ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 39

ಆರೋನನ ಕೋಲು ಹೂಬಿಡುತ್ತದೆ

ಆರೋನನ ಕೋಲು ಹೂಬಿಡುತ್ತದೆ

ಈ ಕೋಲಿನಿಂದ ಅಥವಾ ದಂಡದಿಂದ ಹೂವು ಅರಳಿ ಬಾದಾಮಿ ಹಣ್ಣುಗಳು ಬೆಳೆಯುತ್ತಿರುವುದನ್ನು ನೋಡಿರಿ. ಇದು ಆರೋನನ ಕೋಲು. ಕೇವಲ ಒಂದೇ ರಾತ್ರಿಯೊಳಗೆ ಆರೋನನ ಕೋಲು ಚಿಗುರಿ ಮೊಗ್ಗುಬಿಟ್ಟು ಹೂವು, ಹಣ್ಣುಗಳು ಬೆಳೆದವು! ಏಕೆಂದು ಗೊತ್ತೇ? ನಾವದನ್ನು ಈಗ ನೋಡೋಣ.

ಇಸ್ರಾಯೇಲ್ಯರು ಈಗ ಕೆಲವು ಸಮಯದಿಂದ ಅರಣ್ಯದಲ್ಲಿ ಅಲೆದಾಡುತ್ತಿದ್ದಾರೆ. ಮೋಶೆಯು ನಾಯಕನಾಗಿರುವುದು ಮತ್ತು ಆರೋನನು ಮಹಾ ಯಾಜಕನಾಗಿರುವುದು ಕೆಲವು ಜನರಿಗೆ ಇಷ್ಟವಿಲ್ಲ. ಅಂಥವರಲ್ಲಿ ಕೋರಹನು ಒಬ್ಬನು. ದಾತಾನ್‌, ಅಬೀರಾಮ್‌ ಮತ್ತು ಜನರ 250 ಮಂದಿ ಮುಖಂಡರು ಸಹ ಅವರಲ್ಲಿ ಸೇರಿರುತ್ತಾರೆ. ಇವರೆಲ್ಲರೂ ಮೋಶೆಯ ಬಳಿಗೆ ಬಂದು ‘ನಮ್ಮೆಲ್ಲರಿಗಿಂತಲೂ ನೀನು ನಿನ್ನನ್ನೇ ಹೆಚ್ಚಿಸಿಕೊಳ್ಳುವುದೇಕೆ?’ ಎಂದು ಹೇಳುತ್ತಾರೆ.

ಅದಕ್ಕೆ ಮೋಶೆಯು, ಕೋರಹ ಮತ್ತು ಅವನ ಸಂಗಡಿಗರಿಗೆ ಹೀಗೆ ಹೇಳುತ್ತಾನೆ: ‘ನಾಳೆ ಬೆಳಗ್ಗೆ ಧೂಪಾರತಿಗಳನ್ನು ತೆಗೆದುಕೊಂಡು ಅದರಲ್ಲಿ ಧೂಪ ಹಾಕಿರಿ. ಅನಂತರ ಯೆಹೋವನ ಗುಡಾರಕ್ಕೆ ಬನ್ನಿರಿ. ಯೆಹೋವನು ಯಾರನ್ನು ಆರಿಸುತ್ತಾನೆಂದು ನಾವು ನೋಡೋಣ.’

ಮರುದಿನ ಕೋರಹ ಮತ್ತು ಅವನ 250 ಮಂದಿ ಸಂಗಡಿಗರು ಗುಡಾರಕ್ಕೆ ಬರುತ್ತಾರೆ. ಬೇರೆ ಅನೇಕ ಜನರೂ ಇವರನ್ನು ಬೆಂಬಲಿಸುತ್ತಾರೆ. ಯೆಹೋವನು ಬಹಳ ಸಿಟ್ಟುಗೊಂಡಿದ್ದಾನೆ. ‘ಈ ದುಷ್ಟ ಜನರ ಡೇರೆಗಳಿಂದ ದೂರ ಹೋಗಿರಿ. ಅವರಿಗೆ ಸೇರಿರುವ ಯಾವುದನ್ನೂ ಮುಟ್ಟಬೇಡಿರಿ’ ಎನ್ನುತ್ತಾನೆ ಮೋಶೆ ಜನರಿಗೆ. ಅದರಂತೆ ಜನರು ಕೋರಹ, ದಾತಾನ್‌ ಮತ್ತು ಅಬೀರಾಮರ ಡೇರೆಗಳಿಂದ ದೂರ ಹೋಗುತ್ತಾರೆ.

ಅನಂತರ ಮೋಶೆ ಹೇಳುವುದು: ‘ಭೂಮಿಯು ಬಾಯ್ದೆರೆದು ಈ ದುರ್ಜನರನ್ನು ನುಂಗಿಬಿಡುವುದು. ಇದರಿಂದ ಯೆಹೋವನು ಯಾರನ್ನು ಆರಿಸಿದ್ದಾನೆಂದು ನಿಮಗೆ ತಿಳಿಯುವುದು.’

ಮೋಶೆ ಇದನ್ನು ಹೇಳಿಮುಗಿಸಿದ ಕೂಡಲೆ ಭೂಮಿಯು ಬಾಯ್ದೆರೆಯುತ್ತದೆ. ಕೋರಹನ ಡೇರೆ, ಸೊತ್ತುಗಳು ಹಾಗೂ ದಾತಾನ್‌, ಅಬೀರಾಮ್‌, ಅವರೊಂದಿಗೆ ಇದ್ದವರೆಲ್ಲರನ್ನು ಭೂಮಿ ನುಂಗಿಬಿಡುತ್ತದೆ. ಭೂಮಿಯೊಳಗೆ ಹೂತುಹೋಗುತ್ತಿದ್ದವರ ಅರಚಾಟಗಳನ್ನು ಕೇಳಿದಾಗ ಸುತ್ತಲಿದ್ದ ಜನರು, ‘ಓಡಿರಿ! ಇಲ್ಲವಾದರೆ ಭೂಮಿಯು ನಮ್ಮನ್ನೂ ನುಂಗಿಬಿಟ್ಟೀತು!’ ಎಂದು ಬೊಬ್ಬೆಯಿಡುತ್ತಾರೆ.

ಕೋರಹ ಮತ್ತು ಅವನೊಂದಿಗಿದ್ದ 250 ಮಂದಿ ಇನ್ನೂ ಗುಡಾರದ ಬಳಿಯಲ್ಲಿದ್ದಾರೆ. ಆದುದರಿಂದ ಯೆಹೋವನು ಬೆಂಕಿಯನ್ನು ಕಳುಹಿಸುತ್ತಾನೆ. ಅವರೆಲ್ಲರೂ ಸುಟ್ಟು ಭಸ್ಮವಾಗುತ್ತಾರೆ. ಸತ್ತ ಆ ಮನುಷ್ಯರೊಂದಿಗಿದ್ದ ಧೂಪಾರತಿಗಳನ್ನು ತೆಗೆದುಕೊಂಡು ಅವುಗಳಿಂದ ಯಜ್ಞವೇದಿಗೆ ಒಂದು ತೆಳ್ಳನೆಯ ಮುಚ್ಚಳವನ್ನು ಮಾಡುವಂತೆ ಅನಂತರ ಯೆಹೋವನು ಆರೋನನ ಪುತ್ರನಾದ ಎಲ್ಲಾಜಾರನಿಗೆ ಹೇಳುತ್ತಾನೆ. ಈ ಯಜ್ಞವೇದಿಯ ಮುಚ್ಚಳವು, ಆರೋನನ ಮತ್ತು ಅವನ ಪುತ್ರರ ಹೊರತು ಬೇರೆ ಯಾರೂ ಯೆಹೋವನಿಗೆ ಯಾಜಕರಾಗಿ ಸೇವೆಮಾಡಬಾರದು ಎಂಬ ಎಚ್ಚರಿಕೆಯಾಗಿ ಕಾರ್ಯನಡಿಸುತ್ತದೆ.

ಆದರೆ ಯಾಜಕ ಸೇವೆಗೆ ತಾನು ಆರೋನ ಮತ್ತು ಅವನ ಪುತ್ರರನ್ನೇ ಆರಿಸಿಕೊಂಡಿದ್ದೇನೆ ಎಂಬದನ್ನು ಇನ್ನಷ್ಟೂ ಸ್ಪಷ್ಟಪಡಿಸಲು ಯೆಹೋವನು ಬಯಸುತ್ತಾನೆ. ಆದುದರಿಂದ ಅವನು ಮೋಶೆಗೆ ಹೇಳುವುದು: ‘ಇಸ್ರಾಯೇಲ್ಯರ ಪ್ರತಿಯೊಂದು ಕುಲದ ಅಧಿಪತಿಯು ಅವನವನ ಕೋಲನ್ನು ತರಲಿ. ಲೇವಿ ಕುಲಕ್ಕಾಗಿ ಆರೋನನು ತನ್ನ ಕೋಲನ್ನು ತರಲಿ. ಅನಂತರ ಆ ಪ್ರತಿಯೊಂದು ಕೋಲನ್ನು ಗುಡಾರದಲ್ಲಿ ಒಡಂಬಡಿಕೆಯ ಮಂಜೂಷದ ಎದುರುಗಡೆ ಇಡು. ನಾನು ಯಾಜಕನಾಗಿ ಆರಿಸಿದವನ ಕೋಲು ಚಿಗುರಿ ಹೂಬಿಡುವುದು.’

ಮೋಶೆ ಮರುದಿನ ಬೆಳಗ್ಗೆ ಹೋಗಿ ನೋಡುವಾಗ ಆಹಾ! ಆರೋನನು ಕೊಟ್ಟಿದ್ದ ಕೋಲು ಚಿಗುರಿ ಮೊಗ್ಗು ಬಿಟ್ಟು ಹೂವಾಗಿ ಅರಳಿ ಮಾಗಿದ ಬಾದಾಮಿ ಹಣ್ಣುಗಳನ್ನು ಕೊಟ್ಟಿವೆ! ಆರೋನನ ಕೋಲು ಚಿಗುರಿ ಹೂಬಿಡುವಂತೆ ಯೆಹೋವನು ಮಾಡಿದ್ದೇಕೆಂದು ನಿಮಗೀಗ ಗೊತ್ತಾಯಿತೋ?