ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 15

ಲೋಟನ ಪತ್ನಿ ಹಿಂದೆ ನೋಡಿದಳು

ಲೋಟನ ಪತ್ನಿ ಹಿಂದೆ ನೋಡಿದಳು

ಲೋಟ ಮತ್ತು ಅವನ ಕುಟುಂಬ ಕಾನಾನ್‌ ದೇಶದಲ್ಲಿ ಅಬ್ರಹಾಮನೊಂದಿಗೆ ಕೂಡಿ ವಾಸಿಸಿತು. ಒಂದು ದಿನ ಅಬ್ರಹಾಮನು ಲೋಟನಿಗೆ ಹೇಳಿದ್ದು: ‘ನಮ್ಮ ಎಲ್ಲಾ ಪಶುಗಳಿಗೆ ಇಲ್ಲಿ ಸಾಕಷ್ಟು ಸ್ಥಳ ಇಲ್ಲ. ಆದುದರಿಂದ ದಯವಿಟ್ಟು ನಾವು ಪ್ರತ್ಯೇಕವಾಗೋಣ. ನೀನು ಒಂದು ಕಡೆ ಹೋದರೆ ನಾನು ಇನ್ನೊಂದು ಕಡೆ ಹೋಗುವೆನು.’

ಲೋಟನು ದೇಶದ ಸುತ್ತಮುತ್ತ ನೋಡಿದನು. ತುಂಬಾ ನೀರಿರುವ ಮತ್ತು ಪಶುಗಳಿಗಾಗಿ ತುಂಬಾ ಒಳ್ಳೆಯ ಹುಲ್ಲು ಇರುವ ದೇಶದ ಒಂದು ಅತ್ಯುತ್ತಮ ಭಾಗವನ್ನು ಅವನು ಕಂಡನು. ಇದು ಯೊರ್ದನ್‌ ಪ್ರದೇಶವಾಗಿತ್ತು. ಹೀಗೆ ಲೋಟನು ತನ್ನ ಕುಟುಂಬ ಮತ್ತು ಪಶುಗಳೊಂದಿಗೆ ಅಲ್ಲಿಗೆ ಹೋಗಿ ಜೀವಿಸಿದನು. ಅವರು ಕೊನೆಗೆ ಸೊದೋಮ್‌ ಎಂಬ ಪಟ್ಟಣದಲ್ಲಿ ತಮ್ಮ ಮನೆಯನ್ನು ಮಾಡಿದರು.

ಸೊದೋಮಿನ ಜನರು ಅತಿ ಕೆಟ್ಟವರಾಗಿದ್ದರು. ಇದು ಲೋಟನನ್ನು ಕ್ಷೋಭೆಗೊಳಿಸಿತು. ಯಾಕೆಂದರೆ ಅವನು ಒಬ್ಬ ಒಳ್ಳೆಯ ಮನುಷ್ಯನಾಗಿದ್ದನು. ಸೊದೋಮ್‌ ನಗರವನ್ನು ನೋಡಿ ದೇವರು ಸಹ ತುಂಬಾ ನೊಂದುಕೊಂಡನು. ಕೊನೆಗೆ ದೇವರು, ಅವರ ಕೆಟ್ಟತನದ ಕಾರಣ ತಾನು ಸೊದೋಮನ್ನೂ ಅದರ ಸಮೀಪವಿದ್ದ ಗೊಮೋರ ಪಟ್ಟಣವನ್ನೂ ನಾಶಮಾಡಲಿದ್ದೇನೆಂಬ ಎಚ್ಚರಿಕೆಯನ್ನು ಲೋಟನಿಗೆ ಕೊಡಲು ಇಬ್ಬರು ದೇವದೂತರನ್ನು ಕಳುಹಿಸಿದನು.

ಆ ದೂತರು ಲೋಟನಿಗೆ ಹೇಳಿದ್ದು: ‘ನೀನೆದ್ದು ನಿನ್ನ ಹೆಂಡತಿಯನ್ನೂ ನಿನ್ನ ಇಬ್ಬರು ಹೆಣ್ಣು ಮಕ್ಕಳನ್ನೂ ಕರಕೊಂಡು ಬೇಗ ಇಲ್ಲಿಂದ ಹೊರಟುಹೋಗು!’ ಲೋಟ ಮತ್ತು ಅವನ ಕುಟುಂಬ ಹೊರಡುವುದರಲ್ಲಿ ತುಸು ತಡಮಾಡಿದ್ದರಿಂದ ದೇವದೂತರು ಅವರ ಕೈಹಿಡಿದು ಕರತಂದು ಊರಾಚೆಗೆ ಬಿಟ್ಟರು. ಅನಂತರ ದೇವದೂತರಲ್ಲಿ ಒಬ್ಬನು ಅಂದದ್ದು: ‘ಬೇಗನೆ ಇಲ್ಲಿಂದ ಓಡಿಹೋಗಿರಿ! ಹಿಂದೆ ತಿರುಗಿ ನೋಡಬೇಡಿರಿ. ನಿಮ್ಮ ಜೀವವನ್ನು ಉಳಿಸಿಕೊಳ್ಳಲಿಕ್ಕಾಗಿ ಬೆಟ್ಟಗಳಿಗೆ ಓಡಿಹೋಗಿರಿ.’

ಲೋಟ ಮತ್ತು ಅವನ ಹೆಣ್ಣುಮಕ್ಕಳು ವಿಧೇಯರಾಗಿ ಸೊದೋಮಿನಿಂದ ದೂರ ಓಡಿಹೋದರು. ಅವರು ಒಂದು ಕ್ಷಣವಾದರೂ ನಿಲ್ಲಲಿಲ್ಲ ಮತ್ತು ಹಿಂದಕ್ಕೆ ನೋಡಲಿಲ್ಲ. ಆದರೆ ಲೋಟನ ಹೆಂಡತಿ ಅವಿಧೇಯಳಾದಳು. ಅವರು ಸೊದೋಮಿನಿಂದ ಸ್ವಲ್ಪ ದೂರ ಹೋದನಂತರ, ಅವಳು ನಿಂತು ಹಿಂದಕ್ಕೆ ನೋಡಿದಳು. ಆಗ ಲೋಟನ ಹೆಂಡತಿ ಉಪ್ಪಿನ ಕಂಬವಾದಳು. ಚಿತ್ರದಲ್ಲಿ ಅವಳನ್ನು ನೀವು ನೋಡಬಲ್ಲಿರೋ?

ಇದರಿಂದ ನಾವು ಒಂದು ಉತ್ತಮ ಪಾಠವನ್ನು ಕಲಿಯಬಲ್ಲೆವು. ಅದಾವುದೆಂದರೆ, ದೇವರು ತನಗೆ ವಿಧೇಯರಾಗುವವರನ್ನು ರಕ್ಷಿಸುತ್ತಾನೆ ಮತ್ತು ಯಾರು ಆತನಿಗೆ ವಿಧೇಯರಾಗುವುದಿಲ್ಲವೋ ಅವರು ತಮ್ಮ ಪ್ರಾಣಗಳನ್ನು ಕಳೆದುಕೊಳ್ಳುವರು.