ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಕಣ್ಣೀರ ಹಿಂದಿರುವ ರಹಸ್ಯ

ನಿಮ್ಮ ಕಣ್ಣೀರ ಹಿಂದಿರುವ ರಹಸ್ಯ

ಅಳು ಹುಟ್ಟಿನಿಂದಲೇ ನಮ್ಮ ಸಂಗಾತಿ. ನಾವು ಮಕ್ಕಳಾಗಿದ್ದಾಗ ನಮ್ಮ ಭಾವನಾತ್ಮಕ, ಶಾರೀರಿಕ ಅವಶ್ಯಕತೆಗಳಿಗಾಗಿ ಅಳುತ್ತಿದ್ದೆವು. ಆದ್ದರಿಂದ ಪರಿಣತನೊಬ್ಬನು ಶಿಶುಗಳ ಅಳುವನ್ನು ಆಹಾರ ಪೂರೈಸುವ “ಹೊಕ್ಕಳ ಬಳ್ಳಿಗೆ” ಹೋಲಿಸಿದ್ದಾನೆ. ಆದರೆ, ನಾವು ದೊಡ್ಡವರಾಗುತ್ತಾ ಹೋದಂತೆ ಬೇರೆ ವಿಧದಲ್ಲಿ ಸಂವಾದ ಮಾಡಲು ಶಕ್ತರಾದರೂ, ಕಣ್ಣೀರು ಸುರಿಸುತ್ತೇವೆ. ಏಕೆ?

ಭಾವನಾತ್ಮಕ ಕಣ್ಣೀರು ಉಕ್ಕಿ ಬರಲು ಅನೇಕ ಕಾರಣಗಳಿವೆ. ದುಃಖ, ನಿರಾಶೆ, ದೈಹಿಕ ಅಥವಾ ಮಾನಸಿಕ ವೇದನೆ ಇವೆಲ್ಲಾ ನಾವು ಕಣ್ಣೀರಿಡುವಂತೆ ಮಾಡುತ್ತವೆ. ಸಂತೋಷ, ಸಮಾಧಾನ, ಸಾಧನೆಯಂಥ ಸನ್ನಿವೇಶಗಳು ಕೂಡ ಭಾವನಾತ್ಮಕ ಕಣ್ಣೀರು ಬರಿಸುತ್ತವೆ. ಆದರೆ ಇವು ಆನಂದಬಾಷ್ಪಗಳು. ಕೆಲವೊಮ್ಮೆ ಒಬ್ಬರು ಅಳುವುದನ್ನು ನೋಡಿ ಇನ್ನೊಬ್ಬರಿಗೆ ಕಣ್ಣೀರು ಬರುತ್ತದೆ. “ಯಾವುದೇ ಕಾರಣಕ್ಕೇ ಇರಲಿ, ಯಾರಾದರು ಅಳುವುದನ್ನು ನೋಡಿದರೆ ಸಾಕು ನನಗೂ ಅಳು ಬಂದು ಬಿಡುತ್ತದೆ” ಎಂದು ಮರಿಯಾ ತಿಳಿಸುತ್ತಾರೆ. ಚಲನಚಿತ್ರದಲ್ಲಿ ಅಥವಾ ಪುಸ್ತಕದಲ್ಲಿ ಇರುವ ಕಾಲ್ಪನಿಕ ಸನ್ನಿವೇಶಗಳು ಸಹ ನಾವು ಅಳುವಂತೆ ಮಾಡುತ್ತವೆ.

ಅಳುವುದಕ್ಕೆ ಕಾರಣ ಏನೇ ಆಗಿರಲಿ, ಇದೊಂದು ಪ್ರಭಾವಶಾಲಿ ಮೌನ ಭಾಷೆ. “ಕೆಲವೇ ಕ್ಷಣಗಳಲ್ಲಿ ಅನೇಕ ವಿಷಯಗಳನ್ನು ತಿಳಿಯಪಡಿಸುವ ಬೇರೆ ಕೆಲವು ವಿಧಾನಗಳೂ ಇವೆ” ಎಂದು ಅಡಲ್ಟ್‌ ಕ್ರೈಯಿಂಗ್‌ (ಇಂಗ್ಲಿಷ್‌) ಎಂಬ ಪುಸ್ತಕ ವಿವರಿಸುತ್ತದೆ. ಕಣ್ಣೀರು ನಮ್ಮನ್ನು ಪ್ರತಿಕ್ರಿಯಿಸುವಂತೆ ಪ್ರಚೋದಿಸುತ್ತದೆ. ಉದಾಹರಣೆಗೆ, ಯಾರಾದರೂ ಕಣ್ಣೀರಿಡುವಾಗ ಅದು ಅವರು ಕಷ್ಟದಲ್ಲಿದ್ದಾರೆಂದು ನಮ್ಮನ್ನು ಎಚ್ಚರಿಸುತ್ತದೆ. ಹಾಗಾಗಿ, ಒಬ್ಬರು ದುಃಖದಿಂದ ಕಣ್ಣೀರು ಹಾಕುವಾಗ ಅದನ್ನು ನೋಡಿಯೂ ನೋಡದಂತೆ ಇರಲು ನಮ್ಮಲ್ಲಿ ಅನೇಕರಿಗೆ ಕಷ್ಟ. ಆದ್ದರಿಂದ ನಾವು ಅಳುತ್ತಿರುವವರಿಗೆ ಸಾಂತ್ವನ ನೀಡುತ್ತೇವೆ ಅಥವಾ ನೆರವಾಗುತ್ತೇವೆ.

ಅಳು ನಮ್ಮ ಭಾವನೆಗಳನ್ನು ಹೊರಹಾಕಲು ಸಹಾಯಕರ ಮತ್ತು ಅಳುವನ್ನು ತಡೆಯುವ ರೂಢಿ ಆರೋಗ್ಯಕ್ಕೆ ಹಾನಿಕರ ಎನ್ನುವುದು ಕೆಲವು ಪರಿಣತರ ನಂಬಿಕೆ. ಅಳುವುದರಿಂದಾಗುವ ಶಾರೀರಿಕ ಅಥವಾ ಮಾನಸಿಕ ಪ್ರಯೋಜನಗಳು ವೈಜ್ಞಾನಿಕವಾಗಿ ಸಾಬೀತಾಗಿಲ್ಲ ಎನ್ನುವುದು ಇನ್ನು ಕೆಲವರ ವಾದ. ಅದೇನೇ ಆಗಿದ್ದರೂ, 85 ಪ್ರತಿಶತ ಸ್ತ್ರೀಯರು ಮತ್ತು 73 ಪ್ರತಿಶತ ಪುರುಷರು ಅತ್ತ ನಂತರ ಮನಸ್ಸು ಹಗುರವಾಗುತ್ತದೆಂದು ವರದಿ ಮಾಡಿರುವುದು ಸಮೀಕ್ಷೆಗಳಿಂದ ತಿಳಿದುಬಂದಿದೆ. “ಕೆಲವೊಮ್ಮೆ ನಾನು ಅಳಬೇಕೆಂದು ನನಗನಿಸುತ್ತದೆ. ಅತ್ತ ನಂತರ ನನಗೆ ನಿರಾಳ ಅನಿಸುತ್ತದೆ, ವಿಷಯಗಳನ್ನು ಸ್ಪಷ್ಟವಾಗಿ ಸರಿಯಾದ ದೃಷ್ಟಿಕೋನದಿಂದ ನೋಡಲು ಸಾಧ್ಯವಾಗುತ್ತದೆ” ಎಂದು ನವೋಮಿ ತಿಳಿಸುತ್ತಾರೆ.

85 ಪ್ರತಿಶತ ಸ್ತ್ರೀಯರು ಮತ್ತು 73 ಪ್ರತಿಶತ ಪುರುಷರು ಅತ್ತ ನಂತರ ಮನಸ್ಸು ಹಗುರವಾಗುತ್ತದೆಂದು ವರದಿ ಮಾಡಿರುವುದು ಸಮೀಕ್ಷೆಗಳಿಂದ ತಿಳಿದುಬಂದಿದೆ

ಆದರೆ, ಈ ನಿರಾಳ ಅನಿಸಿಕೆ ಕೇವಲ ಅಳುವುದರ ಮೇಲೆಯೇ ಹೊಂದಿಕೊಂಡಿಲ್ಲ. ನಾವು ಅತ್ತಾಗ ಇತರರು ಪ್ರತಿಕ್ರಿಯಿಸುವ ರೀತಿ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಉದಾಹರಣೆಗೆ, ನಾವು ಕಣ್ಣೀರು ಹಾಕಿದಾಗ ಇತರರು ಸಾಂತ್ವನ ಅಥವಾ ಸಹಾಯ ನೀಡುವುದಾದರೆ ನಮಗೆ ನಿರಾಳ ಅನಿಸುತ್ತದೆ. ಆದರೆ, ನಾವು ಕಣ್ಣೀರಿಟ್ಟಾಗ ಇತರರು ಸರಿಯಾಗಿ ಪ್ರತಿಕ್ರಿಯಿಸದಿದ್ದರೆ ಮುಜುಗರವಾಗಬಹುದು ಅಥವಾ ನಿರ್ಲಕ್ಷ್ಯಮಾಡುತ್ತಿದ್ದಾರೆಂದು ಅನಿಸಬಹುದು.

ಕಣ್ಣೀರ ಹಿಂದಿರುವ ರಹಸ್ಯ ಇನ್ನೂ ರಹಸ್ಯವಾಗಿಯೇ ಉಳಿದಿದೆ. ಆದರೆ ನಮಗೆ ಗೊತ್ತಿರುವುದಿಷ್ಟೇ, ಕಣ್ಣೀರು ಸುರಿಸುವುದು ದೇವರು ಕೊಟ್ಟಿರುವ ಒಂದು ಕುತೂಹಲಕಾರಿ ಭಾವನಾತ್ಮಕ ಪ್ರತಿಕ್ರಿಯೆ. (g14-E 03)