ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೋಣಿಯನ್ನು ಸರಿಯಾದ ದಿಕ್ಕಿನಲ್ಲಿ ಸಾಗಿಸುವ ಚುಕ್ಕಾಣಿಯಂತೆ ಶಿಸ್ತು ಮಕ್ಕಳನ್ನು ಮಾರ್ಗದರ್ಶಿಸುತ್ತದೆ

ಹೆತ್ತವರಿಗಾಗಿ

6: ಶಿಸ್ತು

6: ಶಿಸ್ತು

ಅರ್ಥವೇನು?

ಶಿಸ್ತು ಎಂಬ ಪದಕ್ಕೆ ಮಾರ್ಗದರ್ಶಿಸುವುದು ಅಥವಾ ಕಲಿಸುವುದು ಎಂಬ ಅರ್ಥ ಸಹ ಇದೆ. ಇದರಲ್ಲಿ ಮುಖ್ಯವಾಗಿ, ಸರಿಯಾದ ಆಯ್ಕೆಗಳನ್ನು ಮಾಡಲು ಕಲಿಯುವಂತೆ ಮಕ್ಕಳಿಗೆ ನೈತಿಕ ತರಬೇತಿ ಕೊಡುವುದು ಸೇರಿರುತ್ತದೆ. ಕೆಲವೊಮ್ಮೆ, ಮಕ್ಕಳ ತಪ್ಪಾದ ನಡವಳಿಕೆಯನ್ನು ತಿದ್ದುವುದೂ ಸೇರಿರುತ್ತದೆ.

ಯಾಕೆ ಮುಖ್ಯ?

ಇತ್ತೀಚಿನ ದಶಕಗಳಲ್ಲಿ ಕೆಲವು ಹೆತ್ತವರು ಮಕ್ಕಳಿಗೆ ಶಿಸ್ತು ಕೊಡುವುದಿಲ್ಲ. ಮಕ್ಕಳನ್ನು ತಿದ್ದಿದರೆ ಅವರ ಸ್ವಗೌರವ ಕಡಿಮೆ ಆಗಬಹುದೇನೊ ಎಂದು ಹೆತ್ತವರು ಹೆದರುತ್ತಾರೆ. ಆದರೆ ವಿವೇಕಿ ಹೆತ್ತವರು ತಮ್ಮ ಮಕ್ಕಳಿಗೆ ನ್ಯಾಯವಾದ ನಿಯಮಗಳನ್ನಿಟ್ಟು, ಪಾಲಿಸುವಂತೆ ತರಬೇತಿ ಕೊಡುತ್ತಾರೆ.

“ಮಕ್ಕಳು ಬೆಳೆದು ಒಳ್ಳೇ ಗುಣಗಳಿರುವ ವಯಸ್ಕರಾಗಬೇಕಾದರೆ ಅವರಿಗೆ ಕೆಲವೊಂದು ಮೇರೆಗಳನ್ನು ಇಡಲೇಬೇಕು. ಈ ಶಿಸ್ತು ಇಲ್ಲದಿದ್ದರೆ ಮಕ್ಕಳು ಚುಕ್ಕಾಣಿಯಿಲ್ಲದ ಹಡಗಿನಂತಾಗುತ್ತಾರೆ. ಅಂಥ ಹಡಗು ನಿಧಾನವಾಗಿ ದಿಕ್ಕು ತಪ್ಪಿಹೋಗುತ್ತದೆ ಅಥವಾ ಮುಳುಗಿ ಹೋಗುವ ಸಾಧ್ಯತೆಯೂ ಇದೆ.”—ಪಾಮೆಲಾ.

ನೀವೇನು ಮಾಡಬಹುದು?

ಹೇಳಿದಂತೆ ಮಾಡಲು ತಪ್ಪಬೇಡಿ. ನೀವಿಟ್ಟಿರುವ ನಿಯಮಗಳನ್ನು ಮಕ್ಕಳು ಪಾಲಿಸದಿದ್ದರೆ ನೀವು ಹೇಳಿದಂಥ ಶಿಕ್ಷೆಯನ್ನು ಕೊಡಿ. ಆದರೆ ಅವರು ಆ ನಿಯಮಗಳನ್ನು ಪಾಲಿಸಿದರೆ ಕೂಡಲೇ ಶ್ಲಾಘಿಸಿ.

“ವಿಧೇಯತೆ ತುಂಬ ವಿರಳವಾಗಿರುವಂಥ ಈ ಲೋಕದಲ್ಲಿ ನನ್ನ ಮಕ್ಕಳು ವಿಧೇಯತೆ ತೋರಿಸುತ್ತಿರುವದಕ್ಕಾಗಿ ಅವರನ್ನು ಆಗಾಗ ಪ್ರಶಂಸಿಸುತ್ತಾ ಇರುತ್ತೇನೆ. ಹೀಗೆ ಮಾಡುವುದರಿಂದ ಅಗತ್ಯಬಿದ್ದಾಗೆಲ್ಲ ನಾನು ಕೊಡುವ ತಿದ್ದುಪಾಟನ್ನು ಸ್ವೀಕರಿಸಲು ಅವರಿಗೆ ಸುಲಭವಾಗುತ್ತದೆ.”—ಕ್ರಿಸ್ಟೀನ್‌.

ಬೈಬಲ್‌ ತತ್ವ: “ಮನುಷ್ಯನು ಏನು ಬಿತ್ತುತ್ತಿದ್ದಾನೊ ಅದನ್ನೇ ಕೊಯ್ಯುವನು.”—ಗಲಾತ್ಯ 6:7.

ನ್ಯಾಯಸಮ್ಮತರಾಗಿರಿ. ತಪ್ಪನ್ನು ತಿದ್ದುವಾಗ ಮಕ್ಕಳ ವಯಸ್ಸನ್ನು, ಸಾಮರ್ಥ್ಯವನ್ನು ಮತ್ತು ಅವರ ತಪ್ಪು ಎಷ್ಟು ಗಂಭೀರವಾಗಿತ್ತು ಎನ್ನುವುದನ್ನು ಮನಸ್ಸಿನಲ್ಲಿಡಿ. ನೀವು ಕೊಡುವ ಶಿಕ್ಷೆ ಅವರು ಮಾಡಿದ ತಪ್ಪಿಗೆ ಸಂಬಂಧವುಳ್ಳದ್ದಾಗಿದ್ದರೆ ಹೆಚ್ಚು ಪರಿಣಾಮಕಾರಿ ಆಗಿರುತ್ತದೆ. ಉದಾಹರಣೆಗೆ, ಅವರು ಫೋನನ್ನು ದುರ್ಬಳಕೆ ಮಾಡಿರುವಲ್ಲಿ, ಒಂದು ನಿರ್ದಿಷ್ಟ ಸಮಯಾವಧಿಗೆ ಫೋನನ್ನು ಉಪಯೋಗಿಸಬಾರದು ಎಂಬ ಶಿಕ್ಷೆ ಹೆಚ್ಚು ಪರಿಣಾಮಕಾರಿ ಆಗಿರುತ್ತದೆ. ಆದರೆ ನಿಮಗೆ ಕಿರಿಕಿರಿಯಾಯಿತು ಎಂಬ ಒಂದೇ ಕಾರಣಕ್ಕೆ ಚಿಕ್ಕಪುಟ್ಟ ವಿಷಯಗಳನ್ನು ದೊಡ್ಡದು ಮಾಡಬೇಡಿ.

“ನನ್ನ ಮಗ ಬೇಕುಬೇಕೆಂದು ಅವಿಧೇಯತೆ ತೋರಿಸುತ್ತಿದ್ದಾನಾ ಅಥವಾ ತಿಳಿಯದೇ ಏನೋ ತಪ್ಪಾಯಿತಾ ಅಂತ ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ. ಆಳವಾಗಿ ಬೇರೂರಿರುವ ಕೆಟ್ಟ ಗುಣವನ್ನು ಕಿತ್ತೆಸೆಯುವುದಕ್ಕೂ ಒಮ್ಮೆ ಮಾಡಲಾದ ಒಂದು ಚಿಕ್ಕ ತಪ್ಪನ್ನು ಗಮನಕ್ಕೆ ತರುವುದಕ್ಕೂ ತುಂಬ ವ್ಯತ್ಯಾಸವಿದೆ.”—ವೆಂಡಲ್‌.

ಬೈಬಲ್‌ ತತ್ವ: “ತಂದೆಗಳೇ, ನಿಮ್ಮ ಮಕ್ಕಳು ಮನಗುಂದಿಹೋಗದಂತೆ ಅವರನ್ನು ಕೆಣಕುತ್ತಾ ಇರಬೇಡಿ.”—ಕೊಲೊಸ್ಸೆ 3:21.

ಪ್ರೀತಿ ತೋರಿಸಿ. ಹೆತ್ತವರು ಶಿಸ್ತು ಕೊಡುವುದರ ಮುಖ್ಯ ಉದ್ದೇಶ ತಮ್ಮ ಮೇಲಿರುವ ಪ್ರೀತಿಯೆಂದು ಗೊತ್ತಿರುವಾಗ ಮಕ್ಕಳಿಗೆ ಅದನ್ನು ಸ್ವೀಕರಿಸಲು, ಅನ್ವಯಿಸಲು ಸುಲಭವಾಗುತ್ತದೆ.

“ನಮ್ಮ ಮಗ ತಪ್ಪುಗಳನ್ನು ಮಾಡಿದಾಗ, ಅವನು ಹಿಂದೆ ಮಾಡಿದ ಎಲ್ಲ ಒಳ್ಳೇ ನಿರ್ಣಯಗಳ ಬಗ್ಗೆ ನಮಗೆ ತುಂಬ ಹೆಮ್ಮೆ ಅನಿಸುತ್ತದೆಂದು ಹೇಳಿ ಅವನ ಚಿಂತೆ ದೂರ ಮಾಡುತ್ತಿದ್ದೆವು. ಆದರೆ ಈಗ ಅವನು ತಪ್ಪನ್ನು ತಿದ್ದಿಕೊಂಡರೆ ಅವನ ಹೆಸರು ಹಾಳಾಗುವುದಿಲ್ಲವೆಂದು ಮತ್ತು ಅದನ್ನು ತಿದ್ದಿಕೊಳ್ಳಲು ನಾವು ಅವನಿಗೆ ಸಹಾಯಮಾಡುತ್ತೇವೆ ಎಂದು ವಿವರಿಸುತ್ತಿದ್ದೆವು.”—ಡ್ಯಾನಿಯಲ್‌.

ಬೈಬಲ್‌ ತತ್ವ: ‘ಪ್ರೀತಿಯು ದೀರ್ಘ ಸಹನೆಯುಳ್ಳದ್ದು, ದಯೆಯುಳ್ಳದ್ದು ಆಗಿದೆ.’—1 ಕೊರಿಂಥ 13:4.