ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನ ದೃಷ್ಟಿಕೋನ

ಪ್ರೇತವ್ಯವಹಾರ

ಪ್ರೇತವ್ಯವಹಾರ

ಸತ್ತವರೊಂದಿಗೆ ಮಾತಾಡಲು ಪ್ರಯತ್ನಿಸುವುದು ತಪ್ಪಾ?

‘ಸತ್ತವರಲ್ಲಿ ವಿಚಾರಿಸುವವರ ಹತ್ತಿರ ಹೋಗಿ ಅಶುದ್ಧರಾಗಬಾರದು’—ಯಾಜಕಕಾಂಡ 19:31.

ಜನರು ಏನು ಹೇಳುತ್ತಾರೆ?

ಸತ್ತ ತಮ್ಮ ಪ್ರಿಯರು ನರಳುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಲು ಬಯಸುವುದರಿಂದ, ಜನರು ಹೀಗೆ ಹೇಳುತ್ತಾರೆ: “ಸತ್ತವರನ್ನು ಮಾತಾಡಿಸಲು ಸಹಾಯಮಾಡುವವರ ಹತ್ತಿರ ಯಾಕೆ ಹೋಗಬಾರದು? ಅವರ ಸಹಾಯದಿಂದ ಮಾತಾಡಿ ಸತ್ತವರಿಂದ ಮುಕ್ತಿ ಮತ್ತು ಮನಶ್ಶಾಂತಿ ಪಡ್ಕೋಬಹುದಲ್ಲಾ?”

ಬೈಬಲ್‌ ಏನು ಹೇಳುತ್ತದೆ?

ಸತ್ತವರನ್ನು ಸಂಪರ್ಕಿಸುವ ಪ್ರಯತ್ನದ ಪರಿಪಾಠ ಪುರಾತನ ಸಮಯದಲ್ಲಿ ಸಾಮಾನ್ಯವಾಗಿತ್ತೆಂದು ಬೈಬಲ್‌ ಸ್ಪಷ್ಟಪಡಿಸುತ್ತದೆ. ಉದಾಹರಣೆಗೆ, ಯೆಹೋವ ದೇವರು ಪ್ರಾಚೀನ ಇಸ್ರೇಲಿಗೆ ಕೊಟ್ಟ ಆಜ್ಞೆ ಹೀಗಿತ್ತು: “ಸತ್ತವರನ್ನು ವಿಚಾರಿಸುವವರು, ಬೇತಾಳಕರು, ಪ್ರೇತಸಿದ್ಧರು ಇಂಥವರು ಯಾರೂ ನಿಮ್ಮಲ್ಲಿ ಇರಬಾರದು. ಇಂಥ ಕೆಲಸಗಳನ್ನು ನಡಿಸುವವರು ಯೆಹೋವನಿಗೆ ಅಸಹ್ಯರಾಗಿದ್ದಾರೆ.” (ಧರ್ಮೋಪದೇಶಕಾಂಡ 18:10-12) ಯಾವುದೇ ರೀತಿಯ ಪ್ರೇತವ್ಯವಹಾರದಲ್ಲಿ ಒಳಗೂಡುವವರು “ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ” ಎಂದು ಸಹ ಬೈಬಲ್‌ ತಿಳಿಸುತ್ತದೆ.—ಗಲಾತ್ಯ 5:19-21.

ಸತ್ತವರು ಬದುಕಿರುವವರಿಗೆ ಏನಾದರೂ ಮಾಡಲು ಸಾಧ್ಯನಾ?

“ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ”—ಪ್ರಸಂಗಿ 9:5.

ಜನರು ಏನು ಹೇಳುತ್ತಾರೆ?

ಸತ್ತವರು ಒಂದಲ್ಲ ಒಂದು ರೀತಿಯಲ್ಲಿ ಅಸ್ತಿತ್ವದಲ್ಲಿರುತ್ತಾರೆಂದು ಅನೇಕರು ಹೇಳುತ್ತಾರೆ. ಹಾಗಾಗಿ, ಸತ್ತವರಿಂದ ಮಾಹಿತಿ ಪಡೆಯಬಹುದೆಂಬ ಉದ್ದೇಶದಿಂದ ಅಥವಾ ಅವರನ್ನು ಶಾಂತಿಗೊಳಿಸಿದರೆ ಬದುಕಿರುವವರು ನೆಮ್ಮದಿಯಿಂದ ಇರಬಹುದೆಂಬ ನಂಬಿಕೆಯಿಂದ ಅವರೊಂದಿಗೆ ಮಾತಾಡಲು ಪ್ರಯತ್ನಿಸಬಹುದು.

ಬೈಬಲ್‌ ಏನು ಹೇಳುತ್ತದೆ?

“ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ; . . . ಅವರ ಪ್ರೀತಿಯೂ ಹಗೆಯೂ ಹೊಟ್ಟೇಕಿಚ್ಚೂ [ಬದುಕಿದ್ದಾಗ ಇದ್ದ ಭಾವನೆಗಳೆಲ್ಲವೂ] ಅಳಿದು ಹೋದವು.” (ಪ್ರಸಂಗಿ 9:5, 6) ಹೀಗೆ, ಸತ್ತವರಿಗೆ ಯಾವುದೇ ಅಸ್ತಿತ್ವ ಇಲ್ಲವೆಂದು ಬೈಬಲ್ ಬೋಧಿಸುತ್ತದೆ. ಅವರಿಗೆ ಯೋಚಿಸಲು, ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ. ಅಲ್ಲದೆ, ದೇವರನ್ನು ಆರಾಧಿಸಲು ಸಹ ಅವರಿಗೆ ಸಾಧ್ಯವಿಲ್ಲ. ಹಾಗಾಗಿ, ಕೀರ್ತನೆ 115:17 “ಸತ್ತವರು [ದೇವರನ್ನು] ಸ್ತುತಿಸುವದಿಲ್ಲ; ಮೌನಲೋಕವನ್ನು ಸೇರಿದವರಲ್ಲಿ ಯಾರೂ ಆತನನ್ನು ಕೀರ್ತಿಸುವದಿಲ್ಲ” ಎಂದು ಹೇಳುತ್ತದೆ.

ಸತ್ತವರೊಂದಿಗೆ ಮಾತಾಡುವವರು ಹೇಳುವುದು ಕೆಲವೊಮ್ಮೆ ನಿಜವಾಗಿರುತ್ತಲ್ವಾ?

“ಜೀವಿತರಿಗಾಗಿ [ಜನರು] ಸತ್ತವರಲ್ಲಿ ವಿಚಾರಿಸುವದು ಯುಕ್ತವೋ?”—ಯೆಶಾಯ 8:19.

ಜನರು ಏನು ಹೇಳುತ್ತಾರೆ?

ಸತ್ತ ವ್ಯಕ್ತಿಗೆ, ಅವನ ಕುಟುಂಬದವರಿಗೆ ಅಥವಾ ಸ್ನೇಹಿತರಿಗೆ ಮಾತ್ರ ತಿಳಿದಿರುವಂಥ ಮಾಹಿತಿಯನ್ನು, ಸತ್ತವರೊಂದಿಗೆ ಮಾತಾಡುವವರು ತಿಳಿಸಬಲ್ಲರೆಂದು ಕೆಲವರು ಹೇಳುತ್ತಾರೆ.

ಬೈಬಲ್‌ ಏನು ಹೇಳುತ್ತದೆ?

ಅಪನಂಬಿಗಸ್ತ ರಾಜ ಸೌಲನು ಸತ್ತವರನ್ನು ವಿಚಾರಿಸುವವರಿಂದ ದೂರವಿರಬೇಕೆಂಬ ದೈವಾಜ್ಞೆಯನ್ನು ಹೇಗೆ ಮುರಿದನೆಂದು ಒಂದನೇ ಸಮುವೇಲ ಪುಸ್ತಕದ 28ನೇ ಅಧ್ಯಾಯ ತಿಳಿಸುತ್ತದೆ. ಅವನು ಸತ್ತವರನ್ನು ವಿಚಾರಿಸುವ ಒಬ್ಬ ಸ್ತ್ರೀಯ ಬಳಿ ಹೋದನು. ಅವಳು ಮೃತ ದೇವಭಕ್ತ ಸಮುವೇಲನೊಂದಿಗೆ ಮಾತಾಡುತ್ತಿದ್ದಂತೆ ಕಾಣಿಸಿತು. ಆದರೆ, ನಿಜವಾಗಿ ಸಮುವೇಲನೊಂದಿಗೆ ಆಕೆ ಮಾತಾಡುತ್ತಿದ್ದಳೋ? ಇಲ್ಲ. ಅವಳು ಮಾತಾಡುತ್ತಾ ಇದ್ದದ್ದು ಮೃತ ಸಮುವೇಲನ ವೇಷಧರಿಸಿದ್ದ ಒಬ್ಬ ವೇಷಧಾರಿಯೊಂದಿಗೆ.

ಆ ವೇಷಧಾರಿ ‘ಸುಳ್ಳಿಗೆ ತಂದೆಯಾಗಿರುವ’ ಸೈತಾನನ ಪ್ರತಿನಿಧಿಯಾದ ಒಬ್ಬ ದುಷ್ಟಾತ್ಮಜೀವಿ. (ಯೋಹಾನ 8:44) ದುಷ್ಟಾತ್ಮಜೀವಿಗಳು ಅಥವಾ ದೆವ್ವಗಳು, ಜನರು ಸತ್ತ ಮೇಲೆ ಸಹ ಬದುಕುತ್ತಾರೆನ್ನುವ ಅಭಿಪ್ರಾಯವನ್ನು ಏಕೆ ಉತ್ತೇಜಿಸುತ್ತವೆ? ದೇವರ ಹೆಸರಿಗೆ ಮಸಿಬಳಿದು, ಆತನ ವಾಕ್ಯವಾಗಿರುವ ಬೈಬಲಿಗೆ ಕಳಂಕ ತರುವುದೇ ಅವುಗಳ ಗುರಿಯಾಗಿದೆ.—2 ತಿಮೊಥೆಯ 3:16.

ಇದರರ್ಥ, ಸತ್ತವರಿಗೆ ಯಾವುದೇ ನಿರೀಕ್ಷೆ ಇಲ್ಲವೆಂದಾ? ಖಂಡಿತವಾಗಿ ಆ ಅರ್ಥವಲ್ಲ. ‘ನಿದ್ರೆಯಲ್ಲಿರುವವರು’ ಅಂದರೆ ಸಮಾಧಿಗಳಲ್ಲಿ ಇರುವವರು ಭವಿಷ್ಯತ್ತಿನಲ್ಲಿ ಪುನರುತ್ಥಾನಗೊಳ್ಳುವರು ಎಂದು ಬೈಬಲ್‌ ವಾಗ್ದಾನ ಮಾಡುತ್ತದೆ. * (ಯೋಹಾನ 11:11-13; ಅಪೊಸ್ತಲರ ಕಾರ್ಯಗಳು 24:15) ಜೊತೆಗೆ, ಸತ್ತ ಪ್ರಿಯ ಜನರು ಯಾತನೆ ಅನುಭವಿಸುತ್ತಿಲ್ಲ ಎಂಬ ಖಾತ್ರಿ ನಮಗಿರಬಲ್ಲದು. (g14-E 02)

^ ಪ್ಯಾರ. 16 ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ ಪುಸ್ತಕದಲ್ಲಿರುವ “ನಿಮ್ಮ ಮೃತ ಪ್ರಿಯ ಜನರಿಗಿರುವ ನಿಜ ನಿರೀಕ್ಷೆ” ಎಂಬ ಶೀರ್ಷಿಕೆಯ 7ನೇ ಅಧ್ಯಾಯ ನೋಡಿ.