ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದುಃಖಿತರಿಗೆ ನೆರವು

ದುಃಖಿತರಿಗೆ ನೆರವು

ದುಃಖಿತರಿಗೆ ನೆರವು

“ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ.”—ಕೀರ್ತನೆ 34:18.

ಆತ್ಮೀಯರೊಬ್ಬರ ಮರಣದ ಬಳಿಕ ನಾನಾ ರೀತಿಯ ಭಾವನೆಗಳು ನಿಮ್ಮನ್ನು ಮುತ್ತಿಕೊಳ್ಳಬಹುದು. ನಿಮಗೆ ಆಘಾತವಾದೀತು, ಮನಸ್ಸು ಮಂಕಾಗಿ ಹೋದೀತು, ದುಃಖವಾದೀತು, ಒಮ್ಮೊಮ್ಮೆ ದೋಷಿಭಾವನೆ ಇಲ್ಲವೆ ಸಿಟ್ಟೂ ಬಂದೀತು. ಆದರೆ ಎಲ್ಲರೂ ಒಂದೇ ರೀತಿಯಲ್ಲಿ ದುಃಖಿಸುವುದಿಲ್ಲ. ಹೀಗಿರುವುದರಿಂದ ಇಲ್ಲಿ ತಿಳಿಸಲಾದ ಎಲ್ಲ ಭಾವನೆಗಳನ್ನು ನೀವು ಅನುಭವಿಸಲಿಕ್ಕಿಲ್ಲ. ಇಲ್ಲವೆ ಬೇರೆಯವರು ತಮ್ಮ ದುಃಖವನ್ನು ತೋರಿಸಿಕೊಳ್ಳುವ ವಿಧದಲ್ಲೇ ನೀವು ದುಃಖ ತೋರಿಸಲಿಕ್ಕಿಲ್ಲ. ಆದರೆ ನಿಮ್ಮ ದುಃಖ ವ್ಯಕ್ತಪಡಿಸುವ ಸಂದರ್ಭ ಬಂದಾಗ ಅದನ್ನು ವ್ಯಕ್ತಪಡಿಸಿ. ಅದರಲ್ಲಿ ತಪ್ಪೇನಿಲ್ಲ.

“ದುಃಖವನ್ನು ವ್ಯಕ್ತಪಡಿಸಿ!”

ಹೆಲೊಯ್ಸ ಎಂಬ ಹೆಸರಿನ ವೈದ್ಯೆ ತನ್ನ ತಾಯಿಯ ಸಾವಿನ ಬಳಿಕ ತನ್ನ ಭಾವನೆಗಳನ್ನು ಹತ್ತಿಕ್ಕಲು ಪ್ರಯತ್ನಿಸಿದಳು. ಆಕೆ ಹೇಳಿದ್ದು: “ಮೊದಮೊದಲು ಅಳುತ್ತಿದ್ದೆ, ಆದರೆ ಸ್ವಲ್ಪ ಸಮಯದ ಬಳಿಕ ನನ್ನ ಭಾವನೆಗಳನ್ನು ಕಟ್ಟಿಡಲು ಪ್ರಯತ್ನಿಸಿದೆ. ನನ್ನ ರೋಗಿಗಳಲ್ಲಿ ಯಾರಾದರೂ ಸತ್ತಾಗ ಹಾಗೇ ಮಾಡುತ್ತಿದ್ದೆ. ಬಹುಶಃ ಇದರಿಂದಾಗಿಯೇ ನನ್ನ ಆರೋಗ್ಯ ಕೆಟ್ಟುಹೋಯಿತು. ಆದ್ದರಿಂದ ಸಾವಿನಲ್ಲಿ ಪ್ರಿಯರೊಬ್ಬರನ್ನು ಕಳೆದುಕೊಂಡಿರುವವರಿಗೆ ನಾನು ಕೊಡುವ ಸಲಹೆ: ದುಃಖವನ್ನು ವ್ಯಕ್ತಪಡಿಸಿ! ಆ ಭಾವನೆಗಳನ್ನು ಅದುಮಿಡಬೇಡಿ. ಮನಸ್ಸನ್ನು ಹಗುರಮಾಡಿ.”

ಆದರೆ ದಿನಗಳೂ ವಾರಗಳೂ ಉರುಳಿದಂತೆ ನಿಮಗೂ ಸೆಸೀಲ್ಯಾಳಿಗಾದ ಅನಿಸಿಕೆಯಾಗಬಹುದು. ಕ್ಯಾನ್ಸರ್‌ ರೋಗದಿಂದ ಗಂಡನನ್ನು ಕಳಕೊಂಡ ಆಕೆಯಂದದ್ದು: “ಒಮ್ಮೊಮ್ಮೆ ನನ್ನ ಬಗ್ಗೆಯೇ ನನಗೆ ನಿರಾಶೆ ಆಗುತ್ತದೆ. ಯಾಕಂದರೆ, ಇಷ್ಟರೊಳಗೆ ನಾನು ನನ್ನ ದುಃಖ ಮರೆತುಬಿಡಬೇಕಿತ್ತು ಎಂದು ನೆನಸುವ ಕೆಲವರ ನಿರೀಕ್ಷೆಗಳನ್ನು ನಾನು ಪೂರೈಸುತ್ತಿಲ್ಲವೆಂದು ತೋರುತ್ತದೆ.”

ನಿಮಗೂ ಅಂಥದ್ದೇ ಯೋಚನೆಗಳಿರುವಲ್ಲಿ, ಒಂದು ವಿಷಯ ನೆನಪಿನಲ್ಲಿಡಿ: ಈ ರೀತಿಯಾಗಿಯೇ ದುಃಖಿಸಬೇಕೆಂಬ ನಿರ್ದಿಷ್ಟ ವಿಧಾನವೇನಿಲ್ಲ. ಕೆಲವರು ಸ್ವಲ್ಪಮಟ್ಟಿಗೆ ಸುಲಭವಾಗಿಯೇ ನೋವನ್ನು ಮರೆತು ಮುಂಚಿನಂತೆಯೇ ಬದುಕನ್ನು ಮುಂದುವರಿಸುತ್ತಾರೆ. ಎಲ್ಲರಿಗೆ ಹಾಗೆ ಮಾಡಲು ಸಾಧ್ಯವಿಲ್ಲ. ದುಃಖಿಸುವುದನ್ನು ಅವಸರದಿಂದ ನಿಲ್ಲಿಸಿ ಬಿಡಲಾಗುವುದಿಲ್ಲ. ಹೀಗಿರಲಾಗಿ, ನಿರ್ದಿಷ್ಟ ‘ವಾಯಿದೆಯೊಳಗೆ’ ನಿಮ್ಮ ದುಃಖ ಮಾಯವಾಗಿ ನಿಮಗೆ ಹಾಯೆನಿಸಬೇಕೆಂದು ಭಾವಿಸಬೇಡಿ. *

ಆದರೆ ನಿಮ್ಮ ದುಃಖ ನಿರಂತರವಾದದ್ದಾಗಿದ್ದು, ಅದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಯಾಗುತ್ತಿರುವಲ್ಲಿ ಆಗೇನು? ಬಹುಶಃ ನಿಮ್ಮ ದುಃಖ ದೇವಭಕ್ತ ಯಾಕೋಬನಂತೆ ಇದ್ದೀತು. ಅವನು ತನ್ನ ಮಗ ಯೋಸೇಫನು ಸತ್ತನೆಂಬ ಸುದ್ದಿ ಕೇಳಿದಾಗ ‘ಎಲ್ಲರೂ ದುಃಖಶಮನಮಾಡುವದಕ್ಕೆ ಪ್ರಯತ್ನಿಸಿದಾಗ್ಯೂ ಶಾಂತಿಯನ್ನು ಹೊಂದಲೊಲ್ಲದೆ ಹೋದನು.’ (ಆದಿಕಾಂಡ 37:35) ನಿಮ್ಮ ದುಃಖವೂ ಹಾಗೆಯೇ ಇರುವಲ್ಲಿ, ಶೋಕದಲ್ಲಿ ಮುಳುಗಿಹೋಗದಂತೆ ಯಾವ ಪ್ರಾಯೋಗಿಕ ಹೆಜ್ಜೆಗಳನ್ನು ತೆಗೆದುಕೊಳ್ಳಬಲ್ಲಿರಿ?

ಜಾಗ್ರತೆ ವಹಿಸಿ. “ಕೆಲವೊಮ್ಮೆ ನನಗೆ ತುಂಬ ಸುಸ್ತಾಗಿಬಿಡುತ್ತದೆ. ನಾನು ಮಿತಿಮೀರಿ ದುಃಖಿಸುತ್ತಿದ್ದೇನೆಂದು ನನಗೇ ಗೊತ್ತಾಗುತ್ತದೆ” ಎನ್ನುತ್ತಾಳೆ ಸೆಸೀಲ್ಯಾ. ಅವಳ ಮಾತು ಸೂಚಿಸುವಂತೆ ದುಃಖವು ಶಾರೀರಿಕವಾಗಿ, ಭಾವನಾತ್ಮಕವಾಗಿ ಭಾರೀ ಹಾನಿ ಮಾಡಬಲ್ಲದು. ಹೀಗಿರುವುದರಿಂದ ವಿಶೇಷವಾಗಿ ನಿಮ್ಮ ದೈಹಿಕ ಆರೋಗ್ಯಕ್ಕೆ ಗಮನಕೊಡುವುದು ಒಳ್ಳೇದು. ಸಾಕಷ್ಟು ವಿಶ್ರಾಂತಿ ಪಡೆಯಿರಿ, ಪೌಷ್ಟಿಕ ಆಹಾರ ಸೇವಿಸಿ.

ಸಾಮಾನು ಖರೀದಿಸಿ ಅಡುಗೆಮಾಡುವ ವಿಷಯವಂತೂ ಬಿಡಿ, ಗಂಟಲಲ್ಲಿ ತುತ್ತು ಇಳಿಯುವುದೇ ಕಷ್ಟವಾದೀತು. ಹಾಗೆಂದು ನೀವು ಅನ್ನಪಾನ ಅಲಕ್ಷಿಸಿದಲ್ಲಿ ಸೋಂಕಿಗೊ ರೋಗಕ್ಕೊ ತುತ್ತಾಗುವ ಸಾಧ್ಯತೆಗಳು ಹೆಚ್ಚು. ಅವು ತಗಲಿದರಂತೂ ನಿಮ್ಮ ಕಷ್ಟ ಇನ್ನಷ್ಟು ಹೆಚ್ಚುವುದು. ಆದ್ದರಿಂದ ಸ್ವಲ್ಪ ಸ್ವಲ್ಪವಾದರೂ ಆಹಾರ ಸೇವಿಸಿ ಒಳ್ಳೇ ಆರೋಗ್ಯ ಕಾಪಾಡಿಕೊಳ್ಳಿ. *

ಸಾಧ್ಯವಿರುವಲ್ಲಿ ಯಾವುದಾದರೂ ವಿಧದ ವ್ಯಾಯಾಮ ಮಾಡಿ. ಬರೇ ನಡಿಗೆಯಾದರೂ ಸರಿ. ದೈಹಿಕ ಚಟುವಟಿಕೆಗಾದರೂ ನೀವು ಮನೆಯಿಂದ ಹೊರಗೆ ಹೋಗುವಿರಿ. ಅಲ್ಲದೆ ಮಿತಪ್ರಮಾಣದ ವ್ಯಾಯಾಮದಿಂದ ಮಿದುಳಲ್ಲಿ ಎಂಡೊರ್ಫಿನ್‌ ಎಂಬ ರಾಸಾಯನಿಕ ಪದಾರ್ಥಗಳು ಬಿಡುಗಡೆಯಾಗುವುದರಿಂದ ನಿಮಗೆ ಹಾಯೆನಿಸುವುದು.

ಇತರರ ನೆರವು ಸ್ವೀಕರಿಸಿ. ವಿಶೇಷವಾಗಿ ನಿಮ್ಮ ಬಾಳಸಂಗಾತಿ ಮೃತಪಟ್ಟಿರುವಲ್ಲಿ ಇದನ್ನು ಮಾಡುವುದು ಪ್ರಾಮುಖ್ಯ. ಅವನು ಯಾ ಅವಳು ಎಷ್ಟೋ ಕೆಲಸಗಳನ್ನು ಮಾಡುತ್ತಿದ್ದಿರಬಹುದು, ಈಗ ಅವುಗಳನ್ನು ಮಾಡಲು ಯಾರೂ ಇಲ್ಲ. ಉದಾಹರಣೆಗೆ ನಿಮ್ಮ ಸಂಗಾತಿ ಹಣಕಾಸಿಗೆ ಸಂಬಂಧಪಟ್ಟ ಎಲ್ಲ ವಿಷಯಗಳನ್ನೊ ಮನೆಗೆಲಸಗಳನ್ನೊ ನಿರ್ವಹಿಸುತ್ತಿದ್ದಲ್ಲಿ, ಮೊದಮೊದಲು ನಿಮಗೆ ಆ ಕೆಲಸಗಳನ್ನು ಮಾಡಲು ತುಂಬ ಕಷ್ಟವಾದೀತು. ಹಾಗಿರುವಾಗ, ಜಾಣ್ಮೆಯಿಂದ ಮಾತಾಡುವ ಮಿತ್ರರ ಸಲಹೆಗಳಿಂದ ನಿಮಗೆ ತುಂಬ ಸಹಾಯವಾಗುವುದು.—ಜ್ಞಾನೋಕ್ತಿ 25:11.

ನಿಜ ಮಿತ್ರರು ಕಷ್ಟದ ಸಮಯದಲ್ಲಿ ನೆರವಾಗುತ್ತಾರೆಂದು ಬೈಬಲ್‌ ತೋರಿಸುತ್ತದೆ. (ಜ್ಞಾನೋಕ್ತಿ 17:17) ಹೀಗಿರಲಾಗಿ, ಬೇರೆಯವರಿಗೆ ಹೊರೆ ಆಗಬಾರದೆಂದು ನೆನಸುತ್ತಾ ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಬೇಡಿ. ನಿಜವೇನೆಂದರೆ, ಇತರರೊಂದಿಗಿನ ಒಡನಾಟವು, ಈ ಕಷ್ಟದ ಸಮಯವನ್ನು ದಾಟಲು ಸಹಾಯಮಾಡುವ ಸೇತುವೆಯಂತಿರುವುದು. ಸ್ಯಾಲಿ ಎಂಬ ಯುವತಿಯ ತಾಯಿ ತೀರಿಹೋದಾಗ ಅವಳಿಗೆ ಇತರರೊಂದಿಗಿನ ಸಹವಾಸದಿಂದ ತುಂಬ ಆದರಣೆ ಸಿಕ್ಕಿತು. “ನನ್ನ ಸ್ನೇಹಿತರಲ್ಲಿ ಅನೇಕರು ನನ್ನನ್ನು ತಮ್ಮ ಚಟುವಟಿಕೆಗಳಲ್ಲಿ ಒಳಗೂಡಿಸಿದರು. ಇದು, ನಾನು ಅನುಭವಿಸುತ್ತಿದ್ದ ತೀವ್ರ ಒಂಟಿಭಾವನೆಯನ್ನು ನಿಭಾಯಿಸಲು ನಿಜವಾಗಿಯೂ ಸಹಾಯಮಾಡಿತು. ‘ನಿನ್ನ ತಾಯಿಯ ಸಾವಿನ ನೋವನ್ನು ಹೇಗೆ ನಿಭಾಯಿಸುತ್ತಿದ್ದೀ?’ ಎಂಬಂಥ ಸರಳ ಪ್ರಶ್ನೆಗಳನ್ನು ಜನರು ಕೇಳಿದಾಗ ನನಗೆ ಯಾವಾಗಲೂ ಇಷ್ಟವಾಗುತ್ತಿತ್ತು.’ ನನ್ನ ಅಮ್ಮನ ಬಗ್ಗೆ ಮಾತಾಡುವುದು, ನನ್ನ ನೋವನ್ನು ಶಮನಮಾಡಲು ಸಹಾಯಮಾಡಿತೆಂದು ಕಂಡುಕೊಂಡೆ.”

ಸವಿ ನೆನಪುಗಳನ್ನು ನೆನಪಿಸಿ. ಅಗಲಿದ ಪ್ರಿಯ ವ್ಯಕ್ತಿಯೊಂದಿಗೆ ನೀವು ಕಳೆದ ಮಧುರ ಕ್ಷಣಗಳನ್ನು ನೆನಪಿಗೆ ತಂದುಕೊಳ್ಳಿ. ಇದಕ್ಕಾಗಿ ಫೋಟೋಗಳನ್ನು ನೋಡಬಹುದು. ಮೊದಮೊದಲು ನಿಮ್ಮ ಹೃದಯದಲ್ಲಿ ಕತ್ತರಿಯಾಡಿಸಿದಂತಾಗಬಹುದು ನಿಜ. ಆದರೆ ಕಾಲ ಸಂದಂತೆ ಈ ಸ್ಮರಣೆಗಳು ನಿಮಗೆ ನೋವನ್ನುಂಟುಮಾಡವು ಬದಲಾಗಿ ಶಮನಕಾರಿಯಾಗಬಲ್ಲವು.

ನೀವು ಇಷ್ಟಪಡುವಲ್ಲಿ ಒಂದು ಡೈರಿಯನ್ನೂ ಬರೆದಿಡಿ. ಅದರಲ್ಲಿ ನಿಮ್ಮ ಸವಿ ನೆನಪುಗಳನ್ನು ಕೂಡಿಸಬಹುದು. ಆ ಪ್ರಿಯ ವ್ಯಕ್ತಿ ಜೀವದಿಂದಿದ್ದಾಗ ಅವರಿಗೆ ಏನೇನು ಹೇಳಬಹುದಿತ್ತೆಂದು ನಿಮಗನಿಸುತ್ತದೊ ಅದನ್ನೂ ಬರೆದಿಡಬಹುದು. ನೀವೇನನ್ನು ಬರೆದಿದ್ದೀರೊ ಅದನ್ನು ಓದುವಾಗ ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ನಿಮಗೆ ಹೆಚ್ಚು ಸುಲಭವಾದೀತು. ಡೈರಿಯಲ್ಲಿ ಬರೆಯುವುದು ನಿಮ್ಮ ಭಾವನೆಗಳು ಹೊರ ಹರಿಯುವಂತೆ ಮಾಡುವ ಉತ್ತಮ ಮಾಧ್ಯಮವೂ ಆಗಿರಬಲ್ಲದು.

ನಿಮ್ಮ ಪ್ರಿಯ ವ್ಯಕ್ತಿಯ ನೆನಪಿಗಾಗಿ ಅವರ ಕೆಲವೊಂದು ವಸ್ತುಗಳನ್ನು ಇಟ್ಟುಕೊಳ್ಳಬಹುದೊ? ಇದರ ಬಗ್ಗೆ ಜನರಿಗೆ ಬೇರೆ ಬೇರೆ ಅಭಿಪ್ರಾಯಗಳಿವೆ. ಇದೇನೂ ಆಶ್ಚರ್ಯದ ಸಂಗತಿಯಲ್ಲ ಏಕೆಂದರೆ ಪ್ರತಿಯೊಬ್ಬರೂ ದುಃಖಿಸುವ ವಿಧ ಬೇರೆ ಬೇರೆ ಆಗಿರುತ್ತದೆ. ಮೃತ ವ್ಯಕ್ತಿಯ ವಸ್ತುಗಳನ್ನು ನೆನಪಿಗಾಗಿ ಇಡುವುದು ಚೇತರಿಕೆಗೆ ಅಡಚಣೆ ಎಂದು ಕೆಲವರಿಗೆ ಅನಿಸುತ್ತದೆ. ಆದರೆ ಇತರರು ಅದು ಸಹಾಯಕರ ಎಂದು ಕಂಡುಕೊಂಡಿದ್ದಾರೆ. ಈ ಮುಂಚೆ ತಿಳಿಸಲಾದ ಸ್ಯಾಲಿ ಹೇಳುವುದು: “ನನ್ನ ಅಮ್ಮನ ಹಲವಾರು ವಸ್ತುಗಳನ್ನು ಇಟ್ಟುಕೊಂಡಿದ್ದೇನೆ. ನನ್ನ ದುಃಖ ನಿಭಾಯಿಸಲು ಅದೊಂದು ಉತ್ತಮ ಮಾರ್ಗ.” *

“ಸಕಲ ಸಾಂತ್ವನದ ದೇವರ” ಮೇಲೆ ಆತುಕೊಳ್ಳಿ. “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು” ಎನ್ನುತ್ತದೆ ಬೈಬಲ್‌. (ಕೀರ್ತನೆ 55:22) ದೇವರಿಗೆ ಪ್ರಾರ್ಥನೆ ಮಾಡುವುದು ನೆಮ್ಮದಿಯ ಭಾವನೆಯನ್ನು ಬರಿಸುವ ಬರೇ ಒಂದು ಸಾಧನವಲ್ಲ. ಅದು ‘ನಮ್ಮ ಎಲ್ಲ ಸಂಕಟಗಳಲ್ಲಿ ನಮ್ಮನ್ನು ಸಾಂತ್ವನಗೊಳಿಸುವ ಸಕಲ ಸಾಂತ್ವನದ ದೇವರೊಂದಿಗೆ’ ನಿಜವಾದ ಮತ್ತು ಅತ್ಯಾವಶ್ಯಕವಾದ ಸಂವಾದ ಆಗಿದೆ.—2 ಕೊರಿಂಥ 1:3, 4.

ನಮಗೆ ಅತೀ ಮಹತ್ತಾದ ಸಾಂತ್ವನ ಆತನ ವಾಕ್ಯವಾದ ಬೈಬಲ್‌ನಿಂದ ಸಿಗುತ್ತದೆ. ಯೇಸುವಿನ ಶಿಷ್ಯನಾದ ಪೌಲನು ಹೇಳಿದ್ದು: ‘ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವುದೆಂದು ದೇವರಲ್ಲಿ ನಾನು ನಿರೀಕ್ಷೆ ಇಟ್ಟಿದ್ದೇನೆ.’ (ಅ. ಕಾರ್ಯಗಳು 24:15) ಸತ್ತವರ ಪುನರುತ್ಥಾನವಾಗುವುದೆಂಬ ಬೈಬಲಿನ ಈ ನಿರೀಕ್ಷೆಯ ಕುರಿತು ಯೋಚಿಸುವಾಗ, ಪ್ರಿಯ ವ್ಯಕ್ತಿಯ ಮರಣಕ್ಕಾಗಿ ದುಃಖಿಸುವ ಸಮಯದಲ್ಲಿ ಅತ್ಯಂತ ಹೆಚ್ಚಿನ ಸಾಂತ್ವನ ಸಿಗುವುದು. * ಇದು ಸತ್ಯವೆಂದು, ಹದಿಹರೆಯದ ಸೋದರನನ್ನು ಅಪಘಾತದಲ್ಲಿ ಕಳೆದುಕೊಂಡ ಲಾರೆನ್‌ ಎಂಬಾಕೆ ಕಂಡುಕೊಂಡಳು. ಆಕೆಯಂದದ್ದು: “ನನಗೆಷ್ಟೇ ದುಃಖವಾಗುತ್ತಿರಲಿ ಬೈಬಲನ್ನು ಓದುತ್ತಿದ್ದೆ. ಕೆಲವೊಮ್ಮೆ ಒಂದೇ ಒಂದು ವಚನವಾದರೂ ಸರಿ, ಓದುತ್ತಿದ್ದೆ. ನಿರ್ದಿಷ್ಟವಾಗಿ ಪ್ರೋತ್ಸಾಹದಾಯಕ ವಚನಗಳನ್ನು ಆರಿಸಿ ಪುನಃ ಪುನಃ ಓದುತ್ತಿದ್ದೆ. ಉದಾಹರಣೆಗೆ, ಲಾಜರನ ಮರಣದ ಬಳಿಕ ಯೇಸು ಮಾರ್ಥಳಿಗೆ ‘ನಿನ್ನ ಸಹೋದರನು ಎದ್ದುಬರುವನು’ ಎಂದು ಹೇಳಿದ ಮಾತು ನನಗೆ ತುಂಬ ಸಾಂತ್ವನ ಕೊಟ್ಟವು.”—ಯೋಹಾನ 11:23.

“ಅದು ನಿಮ್ಮನ್ನು ನಿಯಂತ್ರಿಸುವಂತೆ ಬಿಡಬೇಕಾಗಿಲ್ಲ”

ದುಃಖವನ್ನು ನಿಭಾಯಿಸುವುದು ಒಂದು ಸವಾಲಾಗಿದ್ದರೂ ಅದು ನಿಮ್ಮ ಬದುಕಿನಲ್ಲಿ ಆಸಕ್ತಿಯನ್ನು ಮರಳಿ ಪಡೆಯಲು ಸಹಾಯಮಾಡುವುದು. ಹೀಗೆ ಮಾಡಿದರೆ ನಿಮ್ಮ ಪ್ರಿಯ ವ್ಯಕ್ತಿಗೆ ದ್ರೋಹಬಗೆಯುತ್ತೀರಿ ಇಲ್ಲವೆ ಅವರನ್ನು ಮರೆಯುತ್ತೀರಿ ಎಂದು ನೆನಸಿ ಅಪರಾಧಿಭಾವ ತಾಳಬೇಕಾಗಿಲ್ಲ. ನಿಮ್ಮ ಪ್ರಿಯ ವ್ಯಕ್ತಿಯನ್ನು ನೀವೆಂದೂ ಮರೆಯಲು ಸಾಧ್ಯವೇ ಇಲ್ಲ ಎಂಬುದು ವಾಸ್ತವಾಂಶ. ಕೆಲವೊಂದು ಸಂದರ್ಭಗಳಲ್ಲಿ ನೆನಪುಗಳು ಉಕ್ಕೇರಬಹುದು. ಆದರೆ ಅವುಗಳಿಂದ ನಿಮಗಾಗುವ ದುಃಖ ಕ್ರಮೇಣ ಕಡಿಮೆಯಾಗುವುದು.

ಸಿಹಿಕಹಿ ನೆನಪುಗಳನ್ನು ನೀವು ಅಕ್ಕರೆಯಿಂದ ಜ್ಞಾಪಕಕ್ಕೆ ತರಲೂ ಶಕ್ತರಾಗಬಹುದು. ಉದಾಹರಣೆಗೆ ತನ್ನ ತಾಯಿಯನ್ನು ಕಳೆದುಕೊಂಡ ಆ್ಯಶ್ಲೀ ಎಂಬಾಕೆ ಹೇಳುವುದು: “ನನ್ನ ಅಮ್ಮ ತೀರಿಹೋದ ಮುಂಚಿನ ದಿನ ನನಗಿನ್ನೂ ನೆನಪಿದೆ. ಅವರು ಚೇತರಿಸುತ್ತಿದ್ದಾರೆಂಬಂತೆ ತೋರುತ್ತಿತ್ತು. ಎಷ್ಟೋ ದಿನಗಳಾದ ಬಳಿಕ ಅವರು ಮೊದಲ ಬಾರಿ ಹಾಸಿಗೆಯಿಂದ ಕೆಳಗಿಳಿದಿದ್ದರು ಸಹ. ನನ್ನ ಅಕ್ಕ ಅವರ ತಲೆ ಬಾಚುತ್ತಿದ್ದಾಗ ಯಾವುದೊ ವಿಷಯಕ್ಕೆ ನಾವು ಮೂವರೂ ನಗಾಡಲಾರಂಭಿಸಿದೆವು. ನಾನು ತುಂಬ ಸಮಯದಿಂದ ನೋಡಿರದಿದ್ದ ನಸುನಗುವನ್ನು ಅಮ್ಮನ ಮುಖದಲ್ಲಿ ಆಗ ಕಂಡೆ. ತಮ್ಮ ಹೆಣ್ಮಕ್ಕಳೊಂದಿಗೆ ಇರುವುದು ಅವರಿಗೆ ತುಂಬ ತೃಪ್ತಿ ತಂದಿತ್ತು.”

ನಿಮ್ಮ ಆತ್ಮೀಯರೊಂದಿಗಿದ್ದಾಗ ನೀವು ಕಲಿತುಕೊಂಡ ಅಮೂಲ್ಯ ಸಂಗತಿಗಳನ್ನೂ ನೀವು ನೆನಪಿಗೆ ತರಲು ಶಕ್ತರಾಗುವಿರಿ. ಉದಾಹರಣೆಗೆ ಸ್ಯಾಲಿ ಹೇಳುವುದು: “ಅಮ್ಮ ತುಂಬ ಚೆನ್ನಾಗಿ ಕಲಿಸುತ್ತಿದ್ದರು. ಅವರು ಒಳ್ಳೇ ಬುದ್ಧಿವಾದ ಕೊಡುತ್ತಿದ್ದರು ಆದರೆ ಕಠಿನ ರೀತಿಯಲ್ಲಲ್ಲ. ಮಾತ್ರವಲ್ಲ ಬರೇ ಅವರು ಇಲ್ಲವೆ ಅಪ್ಪ ಹೇಳಿದ ನಿರ್ಣಯಗಳನ್ನಲ್ಲ ಬದಲಾಗಿ ಸ್ವತಃ ನಾನೇ ಒಳ್ಳೇ ನಿರ್ಣಯಗಳನ್ನು ಮಾಡುವುದು ಹೇಗೆಂದು ಕಲಿಸಿದರು.”

ನೀವು ಬದುಕಿನಲ್ಲಿ ಆಸಕ್ತಿಯನ್ನು ಮರಳಿ ಪಡೆಯುವಂತೆ ಸಹಾಯಮಾಡಲು ನಿಮ್ಮ ಪ್ರಿಯ ವ್ಯಕ್ತಿಯ ಸ್ಮರಣೆಗಳೇ ನಿಮಗೆ ಅತ್ಯಗತ್ಯವಾದ ಸಾಧನ ಆಗಿರಬಹುದು. ಆಲೆಕ್ಸ್‌ ಎಂಬ ಯುವಕನು ಇದನ್ನೇ ಕಂಡುಕೊಂಡನು. “ನನ್ನ ತಂದೆಯ ಸಾವಿನ ಬಳಿಕ ನಾನು, ಅವರು ಕಲಿಸಿದ್ದನ್ನೇ ಅಂದರೆ ಬದುಕಿನ ಆನಂದ ಸವಿಯುವುದನ್ನು ಮರೆಯಬಾರದು ಎಂಬ ಮಾತಿಗನುಸಾರ ಜೀವಿಸುವ ದೃಢಸಂಕಲ್ಪ ಮಾಡಿದೆ. ಅಪ್ಪ ಇಲ್ಲವೆ ಅಮ್ಮನನ್ನು ಕಳೆದುಕೊಂಡವರಿಗೆ ನಾನು ಹೇಳುವುದು ಇಷ್ಟೆ: ನಿಮ್ಮ ತಂದೆ/ತಾಯಿಯ ಮರಣದುಃಖವನ್ನು ನೀವು ಪೂರ್ತಿಯಾಗಿ ಮರೆಯಲಾರಿರಿ ನಿಜ, ಆದರೆ ಆ ದುಃಖ ನಿಮ್ಮನ್ನು ನಿಯಂತ್ರಿಸುವಂತೆ ಬಿಡಬೇಕಾಗಿಲ್ಲ. ಶೋಕಿಸಿ, ದುಃಖಿಸಿ. ಅದನ್ನು ಮಾಡಲೇಬೇಕು. ಆದರೆ ಅದೇ ಸಮಯ, ನಿಮ್ಮ ಮುಂದಿರುವ ಬದುಕನ್ನು ನೀವು ಉಪಯುಕ್ತವಾಗಿ ಬಳಸಬೇಕೆಂಬುದನ್ನು ಮರೆಯಬೇಡಿ.” (g11-E 04)

[ಪಾದಟಿಪ್ಪಣಿಗಳು]

^ ಈ ಕಾರಣದಿಂದ ಇನ್ನೊಂದು ಮನೆಗೆ ಸ್ಥಳಾಂತರಿಸುವ ಇಲ್ಲವೆ ಹೊಸ ಸಂಬಂಧವನ್ನು ಬೆಳೆಸಿಕೊಳ್ಳುವಂಥ ನಿರ್ಣಯಗಳನ್ನು ಅವಸರದಿಂದ ಮಾಡದಿರುವುದು ಉತ್ತಮ. ಇಂಥ ಬದಲಾವಣೆಗಳನ್ನು, ನಿಮ್ಮ ಬದುಕಿನ ಹೊಸ ಸನ್ನಿವೇಶಕ್ಕೆ ಹೊಂದಿಸಿಕೊಳ್ಳಲು ಸಾಕಷ್ಟು ಸಮಯ ಸಿಕ್ಕಿದ ನಂತರವೇ ಮಾಡತಕ್ಕದ್ದು.

^ ಮರಣ ದುಃಖವನ್ನು ಕ್ಷಣಿಕವಾಗಿ ಮರೆಯಲು ಮದ್ಯ ಸ್ವಲ್ಪ ಸಹಾಯಮಾಡುವುದಾದರೂ ಅದು ಕೇವಲ ತಾತ್ಕಾಲಿಕ. ನಿಮ್ಮ ದುಃಖವನ್ನು ತುಂಬ ಸಮಯದ ವರೆಗೆ ಸಹಿಸಲು ಮದ್ಯ ಸಹಾಯಮಾಡಲಾರದು. ಅಲ್ಲದೆ ನಿಮಗೆ ಅದರ ಚಟಹಿಡಿಯುವ ಸಾಧ್ಯತೆ ಇದೆ.

^ ಪ್ರತಿಯೊಬ್ಬ ವ್ಯಕ್ತಿ ದುಃಖಿಸುವ ವಿಧಾನ ಭಿನ್ನವಾಗಿರುವುದರಿಂದ, ದುಃಖಿಸುತ್ತಿರುವ ವ್ಯಕ್ತಿಯ ಮೇಲೆ ಬಂಧುಮಿತ್ರರು ಈ ವಿಷಯದಲ್ಲಿ ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಹೇರಬಾರದು.—ಗಲಾತ್ಯ 6:2, 5.

^ ಸತ್ತವರ ಸ್ಥಿತಿ ಮತ್ತು ಪುನರುತ್ಥಾನದ ಕುರಿತ ದೇವರ ವಾಗ್ದಾನದ ಬಗ್ಗೆ ಮಾಹಿತಿಗಾಗಿ, ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ 6 ಮತ್ತು 7 ಅಧ್ಯಾಯಗಳನ್ನು ನೋಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

[ಪುಟ 31ರಲ್ಲಿರುವ ಸಂಕ್ಷಿಪ್ತ ವಿವರಣೆ]

“ನನಗೆಷ್ಟೇ ದುಃಖವಾಗುತ್ತಿರಲಿ ಬೈಬಲನ್ನು ಓದುತ್ತಿದ್ದೆ. ಕೆಲವೊಮ್ಮೆ ಒಂದೇ ಒಂದು ವಚನವಾದರೂ ಸರಿ, ಓದುತ್ತಿದ್ದೆ”—ಲಾರೆನ್‌

[ಪುಟ 30ರಲ್ಲಿರುವ ಚೌಕ/ಚಿತ್ರ]

ಅಪರಾಧಿಭಾವವನ್ನು ನಿಭಾಯಿಸುವುದು ಹೇಗೆ?

ಯಾವುದೋ ವಿಷಯದಲ್ಲಿ ನೀವು ತೋರಿಸಿದ ಅಲಕ್ಷ್ಯವೇ ನಿಮ್ಮ ಪ್ರಿಯರ ಮರಣಕ್ಕೆ ಕಾರಣವಾಗಿತ್ತೆಂದು ಬಹುಶಃ ನಿಮಗನಿಸೀತು. ಆದರೆ ಈ ಅಪರಾಧಿಭಾವಕ್ಕೆ ಕಾರಣವಿರಲಿ ಇಲ್ಲದಿರಲಿ, ಅದು ದುಃಖಿಸುವಾಗ ಉಂಟಾಗುವ ಸಹಜ ಪ್ರತಿಕ್ರಿಯೆ ಎಂಬುದನ್ನು ನೀವು ಗ್ರಹಿಸುವುದೇ ಸಹಾಯಕಾರಿ. ಈ ಸನ್ನಿವೇಶದಲ್ಲೂ ನಿಮ್ಮ ಇಂಥ ಭಾವನೆಗಳನ್ನು ಒಳಗೆ ಇಟ್ಟುಕೊಳ್ಳಬೇಕಾಗಿಲ್ಲ. ನಿಮಗೆಷ್ಟು ಅಪರಾಧಿಭಾವ ಕಾಡುತ್ತಿದೆ ಎಂಬುದರ ಬಗ್ಗೆ ಮಾತಾಡಿದರೆ ನಿಮ್ಮ ಮನಸ್ಸು ನಿರಾಳವಾಗುವುದು.

ನಾವು ಒಬ್ಬರನ್ನು ಎಷ್ಟೇ ಪ್ರೀತಿಸಲಿ ಅವನ ಅಥವಾ ಅವಳ ಜೀವ ನಮ್ಮ ಕೈಯಲ್ಲಿಲ್ಲ ಇಲ್ಲವೆ ನಮ್ಮ ಪ್ರಿಯರು “ಸಮಯ ಮತ್ತು ಮುಂಗಾಣದ ಘಟನೆಗೆ” ತುತ್ತಾಗುವುದನ್ನು ತಪ್ಪಿಸುವುದೂ ನಮ್ಮ ಕೈಯಲಿಲ್ಲ ಎಂಬದನ್ನು ನೆನಪಿನಲ್ಲಿಡಿ. (ಪ್ರಸಂಗಿ 9:11, NW) ಅಲ್ಲದೆ, ನಿಮ್ಮ ಹೇತುಗಳು ಕೆಟ್ಟದ್ದಾಗಿರಲಿಲ್ಲ. ಉದಾಹರಣೆಗೆ, ನಿಮ್ಮ ಪ್ರಿಯ ವ್ಯಕ್ತಿಯನ್ನು ಡಾಕ್ಟರರ ಬಳಿಗೆ ಮುಂಚೆಯೇ ಕರಕೊಂಡು ಹೋಗದ್ದರಿಂದ, ಅವರು ಕಾಯಿಲೆಬಿದ್ದು ಸಾಯಬೇಕೆಂದು ನೀವು ಉದ್ದೇಶಿಸಿದರೆಂದು ಆಗುತ್ತದೊ? ಖಂಡಿತ ಇಲ್ಲ! ಹೀಗಿರಲಾಗಿ ಅವರ ಮರಣಕ್ಕೆ ನೀವು ಕಾರಣರೆಂಬ ಅಪರಾಧಿಭಾವ ನಿಮಗಿರಬೇಕಾಗಿಲ್ಲ.

ಕಾರ್‌ ಅಪಘಾತದಲ್ಲಿ ಮಗಳನ್ನು ಕಳೆದುಕೊಂಡ ತಾಯಿಯೊಬ್ಬಳು ಅಪರಾಧಿಭಾವವನ್ನು ನಿಭಾಯಿಸುವುದು ಹೇಗೆಂದು ಕಲಿತುಕೊಂಡಳು. ಆಕೆ ವಿವರಿಸುವುದು: “ನಾನು ಅವಳನ್ನು ಯಾಕಾದರೂ ಹೊರಗೆ ಕಳುಹಿಸಿದೆನೊ ಎಂಬ ವಿಷಯ ನನ್ನನ್ನು ಕಿತ್ತುತಿನ್ನುತ್ತಿತ್ತು. ಆದರೆ ಹಾಗೆ ಯೋಚಿಸುವುದು ಮೂರ್ಖತನ ಎಂದು ನನಗೆ ಅರ್ಥವಾಗತೊಡಗಿತು. ಅವಳನ್ನು ತನ್ನ ಅಪ್ಪನ ಜೊತೆ ಒಂದು ಚಿಕ್ಕ ಕೆಲಸಕ್ಕಾಗಿ ಹೊರಗೆ ಕಳುಹಿಸಿದ್ದರಲ್ಲಿ ತಪ್ಪೇನಿತ್ತು? ನಡೆದ ಭೀಕರ ಅಪಘಾತ ಆಕಸ್ಮಿಕವಾಗಿತ್ತಷ್ಟೇ.”

‘ನಾನು ಹೇಳಲು ಬಯಸಿದ್ದ, ಮಾಡಲು ಬಯಸಿದ್ದ ಎಷ್ಟೋ ವಿಷಯಗಳಿದ್ದವು’ ಎಂದು ನೀವು ಹೇಳಬಹುದು. ಅದು ನಿಜ. ಆದರೆ ‘ನಾನು ಪರಿಪೂರ್ಣ ತಂದೆ/ತಾಯಿ ಇಲ್ಲವೆ ಮಗ/ಮಗಳಾಗಿದ್ದೆ’ ಎಂದು ನಮ್ಮಲ್ಲಿ ಹೇಳಬಲ್ಲವರು ಯಾರು? ಬೈಬಲ್‌ ನಮಗೆ ಜ್ಞಾಪಕಹುಟ್ಟಿಸುವುದು: ‘ನಾವೆಲ್ಲರೂ ಅನೇಕ ಬಾರಿ ಎಡವುತ್ತೇವೆ. ಯಾವನಾದರೂ ಮಾತಿನಲ್ಲಿ ಎಡವದಿರುವುದಾದರೆ ಅಂಥವನು ಪರಿಪೂರ್ಣನು ಆಗಿದ್ದಾನೆ.’ (ಯಾಕೋಬ 3:2; ರೋಮನ್ನರಿಗೆ 5:12) ಹೀಗಿರುವುದರಿಂದ ನೀವು ಪರಿಪೂರ್ಣರಲ್ಲ ಎಂಬ ಮಾತನ್ನು ಒಪ್ಪಿಕೊಳ್ಳಿ. ನೀವು ‘ಹೀಗೆ ಮಾಡಬೇಕಿತ್ತು, ಹಾಗೆ ಹೇಳಬೇಕಿತ್ತು’ ಎಂದು ಯೋಚಿಸುತ್ತಾ ಕೂತರೆ ಏನೂ ಪ್ರಯೋಜನವಿಲ್ಲ. ಬದಲಾಗಿ ದುಃಖದಿಂದ ಚೇತರಿಸಿಕೊಳ್ಳಲು ಹೆಚ್ಚು ಸಮಯ ತಗಲೀತು. *

[ಪಾದಟಿಪ್ಪಣಿ]

^ ಈ ಚೌಕದಲ್ಲಿರುವ ವಿಷಯವನ್ನು, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ ಎಂಬ ಬ್ರೋಷರ್‌ನಿಂದ ತೆಗೆಯಲಾಗಿದೆ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

[ಪುಟ 29ರಲ್ಲಿರುವ ಚಿತ್ರ]

ದುಃಖಿಸುತ್ತಿರುವ ವಯಸ್ಕ ಮಕ್ಕಳನ್ನು ಸ್ವತಃ ದುಃಖದಲ್ಲಿರುವ ವೃದ್ಧ ಹೆತ್ತವರೇ ಕೆಲವೊಮ್ಮೆ ಸಂತೈಸಬೇಕಾಗುತ್ತದೆ

[ಪುಟ 32ರಲ್ಲಿರುವ ಚಿತ್ರಗಳು]

ಡೈರಿ ಬರೆದಿಡುವುದು, ಫೋಟೋಗಳನ್ನು ನೋಡುವುದು, ಇತರರ ನೆರವನ್ನು ಸ್ವೀಕರಿಸುವುದು—ಇವೆಲ್ಲ ಆತ್ಮೀಯರೊಬ್ಬರ ಸಾವಿನ ನೋವನ್ನು ನಿಭಾಯಿಸುವ ವಿಧಗಳು