳಬಯಸಿದ್ದೇನೆಂದರೆ, ಕೆನ್ನೆಗೆ ಹೊಡೆಯುವ ಮೂಲಕವೊ ಅಥವಾ ಮನಸ್ಸನ್ನು ಚುಚ್ಚುವ ಕೊಂಕುನುಡಿಯಿಂದಲೋ ಒಬ್ಬ ವ್ಯಕ್ತಿಯನ್ನು ಕೆರಳಿಸಿ ಜಗಳಕ್ಕೆ ಎಳೆಯಲು ಪ್ರಯತ್ನಿಸಿದಾಗ ಆ ವ್ಯಕ್ತಿ ‘ಏಟಿಗೆ ಪ್ರತಿಯೇಟು’ ಕೊಡಬಾರದೆಂದೇ. ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಹಿಂದಿರುಗಿಸುವ ವಿಷಚಕ್ರದಲ್ಲಿ ಸಿಕ್ಕಿಹಾಕಿಕೊಳ್ಳದಿರಲು ಆ ವ್ಯಕ್ತಿ ಪ್ರಯತ್ನಿಸಬೇಕು.—ರೋಮನ್ನರಿಗೆ 12:17.

ಯೇಸುವಿನ ಮಾತು ಅರಸ ಸೊಲೊಮೋನನ ಈ ಮಾತುಗಳಿಗೆ ಹೋಲುತ್ತಿದ್ದವು: “ಅವನು ನನಗೆ ಮಾಡಿದಂತೆ ನಾನೂ ಅವನಿಗೆ ಮಾಡುವೆನು, ಅವನು ಮಾಡಿದ್ದಕ್ಕೆ ಸರಿಯಾಗಿ ಮುಯ್ಯಿತೀರಿಸುವೆನು ಅಂದುಕೊಳ್ಳಬೇಡ.” (ಜ್ಞಾನೋಕ್ತಿ 24:29) ಯೇಸುವಿನ ಹಿಂಬಾಲಕನೊಬ್ಬನು ಮತ್ತೊಂದು ಕೆನ್ನೆಯನ್ನು ಒಡ್ಡಬೇಕೆಂಬುದರ ಅರ್ಥ, ಯಾರಾದರೂ ತನ್ನನ್ನು ಜಗಳಕ್ಕೆಳೆಯಲು ಪ್ರಯತ್ನಿಸಿದಾಗ ಅವರ ‘ಕೆಣಕುವಿಕೆಗೆ’ ಪ್ರತಿಕ್ರಿಯಸಬಾರದು ಎಂದಾಗಿದೆ.—ಗಲಾತ್ಯ 5:26, ಸತ್ಯವೇದವು.

ಆತ್ಮರಕ್ಷಣೆಯ ಕುರಿತೇನು?

ಮತ್ತೊಂದು ಕೆನ್ನೆಯನ್ನು ಒಡ್ಡಬೇಕೆಂದು ಹೇಳುವಾಗ ನಮ್ಮ ಮೇಲೆ ಆಕ್ರಮಣ ನಡೆದಾಗ ನಾವು ನಮ್ಮನ್ನು ರಕ್ಷಿಸಿಕೊಳ್ಳಬಾರದೆಂದು ಅರ್ಥವಲ್ಲ. ಕ್ರೈಸ್ತರು ತಮ್ಮನ್ನೇ ರಕ್ಷಿಸಿಕೊಳ್ಳಬಹುದು ಆದರೆ ಮೊದಲು ಕೈಯೆತ್ತುವವರು ಅವರಾಗಿರಬಾರದು ಅಥವಾ ಯಾರಾದರೂ ಕೆರಳಿಸಿದರೆ ಅವರ ಮೇಲೆ ಸೇಡು ತೀರಿಸಬಾರದು ಎಂದು ಯೇಸು ಹೇಳುತ್ತಿದ್ದನು. ಸಾಧ್ಯವಾಗುವಲ್ಲಿ ಆ ಜಾಗದಿಂದ ಹೊರಟುಹೋಗಿ ಜಗಳವನ್ನು ತಪ್ಪಿಸುವುದೇ ವಿವೇಕಯುತ. ಆಗದಿದ್ದಲ್ಲಿ, ಪೊಲೀಸರ ನೆರವನ್ನು ಕೋರಿದರೆ ತಪ್ಪೇನಿಲ್ಲ.

ಈ ಮೂಲತತ್ತ್ವವನ್ನು ಸರಿಯಾಗಿ ಅನ್ವಯಿಸುತ್ತಾ ಯೇಸುವಿನ ಪ್ರಥಮ ಶತಮಾನದ ಹಿಂಬಾಲಕರು ತಮ್ಮ ಕಾನೂನುಬದ್ಧ ಹಕ್ಕುಗಳನ್ನು ಕಾಪಾಡಿಕೊಳ್ಳಲು ಕ್ರಮಕೈಗೊಂಡರು. ಉದಾಹರಣೆಗೆ, ಅಪೊಸ್ತಲ ಪೌಲನನ್ನು ತೆಗೆದುಕೊಳ್ಳಿ. ಯೇಸು ಆಜ್ಞಾಪಿಸಿದಂತೆಯೇ ಸಾರಲು ತನಗೆ ಹಕ್ಕಿತ್ತೆಂದು ಪೌಲನಿಗೆ ಗೊತ್ತಿತ್ತು. ಆ ಹಕ್ಕನ್ನು ಕಾಪಾಡಿಕೊಳ್ಳಲು ಅವನು ತನ್ನ ದಿನಗಳಲ್ಲಿದ್ದ ಕಾನೂನು ವ್ಯವಸ್ಥೆಯ ಮೊರೆಹೋದನು. (ಮತ್ತಾಯ 28:19, 20) ಪೌಲನು ಹಾಗೂ ಅವನ ಜೊತೆ ಮಿಷನರಿ ಸೀಲನು ಫಿಲಿಪ್ಪಿಯಲ್ಲಿ ಸಾರುತ್ತಿದ್ದಾಗ ಅಧಿಕಾರಿಗಳು ಅವರನ್ನು ದಸ್ತಗಿರಿ ಮಾಡಿ ಕಾನೂನು ಮುರಿದಿದ್ದಾರೆ ಎಂಬ ಆರೋಪವನ್ನು ಅವರ ಮೇಲೆ ಹೊರಿಸಿದ್ದರು.

ಅವರಿಬ್ಬರನ್ನು ಎಲ್ಲ ಜನರ ಮುಂದೆ ಕೋಲುಗಳಿಂದ ಹೊಡೆದು, ವಿಚಾರಣೆಯೂ ನಡೆಸದೆ ಸೆರೆಮನೆಯಲ್ಲಿ ಕೂಡಿಹಾಕಿದರು. ಸಂದರ್ಭ ಒದಗಿಬಂದಾಗ ಪೌಲನು ರೋಮನ್‌ ಪ್ರಜೆಯಾಗಿ ತನಗಿರುವ ಹಕ್ಕನ್ನು ಬಳಸಿದನು. ಅವನು ರೋಮನ್‌ ಪ್ರಜೆಯೆಂದು ತಿಳಿದಾಗ ಹೆದರಿಹೋದ ಅಧಿಕಾರಿಗಳು ಪೌಲಸೀಲರಿಗೆ ಗಲಭೆ ಎಬ್ಬಿಸದೆ ಆ ಪಟ್ಟಣದಿಂದ ಹೊರಟುಹೋಗುವಂತೆ ಬೇಡಿದರು. ಈ ರೀತಿಯಲ್ಲಿ ‘ಸುವಾರ್ತೆಯನ್ನು ಸಮರ್ಥಿಸಿ ಅದನ್ನು ಕಾನೂನುಬದ್ಧವಾಗಿ ಸ್ಥಾಪಿಸುವುದಕ್ಕೆ’ ಪೌಲನು ಮಾದರಿಯನ್ನಿಟ್ಟನು.—ಅ. ಕಾರ್ಯಗಳು 16:19-24, 35-40; ಫಿಲಿಪ್ಪಿ 1:7.

ಪೌಲನಂತೆ ಇಂದು ಯೆಹೋವನ ಸಾಕ್ಷಿಗಳೂ ತಮ್ಮ ಕ್ರೈಸ್ತ ಚಟುವಟಿಕೆಗಳನ್ನು ನಿರ್ಬಂಧಗಳಿಲ್ಲದೆ ಮುಂದುವರಿಸಲು ಎಷ್ಟೋ ಸಲ ಕೋರ್ಟ್‌ ಕಟಕಟೆಯನ್ನು ಹತ್ತಬೇಕಾಗಿ ಬಂದಿದೆ. ತಮ್ಮ ಪ್ರಜೆಗಳಿಗೆ ಧಾರ್ಮಿಕ ಸ್ವಾತಂತ್ರ್ಯವಿದೆ ಎಂದು ಹೇಳಿಕೊಳ್ಳುವ ದೇಶಗಳಲ್ಲೂ ಈ ಹೋರಾಟಗಳನ್ನು ನಡೆಸಬೇಕಾಗಿ ಬಂದಿದೆ. ಅಪರಾಧಕ್ಕೆ ಒಳಗಾದಾಗ ಯೆಹೋವನ ಸಾಕ್ಷಿಗಳು ಮತ್ತೊಂದು ಕೆನ್ನೆಯನ್ನು ತೋರಿಸಬೇಕೆಂದಿಲ್ಲ ಅಂದರೆ ತಮ್ಮನ್ನು ರಕ್ಷಿಸಿಕೊಳ್ಳದೆ ಸುಮ್ಮನೆ ಕುಳಿತುಕೊಳ್ಳಬೇಕೆಂದೇನಿಲ್ಲ. ಅವರು ಆತ್ಮರಕ್ಷಣೆಗಾಗಿ ಬೇಕಾದ ಕಾನೂನುಬದ್ಧ ಕ್ರಮಗಳನ್ನು ಕೈಗೊಳ್ಳುತ್ತಾರೆ.

ಹೀಗಿರಲಾಗಿ ಕ್ರೈಸ್ತರೋಪಾದಿ ಯೆಹೋವನ ಸಾಕ್ಷಿಗಳು ತಮ್ಮ ಕಾನೂನುಬದ್ಧ ಹಕ್ಕುಗಳನ್ನು ಸ್ಥಾಪಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಅನೇಕವೇಳೆ ಇದರಿಂದ ಸಿಗುವ ಫಲಿತಾಂಶ ಸೀಮಿತವೆಂದು ಅವರಿಗೆ ತಿಳಿದಿದೆ. ಹಾಗಾಗಿ ಆ ಕ್ರಮಗಳನ್ನು ಕೈಗೊಂಡ ಬಳಿಕ ಯೇಸು ಮಾಡಿದಂತೆ ವಿಷಯಗಳನ್ನು ಯೆಹೋವನ ಕೈಯಲ್ಲಿ ಬಿಟ್ಟುಬಿಡುತ್ತಾರೆ. ಯೆಹೋವನು ಎಲ್ಲ ವಿಷಯಗಳನ್ನು ಮನಸ್ಸಿನಲ್ಲಿಟ್ಟು ಕಾರ್ಯವೆಸಗುವನು ಹಾಗೂ ಆತನು ದಂಡಿಸಿದರೂ ಅದು ಪರಿಪೂರ್ಣ ನ್ಯಾಯದಿಂದ ಕೂಡಿದ್ದಾಗಿರುವುದು ಎಂಬ ಪೂರ್ಣ ಭರವಸೆ ಅವರಿಗಿದೆ. (ಮತ್ತಾಯ 26:51-53; ಯೂದ 9) ಮುಯ್ಯಿಗೆ ಮುಯ್ಯಿ ತೀರಿಸುವುದು ಯೆಹೋವನ ಕೆಲಸ ಎಂಬುದನ್ನು ನಿಜ ಕ್ರೈಸ್ತರು ಜ್ಞಾಪಕದಲ್ಲಿಡುತ್ತಾರೆ.—ರೋಮನ್ನರಿಗೆ 12:17-19. (g10-E 09)

ಈ ಬಗ್ಗೆ ಯೋಚಿಸಿದ್ದೀರೋ?

● ಕ್ರೈಸ್ತರು ಮಾಡಬಾರದ ಕೃತ್ಯಗಳಾವುವು? —ರೋಮನ್ನರಿಗೆ 12:17.

● ಆತ್ಮರಕ್ಷಣೆಗಾಗಿ ಕಾನೂನುಬದ್ಧ ಕ್ರಮ ತೆಗೆದುಕೊಳ್ಳುವುದನ್ನು ಬೈಬಲ್‌ ನಿಷೇಧಿಸುತ್ತದೋ?—ಫಿಲಿಪ್ಪಿ 1:7.

● ಯೇಸುವಿಗೆ ತನ್ನ ತಂದೆಯ ಬಗ್ಗೆ ಯಾವ ಭರವಸೆಯಿತ್ತು?—ಮತ್ತಾಯ 26:51-53.