ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಪ್ಪಅಮ್ಮ ನನಗೆ ಮಜಾ ಮಾಡೋಕೆ ಯಾಕೆ ಬಿಡಲ್ಲ?

ಅಪ್ಪಅಮ್ಮ ನನಗೆ ಮಜಾ ಮಾಡೋಕೆ ಯಾಕೆ ಬಿಡಲ್ಲ?

ಯುವಜನರ ಪ್ರಶ್ನೆ

ಅಪ್ಪಅಮ್ಮ ನನಗೆ ಮಜಾ ಮಾಡೋಕೆ ಯಾಕೆ ಬಿಡಲ್ಲ?

ಆಸ್ಟ್ರೇಲಿಯದಲ್ಲಿ ವಾಸಿಸುವ ಹದಿಹರೆಯದ ಆ್ಯಲಿಸನ್‌ಗೆ * ಶಾಲೆಯಲ್ಲಿ ಪ್ರತಿ ಸೋಮವಾರ ಬೆಳಗ್ಗೆ ಒಂದೇ ರೀತಿಯ ಸಮಸ್ಯೆ.

“ಎಲ್ಲರ ಬಾಯಲ್ಲೂ ವಾರಾಂತ್ಯದಲ್ಲಿ ಅವರೇನೇನು ಮಾಡಿದರು ಎನ್ನುವುದೇ ಮಾತು. ಅವರು ಹೋದ ಬೇರೆ ಬೇರೆ ಪಾರ್ಟಿಗಳು, ಎಷ್ಟು ಹುಡುಗರನ್ನು ಕಿಸ್‌ ಮಾಡಿದರು, ಅಷ್ಟೇ ಅಲ್ಲ ಪೊಲೀಸರ ಕಣ್ತಪ್ಪಿಸಿ ಓಡಿ ಹೋದದ್ದು . . . ಅವರು ಹೇಳುವ ಕಥೆಗಳನ್ನು ಕೇಳಿದರೆ ಮೈಜುಮ್‌ ಆಗುತ್ತೆ. ಅದನ್ನೆಲ್ಲ ಕೇಳುವಾಗ ಭಯವಾದರೂ ಏನೋ ಮಜಾ ಅನ್ಸುತ್ತೆ! ಪಾರ್ಟಿ ಎಲ್ಲ ಮುಗಿಸಿಕೊಂಡು ಅವರು ಮನೆಗೆ ಬರೋದು ಬೆಳಗ್ಗೆ 5 ಗಂಟೆಗೆ. ಅವರ ಅಪ್ಪಅಮ್ಮಗೆ ಕ್ಯಾರೇ ಇಲ್ಲ. ನನ್ನ ಕ್ಲಾಸ್‌ಮೇಟ್ಸ್‌ ರಾತ್ರಿ ಮಜಾ ಆರಂಭಿಸುವಷ್ಟರಲ್ಲಿ ನಾನು ಮಲಗಿರುತ್ತೇನೆ!” ಎನ್ನುತ್ತಾಳೆ ಆ್ಯಲಿಸನ್‌.

“ಅದೆಲ್ಲ ಬಿಡಿ, ನನ್ನ ಕ್ಲಾಸ್‌ಮೇಟ್ಸ್‌ ಅವರ ವಾರಾಂತ್ಯದ ಕಥೆಗಳನ್ನೆಲ್ಲ ಹೇಳಿ ಮುಗಿಸಿದ ಮೇಲೆ ‘ನೀನೇನು ಮಾಡ್ದೆ?’ ಅಂತ ಕೇಳ್ತಾರೆ. ಏನು ಮಾಡ್ದೆ? ಕ್ರೈಸ್ತ ಕೂಟಗಳಿಗೆ ಹೋದೆ, ಶುಶ್ರೂಷೆಯಲ್ಲಿ ಭಾಗಿಯಾದೆ. ನನಗೆ ಅವರ ಹಾಗೆ ಮಜಾ ಮಾಡುವ ಅವಕಾಶ ಎಲ್ಲಿ? ಆದ್ದರಿಂದ ಏನೂ ಮಾಡಲಿಲ್ಲ ಅಂತಾನೇ ಹೇಳಿ ಬಿಡ್ತೇನೆ. ಆಗ ಅವರು ನೀನು ನಮ್ಮ ಜೊತೆ ಬರಬೇಕಿತ್ತು, ಮಜಾ ಆಗ್ತಿತ್ತು ಅನ್ನುತ್ತಾರೆ.

“ಸೋಮವಾರ ಕಳೆದರೆ ನೆಮ್ಮದಿ ಸಿಗುತ್ತದಲ್ವಾ ಅಂತ ನೀವು ನೆನಸಬಹುದು, ಆದರೆ ಎಲ್ಲಿ . . . ಮಂಗಳವಾರದಿಂದಲೇ ಮುಂದಿನ ವಾರಾಂತ್ಯದ ಮಾತು ಶುರುವಾಗುತ್ತೆ! ಆಗ ನಾನು ಅವರ ಜೊತೆ ಸುಮ್ಮನೆ ಕೂತುಕೊಂಡು ಅವರು ಹೇಳೋದನ್ನೆಲ್ಲ ಕೇಳ್ತಾ ಇರ್ತೇನೆ. ನನ್ನನ್ನು ಯಾರೂ ಕೇಳೋರಿಲ್ಲ ಎಂದನಿಸುತ್ತೆ!”

ಸೋಮವಾರ ಬೆಳಗ್ಗೆ ಶಾಲೆಯಲ್ಲಿ ನಿಮಗೂ ಇದೇ ಸಮಸ್ಯೆನಾ? ಹೊರಗಿನ ಲೋಕ ಸಕ್ಕತ್‌ ಮಜಾ ಮಾಡುತ್ತಿದೆ, ಆದರೆ ನಿಮ್ಮನ್ನು ಮಾತ್ರ ಅಪ್ಪಅಮ್ಮ ಕಟ್ಟಿಹಾಕಿದ್ದಾರೆಂದೂ ಅಥವಾ ಒಂದು ವಿನೋದ-ಕ್ರೀಡೆಗಳ ಪಾರ್ಕಿನಲ್ಲಿದ್ದೀರಿ ಆದರೆ ಯಾವುದೇ ಮೋಜು ಮಾಡಲು ಅನುಮತಿ ಇಲ್ಲ ಎಂದೂ ನಿಮಗನಿಸಬಹುದು. ಹಾಗಂತ ನಿಮ್ಮ ವಯಸ್ಸಿನವರು ಮಾಡುವಂಥ ಎಲ್ಲವನ್ನು ಮಾಡಬೇಕೆಂಬ ಆಸೆ ನಿಮಗಿರಲಿಕ್ಕಿಲ್ಲ. ಆದರೆ ಅಪರೂಪಕ್ಕೊಮ್ಮೆ ಮಜಾ ಮಾಡೋದರಲ್ಲಿ ತಪ್ಪೇನಿದೆ ಎನ್ನುವುದು ನಿಮ್ಮ ಪ್ರಶ್ನೆ ಅಲ್ಲವೆ? ಉದಾಹರಣೆಗೆ, ಮುಂದಿನ ವಾರಾಂತ್ಯದಲ್ಲಿ ಯಾವ ಮನರಂಜನೆಯಲ್ಲಿ ತೊಡಗಿ ಮಜಾ ಮಾಡಲು ಇಷ್ಟಪಡುತ್ತೀರಿ?

ಡ್ಯಾನ್ಸ್‌

ಸಂಗೀತ ರಸಮಂಜರಿ

ಸಿನೆಮಾ

ಪಾರ್ಟಿ

ಇತರೆ .....

ನಿಮಗೆ ಮನರಂಜನೆ ಅಗತ್ಯ. (ಪ್ರಸಂಗಿ 3:1, 4) ಯೌವನ ಪ್ರಾಯದಲ್ಲಿ ನೀವು ಆನಂದಿಸಬೇಕೆಂದು ನಿಮ್ಮ ಸೃಷ್ಟಿಕರ್ತನೇ ಬಯಸುತ್ತಾನೆ. (ಪ್ರಸಂಗಿ 11:9) ಅಷ್ಟೇ ಏಕೆ ನಿಮ್ಮ ಅಪ್ಪಅಮ್ಮನ ಆಸೆ ಕೂಡ ಅದೇ, ಇದನ್ನು ನೀವು ಕೆಲವೊಮ್ಮೆ ನಂಬದೇ ಇರಬಹುದು. ಆದರೆ ನಿಮ್ಮ ಹೆತ್ತವರಿಗೆ ಈ ಎರಡು ನ್ಯಾಯಬದ್ಧ ಚಿಂತೆಗಳಿದ್ದಾವು: (1) ನೀವು ಹೋದ ಸ್ಥಳದಲ್ಲಿ ಏನು ಮಾಡುವಿರೋ? (2) ನಿಮ್ಮ ಜೊತೆ ಇನ್ಯಾರೆಲ್ಲ ಇರುವರೋ?

ಹೊರಗೆಲ್ಲೋ ಹೋಗೋಣವೆಂದು ಫ್ರೆಂಡ್ಸ್‌ ನಿಮ್ಮನ್ನು ಕರೆದಿದ್ದಾರೆ ಆದರೆ ಅಪ್ಪಅಮ್ಮ ಹೇಗೆ ಪ್ರತಿಕ್ರಿಯಿಸುವರೆಂದು ನಿಮಗೆ ಗೊತ್ತಿಲ್ಲ. ಏನು ಮಾಡುವಿರಿ? ಯಾವುದೇ ತೀರ್ಮಾನ ಮಾಡುವಾಗ ಒಳ್ಳೇದನ್ನು ಅಥವಾ ಕೆಟ್ಟದ್ದನ್ನು ಆಯ್ಕೆ ಮಾಡುವಂತೆಯೂ ಪರಿಣಾಮಗಳ ಬಗ್ಗೆ ತೂಗಿನೋಡುವಂತೆಯೂ ಬೈಬಲ್‌ ಉತ್ತೇಜಿಸುತ್ತದೆ. (ಧರ್ಮೋಪದೇಶಕಾಂಡ 32:29; ಜ್ಞಾನೋಕ್ತಿ 7:6-23) ಫ್ರೆಂಡ್ಸ್‌ ಜೊತೆ ಹೋಗುವುದರ ಬಗ್ಗೆ ನಿಮಗೆ ಯಾವ ಆಯ್ಕೆಗಳಿವೆ?

ಆಯ್ಕೆ 1: ಅಪ್ಪಅಮ್ಮನನ್ನು ಕೇಳದೆ ಹೋಗಿಬಿಡುವುದು.

ನೀವು ಈ ಆಯ್ಕೆ ಬಗ್ಗೆ ಯೋಚಿಸಲು ಕಾರಣವೇನಿರಬಹುದು? ನೀವೆಷ್ಟು ಸ್ವತಂತ್ರರೆಂದು ಫ್ರೆಂಡ್ಸ್‌ಗೆ ತೋರಿಸಿಕೊಡುವ ಆಸೆ. ಅಪ್ಪಅಮ್ಮನಿಗಿಂತ ನಿಮಗೇ ಹೆಚ್ಚು ಗೊತ್ತೆನ್ನುವುದು ನಿಮ್ಮ ಭಾವನೆ. ಅಥವಾ ಅಪ್ಪಅಮ್ಮನ ಅಭಿಪ್ರಾಯಗಳಿಗೆ ನೀವು ಎಳ್ಳಷ್ಟೂ ಬೆಲೆ ಕೊಡುವುದಿಲ್ಲ.—ಜ್ಞಾನೋಕ್ತಿ 15:5.

ಪರಿಣಾಮಗಳು: ನಿಮ್ಮ ಬಗ್ಗೆ ಫ್ರೆಂಡ್ಸ್‌ ಒಂದು ವಿಷಯ ತಿಳಿದುಕೊಳ್ಳುತ್ತಾರೆ. ಅದೇನೆಂದರೆ ನೀವು ಯಾರನ್ನು ಬೇಕಾದರೂ ವಂಚಿಸಬಹುದು, ನೀವು ಹೆತ್ತವರಿಗೆ ಮೋಸ ಮಾಡಿದ್ದಲ್ಲಿ ನಿಮ್ಮ ಸ್ನೇಹಿತರಿಗೆ ಮೋಸಮಾಡಲೂ ಹಿಂಜರಿಯಲಿಕ್ಕಿಲ್ಲ ಅಂತ. ಹೆತ್ತವರಿಗೆ ತಿಳಿದುಬಂದರೆ ನೊಂದುಕೊಳ್ಳುತ್ತಾರೆ ಮತ್ತು ನೀವು ಅವರಿಗೆ ದ್ರೋಹಬಗೆದಿರೆಂದು ನೆನಸುತ್ತಾರೆ. ಅಲ್ಲದೆ ಅವರು ನಿಮ್ಮ ಮೇಲೆ ಇನ್ನೂ ಹೆಚ್ಚು ನಿರ್ಬಂಧಗಳನ್ನು ಹೇರಬಹುದು! ಅದೇನೇ ಆದರೂ ಹೆತ್ತವರ ಮಾತುಕೇಳದೆ ಸ್ನೇಹಿತರೊಂದಿಗೆ ಹೋಗುವುದು ಮೂರ್ಖತನದ ಆಯ್ಕೆ ಖಂಡಿತ.—ಜ್ಞಾನೋಕ್ತಿ 12:15.

ಆಯ್ಕೆ 2: ಕೇಳುವುದೂ ಬೇಡ ಹೋಗುವುದೂ ಬೇಡ.

ನೀವು ಈ ಆಯ್ಕೆ ಬಗ್ಗೆ ಯೋಚಿಸಲು ಕಾರಣವೇನಿರಬಹುದು? ನಿಮ್ಮ ಫ್ರೆಂಡ್ಸ್‌ ಜೊತೆ ಹೋಗುವುದರ ಬಗ್ಗೆ ಯೋಚಿಸಿದ ಮೇಲೆ, ಅವರು ಆಮಂತ್ರಿಸಿದ ಆ ಮನರಂಜನೆ ನಿಮ್ಮ ಆದರ್ಶಗಳಿಗೆ ತಕ್ಕ ಹಾಗೆ ಇಲ್ಲ ಅಥವಾ ಅವರು ಆಮಂತ್ರಿಸಿದ ಕೆಲವರ ಸಹವಾಸ ಒಳ್ಳೇದಲ್ಲ ಎಂಬ ತೀರ್ಮಾನಕ್ಕೆ ಬರುತ್ತೀರಿ. (1 ಕೊರಿಂಥ 15:33; ಫಿಲಿಪ್ಪಿ 4:8) ಇನ್ನೊಂದೆಡೆ, ನಿಮಗೆ ಹೋಗಲು ಮನಸ್ಸಿರಬಹುದು ಆದರೆ ಹೆತ್ತವರನ್ನು ಕೇಳಲು ಧೈರ್ಯವಿಲ್ಲ.

ಪರಿಣಾಮಗಳು: ಫ್ರೆಂಡ್ಸ್‌ ಜೊತೆ ಹೋಗುವುದು ಕೆಟ್ಟದೆಂದು ಅರಿತು ನೀವು ಹೋಗದಿದ್ದಲ್ಲಿ ಫ್ರೆಂಡ್ಸ್‌ಗೆ ಹೆಚ್ಚು ಆತ್ಮವಿಶ್ವಾಸದಿಂದ ಉತ್ತರಿಸಬಲ್ಲಿರಿ. ಇನ್ನೊಂದೆಡೆ, ಅಪ್ಪಅಮ್ಮನ ಹತ್ತಿರ ಕೇಳಲು ಧೈರ್ಯವಿಲ್ಲದ ಕಾರಣ ಹೋಗದಿದ್ದಲ್ಲಿ ‘ಎಲ್ಲರೂ ಮಜಾ ಮಾಡ್ತಾರೆ ನನಗೆ ಮಾತ್ರ ಮಜಾ ಮಾಡಲಿಕ್ಕಿಲ್ಲ’ ಎಂದು ಕೊರಗುತ್ತಾ ಕೂತಿರುವಿರಿ.

ಆಯ್ಕೆ 3: ಹೆತ್ತವರ ಬಳಿ ಕೇಳಿ ನೋಡುವುದು.

ನೀವು ಈ ಆಯ್ಕೆ ಬಗ್ಗೆ ಯೋಚಿಸಲು ಕಾರಣವೇನಿರಬಹುದು? ನಿಮ್ಮ ಮೇಲೆ ಹೆತ್ತವರಿಗೆ ಅಧಿಕಾರವಿದೆ ಎಂದು ಒಪ್ಪಿಕೊಳ್ಳುತ್ತೀರಿ ಮತ್ತು ಅವರ ಅಭಿಪ್ರಾಯಗಳಿಗೆ ಬೆಲೆಕೊಡುತ್ತೀರಿ. (ಕೊಲೊಸ್ಸೆ 3:20) ನಿಮ್ಮ ಹೆತ್ತವರನ್ನು ನೀವು ಪ್ರೀತಿಸುತ್ತೀರಿ. ಅವರಿಗೆ ಹೇಳದೆ ನಿಮ್ಮ ಮಿತ್ರರೊಂದಿಗೆ ಹೋಗಿಬಿಡುವ ಮೂಲಕ ಅವರನ್ನು ನೋಯಿಸಲು ನಿಮಗೆ ಮನಸ್ಸಿಲ್ಲ. (ಜ್ಞಾನೋಕ್ತಿ 10:1) ಅಲ್ಲದೆ ನಿಮ್ಮ ಮನದಾಸೆಯನ್ನು ತಿಳಿಸುವ ಅವಕಾಶವೂ ನಿಮಗಿದೆ.

ಪರಿಣಾಮಗಳು: ನೀವು ಅಪ್ಪಅಮ್ಮನನ್ನು ತುಂಬ ಪ್ರೀತಿಸುತ್ತೀರೆಂದೂ ಗೌರವಿಸುತ್ತೀರೆಂದೂ ಅವರಿಗೆ ಗೊತ್ತಾಗುವುದು. ನೀವು ಕೇಳಿದ ವಿಷಯ ಅವರಿಗೆ ಸರಿಕಂಡರೆ ನಿಮ್ಮನ್ನು ಹೋಗಲೂ ಬಿಡಬಹುದು.

ಬೇಡವೆಂದು ಹೆತ್ತವರು ಹೇಳಲು ಕಾರಣ ಏನಿರಬಹುದು?

‘ಬೇಡ’ ಎಂದು ಅಪ್ಪಅಮ್ಮ ಹೇಳಿದರೆ ಆಗ? ತುಂಬ ಹತಾಶೆಯಾಗಬಹುದು ನಿಜ. ಆದರೆ ವಿಷಯಗಳನ್ನು ನೀವು ಅವರ ದೃಷ್ಟಿಯಿಂದ ನೋಡಿದರೆ ನಿಮಗೆ ನಿರ್ಬಂಧಗಳನ್ನು ನಿಭಾಯಿಸಲು ಸಹಾಯವಾಗಬಲ್ಲದು. ಉದಾಹರಣೆಗೆ ಕೆಳಗೆ ಕೊಟ್ಟಿರುವ ಒಂದು ಅಥವಾ ಹೆಚ್ಚು ಕಾರಣಗಳಿಂದಾಗಿ ಅವರು ಬೇಡವೆನ್ನಬಹುದು.

ಹೆಚ್ಚು ಜ್ಞಾನ, ಹೆಚ್ಚು ಅನುಭವ. ನಿಮಗೆ ಆಯ್ಕೆ ಇರುವಲ್ಲಿ, ನಿಪುಣ ಈಜುಗಾರರ ಪಹರೆಯಿರುವ ಸಮುದ್ರದಲ್ಲೇ ನೀವು ಈಜಾಡಲು ಬಯಸುವಿರಿ ಅಲ್ಲವೇ? ಏಕೆಂದರೆ ನೀರಲ್ಲಿ ಮಜಾ ಮಾಡುತ್ತಿರುವಾಗ ನಿಮಗೆ ಅಪಾಯದ ಅರಿವಿರುವುದು ಕಡಿಮೆ. ಆದರೆ ಪಹರೆಯಿರುವ ನಿಪುಣ ಈಜುಗಾರರು ಎತ್ತರದ ಸ್ಥಳದಲ್ಲಿರುವುದರಿಂದ ಅಲ್ಲಿಂದ ಅಪಾಯಗಳನ್ನು ಸುಲಭವಾಗಿ ಕಾಣಶಕ್ತರು.

ಹಾಗೆಯೇ ಹೆಚ್ಚು ಜ್ಞಾನ, ಅನುಭವವಿರುವ ನಿಮ್ಮ ಹೆತ್ತವರಿಗೆ ನಿಮಗೆ ಕಾಣದ ಅಪಾಯಗಳ ಬಗ್ಗೆ ತಿಳಿದಿದ್ದೀತು. ಅವರು ರಕ್ಷಣೆಗೆ ನಿಂತಿರುವ ನಿಪುಣ ಈಜುಗಾರರಂತೆ ಇದ್ದಾರೆ. ನಿಮ್ಮ ಮಜಾಮೋಜನ್ನು ಕೆಡಿಸಲು ಬಯಸುವುದಿಲ್ಲ, ಜೀವನದ ಆನಂದವನ್ನು ಕಸಿದುಕೊಳ್ಳುವ ಅಪಾಯಗಳಿಂದ ನಿಮ್ಮನ್ನು ದೂರವಿಡಲು ಬಯಸುತ್ತಾರೆ.

ನಿಮ್ಮನ್ನು ಪ್ರೀತಿಸುತ್ತಾರೆ. ನಿಮ್ಮನ್ನು ಸಂರಕ್ಷಿಸಬೇಕೆಂದು ನಿಮ್ಮ ಹೆತ್ತವರ ಉತ್ಕಟ ಬಯಕೆ. ಹೆತ್ತವರು ಒಪ್ಪಿಗೆ ಕೊಡಶಕ್ತರಾಗಿರುವಾಗ ಆಯ್ತೆಂದೂ ಒಪ್ಪಿಗೆ ಕೊಡಲಾರದಾಗ ಬೇಡವೆಂದೂ ಹೇಳುವುದು ನಿಮ್ಮ ಮೇಲಿರುವ ಪ್ರೀತಿಯಿಂದಲೇ. ಯಾವುದಕ್ಕಾದರೂ ನೀವು ಹೆತ್ತವರ ಅನುಮತಿ ಕೇಳಿದಾಗ ಅವರು ತಮ್ಮನ್ನೇ ‘ನಾವು ಸಮ್ಮತಿ ಕೊಡಬಹುದೇ, ಮುಂದಾಗುವ ಪರಿಣಾಮಗಳನ್ನು ನಿಭಾಯಿಸಸಾಧ್ಯವೇ’ ಎಂದು ಮೊದಲು ಕೇಳಿಕೊಳ್ಳುತ್ತಾರೆ. ನಿಮಗೆ ಯಾವುದೇ ಹಾನಿಯಾಗದು ಎಂದು ಖಚಿತಪಡಿಸಿಕೊಂಡ ನಂತರವೇ ಅವರು ತಮಗೂ ನಿಮಗೂ ಸಮ್ಮತಿ ನೀಡುತ್ತಾರೆ.

ಮಾಹಿತಿಯ ಕೊರತೆ. ಅಕ್ಕರೆಯ ಹೆತ್ತವರು ಯಾವಾಗಲೂ ವಿಶೇಷ ಎಚ್ಚರಿಕೆ ವಹಿಸುತ್ತಾರೆ. ನೀವೇನನ್ನು ಕೇಳುತ್ತಾ ಇದ್ದೀರಿ ಎಂಬುದು ನಿಮ್ಮ ಹೆತ್ತವರಿಗೆ ಸ್ಪಷ್ಟವಾಗದಿದ್ದಲ್ಲಿ ಅಥವಾ ನೀವೇನೋ ಮುಚ್ಚಿಡುತ್ತಿದ್ದೀರೆಂದು ಅವರಿಗನಿಸುವಲ್ಲಿ ಅವರು ಅಸಮ್ಮತಿಸುವುದೇ ಹೆಚ್ಚು.

ಸಮ್ಮತಿ ಸಿಗುವ ಸಾಧ್ಯತೆಗಳನ್ನು ಹೆಚ್ಚಿಸುವ ವಿಧ

ಮುಖ್ಯವಾಗಿ ಈ ನಾಲ್ಕು ವಿಷಯಗಳು ಸಹಾಯಕ.

ಪ್ರಾಮಾಣಿಕತೆ: ಮೊದಲು ನಿಮ್ಮನ್ನೇ ಪ್ರಾಮಾಣಿಕತೆಯಿಂದ ಕೇಳಿಕೊಳ್ಳಿ: ‘ನಾನು ಫ್ರೆಂಡ್ಸ್‌ ಜೊತೆ ಹೋಗಲು ನಿಜವಾಗಿ ಇಷ್ಟಪಡುವುದೇಕೆ? ಮುಖ್ಯವಾಗಿ ನನಗೆ ಆ ಚಟುವಟಿಕೆ ಇಷ್ಟವೆಂದೋ ಅಥವಾ ನನ್ನ ಫ್ರೆಂಡ್ಸನ್ನು ಸಂತೋಷಪಡಿಸಬೇಕೆಂದೋ? ನನ್ನನ್ನು ಆಕರ್ಷಿಸಿದ ವ್ಯಕ್ತಿ ಅಲ್ಲಿರುವುದರಿಂದಲೋ?’ ಆಮೇಲೆ ನಿಮ್ಮ ಹೆತ್ತವರೊಂದಿಗೆ ಪ್ರಾಮಾಣಿಕವಾಗಿ ಮಾತಾಡಿ. ಅವರು ನಿಮ್ಮ ವಯಸ್ಸನ್ನು ದಾಟಿ ಬಂದವರು, ನಿಮ್ಮನ್ನು ಚೆನ್ನಾಗಿ ತಿಳಿದುಕೊಂಡವರು. ಹೇಗಿದ್ದರೂ ನಿಮ್ಮ ನಿಜವಾದ ಇರಾದೆಗಳನ್ನು ವಿವೇಚಿಸಿ ತಿಳಿದುಕೊಳ್ಳುವ ಸಾಮರ್ಥ್ಯ ಅವರಿಗಿದೆ. ಆದ್ದರಿಂದ ನೀವು ಮನಬಿಚ್ಚಿ ಮಾತಾಡಿದರೆ ಮೆಚ್ಚುವರು. ಅಲ್ಲದೆ ಅವರ ವಿವೇಕದಿಂದ ಪ್ರಯೋಜನ ಗಳಿಸುವಿರಿ. (ಜ್ಞಾನೋಕ್ತಿ 7:1, 2) ಒಂದುವೇಳೆ ನೀವು ಪ್ರಾಮಾಣಿಕತೆ ತೋರಿಸದಿದ್ದರೆ ಅವರಿಗೆ ನಿಮ್ಮ ಮೇಲಿನ ಭರವಸೆಯೂ ನಿಮಗೆ ಸಮ್ಮತಿ ಸಿಗುವ ಸಾಧ್ಯತೆಯೂ ಕಡಿಮೆಯಾಗುವುದು.

ಸಮಯ: ಹೆತ್ತವರು ಕೆಲಸ ಮುಗಿಸಿ ಮನೆಯೊಳಗೆ ಕಾಲಿರಿಸಿದ ತಕ್ಷಣ ಅಥವಾ ಬೇರ್ಯಾವುದೋ ಮುಖ್ಯ ಸಂಗತಿಗಳ ಬಗ್ಗೆ ಬ್ಯುಸಿ ಇರುವಾಗ ಅವರ ಬಳಿ ಹೋಗಿ ತಲೆತಿನ್ನಬೇಡಿ. ಅವರು ಆರಾಮವಾಗಿರುವಾಗ ನಿಮಗೇನು ಬೇಕೋ ಹೇಳಿ. ಹಾಗೆಂದು ಕೊನೆ ಕ್ಷಣದ ವರೆಗೂ ಸುಮ್ಮನಿದ್ದು, ನಂತರ ಹೆತ್ತವರ ಬಳಿ ಹೇಳಿ ಸಮ್ಮತಿಗಾಗಿ ಒತ್ತಡ ಹೇರಬೇಡಿ. ಅವಸರದಿಂದ ತೀರ್ಮಾನ ಮಾಡುವುದನ್ನು ನಿಮ್ಮ ಹೆತ್ತವರು ಇಷ್ಟಪಡುವುದಿಲ್ಲ. ಸಾಕಷ್ಟು ಸಮಯ ಮುಂಚೆಯೇ ಕೇಳಿ. ಹೆತ್ತವರದನ್ನು ಮಾನ್ಯಮಾಡುವರು.

ವಿವರ: ಅವರು ತಿಳಿದುಕೊಳ್ಳಲೇ ಬೇಕಾದ ವಿಷಯಗಳನ್ನು ಹೇಳದಿರಬೇಡಿ. ನೀವೇನು ಮಾಡಬಯಸುತ್ತೀರೆಂದು ಸ್ಪಷ್ಟವಾಗಿ ವಿವರಿಸಿ. “ಅಲ್ಲಿ ಯಾರೆಲ್ಲ ಇರ್ತಾರೆ?” “ಯಾರಾದರೂ ಜವಾಬ್ದಾರಿಯುತ ವಯಸ್ಕರು ಇರ್ತಾರಾ?” “ಎಷ್ಟು ಗಂಟೆಗೆ ಮುಗಿಯುತ್ತೆ?” ಎಂದು ಹೆತ್ತವರು ಕೇಳಿದಾಗ “ನನಗೆ ಗೊತ್ತಿಲ್ಲ” ಎಂಬ ಉತ್ತರ ಕೊಟ್ಟರೆ ಅದವರಿಗೆ ಇಷ್ಟವಾಗದು.

ಮನೋಭಾವ: ಹೆತ್ತವರನ್ನು ಶತ್ರುಗಳಂತೆ ನೋಡಬೇಡಿ. ಅವರನ್ನು ನಿಮ್ಮ ಮಿತ್ರರೇ ಎಂದು ಭಾವಿಸಿ. ನಿಜವಾಗಿ ನೋಡುವುದಾದರೆ ಅವರು ನಿಮ್ಮ ಮಿತ್ರರೇ ಆಗಿದ್ದಾರೆ. ಆ ಮನೋಭಾವ ಬೆಳೆಸಿಕೊಂಡರೆ ಅವರು ಮಾತಾಡುವಾಗೆಲ್ಲ ನೀವು ಎದುರುತ್ತರ ಕೊಡುವುದಿಲ್ಲ, ಜಗಳವಾಡುವುದಿಲ್ಲ. ಆಗ ಅವರೂ ಹೆಚ್ಚು ಸಹಕಾರ ನೀಡುವರು. ಒಂದುವೇಳೆ ಅವರು ಸಮ್ಮತಿ ಕೊಡದಿದ್ದರೆ ಕಾರಣವೇನೆಂದು ಗೌರವಪೂರ್ವಕವಾಗಿ ಕೇಳಿ. ಉದಾಹರಣೆಗೆ, ಒಂದು ಸಂಗೀತ ಕಾರ್ಯಕ್ರಮಕ್ಕೆ ನೀವು ಹೋಗುವುದು ಬೇಡವೆಂದು ಹೇಳಿದರೆ ಅವರ ಚಿಂತೆಯ ಕಾರಣವನ್ನು ತಿಳಿಯಲು ಯತ್ನಿಸಿ. ಅವರ ಚಿಂತೆಗೆ ಕಾರಣ ಸಂಗೀತಕಾರನೋ? ಸ್ಥಳವೋ? ನಿಮ್ಮೊಂದಿಗೆ ಇರುವವರೋ? ಪ್ರವೇಶ ಶುಲ್ಕವೋ? “ನಿಮಗೆ ನನ್ನ ಮೇಲೆ ನಂಬಿಕೆನೇ ಇಲ್ಲ,” “ಎಲ್ಲರೂ ಹೋಗುತ್ತಿದ್ದಾರೆ,” “ನನ್ನ ಫ್ರೆಂಡ್ಸ್‌ನ ಅಪ್ಪಅಮ್ಮ ಅವರನ್ನು ಹೋಗಲಿಕ್ಕೆ ಬಿಟ್ಟಿದ್ದಾರೆ!” ಎಂಬಂಥ ಮಾತುಗಳನ್ನಾಡಬೇಡಿ. ಹೆತ್ತವರೇನೇ ತೀರ್ಮಾನ ಹೇಳಲಿ ನೀವದನ್ನು ಸ್ವೀಕರಿಸಿ, ಗೌರವಿಸುವ ಮೂಲಕ ನೀವು ಸಾಕಷ್ಟು ಪ್ರಬುದ್ಧರೆಂದು ಅವರಿಗೆ ತೋರಿಸಿ. ಆಗ ನಿಮ್ಮ ಹೆತ್ತವರೂ ನಿಮ್ಮನ್ನು ಗೌರವಿಸುವರು. ಮುಂದಿನ ಸಲ ಸಮ್ಮತಿ ನೀಡಿದರೂ ನೀಡಬಹುದು. (g11-E 02)

“ಯುವಜನರ ಪ್ರಶ್ನೆ” ಲೇಖನಮಾಲೆಯ ಹೆಚ್ಚಿನ ಲೇಖನಗಳು www.watchtower.org/ype ವೆಬ್‌ಸೈಟ್‌ನಲ್ಲಿವೆ

[ಪಾದಟಿಪ್ಪಣಿ]

^ ಹೆಸರುಗಳನ್ನು ಬದಲಿಸಲಾಗಿದೆ.

[ಪುಟ 13ರಲ್ಲಿರುವ ಚೌಕ/ಚಿತ್ರ]

ನಾನು ಜವಾಬ್ದಾರಿಯಿಂದ ನಡೆದುಕೊಂಡ ಒಳ್ಳೇ ದಾಖಲೆ ಇರುವುದರಿಂದಲೇ ಅಪ್ಪಅಮ್ಮಗೆ ನನ್ನ ಮೇಲೆ ಭರವಸೆ ಇದೆ. ನನ್ನ ಫ್ರೆಂಡ್ಸ್‌ ಬಗ್ಗೆ ಎಲ್ಲವನ್ನೂ ಅವರಿಗೆ ಹೇಳ್ತೇನೆ. ಅಲ್ಲದೆ ಪಾರ್ಟಿಯಲ್ಲಿ ನನಗಿಷ್ಟವಾಗದ್ದು ನಡೆಯುತ್ತಿದ್ದಲ್ಲಿ ತಕ್ಷಣ ಅಲ್ಲಿಂದ ಹೊರಟು ಬರಲು ನನಗ್ಯಾವ ಹೆದರಿಕೆಯೂ ಇಲ್ಲ.

[ಚಿತ್ರ]

ಕಿಂಬರ್ಲಿ

[ಪುಟ 14ರಲ್ಲಿರುವ ಚೌಕ]

ನಿಮ್ಮ ಹೆತ್ತವರನ್ನು ಕೇಳಿನೋಡಿ

ಈ ಲೇಖನದಲ್ಲಿ ಚರ್ಚಿಸಿದ ವಿಷಯದ ಬಗ್ಗೆ ನಿಮ್ಮ ಹೆತ್ತವರ ನಿಲುವನ್ನು ತಿಳಿಯಲು ಬಯಸುತ್ತೀರೋ? ಇದನ್ನು ತಿಳಿಯುವ ಒಂದೇ ವಿಧಾನ ಅವರನ್ನು ಕೇಳುವುದೇ! ನಿಮ್ಮ ಮಜಾಮೋಜಿನ ಕುರಿತು ಅವರಿಗಿರುವ ಚಿಂತೆಗಳ ಬಗ್ಗೆ ಸಮಯ ನೋಡಿ ಮಾತು ಆರಂಭಿಸಿ. ಅವರಿಗೆ ಕೇಳಬಹುದಾದ ಪ್ರಶ್ನೆಗಳನ್ನು ಯೋಚಿಸಿ ಕೆಳಗೆ ಬರೆಯಿರಿ.

.....

[ಪುಟ 14ರಲ್ಲಿರುವ ಚಿತ್ರ]

ಎತ್ತರ ಸ್ಥಳದಲ್ಲಿದ್ದು ಪಹರೆಯಿಡುವ ನಿಪುಣ ಈಜುಗಾರರಂತೆ ನಿಮ್ಮ ಹೆತ್ತವರು ನಿಮಗೆ ಅಪಾಯಗಳ ಬಗ್ಗೆ ಎಚ್ಚರಿಕೆಗಳನ್ನು ನೀಡಬಲ್ಲರು