ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 28

ಪುಟಾಣಿ ಮೋಶೆ ಸಂರಕ್ಷಿಸಲ್ಪಟ್ಟ ವಿಧ

ಪುಟಾಣಿ ಮೋಶೆ ಸಂರಕ್ಷಿಸಲ್ಪಟ್ಟ ವಿಧ

ಈ ಪುಟ್ಟ ಕಂದ ಅಳುತ್ತಿರುವುದನ್ನೂ ಆ ಸ್ತ್ರೀಯ ಬೆರಳನ್ನು ಗಟ್ಟಿಯಾಗಿ ಹಿಡಿದಿರುವುದನ್ನೂ ನೋಡಿರಿ. ಇವನು ಮೋಶೆ. ಸುಂದರಿಯಾದ ಆ ಮಹಿಳೆಯು ಯಾರೆಂದು ನಿಮಗೆ ಗೊತ್ತೋ? ಅವಳು ಐಗುಪ್ತ್ಯದ ರಾಜಕುಮಾರಿ, ಫರೋಹನ ಮಗಳು.

ಮೋಶೆಯ ತಾಯಿ ಐಗುಪ್ತ್ಯರು ತನ್ನ ಕೂಸನ್ನು ಕೊಲ್ಲದಂತೆ ಮೂರು ತಿಂಗಳ ತನಕ ಬಚ್ಚಿಟ್ಟಳು. ಆದರೆ ಅವರು ಹೇಗಾದರೂ ಮೋಶೆಯನ್ನು ಕಂಡುಹಿಡಿಯಬಹುದೆಂದು ಅವಳಿಗೆ ತಿಳಿದಿತ್ತು. ಆದುದರಿಂದ ಅವನನ್ನು ಸಂರಕ್ಷಿಸಲು ಅವಳೊಂದು ಉಪಾಯ ಮಾಡಿದಳು.

ಅವಳು ಒಂದು ಬುಟ್ಟಿಯನ್ನು ತೆಗೆದುಕೊಂಡು ಯಾವ ರೀತಿಯಲ್ಲೂ ನೀರು ಒಳಗೆ ಹೋಗದಂತೆ ಮಾಡಿದಳು. ಅನಂತರ ಮೋಶೆಯನ್ನು ಅದರೊಳಗೆ ಮಲಗಿಸಿ, ಆ ಬುಟ್ಟಿಯನ್ನು ನೈಲ್‌ ನದಿಯ ತೀರದಲ್ಲಿದ್ದ ಎತ್ತರವಾದ ಹುಲ್ಲಿನಲ್ಲಿಟ್ಟಳು. ಏನಾಗುವುದೆಂದು ಸ್ವಲ್ಪ ದೂರದಲ್ಲಿ ನಿಂತು ನೋಡುವಂತೆ ಮೋಶೆಯ ಅಕ್ಕ ಮಿರ್ಯಾಮಳಿಗೆ ಹೇಳಿದಳು.

ಅಷ್ಟರಲ್ಲಿ ಫರೋಹನ ಮಗಳು ಸ್ನಾನಕ್ಕಾಗಿ ನೈಲ್‌ ನದಿಗೆ ಇಳಿದುಬಂದಳು. ಎತ್ತರವಾದ ಹುಲ್ಲಿನಲ್ಲಿದ್ದ ಆ ಬುಟ್ಟಿಯು ಥಟ್ಟನೆ ಆಕೆಯ ಕಣ್ಣಿಗೆ ಬಿತ್ತು. ಅವಳು ತನ್ನ ಸೇವಕಿಯರಲ್ಲಿ ಒಬ್ಬಳನ್ನು ಕರೆದು, ‘ಆ ಬುಟ್ಟಿಯನ್ನು ಇಲ್ಲಿ ತೆಗೆದುಕೊಂಡು ಬಾ’ ಎಂದಳು. ರಾಜಕುಮಾರಿಯು ಬುಟ್ಟಿಯನ್ನು ತೆರೆದಾಗ ಮುದ್ದಾದ ಕೂಸನ್ನು ಕಂಡಳು! ಪುಟಾಣಿ ಮೋಶೆ ಅಳುತ್ತಿದ್ದ. ರಾಜಕುಮಾರಿಗೆ ಮಗುವನ್ನು ನೋಡಿ ಮನಕರಗಿತು. ಅದು ಕೊಲ್ಲಲ್ಪಡದಂತೆ ಕಾಪಾಡಲು ಆಕೆ ಬಯಸಿದಳು.

ಆಗ ಮಿರ್ಯಾಮಳು ಹತ್ತಿರ ಬಂದಳು. ಅವಳನ್ನು ನೀವು ಚಿತ್ರದಲ್ಲಿ ಕಾಣಬಲ್ಲಿರಿ. ‘ನಿಮಗೋಸ್ಕರ ಈ ಕೂಸಿಗೆ ಹಾಲುಣಿಸಿ ಸಾಕುವುದಕ್ಕೆ ನಾನು ಹೋಗಿ ಒಬ್ಬ ಇಸ್ರಾಯೇಲ್ಯ ಸ್ತ್ರೀಯನ್ನು ಕರೆದುಕೊಂಡು ಬರಲೋ?’ ಎಂದು ಫರೋಹನ ಮಗಳನ್ನು ಮಿರ್ಯಾಮ್‌ ಕೇಳಿದಳು.

ಅದಕ್ಕೆ ರಾಜಕುಮಾರಿ ‘ಸರಿ, ಕರೆದುಕೊಂಡು ಬಾ’ ಎಂದಳು.

ಕೂಡಲೆ ಮಿರ್ಯಾಮ್‌ ತಾಯಿಗೆ ವಿಷಯ ತಿಳಿಸಲು ಓಡಿದಳು. ಮೋಶೆಯ ತಾಯಿ ಬಂದಾಗ ರಾಜಕುಮಾರಿಯು, ‘ನೀನು ಈ ಮಗುವನ್ನು ತೆಗೆದುಕೊಂಡು ಹೋಗಿ ನನಗೋಸ್ಕರ ಸಾಕಮ್ಮಾ, ನಾನೇ ನಿನಗೆ ಸಂಬಳವನ್ನು ಕೊಡುವೆನು’ ಎಂದು ಹೇಳಿದಳು.

ಹೀಗೆ ಮೋಶೆಯ ತಾಯಿಯು ತನ್ನ ಸ್ವಂತ ಕಂದನ ಆರೈಕೆಯನ್ನು ಮಾಡಿದಳು. ಅನಂತರ ಮೋಶೆಯು ಸಾಕಷ್ಟು ದೊಡ್ಡವನಾದಾಗ, ಅವಳು ಅವನನ್ನು ಫರೋಹನ ಮಗಳ ಬಳಿಗೆ ಒಯ್ದಳು. ಆ ರಾಜಕುಮಾರಿ ಅವನನ್ನು ತನ್ನ ಮಗನಾಗಿ ದತ್ತು ತೆಗೆದುಕೊಂಡಳು. ಈ ರೀತಿಯಲ್ಲಿ ಮೋಶೆಯು ಫರೋಹನ ಅರಮನೆಯಲ್ಲಿ ಬೆಳೆದನು.