ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 27

ಒಬ್ಬ ಕೆಟ್ಟ ಅರಸನು ಐಗುಪ್ತವನ್ನು ಆಳುತ್ತಾನೆ

ಒಬ್ಬ ಕೆಟ್ಟ ಅರಸನು ಐಗುಪ್ತವನ್ನು ಆಳುತ್ತಾನೆ

ಚಿತ್ರದಲ್ಲಿ ಕಾಣುವ ಪುರುಷರು ಒತ್ತಾಯವಾಗಿ ಜನರನ್ನು ಕೆಲಸಮಾಡಿಸುತ್ತಿದ್ದಾರೆ. ಆ ಕಡೆಯಿರುವ ಪುರುಷನನ್ನು ನೋಡಿರಿ! ಅವನು ಕೆಲಸಗಾರನೊಬ್ಬನನ್ನು ಕೊರಡೆಯಿಂದ ಹೊಡೆಯುತ್ತಿದ್ದಾನೆ. ಕೆಲಸಗಾರರು ಯಾಕೋಬನ ಕುಟುಂಬದವರು. ಅವರನ್ನು ಇಸ್ರಾಯೇಲ್ಯರೆಂದು ಕರೆಯಲಾಗುತ್ತದೆ. ಅವರನ್ನು ಕೆಲಸಮಾಡಲು ಒತ್ತಾಯಪಡಿಸುತ್ತಿರುವ ಪುರುಷರು ಐಗುಪ್ತದವರು. ಇಸ್ರಾಯೇಲ್ಯರು ಐಗುಪ್ತ್ಯರ ಗುಲಾಮರಾಗಿದ್ದಾರೆ. ಅವರು ಗುಲಾಮರಾದದ್ದಾದರೂ ಹೇಗೆ?

ಯಾಕೋಬನ ದೊಡ್ಡ ಕುಟುಂಬದವರೆಲ್ಲರೂ ಐಗುಪ್ತದಲ್ಲಿ ಅನೇಕ ವರ್ಷಗಳ ವರೆಗೆ ಸಮಾಧಾನದಿಂದ ಜೀವಿಸಿದರು. ಐಗುಪ್ತದ ಅರಸ ಫರೋಹನಿಗೆ ನಂತರದ ದೊಡ್ಡ ಸ್ಥಾನದಲ್ಲಿದ್ದ ಯೋಸೇಫನು ಅವರನ್ನು ನೋಡಿಕೊಳ್ಳುತ್ತಿದ್ದನು. ಸಮಯಾನಂತರ ಯೋಸೇಫನು ಸತ್ತನು ಮತ್ತು ಆ ಬಳಿಕ ಒಬ್ಬ ಹೊಸ ಫರೋಹನು ಐಗುಪ್ತದ ರಾಜನಾದನು. ಅವನಿಗೆ ಇಸ್ರಾಯೇಲ್ಯರನ್ನು ಕಂಡರೆ ಆಗುತ್ತಿರಲಿಲ್ಲ.

ಹಾಗಾಗಿ ಈ ಕೆಟ್ಟ ಫರೋಹನು ಇಸ್ರಾಯೇಲ್ಯರನ್ನು ಗುಲಾಮರನ್ನಾಗಿ ಮಾಡಿಕೊಂಡನು. ಅಲ್ಲದೆ, ಅವರನ್ನು ಕೆಲಸಮಾಡಿಸಲು ಕ್ರೂರಿಗಳಾಗಿದ್ದ ನಿರ್ದಯ ಪುರುಷರನ್ನು ನೇಮಿಸಿದನು. ಅವರು ಫರೋಹನಿಗಾಗಿ ಪಟ್ಟಣಗಳನ್ನು ಕಟ್ಟಲು ಕಠಿನವಾಗಿ ದುಡಿಯುವಂತೆ ಇಸ್ರಾಯೇಲ್ಯರನ್ನು ಒತ್ತಾಯಿಸುತ್ತಿದ್ದರು. ಆದರೆ ಇಸ್ರಾಯೇಲ್ಯರ ಸಂಖ್ಯೆಯು ಹೆಚ್ಚುತ್ತಾ ಬಂತು. ಸ್ವಲ್ಪ ಸಮಯದ ಬಳಿಕ, ಇಸ್ರಾಯೇಲ್ಯರು ಇನ್ನಷ್ಟು ಹೆಚ್ಚಾಗಿ ಬಲಾಢ್ಯರಾಗುವರು ಎಂದು ಐಗುಪ್ತ್ಯರು ಹೆದರಿದರು.

ಆಗ ಫರೋಹನು ಏನು ಮಾಡಿದನು ಗೊತ್ತಾ? ಇಸ್ರಾಯೇಲ್ಯ ತಾಯಂದಿರಿಗೆ ಹೆರಿಗೆಯ ಸಮಯದಲ್ಲಿ ಸಹಾಯಮಾಡುತ್ತಿದ್ದ ಸ್ತ್ರೀಯರನ್ನು ಕರೆದು, ‘ನೀವು ಇಸ್ರಾಯೇಲ್ಯರಿಗೆ ಹುಟ್ಟುವ ಪ್ರತಿಯೊಂದು ಗಂಡು ಮಗುವನ್ನು ಕೊಲ್ಲಬೇಕು’ ಎಂದು ಅವರಿಗೆ ಅಪ್ಪಣೆಕೊಟ್ಟನು. ಆದರೆ ಅವರು ಕೂಸುಗಳನ್ನು ಕೊಲ್ಲಲೇ ಇಲ್ಲ. ಏಕೆಂದರೆ ಅವರು ಒಳ್ಳೆಯ ಸ್ತ್ರೀಯರಾಗಿದ್ದರು.

ಆದುದರಿಂದ ಫರೋಹನು ತನ್ನೆಲ್ಲಾ ಜನರಿಗೆ, ‘ಇಸ್ರಾಯೇಲ್ಯ ಗಂಡು ಕೂಸುಗಳನ್ನೆಲ್ಲಾ ಕೊಲ್ಲಿರಿ. ಹೆಣ್ಣು ಕೂಸುಗಳನ್ನು ಮಾತ್ರ ಉಳಿಸಿರಿ’ ಎಂದು ಆಜ್ಞೆ ಕೊಟ್ಟನು. ಎಂಥ ಭೀಕರ ಕೃತ್ಯವನ್ನು ಮಾಡಲು ಫರೋಹನು ಆಜ್ಞಾಪಿಸಿದನಲ್ಲವೆ? ಆದರೆ ಒಂದು ಗಂಡು ಕೂಸನ್ನು ಹೇಗೆ ಸಂರಕ್ಷಿಸಲಾಯಿತು ಎಂದು ನಾವು ನೋಡೋಣ.