ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನನ್ನೆಲ್ಲ ಸಂಕಷ್ಟಗಳಲ್ಲಿ ದೇವರು ಸಂತೈಸಿದ್ದಾನೆ

ನನ್ನೆಲ್ಲ ಸಂಕಷ್ಟಗಳಲ್ಲಿ ದೇವರು ಸಂತೈಸಿದ್ದಾನೆ

ನನ್ನೆಲ್ಲ ಸಂಕಷ್ಟಗಳಲ್ಲಿ ದೇವರು ಸಂತೈಸಿದ್ದಾನೆ

ವಿಕ್ಟೋರಿಯ ಕೊಜೊಈ ಹೇಳಿದಂತೆ

ವೈದ್ಯರು ಅಮ್ಮನ ಹತ್ತಿರ “ನಮ್ಮ ಕೈಲಾದದ್ದೆಲ್ಲ ಮಾಡಿದ್ದೇವಮ್ಮ. ಇನ್ನೇನೂ ಮಾಡಲಿಕ್ಕಾಗುವುದಿಲ್ಲ. ಜೀವಮಾನವಿಡೀ ನಿಮ್ಮ ಮಗಳು ಕಂಕುಳುಗೋಲನ್ನು ಬಳಸಬೇಕಾಗುತ್ತದೆ, ಕಾಲಿಗೆ ಬಿಗಿಪಟ್ಟಿಯನ್ನು ಹಾಕಬೇಕಾಗುತ್ತದೆ” ಎಂದಾಗ ನನಗೆ ಕಣ್ಣಿಗೆ ಕತ್ತಲಿಟ್ಟಂತಾಯಿತು! ನಡೆಯಲಿಕ್ಕೇ ಆಗದಿದ್ದರೆ ನಾನೇನು ಮಾಡಲಿ ಎಂಬ ಯೋಚನೆ ನನ್ನನ್ನು ಕಾಡಿತು.

ನಾನು ಹುಟ್ಟಿದ್ದು ಮೆಕ್ಸಿಕೊ ದೇಶದ ಚೀಯಾಪಸ್‌ ರಾಜ್ಯದ ಟಪಚುಲದಲ್ಲಿ 1949ರ ನವೆಂಬರ್‌ 17ರಂದು. ನಾಲ್ಕು ಮಂದಿ ಮಕ್ಕಳಲ್ಲಿ ನಾನೇ ದೊಡ್ಡವಳು. ಹುಟ್ಟಿದಾಗ ಆರೋಗ್ಯವಾಗಿ, ಚೆನ್ನಾಗಿದ್ದೆ. ಆದರೆ ನನಗೆ 6 ತಿಂಗಳಾಗುವಾಗ ಅಂಬೆಗಾಲಿಡುವುದನ್ನು ಒಮ್ಮೆಲೆ ನಿಲ್ಲಿಸಿಬಿಟ್ಟೆ, ಅತ್ತಿತ್ತ ಚಲಿಸುವುದು ಕಡಿಮೆಯಾಯಿತು. ಮತ್ತೆರಡು ತಿಂಗಳಾಗುವಷ್ಟರಲ್ಲಿ ನಾನು ಸ್ವಲ್ಪವೂ ಚಲಿಸುತ್ತಿರಲಿಲ್ಲ. ಟಪಚುಲದಲ್ಲಿದ್ದ ಬೇರೆ ಮಕ್ಕಳಿಗೂ ಇದೇ ರೀತಿಯಾದಾಗ ಏಕೆ ಹೀಗಾಗುತ್ತಿದೆ ಎಂದು ಸ್ಥಳೀಯ ಡಾಕ್ಟರುಗಳಿಗೆ ತಿಳಿಯದೆ ಹೋಯಿತು. ಆಮೇಲೆ ಮೆಕ್ಸಿಕೊ ನಗರದಿಂದ ಮೂಳೆತಜ್ಞರೊಬ್ಬರು ಬಂದು ನಮ್ಮನ್ನು ತಪಾಸಣೆ ಮಾಡಿದರು. ಆವಾಗಲೇ ಗೊತ್ತಾಯಿತು ನಮಗೆ ಪೋಲಿಯೊ ರೋಗ ತಗಲಿದೆ ಎಂದು.

ನಾನು ಮೂರು ವರ್ಷದವಳಾದಾಗ ನನ್ನ ಸೊಂಟ, ಕಾಲುಗಂಟುಗಳು ಮತ್ತು ಕಣಕಾಲುಗಳಿಗೆ ಶಸ್ತ್ರಕ್ರಿಯೆಯಾಯಿತು. ಪೋಲಿಯೊದಿಂದ ಕಾಲಾನಂತರ ನನ್ನ ಬಲಭುಜಕ್ಕೂ ತೊಂದರೆಯಾಯಿತು. ನಾನು ಆರು ವರ್ಷದವಳಿದ್ದಾಗ ಮುಂದಿನ ಚಿಕಿತ್ಸೆಗಾಗಿ ಮೆಕ್ಸಿಕೊ ನಗರದ ಮಕ್ಕಳ ಆಸ್ಪತ್ರೆಯೊಂದಕ್ಕೆ ಅಮ್ಮ ಕರೆತಂದರು. ಆದರೆ ಅವರು ಬೇರೆಯವರ ಫಾರ್ಮ್‌ನಲ್ಲಿ ಕೆಲಸಮಾಡುತ್ತಿದ್ದ ಕಾರಣ ವಾಪಸ್ಸು ಚೀಯಾಪಸ್‌ಗೆ ಹೋಗಬೇಕಾಯಿತು. ನಾನು ಅಜ್ಜಿಯೊಂದಿಗೆ ನಗರದಲ್ಲೇ ಉಳಿದುಕೊಂಡೆ. ಆದರೆ ಹೆಚ್ಚಿನ ಸಮಯ ಆಸ್ಪತ್ರೆಯಲ್ಲೇ ಇರುತ್ತಿದ್ದೆ.

ಎಂಟು ವರ್ಷದಷ್ಟಕ್ಕೆ ನನ್ನಲ್ಲಿ ಸ್ವಲ್ಪ ಸುಧಾರಣೆ ಕಂಡುಬಂತು. ಆದರೆ ಆಮೇಲೆ ಪುನಃ ಹಾಳಾಯಿತು, ಸ್ವಲ್ಪ ಚಲಿಸುತ್ತಿದ್ದದ್ದು ಕೂಡ ಕ್ರಮೇಣ ನಿಂತುಹೋಯಿತು. ಆಗ ವೈದ್ಯರು ನಾನು ಜೀವಮಾನವಿಡೀ ಕಂಕುಳುಗೋಲು ಮತ್ತು ಕಾಲಿಗೆ ಬಿಗಿಪಟ್ಟಿಯನ್ನು ಧರಿಸುವುದು ಅನಿವಾರ್ಯವೆಂದು ಹೇಳಿದರು.

ನನಗೆ 15 ವರ್ಷವಾಗುವಷ್ಟರಲ್ಲಿ 25 ಶಸ್ತ್ರಕ್ರಿಯೆಗಳನ್ನು ಮಾಡಲಾಗಿತ್ತು. ಅವುಗಳನ್ನು ನನ್ನ ಬೆನ್ನುಹುರಿ, ಕಾಲುಗಳು, ಕಾಲುಗಂಟುಗಳು, ಕಣಕಾಲುಗಳು ಮತ್ತು ಕಾಲ್ಬೆರಳುಗಳಿಗೆ ಮಾಡಲಾಯಿತು. ಪ್ರತಿಯೊಂದು ಶಸ್ತ್ರಕ್ರಿಯೆಯ ನಂತರ ಚೇತರಿಸಿಕೊಳ್ಳಲು ಸ್ವಲ್ಪ ಸಮಯದ ತನಕ ನನಗೆ ಬೇರೆ ಚಿಕಿತ್ಸೆ ನೀಡಲಾಗುತ್ತಿತ್ತು. ಉದಾಹರಣೆಗೆ, ಒಂದು ಶಸ್ತ್ರಕ್ರಿಯೆಯ ನಂತರ ನನ್ನ ಕಾಲುಗಳಿಗೆ ಪ್ಲಾಸ್ಟರ್‌ ಕಟ್ಟನ್ನು ಹಾಕಿದರು. ಅದನ್ನು ತೆಗೆದ ಮೇಲೆ ನಾನು ಮಾಡಬೇಕಾಗಿದ್ದ ವ್ಯಾಯಾಮಗಳು ಜೀವಹಿಂಡುತ್ತಿದ್ದವು.

ನಿಜ ಸಾಂತ್ವನ ಪಡೆದೆ

11 ವರ್ಷದವಳಾಗಿದ್ದಾಗ ಒಂದು ಶಸ್ತ್ರಕ್ರಿಯೆಯಿಂದ ಚೇತರಿಸಿಕೊಳ್ಳುತ್ತಿದ್ದ ನನ್ನನ್ನು ನೋಡಲು ಅಮ್ಮ ಬಂದಿದ್ದರು. ಯೇಸು ಕಾಯಿಲೆಬಿದ್ದವರನ್ನು ವಾಸಿಮಾಡಿದ್ದನೆಂದು ಮತ್ತು ಪಾರ್ಶ್ವವಾಯು ರೋಗಿಯನ್ನೂ ಗುಣಪಡಿಸಿದ್ದನೆಂದು ಅವರು ಕಾವಲಿನಬುರುಜು ಎಂಬ ಪತ್ರಿಕೆ ಓದಿ ತಿಳಿದುಕೊಂಡಿದ್ದರು. ಆ ಪತ್ರಿಕೆಯ ಒಂದು ಪ್ರತಿಯನ್ನು ನನಗೆ ಕೊಟ್ಟರು. ಅದು ಯೆಹೋವನ ಸಾಕ್ಷಿಗಳ ಪ್ರಕಾಶನವಾಗಿತ್ತು. ಅದನ್ನು ನಾನು ತಲೆದಿಂಬಿನ ಅಡಿಯಲ್ಲಿ ಬಚ್ಚಿಟ್ಟೆ. ಆದರೆ ಒಂದು ದಿನ ಅದು ನಾಪತ್ತೆಯಾಗಿತ್ತು. ನರ್ಸುಗಳು ಅದನ್ನು ತೆಗೆದುಕೊಂಡು ಹೋಗಿದ್ದರು. ಅದನ್ನು ಓದಿದ್ದಕ್ಕಾಗಿ ನನ್ನನ್ನು ಚೆನ್ನಾಗಿ ಬೈದರು.

ಸುಮಾರು ಒಂದು ವರ್ಷದ ನಂತರ ನನ್ನನ್ನು ನೋಡಲೆಂದು ಅಮ್ಮ ಪುನಃ ಚೀಯಾಪಸ್‌ನಿಂದ ಬಂದರು. ಆಗ ಅವರು ಯೆಹೋವನ ಸಾಕ್ಷಿಗಳ ಸಹಾಯದಿಂದ ಬೈಬಲ್‌ ಅಧ್ಯಯನ ಮಾಡುತ್ತಿದ್ದರು. ಕಳೆದುಕೂಂಡ ಪ್ರಮೋದವನದಿಂದ ಮತ್ತೆ ಪಡೆದುಕೂಂಡ ಪ್ರಮೋದವನಕ್ಕೆ * ಎಂಬ ಇಂಗ್ಲಿಷ್‌ ಪುಸ್ತಕವನ್ನು ಅಮ್ಮ ನನಗಾಗಿ ತಂದಿದ್ದರು. “ಯೇಸು ನಿನ್ನನ್ನು ವಾಸಿಮಾಡಲಿರುವ ಹೊಸ ಲೋಕದಲ್ಲಿ ನೀನೂ ಇರಬೇಕಾದರೆ ನೀನು ಬೈಬಲ್‌ ಅಧ್ಯಯನ ಮಾಡಲೇಬೇಕು” ಅಂದರು ಅಮ್ಮ. ಆದ್ದರಿಂದ ಅಜ್ಜಿ ವಿರೋಧಿಸಿದರೂ ನಾನು ಸಾಕ್ಷಿಗಳ ನೆರವಿನಿಂದ ಬೈಬಲ್‌ ಅಧ್ಯಯನ ಮಾಡಲು ಆರಂಭಿಸಿದೆ. ಆಗ ನನಗೆ 14 ವರ್ಷ. ಮುಂದಿನ ವರ್ಷ ನಾನು ಆಸ್ಪತ್ರೆಯನ್ನು ಬಿಟ್ಟುಬರಬೇಕಾಯಿತು. ಏಕೆಂದರೆ ಅದು ಚಿಕ್ಕ ಮಕ್ಕಳ ಆಸ್ಪತ್ರೆಯಾಗಿತ್ತು.

ಸವಾಲುಗಳನ್ನು ನಿಭಾಯಿಸಿದ ಪರಿ

ನಾನು ತುಂಬ ಖಿನ್ನಳಾದೆ. ಅಜ್ಜಿಯ ವಿರೋಧದ ಕಾರಣ ನಾನು ವಾಪಸ್ಸು ಬಂದು ಚೀಯಾಪಸ್‌ನಲ್ಲಿ ಹೆತ್ತವರೊಂದಿಗೆ ಇರಬೇಕಾಯಿತು. ಅಪ್ಪ ತುಂಬ ಕುಡಿಯುತ್ತಿದ್ದದ್ದರಿಂದ ಮನೆಯಲ್ಲಿದ್ದ ಸಮಸ್ಯೆ ಒಂದೆರಡಲ್ಲ. ‘ನಾನು ಯಾಕಾದರೂ ಬದುಕಬೇಕು’ ಎಂಬ ಯೋಚನೆ ಸ್ವಲ್ಪ ಸಮಯದ ವರೆಗೆ ತಲೆತುಂಬಿತ್ತು. ವಿಷಕುಡಿದು ಸತ್ತುಹೋಗಬೇಕೆಂದಿದ್ದೆ. ಆದರೆ ಬೈಬಲನ್ನು ಅಧ್ಯಯನ ಮಾಡುತ್ತಾ ಹೋದಂತೆ ನನ್ನ ಮನಸ್ಸು ಬದಲಾಯಿತು. ಭೂಮಿ ಉದ್ಯಾನವನವಾಗಲಿದೆ ಎಂಬ ಬೈಬಲಿನ ವಾಗ್ದಾನವು ನನಗೆ ತುಂಬ ಸಂತಸ ತಂದಿತು.

ಬೈಬಲ್‌ನಲ್ಲಿರುವ ಭವ್ಯ ನಿರೀಕ್ಷೆ ಬಗ್ಗೆ ಬೇರೆ ಜನರಿಗೆ ತಿಳಿಸಲು ಆರಂಭಿಸಿದೆ. (ಯೆಶಾಯ 2:4; 9:6, 7; 11:6-9; ಪ್ರಕಟನೆ 21:3, 4) 18 ವರ್ಷದವಳಿದ್ದಾಗ, 1968 ಮೇ 8ರಂದು ದೀಕ್ಷಾಸ್ನಾನ ಪಡೆದು ಒಬ್ಬ ಯೆಹೋವನ ಸಾಕ್ಷಿಯಾದೆ. ನನಗೆ ಜೀವಿಸಲು ಸ್ಫೂರ್ತಿ ನೀಡಿದ ನಿರೀಕ್ಷೆಯ ಬಗ್ಗೆ ಜನರಿಗೆ ತಿಳಿಸುವ ಕೆಲಸದಲ್ಲಿ 1974ರಿಂದ ಪ್ರತಿ ತಿಂಗಳು 70ಕ್ಕಿಂತಲೂ ಹೆಚ್ಚು ತಾಸು ಕಳೆಯುತ್ತಿದ್ದೇನೆ.

ಸಂತೃಪ್ತಿಯ ಸಾರ್ಥಕ ಬದುಕು

ಸ್ವಲ್ಪ ಸಮಯದ ನಂತರ ಮೆಕ್ಸಿಕೊ ಮತ್ತು ಯುನೈಟೆಡ್‌ ಸ್ಟೇಟ್ಸ್‌ನ ಗಡಿಯ ಹತ್ತಿರದ ತಿಹವಾನ ನಗರಕ್ಕೆ ನಾನು ಮತ್ತು ಅಮ್ಮ ಸ್ಥಳಾಂತರಿಸಿದೆವು. ನಮಗೆ ಸ್ವಲ್ಪ ಅನುಕೂಲವಾದ ಸ್ಥಳದಲ್ಲಿ ಮನೆಮಾಡಿದೆವು. ಕಂಕುಳುಗೋಲು ಮತ್ತು ಕಾಲಿನ ಬಿಗಿಪಟ್ಟಿ ಇಟ್ಟುಕೊಂಡೇ ಮನೆಯೊಳಗೆ ಓಡಾಡುತ್ತೇನೆ. ಗಾಲಿಕುರ್ಚಿಯಲ್ಲಿ ಕೂತುಕೊಂಡೇ ಅಡಿಗೆ ಮಾಡುತ್ತೇನೆ, ಬಟ್ಟೆ ಒಗೆಯುತ್ತೇನೆ, ಇಸ್ತ್ರಿ ಮಾಡುತ್ತೇನೆ. ಶುಶ್ರೂಷೆಗೆ ಹೋಗುವಾಗಲಂತೂ ನನ್ನ ಅಗತ್ಯಗಳಿಗೆ ತಕ್ಕಂತೆ ವಿನ್ಯಾಸಿಸಲಾದ ವಿದ್ಯುತ್‌ ಚಾಲಿತ ಗಾಡಿಯನ್ನು ಬಳಸುತ್ತೇನೆ.

ರಸ್ತೆಬದಿಗಳಲ್ಲಿ ಮತ್ತು ಮನೆಗಳಲ್ಲಿ ಸಿಗುವ ಜನರಿಗೆ ಬೈಬಲ್‌ ಬೋಧನೆಗಳನ್ನು ತಿಳಿಸುತ್ತೇನಲ್ಲದೆ ಹತ್ತಿರವಿರುವ ಆಸ್ಪತ್ರೆಗೂ ನಿಯಮಿತವಾಗಿ ಹೋಗಿ ಅಲ್ಲಿ ಕೂತಿರುವ ಜನರೊಂದಿಗೆ ಬೈಬಲ್‌ ಕುರಿತು ಮಾತಾಡುತ್ತೇನೆ. ಅದರ ನಂತರ ನನ್ನ ವಿದ್ಯುತ್‌ ಚಾಲಿತ ಗಾಡಿಯಲ್ಲೇ ಮಾರ್ಕೆಟಿಗೆ ಹೋಗಿ ನಮಗೆ ಬೇಕಾದದ್ದನ್ನೆಲ್ಲ ಕೊಂಡು ಮನೆಗೆ ಹಿಂದಿರುಗುತ್ತೇನೆ. ಆಮೇಲೆ ಅಡಿಗೆ ಮತ್ತು ಮನೆಕೆಲಸದಲ್ಲಿ ಅಮ್ಮನಿಗೆ ನೆರವಾಗುತ್ತೇನೆ.

ಜೀವನ ನಿರ್ವಹಣೆಗಾಗಿ ಹಳೇ ಬಟ್ಟೆಗಳನ್ನು ಮಾರುತ್ತೇನೆ. ಅಮ್ಮನಿಗೆ ಈಗ 78 ವರ್ಷ, ಅವರಿಗೆ ಮೂರು ಬಾರಿ ಹೃದಯಾಘಾತವಾದ ಕಾರಣ ಹೆಚ್ಚೇನೂ ಮಾಡಲು ಸಾಧ್ಯವಿಲ್ಲ. ನಾನೇ ಅವರ ಔಷಧ, ಊಟದ ಬಗ್ಗೆ ನಿಗಾವಹಿಸುತ್ತೇನೆ. ನಮ್ಮಿಬ್ಬರ ಆರೋಗ್ಯ ಅಷ್ಟೇನು ಒಳ್ಳೇದಿಲ್ಲದಿದ್ದರೂ ಸಭಾ ಕೂಟಗಳಿಗೆ ಹೇಗಾದರೂ ಹೋಗಲು ಪ್ರಯತ್ನಿಸುತ್ತೇವೆ. ನಾನು ಬೈಬಲ್‌ ಅಧ್ಯಯನ ಮಾಡಿದವರಲ್ಲಿ 30ಕ್ಕಿಂತಲೂ ಹೆಚ್ಚು ಜನರು ನನ್ನಂತೆ ಕ್ರೈಸ್ತ ಶುಶ್ರೂಷೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ದೇವರ ಹೊಸ ಲೋಕದಲ್ಲಿ “ಕುಂಟನು ಜಿಂಕೆಯಂತೆ ಹಾರುವನು” ಎಂದು ಬೈಬಲ್‌ ಮಾತು ಕೊಡುತ್ತದೆ. ಇದರಲ್ಲಿ ನನಗೆ ಎಳ್ಳಷ್ಟೂ ಸಂಶಯವಿಲ್ಲ. ಆದರೆ ಆ ಸಮಯ ಬರುವ ತನಕ ದೇವರ ಈ ಮಾತುಗಳು ನನ್ನನ್ನು ಸಂತೈಸುತ್ತವೆ: “ನೀನಂತು ಹೆದರಬೇಡ, ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು, ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿಸುತ್ತೇನೆ; ಹೌದು, ನಿನಗೆ ಸಹಾಯಕೊಡುತ್ತೇನೆ; ನನ್ನ ಧರ್ಮದ ಬಲಗೈಯನ್ನು ನಿನಗೆ ಆಧಾರಮಾಡುತ್ತೇನೆ.”—ಯೆಶಾಯ 35:5; 41:10. * (g10-E 12)

[ಪಾದಟಿಪ್ಪಣಿಗಳು]

^ ಯೆಹೋವನ ಸಾಕ್ಷಿಗಳಿಂದ 1958ರಲ್ಲಿ ಪ್ರಕಾಶಿತ. ಈಗ ಮುದ್ರಿಸಲ್ಪಡುತ್ತಿಲ್ಲ.

^ ವಿಕ್ಟೋರಿಯ ಕೊಜೊಈ 2009ರ ನವೆಂಬರ್‌ 30ರಂದು ತಮ್ಮ 60ನೇ ವಯಸ್ಸಿನಲ್ಲಿ ತೀರಿಕೊಂಡರು. ಅವರ ತಾಯಿ 2009ರ ಜುಲೈ 5ರಂದು ತೀರಿಕೊಂಡರು.

[ಪುಟ 14ರಲ್ಲಿರುವ ಚಿತ್ರ]

ಏಳರ ವಯಸ್ಸಿಗೇ ಕಾಲಿಗೆ ಬಿಗಿಪಟ್ಟಿ

[ಪುಟ 15ರಲ್ಲಿರುವ ಚಿತ್ರ]

ನನ್ನ ಅಗತ್ಯಗಳಿಗೆ ತಕ್ಕಂತೆ ವಿನ್ಯಾಸಿಸಲಾದ ವಿದ್ಯುತ್‌ ಚಾಲಿತ ಗಾಡಿಯನ್ನು ಶುಶ್ರೂಷೆಗಾಗಿ ಬಳಸುತ್ತೇನೆ