ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರೈಸ್ತ ಕೂಟಗಳಿಗೆ ಹೋಗಲೇಬೇಕಾ?

ಕ್ರೈಸ್ತ ಕೂಟಗಳಿಗೆ ಹೋಗಲೇಬೇಕಾ?

ಯುವಜನರ ಪ್ರಶ್ನೆ

ಕ್ರೈಸ್ತ ಕೂಟಗಳಿಗೆ ಹೋಗಲೇಬೇಕಾ?

ಕೂಟಗಳನ್ನು ಆನಂದಿಸುತ್ತೀರಾ?

ಹೌದು ಇಲ್ಲ

ಅದನ್ನೇ ಮುಂದುವರಿಸಿ ಹಾಗಾದರೆ ಏನು ಮಾಡಬಹುದು?

ಕ್ರೈಸ್ತರು ಸಭೆಸೇರಿ ದೇವರನ್ನು ಆರಾಧಿಸಬೇಕೆಂಬ ನಿಯಮ ಬೈಬಲಿನಲ್ಲಿದೆ. (ಇಬ್ರಿಯ 10:25) ಆದರೆ ನಿಮಗೆ ಕೂಟಗಳೆಂದರೆ ಸ್ವಲ್ಪವೂ ಇಷ್ಟ ಇಲ್ಲದಿದ್ದರೆ? ಕೂಟಕ್ಕೆ ಹೋದರೂ ಅಲ್ಲಿ ಹಗಲುಗನಸು ಕಾಣುತ್ತಿದ್ದರೆ, ‘ನಾನು ಬೇರೆಲ್ಲಾದ್ರೂ ಇರ್ತಿದ್ದರೆ. . .’ ಎಂದು ಮನಸ್ಸು ಅಲೆದಾಡುತ್ತಿದ್ದರೆ? ಕೂಟಗಳನ್ನು ಆನಂದಿಸಲು ಇಲ್ಲಿವೆ ಮೂರು ಸಲಹೆ. ಒಂದು ಅಥವಾ ಹೆಚ್ಚಿನ ಸಲಹೆಗಳನ್ನು ಪ್ರಯತ್ನಿಸಿ ನೋಡಿ.

1. ತಪ್ಪದೆ ಹಾಜರಾಗಿ

ಬೈಬಲ್‌ ವಚನ: ‘ಸಭೆಯಾಗಿ ಕೂಡಿಬರುವುದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟುಬಿಡದಿರೋಣ.’—ಇಬ್ರಿಯ 10:25.

ಒಂದು ವಿಷ್ಯವನ್ನು ನೀವು ಆನಂದಿಸುವುದೇ ಇಲ್ಲ ಅಂದ ಮೇಲೆ ಅದನ್ನು ತಪ್ಪದೆ ಯಾಕೆ ಮಾಡಬೇಕು? ಯಾಕೆಂದರೆ ಆಗ ಮಾತ್ರ ನೀವದನ್ನು ಆನಂದಿಸಲು ಕಲಿಯುತ್ತೀರಿ! ನೆನಸಿ, ಒಂದು ಕ್ರೀಡೆಯ ಪ್ರ್ಯಾಕ್ಟಿಸ್‌ಗೆ ನೀವು ಯಾವಾಗಲೊ ಒಮ್ಮೆ ಹೋದರೆ ಅದನ್ನು ಕರಗತಮಾಡಿಕೊಂಡು ಆನಂದಿಸಲು ಸಾಧ್ಯವೇ? ಕ್ರೈಸ್ತ ಕೂಟಗಳ ವಿಷಯದಲ್ಲೂ ಇದು ಸತ್ಯ. ಅವುಗಳಿಗೆ ಹಾಜರಾಗುವುದನ್ನು ನೀವು ಹೆಚ್ಚಿಸುವಾಗ ನಿಮ್ಮ ಆಧ್ಯಾತ್ಮಿಕ ಒಲವು ಹೆಚ್ಚುತ್ತದೆ. ಒಲವು ಹೆಚ್ಚಿದಂತೆ ಕೂಟಗಳಿಗೆ ಹಾಜರಾಗಲೇಬೇಕೆಂಬ ಆಸೆಯೂ ಹೆಚ್ಚಾಗುತ್ತದೆ!—ಮತ್ತಾಯ 5:3.

ಟಿಪ್ಸ್‌: ಪ್ರತಿ ಕೂಟದ ಬಳಿಕ ಕಡಿಮೆಪಕ್ಷ ಒಬ್ಬ ಭಾಷಣಕಾರನ ಬಳಿ ಹೋಗಿ ಅವರ ಭಾಷಣದಲ್ಲಿ ನಿಮಗೇನು ಇಷ್ಟವಾಯಿತೆಂದು ಹೇಳುವ ಗುರಿಯಿಡಿ. ಆ ದಿನದ ಕೂಟದಲ್ಲಿ ನಿಮಗಿಷ್ಟವಾದ ಒಂದು ವಿಷಯ ಡೈರಿಯಲ್ಲಿ ಬರೆದಿಡಿ. ನಿಮ್ಮ ಧಾರ್ಮಿಕ ನಂಬಿಕೆಗಳ ಬಗ್ಗೆ ಬೇರೆಯವರೊಟ್ಟಿಗೆ ಉತ್ತಮವಾಗಿ ಮಾತಾಡಬೇಕೆಂಬ ಗುರಿಯನ್ನಿಡಿ. ಕೂಟದಲ್ಲಿ ಹೆಚ್ಚಾಗಿ ಸಾರುವ, ಬೋಧಿಸುವ ಕೆಲಸಕ್ಕೆ ಸಂಬಂಧಿಸಿದ ವಿಚಾರಗಳನ್ನೇ ಕಲಿಸಲಾಗುವುದರಿಂದ ಕೂಟವನ್ನು ಆನಂದಿಸುವಿರಿ.

“ಕೂಟಗಳಿಗೆ ಹಾಜರಾಗುವುದು ತುಂಬ ಪ್ರಾಮುಖ್ಯವೆಂದು ನನಗೆ ಚಿಕ್ಕ ವಯಸ್ಸಿನಿಂದಲೇ ಕಲಿಸಲಾಗಿತ್ತು. ಹಾಗಾಗಿ ಚಿಕ್ಕವಳಿದ್ದಾಗಲೂ ನಾನು ಕೂಟಗಳನ್ನು ಸುಮ್‌ಸುಮ್ನೆ ತಪ್ಪಿಸಿಕೊಳ್ತಿರಲಿಲ್ಲ. ಅದೇ ರೂಢಿ ಈಗ್ಲೂ ಇದೆ.”ಕೆಲ್ಸಿ.

ನೆನಪಿಡಿ: ತಪ್ಪದೆ ಕೂಟಗಳಿಗೆ ಹಾಜರಾಗುವವರು ಕೂಟಗಳನ್ನು ಹೆಚ್ಚು ಆನಂದಿಸುತ್ತಾರೆ, ಹೆಚ್ಚು ಲಾಭ ಪಡಕೊಳ್ಳುತ್ತಾರೆ!

2. ಗಮನಕೊಟ್ಟು ಆಲಿಸಿ

ಬೈಬಲ್‌ ವಚನ: “ನೀವು ಹೇಗೆ ಕಿವಿಗೊಡುತ್ತೀರಿ ಎಂಬುದಕ್ಕೆ ಗಮನಕೊಡಿರಿ.”—ಲೂಕ 8:18.

ಸಂಶೋಧಕರು ಹೇಳುವಂತೆ ಒಬ್ಬ ಒಳ್ಳೇ ಕೇಳುಗ ಕೂಡ ತಾನು ಆಲಿಸಿದ ಭಾಷಣದ ಶೇ. 60ರಷ್ಟನ್ನು ಆ ದಿನ ಕೊನೆಯಾಗುವಷ್ಟರಲ್ಲಿ ಮರೆತಿರುತ್ತಾನೆ. ಒಂದುವೇಳೆ ನಿಮ್ಮ ಕೈಯಲ್ಲಿರುವ ಹಣ ಇದೇ ವೇಗದಲ್ಲಿ ಖಾಲಿಯಾಗುತ್ತಿದ್ದರೆ ಏನಾದರೊಂದು ಉಪಾಯ ಮಾಡಿ ಅದನ್ನು ಉಳಿಸುವ ಪ್ರಯತ್ನ ಮಾಡದಿರುವಿರಾ?

ಟಿಪ್ಸ್‌: ನಿಮ್ಮ ಹೆತ್ತವರ ಜೊತೆ ಮುಂದಿನ ಸಾಲುಗಳಲ್ಲಿ ಕೂತುಕೊಳ್ಳಿ. ಆಗ ನಿಮ್ಮ ಗಮನಭಂಗ ಆಗುವ ಸಾಧ್ಯತೆ ಕಡಿಮೆ. ಟಿಪ್ಪಣಿ ಬರೆದುಕೊಳ್ಳಿ. ಪ್ರತಿಯೊಬ್ಬರೂ ಕಲಿಯುವ ರೀತಿ ಬೇರೆ ಬೇರೆಯಾಗಿದ್ದರೂ ಟಿಪ್ಪಣಿ ಬರೆದುಕೊಳ್ಳುವುದು ನಿಮ್ಮ ಗಮನ ಅತ್ತಿತ್ತ ಹೋಗದಿರಲು ಸಹಾಯಕ. ಮುಂದೆ ಯಾವತ್ತಾದರೂ ಭಾಷಣದ ಅಂಶಗಳನ್ನು ನೆನಪಿಸಿಕೊಳ್ಳಲೂ ತುಂಬ ಸಹಾಯಕ.

“ಮುಂಚೆ ನಂಗೆ ಮೀಟಿಂಗಲ್ಲಿ ಕೂತು ಗಮನಕೊಟ್ಟು ಕೇಳೋದು ತುಂಬ ಕಷ್ಟ ಆಗ್ತಿತ್ತು. ಈಗ ಹಾಗಿಲ್ಲ. ಯಾಕೆಂದ್ರೆ ಮೀಟಿಂಗ್‌ಗೆ ನಾನು ಹಾಜರಾಗುವ ಉದ್ದೇಶ ಏನೆಂದು ನೆನಪಿಸಿಕೊಳ್ತೇನೆ. ಅದು ಬರೀ ವಾಡಿಕೆ ಪ್ರಕಾರ ಚರ್ಚಿಗೆ ಹೋಗಿ ಬರೋ ಥರ ಅಲ್ಲ. ಮೀಟಿಂಗಿಗೆ ನಾನು ಹೋಗುವುದು ದೇವರ ಆರಾಧನೆ ಮಾಡಲಿಕ್ಕೆ, ಜೀವ್ನಕ್ಕೆ ಉಪಯೋಗ ಬೀಳುವ ವಿಷ್ಯಗಳನ್ನು ಕಲಿಲಿಕ್ಕೆ.”—ಕ್ಯಾತ್ಲೀನ್‌.

ನೆನಪಿಡಿ: ಕ್ರೈಸ್ತ ಕೂಟಕ್ಕೆ ಹೋಗಿ ಗಮನಕೊಡದೆ ಇರುವುದು, ಔತಣ ಕೂಟಕ್ಕೆ ಹೋಗಿ ಊಟಮಾಡದೆ ಇರುವುದು—ಎರಡೂ ಒಂದೇ!

3. ಪಾಲ್ಗೊಳ್ಳಿ, ಬೆರೆಯಿರಿ

ಬೈಬಲ್‌ ವಚನ: “ಕಬ್ಬಿಣ ಕಬ್ಬಿಣವನ್ನು ಹರಿತಮಾಡುವಂತೆ ಒಬ್ಬರು ಇನ್ನೊಬ್ಬರಿಂದ ಕಲಿಯುತ್ತಾರೆ.”—ಜ್ಞಾನೋಕ್ತಿ 27:17, ಗುಡ್‌ ನ್ಯೂಸ್‌ ಭಾಷಾಂತರ.

ಸಭಾಕೂಟಗಳಲ್ಲಿ ಯುವ ವ್ಯಕ್ತಿಯಾದ ನಿಮ್ಮ ಕೊಡುಗೆ ಅಪಾರ. ‘ನಾನು ಕೂಟಗಳಿಗೆ ಬರಲಿ ಬರದಿರಲಿ ಯಾರಿಗೂ ಏನೂ ವ್ಯತ್ಯಾಸ ಆಗುವುದಿಲ್ಲ’ ಎಂದೆಣಿಸಬೇಡಿ. ಪ್ರಶ್ನೋತ್ತರ ಭಾಗದಲ್ಲಿ ನೀವು ಕೊಡುವ ಹೇಳಿಕೆ, ಸೋದರ ಸೋದರಿಯರೊಂದಿಗಿನ ನಿಮ್ಮ ಸಹವಾಸ ಬಹು ಅಮೂಲ್ಯ.

ಟಿಪ್ಸ್‌: ಪ್ರಶ್ನೋತ್ತರ ಭಾಗದಲ್ಲಿ ಒಂದು ಉತ್ತರವನ್ನಾದರೂ ಕೊಡಲೇಬೇಕೆಂಬ ಗುರಿಯಿಡಿ. ಸಭಾಗೃಹ ಶುಚಿತ್ವದಲ್ಲಿ ಮತ್ತು ಕೂಟಗಳು ಶುರುವಾಗುವ ಮುಂಚೆ, ನಂತರ, ಕೂಟ ನಡೆಯುತ್ತಿರುವಾಗ ಯಾವುದಾದರೂ ಕೆಲಸದಲ್ಲಿ ಕೈಜೋಡಿಸಲು ಮುಂದೆ ಬನ್ನಿ. ಯಾರೊಟ್ಟಿಗೆ ನೀವು ಮಾತಾಡಿ ತುಂಬ ಸಮಯವಾಗಿದೆಯೋ ಅಂಥವರನ್ನು ಹುಡುಕಿ ಮಾತಾಡುವ ಗುರಿಯಿಡಿ.

“ಹದಿವಯಸ್ಸಿನಲ್ಲೇ ನಾನು ಸ್ಟೇಜ್‌ ಸೆಟ್‌ ಮಾಡುವ, ಮೈಕ್‌ ರೋವಿಂಗ್‌ ಮಾಡುವ ಕೆಲಸಕ್ಕಾಗಿ ನನ್ನನ್ನೇ ನೀಡಿಕೊಂಡೆ. ಸಭೆಗೆ ನಾನು ಬೇಕಾದವನು ಎಂಬ ಭಾವನೆಯನ್ನು ಈ ಜವಾಬ್ದಾರಿಗಳು ನನ್ನಲ್ಲಿ ಮೂಡಿಸಿದವು. ಕೂಟಗಳಿಗೆ ಹಾಜರಾಗುವಂತೆ, ಸರಿಯಾದ ಸಮಯಕ್ಕೆ ರಾಜ್ಯ ಸಭಾಗೃಹಕ್ಕೆ ಬರುವಂತೆ ಮಾಡಿದವು. ಹೀಗೆ ನಾನು ಆಧ್ಯಾತ್ಮಿಕ ವಿಷ್ಯಗಳಲ್ಲಿ ಹೆಚ್ಚಿನ ಆಸಕ್ತಿವಹಿಸಲು ಆರಂಭಿಸಿದೆ.”—ಮೈಲ್ಸ್‌.

ನೆನಪಿಡಿ: ಕೂಟಗಳಿಗೆ ಬಂದು ಸುಮ್ಮನೆ ಕೂತು ಹೋಗಬೇಡಿ. ಬರೀ ಪ್ರೇಕ್ಷಕರಾಗಿರಬೇಡಿ, ಪಾಲ್ಗೊಳ್ಳಿ. ಆಗ ನಿಮಗೆ ಹೆಚ್ಚು ಆನಂದ ಸಿಗುವುದು. (g12-E 04)

“ಯುವಜನರ ಪ್ರಶ್ನೆ” ಲೇಖನಮಾಲೆಯ ಹೆಚ್ಚಿನ ಲೇಖನಗಳು www.watchtower.org/ype ವೆಬ್‌ಸೈಟ್‌ನಲ್ಲಿವೆ

[ಪುಟ 27ರಲ್ಲಿರುವ ಚೌಕ/ಚಿತ್ರಗಳು]

ನಿಮಗೂ ಸ್ವಾಗತ!

ದೇವರ ಬಗ್ಗೆ ಸತ್ಯ ತಿಳಿಯಬೇಕೆ?

● ನಿಮ್ಮ ವ್ಯಕ್ತಿತ್ವವನ್ನು ಉತ್ತಮಗೊಳಿಸಬೇಕೆ?

● ಒಳ್ಳೇ ಸ್ನೇಹಿತರನ್ನು ಸಂಪಾದಿಸಿಕೊಳ್ಳಬೇಕೆ?

ಇವನ್ನಷ್ಟೇ ಅಲ್ಲ ಇನ್ನೆಷ್ಟೋ ವಿಷಯಗಳನ್ನು ಮಾಡಲು ನಿಮಗೆ ಯೆಹೋವನ ಸಾಕ್ಷಿಗಳ ಕೂಟಗಳು ಸಹಾಯಮಾಡುತ್ತವೆ! ವಾರಕ್ಕೆ ಎರಡು ಸಲ ದೇವರ ಆರಾಧನೆಗೆಂದು ಯೆಹೋವನ ಸಾಕ್ಷಿಗಳು ತಮ್ಮ ರಾಜ್ಯ ಸಭಾಗೃಹಗಳಲ್ಲಿ ಸಭೆಸೇರುತ್ತಾರೆ. ಕಾಣಿಕೆ ಎತ್ತಲಾಗುವುದಿಲ್ಲ. ಸಂದರ್ಶಕರಿಗೆ ಸದಾ ಸ್ವಾಗತ.

ಖಂಡಿತ ಒಮ್ಮೆ ಹೋಗಿ ನೋಡಿ. ಈ ರಾಜ್ಯ ಸಭಾಗೃಹಗಳು ಚರ್ಚುಗಳ ಹಾಗಿರುವುದಿಲ್ಲ. ಯೆಹೋವನ ಸಾಕ್ಷಿಗಳ ಕೂಟಗಳು ಬೈಬಲ್‌ ಶಿಕ್ಷಣಕ್ಕೆ ಒತ್ತುನೀಡುತ್ತವೆ. ಸಂತೋಷದ ಬದುಕು ನಡೆಸಲು ಬೈಬಲ್‌ ಹೇಗೆ ನಿಮಗೆ ನೆರವಾಗುವುದೆಂದು ನೀವಲ್ಲಿ ಕಲಿಯಬಲ್ಲಿರಿ!—ಧರ್ಮೋಪದೇಶಕಾಂಡ 31:12; ಯೆಶಾಯ 48:17.

ಸಾಯ್‌—ಮೊದಲ ಬಾರಿ ರಾಜ್ಯ ಸಭಾಗೃಹದ ಒಳಗೆ ಹೋದಾಗ ಆಶ್ಚರ್ಯವಾಯಿತು. ಅಲ್ಲಿ ವಿಗ್ರಹಗಳು ಇರಲಿಲ್ಲ, ಪಾದ್ರಿ ಹಾಗೆ ಬಟ್ಟೆ ಹಾಕ್ಕೊಂಡವರಾರೂ ಇರಲಿಲ್ಲ, ಕಾಣಿಕೆ ಕೊಡು ಅಂತ ಯಾರೂ ನನ್ನ ಕೇಳಲೂ ಇಲ್ಲ. ಎಲ್ರೂ ನನ್ನನ್ನು ಸ್ವಾಗತಿಸಿದ್ರು. ನಿರಾಳವಾಗಿದ್ದೆ. ಕೂಟಗಳಲ್ಲಿ ಚರ್ಚೆಮಾಡಿದ ವಿಷ್ಯಗಳು ಸುಲಭವಾಗಿ ಅರ್ಥವಾಗುವಂತಿತ್ತು, ತರ್ಕಬದ್ಧವೆನಿಸಿತು. ನಾನು ಹುಡುಕುತ್ತಿದ್ದ ಸತ್ಯ ಇದೇ ಎಂದು ನನಗೆ ಮನವರಿಕೆಯಾಯಿತು.

ಡೆಯಾನೀರಾ—ಮೊದ್ಲ ಬಾರಿ ಯೆಹೋವನ ಸಾಕ್ಷಿಗಳ ಕೂಟಗಳಿಗೆ ಹೋದಾಗ ನನಗೆ 14 ವಯಸ್ಸು. ಹೋದಾಕ್ಷಣ ಎಲ್ರೂ ನನ್ನನ್ನು ಸ್ವಾಗತಿಸಿದ್ರು. ನಾನು ಹೋದದ್ದರಿಂದ ಎಲ್ರಿಗೂ ತುಂಬ ಖುಷಿ ಆಯಿತೆಂದು ನನಗನಿಸಿತು. ನನ್ನ ಬಗ್ಗೆ ಅವರಿಗೆ ನಿಜವಾದ ಆಸಕ್ತಿ ಇತ್ತು. ಮೊದ್ಲ ಸಲ ಆದ ಆ ಅನನ್ಯ ಅನುಭವ ನಾನು ಮತ್ತೆ ಮತ್ತೆ ಅಲ್ಲಿಗೆ ಹೋಗಲು ಕಾರಣವಾಯಿತು!

[ಪುಟ 28ರಲ್ಲಿರುವ ಚೌಕ]

ಮುಂದಿನ ಸಭಾಕೂಟದಲ್ಲಿ ಯಾವ ಮಾಹಿತಿಯನ್ನು ಚರ್ಚಿಸಲಾಗುವುದೆಂದು ತಿಳಿದುಕೊಳ್ಳಿ. ಅದರಲ್ಲಿ ನಿಮ್ಮ ಕುತೂಹಲ ಕೆರಳಿಸುವ ಭಾಗವನ್ನು ಆಯ್ದುಕೊಂಡು. . .

ಕತ್ತರಿಸಿ ಕಾಪಿ ಮಾಡಿ

ಕೂಟಕ್ಕೆ ಹಾಜರಾಗುವ ಮುಂಚೆ ಕೆಳಗಿನದನ್ನು ಭರ್ತಿಮಾಡಿ.

ಭಾಗ:

․․․․․

ಇದರ ಬಗ್ಗೆ ನಾನು ತಿಳಿಯಬೇಕೆಂದಿರುವ ವಿಷಯ:

․․․․․

ಆ ಭಾಗ ಮುಗಿದ ಬಳಿಕ ಕೆಳಗಿನದನ್ನು ಭರ್ತಿಮಾಡಿ.

ನಾನೇನು ಕಲಿತೆ:

․․․․․

ಭಾಷಣದ ಬಗ್ಗೆ ನನಗಿಷ್ಟವಾದ ಸಂಗತಿ ಇದೆಂದು ಭಾಷಣಕಾರನಿಗೆ ಹೇಳುವೆ:

․․․․․