ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾಸ್ತಿಕರ ಅಭಿಯಾನ

ನಾಸ್ತಿಕರ ಅಭಿಯಾನ

ನಾಸ್ತಿಕರ ಅಭಿಯಾನ

ನಾಸ್ತಿಕರ ಹೊಸ ಗುಂಪೊಂದು ಸಮಾಜದಲ್ಲಿ ತಲೆಯೆತ್ತಿದೆ. ‘ನವನಾಸ್ತಿಕರು’ ಎಂಬ ಈ ಗುಂಪಿನವರಿಗೆ ತಮ್ಮ ಅಭಿಪ್ರಾಯಗಳನ್ನು ತಮ್ಮಲ್ಲೇ ಇಟ್ಟುಕೊಳ್ಳಲು ಮನಸ್ಸಿಲ್ಲ. ಬದಲಾಗಿ “ತಮ್ಮ ಅಭಿಪ್ರಾಯವನ್ನು ಧರ್ಮನಿಷ್ಠರು ಸ್ವೀಕರಿಸುವಂತೆ ಮಾಡಲು ಸಕ್ರಿಯವಾಗಿ, ಆವೇಶದಿಂದ ಹಾಗೂ ಭಾವೋದ್ರೇಕದಿಂದ ಪ್ರಯತ್ನಿಸುತ್ತಿದ್ದಾರೆ” ಎಂದು ಬರೆದರು ಅಂಕಣಕಾರ ರಿಚರ್ಡ್‌ ಬೆರ್ನ್‌ಸ್ಟೀನ್‌. ಹೀಗೆ ನಾಸ್ತಿಕರು ಒಂದು ಅಭಿಯಾನದಲ್ಲಿ ತೊಡಗಿದ್ದಾರೆ. ಅವರು ಆಜ್ಞೇಯವಾದಿಗಳ ಮೇಲೂ ಗುರಿಯಿಟ್ಟಿದ್ದಾರೆ. ಯಾಕೆಂದರೆ ನವನಾಸ್ತಿಕರಿಗೆ ತಮ್ಮ ವಿಶ್ವಾಸದ ಬಗ್ಗೆ ಕೊಂಚವೂ ಸಂಶಯವಿಲ್ಲ. ಅವರ ಎಣಿಕೆಯಲ್ಲಿ ‘ದೇವರೇ ಇಲ್ಲ’ ಎಂಬುದು ಪರಮಸತ್ಯ. ಮುಂದೆ ಚರ್ಚೆಗೆ ಅವಕಾಶವಿಲ್ಲ!

ನೋಬೆಲ್‌ ಪಾರಿತೋಷಕ ವಿಜೇತ ಸ್ಟೀವನ್‌ ವೇನ್‌ಬರ್ಗ್‌ ಹೇಳುವುದು: “ಧಾರ್ಮಿಕ ನಂಬಿಕೆಯೆಂಬ ದೀರ್ಘ ದುಃಸ್ವಪ್ನದಿಂದ ಜಗತ್ತು ಎಚ್ಚೆತ್ತುಕೊಳ್ಳುವ ಅಗತ್ಯವಿದೆ. ಧರ್ಮದ ಬಿಗಿಹಿಡಿತವನ್ನು ಸಡಿಲಿಸಲು ವಿಜ್ಞಾನಿಗಳಾದ ನಾವು ನಮ್ಮಿಂದ ಏನು ಸಾಧ್ಯವೋ ಅದನ್ನು ಮಾಡಬೇಕು. ಇದೇ ನಾವು ಸಮಾಜಕ್ಕೆ ಕೊಡಬಲ್ಲ ಅತ್ಯಂತ ದೊಡ್ಡ ಕೊಡುಗೆ.” ಧರ್ಮದ ಬಿಗಿಹಿಡಿತವನ್ನು ಸಡಿಲಿಸಲು ನವನಾಸ್ತಿಕರು ಬಳಸುತ್ತಿರುವ ಒಂದು ಸಾಧನ ಸಾಹಿತ್ಯವೇ. ಅವರ ಕೆಲವು ಪುಸ್ತಕಗಳು ಇಂದು ಅತ್ಯಂತ ಜನಪ್ರಿಯವಾಗ ತೊಡಗಿದ್ದು ಆಸಕ್ತಿಯನ್ನು ಕೆರಳಿಸುತ್ತಿವೆ.

ನವನಾಸ್ತಿಕರ ಸಮರಕ್ಕೆ ಕಾರಣ ಧರ್ಮವೇ. ಲೋಕವನ್ನು ಸತತವಾಗಿ ಬಾಧಿಸುತ್ತಿರುವ ಧಾರ್ಮಿಕ ಅತಿರೇಕತೆ, ಭಯೋತ್ಪಾದನೆ, ಹೋರಾಟಗಳಿಂದ ಜನರು ಬೇಸತ್ತುಹೋಗಿದ್ದಾರೆ. “ಧರ್ಮವು ವಿಷಕಾರಿ” ಎನ್ನುತ್ತಾನೆ ಒಬ್ಬ ಪ್ರಮುಖ ನಾಸ್ತಿಕ. ಈ ‘ವಿಷ’ ಕೇವಲ ಅತಿರೇಕದ ನೋಟಗಳಲ್ಲಿ ಅಲ್ಲ ಸಾಮಾನ್ಯ ಧಾರ್ಮಿಕ ನಂಬಿಕೆಗಳಲ್ಲೂ ಇದೆಯೆಂದು ಹೇಳಲಾಗುತ್ತಿದೆ. ಧರ್ಮಗಳ ಮುಖ್ಯ ಬೋಧನೆಗಳು ಬಯಲಾಗಬೇಕು, ತ್ಯಜಿಸಲ್ಪಡಬೇಕು ಹಾಗೂ ಜನರು ತರ್ಕ ಮತ್ತು ನಿಜಾಂಶಗಳನ್ನು ಆಧರಿಸಿ ಯೋಚಿಸಲಾರಂಭಿಸಬೇಕು ಎಂದು ನವನಾಸ್ತಿಕರು ಹೇಳುತ್ತಾರೆ. ನಾಸ್ತಿಕ ಸ್ಯಾಮ್‌ ಹ್ಯಾರಿಸ್‌ ಬರೆದದ್ದೇನೆಂದರೆ ಬೈಬಲ್‌ ಮತ್ತು ಕುರಾನ್‌ನಲ್ಲಿ “ಬೆಟ್ಟದಷ್ಟಿರುವ ಜೀವಘಾತಕ ಹುಚ್ಚುಮಾತುಗಳನ್ನು ಬಯಲುಪಡಿಸಲು ಜನರು ಧೈರ್ಯದಿಂದ ಮುಂದೆಬರಬೇಕು. ಧಾರ್ಮಿಕ ಜನರ ಮನನೋಯಿಸುವ ಭಯದಿಂದ ಅವುಗಳನ್ನು ಬಯಲುಪಡಿಸದೇ ಇರುವಲ್ಲಿ ಅದು ತುಂಬ ಹಾನಿಕಾರಕ.”

ನವನಾಸ್ತಿಕರು ಧರ್ಮವನ್ನು ನಿಂದಿಸುತ್ತಾರೆ ಆದರೆ ವಿಜ್ಞಾನವನ್ನು ಪೂಜ್ಯಭಾವದಿಂದ ಕಾಣುತ್ತಾರೆ. ದೇವರಿಲ್ಲ ಎಂಬುದಕ್ಕೆ ವಿಜ್ಞಾನ ಪುರಾವೆ ಕೊಡುತ್ತದೆಂದೂ ಕೆಲವರು ವಾದಿಸುತ್ತಾರೆ. ಆದರೆ ಇದು ನಿಜವೊ? ಅದು ಪುರಾವೆ ಕೊಡಶಕ್ತವೊ? “ಸಾಕಷ್ಟು ಸಮಯದ ಬಳಿಕ ಒಂದು ಪಕ್ಷ ಖಂಡಿತ ಗೆಲ್ಲಲಿದೆ. ಇನ್ನೊಂದು ಪಕ್ಷ ಸೋಲಲಿದೆ” ಎನ್ನುತ್ತಾರೆ ಹ್ಯಾರಿಸ್‌.

ಈ ವಾದದಲ್ಲಿ ಯಾವ ಪಕ್ಷ ಗೆಲ್ಲುವುದೆಂದು ನೆನಸುತ್ತೀರಿ? ಅದನ್ನು ಪರಿಗಣಿಸುವಾಗ ನಿಮ್ಮನ್ನು ಹೀಗೆ ಕೇಳಿಕೊಳ್ಳಿ: ‘ಸೃಷ್ಟಿಕರ್ತನಿದ್ದಾನೆ ಎಂಬ ನಂಬಿಕೆ ಮೂಲತಃ ಹಾನಿಕರವೋ? ಜನರೆಲ್ಲರೂ ನಾಸ್ತಿಕರಾದಲ್ಲಿ ಲೋಕಕಲ್ಯಾಣ ಆಗುವುದೇ?’ ನಾಸ್ತಿಕತೆ, ಧರ್ಮ ಹಾಗೂ ವಿಜ್ಞಾನದ ಬಗ್ಗೆ ಕೆಲವು ಗಣ್ಯ ವಿಜ್ಞಾನಿಗಳು ಹಾಗೂ ತತ್ವಜ್ಞಾನಿಗಳು ಆಡಿದ ಮಾತುಗಳನ್ನು ಪರಿಗಣಿಸೋಣ. (g10-E 11)