ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾಲಿಗೆಯನ್ನು ಪಳಗಿಸಲು ವಿವೇಕದ ನುಡಿ

ನಾಲಿಗೆಯನ್ನು ಪಳಗಿಸಲು ವಿವೇಕದ ನುಡಿ

ನಾಲಿಗೆಯನ್ನು ಪಳಗಿಸಲು ವಿವೇಕದ ನುಡಿ

‘ಛೇ ನಾನು ಹಾಗೆ ಹೇಳಬಾರದಿತ್ತು!’ ಹೀಗೆಂದಾದರೂ ಅಂದಿದ್ದೀರೊ? ನಾವೆಲ್ಲರೂ ನಮ್ಮ ನಾಲಿಗೆಗೆ ಲಗಾಮು ಹಾಕಲು ಹೆಣಗಾಡುತ್ತೇವೆ ನಿಜ. ಬಹುಮಟ್ಟಿಗೆ ಯಾವ ಪ್ರಾಣಿಯನ್ನಾದರೂ ಪಳಗಿಸಬಹುದು ಆದರೆ “ಮಾನವಕುಲದಲ್ಲಿ ಯಾವನೂ ನಾಲಿಗೆಯನ್ನು ಪಳಗಿಸಲಾರನು” ಎನ್ನುತ್ತದೆ ಬೈಬಲ್‌. (ಯಾಕೋಬ 3:7, 8) ಅಂದಮಾತ್ರಕ್ಕೆ ನಮ್ಮಿಂದೇನೂ ಮಾಡಲು ಸಾಧ್ಯವಿಲ್ಲ ಎಂದು ಕೈಚೆಲ್ಲಿ ಕುಳಿತುಬಿಡಬೇಕೋ? ಇಲ್ಲ! ನಾಲಿಗೆ ಇರುವುದು ಚೋಟುದ್ದ ಆದರೆ ಅದರ ಶಕ್ತಿ ಪ್ರಬಲ. ಆದ್ದರಿಂದ ಈ ಅಂಗಕ್ಕೆ ಲಗಾಮು ಹಾಕಲು ನೆರವಾಗುವ ಕೆಲವೊಂದು ಬೈಬಲ್‌ ತತ್ತ್ವಗಳನ್ನು ಪರಿಗಣಿಸೋಣ.

“ಹೆಚ್ಚು ಮಾತಾಡುವುದರಿಂದ ಪಾಪ ತಪ್ಪದು, ಆದರೆ ತನ್ನ ತುಟಿಗಳನ್ನು ತಡೆಯುವವನು ಜ್ಞಾನವಂತನು.” (ಜ್ಞಾನೋಕ್ತಿ 10:19, NIBV) ನಮ್ಮ ಮಾತು ಹೆಚ್ಚಾದರೆ, ತಿಳಿಗೇಡಿತನದ ಅಥವಾ ಹಾನಿಕರ ಮಾತುಗಳನ್ನು ಆಡುವ ಅಪಾಯ ಹೆಚ್ಚು. ಹೌದು, ಕಡಿವಾಣವಿಲ್ಲದ ನಾಲಿಗೆಯು ಬೆಂಕಿಯಂತಿದ್ದು, ಅದರ ಮೂಲಕ ಹಾನಿಕರ ಹರಟೆ ಮತ್ತು ಚಾಡಿಮಾತು ವೇಗವಾಗಿ ಹಬ್ಬಬಲ್ಲದು. (ಯಾಕೋಬ 3:5, 6) ಆದರೆ ನಾವು ನಮ್ಮ ‘ತುಟಿಗಳನ್ನು ತಡೆಯ’ಬೇಕು ಅಂದರೆ ಮಾತಾಡುವ ಮುಂಚೆ ಯೋಚಿಸಬೇಕು. ನಮ್ಮ ಮಾತುಗಳು ಬೀರಬಹುದಾದ ಪರಿಣಾಮವನ್ನು ಆಗ ಮನಸ್ಸಿಗೆ ತರಬಲ್ಲೆವು. ಹೀಗೆ ಮಾಡುವುದರಿಂದ ನಮ್ಮ ವಿವೇಚನಾಶಕ್ತಿ ತೋರಿಬರುವುದು. ಅಲ್ಲದೆ ಇತರರ ಗೌರವ ಹಾಗೂ ಭರವಸೆಗೂ ಪಾತ್ರರಾಗುವೆವು.

“ಪ್ರತಿಯೊಬ್ಬನು ಕಿವಿಗೊಡುವುದರಲ್ಲಿ ಶೀಘ್ರನೂ ಮಾತಾಡುವುದರಲ್ಲಿ ದುಡುಕದವನೂ ಕೋಪಿಸುವುದರಲ್ಲಿ ನಿಧಾನಿಯೂ ಆಗಿರಬೇಕು.” (ಯಾಕೋಬ 1:19) ಇತರರು ಮಾತಾಡುವಾಗ ನಾವು ಗಮನಕೊಟ್ಟು ಆಲಿಸಿದರೆ ಅವರಿಗದು ಇಷ್ಟವಾಗುತ್ತದೆ. ಏಕೆಂದರೆ ಈ ಮೂಲಕ ನಾವು ಅವರ ಮಾತಿನಲ್ಲಿ ಆಸಕ್ತರೆಂದು ಮಾತ್ರವಲ್ಲ ಅವರನ್ನು ಗೌರವಿಸುತ್ತೇವೆಂದೂ ತೋರಿಸುತ್ತೇವೆ. ಆದರೆ ಯಾರಾದರೂ ನಮ್ಮ ಮನನೋಯಿಸುವ ಇಲ್ಲವೆ ನಮ್ಮನ್ನು ರೇಗಿಸುವ ಮಾತನ್ನಾಡಿದರೆ ಆಗೇನು? ನಾವು ಸಹ ಅದೇ ಧಾಟಿಯಲ್ಲಿ ಉತ್ತರಿಸದಿರುವ ಮೂಲಕ “ಕೋಪಿಸುವುದರಲ್ಲಿ ನಿಧಾನಿ” ಆಗಿರಲು ಯತ್ನಿಸಬೇಕು. ಯಾರಿಗೆ ಗೊತ್ತು, ಪ್ರಾಯಶಃ ಯಾವುದೋ ಕಾರಣಕ್ಕಾಗಿ ನೊಂದಿದ್ದ ಆ ವ್ಯಕ್ತಿ, ಒರಟಾಗಿ ಮಾತಾಡಿದಕ್ಕಾಗಿ ನಮ್ಮಿಂದ ಕ್ಷಮೆಯನ್ನೂ ಯಾಚಿಸಬಹುದು. ‘ಕೋಪಿಸುವುದರಲ್ಲಿ ನಿಧಾನಿಗಳಾಗಿರಲು’ ನಿಮಗೆ ಕಷ್ಟವಾಗುತ್ತದೊ? ಹಾಗಿದ್ದರೆ ಸ್ವನಿಯಂತ್ರಣಕ್ಕಾಗಿ ದೇವರಿಗೆ ಪ್ರಾರ್ಥಿಸಿ. ಇಂಥ ಮನಃಪೂರ್ವಕ ವಿನಂತಿಗಳನ್ನು ಆತನು ಖಂಡಿತ ಕೇಳುವನು.—ಲೂಕ 11:13.

“ಮೃದುವಚನವು ಎಲುಬನ್ನು ಮುರಿಯುವದು.” (ಜ್ಞಾನೋಕ್ತಿ 25:15) ಹೆಚ್ಚಿನವರು ನೆನಸುವಂತೆ ಮೃದುಭಾವವು ಬಲಹೀನತೆಯಲ್ಲ, ಅದಕ್ಕೆ ಬಲವಿದೆ. ಉದಾಹರಣೆಗಾಗಿ ಸಿಟ್ಟು ಅಥವಾ ದುರಭಿಪ್ರಾಯದ ಕಾರಣದಿಂದ ಎದ್ದಿರುವ ವಿರೋಧವು ಎಲುಬಿನಷ್ಟು ಕಠಿನ ಹಾಗೂ ಬಗ್ಗದಂಥದ್ದಾಗಿ ತೋರಬಹುದು. ಆದರೆ ಮೃದು ಉತ್ತರವು ಅಂಥ ವಿರೋಧವನ್ನು ಜಯಿಸಬಲ್ಲದು. ಮೃದುಭಾವ ತೋರಿಸುವುದು ಅದರಲ್ಲೂ ಸಿಟ್ಟಿನಿಂದ ಕಾವೇರಿದ ಸನ್ನಿವೇಶದಲ್ಲಿ ತೋರಿಸುವುದು ಸವಾಲಾಗಿರುವುದು ಖಂಡಿತ. ಹೀಗಿರುವುದರಿಂದ, ಈ ವಿಷಯದಲ್ಲಿ ಬೈಬಲ್‌ ಏನನ್ನುತ್ತದೊ ಅದನ್ನು ಮಾಡಿದರೆ ಸಿಗುವ ಪ್ರಯೋಜನಗಳನ್ನೂ, ಮಾಡದಿದ್ದರೆ ಆಗುವ ಪರಿಣಾಮಗಳನ್ನೂ ಯೋಚಿಸಿ.

ಬೈಬಲ್‌ ತತ್ತ್ವಗಳಲ್ಲಿ ನಿಜವಾಗಿಯೂ “ಮೇಲಣಿಂದ ಬರುವ ವಿವೇಕ” ಇದೆ. (ಯಾಕೋಬ 3:17) ಆ ವಿವೇಕವನ್ನು ನಾವು ಮಾತಾಡುವ ರೀತಿಗೆ ಬಳಸುವಾಗ ನಮ್ಮ ಮಾತುಗಳು ಮಾನ್ಯವಾದದ್ದೂ, ಹರ್ಷಕರವೂ, ಬಲವರ್ಧಕವೂ ಆಗುತ್ತವೆ. ಅವು ಸಂದರ್ಭಕ್ಕೆ ಸೂಕ್ತವಾದ ಮಾತುಗಳಾಗಿದ್ದು “ಬೆಳ್ಳಿಯ ನಕಾಸಿಯಲ್ಲಿ ಖಚಿತವಾದ ಬಂಗಾರದ ಹಣ್ಣು”ಗಳಂತಿರುವವು.—ಜ್ಞಾನೋಕ್ತಿ 25:11. (g10-E 11)