ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 33

ಕೆಂಪು ಸಮುದ್ರವನ್ನು ದಾಟುವುದು

ಕೆಂಪು ಸಮುದ್ರವನ್ನು ದಾಟುವುದು

ಇಲ್ಲಿ ಏನಾಗುತ್ತಾ ಇದೆಯೆಂದು ನೋಡಿರಿ! ಕೆಂಪು ಸಮುದ್ರದ ಮೇಲೆ ತನ್ನ ಕೋಲನ್ನು ಚಾಚಿ ಹಿಡಿದಿರುವವನು ಮೋಶೆ. ಅವನ ಪಕ್ಕದಲ್ಲಿ ಸುರಕ್ಷಿತರಾಗಿ ಇರುವವರು ಇಸ್ರಾಯೇಲ್ಯರು. ಆದರೆ ಫರೋಹ ಮತ್ತು ಅವನ ಎಲ್ಲಾ ಸೈನ್ಯವು ಸಮುದ್ರದಲ್ಲಿ ಮುಳುಗುತ್ತಾ ಇದೆ. ಇದು ಹೇಗೆ ನಡೆಯಿತ್ತೆಂದು ನಾವು ನೋಡೋಣ.

ನಾವು ಈಗಾಗಲೇ ತಿಳಿದ ಪ್ರಕಾರ, ದೇವರು ಐಗುಪ್ತ್ಯರ ಮೇಲೆ 10ನೆಯ ಬಾಧೆಯನ್ನು ತಂದ ಬಳಿಕ, ಐಗುಪ್ತವನ್ನು ಬಿಟ್ಟುಹೋಗುವಂತೆ ಫರೋಹನು ಇಸ್ರಾಯೇಲ್ಯರಿಗೆ ಹೇಳಿದನು. ಸುಮಾರು 6,00,000 ಇಸ್ರಾಯೇಲ್ಯ ಪುರುಷರು ಹಾಗೂ ಅನೇಕ ಸ್ತ್ರೀಯರು ಮತ್ತು ಮಕ್ಕಳು ಹೊರಟುಬಂದರು. ಅದಲ್ಲದೆ, ಯೆಹೋವನನ್ನು ನಂಬಿದ ಬೇರೆ ಹಲವಾರು ಜನರು ಸಹ ಇಸ್ರಾಯೇಲ್ಯರೊಂದಿಗೆ ಹೊರಟರು. ಅವರೆಲ್ಲರೂ ತಮ್ಮ ಆಡು, ಕುರಿ, ಪಶುಗಳನ್ನು ತಮ್ಮೊಂದಿಗೆ ಒಯ್ದರು.

ಇಸ್ರಾಯೇಲ್ಯರು ಹೊರಡುವ ಮುಂಚೆ ಐಗುಪ್ತ್ಯರಿಂದ ಬೆಳ್ಳಿಬಂಗಾರದ ಒಡವೆಗಳನ್ನೂ ಬಟ್ಟೆಗಳನ್ನೂ ಕೇಳಿಕೊಂಡರು. ಐಗುಪ್ತ್ಯರು ತಮ್ಮ ಮೇಲೆ ಬಂದ ಆ ಕೊನೆಯ ಬಾಧೆಯಿಂದಾಗಿ ಬಹಳ ಹೆದರಿದ್ದರು. ಆದುದರಿಂದ ಇಸ್ರಾಯೇಲ್ಯರು ಕೇಳಿದ್ದೆಲ್ಲವನ್ನು ಕೊಟ್ಟುಬಿಟ್ಟರು.

ಇಸ್ರಾಯೇಲ್ಯರು ಐಗುಪ್ತವನ್ನು ಬಿಟ್ಟ ಕೆಲವು ದಿನಗಳಾದ ನಂತರ ಕೆಂಪು ಸಮುದ್ರದ ಬಳಿಗೆ ಬಂದರು. ಅಲ್ಲಿ ಅವರು ವಿಶ್ರಮಿಸಿದರು. ಈ ಮಧ್ಯೆ ಫರೋಹನಿಗೆ ಮತ್ತು ಅವನ ಜನರಿಗೆ ತಾವು ಇಸ್ರಾಯೇಲ್ಯರನ್ನು ಹೋಗಗೊಟ್ಟದ್ದಕ್ಕಾಗಿ ವ್ಯಥೆಯಾಗತೊಡಗಿತು. ‘ನಮ್ಮ ಗುಲಾಮರನ್ನು ಯಾಕೆ ತಾನೆ ಕಳುಹಿಸಿಬಿಟ್ಟೆವೋ’ ಎಂದುಕೊಂಡರು ಅವರು.

ಆದುದರಿಂದ ಫರೋಹನು ಪುನಃ ತನ್ನ ಮನಸ್ಸನ್ನು ಬದಲಾಯಿಸಿಕೊಂಡನು. ಅವನು ಕೂಡಲೆ ತನ್ನ ಯುದ್ಧರಥವನ್ನೂ ತನ್ನ ಸೈನ್ಯವನ್ನೂ ಸಿದ್ಧಗೊಳಿಸಿದನು. ಅನಂತರ ಅವನು ತನ್ನ 600 ವಿಶೇಷ ರಥಗಳನ್ನು ಹಾಗೂ ಐಗುಪ್ತದ ಬೇರೆಲ್ಲಾ ರಥಗಳನ್ನು ತೆಗೆದುಕೊಂಡು ಇಸ್ರಾಯೇಲ್ಯರನ್ನು ಬೆನ್ನಟ್ಟತೊಡಗಿದನು.

ಫರೋಹನು ಮತ್ತು ಅವನ ಸೈನ್ಯವು ತಮ್ಮನ್ನು ಬೆನ್ನಟ್ಟಿಕೊಂಡು ಬರುವುದನ್ನು ಇಸ್ರಾಯೇಲ್ಯರು ಕಂಡಾಗ ಬಹಳ ಭಯಪಟ್ಟರು. ಅವರಿಗೆ ಓಡಿಹೋಗುವುದಕ್ಕೆ ಯಾವುದೇ ದಾರಿಯಿರಲಿಲ್ಲ. ಅವರ ಮುಂದೆ ಕೆಂಪು ಸಮುದ್ರವಿತ್ತು ಮತ್ತು ಹಿಂದೆ ಐಗುಪ್ತ್ಯರು ಬರುತ್ತಿದ್ದರು. ಆದರೆ ಯೆಹೋವನು ತನ್ನ ಜನರ ಮತ್ತು ಐಗುಪ್ತ್ಯರ ನಡುವೆ ಒಂದು ಮೇಘವನ್ನು ನಿಲ್ಲಿಸಿದನು. ಇದರಿಂದ ಐಗುಪ್ತರಿಗೆ ಇಸ್ರಾಯೇಲ್ಯರು ಕಾಣಿಸಲಿಲ್ಲ ಮತ್ತು ಅವರನ್ನು ಆಕ್ರಮಿಸಲಾಗಲಿಲ್ಲ.

ಅನಂತರ ಮೋಶೆಯು ತನ್ನ ಕೋಲನ್ನು ಕೆಂಪು ಸಮುದ್ರದ ಮೇಲೆ ಚಾಚುವಂತೆ ಯೆಹೋವನು ಹೇಳಿದನು. ಮೋಶೆ ಹಾಗೆ ಮಾಡಿದಾಗ, ಪೂರ್ವದಿಕ್ಕಿನಿಂದ ಬಲವಾದ ಗಾಳಿಯು ಬೀಸುವಂತೆ ಯೆಹೋವನು ಮಾಡಿದನು. ಸಮುದ್ರದ ನೀರು ವಿಭಾಗವಾಯಿತು. ಎರಡೂ ಪಕ್ಕಗಳಲ್ಲಿ ನೀರು ಗೋಡೆಯಂತೆ ನಿಂತಿತು.

ಅನಂತರ ಇಸ್ರಾಯೇಲ್ಯರು ಸಮುದ್ರದ ಮಧ್ಯದಲ್ಲಿ ಒಣನೆಲದ ಮೇಲೆ ದಾಟಿಹೋಗಲು ಆರಂಭಿಸಿದರು. ಆ ಲಕ್ಷಾಂತರ ಜನರಿಗೆ ತಮ್ಮೆಲ್ಲಾ ಪಶುಗಳ ಸಮೇತವಾಗಿ ಸಮುದ್ರದ ಮಧ್ಯದಲ್ಲಿ ನಡೆದು ಸುರಕ್ಷಿತವಾಗಿ ಆಚೇ ದಡವನ್ನು ಸೇರುವುದಕ್ಕೆ ಗಂಟೆಗಳು ತಗಲಿದವು. ಕೊನೆಗೆ ಐಗುಪ್ತ್ಯರು ಇಸ್ರಾಯೇಲ್ಯರನ್ನು ಪುನಃ ನೋಡಶಕ್ತರಾದರು. ಆದರೆ ಅವರ ಗುಲಾಮರು ಹೋಗುತ್ತಿದ್ದರು! ಆದುದರಿಂದ ಅವರನ್ನು ಬೆನ್ನಟ್ಟುತ್ತಾ ಸಮುದ್ರದೊಳಗೆ ಮುನ್ನುಗ್ಗಿದರು.

ಅವರು ಮುನ್ನುಗ್ಗಿದಾಗ, ಅವರ ರಥಗಳ ಚಕ್ರಗಳು ಕಳಚಿಬೀಳುವಂತೆ ದೇವರು ಮಾಡಿದನು. ಐಗುಪ್ತ್ಯರು ಬಹಳವಾಗಿ ಹೆದರಿಕೊಂಡು, ‘ಯೆಹೋವನು ನಮ್ಮ ವಿರುದ್ಧ ಇಸ್ರಾಯೇಲ್ಯರಿಗಾಗಿ ಹೋರಾಡುತ್ತಿದ್ದಾನೆ. ನಾವು ಇಲ್ಲಿಂದ ಓಡಿಹೋಗೋಣ!’ ಎಂದು ಕೂಗಲಾರಂಭಿಸಿದರು. ಆದರೆ ಸಮಯ ಮೀರಿಹೋಗಿತ್ತು.

ಚಿತ್ರದಲ್ಲಿ ನೀವು ನೋಡಿದ ಪ್ರಕಾರ, ಆಗಲೇ ದೇವರು ಮೋಶೆಗೆ ಕೋಲನ್ನು ಕೆಂಪು ಸಮುದ್ರದ ಮೇಲೆ ಚಾಚುವಂತೆ ಹೇಳಿದನು. ಮೋಶೆ ಹಾಗೆ ಮಾಡಿದಾಗ, ಗೋಡೆಯಂತೆ ನಿಂತಿದ್ದ ಸಮುದ್ರದ ನೀರು ಮೊದಲಿನಂತೆ ಬಂದು ಐಗುಪ್ತ್ಯರನ್ನು ಮತ್ತು ಅವರ ರಥಗಳನ್ನು ಮುಳುಗಿಸಿಬಿಟ್ಟಿತು. ಇಡೀ ಸೈನ್ಯವು ಇಸ್ರಾಯೇಲ್ಯರನ್ನು ಹಿಂಬಾಲಿಸುತ್ತಾ ಸಮುದ್ರದೊಳಗೆ ಬಂದುಬಿಟ್ಟಿತ್ತು. ಆದುದರಿಂದ, ಐಗುಪ್ತ್ಯರಲ್ಲಿ ಒಬ್ಬರಾದರೂ ಉಳಿಯಲಿಲ್ಲ!

ರಕ್ಷಿಸಲ್ಪಟ್ಟದಕ್ಕಾಗಿ ದೇವರ ಜನರೆಲ್ಲರೂ ಅದೆಷ್ಟು ಸಂತೋಷಪಟ್ಟರು! ‘ಯೆಹೋವನು ಮಹಾಜಯಶಾಲಿಯಾದನು. ಆತನು ಕುದುರೆಗಳನ್ನೂ ಅವುಗಳ ರಾಹುತರನ್ನೂ ಸಮುದ್ರದಲ್ಲಿ ಕೆಡವಿದ್ದಾನೆ,’ ಎಂದು ಕೃತಜ್ಞತೆಯನ್ನು ಸೂಚಿಸುತ್ತಾ ಸ್ತುತಿ ಗೀತವನ್ನು ಪುರುಷರು ಹಾಡಿದರು. ಮೋಶೆಯ ಅಕ್ಕ ಮಿರ್ಯಾಮಳು ತನ್ನ ದಮ್ಮಡಿಯನ್ನು ಕೈಯಲ್ಲಿ ತೆಗೆದುಕೊಂಡಳು ಮತ್ತು ಸ್ತ್ರೀಯರೆಲ್ಲರೂ ಅವರವರ ದಮ್ಮಡಿಗಳನ್ನು ತೆಗೆದುಕೊಂಡು ಅವಳನ್ನು ಹಿಂಬಾಲಿಸಿದರು. ಅವರು ಸಂತಸದಿಂದ ನಾಟ್ಯವಾಡುತ್ತಾ, ಪುರುಷರು ಹಾಡುತ್ತಿದ್ದ ಅದೇ ಗಾಯನವನ್ನು ಹಾಡಿದರು: ‘ಯೆಹೋವನು ಮಹಾಜಯಶಾಲಿಯಾದನು. ಆತನು ಕುದುರೆಗಳನ್ನೂ ಅವುಗಳ ರಾಹುತರನ್ನೂ ಸಮುದ್ರದಲ್ಲಿ ಕೆಡವಿದ್ದಾನೆ.’