ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೋಶಿಯಲ್‌ ನೆಟ್‌ವರ್ಕಿಂಗ್‌ ಬಗ್ಗೆ ನನಗೆಲ್ಲ ತಿಳಿದಿದೆಯಾ? ಭಾಗ 1

ಸೋಶಿಯಲ್‌ ನೆಟ್‌ವರ್ಕಿಂಗ್‌ ಬಗ್ಗೆ ನನಗೆಲ್ಲ ತಿಳಿದಿದೆಯಾ? ಭಾಗ 1

ಯುವಜನರ ಪ್ರಶ್ನೆ

ಸೋಶಿಯಲ್‌ ನೆಟ್‌ವರ್ಕಿಂಗ್‌ ಬಗ್ಗೆ ನನಗೆಲ್ಲ ತಿಳಿದಿದೆಯಾ? ಭಾಗ 1

“ನನಗೆ ಬೇರೆ ಬೇರೆ ದೇಶಗಳಲ್ಲಿ ಸ್ನೇಹಿತರಿದ್ದಾರೆ. ಅವರೆಲ್ಲರ ನಂಟು ಉಳಿಸಿಕೊಳ್ಳೋದಿಕ್ಕೆ ಸಾಧ್ಯವಾಗೋದು ಸೋಶಿಯಲ್‌ ನೆಟ್‌ವರ್ಕಿಂಗ್‌ ಮೂಲಕ. ಅವ್ರು ತುಂಬ ದೂರದಲ್ಲಿದ್ರೂ ಆವಾಗವಾಗ ಮಾತಾಡ್ತಾ ಇರ್ಬೋದು.”—ಸುನೈನಾ, 17. *

“ಸೋಶಿಯಲ್‌ ನೆಟ್‌ವರ್ಕಿಂಗ್‌ನಿಂದ ಸಮಯ ವ್ಯರ್ಥ. ಮುಖಾಮುಖಿ ಮಾತಾಡಲು ಇಷ್ಟವಿಲ್ಲದ ಜನ್ರಿಗೇ ಅದು ಸರಿ. ಒಬ್ರನ್ನೊಬ್ರು ನೋಡಿ ಮಾತಾಡಿದ್ರೆ ಮಾತ್ರ ಸಂಬಂಧ ಉಳಿಯುತ್ತೆ ಅನ್ನೋದು ನನ್ನಭಿಪ್ರಾಯ.”—ಗೌರವ್‌, 19.

ಈಇಬ್ಬರಲ್ಲಿ ಯಾರ ಮಾತಿಗೆ ಸೈ ಎನ್ನುತ್ತೀರಿ? ಏನಿದ್ದರೂ ಒಂದಂತೂ ಸತ್ಯ, ಸೋಶಿಯಲ್‌ ನೆಟ್‌ವರ್ಕಿಂಗ್‌ ಪ್ರಖ್ಯಾತಿಯ ಶಿಖರವನ್ನೇರಿದೆ. * ಇಲ್ಲೊಂದು ಅಚ್ಚರಿಯ ಸಂಗತಿ ಗಮನಿಸಿ: 5 ಕೋಟಿ ಜನರನ್ನು ತಲುಪಲು ರೇಡಿಯೋ 38 ವರ್ಷ, ಟಿ.ವಿ. 13 ವರ್ಷ, ಇಂಟರ್‌ನೆಟ್‌ 4 ವರ್ಷ ತೆಗೆದುಕೊಂಡಿತು. ಫೇಸ್‌ಬುಕ್‌ ಹೆಸರಿನ ಸಾಮಾಜಿಕ ಸಂಪರ್ಕ ಜಾಲತಾಣ ಇತ್ತೀಚಿನ ಬರೇ 1 ವರ್ಷದಲ್ಲಿ 20 ಕೋಟಿ ಬಳಕೆದಾರರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತು!

ಈ ಕೆಳಗಿನ ಹೇಳಿಕೆ ಬಗ್ಗೆ ಏನು ಹೇಳುತ್ತೀರಿ?

ಸೋಶಿಯಲ್‌ ನೆಟ್‌ವರ್ಕ್‌ ತಾಣಗಳ ಬಳಕೆದಾರರಲ್ಲಿ ಹದಿವಯಸ್ಕರದ್ದೇ ಮೇಲುಗೈ. ___ ಹೌದು ___ ಇಲ್ಲ

ಸರಿ ಉತ್ತರ: ಇಲ್ಲ. ಅತಿ ಜನಪ್ರಿಯವಾದ ಸೋಶಿಯಲ್‌ ನೆಟ್‌ವರ್ಕ್‌ವೊಂದರ ಬಳಕೆದಾರರಲ್ಲಿ ಸುಮಾರು 67% ಮಂದಿ 25 ಅಥವಾ ಮೇಲ್ಪಟ್ಟ ವಯೋಮಿತಿಯವರು. 2009ರಷ್ಟಕ್ಕೆ ಅತಿ ಹೆಚ್ಚು ಬಳಕೆಮಾಡುವವರ ಸ್ಥಾನವನ್ನು 55ಕ್ಕೂ ಮೇಲ್ಪಟ್ಟ ವಯೋಮಿತಿಯವರು ಆಕ್ರಮಿಸಿದ್ದರು!

ಆದರೆ ಲಕ್ಷಾನುಲಕ್ಷ ಯುವಜನತೆ ಸೋಶಿಯಲ್‌ ನೆಟ್‌ವರ್ಕ್‌ ಬಳಸುತ್ತಿರುವುದೂ ಸತ್ಯ. ಕೆಲವರಿಗಂತೂ ಅದು ಅಚ್ಚುಮೆಚ್ಚಿನ ಸಂವಹನ ಮಾಧ್ಯಮ. ಹರೆಯದ ಹುಡುಗಿ ಜೆಸಿಕಾ “ನನ್ನ ಖಾತೆಯನ್ನು ರದ್ದುಗೊಳಿಸಿದ್ದೆ. ಆದ್ರೆ ಅದನ್ನು ಪುನಃ ತೆರಿಬೇಕಾಗಿ ಬಂತು. ಏಕೆಂದರೆ ಯಾರೂ ನನಗೆ ಫೋನ್‌ ಮಾಡ್ತಿರಲಿಲ್ಲ. ನಾವು ಸೋಶಿಯಲ್‌ ನೆಟ್‌ವರ್ಕ್‌ ಬಳಸ್ತಿಲ್ಲ ಅಂದ್ರೆ ಜನರು ನಮ್ಮನ್ನು ಮರೆತೇ ಬಿಡ್ತಾರೆ ಅನ್ಸುತ್ತೆ!!” ಎನ್ನುತ್ತಾಳೆ.

ಸೋಶಿಯಲ್‌ ನೆಟ್‌ವರ್ಕಿಂಗ್‌ ಅಂದರೆ ಯಾಕಿಷ್ಟು ಆಕರ್ಷಣೆ? ಅಂಥದ್ದೇನಿದೆ ಅದರಲ್ಲಿ? ಇನ್ನೊಬ್ಬರ ಜೊತೆ ಸಂವಹನ ಮಾಡುವುದು ಮಾನವನ ಹುಟ್ಟುಗುಣ. ಬಾಂಧವ್ಯ ಬೆಸೆಯುವ ಈ ಆಸೆಯೇ ಸೋಶಿಯಲ್‌ ನೆಟ್‌ವರ್ಕ್‌ನ ಬಂಡವಾಳ. ಆದರೆ ಅನೇಕರು ಇದಕ್ಕೆ ಮುಗಿಬೀಳುತ್ತಿರುವ ಕಾರಣಗಳನ್ನು ನಾವೀಗ ನೋಡೋಣ.

1. ಸಂಪರ್ಕಿಸಲು ಅನುಕೂಲ.

“ಸ್ನೇಹಿತರ ಸಂಪರ್ಕದಲ್ಲಿರೋದು ತುಂಬಾನೇ ಕಷ್ಟ. ಆದ್ರೆ ಎಲ್ರೂ ಒಂದೇ ಸೈಟಲ್ಲಿ ಇದ್ರೆ ಅದು ತುಂಬಾ ಸುಲಭ.”—ಲೀನಾ, 20.

“ನನ್ನ ಹೇಳಿಕೆಗಳನ್ನ ವೆಬ್‌ ಸೈಟಲ್ಲಿ ‘ಪೋಸ್ಟ್‌’ ಮಾಡಿದ್ರೆ ನನ್ನೆಲ್ಲಾ ಸ್ನೇಹಿತರಿಗೆ ಒಮ್ಮೆಲೆ ಇ-ಮೇಲ್‌ ಕಳಿಸಿದ ಹಾಗಿರುತ್ತೆ.”—ಕೃತಿಕಾ, 20.

2. ಸಮಪ್ರಾಯದವರ ಒತ್ತಡ.

“ನನಗೊಂದು ಖಾತೆ ಇಲ್ಲದಿದ್ರೂ ‘ಸ್ನೇಹಿತರ ಪಟ್ಟಿಗೆ’ ಸೇರಿಕೊಳ್ಳೋ ಆಹ್ವಾನ ನನಗೆ ಯಾವಾಗ್ಲೂ ಬರ್ತಾ ಇರುತ್ತೆ.”—ನಂದಿನಿ, 22.

“ನಾನು ಖಾತೆ ತೆರಿಬಾರದು ಎಂದಿದ್ದೇನೆ ಅಂತ ಹೇಳಿದ್ರೆ ಜನ್ರು ನನಗೇನೋ ತಲೆಕಟ್ಟಿದೆ ಎಂಬಂತೆ ಲುಕ್‌ ಕೊಡ್ತಾರೆ.”—ಇಂಚರ, 18.

3. ಮಾಧ್ಯಮದ ಒತ್ತಡ.

“ಮೊಬೈಲ್‌, ಇಂಟರ್‌ನೆಟ್‌ನಂಥ ಎಲೆಕ್ಟ್ರಾನಿಕ್‌ ಮಾಧ್ಯಮಗಳ ಮೂಲಕ ಜನ್ರನ್ನು ಸಂಪರ್ಕದಲ್ಲಿಡದಿದ್ರೆ ನಿಮಗೆ ಯಾವ ಫ್ರೆಂಡ್ಸೂ ಇರಲ್ಲ. ಫ್ರೆಂಡ್ಸ್‌ ಇಲ್ಲದ ಬದುಕು ಅದೆಂಥ ಬದುಕು. ನೀವು ಸೋಶಿಯಲ್‌ ನೆಟ್‌ವರ್ಕ್‌ ಬಳಸದಿದ್ರೆ ನಿಮಗೆ ಬೆಲೆನೇ ಇಲ್ಲ ಅಂತ ಈ ಮಾಧ್ಯಮದವರು ಕಿರಿಕ್‌ ಮಾಡ್ತಾರೆ.”—ಕಟ್ರಿನಾ, 18.

4. ಶಾಲೆ.

“ನನ್ನ ಶಿಕ್ಷಕರು ಸೋಶಿಯಲ್‌ ನೆಟ್‌ವರ್ಕ್‌ ಬಳಸ್ತಾರೆ. ಕ್ಲಾಸಲ್ಲಿ ಕ್ವಿಜ್‌ ಯಾವಾಗ ಇದೆ ಅಂತ ಅದ್ರಲ್ಲಿ ಮೆಸೆಜ್‌ ಬಿಡ್ತಾರೆ. ಕೆಲವೊಮ್ಮೆ ಮ್ಯಾತ್ಸ್‌ ಏನಾದ್ರೂ ಅರ್ಥ ಆಗಿಲ್ಲಾಂದ್ರೆ ನನ್ನ ಸರ್‌ನ ವೆಬ್‌ಪೇಜ್‌ ಮೇಲೆ ಮೆಸೆಜ್‌ ‘ಪೋಸ್ಟ್‌’ ಮಾಡಿದ್ರೆ ಸಾಕು ಅವರು ಆನ್‌ಲೈನ್‌ನಲ್ಲೇ ಅದನ್ನು ಕಲಿಸಿಕೊಡ್ತಾರೆ.”—ಮಾನಸ, 17.

5. ಉದ್ಯೋಗ.

“ಕೆಲ್ಸ ಹುಡುಕಲು ಕೆಲವರು ಸೋಶಿಯಲ್‌ ನೆಟ್‌ವರ್ಕ್‌ ಬಳಸ್ತಾರೆ. ಹೀಗೆ ಕೆಲ್ಸ ಸಿಗುವುದೂ ಇದೆ.”—ಅನುಷಾ, 20.

“ನನ್ನ ಕೆಲ್ಸಕ್ಕಾಗಿ ನೆಟ್‌ವರ್ಕ್‌ ಸೈಟ್‌ ಬಳಸ್ತೇನೆ. ನಾನು ತಯಾರಿಸುತ್ತಿರೋ ಗ್ರ್ಯಾಫಿಕ್‌ ಡಿಸೈನ್‌ಗಳನ್ನು ಗಿರಾಕಿಗಳಿಗೆ ಇದರಿಂದ ನೋಡಲು ಆಗುತ್ತೆ.”—ಡೇವಿಡ್‌, 21.

ನಿಮಗೂ ಸೋಶಿಯಲ್‌ ನೆಟ್‌ವರ್ಕ್‌ನಲ್ಲಿ ಒಂದು ಖಾತೆ ಇರಬೇಕೇ? ನೀವು ಹೆತ್ತವರ ಜೊತೆಗೆ ವಾಸಿಸುತ್ತಿರುವಲ್ಲಿ ಅವರು ಅದನ್ನು ನಿರ್ಧರಿಸಬೇಕು. * (ಜ್ಞಾನೋಕ್ತಿ 6:20) ಖಾತೆ ತೆರೆಯುವುದು ನಿಮ್ಮ ಹೆತ್ತವರಿಗೆ ಇಷ್ಟವಿಲ್ಲದಿದ್ದಲ್ಲಿ ತೆರೆಯಬೇಡಿ, ಅವರ ಮಾತು ಕೇಳಿ.—ಎಫೆಸ 6:1.

ಕೆಲವು ಹೆತ್ತವರು ತಮ್ಮ ಪ್ರೌಢ ಮಕ್ಕಳಿಗೆ ಸೋಶಿಯಲ್‌ ನೆಟ್‌ವರ್ಕ್‌ ಬಳಸಲು ಅನುಮತಿ ನೀಡುತ್ತಾರೆ. ಹಾಗೇ ಅವರ ಮೇಲೆ ಒಂದು ಕಣ್ಣಿಡುತ್ತಾರೆ. ನಿಮ್ಮ ಹೆತ್ತವರು ಹಾಗೆ ಮಾಡುತ್ತಿರುವಲ್ಲಿ ಅವರು ಅನಾವಶ್ಯಕವಾಗಿ ನಿಮ್ಮ ವಿಷಯದಲ್ಲಿ ತಲೆಹಾಕುತ್ತಿದ್ದಾರೆಂದು ಅರ್ಥವೋ? ಖಂಡಿತ ಇಲ್ಲ. ಇಂಟರ್‌ನೆಟ್‌ನ ಇನ್ನಿತರ ಬಳಕೆಯಂತೆ ಸೋಶಿಯಲ್‌ ನೆಟ್‌ವರ್ಕ್‌ನಿಂದ ಸಹಾಯವೂ ಇದೆ ಅಪಾಯವೂ ಇದೆ. ಹಾಗಾಗಿ ನಿಮ್ಮ ಹೆತ್ತವರ ಆತಂಕ ಸಹಜವೇ. ಸೋಶಿಯಲ್‌ ನೆಟ್‌ವರ್ಕ್‌ ಖಾತೆ ತೆರೆಯಲು ಹೆತ್ತವರು ಅನುಮತಿ ನೀಡಿರುವಲ್ಲಿ, ನೀವದನ್ನು ಬಳಸುವಾಗ ಅಪಾಯಗಳಿಂದ ಹೇಗೆ ದೂರವಿರಬಲ್ಲಿರಿ?

ಸುರಕ್ಷಿತ ಬಳಕೆ

ಕೆಲವೊಂದು ವಿಧಗಳಲ್ಲಿ ಇಂಟರ್‌ನೆಟ್‌ ಬಳಕೆ ಗಾಡಿ ಓಡಿಸುವಂತಿರುತ್ತದೆ. ನಿಮಗೆ ಗೊತ್ತಿರುವಂತೆ ಲೈಸನ್ಸ್‌ ಇರುವ ಚಾಲಕರೆಲ್ಲ ಜವಾಬ್ದಾರಿಯುತ ಚಾಲಕರಾಗಿರುವುದಿಲ್ಲ. ಅಜಾಗ್ರತೆ, ನಿರ್ಲಕ್ಷ್ಯದಿಂದ ಗಾಡಿ ಓಡಿಸಿ ಅನೇಕರು ಭೀಕರ ಅಪಘಾತಗಳಿಗೆ ಈಡಾಗಿದ್ದಾರೆ.

ಇಂಟರ್‌ನೆಟ್‌ ಬಳಕೆದಾರರ ವಿಷಯದಲ್ಲೂ ಇದು ಸತ್ಯ. ಇಂಟರ್‌ನೆಟ್‌ ಅನ್ನು ಕೆಲವರು ಜಾಗ್ರತೆಯಿಂದ ಬಳಸಿದರೆ ಇನ್ನು ಕೆಲವರು ಯದ್ವಾತದ್ವಾ ಬಳಸುತ್ತಾರೆ. ಸೋಶಿಯಲ್‌ ನೆಟ್‌ವರ್ಕ್‌ ಖಾತೆ ತೆರೆಯಲು ಹೆತ್ತವರು ಅನುಮತಿ ಕೊಟ್ಟಿರುವಲ್ಲಿ ನೀವದನ್ನು ಸುರಕ್ಷಿತವಾಗಿ ಬಳಸುವಿರಿ ಎಂಬ ಭರವಸೆ ಅವರಿಗಿದೆ. ಆ ಭರವಸೆಯನ್ನು ಕಾಪಾಡಿಕೊಂಡಿದ್ದೀರಾ? ಸೋಶಿಯಲ್‌ ನೆಟ್‌ವರ್ಕ್‌ ಅನ್ನು ‘ಸುಜ್ಞಾನ ಮತ್ತು ಬುದ್ಧಿಯಿಂದ’ ಬಳಸುತ್ತೀರೆಂದು ತೋರಿಸಿಕೊಟ್ಟಿದ್ದೀರಾ?—ಜ್ಞಾನೋಕ್ತಿ 3:21.

ಈ ಲೇಖನದಲ್ಲಿ ನಿಮ್ಮ ಗಂಭೀರ ಚಿಂತನೆಗೆ ಅರ್ಹವಾದ ಎರಡು ಪ್ರಾಮುಖ್ಯ ಅಂಶಗಳನ್ನು ಈಗ ಚರ್ಚಿಸಲಿದ್ದೇವೆ. ಅವೆಂದರೆ, ನಿಮ್ಮ ಖಾಸಗಿ ವಿವರಗಳು ಹಾಗೂ ನಿಮ್ಮ ಅಮೂಲ್ಯ ಸಮಯ. ನಿಮ್ಮ ಒಳ್ಳೇ ಹೆಸರು ಮತ್ತು ಸ್ನೇಹಿತರು ಎಂಬ ಇನ್ನೆರಡು ಅಂಶಗಳನ್ನು ಮುಂದಿನ ಲೇಖನ ಚರ್ಚಿಸಲಿದೆ.

ಖಾಸಗಿ ವಿವರಗಳು

ಸೋಶಿಯಲ್‌ ನೆಟ್‌ವರ್ಕ್‌ ಬಳಸುವಾಗ ಖಾಸಗಿ ವಿವರಗಳನ್ನು ಗೋಪ್ಯವಾಗಿಡುವ ಸಂಗತಿ ನಿಮ್ಮ ಮನಸ್ಸಿಗೆ ಬಂದಿರಲಿಕ್ಕಿಲ್ಲ. ಏಕೆಂದರೆ ನಿಮ್ಮ ಉದ್ದೇಶ ಹೊಸ ಬಾಂಧವ್ಯಗಳನ್ನು ಬೆಸೆಯುವುದಲ್ಲವೇ? ಆದರೆ ಖಾಸಗಿ ವಿವರಗಳ ಬಗ್ಗೆ ಎಚ್ಚರ ವಹಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.

ಉದಾಹರಣೆಗೆ ನಿಮ್ಮ ಹತ್ತಿರ ದೊಡ್ಡ ಮೊತ್ತದ ಹಣವಿದೆ ಎಂದಿಟ್ಟುಕೊಳ್ಳಿ. ಸ್ನೇಹಿತರ ಜೊತೆ ದಾರಿಯಲ್ಲಿ ನಡೆಯುತ್ತಿರುವಾಗ ಎಲ್ಲರ ಕಣ್ಣಿಗೆ ಬೀಳುವ ಹಾಗೆ ಅದನ್ನು ಇಡುವಿರಾ? ಅದು ಬುದ್ಧಿಯಿಲ್ಲದ ಕೆಲಸ ಅಲ್ಲವೇ? ಕಳ್ಳಕಾಕರನ್ನು ನೀವೇ ಕೈಬೀಸಿ ಕರೆದಂತೆ ಆಗುತ್ತದೆ! ನೀವು ಬುದ್ಧಿವಂತರಾದರೆ ಯಾರಿಗೂ ಕಾಣದ ಹಾಗೆ ಅದನ್ನು ಇಡುವಿರಿ.

ನಿಮ್ಮ ಖಾಸಗಿ ವಿವರಗಳು ಆ ದೊಡ್ಡ ಮೊತ್ತದ ಹಣದಂತೆ ಅಮೂಲ್ಯ. ಅದನ್ನು ಮನಸ್ಸಿನಲ್ಲಿಡುತ್ತಾ ಕೆಳಕಂಡ ಯಾವ್ಯಾವ ವಿಷಯಗಳನ್ನು ನೀವು ಅಪರಿಚಿತರಿಗೆ ಜಾಹೀರು ಮಾಡಲು ಬಯಸುವುದಿಲ್ಲ ಎಂದು ಟಿಕ್‌ ಹಾಕಿ.

___ ನನ್ನ ಮನೆ ವಿಳಾಸ

___ ನನ್ನ ಇ-ಮೇಲ್‌ ವಿಳಾಸ

___ ನನ್ನ ಶಾಲಾ/ಕಾಲೇಜಿನ ಹೆಸರು

___ ನಾನು ಮನೆಯಲ್ಲಿರುವ ಸಮಯ

___ ಮನೆಯಲ್ಲಿ ಯಾರೂ ಇಲ್ಲದಿರುವ ಸಮಯ

___ ನನ್ನ ಫೋಟೋಗಳು

___ ನನ್ನ ಅಭಿಪ್ರಾಯಗಳು

___ ನನ್ನ ಅಭಿರುಚಿಗಳು

ನೀವೆಷ್ಟೇ ಸ್ನೇಹಪರ ವ್ಯಕ್ತಿಯಾಗಿದ್ದರೂ ಮೇಲೆ ತಿಳಿಸಲಾದ ವಿಷಯಗಳಲ್ಲಿ ಕೆಲವನ್ನಾದರೂ ಸಿಕ್ಕಸಿಕ್ಕವರಿಗೆ ಹೇಳಬಾರದೆಂದು ಒಪ್ಪುವಿರಿ. ಆದರೆ ಅನೇಕ ಯುವಜನರು, ವಯಸ್ಕರು ಸಹ ಇಂಥ ವಿವರಗಳನ್ನು ಅರಿವಿಲ್ಲದೆ ಅಪರಿಚಿತರಿಗೆ ಜಾಹೀರುಪಡಿಸಿ ತೊಂದರೆಗೆ ಸಿಲುಕಿದ್ದಾರೆ! ಈ ಅಪಾಯದಿಂದ ಹೇಗೆ ತಪ್ಪಿಸಿಕೊಳ್ಳಬಲ್ಲಿರಿ?

ಸೋಶಿಯಲ್‌ ನೆಟ್‌ವರ್ಕ್‌ ಬಳಸಲು ಹೆತ್ತವರು ನಿಮಗೆ ಅನುಮತಿ ನೀಡಿರುವಲ್ಲಿ, ಪ್ರೈವಸಿ ಸೆಟ್ಟಿಂಗ್‌ಗಳ ಬಗ್ಗೆ ತಿಳಿದುಕೊಂಡು ಅವುಗಳನ್ನು ಬಳಸಿ. ನಿಮ್ಮ ನೆಟ್‌ವರ್ಕಿಂಗ್‌ ಸೈಟ್‌ ನಿಮ್ಮ ಖಾಸಗಿ ವಿಷಯಗಳನ್ನು ಗೋಪ್ಯವಾಗಿಡುತ್ತದೆಂದು ಸುಮ್ಮನೆ ಕೂರಬೇಡಿ. ಆ ಸೈಟ್‌ನ ಡಿಫಾಲ್ಟ್‌ ಸೆಟ್ಟಿಂಗ್‌ಗಳು ನಿಮಗರಿವಿಲ್ಲದಷ್ಟು ಹೆಚ್ಚು ಜನರು ನಿಮ್ಮ ವಿವರಗಳನ್ನು ಓದಲು, ಅವರ ಹೇಳಿಕೆಗಳನ್ನು ನಿಮ್ಮ ‘ಪೇಜ್‌ಗೆ’ ಹಾಕಲು ಎಡೆಮಾಡುತ್ತವೆ. ಆದ್ದರಿಂದಲೇ ಅಲಿಶಾ ಎಂಬ ಹುಡುಗಿ ತನ್ನ ‘ಪೋಸ್ಟ್‌ಗಳನ್ನು’ ತನ್ನ ಆಪ್ತ ಸ್ನೇಹಿತರು ಮಾತ್ರ ನೋಡಲು ಸಾಧ್ಯವಾಗುವಂತೆ ಪ್ರೈವಸಿ ಸೆಟ್ಟಿಂಗ್‌ ಅಳವಡಿಸಿಕೊಂಡಳು. “ನನ್ನ ಸ್ನೇಹಿತರಿಗಿರೋ ಕೆಲವು ಸ್ನೇಹಿತರ ಪರಿಚಯ ನನಗಿಲ್ಲ. ಆ ಅಪರಿಚಿತರು ನನ್ನ ಬಗ್ಗೆ ಓದುವುದು ನನಗಿಷ್ಟವಿಲ್ಲ” ಎನ್ನುತ್ತಾಳೆ ಅಲಿಶಾ.

ಆಪ್ತ ಸ್ನೇಹಿತರೊಂದಿಗೆ ಮಾತ್ರ ಸಂವಹನ ಮಾಡುತ್ತಿರುವುದಾದರೂ ಎಚ್ಚರ ಅಗತ್ಯ. 21ರ ಹರೆಯದ ಕಾರುಣ್ಯಳ ಪ್ರಕಾರ “ನಿಮ್ಮ ಸ್ನೇಹಿತರಿಂದ ಹೆಚ್ಚು ಹೇಳಿಕೆ ಪಡ್ಕೋಬೇಕೆಂಬ ಗೀಳು ನಿಮಗೆ ಹತ್ತಿಕೊಳ್ಳಬಹುದು. ಹಾಗಾಗಿ ಹೋಗ್ತಾ ಹೋಗ್ತಾ ನಿಮ್ಮ ಬಗ್ಗೆ ಜಾಸ್ತಿ ಮಾಹಿತಿ ಕೊಡ್ತೀರಿ ಆಮೇಲೆ ಕೊಡಬಾರದ ಮಾಹಿತಿಯನ್ನೂ ಕೊಟ್ಟುಬಿಡ್ತೀರಿ.”

ಯಾವತ್ತೂ ಮರೆಯಬಾರದ ಸಂಗತಿ ಏನೆಂದರೆ ಇಂಟರ್‌ನೆಟ್‌ನಲ್ಲಿ ಯಾವುದನ್ನೂ ಗೋಪ್ಯವಾಗಿ ಇಡಲು ಸಾಧ್ಯವಿಲ್ಲ. ಏಕೆಂದರೆ “ದೊಡ್ಡ ದೊಡ್ಡ ವೆಬ್‌ ಸೈಟ್‌ಗಳು ತಮ್ಮ ದತ್ತಾಂಶ ಸಂಗ್ರಹಗಳನ್ನು (databases) ಬ್ಯಾಕಪ್‌ ಆಗಿ ಇಟ್ಟುಕೊಳ್ಳುತ್ತವೆ” ಎನ್ನುತ್ತಾರೆ ಗ್ವೆನ್‌ ಶೂರ್‌ಗನ್‌ ಒಕೀಫೀ ಎಂಬವರು ತಮ್ಮ ಪುಸ್ತಕ ಸೈಬರ್‌ಸೇಫ್‌ನಲ್ಲಿ. “ಸೈಬರ್‌ಸ್ಪೇಸ್‌ನಲ್ಲಿ ನಾವು ಹಾಕಿರುವ ಮಾಹಿತಿ ಎಂದೂ ಅಳಿದುಹೋಗಲ್ಲ. ಅದು ಶಾಶ್ವತವಾಗಿ ಉಳಿಯುತ್ತದೆಂದೇ ಭಾವಿಸಬೇಕು. ಏಕೆಂದರೆ ಅದರ ಒಂದು ಕಾಪಿ ಎಲ್ಲಿಯಾದ್ರೂ ಇದ್ದೇ ಇರುತ್ತದೆ. ‘ಅದನ್ನೆಲ್ಲ ಯಾರು ಉಳಿಸಿ ಇಡ್ತಾರೆ’ ಎಂದು ನೆನಸಿದರೆ ನಮಗಿಂತ ದಡ್ಡರು ಇನ್ಯಾರೂ ಇಲ್ಲ” ಎನ್ನುತ್ತಾರೆ ಅವರು.

ಅಮೂಲ್ಯ ಸಮಯ

ನಿಮ್ಮ ಖಾಸಗಿ ವಿವರಗಳಂತೆ ನಿಮ್ಮ ಸಮಯವೂ ದೊಡ್ಡ ಮೊತ್ತದ ಹಣದಂತೆ ಅಮೂಲ್ಯ. ಆದ್ದರಿಂದ ನಿಮ್ಮ ಸಮಯವನ್ನು ‘ಬಜೆಟ್‌’ ಮಾಡಿ. (ಪ್ರಸಂಗಿ 3:1) ಇದು ಒಂದು ದೊಡ್ಡ ಸವಾಲೇ ಸರಿ. ಇಂಟರ್‌ನೆಟ್‌ನ ಇನ್ನಿತರ ಬಳಕೆಯಂತೆ ಸೋಶಿಯಲ್‌ ನೆಟ್‌ವರ್ಕಿಂಗ್‌ನ ವಿಷಯದಲ್ಲೂ ಇದು ಸತ್ಯ. *

“ಒಂದೇ ಒಂದು ನಿಮಿಷ ಕಣ್ಣಾಡಿಸ್ತೇನೆ ಎಂದುಕೊಂಡು ಶುರುಮಾಡಿದವಳು ಒಂದು ತಾಸಾದರೂ ಆನ್‌ಲೈನ್‌ನಲ್ಲೇ ಇರ್ತೇನೆ.”—ಅಮೃತ, 18.

“ನನಗೆ ಸೋಶಿಯಲ್‌ ನೆಟ್‌ವರ್ಕಿಂಗ್‌ನ ಗೀಳು ಹಿಡಿದಿತ್ತು. ನಾನು ಮಾಡಿರೋ ‘ಪೋಸ್ಟ್‌ಗಳ’ ಬಗ್ಗೆ ಜನ್ರ ಅಭಿಪ್ರಾಯ ಏನು, ಅವರೇನು ‘ಪೋಸ್ಟ್‌’ ಮಾಡಿದ್ದಾರೆ ಅಂತ ದಿನಾ ಶಾಲೆಯಿಂದ ಮನೆಗೆ ಬಂದ ಮೇಲೆ ನೋಡದಿರಲು ಆಗ್ತಿರ್ಲಿಲ್ಲ, ಅದ್ರಲ್ಲೇ ಎಷ್ಟೋ ತಾಸು ಕಳಿತಿದ್ದೆ.”—ಕ್ಲಾರ, 16.

“ಮೊಬೈಲಲ್ಲೇ ನಾನು ಸೋಶಿಯಲ್‌ ನೆಟ್‌ವರ್ಕಿಂಗ್‌ ಮಾಡ್ಬಹುದು. ಕ್ಲಾಸಿಗೆ ಹೋಗುವಾಗ, ಕ್ಲಾಸಲ್ಲಿ, ಮನೆಗೆ ಬರುವಾಗ ಅದನ್ನು ಬಳಸ್ತೇನೆ. ಮನೆಗೆ ಬಂದ ಮೇಲೂ ಕಂಪ್ಯೂಟರ್‌ ಮುಂದೆ ಕೂತ್ಕೊಳ್ತೇನೆ. ನನಗೆ ಅದರ ಗೀಳುಹಿಡಿದಿದೆ ಅಂತ ಗೊತ್ತಿದ್ರೂ ನಿಲ್ಲಿಸಲು ಇಷ್ಟವಿಲ್ಲ.”—ರಿಯಾನ, 17.

ಹೆತ್ತವರು ನಿಮಗೆ ಸೋಶಿಯಲ್‌ ನೆಟ್‌ವರ್ಕ್‌ ಬಳಸಲು ಅನುಮತಿ ಕೊಟ್ಟಿರುವಲ್ಲಿ, ಅದರಲ್ಲಿ ಪ್ರತಿದಿನ ಎಷ್ಟು ಸಮಯ ಕಳೆಯಬೇಕೆಂಬ ಮಿತಿ ಇಡಿ. ಆಮೇಲೆ ಎಷ್ಟೆಷ್ಟು ಸಮಯ ಕಳೆಯುತ್ತಿದ್ದೀರೆಂದು ಒಂದು ತಿಂಗಳ ವರೆಗೆ ಬರೆದಿಟ್ಟುಕೊಂಡು ನೀವಿಟ್ಟ ಮಿತಿಯನ್ನು ಪಾಲಿಸುತ್ತಿದ್ದೀರಾ ಎಂದು ನೋಡಿ. ಸಮಯ ಹಣವಿದ್ದಂತೆ ಎಂಬುದು ನೆನಪಿರಲಿ. ಸೋಶಿಯಲ್‌ ನೆಟ್‌ವರ್ಕ್‌ ನಿಮ್ಮನ್ನು ‘ದಿವಾಳಿ’ ಮಾಡದಂತೆ ಜಾಗ್ರತೆ ವಹಿಸಿ. ಏಕೆಂದರೆ ಜೀವನದಲ್ಲಿ ಇನ್ನೆಷ್ಟೋ ಪ್ರಾಮುಖ್ಯ ವಿಷಯಗಳಿಗೆ ನೀವು ಸಮಯ ಕೊಡಬೇಕಾಗಿದೆ!—ಎಫೆಸ 5:15, 16; ಫಿಲಿಪ್ಪಿ 1:10.

ಸಮಯವನ್ನು ಜಾಗ್ರತೆಯಿಂದ ವ್ಯಯಿಸಲು ಕೆಲವು ಯುವಜನರು ಏನು ಮಾಡಿದ್ದಾರೆಂದು ನೋಡಿ:

“ನನ್ನ ಖಾತೆಯನ್ನು ರದ್ದುಗೊಳಿಸಿದಾಗ ನನಗೆಷ್ಟು ಸಮಯ ಇತ್ತು ಗೊತ್ತಾ? ತುಂಬ ಫ್ರೀ ಅನಿಸಿತ್ತು! ಇತ್ತೀಚೆಗೆ ಪುನಃ ಖಾತೆ ತೆರ್ದೆ, ಆದ್ರೆ ಕಂಟ್ರೋಲಲ್ಲಿ ಇದ್ದೇನೆ. ತುಂಬ ದಿನ ಅದನ್ನು ನೋಡೋದೇ ಇಲ್ಲ, ಒಮ್ಮೊಮ್ಮೆ ಅಂತೂ ಮರೆತೇ ಬಿಡ್ತೇನೆ. ಸೋಶಿಯಲ್‌ ನೆಟ್‌ವರ್ಕಿಂಗ್‌ನಿಂದ ಸಮಯ ಸುಮ್ಮನೆ ಪೋಲಾಗುತ್ತಿದೆಯೆಂದು ಎಂದಾದರೂ ಅನಿಸಿದ್ರೆ ಕಣ್ಮುಚ್ಚಿ ನನ್ನ ಖಾತೆ ರದ್ದುಮಾಡಿಬಿಡ್ತೇನೆ.”—ಅಲಿಶಾ, 19.

“ನನ್ನ ಖಾತೆಯನ್ನು ಕೆಲವು ತಿಂಗಳುಗಳಿಗೆ ರದ್ದುಗೊಳ್ಸಿ ಆಗಾಗ ‘ನೆಟ್‌ವರ್ಕಿಂಗ್‌ ಬ್ರೇಕ್ಸ್‌’ ತಕ್ಕೊಳ್ತೇನೆ. ನೆಟ್‌ವರ್ಕಿಂಗ್‌ನಲ್ಲಿ ತುಂಬ ಸಮಯ ಹೋಗ್ತಿದೆ ಎಂದನಿಸಿದಾಗೆಲ್ಲ ರದ್ದುಗೊಳಿಸ್ತೇನೆ. ಮುಂಚಿನಂತೆ ಈಗ ನನಗೆ ಅದು ಬೇಕೇ ಬೇಕು ಅಂತ ಅನಿಸಲ್ಲ. ಏನಾದ್ರೂ ಅಗತ್ಯ ಬಿದ್ರೆ ಖಾತೆ ತೆರಿತೇನೆ, ಕೆಲ್ಸ ಮುಗಿದ ಮೇಲೆ ರದ್ದುಗೊಳಿಸ್ತೇನೆ.”—ಅನನ್ಯ, 22.

ಸತ್ಯ ಸಂಗತಿ

ಸೋಶಿಯಲ್‌ ನೆಟ್‌ವರ್ಕ್‌ ತಾಣಗಳ ಬಗ್ಗೆ ನೀವು ಗಂಭೀರವಾಗಿ ಯೋಚಿಸಲೇ ಬೇಕಾದ ಇನ್ನೊಂದು ಸಂಗತಿಯಿದೆ. ಅದನ್ನು ತಿಳಿಯುವ ಮೊದಲು ಈ ಕೆಳಗೆ ನಿಮ್ಮ ಅಭಿಪ್ರಾಯಕ್ಕೆ ✔ ಹಾಕಿ.

ಸೋಶಿಯಲ್‌ ನೆಟ್‌ವರ್ಕಿಂಗ್‌ ಸೈಟ್‌ ಮುಖ್ಯವಾಗಿ . . .

(ಎ) ___ ಬಿಸ್‌ನೆಸ್‌

(ಬಿ) ___ ಸಾಮಾಜಿಕ ಸಂಪರ್ಕ ಮಾಧ್ಯಮ

(ಸಿ) ___ ಮನೋರಂಜನೆ

ಸರಿಯಾದ ಉತ್ತರ (ಎ). ಅಚ್ಚರಿಯಾಯಿತೇ? ಆದರೆ ಅದೇ ನಿಜ ಸಂಗತಿ. ಸೋಶಿಯಲ್‌ ನೆಟ್‌ವರ್ಕಿಂಗ್‌ನ ಉದ್ದೇಶ ಬಿಸ್‌ನೆಸ್‌. ಮುಖ್ಯವಾಗಿ ಜಾಹೀರಾತಿನ ಮೂಲಕ ಲಾಭ ಮಾಡುವುದೇ ಅದರ ಗುರಿ. ಒಂದು ನೆಟ್‌ವರ್ಕಿಂಗ್‌ ತಾಣದಲ್ಲಿ ಹೆಚ್ಚೆಚ್ಚು ಜನರು ಖಾತೆ ತೆರೆದಾಗ ಹಾಗೂ ಅದರ ಸದಸ್ಯರು ಹೆಚ್ಚೆಚ್ಚು ಜನರಿಗೆ ‘ಪೋಸ್ಟ್‌’ ಮಾಡುವಾಗ ಆ ನೆಟ್‌ವರ್ಕ್‌ನಿಂದ ಜಾಹೀರಾತುದಾರರಿಗೆ ಹೆಚ್ಚು ಲಾಭ ಆಗುತ್ತದೆ. ಏಕೆಂದರೆ ಒಬ್ಬ ವ್ಯಕ್ತಿ ಎಷ್ಟು ಜಾಸ್ತಿ ಸಮಯ ನೆಟ್‌ವರ್ಕಿಂಗ್‌ನಲ್ಲಿ ಕಳೆಯುತ್ತಾನೋ ಅಷ್ಟೇ ಜಾಸ್ತಿ ಜಾಹೀರಾತುಗಳನ್ನು ನೋಡುವನಲ್ಲವೇ!

ನೀವು ಖಾಸಗಿ ವಿವರಗಳನ್ನು ಹೆಚ್ಚೆಚ್ಚು ಜನರಿಗೆ ದಾಟಿಸಿದರೆ, ಆನ್‌ಲೈನ್‌ನಲ್ಲಿ ಹೆಚ್ಚು ಸಮಯ ಕಳೆದರೆ ಲಾಭ ಗಳಿಸುವುದು ನಿಮ್ಮ ಸೋಶಿಯಲ್‌ ನೆಟ್‌ವರ್ಕಿಂಗ್‌ ತಾಣ ಮತ್ತು ಇನ್ನಷ್ಟೂ ಲಾಭ ಜಾಹೀರಾತುದಾರರಿಗೆ ಎಂದು ನಿಮಗೆ ಈಗ ತಿಳಿದು ಬಂದಿರಬಹುದು. ಹಾಗಾಗಿ ಸೋಶಿಯಲ್‌ ನೆಟ್‌ವರ್ಕ್‌ ಬಳಸುವಾಗ ಖಾಸಗಿ ವಿವರಗಳನ್ನು ಗೋಪ್ಯವಾಗಿಡಿ, ಸಮಯ ಪೋಲಾಗದಂತೆ ಜಾಗ್ರತೆ ವಹಿಸಿ. (g11-E 07)

ಮುಂದಿನ ಲೇಖನದಲ್ಲಿ . . .

ಸೋಶಿಯಲ್‌ ನೆಟ್‌ವರ್ಕಿಂಗ್‌ ನಿಮ್ಮ ಹೆಸರನ್ನು, ಸ್ನೇಹಸಂಬಂಧಗಳನ್ನು ಕೆಡಿಸಬಲ್ಲದು. ಹೇಗೆಂದು ಓದಿ ತಿಳಿಯಿರಿ.

“ಯುವಜನರ ಪ್ರಶ್ನೆ” ಲೇಖನಮಾಲೆಯ ಹೆಚ್ಚಿನ ಲೇಖನಗಳು www.watchtower.org/ype ವೆಬ್‌ ಸೈಟ್‌ನಲ್ಲಿವೆ

[ಪಾದಟಿಪ್ಪಣಿಗಳು]

^ ಈ ಲೇಖನದಲ್ಲಿ ಹೆಸರುಗಳನ್ನು ಬದಲಿಸಲಾಗಿದೆ.

^ ಸೋಶಿಯಲ್‌ ನೆಟ್‌ವರ್ಕ್‌ ಎಂದರೆ ಸಾಮಾಜಿಕ ಸಂಪರ್ಕ ಜಾಲತಾಣ. ಈ ಜಾಲತಾಣದಲ್ಲಿ ಸದಸ್ಯತ್ವ ಪಡೆದು ಖಾತೆ ತೆರೆದವರು ತಮ್ಮ ಆಯ್ಕೆಯ ಸ್ನೇಹಿತರ ಬಳಗದೊಂದಿಗೆ ಸಂವಹನ ಮಾಡುತ್ತಾರೆ.

^ ಎಚ್ಚರ! ಪತ್ರಿಕೆ ಯಾವುದೇ ನಿರ್ದಿಷ್ಟ ಸೋಶಿಯಲ್‌ ನೆಟ್‌ವರ್ಕ್‌ ತಾಣವನ್ನು ಅನುಮೋದಿಸುವುದಿಲ್ಲ, ಖಂಡಿಸುವುದೂ ಇಲ್ಲ. ತಮ್ಮ ಇಂಟರ್‌ನೆಟ್‌ ಬಳಕೆ ಬೈಬಲ್‌ ತತ್ವಗಳನ್ನು ಮುರಿಯುವಂತಿರಬಾರದೆಂಬ ಸಂಗತಿಯನ್ನು ಕ್ರೈಸ್ತರು ಸದಾ ನೆನಪಿನಲ್ಲಿಡಬೇಕು.—1 ತಿಮೊಥೆಯ 1:5, 19.

^ ಹೆಚ್ಚಿನ ಮಾಹಿತಿಗಾಗಿ ಏಪ್ರಿಲ್‌-ಜೂನ್‌ 2011ರ ಎಚ್ಚರ! ಪತ್ರಿಕೆಯಲ್ಲಿರುವ “ಯುವಜನರ ಪ್ರಶ್ನೆ . . . ನನಗೆ ಎಲೆಕ್ಟ್ರಾನಿಕ್‌ ಸಮೂಹ-ಮಾಧ್ಯಮದ ಗೀಳು ಹತ್ತಿದೆಯೋ?” ಲೇಖನ ನೋಡಿ. ಆ ಲೇಖನದಲ್ಲಿರುವ “ನನಗೆ ಸೋಶಿಯಲ್‌ ನೆಟ್‌ವರ್ಕಿಂಗ್‌ ಸೈಟ್‌ನ ಗೀಳು ಹಿಡಿದಿತ್ತು” ಎಂಬ ಪುಟ 18ರ ಚೌಕಕ್ಕೆ ವಿಶೇಷ ಗಮನ ಕೊಡಿ.

[ಪುಟ 15ರಲ್ಲಿರುವ ಸಂಕ್ಷಿಪ್ತ ವಿವರಣೆ]

5 ಕೋಟಿ ಜನರನ್ನು ತಲುಪಲು ರೇಡಿಯೋ 38 ವರ್ಷಗಳನ್ನು ತೆಗೆದುಕೊಂಡಿತು

[ಪುಟ 15ರಲ್ಲಿರುವ ಸಂಕ್ಷಿಪ್ತ ವಿವರಣೆ]

ಫೇಸ್‌ಬುಕ್‌ ಹೆಸರಿನ ಸಾಮಾಜಿಕ ಸಂಪರ್ಕ ಜಾಲತಾಣ ಇತ್ತೀಚಿನ ಬರೇ 1 ವರ್ಷದಲ್ಲಿ 20 ಕೋಟಿ ಬಳಕೆದಾರರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತು

[ಪುಟ 17ರಲ್ಲಿರುವ ಚೌಕ]

ನಿಮ್ಮ ಹೆತ್ತವರನ್ನು ಕೇಳಿನೋಡಿ

ಖಾಸಗಿ ವಿವರಗಳನ್ನು ಗೋಪ್ಯವಾಗಿಡುವುದರ ಬಗ್ಗೆ ಈ ಕೆಳಗಿನ ವಿಷಯಗಳನ್ನು ಹೆತ್ತವರೊಂದಿಗೆ ಮಾತಾಡಿ. ಯಾವ ಸಂಗತಿಗಳನ್ನು ಜಾಹೀರು ಪಡಿಸದಿದ್ದರೆ ಒಳ್ಳೇದು? ಕಾರಣಗಳು? ಇಂಟರ್‌ನೆಟ್‌ ಬಳಸುವಾಗ ಯಾವ್ಯಾವ ಮಾಹಿತಿ ಕೊಡುವುದು ಅಪಾಯಕಾರಿ? ಆನ್‌ಲೈನ್‌ ಮಾತುಕತೆ ಕಡಿಮೆಮಾಡಿ ಜನರನ್ನು ಮುಖಾಮುಖಿ ಮಾತಾಡಿಸುವುದನ್ನು ಹೇಗೆ ಹೆಚ್ಚಿಸಬಹುದೆಂದು ನಿಮ್ಮ ಹೆತ್ತವರ ಸಲಹೆ ಕೇಳಿ. ನೀವು ಯಾವ ಹೊಂದಾಣಿಕೆಗಳನ್ನು ಮಾಡಬೇಕೆಂಬುದು ಅವರ ಅಭಿಪ್ರಾಯ?

[ಪುಟ 16ರಲ್ಲಿರುವ ಚಿತ್ರ]

ಸೋಶಿಯಲ್‌ ನೆಟ್‌ವರ್ಕ್‌ನಲ್ಲಿ ನೀವು ಮಾಡುವುದೆಲ್ಲ ಬೆಕ್ಕು ಕಣ್ಮುಚ್ಚಿ ಹಾಲು ಕುಡಿದಂತೆ

[ಪುಟ 17ರಲ್ಲಿರುವ ಚಿತ್ರ]

ಸಮಯವೆಂಬದು ಹಣವಿದ್ದಂತೆ. ಎಲ್ಲ ಒಮ್ಮೆಗೆ ಖರ್ಚುಮಾಡಿಬಿಟ್ಟರೆ ಬೇಕಾದಾಗ ‘ಜೇಬು ಖಾಲಿ’