ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 47

ಇಸ್ರಾಯೇಲಿನಲ್ಲಿ ಒಬ್ಬ ಕಳ್ಳ

ಇಸ್ರಾಯೇಲಿನಲ್ಲಿ ಒಬ್ಬ ಕಳ್ಳ

ನೋಡಿರಿ ಈ ಮನುಷ್ಯನು ತನ್ನ ಡೇರೆಯೊಳಗೆ ಏನನ್ನೊ ಹೂತಿಡುತ್ತಿದ್ದಾನೆ! ಒಂದು ಅಂದವಾದ ನಿಲುವಂಗಿ, ಒಂದು ಬಂಗಾರದ ಗಟ್ಟಿ ಮತ್ತು ಕೆಲವು ಬೆಳ್ಳೀ ನಾಣ್ಯಗಳನ್ನು ಅವನು ಬಚ್ಚಿಡುತ್ತಿದ್ದಾನೆ. ಯೆರಿಕೋ ಪಟ್ಟಣದಿಂದ ಅವನು ಅವುಗಳನ್ನು ತೆಗೆದುಕೊಂಡಿದ್ದಾನೆ. ಆದರೆ ಯೆರಿಕೋ ಪಟ್ಟಣದಿಂದ ಸೂರೆಮಾಡಿದ ವಸ್ತುಗಳನ್ನು ಏನು ಮಾಡಬೇಕಿತ್ತು? ನಿಮಗೆ ನೆನಪಿದೆಯಾ?

ಅವುಗಳನ್ನು ನಾಶಮಾಡಿಬಿಡಬೇಕಿತ್ತು ಮತ್ತು ಬೆಳ್ಳಿಬಂಗಾರಗಳನ್ನು ಯೆಹೋವನ ಗುಡಾರದ ಭಂಡಾರಕ್ಕೆ ಸೇರಿಸಬೇಕಿತ್ತು. ಆದರೆ ಈ ಜನರು ದೇವರಿಗೆ ಅವಿಧೇಯರಾಗಿದ್ದಾರೆ. ಯಾವುದು ದೇವರಿಗೆ ಸೇರಿದ್ದಾಗಿದೆಯೋ ಅದನ್ನು ಕದ್ದಿದ್ದಾರೆ. ಆ ಮನುಷ್ಯನ ಹೆಸರು ಆಕಾನ. ಅವನೊಂದಿಗಿರುವವರು ಅವನ ಕುಟುಂಬದವರು. ಮುಂದೇನು ಸಂಭವಿಸುತ್ತದೆಂದು ನಾವು ಗಮನಿಸೋಣ.

ಆಕಾನನು ಈ ವಸ್ತುಗಳನ್ನು ಕದ್ದನಂತರ, ಯೆಹೋಶುವನು ಆಯಿ ಎಂಬ ಪಟ್ಟಣದ ವಿರುದ್ಧವಾಗಿ ಯುದ್ಧ ನಡಿಸಲು ಕೆಲವು ಜನರನ್ನು ಕಳುಹಿಸುತ್ತಾನೆ. ಆದರೆ ಅವರು ಯುದ್ಧದಲ್ಲಿ ಸೋತುಹೋಗುತ್ತಾರೆ. ಕೆಲವರು ಕೊಲ್ಲಲ್ಪಡುತ್ತಾರೆ, ಉಳಿದವರು ಪಲಾಯನಗೈಯುತ್ತಾರೆ. ಯೆಹೋಶುವನಿಗೆ ಬಹಳ ದುಃಖವಾಗುತ್ತದೆ. ಅವನು ನೆಲದ ಮೇಲೆ ಬೋರಲ ಬಿದ್ದು ಯೆಹೋವನಿಗೆ, ‘ಹೀಗಾಗುವಂತೆ ನೀನು ಬಿಟ್ಟದ್ದೇಕೆ?’ ಎಂದು ಮೊರೆಯಿಡುತ್ತಾನೆ.

ಅದಕ್ಕೆ ಯೆಹೋವನು ಉತ್ತರಿಸುವುದು: ‘ಎದ್ದೇಳು! ಇಸ್ರಾಯೇಲ್ಯರು ಪಾಪಮಾಡಿದ್ದಾರೆ. ನಾಶಮಾಡಬೇಕಾಗಿದ್ದ ಅಥವಾ ಯೆಹೋವನ ಗುಡಾರಕ್ಕೆ ಕೊಡಬೇಕಾಗಿದ್ದ ಕೆಲವು ವಸ್ತುಗಳನ್ನು ಅವರು ತೆಗೆದುಕೊಂಡಿದ್ದಾರೆ. ಒಂದು ಅಂದವಾದ ನಿಲುವಂಗಿಯನ್ನು ಕದ್ದು ಅಡಗಿಸಿಟ್ಟಿದ್ದಾರೆ. ಆ ವಸ್ತುಗಳನ್ನು ಮತ್ತು ಅವನ್ನು ಕದ್ದವನನ್ನು ನಾಶಮಾಡುವ ತನಕ ನಾನು ನಿನ್ನನ್ನು ಆಶೀರ್ವದಿಸುವುದಿಲ್ಲ.’ ಆ ಕೆಟ್ಟ ಮನುಷ್ಯನು ಯಾರೆಂದು ತಾನು ತೋರಿಸಿಕೊಡುವುದಾಗಿ ಯೆಹೋವನು ಯೆಹೋಶುವನಿಗೆ ಹೇಳುತ್ತಾನೆ.

ಆದುದರಿಂದ ಯೆಹೋಶುವನು ಜನರೆಲ್ಲರನ್ನು ಒಟ್ಟುಗೂಡಿಸುತ್ತಾನೆ. ಮತ್ತು ಯೆಹೋವನು ಈ ಕೆಟ್ಟ ಮನುಷ್ಯನಾದ ಆಕಾನನನ್ನು ತೋರಿಸಿಕೊಡುತ್ತಾನೆ. ಆಗ ಆಕಾನನು, ‘ನಾನು ಪಾಪ ಮಾಡಿದ್ದೇನೆ. ಒಂದು ಅಂದವಾದ ನಿಲುವಂಗಿಯನ್ನು, ಒಂದು ಬಂಗಾರದ ಗಟ್ಟಿಯನ್ನು ಮತ್ತು ಬೆಳ್ಳಿ ನಾಣ್ಯಗಳನ್ನು ನೋಡಿ ಆಶೆಯಿಂದ ತೆಗೆದುಕೊಂಡೆ. ನನ್ನ ಡೇರೆಯೊಳಗೆ ಅವುಗಳನ್ನು ಹುಗಿದಿಟ್ಟಿದ್ದೇನೆ’ ಎಂದು ಹೇಳುತ್ತಾನೆ.

ಯೆಹೋಶುವನು ಆಳುಗಳನ್ನು ಅಲ್ಲಿಗೆ ಕಳುಹಿಸುತ್ತಾನೆ. ಅವರಿಗೆ ಈ ವಸ್ತುಗಳು ಸಿಕ್ಕಿದಾಗ ಅವನ್ನು ಯೆಹೋಶುವನ ಬಳಿಗೆ ತರುತ್ತಾರೆ. ಅವನು ಆಕಾನನಿಗೆ ಹೇಳುವುದು: ‘ನೀನು ನಮ್ಮನ್ನು ಆಪತ್ತಿಗೆ ಗುರಿಮಾಡಿದ್ದೇಕೆ? ಈಗ ಯೆಹೋವನು ನಿನ್ನ ಮೇಲೆ ಆಪತ್ತನ್ನು ಬರಮಾಡುವನು!’ ಆ ಕೂಡಲೆ ಜನರೆಲ್ಲರೂ ಆಕಾನನನ್ನೂ ಅವನ ಕುಟುಂಬವನ್ನೂ ಕಲ್ಲೆಸೆದು ಕೊಲ್ಲುತ್ತಾರೆ. ನಮ್ಮದಲ್ಲದ ವಸ್ತುಗಳನ್ನು ನಾವೆಂದೂ ತೆಗೆದುಕೊಳ್ಳಬಾರದೆಂದು ಇದು ತೋರಿಸುವುದಿಲ್ಲವೇ?

ತದನಂತರ ಇಸ್ರಾಯೇಲ್ಯರು ಪುನಃ ಆಯಿ ಪಟ್ಟಣದ ವಿರುದ್ಧ ಯುದ್ಧಕ್ಕೆ ಹೋಗುತ್ತಾರೆ. ಈ ಬಾರಿ ಯೆಹೋವನು ತನ್ನ ಜನರಿಗೆ ಸಹಾಯಮಾಡುತ್ತಾನೆ. ಆದಕಾರಣ ಅವರು ಜಯಗಳಿಸುತ್ತಾರೆ.