ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 17

ಭಿನ್ನರಾಗಿದ್ದ ಅವಳಿಗಳು

ಭಿನ್ನರಾಗಿದ್ದ ಅವಳಿಗಳು

ಇಲ್ಲಿರುವ ಇಬ್ಬರು ಹುಡುಗರು ತುಂಬಾ ಭಿನ್ನರಾಗಿದ್ದಾರೆ ಅಲ್ಲವೇ? ಅವರ ಹೆಸರು ನಿಮಗೆ ತಿಳಿದಿದೆಯೇ? ಬೇಟೆಯಾಡುತ್ತಿರುವವನು ಏಸಾವನು ಮತ್ತು ಕುರಿಗಳನ್ನು ಮೇಯಿಸುತ್ತಿರುವ ಹುಡುಗನು ಯಾಕೋಬನು.

ಇಸಾಕ ಮತ್ತು ರೆಬೆಕ್ಕಳ ಅವಳಿ ಮಕ್ಕಳೇ ಈ ಏಸಾವ ಮತ್ತು ಯಾಕೋಬ. ತಂದೆ ಇಸಾಕನು ಏಸಾವನನ್ನು ಬಹಳವಾಗಿ ಇಷ್ಟಪಟ್ಟನು. ಯಾಕೆಂದರೆ ಅವನೊಬ್ಬ ಒಳ್ಳೆಯ ಬೇಟೆಗಾರನಾಗಿದ್ದನು ಮತ್ತು ಕುಟುಂಬಕ್ಕಾಗಿ ಆಹಾರವನ್ನು ಮನೆಗೆ ತರುತ್ತಿದ್ದನು. ಆದರೆ ರೆಬೆಕ್ಕಳು ಯಾಕೋಬನನ್ನು ಬಹಳವಾಗಿ ಪ್ರೀತಿಸುತ್ತಿದ್ದಳು. ಯಾಕೆಂದರೆ ಅವನು ಸೌಮ್ಯ ಸ್ವಭಾವದ ಹುಡುಗನಾಗಿದ್ದನು.

ಅವರ ಅಜ್ಜ ಅಬ್ರಹಾಮನು ಇನ್ನೂ ಜೀವಿಸಿದ್ದನು. ಅಬ್ರಹಾಮನು ಯೆಹೋವನ ಕುರಿತು ಮಾತಾಡುವಾಗ ಯಾಕೋಬನು ಅದಕ್ಕೆ ಕಿವಿಗೊಡಲು ಎಷ್ಟು ಇಷ್ಟಪಟ್ಟಿರಬೇಕೆಂಬದನ್ನು ನಾವು ಕಲ್ಪಿಸಿಕೊಳ್ಳಬಹುದು. ಅಬ್ರಹಾಮನು 175 ವಯಸ್ಸಿನವನಾದಾಗ ಸತ್ತನು. ಆಗ ಆ ಮಕ್ಕಳಿಬ್ಬರು 15 ವರ್ಷ ಪ್ರಾಯದವರಾಗಿದ್ದರು.

ಏಸಾವನು 40 ವಯಸ್ಸಿನವನಾದಾಗ, ಕಾನಾನ್‌ ದೇಶದ ಇಬ್ಬರು ಸ್ತ್ರೀಯರನ್ನು ವಿವಾಹವಾದನು. ಇದು ಇಸಾಕ ಮತ್ತು ರೆಬೆಕ್ಕರನ್ನು ಬಹು ದುಃಖಿತರನ್ನಾಗಿ ಮಾಡಿತು. ಯಾಕೆಂದರೆ ಆ ಸ್ತ್ರೀಯರು ಯೆಹೋವನ ಆರಾಧಕರಾಗಿರಲಿಲ್ಲ.

ಒಂದು ದಿನ, ಏಸಾವನು ತನ್ನ ತಮ್ಮ ಯಾಕೋಬನೊಂದಿಗೆ ತುಂಬಾ ಕೋಪಗೊಳ್ಳುವಂಥ ಒಂದು ಸಂಗತಿಯು ನಡೆಯಿತು. ಇಸಾಕನು ತನ್ನ ದೊಡ್ಡ ಮಗನಿಗೆ ಆಶೀರ್ವಾದವನ್ನು ಕೊಡುವ ಸಮಯವು ಬಂತು. ಏಸಾವನು ಯಾಕೋಬನಿಗಿಂತ ದೊಡ್ಡವನಾಗಿದ್ದರಿಂದ, ಈ ಆಶೀರ್ವಾದವನ್ನು ಪಡೆದುಕೊಳ್ಳಲು ನಿರೀಕ್ಷಿಸಿದ್ದನು. ಆದರೆ ಆಶೀರ್ವಾದ ಪಡೆಯುವ ಹಕ್ಕನ್ನು ಏಸಾವನು ಈ ಮೊದಲೇ ಯಾಕೋಬನಿಗೆ ಮಾರಿದ್ದನು. ಅದಲ್ಲದೆ, ಯಾಕೋಬನಿಗೆ ಆ ಆಶೀರ್ವಾದ ಸಿಗುವುದೆಂದು ಆ ಇಬ್ಬರು ಹುಡುಗರು ಜನಿಸಿದಾಗಲೇ ದೇವರು ಹೇಳಿದ್ದನು. ಹಾಗೆಯೇ ಆಯಿತು. ಇಸಾಕನು ಆಶೀರ್ವಾದವನ್ನು ಯಾಕೋಬನಿಗೆ ಕೊಟ್ಟನು.

ತದನಂತರ, ಏಸಾವನಿಗೆ ಇದು ತಿಳಿದುಬಂದಾಗ ಅವನು ಯಾಕೋಬನ ಮೇಲೆ ಕೋಪಗೊಂಡನು. ಅವನೆಷ್ಟು ಕೋಪಗೊಂಡನೆಂದರೆ ಯಾಕೋಬನನ್ನು ಕೊಲ್ಲುವನೆಂದು ಹೇಳಿದನು. ರೆಬೆಕ್ಕಳು ಇದನ್ನು ಕೇಳಿದಾಗ ತುಂಬಾ ವ್ಯಥೆಗೀಡಾದಳು. ಆದುದರಿಂದ ಅವಳು ತನ್ನ ಗಂಡ ಇಸಾಕನಿಗೆ ಹೇಳಿದ್ದು: ‘ಯಾಕೋಬನು ಸಹ ಈ ಕಾನಾನ್ಯ ಸ್ತ್ರೀಯರಲ್ಲಿ ಒಬ್ಬಳನ್ನು ಮದುವೆಯಾದರೆ ಅದು ತುಂಬಾ ಕಷ್ಟವಾಗಿರುವುದು.’

ಆಗ ಇಸಾಕನು ತನ್ನ ಮಗ ಯಾಕೋಬನನ್ನು ಕರೆದು ಅವನಿಗೆ ಹೇಳಿದ್ದು: ‘ನೀನು ಕಾನಾನಿನ ಸ್ತ್ರೀಯನ್ನು ಮದುವೆಯಾಗಬೇಡ. ಬದಲಿಗೆ ಖಾರಾನ್‌ನಲ್ಲಿರುವ ನಿನ್ನ ಅಜ್ಜನಾದ ಬೆತೂವೇಲನ ಮನೆಗೆ ಹೊರಟುಹೋಗು. ಅವನ ಮಗನಾದ ಲಾಬಾನನ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಮದುವೆಯಾಗು.’

ಯಾಕೋಬನು ತನ್ನ ತಂದೆಯ ಮಾತನ್ನು ಕೇಳಿದನು ಮತ್ತು ಆ ಕೂಡಲೆ ಖಾರಾನಿನಲ್ಲಿ ತನ್ನ ಸಂಬಂಧಿಕರು ವಾಸಿಸುತ್ತಿದ್ದ ಸ್ಥಳಕ್ಕೆ ದೀರ್ಘ ಪ್ರಯಾಣವನ್ನು ಕೈಕೊಂಡನು.