ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 50

ಧೀರೆಯರಾದ ಇಬ್ಬರು ಸ್ತ್ರೀಯರು

ಧೀರೆಯರಾದ ಇಬ್ಬರು ಸ್ತ್ರೀಯರು

ಇಸ್ರಾಯೇಲ್ಯರು ಆಪತ್ತಿಗೆ ಗುರಿಯಾಗುವಾಗ ಯೆಹೋವನಿಗೆ ಮೊರೆಯಿಡುತ್ತಾರೆ. ಆಗ ಅವರಿಗೆ ಸಹಾಯಮಾಡುವಂತೆ ಧೀರರಾದ ನಾಯಕರನ್ನು ಯೆಹೋವನು ನೇಮಿಸುತ್ತಾನೆ. ಬೈಬಲ್‌ ಈ ನಾಯಕರನ್ನು ನ್ಯಾಯಸ್ಥಾಪಕರೆಂದು ಕರೆಯುತ್ತದೆ. ಯೆಹೋಶುವನು ಮೊದಲನೆಯ ನ್ಯಾಯಸ್ಥಾಪಕನಾಗಿದ್ದನು. ಅವನ ಅನಂತರದ ಕೆಲವು ನ್ಯಾಯಸ್ಥಾಪಕರ ಹೆಸರುಗಳೆಂದರೆ ಒತ್ನೀಯೇಲ್‌, ಏಹೂದ ಮತ್ತು ಶಮ್ಗರ. ಆದರೆ ಇಸ್ರಾಯೇಲ್ಯರಿಗೆ ಪುರುಷರು ಮಾತ್ರವಲ್ಲ ದೆಬೋರ ಮತ್ತು ಯಾಯೇಲ್‌ ಎಂಬ ಇಬ್ಬರು ಸ್ತ್ರೀಯರು ಸಹ ಸಹಾಯಮಾಡುತ್ತಾರೆ.

ದೆಬೋರ ಒಬ್ಬ ಪ್ರವಾದಿನಿ. ಭವಿಷ್ಯತ್ತಿನ ಕುರಿತ ಮಾಹಿತಿಯನ್ನು ಯೆಹೋವನು ಅವಳಿಗೆ ಕೊಡುತ್ತಾನೆ. ಅವಳು ಅದನ್ನು ಜನರಿಗೆ ತಿಳಿಸುತ್ತಾಳೆ. ದೆಬೋರಳು ನ್ಯಾಯಸ್ಥಾಪಕರಲ್ಲಿ ಒಬ್ಬಳೂ ಆಗಿದ್ದಾಳೆ. ಬೆಟ್ಟದ ಸೀಮೆಯ ಒಂದು ನಿರ್ದಿಷ್ಟ ಖರ್ಜೂರ ಮರದ ಕೆಳಗೆ ಅವಳು ಕೂತುಕೊಳ್ಳುತ್ತಾಳೆ. ಜನರು ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಸಹಾಯಕ್ಕಾಗಿ ಅವಳ ಬಳಿಗೆ ಬರುತ್ತಾರೆ.

ಈ ಸಮಯದಲ್ಲಿ ಯಾಬೀನನು ಕಾನಾನಿನ ಅರಸನಾಗಿದ್ದಾನೆ. ಅವನ ಬಳಿಯಲ್ಲಿ 900 ಯುದ್ಧ ರಥಗಳಿವೆ. ಅವನ ಸೈನ್ಯವು ತುಂಬಾ ಬಲಾಢ್ಯವಾಗಿತ್ತು. ಆದುದರಿಂದ ಅನೇಕ ಇಸ್ರಾಯೇಲ್ಯರು ಅವನ ದಾಸರಾಗಬೇಕಾಯಿತು. ಅರಸ ಯಾಬೀನನ ಸೈನ್ಯದ ಮುಖ್ಯಾಧಿಕಾರಿಯ ಹೆಸರು ಸೀಸೆರ.

ಒಂದು ದಿನ ದೆಬೋರಳು ನ್ಯಾಯಸ್ಥಾಪಕನಾದ ಬಾರಾಕನಿಗೆ ಕರೇಕಳುಹಿಸಿ, ‘ಯೆಹೋವನು ನಿನಗೆ, ಹತ್ತು ಸಾವಿರ ಜನರನ್ನು ಕೂಡಿಸಿಕೊಂಡು ತಾಬೋರ್‌ ಬೆಟ್ಟಕ್ಕೆ ಹೋಗುವಂತೆ ಹೇಳಿದ್ದಾನೆ. ಅಲ್ಲಿಗೆ ಆತನೇ ಸೀಸೆರನನ್ನು ನಿನ್ನ ಬಳಿಗೆ ಕರೆತರುವನು. ಅವನ ಮೇಲೂ ಅವನ ಸೈನ್ಯದ ಮೇಲೂ ನಿನಗೆ ಜಯವನ್ನು ಕೊಡುವೆನೆಂದು ಆತನು ಹೇಳಿದ್ದಾನೆ’ ಎಂದು ತಿಳಿಸುತ್ತಾಳೆ.

ಅದಕ್ಕೆ ಬಾರಾಕನು ದೆಬೋರಳಿಗೆ, ‘ನೀನೂ ನನ್ನ ಸಂಗಡ ಬರುವುದಾದರೆ ನಾನು ಹೋಗುವೆನು’ ಎಂದು ಹೇಳುತ್ತಾನೆ. ದೆಬೋರಳು ಅವನೊಂದಿಗೆ ಹೋಗುತ್ತಾಳೆ. ಆದರೆ ಅವಳು ಬಾರಾಕನಿಗೆ ಹೇಳುವುದು: ‘ವಿಜಯಕ್ಕಾಗಿ ಕೀರ್ತಿಯು ನಿನಗೆ ಸಿಗಲಾರದು, ಯಾಕೆಂದರೆ ಯೆಹೋವನು ಸೀಸೆರನನ್ನು ಒಬ್ಬ ಸ್ತ್ರೀಯ ಕೈಗೆ ಒಪ್ಪಿಸಿಕೊಡುವನು.’ ಹೌದು ಅವಳು ಹೇಳಿದಂತೆಯೇ ಈಗ ಸಂಭವಿಸುತ್ತದೆ.

ಬಾರಾಕನು ಸೀಸೆರನ ಸೈನಿಕರನ್ನು ಎದುರಿಸಲು ತಾಬೋರ್‌ ಬೆಟ್ಟದಿಂದ ಇಳಿಯುತ್ತಾನೆ. ಥಟ್ಟನೆ ಯೆಹೋವನು ಒಂದು ನೆರೆಯನ್ನು ತರುತ್ತಾನೆ. ಅದರಲ್ಲಿ ಅನೇಕ ಶತ್ರು ಸೈನಿಕರು ಮುಳುಗಿ ಸಾಯುತ್ತಾರೆ. ಆದರೆ ಸೀಸೆರನು ತನ್ನ ರಥದಿಂದಿಳಿದು ಓಡಿಹೋಗುತ್ತಾನೆ.

ಸ್ವಲ್ಪ ಸಮಯದ ಮೇಲೆ ಸೀಸೆರನು ಯಾಯೇಲಳ ಡೇರೆಗೆ ಬರುತ್ತಾನೆ. ಆಕೆ ಅವನನ್ನು ಒಳಗೆ ಆಮಂತ್ರಿಸಿ ಕುಡಿಯಲು ಸ್ವಲ್ಪ ಹಾಲನ್ನು ಕೊಡುತ್ತಾಳೆ. ಇದು ಅವನಿಗೆ ನಿದ್ದೆ ಬರಿಸುತ್ತದೆ ಮತ್ತು ಅವನು ಬೇಗನೆ ಗಾಢ ನಿದ್ರೆಹೋಗುತ್ತಾನೆ. ಆಗ ಯಾಯೇಲಳು ಡೇರೆಯ ಒಂದು ಗೂಟವನ್ನು ತೆಗೆದುಕೊಂಡು ಈ ಕೆಟ್ಟ ಮನುಷ್ಯನ ತಲೆಗೆ ಹೊಡೆದು ನೆಲಕ್ಕೆ ನಾಟಿಸುತ್ತಾಳೆ. ತದನಂತರ ಬಾರಾಕನು ಬಂದಾಗ ಸೀಸೆರನು ಸತ್ತಿರುವುದನ್ನು ತೋರಿಸುತ್ತಾಳೆ! ಹೀಗೆ ದೆಬೋರಳು ಏನು ಹೇಳಿದಳೋ ಅದು ಸತ್ಯವಾದದ್ದನ್ನು ನೀವು ಕಾಣಬಲ್ಲಿರಿ.

ಕೊನೆಗೆ ಅರಸ ಯಾಬೀನನೂ ಕೊಲ್ಲಲ್ಪಡುತ್ತಾನೆ. ಪುನಃ ಇಸ್ರಾಯೇಲ್ಯರು ಸ್ವಲ್ಪ ಸಮಯದವರೆಗೆ ಸಮಾಧಾನದಿಂದ ಜೀವಿಸುತ್ತಾರೆ.