ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 53

ಯೆಪ್ತಾಹನ ವಚನ

ಯೆಪ್ತಾಹನ ವಚನ

ನೀವು ಯಾರಿಗಾದರೂ ವಚನ ಕೊಟ್ಟಿದ್ದೀರೋ? ಮತ್ತು ಅದನ್ನು ಉಳಿಸಿಕೊಳ್ಳುವುದು ನಿಮಗೆ ಕಷ್ಟಕರವೆಂದೆಣಿಸಿತ್ತೋ? ಈ ಚಿತ್ರದಲ್ಲಿರುವ ಮನುಷ್ಯನಿಗೆ ಹಾಗಾಯಿತು. ಅದಕ್ಕಾಗಿಯೇ ಅವನು ಅಷ್ಟು ಬೇಸರದಿಂದಿದ್ದಾನೆ. ಅವನ ಹೆಸರು ಯೆಪ್ತಾಹ. ಅವನು ಇಸ್ರಾಯೇಲ್‌ನ ಧೀರ ನ್ಯಾಯಸ್ಥಾಪಕ.

ಇಸ್ರಾಯೇಲ್ಯರು ಯೆಹೋವನನ್ನು ಆರಾಧಿಸುವುದನ್ನು ಬಿಟ್ಟುಬಿಟ್ಟಿದ್ದ ಒಂದು ಸಮಯದಲ್ಲಿ ಯೆಪ್ತಾಹನು ಜೀವಿಸುತ್ತಿದ್ದಾನೆ. ಅವರು ಪುನಃ ಕೆಟ್ಟ ವಿಷಯಗಳನ್ನು ಮಾಡುತ್ತಾರೆ. ಆದುದರಿಂದ ಅವರು ಅಮ್ಮೋನಿನ ಜನರಿಂದ ಬಾಧಿಸಲ್ಪಡುವಂತೆ ಯೆಹೋವನು ಬಿಡುತ್ತಾನೆ. ಇದರಿಂದ ಇಸ್ರಾಯೇಲ್ಯರು ಯೆಹೋವನಿಗೆ, ‘ನಾವು ನಿನ್ನ ವಿರುದ್ಧ ಪಾಪಮಾಡಿದ್ದೇವೆ. ದಯವಿಟ್ಟು ನಮ್ಮನ್ನು ರಕ್ಷಿಸು!’ ಎಂದು ಮೊರೆಯಿಡುತ್ತಾರೆ.

ತಾವು ಮಾಡಿದ ಕೆಟ್ಟ ವಿಷಯಗಳಿಗಾಗಿ ಜನರು ದುಃಖಪಡುತ್ತಾರೆ. ಯೆಹೋವನನ್ನು ಪುನಃ ಆರಾಧಿಸುವ ಮೂಲಕ ಅವರು ತಮ್ಮ ಪಶ್ಚಾತ್ತಾಪವನ್ನು ತೋರಿಸುತ್ತಾರೆ. ಆದುದರಿಂದ ಇನ್ನೊಮ್ಮೆ ಯೆಹೋವನು ಅವರಿಗೆ ಸಹಾಯಮಾಡುತ್ತಾನೆ.

ದುಷ್ಟ ಅಮ್ಮೋನ್ಯರ ವಿರುದ್ಧವಾಗಿ ಹೋರಾಡುವುದಕ್ಕಾಗಿ ಜನರು ಯೆಪ್ತಾಹನನ್ನು ಆರಿಸುತ್ತಾರೆ. ಯುದ್ಧದಲ್ಲಿ ಜಯಗಳಿಸಲಿಕ್ಕಾಗಿ ಯೆಹೋವನ ಸಹಾಯ ಯೆಪ್ತಾಹನಿಗೆ ಅತ್ಯಗತ್ಯವಾಗಿತ್ತು. ಆದುದರಿಂದ ಅವನು ಯೆಹೋವನಿಗೆ ಹೀಗೆಂದು ವಚನ ಕೊಡುತ್ತಾನೆ: ‘ಅಮ್ಮೋನಿಯರ ಮೇಲೆ ನೀನು ನನಗೆ ಜಯವನ್ನು ಕೊಡುವುದಾದರೆ, ನಾನು ವಿಜೇತನಾಗಿ ಮನೆಗೆ ಹಿಂತಿರುಗುವಾಗ ನನ್ನನ್ನು ಎದುರುಗೊಳ್ಳಲು ಬರುವ ಮೊದಲ ವ್ಯಕ್ತಿಯನ್ನು ನಿನಗೆ ಕೊಡುವೆನು.’

ಯೆಪ್ತಾಹನು ಕೊಟ್ಟ ವಚನವನ್ನು ಯೆಹೋವನು ಆಲಿಸುತ್ತಾನೆ ಮತ್ತು ಜಯಹೊಂದುವಂತೆ ಅವನಿಗೆ ಸಹಾಯಮಾಡುತ್ತಾನೆ. ಯೆಪ್ತಾಹನು ಮನೆಗೆ ಹಿಂತಿರುಗುವಾಗ ಅವನನ್ನು ಎದುರುಗೊಳ್ಳಲು ಮೊದಲು ಹೊರಗೆ ಬಂದವರು ಯಾರೆಂದು ನಿಮಗೆ ಗೊತ್ತೋ? ಅವನ ಒಬ್ಬಳೇ ಮಗಳು! ‘ಅಯ್ಯೋ, ನನ್ನ ಮಗಳೇ, ನನ್ನ ಮಗಳೇ!’ ಎಂದು ಚೀರುತ್ತಾನೆ ಯೆಪ್ತಾಹನು. ‘ನೀನು ನನಗೆಂಥಾ ದುಃಖವನ್ನು ತಂದಿದ್ದೀ. ನಾನು ಬಾಯ್ದೆರೆದು ಯೆಹೋವನಿಗೆ ವಚನ ಕೊಟ್ಟಿದ್ದೇನೆ, ಅದನ್ನು ಹಿಂದೆಗೆಯಲಾರೆ’ ಎಂದು ಅವನು ಹೇಳುತ್ತಾನೆ.

ಯೆಪ್ತಾಹನು ಕೊಟ್ಟ ವಚನದ ಕುರಿತು ಅವನ ಮಗಳಿಗೆ ತಿಳಿದಾಗ, ಅವಳಿಗೆ ಸಹ ಮೊದಲು ದುಃಖವಾಗುತ್ತದೆ. ಯಾಕೆಂದರೆ ಅವಳೀಗ ತನ್ನ ತಂದೆಯನ್ನೂ ಗೆಳತಿಯರನ್ನೂ ಬಿಟ್ಟುಹೋಗಬೇಕಾಗಿರುತ್ತದೆ. ಅವಳು ತನ್ನ ಉಳಿದ ಜೀವಿತವನ್ನು ಶಿಲೋವಿನಲ್ಲಿರುವ ಯೆಹೋವನ ಗುಡಾರದಲ್ಲಿ ಆತನ ಸೇವೆಮಾಡುವುದರಲ್ಲಿ ಕಳೆಯಲಿದ್ದಾಳೆ. ಆದುದರಿಂದ ಅವಳು ತನ್ನ ತಂದೆಗೆ, ‘ಯೆಹೋವನಿಗೆ ನೀನು ವಚನ ಕೊಟ್ಟಿರುವುದಾದರೆ, ನೀನು ಅದನ್ನು ನೆರವೇರಿಸಲೇಬೇಕು’ ಎಂದು ಹೇಳುತ್ತಾಳೆ.

ಹೀಗೆ ಯೆಪ್ತಾಹನ ಮಗಳು ಶಿಲೋವಿಗೆ ಹೋಗುತ್ತಾಳೆ ಮತ್ತು ತನ್ನ ಉಳಿದ ಜೀವನವನ್ನು ಯೆಹೋವನ ಗುಡಾರದಲ್ಲಿ ಆತನ ಸೇವೆಯನ್ನು ಮಾಡುತ್ತಾ ಕಳೆಯುತ್ತಾಳೆ. ಪ್ರತಿ ವರ್ಷದಲ್ಲಿ ನಾಲ್ಕು ದಿವಸ ಇಸ್ರಾಯೇಲಿನ ಹೆಣ್ಣುಮಕ್ಕಳು ಅವಳನ್ನು ಭೇಟಿಯಾಗಲು ಅಲ್ಲಿಗೆ ಹೋಗುತ್ತಾರೆ. ಅಲ್ಲಿ ಒಟ್ಟುಗೂಡಿ ಸಂತೋಷದಿಂದ ಸಮಯ ಕಳೆಯುತ್ತಾರೆ. ಜನರು ಯೆಪ್ತಾಹನ ಮಗಳನ್ನು ಪ್ರೀತಿಸುತ್ತಾರೆ. ಯಾಕೆಂದರೆ ಅವಳು ಯೆಹೋವನ ಬಹಳ ಉತ್ತಮ ಸೇವಕಿಯಾಗಿದ್ದಾಳೆ.