ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ವಿಶ್ವದ ಅತ್ಯಂತ ಶಕ್ತಿಶಾಲಿ ಕಲಿಕಾ ಯಂತ್ರ”

“ವಿಶ್ವದ ಅತ್ಯಂತ ಶಕ್ತಿಶಾಲಿ ಕಲಿಕಾ ಯಂತ್ರ”

“ವಿಶ್ವದ ಅತ್ಯಂತ ಶಕ್ತಿಶಾಲಿ ಕಲಿಕಾ ಯಂತ್ರ”

ಮ ಗುವಿನ ಮಿದುಳನ್ನು “ವಿಶ್ವದ ಅತ್ಯಂತ ಶಕ್ತಿಶಾಲಿ ಕಲಿಕಾ ಯಂತ್ರ” ಎಂದು ಕರೆಯಲಾಗುತ್ತದೆ. ಈ ಮಾತು ಸತ್ಯ. ಒಂದು ಶಿಶು ಜಗತ್ತನ್ನು ಪ್ರವೇಶಿಸುವಾಗ ತನ್ನ ಸುತ್ತಲಿನ ದೃಶ್ಯಗಳು, ಶಬ್ದಗಳು, ಸಂವೇದನೆಗಳನ್ನು ಹೀರಿಕೊಳ್ಳಲು ಸುಸಜ್ಜಿತವಾಗಿರುತ್ತದೆ. *

ಶಿಶುವಿಗೆ ಎಲ್ಲಕ್ಕಿಂತಲೂ ಮಿಗಿಲಾಗಿ ಇತರ ಮಾನವರಲ್ಲಿ ಅಂದರೆ ಅವರ ಮುಖ, ಧ್ವನಿ, ಸ್ಪರ್ಶ ಇವುಗಳಲ್ಲಿ ತುಂಬ ಆಸಕ್ತಿ. ಪೆನೆಲೋಪ್‌ ಲೀಚ್‌ ಎಂಬಾಕೆ ಬರೆದ ಶೈಶವ (ಇಂಗ್ಲಿಷ್‌) ಪುಸ್ತಕವು ಹೀಗನ್ನುತ್ತದೆ: “ಒಂದು ಶಿಶುವಿಗೆ ಯಾವ ದೃಶ್ಯಗಳು ಹೆಚ್ಚು ಆಸಕ್ತಿಕರ, ಯಾವ ಶಬ್ದಗಳು ಅದರ ಗಮನವನ್ನು ಸೆರೆಹಿಡಿಯುತ್ತವೆ, ಅದು ಪುನಃ ಪುನಃ ಅನುಭವಿಸಲಿಚ್ಛಿಸುವ ಸಂವೇದನೆಗಳಾವುವು ಎಂಬದರ ಬಗ್ಗೆ ಅನೇಕ ಅಧ್ಯಯನಗಳನ್ನು ನಡೆಸಲಾಗಿದೆ. ಇವೆಲ್ಲವೂ ಅದಕ್ಕೆ, ಅದರ ಆರೈಕೆಮಾಡುತ್ತಿರುವ ವಯಸ್ಕನಿಂದ ಸುಲಭವಾಗಿ ಮತ್ತು ಅನೇಕಾವರ್ತಿ ಸಿಗುತ್ತಿರುತ್ತವೆ.” ಹಾಗಾಗಿ ಮಗುವಿನ ಬೆಳವಣಿಗೆಯಲ್ಲಿ ಹೆತ್ತವರ ಪಾತ್ರ ಮಹತ್ವದ್ದೇ ಸರಿ!

“ಶಿಶುವಿನಂತೆ ಮಾತಾಡಿದೆ”

ನವಜಾತ ಕೂಸು ಒಂದು ಭಾಷೆಯನ್ನು ಕೇವಲ ಕೇಳಿಸಿಕೊಂಡು ಕಲಿಯುತ್ತದೆ. ಅದರ ಈ ಸಾಮರ್ಥ್ಯ ಹೆತ್ತವರಿಗೂ ಮಕ್ಕಳ ತಜ್ಞರಿಗೂ ಬೆರಗಿನ ಸಂಗತಿ. ಶಿಶು ಕೆಲವೇ ದಿನಗಳಲ್ಲಿ ಅಮ್ಮನ ಧ್ವನಿಯನ್ನು ಗುರುತಿಸಿ, ಅದನ್ನು ಅಪರಿಚಿತರ ಧ್ವನಿಗಿಂತ ಹೆಚ್ಚು ಇಷ್ಟಪಡುತ್ತದೆ; ಕೆಲವೇ ವಾರಗಳಲ್ಲಿ ತನ್ನ ಅಪ್ಪಅಮ್ಮನ ಭಾಷೆ ಹಾಗೂ ಇತರ ಭಾಷೆಗಳ ಪದಗಳ ನಡುವಣ ಧ್ವನಿವ್ಯತ್ಯಾಸವನ್ನು ಗುರುತಿಸುತ್ತದೆ; ಕೆಲವೇ ತಿಂಗಳೊಳಗೆ ಪದಗಳ ನಡುವಿನ ಅಂತರವನ್ನು ಗ್ರಹಿಸಿ, ಸಾಮಾನ್ಯ ಮಾತು ಹಾಗೂ ಸದ್ದುಗಳ ನಡುವಿನ ವ್ಯತ್ಯಾಸವನ್ನು ಗುರುತಿಸುತ್ತದೆ ಎಂಬದನ್ನು ಸಂಶೋಧಕರು ಕಂಡುಹಿಡಿದಿದ್ದಾರೆ.

ಯೇಸುವಿನ ಶಿಷ್ಯನಾದ ಪೌಲನು ಹೀಗೆ ಬರೆದನು: “ನಾನು ಶಿಶುವಾಗಿದ್ದಾಗ ಶಿಶುವಿನಂತೆ ಮಾತಾಡಿದೆ.” (1 ಕೊರಿಂಥ 13:11, ಮಾಡರ್ನ್‌ ಕಿಂಗ್‌ ಜೇಮ್ಸ್‌ ವರ್ಷನ್‌) ಶಿಶು ಹೇಗೆ ಮಾತಾಡುತ್ತದೆ? ಸಾಮಾನ್ಯವಾಗಿ ಅಸ್ಪಷ್ಟ ಸದ್ದುಗಳಿಂದ. ಅದು ಬರೀ ಸದ್ದು ಅಷ್ಟೆಯೊ? ಖಂಡಿತ ಅಲ್ಲ! ಮಗುವಿನ ಮಿದುಳಲ್ಲಿ ಏನು ನಡೆಯುತ್ತಿದೆ?—ಜೀವನದ ಮೊದಲ ಐದು ವರ್ಷಗಳಲ್ಲಿ ಮಿದುಳು ಹಾಗೂ ಮನಸ್ಸು ಬೆಳೆಯುವ ಪರಿ (ಇಂಗ್ಲಿಷ್‌) ಪುಸ್ತಕದಲ್ಲಿ ಡಾ. ಲಿಜ್‌ ಇಲ್ಯಟ್‌ ಹೇಳುವುದೇನೆಂದರೆ ಮಾತಾಡುವ ಪ್ರಕ್ರಿಯೆಯು “ಸ್ನಾಯು ಚಲನೆಗೆ ಸಂಬಂಧಿಸಿದ ಒಂದು ಸಂಕೀರ್ಣ ಕೆಲಸ. ಅದಕ್ಕೆ ತುಟಿಗಳು, ನಾಲಗೆ, ಅಂಗುಳು ಮತ್ತು ಧ್ವನಿಪೆಟ್ಟಿಗೆಯನ್ನು ನಿಯಂತ್ರಿಸುವ ಹತ್ತಾರು ಸ್ನಾಯುಗಳ ತ್ವರಿತ ಸಂಯೋಗ ಅತ್ಯಗತ್ಯ.” ಆಕೆ ಮುಂದುವರಿಸಿದ್ದು: “ಕೂಸುಗಳ ಅಸ್ಪಷ್ಟ ಸದ್ದುಗಳು ಅವರತ್ತ ಗಮನಸೆಳೆಯಲು ಮೋಡಿಮಾಡುವ ವಿಧಾನವೆಂಬಂತೆ ತೋರಿದರೂ, ಅದು ಮಾತಾಡುವ ಜಟಿಲ ಕಸರತ್ತಿಗೆ ಬಹುಮುಖ್ಯವಾದ ಪೂರ್ವತಯಾರಿಯಂತೆಯೂ ಇದೆ.”

ಶಿಶುವಿನ ಈ ಅಸ್ಪಷ್ಟ ಸದ್ದುಗಳಿಗೆ ಹೆತ್ತವರು ತಮ್ಮದೇ ಆದ ವಿಧದಲ್ಲಿ ಉತ್ತರಿಸುತ್ತಾರೆ. ಇದೂ ಕಾರ್ಯಸಾಧಕ. ಈ ರೀತಿಯಲ್ಲಿ ಉತ್ಸಾಹದಿಂದ ಮಾತಾಡುವಾಗ ಶಿಶು ಸ್ಪಂದಿಸುತ್ತದೆ. ಶಿಶು ಹಾಗೂ ಹೆತ್ತವರ ನಡುವಿನ ಈ ಸಂವಾದವು ಶಿಶುವಿಗೆ ಸಂಭಾಷಣೆಯ ಕುರಿತ ಮೂಲಪಾಠಗಳನ್ನು ಕಲಿಸಿಕೊಡುತ್ತದೆ. ಈ ಕೌಶಲ ಅದಕ್ಕೆ ಜೀವನವಿಡೀ ಉಪಯುಕ್ತವಾಗಲಿದೆ.

ಬದಲಾಗುತ್ತಿರುವ ಪಾತ್ರಗಳು

ಕೂಸಿನ ದಿನನಿತ್ಯದ ಅಗತ್ಯಗಳನ್ನು ಪೂರೈಸುವುದರಲ್ಲೇ ಹೆತ್ತವರು ಕಾರ್ಯಮಗ್ನರಾಗುತ್ತಾರೆ. ಅದು ಅತ್ತ ಕೂಡಲೇ ಅದಕ್ಕೆ ಆಹಾರ ಕೊಡಲಿಕ್ಕೊ, ಗಲೀಜು ಮಾಡಿದ ಬಟ್ಟೆ ಬದಲಾಯಿಸಲಿಕ್ಕೊ, ಎತ್ತಿ ರಮಿಸಲಿಕ್ಕೊ ಓಡೋಡಿ ಬರುತ್ತಾರೆ. ಈ ರೀತಿಯ ಲಾಲನೆ, ಮುದ್ದುಮಾಡುವಿಕೆ ಸೂಕ್ತ ಹಾಗೂ ಅತ್ಯಗತ್ಯ. ಆರೈಕೆಮಾಡುವವರು ಎಂಬ ತಮ್ಮ ಪಾತ್ರವನ್ನು ಹೆತ್ತವರು ನಿಭಾಯಿಸುವ ಒಂದು ಪ್ರಮುಖ ವಿಧಾನ ಇದು.—1 ಥೆಸಲೊನೀಕ 2:7.

ಮೇಲೆ ಹೇಳಿದ್ದನ್ನು ಹೆತ್ತವರು ಮಾಡುವಾಗ ಮಗುವಿಗೆ ‘ನಾನೇ ವಿಶ್ವದ ಅತಿ ಮುಖ್ಯ ವ್ಯಕ್ತಿ, ದೊಡ್ಡವರು ವಿಶೇಷವಾಗಿ ಅಪ್ಪಅಮ್ಮ ಇರುವುದೇ ನನ್ನ ಅಪ್ಪಣೆ ಪಾಲಿಸಲಿಕ್ಕೆ’ ಎಂದನಿಸುವುದು ಸಹಜ. ಈ ಅನಿಸಿಕೆ ತಪ್ಪಾದರೂ ಅಸಮಂಜಸವೇನಲ್ಲ. ಏಕೆಂದರೆ ಮಗುವಿಗೆ ಒಂದು ವರ್ಷಕ್ಕಿಂತ ಹೆಚ್ಚು ಸಮಯದಿಂದಲೂ ಆ ಅನುಭವವೇ ಆಗಿದೆ. ಅವನ ದೃಷ್ಟಿಯಲ್ಲಿ ಅವನೇ ಸಾಮ್ರಾಟ! ಅವನ ರಾಜ್ಯದಲ್ಲಿ ಅವನ ಸೇವೆ ಮಾಡಲೆಂದೇ ದೊಡ್ಡವರನ್ನು ಇಡಲಾಗಿದೆ! ಕೌಟುಂಬಿಕ ಸಲಹೆಗಾರ ಜಾನ್‌ ರೋಸ್‌ಮಂಡ್‌ ಹೀಗೆ ಬರೆದಿದ್ದಾರೆ: “ಈ ಭ್ರಮೆ ಅವರಲ್ಲಿ ಮೂಡಲು ಎರಡು ವರ್ಷಗಳೂ ಬೇಡ, ಆದರೆ ಅದನ್ನು ಸರಿಪಡಿಸಲು ಕನಿಷ್ಠಪಕ್ಷ ಇನ್ನು ಹದಿನಾರು ವರ್ಷಗಳಾದರೂ ಬೇಕು! ವಿಪರ್ಯಾಸವೇನೆಂದರೆ ಇದೇ ಹೆತ್ತವರ ಕೆಲಸ: ಮೊದಲು ತನ್ನ ಮಗನು/ಳು ಈ ಭ್ರಮೆಯನ್ನು ನಂಬುವಂತೆ ಮಾಡುವುದು ಮತ್ತು ಆಮೇಲೆ ಈ ಭ್ರಮೆ ಸುಳ್ಳೆಂದು ನಯವಾಗಿ ಕಲಿಸುವುದು.”

ಮಗುವಿಗೆ ಎರಡು ವರ್ಷವಾಗುವಷ್ಟರಲ್ಲಿ ಆ ವಿಚಾರ ತಪ್ಪೆಂದು ಅದು ಕಲಿಯಲಾರಂಭಿಸುತ್ತದೆ. ಏಕೆಂದರೆ ಅಷ್ಟರಲ್ಲಿ ತಂದೆತಾಯಿಗಳ ಪಾತ್ರ ಬದಲಾಗುತ್ತದೆ. ಈಗ ಅವರು ಆರೈಕೆಮಾಡುವವರಲ್ಲ, ಶಿಕ್ಷಕರಾಗುತ್ತಾರೆ. ಹೆತ್ತವರು ತನ್ನ ಅಣತಿಯಂತೆ ನಡೆಯುತ್ತಿಲ್ಲ, ಬದಲಾಗಿ ತಾನೇ ಅವರ ಅಣತಿಯ ಪ್ರಕಾರ ನಡೆಯಬೇಕೆಂದು ಮಗುವಿಗೆ ಅರಿವಾಗುತ್ತದೆ. ಅದರ ಪ್ರಭುತ್ವ ಕೊನೆಗೊಳ್ಳುತ್ತದೆ. ಹೊಸ ಪ್ರಭುತ್ವದ ಬಗ್ಗೆ ಅದಕ್ಕೆ ಖುಷಿಯಾಗುವುದಿಲ್ಲ. ಹತಾಶೆಯಿಂದ ಅದು ಅಪ್ಪಅಮ್ಮನ ಮೇಲಿನ ನಿಯಂತ್ರಣವನ್ನು ಹಿಡಿದಿಟ್ಟುಕೊಳ್ಳಲು ಶತಪ್ರಯತ್ನ ಮಾಡುತ್ತದೆ. ಹೇಗೆ?

ರಂಪಾಟವನ್ನು ನಿಭಾಯಿಸುವುದು

ಸುಮಾರು ಎರಡು ವರ್ಷ ಪ್ರಾಯದಲ್ಲಿ ಅನೇಕ ಕೂಸುಗಳ ವರ್ತನೆಯಲ್ಲಿ ದೊಡ್ಡ ಬದಲಾವಣೆಯಾಗುತ್ತದೆ. ಅನೇಕ ಸಲ ಅವು ತುಂಬ ಸಿಟ್ಟಿನಿಂದ ಹಠಹಿಡಿದು ರಂಪ ಮಾಡುತ್ತವೆ. ಈ ಅವಧಿಯು ಹೆತ್ತವರಿಗೆ ಎಷ್ಟು ಚಿಟ್ಟುಹಿಡಿಸುತ್ತದೆಂದರೆ ಅದನ್ನು ಭಯಂಕರ ಸಮಯವೆಂದು ವರ್ಣಿಸುತ್ತಾರೆ. ಮಗು ಎಲ್ಲದಕ್ಕೂ ಹಠಹಿಡಿದು “ಇಲ್ಲ!” ಅಥವಾ “ಬೇಡ!” ಎನ್ನುತ್ತದೆ. ಅದು ತನ್ನೊಳಗೆ ನಡೆಯುತ್ತಿರುವ ಘರ್ಷಣೆಯನ್ನು ನಿಭಾಯಿಸುತ್ತಿರುವಾಗ ತನ್ನ ಬಗ್ಗೆಯೂ ಅಪ್ಪಅಮ್ಮನ ಬಗ್ಗೆಯೂ ಹತಾಶೆಗೊಳ್ಳುತ್ತದೆ. ಮಗುವಿಗೆ ನಿಮ್ಮಿಂದ ದೂರವೂ ಇರಬೇಕು, ಅದೇ ಸಮಯ ನಿಮಗೆ ಹತ್ತಿರವೂ ಇರಬೇಕು ಎಂದನಿಸುತ್ತದೆ. ಕಕ್ಕಾಬಿಕ್ಕಿಯಾದ ಹೆತ್ತವರಿಗೆ ಏನಾಗುತ್ತಿದೆಯೆಂದು ಅರ್ಥವಾಗುವುದಿಲ್ಲ, ತಾವೇನು ಮಾಡಿದರೂ ಪ್ರಯೋಜನ ಇಲ್ಲವೆಂದು ಅನಿಸುತ್ತದೆ. ನಿಜವಾಗಿ ಏನಾಗುತ್ತಾ ಇದೆ?

ಮಗುವಿನ ಜೀವನದಲ್ಲಾದ ದೊಡ್ಡ ಬದಲಾವಣೆಯನ್ನು ನೆನಪಿಗೆ ತನ್ನಿ. ಇತ್ತೀಚಿನ ವರೆಗೂ, ಅವನು ಸ್ವಲ್ಪ ಬಿಕ್ಕಿದರೆ ಸಾಕು ದೊಡ್ಡವರು ಓಡೋಡಿ ಬರುತ್ತಿದ್ದರು. ಆದರೆ ತನ್ನ ಆ ‘ಪ್ರಭುತ್ವ’ ಬರೇ ಸ್ವಲ್ಪ ಸಮಯಕ್ಕಾಗಿತ್ತು, ಈಗ ಕೆಲವೊಂದು ವಿಷಯಗಳನ್ನಾದರೂ ತಾನೇ ಮಾಡಬೇಕೆಂದು ಅದಕ್ಕೆ ಅರಿವಾಗುತ್ತಿದೆ. ತನ್ನ ಪಾತ್ರ ನಿಜವಾಗಿ ಹೆತ್ತವರಿಗೆ ವಿಧೇಯನಾಗಿ ನಡೆಯುವುದೇ ಎಂದು ಅದಕ್ಕೆ ಈಗ ಹೆಚ್ಚೆಚ್ಚು ಅರ್ಥವಾಗುತ್ತಿದೆ. ಅದರ ಪಾತ್ರವನ್ನು ಬೈಬಲ್‌ ಚುಟುಕಾಗಿ ಹೀಗೆ ತಿಳಿಸುತ್ತದೆ: “ಮಕ್ಕಳೇ, ಎಲ್ಲ ವಿಷಯಗಳಲ್ಲಿ ನಿಮ್ಮ ಹೆತ್ತವರಿಗೆ ವಿಧೇಯರಾಗಿರಿ.”—ಕೊಲೊಸ್ಸೆ 3:20.

ಈ ಕಷ್ಟಕರ ಅವಧಿಯಲ್ಲಿ ಹೆತ್ತವರು ತಮ್ಮ ಅಧಿಕಾರದ ಚುಕ್ಕಾಣಿಯನ್ನು ಬಿಗಿಯಾಗಿ ಹಿಡಿದುಕೊಂಡಿರಬೇಕು. ಅವರದನ್ನು ದೃಢತೆಯಿಂದ ಆದರೆ ಅದೇ ಸಮಯ ಪ್ರೀತಿಯಿಂದ ಮಾಡಿದರೆ, ಮಗು ತನ್ನ ಹೊಸ ಪಾತ್ರಕ್ಕೆ ಹೊಂದಿಕೊಳ್ಳುವುದು. ಅಲ್ಲದೆ ಅದು ಕಲಿಯುವ ಸಂಗತಿಗಳು ಬೆಳವಣಿಗೆಯ ಮುಂದಿನ ಹಂತಗಳಿಗಾಗಿ ಅದನ್ನು ಸಿದ್ಧಪಡಿಸುವವು.

ನೈತಿಕತೆ

ಪದಗಳನ್ನು ಗುರುತಿಸಿ, ಮಾತುಗಳ ಅನುಕರಣೆ ಮಾಡಲು ಪ್ರಾಣಿಗಳಿಂದ, ಯಂತ್ರಗಳಿಂದಲೂ ಸಾಧ್ಯ. ಆದರೆ ಆತ್ಮಾವಲೋಕನ ಮಾಡಲು ಸಾಧ್ಯವಿರುವುದು ಮಾನವರಿಗೆ ಮಾತ್ರ. ಈ ಕಾರಣದಿಂದಲೇ ಸುಮಾರು ಎರಡು ಅಥವಾ ಮೂರರ ಪ್ರಾಯದಷ್ಟಕ್ಕೆ ಹೆಮ್ಮೆ, ನಾಚಿಕೆ, ಅಪರಾಧಿಭಾವ, ಮುಜುಗರದಂಥ ಭಾವನೆಗಳು ಮಗುವಿನಲ್ಲಿ ಅಂಕುರಿಸುತ್ತವೆ. ಇವು ಅವನು, ನೈತಿಕ ಗುಣಗಳಿರುವ ಅಂದರೆ ಇತರರು ತಪ್ಪು ಮಾಡುತ್ತಿದ್ದರೂ ಸರಿಯಾದದ್ದರ ಪರ ದೃಢವಾಗಿ ನಿಲ್ಲಬಲ್ಲ ವಯಸ್ಕನಾಗುವುದರತ್ತ ಆರಂಭದ ಹೆಜ್ಜೆಗಳಾಗಿವೆ.

ಈ ಸಮಯದಷ್ಟಕ್ಕೆ ಹೆತ್ತವರಿಗೆ ಇನ್ನೊಂದು ಅತ್ಯಾಶ್ಚರ್ಯಕರ ಸಂಗತಿಯ ಅನುಭವವಾಗುತ್ತದೆ. ಅದೇನೆಂದರೆ ಅವರ ಮಗು ಇತರರ ಭಾವನೆಗಳನ್ನು ಅರಿತುಕೊಳ್ಳಲು ಆರಂಭಿಸುತ್ತಿದೆ. ಎರಡು ವರ್ಷ ಪ್ರಾಯದಲ್ಲಿ ಇತರರ ಪಕ್ಕದಲ್ಲಿದ್ದುಕೊಂಡು ತನ್ನಷ್ಟಕ್ಕೆ ಆಡುತ್ತಿದ್ದ ಅವನು ಈಗ ಅವರ ಜೊತೆಯಲ್ಲಿ ಆಡಲಾರಂಭಿಸುತ್ತಾನೆ. ಅಪ್ಪಅಮ್ಮನಿಗೆ ಯಾವಾಗೆಲ್ಲ ಖುಷಿ ಆಗುತ್ತದೆಂದು ಗ್ರಹಿಸುತ್ತಾ ಅವರನ್ನು ಖುಷಿಪಡಿಸಲೂ ಪ್ರಯತ್ನಿಸಾನು. ಹೀಗೆ ಅವನು ಇತರರಿಂದ ಕಲಿತುಕೊಳ್ಳಲು ಆರಂಭಿಸುತ್ತಿದ್ದಾನೆ.

ಹಿಂದೆಂದಿಗಿಂತಲೂ ಹೆಚ್ಚಾಗಿ ಸರಿ-ತಪ್ಪು, ಒಳ್ಳೇದು-ಕೆಟ್ಟದ್ದು ಯಾವುದೆಂಬುದನ್ನು ಮೂರು ವರ್ಷ ಪ್ರಾಯದ ಮಗು ಈಗ ಕಲಿಯಲಾರಂಭಿಸುತ್ತದೆ. ಮಕ್ಕಳು ಜವಾಬ್ದಾರಿಯುತ ವಯಸ್ಕರಾಗುವಂತೆ ಹೆತ್ತವರು ತರಬೇತಿ ಕೊಡಬಲ್ಲ ಸೂಕ್ತ ಸಮಯ ಇದೇ. (g11-E 10)

[ಪಾದಟಿಪ್ಪಣಿ]

^ ಈ ಇಡೀ ಪತ್ರಿಕೆಯಲ್ಲಿ ಮಗುವನ್ನು ಗಂಡುಮಗುವಾಗಿ ಸಂಬೋಧಿಸುತ್ತೇವಾದರೂ ಕೊಡಲಾದ ಸೂತ್ರಗಳು ಹೆಣ್ಣುಮಗುವಿಗೂ ಅನ್ವಯಿಸುತ್ತವೆ.

[ಪುಟ 5ರಲ್ಲಿರುವ ಸಂಕ್ಷಿಪ್ತ ವಿವರಣೆ]

ಶಿಶು ಕೆಲವೇ ದಿನಗಳಲ್ಲಿ ಅಮ್ಮನ ಧ್ವನಿಯನ್ನು ಗುರುತಿಸಿ, ಅದನ್ನು ಅಪರಿಚಿತರ ಧ್ವನಿಗಿಂತ ಹೆಚ್ಚು ಇಷ್ಟಪಡುತ್ತದೆ

[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]

ಮೂರು ವರ್ಷ ಪ್ರಾಯದ ಮಗು ಹಿಂದೆಂದಿಗಿಂತಲೂ ಹೆಚ್ಚಾಗಿ ಸರಿ-ತಪ್ಪು, ಒಳ್ಳೇದು-ಕೆಟ್ಟದ್ದು ಯಾವುದೆಂಬುದನ್ನು ಕಲಿಯಲಾರಂಭಿಸುತ್ತದೆ

[ಪುಟ 6ರಲ್ಲಿರುವ ಚೌಕ]

ಮಗು ಮತ್ತೆಮತ್ತೆ ರಂಪಮಾಡುವುದೇಕೆ?

ನ್ಯೂ ಪೇರೆಂಟ್‌ ಪವರ್‌ ಪುಸ್ತಕದಲ್ಲಿ ಜಾನ್‌ ರೋಸ್‌ಮಂಡ್‌ ಬರೆದದ್ದು: “ಮಗುವಿನ ಬೇಡಿಕೆಗಳನ್ನು ಪೂರೈಸುವುದರಲ್ಲಿ ತಾವೇ ಏನೋ ತಪ್ಪುಮಾಡಿದ್ದೇವೆ, ಆದ್ದರಿಂದಲೇ ಮಗು ರಂಪಮಾಡುತ್ತಿದೆ ಎಂದು ಕೆಲವು ಹೆತ್ತವರು ನೆನಸುತ್ತಾರೆ. ತಪ್ಪು ತಮ್ಮದು ಆದ್ದರಿಂದ ಮಗುವಿನ ರಂಪವನ್ನು ನಿಲ್ಲಿಸಲು ಆ ಕೂಡಲೇ ತಾವೇನಾದರೂ ಮಾಡಬೇಕೆಂಬುದು ಹೆತ್ತವರ ಎಣಿಕೆ. ಹಾಗಾಗಿ, ‘ಆಗಲ್ಲ’ ಅಂತ ಹೇಳಿದ್ದನ್ನು ಈಗ ‘ಆಯ್ತು’ ಎಂದು ಹೇಳುತ್ತಾರೆ. ಇಲ್ಲವೆ ಮಗುವಿಗೆ ಏಟು ಕೊಟ್ಟ ನಂತರ, ತಮ್ಮನ್ನು ಕಾಡುವ ದೋಷಿಭಾವನೆಯನ್ನು ನಿವಾರಿಸಲು ಮಗು ಮುಂಚೆ ಕೇಳಿದ್ದಕ್ಕಿಂತಲೂ ಹೆಚ್ಚನ್ನೇ ಕೊಟ್ಟುಬಿಡುತ್ತಾರೆ. ಮಗುವಿನ ಉಪಾಯ ಫಲಿಸುತ್ತದೆ. ಅದರ ರಂಪ ನಿಲ್ಲುತ್ತದೆ, ಹೆತ್ತವರಿಗೆ ಸಮಾಧಾನವಾಗುತ್ತದೆ. ಆದರೆ ತನಗೆ ಬೇಕಾದದ್ದನ್ನು ಗಿಟ್ಟಿಸಿಕೊಳ್ಳುವ ಒಳ್ಳೇ ಉಪಾಯ ರಂಪಮಾಡುವುದೇ ಎಂಬದನ್ನು ಮಗು ಕಲಿತುಕೊಳ್ಳುತ್ತದೆ ಮತ್ತು ಮುಂದೆ ಇನ್ನಷ್ಟು ಹೆಚ್ಚು ಹಾಗೂ ಬೇರೆ ವಿಧಗಳಲ್ಲಿ ರಂಪಮಾಡುತ್ತದೆ.”