ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾತಿನ ಶಕ್ತಿ

ಮಾತಿನ ಶಕ್ತಿ

ಬೈಬಲಿನ ದೃಷ್ಟಿಕೋನ

ಮಾತಿನ ಶಕ್ತಿ

ಒಂದು ದೇಶದ ಪ್ರಧಾನ ಮಂತ್ರಿ ಒಬ್ಬ ವೃದ್ಧೆಯೊಂದಿಗೆ ನಯವಿನಯದಿಂದ ಮಾತಾಡಿದರು. ಆಕೆ ಹೊರಟದ್ದೇ ಸೈ ‘ದರಿದ್ರ ಹೆಂಗಸು, ಅವಳನ್ನು ಯಾಕೆ ಹತ್ತಿರ ಬಿಟ್ರಿ’ ಎಂದು ಸಿಬ್ಬಂದಿಯನ್ನು ಗದರಿಸಿದರು. ಅವರಿಗೆ ಮೈಕ್‌ ಆನ್‌ ಇದ್ದದ್ದು ಗೊತ್ತೇ ಇರಲಿಲ್ಲ! ಅವರಾಡಿದ ಆ ಮಾತನ್ನು ಕೇಳಿಸಿಕೊಂಡ ಇಡೀ ದೇಶ ಬೆಚ್ಚಿಬಿತ್ತು. ಮರುಚುನಾವಣೆಗೆ ಇನ್ನೇನು ಎಂಟು ದಿನಗಳು ಉಳಿದಿದ್ದವಷ್ಟೇ. ತನ್ನ ಮುಖಕ್ಕೆ ತಾನೇ ಮಸಿಬಳಿದುಕೊಂಡ ಈ ಪ್ರಧಾನ ಮಂತ್ರಿ ಚುನಾವಣೆಯಲ್ಲಿ ಸೋತುಹೋದರು.

ನಾಲಗೆಯ ಮೇಲೆ ಸಂಪೂರ್ಣ ಹತೋಟಿ ಸಾಧಿಸಿರುವ ಮನುಷ್ಯನೇ ಇಲ್ಲ. (ಯಾಕೋಬ 3:2) ಆದರೆ ನಾವಾಡುವ ಮಾತುಗಳ ಬಗ್ಗೆ ಎಚ್ಚರವಹಿಸುವ ಮಹತ್ವವನ್ನು ಮೇಲಿನ ಘಟನೆ ತೋರಿಸುತ್ತದೆ. ನಮ್ಮ ಹೆಸರು, ವೃತ್ತಿ ಜೀವನ, ಸ್ನೇಹ-ಸಂಬಂಧಗಳ ಏಳುಬೀಳುಗಳೆಲ್ಲವೂ ನಮ್ಮ ಮಾತಿನ ಮೇಲೆ ಹೊಂದಿಕೊಂಡಿವೆ.

ಆದರೆ ಮಾತುಗಳ ಪ್ರಭಾವ ಇಲ್ಲಿಗೆ ಮುಗಿಯುವುದಿಲ್ಲ. ನಾವು ಆಂತರ್ಯದಲ್ಲಿ ನಿಜಕ್ಕೂ ಎಂಥವರೆಂದು ನಮ್ಮ ಮಾತುಗಳು ತೋರಿಸಿಕೊಡುತ್ತವೆ ಎಂದು ಬೈಬಲ್‌ ತಿಳಿಸುತ್ತದೆ. “ಹೃದಯದಲ್ಲಿ ತುಂಬಿರುವುದನ್ನೇ ಬಾಯಿ ಮಾತಾಡುತ್ತದೆ” ಎಂದನು ಯೇಸು. (ಮತ್ತಾಯ 12:34) ನಾವಾಡುವ ಮಾತುಗಳು ನಮ್ಮ ಅನಿಸಿಕೆ, ಯೋಚನೆ, ಭಾವನೆಗಳಿಗೆ ಹಿಡಿದ ಕನ್ನಡಿಯಂತಿರುವುದರಿಂದ ನಾವು ಸಾಮಾನ್ಯವಾಗಿ ಏನು ಮಾತಾಡುತ್ತೇವೆ, ಹೇಗೆ ಮಾತಾಡುತ್ತೇವೆ ಎಂಬುದನ್ನು ಪರೀಕ್ಷಿಸಿ ನೋಡಬೇಕು. ಈ ವಿಷಯದಲ್ಲಿ ಬೈಬಲ್‌ ಏನಾದರೂ ಸಹಾಯಮಾಡಬಲ್ಲದೇ? ಖಂಡಿತ! ಮುಂದೆ ಓದುತ್ತಾ ಹೋಗಿ.

ಮಾತನ್ನು ಉತ್ತಮಗೊಳಿಸಲು. . .

ಮಾತಿನ ಮೂಲ ನಮ್ಮ ಯೋಚನೆಗಳು. ಆದ್ದರಿಂದ ಏನು ಮಾತಾಡುತ್ತೇವೆ, ಹೇಗೆ ಮಾತಾಡುತ್ತೇವೆ ಎಂಬುದನ್ನು ಉತ್ತಮಗೊಳಿಸಬೇಕಾದರೆ ಮೊದಲು ನಮ್ಮ ಯೋಚನಾ ಧಾಟಿ ಉತ್ತಮಗೊಳ್ಳಬೇಕು. ನಮ್ಮ ಯೋಚನೆ ಉತ್ತಮಗೊಳ್ಳಬೇಕಾದರೆ ದೇವರ ವಾಕ್ಯದ ಸಲಹೆಯನ್ನು ಅಳವಡಿಸಿಕೊಳ್ಳಬೇಕು. ಆಗ ನಮ್ಮ ಮಾತೂ ಉತ್ತಮಗೊಳ್ಳುವುದು ಖರೆ.

ಹೃದಯದಲ್ಲಿ ಒಳ್ಳೇ ವಿಷಯ ತುಂಬಿಸಿ. ಎಂಥ ಒಳ್ಳೇ ವಿಷಯಗಳು? ಬೈಬಲಿನ ಉತ್ತರ: “ಯಾವ ವಿಷಯಗಳು ಸತ್ಯವಾಗಿವೆಯೊ, ಯಾವ ವಿಷಯಗಳು ಗಂಭೀರವಾದ ಚಿಂತನೆಗೆ ಅರ್ಹವಾಗಿವೆಯೊ, ಯಾವ ವಿಷಯಗಳು ನೀತಿಯುತವಾಗಿವೆಯೊ, ಯಾವ ವಿಷಯಗಳು ನೈತಿಕವಾಗಿ ಶುದ್ಧವಾಗಿವೆಯೊ, ಯಾವ ವಿಷಯಗಳು ಪ್ರೀತಿಯೋಗ್ಯವಾಗಿವೆಯೊ, ಯಾವ ವಿಷಯಗಳ ಕುರಿತು ಮೆಚ್ಚುಗೆಯ ಮಾತುಗಳು ನುಡಿಯಲ್ಪಟ್ಟಿವೆಯೊ, ಸದ್ಗುಣವಾಗಿರುವ ಯಾವುದಿದ್ದರೂ ಮತ್ತು ಸ್ತುತಿಗೆ ಯೋಗ್ಯವಾಗಿರುವ ಯಾವುದೇ ವಿಷಯವಿದ್ದರೂ ಅಂಥ ವಿಷಯಗಳನ್ನು ಲಕ್ಷ್ಯಕ್ಕೆ ತಂದುಕೊಳ್ಳುತ್ತಾ ಇರಿ.”ಫಿಲಿಪ್ಪಿ 4:8.

ಈ ಸಲಹೆ ಪಾಲಿಸಿದರೆ ಕೆಟ್ಟ ಆಲೋಚನೆಗಳನ್ನು ಮನಸ್ಸಿನಿಂದ ಹೊಡೆದೋಡಿಸಬಹುದು. ನಾವು ನೋಡುವ, ಓದುವ ವಿಷಯಗಳು ನಮ್ಮ ಯೋಚನೆಗಳಿಗೆ ನೀರೆರೆದು ಅವುಗಳನ್ನು ಬೆಳೆಸುತ್ತವೆ ಎಂಬುದನ್ನು ಮರೆಯಬಾರದು. ಹಾಗಾಗಿ ನಕಾರಾತ್ಮಕ ಅಶುದ್ಧ ವಿಚಾರಗಳಿಂದ ಮುಕ್ತರಾಗಿರಬೇಕಾದರೆ ನಕಾರಾತ್ಮಕ ಪ್ರಭಾವಗಳನ್ನು ದೂರವಿಡಿ. ಹಿಂಸಾತ್ಮಕ, ಅಶ್ಲೀಲ ಮನೋರಂಜನೆಯಿಂದ ದೂರವಿರಿ. (ಕೀರ್ತನೆ 11:5; ಎಫೆಸ 5:3, 4) ಇಷ್ಟೇ ಸಾಲದು. ನಿಮ್ಮ ಮನಸ್ಸನ್ನು ಶುದ್ಧ, ಧನಾತ್ಮಕ ವಿಷಯಗಳ ಕಡೆಗೆ ತಿರುಗಿಸಿ. ಈ ವಿಷಯದಲ್ಲೂ ಬೈಬಲ್‌ ಸಹಾಯಮಾಡುತ್ತದೆ. ಉದಾಹರಣೆಗೆ ಜ್ಞಾನೋಕ್ತಿ 4:20-27; ಎಫೆಸ 4:20-32 ಮತ್ತು ಯಾಕೋಬ 3:2-12 ಓದಿ. ಇವುಗಳಲ್ಲಿರುವ ತತ್ವಗಳನ್ನು ಅನ್ವಯಿಸುವುದರಿಂದ ನಿಮ್ಮ ಮಾತು ಹೇಗೆ ಉತ್ತಮಗೊಳ್ಳುವುದೆಂದು ಗಮನಿಸಿ. *

ಯೋಚಿಸಿ ಮಾತಾಡಿ. “ಕತ್ತಿತಿವಿದ ಹಾಗೆ ದುಡುಕಿ ಮಾತಾಡುವವರುಂಟು; ಮತಿವಂತರ ಮಾತೇ ಮದ್ದು” ಎನ್ನುತ್ತದೆ ಜ್ಞಾನೋಕ್ತಿ 12:18. ನೀವು ಆಗಾಗ ಇತರರನ್ನು ಮಾತಿನಿಂದ ‘ತಿವಿಯುತ್ತೀರೊ’ ಅಂದರೆ ಮನನೋಯಿಸುವ ರೀತಿಯಲ್ಲಿ ಮಾತಾಡುತ್ತೀರೊ? ಹಾಗಿದ್ದರೆ ಇನ್ನು ಮುಂದೆ ಯೋಚಿಸಿ ಮಾತಾಡಲು ಪ್ರಯತ್ನಿಸುವುದು ಒಳ್ಳೇದು. ಜ್ಞಾನೋಕ್ತಿ 15:28ರ ಬುದ್ಧಿವಾದ ತುಂಬ ಉಪಯುಕ್ತ: “ಶಿಷ್ಟನ ಹೃದಯ ವಿವೇಚಿಸಿ ಉತ್ತರಕೊಡುತ್ತದೆ; ದುಷ್ಟನ ಬಾಯಿ ಕೆಟ್ಟದ್ದನ್ನು ಕಕ್ಕುತ್ತದೆ.”

ಒಂದು ಗುರಿ ಇಡಿ. ಇನ್ನು ಒಂದು ತಿಂಗಳಿನ ವರೆಗೆ ನಾನು ಬಾಯಿಗೆ ಬಂದಂತೆ ಒದರಿಬಿಡುವುದಿಲ್ಲ, ಮುಖ್ಯವಾಗಿ ಸಿಟ್ಟುಬಂದಾಗ ದುಡುಕಿ ಮಾತಾಡಲ್ಲ ಎಂಬ ಗುರಿಯನ್ನಿಡಿ. ಈ ಲೇಖನದಲ್ಲಿ ಕೊಡಲಾದ ವಚನಗಳ ಕುರಿತು ಆಲೋಚಿಸಿ. ಪ್ರೀತಿಯಿಂದ, ವಿವೇಚನೆಯಿಂದ, ಶಾಂತವಾಗಿ ಮಾತಾಡಲು ಸರ್ವಪ್ರಯತ್ನ ಮಾಡಿ. (ಜ್ಞಾನೋಕ್ತಿ 15:1-4, 23) ಆದರೆ ಗೆಲುವನ್ನು ಸಾಧಿಸಲು. . .

ದೇವರಿಗೆ ಪ್ರಾರ್ಥಿಸಿ. “ಯೆಹೋವನೇ, . . . ನನ್ನ ಮಾತುಗಳೂ ನನ್ನ ಹೃದಯದ ಧ್ಯಾನವೂ ನಿನಗೆ ಸಮರ್ಪಕವಾಗಿರಲಿ” ಎಂದು ಒಬ್ಬ ಬೈಬಲ್‌ ಲೇಖಕನು ಬರೆದನು. (ಕೀರ್ತನೆ 19:14) ಯೆಹೋವ ದೇವರಿಗೆ ಇಷ್ಟವಾಗುವ ಮತ್ತು ಇತರರ ಮನಸ್ಸಿಗೆ ಮುದ ನೀಡುವ ರೀತಿಯಲ್ಲಿ ಮಾತಾಡುವ ನಿಮ್ಮ ಇಚ್ಛೆಯನ್ನು ಆತನಿಗೆ ತಿಳಿಸಿ. ಜ್ಞಾನೋಕ್ತಿ 18:20, 21 ಹೇಳುವುದು: “ನಿನ್ನ ಮಾತು ಮುತ್ತಿನಂತಿರಲಿ. ನಿನಗೆ ಅದರಿಂದ ಸಂತೋಷ ಸಿಗುವುದು. ಮಾತುಗಳಿಗೆ ಜೀವಮರಣಗಳನ್ನು ತರುವ ಶಕ್ತಿಯಿದೆ!”—ಕಂಟೆಂಪರರಿ ಇಂಗ್ಲಿಷ್‌ ವರ್ಷನ್‌.

ದೇವರ ವಾಕ್ಯವನ್ನು ಕನ್ನಡಿಯಂತೆ ಬಳಸಿ. ಬೈಬಲ್‌ ಒಂದು ಕನ್ನಡಿಯಂತಿದೆ. ಅದನ್ನು ಬಳಸಿ ನಿಮ್ಮನ್ನು ತಿದ್ದಿಕೊಳ್ಳಲು ಸಾಧ್ಯ. (ಯಾಕೋಬ 1:23-25) ಕೆಳಗೆ ಮೂರು ಬೈಬಲ್‌ ವಚನಗಳನ್ನು ಕೊಡಲಾಗಿದೆ. ಅದನ್ನು ಓದುವಾಗ ಹೀಗೆ ಕೇಳಿಕೊಳ್ಳಿ: ‘ನನ್ನ ಮಾತು ಹೇಗಿದೆ? ಅದರ ಬಗ್ಗೆ ಇತರರ ಅಭಿಪ್ರಾಯ ಏನು?’

“ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವದು; ಬಿರುನುಡಿಯು ಸಿಟ್ಟನ್ನೇರಿಸುವದು.” (ಜ್ಞಾನೋಕ್ತಿ 15:1) ನೀವು ಶಾಂತಿಗೆ ಇಂಬು ಕೊಡುವಂಥ ರೀತಿಯಲ್ಲಿ ಮೃದುವಾಗಿ ಮಾತಾಡುತ್ತೀರೋ?

“ನಿಮ್ಮ ಬಾಯಿಂದ ಯಾವ ಹೊಲಸು ಮಾತೂ ಹೊರಡದಿರಲಿ; ಆದರೆ ಅಗತ್ಯಕ್ಕನುಸಾರ ಭಕ್ತಿವೃದ್ಧಿಮಾಡಲು ಯೋಗ್ಯವಾಗಿರುವ ಮಾತನ್ನು ಆಡಿರಿ; ಇದು ಕೇಳುವವರಿಗೆ ಪ್ರಯೋಜನವನ್ನು ಉಂಟುಮಾಡಬಹುದು.” (ಎಫೆಸ 4:29) ಕೇಳುವವರ ಮೇಲೆ ನಿಮ್ಮ ಮಾತು ಒಳ್ಳೇ ಪರಿಣಾಮ ಬೀರುತ್ತದೊ?

“ನಿಮ್ಮ ಮಾತು ಯಾವಾಗಲೂ ಸೌಜನ್ಯವುಳ್ಳದ್ದಾಗಿಯೂ ಉಪ್ಪಿನಿಂದ ಹದಗೊಳಿಸಲ್ಪಟ್ಟದ್ದಾಗಿಯೂ ಇರಲಿ; ಹೀಗೆ ನೀವು ಪ್ರತಿಯೊಬ್ಬರಿಗೆ ಹೇಗೆ ಉತ್ತರಕೊಡಬೇಕು ಎಂಬುದನ್ನು ತಿಳಿದುಕೊಳ್ಳುವಿರಿ.” (ಕೊಲೊಸ್ಸೆ 4:6) ಕಾವೇರಿದ ಸನ್ನಿವೇಶಗಳಲ್ಲಾದರೂ ಸರಿ ಬೇರೆಯವರಿಗೆ ಸ್ವೀಕರಿಸಲು ಕಷ್ಟವಾಗದ ರೀತಿಯಲ್ಲಿ, ಸೌಜನ್ಯದಿಂದ ಮಾತಾಡಲು ಪ್ರಯತ್ನಿಸುತ್ತೀರೊ?

ಕನ್ನಡಿ ನೋಡಿ ನಿಮ್ಮ ವೇಷಭೂಷಣ ಸರಿಪಡಿಸಿಕೊಂಡ ಮೇಲೆ ನಿಮ್ಮ ತೋರಿಕೆಯಿಂದ ನಿಮಗೂ ಖುಷಿ, ಬೇರೆಯವರ ಕಣ್ಣಿಗೂ ಹಿತ. ದೇವರ ವಾಕ್ಯದ ಕನ್ನಡಿಯನ್ನು ನೋಡಿ ನೀವು ಏನು ಮಾತಾಡುತ್ತೀರಿ, ಹೇಗೆ ಮಾತಾಡುತ್ತೀರಿ ಎಂಬುದನ್ನು ಉತ್ತಮಗೊಳಿಸಿದರೆ ಎಲ್ಲರಿಗೂ ಸಂತೋಷ. (g11-E 06)

[ಪಾದಟಿಪ್ಪಣಿ]

^ ಬೈಬಲ್‌ ಆಧರಿತವಾದ ಇನ್ನಷ್ಟು ಮಾಹಿತಿ ನಿಮಗೆ www.watchtower.org ನಲ್ಲಿ ಲಭ್ಯ.

ಈ ಬಗ್ಗೆ ಯೋಚಿಸಿದ್ದೀರೋ?

● ನಿಮ್ಮ ಮಾತು ನಿಮ್ಮ ಬಗ್ಗೆ ಏನು ತಿಳಿಸುತ್ತದೆ?—ಲೂಕ 6:45.

● ನೀವು ಇತರರೊಂದಿಗೆ ಹೇಗೆ ಮಾತಾಡಬೇಕು? —ಎಫೆಸ 4:29; ಕೊಲೊಸ್ಸೆ 4:6.

● ನೀವು ಏನು ಮಾತಾಡುತ್ತೀರಿ, ಹೇಗೆ ಮಾತಾಡುತ್ತೀರಿ ಎಂಬುದನ್ನು ಉತ್ತಮಗೊಳಿಸಲು ಯಾವ ಪ್ರಾಯೋಗಿಕ ಕ್ರಮಗಳನ್ನು ತೆಗೆದುಕೊಳ್ಳಬಲ್ಲಿರಿ?—ಕೀರ್ತನೆ 19:14; ಫಿಲಿಪ್ಪಿ 4:8.

[ಪುಟ 32ರಲ್ಲಿರುವ ಚಿತ್ರ]

ಮಾತು ಹೆಸರನ್ನು ಕೆಡಿಸಬಲ್ಲದು, ಸಂಬಂಧಗಳಿಗೆ ಮುಳುವಾಗಬಲ್ಲದು