ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 19

ಯಾಕೋಬನಿಗೆ ಒಂದು ದೊಡ್ಡ ಕುಟುಂಬವಿದೆ

ಯಾಕೋಬನಿಗೆ ಒಂದು ದೊಡ್ಡ ಕುಟುಂಬವಿದೆ

ಈ ದೊಡ್ಡ ಕುಟುಂಬವನ್ನು ನೋಡಿರಿ. ಇವರು ಯಾಕೋಬನ 12 ಗಂಡು ಮಕ್ಕಳು. ಅವನಿಗೆ ಹೆಣ್ಣು ಮಕ್ಕಳೂ ಇದ್ದರು. ಈ ಮಕ್ಕಳಲ್ಲಿ ಯಾರ ಹೆಸರುಗಳಾದರೂ ನಿಮಗೆ ಗೊತ್ತಿದೆಯೇ? ಕೆಲವರ ಹೆಸರುಗಳನ್ನು ನಾವು ತಿಳಿಯೋಣ.

ಲೇಯಳಿಗೆ ಹುಟ್ಟಿದ ಮಕ್ಕಳು ಯಾರೆಂದರೆ ರೂಬೇನ್‌, ಸಿಮೆಯೋನ್‌, ಲೇವಿ, ಮತ್ತು ಯೆಹೂದಾ. ರಾಹೇಲಳು ತನಗೆ ಮಕ್ಕಳಿರದ ಕಾರಣ ತುಂಬಾ ಬೇಸರಪಟ್ಟಳು. ಆದುದರಿಂದ ಅವಳು ತನ್ನ ದಾಸಿಯಾದ ಬಿಲ್ಹಳನ್ನು ಯಾಕೋಬನಿಗೆ ಕೊಟ್ಟಳು. ಬಿಲ್ಹಳಿಗೆ ದಾನ್‌ ಮತ್ತು ನಫ್ತಾಲಿ ಎಂಬ ಇಬ್ಬರು ಗಂಡು ಮಕ್ಕಳು ಹುಟ್ಟಿದರು. ಅನಂತರ ಲೇಯಳು ಸಹ ತನ್ನ ದಾಸಿಯಾದ ಜಿಲ್ಪಳನ್ನು ಯಾಕೋಬನಿಗೆ ಕೊಟ್ಟಳು. ಜಿಲ್ಪಳಿಗೆ ಗಾದ್‌ ಮತ್ತು ಆಶೇರ್‌ ಎಂಬವರು ಹುಟ್ಟಿದರು. ಲೇಯಳಿಗೆ ಕೊನೆಗೆ ಇಸ್ಸಾಕಾರ್‌ ಮತ್ತು ಜೆಬುಲೂನ್‌ ಎಂಬ ಇನ್ನೆರಡು ಗಂಡುಮಕ್ಕಳಾದರು.

ಕೊನೆಗೂ ರಾಹೇಲಳಿಗೆ ಒಂದು ಮಗುವಾಯಿತು. ಅವಳು ಅವನಿಗೆ ಯೋಸೇಫನೆಂದು ಹೆಸರಿಟ್ಟಳು. ಮುಂದೆ ನಾವು ಯೋಸೇಫನ ಕುರಿತು ಬಹಳಷ್ಟನ್ನು ಕಲಿಯಲಿರುವೆವು. ಯಾಕೆಂದರೆ ಅವನು ಒಬ್ಬ ಅತಿ ಪ್ರಾಮುಖ್ಯ ವ್ಯಕ್ತಿಯಾದನು. ರಾಹೇಲಳ ತಂದೆಯಾದ ಲಾಬಾನನೊಂದಿಗೆ ಜೀವಿಸಿದ್ದಾಗ ಯಾಕೋಬನಿಗೆ ಹುಟ್ಟಿದ 11 ಗಂಡು ಮಕ್ಕಳು ಇವರಾಗಿದ್ದರು.

ಯಾಕೋಬನಿಗೆ ಹೆಣ್ಣು ಮಕ್ಕಳು ಸಹ ಇದ್ದರು. ಆದರೆ ಬೈಬಲ್‌ನಲ್ಲಿ ಒಬ್ಬಳ ಹೆಸರನ್ನು ಮಾತ್ರ ಕೊಡಲಾಗಿದೆ. ಅವಳ ಹೆಸರು ದೀನ.

ಒಂದು ದಿನ ಯಾಕೋಬನು ಲಾಬಾನನನ್ನು ಬಿಟ್ಟು ಕಾನಾನಿಗೆ ಹೋಗಲು ನಿರ್ಣಯಿಸಿದನು. ಅವನು ತನ್ನ ದೊಡ್ಡ ಕುಟುಂಬವನ್ನೂ ದೊಡ್ಡ ಕುರಿ ಮಂದೆಗಳನ್ನೂ ದನಕರುಗಳ ಹಿಂಡುಗಳನ್ನೂ ಒಟ್ಟುಗೂಡಿಸಿಕೊಂಡು ದೀರ್ಘ ಪ್ರಯಾಣವನ್ನು ಪ್ರಾರಂಭಿಸಿದನು.

ಯಾಕೋಬನು ತನ್ನ ಕುಟುಂಬದೊಂದಿಗೆ ಕಾನಾನಿಗೆ ಹಿಂದಿರುಗಿ ಬಂದು ಸ್ವಲ್ಪ ಸಮಯದ ಅನಂತರ, ಬೇರೊಂದು ಊರಿಗೆ ಪ್ರಯಾಣಿಸುತ್ತಿದ್ದಾಗ ರಾಹೇಲಳು ಇನ್ನೊಬ್ಬ ಮಗನನ್ನು ಹೆತ್ತಳು. ರಾಹೇಲಳು ಬಹು ನೋವನ್ನು ಅನುಭವಿಸಿ ಕೊನೆಗೆ ಹೆರಿಗೆಯಾಗುತ್ತಿರುವಾಗ ತೀರಿಕೊಂಡಳು. ಆದರೆ ಪುಟಾಣಿ ಗಂಡು ಮಗು ಕ್ಷೇಮವಾಗಿತ್ತು. ಯಾಕೋಬನು ಅವನಿಗೆ ಬೆನ್ಯಾಮೀನ್‌ ಎಂದು ಹೆಸರಿಟ್ಟನು.

ಯಾಕೋಬನ 12 ಪುತ್ರರ ಹೆಸರನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಯಾಕೆಂದರೆ ಇಡೀ ಇಸ್ರಾಯೇಲ್‌ ಜನಾಂಗವು ಅವರಿಂದ ಉಂಟಾಯಿತು. ನಿಜ ಹೇಳುವುದಾದರೆ, ಇಸ್ರಾಯೇಲಿನ 12 ಕುಲಗಳಿಗೆ ಯಾಕೋಬನ 10 ಪುತ್ರರ ಮತ್ತು ಯೋಸೇಫನ ಇಬ್ಬರು ಪುತ್ರರ ಹೆಸರುಗಳು ಕೊಡಲ್ಪಟ್ಟಿವೆ. ಇಸಾಕನು ಈ ಎಲ್ಲಾ ಹುಡುಗರು ಹುಟ್ಟಿದ ಮೇಲೆ ಅನೇಕ ವರ್ಷಗಳ ತನಕ ಬದುಕಿದನು. ಮತ್ತು ಅಷ್ಟು ಮಂದಿ ಮೊಮ್ಮಕ್ಕಳಿಗೆ ಅಜ್ಜನಾಗಿರುವುದು ಅವನಿಗೆ ಬಹಳ ಆನಂದವನ್ನು ತಂದಿರಬೇಕು. ಆದರೆ ಅವನ ಮೊಮ್ಮಗಳಾದ ದೀನಳಿಗೆ ಏನಾಯಿತೆಂದು ನಾವು ನೋಡೋಣ.