ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 6

ಒಳ್ಳೆಯ ಮಗ ಮತ್ತು ಕೆಟ್ಟ ಮಗ

ಒಳ್ಳೆಯ ಮಗ ಮತ್ತು ಕೆಟ್ಟ ಮಗ

ಈಗ ಕಾಯಿನ ಮತ್ತು ಹೇಬೆಲನನ್ನು ನೋಡಿರಿ. ಅವರಿಬ್ಬರೂ ಬೆಳೆದು ದೊಡ್ಡವರಾಗಿದ್ದಾರೆ. ಕಾಯಿನನು ಬೇಸಾಯಗಾರನಾಗಿದ್ದಾನೆ. ಅವನು ಧಾನ್ಯಗಳನ್ನು, ಹಣ್ಣುಹಂಪಲುಗಳನ್ನು ಮತ್ತು ಕಾಯಿಪಲ್ಯಗಳನ್ನು ಬೆಳೆಸುತ್ತಾನೆ.

ಹೇಬೆಲನು ಕುರಿಕಾಯುವವನಾಗಿದ್ದಾನೆ. ಕುರಿಮರಿಗಳನ್ನು ನೋಡಿಕೊಳ್ಳುವುದೆಂದರೆ ಅವನಿಗೆ ತುಂಬಾ ಇಷ್ಟ. ಆ ಕುರಿಮರಿಗಳು ಬೆಳೆದು ದೊಡ್ಡದಾಗುತ್ತವೆ. ಹೀಗೆ ಬಲುಬೇಗನೆ ಹೇಬೆಲನು ದೊಡ್ಡ ಕುರಿಹಿಂಡನ್ನು ಮೇಯಿಸಲು ಆರಂಭಿಸುತ್ತಾನೆ.

ಒಂದು ದಿನ ಕಾಯಿನ ಮತ್ತು ಹೇಬೆಲ ದೇವರಿಗೆ ಕಾಣಿಕೆಯನ್ನು ತರುತ್ತಾರೆ. ಕಾಯಿನನು ತಾನು ಬೆಳೆಸಿದ ಕೆಲವು ಹಣ್ಣುತರಕಾರಿಗಳನ್ನು ತರುತ್ತಾನೆ. ಹೇಬೆಲನು ತನ್ನ ಹಿಂಡಿನಿಂದ ದಷ್ಟಪುಷ್ಟವಾಗಿದ್ದ ಒಂದು ಕುರಿಯನ್ನು ತರುತ್ತಾನೆ. ಯೆಹೋವನು ಹೇಬೆಲನನ್ನೂ ಅವನ ಕಾಣಿಕೆಯನ್ನೂ ಮೆಚ್ಚುತ್ತಾನೆ. ಆದರೆ ಕಾಯಿನನನ್ನೂ ಅವನ ಕಾಣಿಕೆಯನ್ನೂ ಮೆಚ್ಚಲಿಲ್ಲ. ಯಾಕೆಂದು ನಿಮಗೆ ಗೊತ್ತೋ?

ಹೇಬೆಲನ ಕಾಣಿಕೆ ಕಾಯಿನದಕ್ಕಿಂತ ಉತ್ತಮವಾಗಿರುವ ಕಾರಣದಿಂದ ಮಾತ್ರವಲ್ಲ, ಹೇಬೆಲನು ಒಳ್ಳೆಯ ಮನುಷ್ಯನಾಗಿರುವುದರಿಂದಲೇ ಯೆಹೋವನು ಅದನ್ನು ಮೆಚ್ಚುತ್ತಾನೆ. ಹೇಬೆಲನು ಯೆಹೋವನನ್ನು ಮತ್ತು ಅವನ ಅಣ್ಣನನ್ನು ಪ್ರೀತಿಸುತ್ತಾನೆ. ಆದರೆ ಕಾಯಿನನು ಕೆಟ್ಟವನು. ಅವನು ತನ್ನ ತಮ್ಮನನ್ನು ಪ್ರೀತಿಸುವುದಿಲ್ಲ. ಆದುದರಿಂದಲೇ ದೇವರು ಅವನ ಕಾಣಿಕೆಯನ್ನು ಮೆಚ್ಚುವುದಿಲ್ಲ.

ಕಾಯಿನನು ತನ್ನನ್ನು ತಿದ್ದಿ ಸರಿಪಡಿಸಿಕೊಳ್ಳಬೇಕೆಂದು ದೇವರು ಅವನಿಗೆ ಹೇಳುತ್ತಾನೆ. ಆದರೆ ಕಾಯಿನನು ಅದನ್ನು ಕೇಳುವುದಿಲ್ಲ. ದೇವರು ಹೇಬೆಲನನ್ನು ಹೆಚ್ಚು ಇಷ್ಟಪಟ್ಟ ಕಾರಣ ಅವನು ಬಹು ಕೋಪಗೊಳ್ಳುತ್ತಾನೆ. ಆದುದರಿಂದ ಕಾಯಿನನು ಹೇಬೆಲನಿಗೆ, “ಅಡವಿಗೆ ಹೋಗೋಣ ಬಾ” ಎನ್ನುತ್ತಾನೆ. ಅಲ್ಲಿಗೆ ಹೋಗಿ ಅವರಿಬ್ಬರೇ ಇರುವಾಗ, ಕಾಯಿನನು ತನ್ನ ತಮ್ಮ ಹೇಬೆಲನಿಗೆ ಹೊಡೆಯುತ್ತಾನೆ. ಎಷ್ಟು ಬಲವಾಗಿ ಹೊಡೆದನೆಂದರೆ ಅವನು ಸತ್ತುಹೋಗುತ್ತಾನೆ. ಕಾಯಿನನು ಹಾಗೆ ಮಾಡಿದ್ದು ತಪ್ಪಲ್ಲವೇ?

ಹೇಬೆಲನು ಸತ್ತರೂ ಕೂಡ ದೇವರು ಇನ್ನೂ ಅವನನ್ನು ನೆನಪು ಮಾಡುತ್ತಾನೆ. ಹೇಬೆಲನು ಒಳ್ಳೆಯವನಾಗಿದ್ದನು. ಯೆಹೋವನು ಅಂಥ ಒಬ್ಬ ವ್ಯಕ್ತಿಯನ್ನು ಎಂದೂ ಮರೆಯುವುದಿಲ್ಲ. ಆದುದರಿಂದ, ಮುಂದೆ ಒಂದು ದಿನ ಯೆಹೋವ ದೇವರು ಹೇಬೆಲನನ್ನು ಮತ್ತೆ ಜೀವಂತವಾಗಿ ಎಬ್ಬಿಸುವನು. ಆ ಸಮಯದಲ್ಲಿ ಹೇಬೆಲನಿಗೆ ಎಂದೂ ಸಾಯಲಿಕ್ಕಿರುವುದಿಲ್ಲ. ಅವನು ಈ ಭೂಮಿಯಲ್ಲಿ ಸದಾಕಾಲ ಜೀವಿಸುವನು. ಹೇಬೆಲನಂತಹ ವ್ಯಕ್ತಿಗಳನ್ನು ಪರಿಚಯ ಮಾಡಿಕೊಳ್ಳುವುದು ಉತ್ತಮವಲ್ಲವೇ?

ಆದರೆ ಕಾಯಿನನು ಕೆಟ್ಟವನಾಗಿದ್ದನು, ಮತ್ತು ಅಂಥ ವ್ಯಕ್ತಿಗಳನ್ನು ದೇವರು ಮೆಚ್ಚುವುದಿಲ್ಲ. ಆದುದರಿಂದ ಕಾಯಿನನು ತನ್ನ ತಮ್ಮನನ್ನು ಕೊಂದ ನಂತರ, ಅವನ ಕುಟುಂಬದಿಂದ ಅವನನ್ನು ದೂರ ಕಳುಹಿಸುವ ಮೂಲಕ ದೇವರು ಅವನನ್ನು ಶಿಕ್ಷಿಸಿದನು. ಕಾಯಿನನು ಭೂಮಿಯ ಇನ್ನೊಂದು ಭಾಗದಲ್ಲಿ ಜೀವಿಸಲು ಹೋದಾಗ, ಅವನು ತನ್ನ ಸಹೋದರಿಯರಲ್ಲಿ ಒಬ್ಬಳನ್ನು ತನ್ನೊಂದಿಗೆ ಕರೆದುಕೊಂಡು ಹೋದನು ಮತ್ತು ಅವಳು ಅವನ ಪತ್ನಿಯಾದಳು.

ಸಕಾಲದಲ್ಲಿ ಕಾಯಿನ ಮತ್ತು ಅವನ ಪತ್ನಿ ಮಕ್ಕಳನ್ನು ಪಡೆಯಲಾರಂಭಿಸಿದರು. ಆದಾಮಹವ್ವರ ಬೇರೆ ಗಂಡು-ಹೆಣ್ಣು ಮಕ್ಕಳು ಮದುವೆಯಾದರು. ಅವರಿಗೂ ಮಕ್ಕಳಾಯಿತು. ಬಲುಬೇಗನೆ ಭೂಮಿಯಲ್ಲಿ ಅನೇಕ ಜನರಾದರು. ಅವರಲ್ಲಿ ಕೆಲವರ ಕುರಿತು ನಾವು ತಿಳಿಯೋಣ.