ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 10

ಮಹಾ ಜಲಪ್ರಳಯ

ಮಹಾ ಜಲಪ್ರಳಯ

ನಾವೆಯ ಹೊರಗೆ ಜನರು ಹಿಂದಿನಂತೆ ಯಥಾಪ್ರಕಾರವಾಗಿ ತಮ್ಮ ಜೀವನ ನಡಿಸುತ್ತಾ ಇದ್ದರು. ಜಲಪ್ರಳಯ ಬರುವುದೆಂದು ಅವರು ಇನ್ನೂ ನಂಬಿರಲಿಲ್ಲ. ಅವರು ಎಂದಿಗಿಂತಲೂ ಹೆಚ್ಚು ಬಿದ್ದುಬಿದ್ದು ನಕ್ಕಿದ್ದಿರಬೇಕು. ಆದರೆ ಸ್ವಲ್ಪದರಲ್ಲೇ ಅವರು ನಗುವುದನ್ನು ನಿಲ್ಲಿಸಬೇಕಾಯಿತು.

ಇದ್ದಕ್ಕಿದ್ದ ಹಾಗೆ ನೀರು ಬೀಳತೊಡಗಿತು. ನೀವು ಒಂದು ಬಕೇಟಿನಿಂದ ನೀರನ್ನು ಹೊಯ್ಯುವಾಗ ಹೇಗೋ ಹಾಗೆ ನೀರು ಆಕಾಶದಿಂದ ಭೂಮಿಗೆ ಧಾರಾಕಾರವಾಗಿ ಸುರಿಯಿತು. ನೋಹನು ಹೇಳಿದ್ದು ಸತ್ಯವಾಗಿತ್ತು! ಆದರೆ ಬೇರೆ ಯಾರೂ ನಾವೆಯೊಳಗೆ ಪ್ರವೇಶಿಸುವುದಕ್ಕೆ ಆಗಲಿಲ್ಲ. ಸಮಯ ಮೀರಿಹೋಗಿತ್ತು. ಯೆಹೋವನು ಬಾಗಿಲನ್ನು ಗಟ್ಟಿಯಾಗಿ ಮುಚ್ಚಿದ್ದನು.

ಬಲುಬೇಗನೆ ತಗ್ಗು ಪ್ರದೇಶದೆಲ್ಲೆಲ್ಲಾ ನೀರು ತುಂಬಿಕೊಂಡಿತು. ನೀರು ದೊಡ್ಡ ನದಿಗಳಂತಾಯಿತು. ಅದು ಮರಗಳನ್ನು ಬೀಳಿಸಿ, ದೊಡ್ಡ ಕಲ್ಲುಗಳನ್ನು ಸುತ್ತಲೂ ಉರುಳಾಡಿಸಿ, ಬಲು ಸದ್ದನ್ನು ಮಾಡಿತು. ಜನರು ಭಯಭೀತರಾದರು. ಅವರು ಎತ್ತರವಾದ ಪ್ರದೇಶದ ಮೇಲೆ ಹತ್ತಿದರು. ಓ, ನೋಹನ ಮಾತನ್ನು ಕೇಳಿ ಬಾಗಿಲು ಇನ್ನೂ ತೆರೆದಿದ್ದಾಗಲೇ ನಾವೆಯೊಳಗೆ ಹೋಗಬೇಕಿತ್ತೆಂದು ಅವರು ಬಯಸಿದರು. ಆದರೆ ಸಮಯ ಕೈಮೀರಿಹೋಗಿತ್ತು.

ನೀರು ಏರುತ್ತಾ ಮೇಲೇರುತ್ತಾ ಹೋಯಿತು. ಆಕಾಶದಿಂದ ಮಳೆ 40 ದಿನ ಹಗಲುರಾತ್ರಿ ಬಿರುಸಾಗಿ ಸುರಿಯಿತು. ನೀರು ಬೆಟ್ಟಗಳ ಪಕ್ಕಗಳಲ್ಲಿ ಏರತೊಡಗಿತು. ಬೇಗನೆ ಎತ್ತರವಾದ ಬೆಟ್ಟಗಳು ಸಹ ಮುಚ್ಚಿಹೋದವು. ಹೀಗೆ ದೇವರು ಹೇಳಿದಂತೆಯೇ ನಾವೆಯ ಹೊರಗಿದ್ದ ಜನರೆಲ್ಲರೂ ಸತ್ತರು. ಪ್ರಾಣಿಗಳೆಲ್ಲವೂ ಸತ್ತವು. ಆದರೆ ನಾವೆಯ ಒಳಗಿದ್ದ ಎಲ್ಲರೂ ಸುರಕ್ಷಿತರಾಗಿದ್ದರು.

ನೋಹ ಮತ್ತು ಅವನ ಪುತ್ರರು ನಾವೆಯನ್ನು ಉತ್ತಮ ರೀತಿಯಲ್ಲಿ ಕಟ್ಟಿದ್ದರು. ನೀರು ಅದನ್ನು ಮೇಲಕ್ಕೆತ್ತಿತು, ಮತ್ತು ಅದು ನೀರಿನ ಮೇಲೆ ತೇಲುತ್ತಾ ಇತ್ತು. ಅನಂತರ ಒಂದು ದಿನ ಮಳೆ ಬೀಳುವುದು ನಿಂತಿತ್ತು. ಸೂರ್ಯನು ಬೆಳಗತೊಡಗಿದನು. ಆಹಾ, ಅದೆಂಥ ನೋಟವಾಗಿತ್ತು! ಎಲ್ಲೆಲ್ಲಿಯೂ ಒಂದು ದೊಡ್ಡ ಸಾಗರ ಮಾತ್ರವಿತ್ತು. ಕಣ್ಣಿಗೆ ಕಾಣಿಸುತ್ತಿದ್ದ ವಸ್ತುವೆಂದರೆ, ನೀರಿನ ಮೇಲೆ ತೇಲಾಡುತ್ತಿದ್ದ ನಾವೆಯೊಂದೇ.

ಮಹಾಶರೀರಿಗಳು ಈಗ ಸತ್ತು ಹೋಗಿದ್ದರು. ಜನರಿಗೆ ಕೇಡುಮಾಡಲು ಅವರು ಇನ್ನು ಮುಂದೆ ಭೂಮಿ ಮೇಲೆ ಇರಲಿಲ್ಲ. ಅವರೆಲ್ಲರೂ ಅವರ ತಾಯಂದಿರೊಂದಿಗೆ ಮತ್ತು ಬೇರೆ ಕೆಟ್ಟ ಜನರೊಂದಿಗೆ ಸತ್ತುಹೋಗಿದ್ದರು. ಆದರೆ ಅವರ ತಂದೆಯಂದಿರಿಗೆ ಏನು ಸಂಭವಿಸಿತು?

ಅವರ ತಂದೆಯರು ಯಾರೆಂದು ನಿಮಗೆ ನೆನಪಿದೆಯೋ? ಅವರು ಒಮ್ಮೆ ದೇವದೂತರಾಗಿದ್ದರು. ಪರಲೋಕದಿಂದ ಭೂಮಿಗೆ ಇಳಿದು ಬಂದು ಮಾನವ ದೇಹಗಳನ್ನು ಧರಿಸಿಕೊಂಡವರಾಗಿದ್ದರು. ಆದುದರಿಂದ, ಜಲಪ್ರಳಯವು ಬಂದಾಗ ಅವರು ಬೇರೆ ಜನರೊಂದಿಗೆ ಸತ್ತುಹೋಗಲಿಲ್ಲ. ತಾವು ಧರಿಸಿದ್ದ ಮಾನವ ದೇಹಗಳನ್ನು ಉಪಯೋಗಿಸುವುದನ್ನು ಅವರು ನಿಲ್ಲಿಸಿ, ದೇವದೂತರೋಪಾದಿ ಪರಲೋಕಕ್ಕೆ ಹಿಂದೆ ಹೋದರು. ಆದರೆ ದೇವರು ತನ್ನ ದೂತರ ಕುಟುಂಬದ ಭಾಗವಾಗುವುದಕ್ಕೆ ಅವರಿಗೆ ಇನ್ನು ಮುಂದೆ ಅನುಮತಿ ಕೊಡಲಿಲ್ಲ. ಹೀಗೆ ಅವರು ಸೈತಾನನ ದೂತರಾದರು. ಬೈಬಲ್‌ನಲ್ಲಿ ಅವರನ್ನು ದೆವ್ವಗಳೆಂದು ಕರೆಯಲಾಗಿದೆ.

ಬಳಿಕ ದೇವರು ಗಾಳಿ ಬೀಸುವಂತೆ ಮಾಡಿದನು. ಆಗ ಪ್ರಳಯದ ನೀರು ಇಳಿಯತೊಡಗಿತು. ಐದು ತಿಂಗಳ ನಂತರ ನಾವೆಯು ಒಂದು ಬೆಟ್ಟದ ಮೇಲೆ ನಿಂತಿತು. ಇನ್ನೂ ಅನೇಕ ದಿನಗಳು ದಾಟಿದಾಗ ನಾವೆಯೊಳಗೆ ಇರುವವರು ಹೊರಗೆ ಪರ್ವತಗಳ ಶಿಖರಗಳನ್ನು ನೋಡಶಕ್ತರಾದರು. ನೀರು ತಗ್ಗುತ್ತಾ ತಗ್ಗುತ್ತಾ ಬಂತು.

ತರುವಾಯ ನೋಹನು ಭೂಮಿಯಿಂದ ನೀರು ಇಳಿದು ಹೋಯಿತೋ ಇಲ್ಲವೋ ಎಂದು ತಿಳಿಯಲು ಬಯಸಿದನು. ಅದಕ್ಕಾಗಿ ಅವನು ಡೊಂಬಕಾಗೆ ಎಂದು ಕರೆಯಲ್ಪಡುವ ಒಂದು ಕಪ್ಪು ಪಕ್ಷಿಯನ್ನು ನಾವೆಯಿಂದ ಹೊರಗೆ ಬಿಟ್ಟನು. ಅದು ತುಸು ಹೊತ್ತು ಹೊರಗೆ ಹಾರುತ್ತಾ, ಅನಂತರ ವಾಪಾಸ್ಸು ಬರುತ್ತಾ ಇತ್ತು. ಯಾಕೆಂದರೆ ಕಾಲಿಡಲಿಕ್ಕೆ ಒಂದು ಒಳ್ಳೆಯ ಸ್ಥಳ ಅದಕ್ಕೆ ಕಾಣಲಿಲ್ಲ. ಅದು ಹೀಗೆ ಹೋಗುತ್ತಾ ಬರುತ್ತಾ ಇತ್ತು. ಪ್ರತಿ ಸಲ ಹಿಂದೆ ಬಂದಾಗ ನಾವೆಯ ಮೇಲೆ ವಿರಮಿಸುತ್ತಿತ್ತು.

ಬಳಿಕ, ಅವನೊಂದು ಪಾರಿವಾಳವನ್ನು ನಾವೆಯಿಂದ ಹೊರಕ್ಕೆ ಬಿಟ್ಟನು. ಆದರೆ ಪಾರಿವಾಳವು ಸಹ ಹಿಂದೆ ಬಂತು ಯಾಕೆಂದರೆ ಇಳುಕೊಳ್ಳಲು ಅದಕ್ಕೆ ಸ್ಥಳ ಸಿಗಲಿಲ್ಲ. ನೋಹನು ಎರಡನೆಯ ಸಾರಿ ಅದನ್ನು ಹೊರಕ್ಕೆ ಬಿಟ್ಟನು. ಹಿಂದೆ ಹಾರಿ ಬರುವಾಗ ಆಹಾ, ಅದು ತನ್ನ ಕೊಕ್ಕಿನಲ್ಲಿ ಆಲಿವ್‌ ಎಲೆಯನ್ನು ತಂದಿತು. ಹೀಗೆ ನೀರು ಇಳಿದುಹೋಯಿತೆಂದು ನೋಹನು ತಿಳಿದುಕೊಂಡನು. ನೋಹನು ಮೂರನೆಯ ಬಾರಿ ಪಾರಿವಾಳವನ್ನು ಹೊರಗೆ ಬಿಟ್ಟನು. ಕೊನೆಗೆ ಅದು ವಾಸಿಸಲಿಕ್ಕಾಗಿ ಒಂದು ಒಣನೆಲವನ್ನು ಕಂಡುಕೊಂಡಿತು.

ದೇವರು ಆಗ ನೋಹನೊಂದಿಗೆ ಮಾತಾಡಿದನು. ಅವನಂದದ್ದು: ‘ನಾವೆಯೊಳಗಿಂದ ಹೊರಗೆ ಬಾ. ನಿನ್ನ ಇಡೀ ಕುಟುಂಬವನ್ನು ಮತ್ತು ಪ್ರಾಣಿಗಳನ್ನು ನಿನ್ನೊಂದಿಗೆ ಕರೆದುಕೊಂಡು ಬಾ.’ ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯ ಅವರು ನಾವೆಯ ಒಳಗೆ ಇದ್ದರು. ಆದುದರಿಂದ ಪುನಃ ಹೊರಗೆ ಬರಲು ಮತ್ತು ಜೀವಂತರಾಗಿರಲು ಅವರೆಲ್ಲರೂ ಎಷ್ಟು ಸಂತೋಷಪಟ್ಟಿರಬೇಕು!