ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪೀಠಿಕೆ

ಪೀಠಿಕೆ

ಇದು ಸತ್ಯ ಕಥೆಗಳ ಒಂದು ಪುಸ್ತಕವಾಗಿದೆ. ಇದರಲ್ಲಿರುವ ಕಥೆಗಳನ್ನು ಲೋಕದ ಅತ್ಯಂತ ಮಹಾನ್‌ ಗ್ರಂಥವಾದ ಬೈಬಲ್‌ನಿಂದ ತೆಗೆಯಲಾಗಿದೆ. ಈ ಕಥೆಗಳು, ದೇವರು ಸೃಷ್ಟಿಮಾಡಲು ಪ್ರಾರಂಭಿಸಿದಂದಿನಿಂದ ನಮ್ಮ ಈ ದಿನಗಳ ತನಕದ ಲೋಕ ಇತಿಹಾಸವನ್ನು ನಿಮಗೆ ನೀಡುತ್ತವೆ. ಮಾತ್ರವಲ್ಲ, ಭವಿಷ್ಯತ್ತಿನಲ್ಲಿ ದೇವರು ತಾನೇನು ಮಾಡಲಿದ್ದೇನೆಂದು ಮಾತುಕೊಟ್ಟಿದ್ದಾನೋ ಅದರ ಕುರಿತೂ ತಿಳಿಸುತ್ತವೆ.

ಬೈಬಲ್‌ನಲ್ಲಿರುವ ಮುಖ್ಯ ವಿಷಯ ಏನೆಂದು ಈ ಪುಸ್ತಕ ತೋರಿಸಿ​ಕೊಡುತ್ತದೆ. ಬೈಬಲ್‌ ಸಮಯಗಳಲ್ಲಿದ್ದ ಜನರು ಮತ್ತು ಅವರು ಮಾಡಿದ ಕಾರ್ಯಗಳ ಬಗ್ಗೆ ಇದು ತಿಳಿಸುತ್ತದೆ. ಅಷ್ಟೇ ಅಲ್ಲ, ಸುಂದರವಾದ ತೋಟದಂತಿರುವ ಪರದೈಸ್‌ ಭೂಮಿಯಲ್ಲಿ ಎಂದೆಂದಿಗೂ ಜೀವಿಸುವ ಭವ್ಯ ನಿರೀಕ್ಷೆಯ ಕುರಿತೂ ತಿಳಿಸುತ್ತದೆ.

ಈ ಪುಸ್ತಕದಲ್ಲಿ 116 ಕಥೆಗಳು ಇವೆ. ಅವುಗಳನ್ನು ಎಂಟು ಭಾಗಗಳಲ್ಲಿ ವಿಂಗಡಿಸಲಾಗಿದೆ. ಪ್ರತಿ ಭಾಗದ ಆರಂಭದ ಒಂದು ಪುಟವು ಆ ಭಾಗದಲ್ಲಿರುವ ವಿಷಯಗಳ ಕಿರುನೋಟವನ್ನು ನೀಡುತ್ತದೆ. ಇತಿಹಾಸದಲ್ಲಿ ಘಟನಾವಳಿಗಳು ಸಂಭವಿಸಿದ ಕ್ರಮದಲ್ಲಿ ಕಥೆಗಳು ಇವೆ. ಇದರಿಂದ ಪ್ರತಿಯೊಂದು ಘಟನೆಗಳು ಇತಿಹಾಸದಲ್ಲಿ ಯಾವಾಗ ಸಂಭವಿಸಿದವೆಂದು ತಿಳಿದುಕೊಳ್ಳಲು ನಿಮಗೆ ನೆರವಾಗುತ್ತದೆ.

ಕಥೆಗಳನ್ನು ಸರಳ ಭಾಷೆಯಲ್ಲಿ ಹೇಳಲಾಗಿದೆ. ಆದುದರಿಂದ ನೀವಾಗಿಯೇ ಅವನ್ನು ಓದಿ ಅರ್ಥಮಾಡಿಕೊಳ್ಳಬಲ್ಲಿರಿ. ಹೆತ್ತವರೇ, ನೀವು ಈ ಕಥೆಗಳನ್ನು ಪುಟಾಣಿ ಮಕ್ಕಳಿಗೆ ಪದೇ ಪದೇ ಓದಿ ಹೇಳುವಲ್ಲಿ ಅವರು ಸಹ ಆನಂದಿಸುವರೆಂಬುದನ್ನು ಕಂಡುಕೊಳ್ಳುವಿರಿ. ಚಿಕ್ಕವರು, ದೊಡ್ಡವರು ಎಲ್ಲರಿಗೂ ಬಹಳ ಆಸಕ್ತಿಕರ ವಿಷಯಗಳಿರುವುದನ್ನೂ ನೀವು ಕಾಣುವಿರಿ.

ಪ್ರತಿಯೊಂದು ಕಥೆಯ ಕೊನೆಯಲ್ಲಿ ಬೈಬಲ್‌ ವಚನಗಳನ್ನು ಕೊಡಲಾಗಿದೆ. ಕಥೆಗಳಿಗೆ ಆಧಾರವಾಗಿರುವ ಈ ಬೈಬಲ್‌ ಭಾಗಗಳನ್ನು ಓದುವಂತೆ ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ಮಾತ್ರವಲ್ಲ, 116 ನೇ ಕಥೆಯ ಬಳಿಕ ಅಧ್ಯಯನ ಪ್ರಶ್ನೆಗಳನ್ನು ಕೊಡಲಾಗಿದೆ. ಒಂದೊಂದು ಕಥೆಯನ್ನು ನೀವು ಓದಿ ಮುಗಿಸಿದ ಬಳಿಕ, ಆ ಕಥೆಯ ಅಧ್ಯಯನ ಪ್ರಶ್ನೆಗಳನ್ನು ಪರಿಶೀಲಿಸಿ ಉತ್ತರಿಸಲು ಪ್ರಯತ್ನಿಸಿ.