ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 55

ಪುಟ್ಟ ಬಾಲಕನು ದೇವರ ಸೇವೆಮಾಡುತ್ತಾನೆ

ಪುಟ್ಟ ಬಾಲಕನು ದೇವರ ಸೇವೆಮಾಡುತ್ತಾನೆ

ಈ ಪುಟ್ಟ ಬಾಲಕನು ಅದೆಷ್ಟು ಮುದ್ದಾಗಿದ್ದಾನೆ ಅಲ್ಲವೇ? ಅವನ ಹೆಸರು ಸಮುವೇಲ. ಸಮುವೇಲನ ತಲೆಯ ಮೇಲೆ ಕೈಯನ್ನಿಟ್ಟಿರುವ ಪುರುಷನು ಇಸ್ರಾಯೇಲಿನ ಮಹಾ ಯಾಜಕನಾದ ಏಲಿ. ಸಮುವೇಲನನ್ನು ಏಲಿಯ ಬಳಿಗೆ ಕರೆದುಕೊಂಡು ಬಂದಿರುವವರು ಅವನ ತಂದೆ ಎಲ್ಕಾನ ಮತ್ತು ತಾಯಿ ಹನ್ನ.

ಸಮುವೇಲನಿಗೆ ಸುಮಾರು ನಾಲ್ಕು ಅಥವಾ ಐದು ವರ್ಷ ಪ್ರಾಯವಷ್ಟೇ. ಆದರೆ ಅವನು ಇಲ್ಲಿ ಯೆಹೋವನ ಗುಡಾರದಲ್ಲಿ ಏಲಿ ಮತ್ತು ಇತರ ಯಾಜಕರೊಂದಿಗೆ ವಾಸಿಸುವನು. ಸಮುವೇಲನನ್ನು ಇಷ್ಟು ಚಿಕ್ಕ ಪ್ರಾಯದಲ್ಲಿಯೇ ಯೆಹೋವನ ಗುಡಾರದಲ್ಲಿ ಸೇವೆಮಾಡಲಿಕ್ಕಾಗಿ ಎಲ್ಕಾನ ಮತ್ತು ಹನ್ನ ಕರೆತಂದಿರುವುದೇಕೆ? ಏಕೆಂದು ನಾವು ನೋಡೋಣ.

ಸಮುವೇಲನನ್ನು ಇಲ್ಲಿಗೆ ಕರೆತರುವ ಕೆಲವೇ ವರ್ಷಗಳ ಹಿಂದೆ ಹನ್ನಳು ಬಹಳ ದುಃಖದಲ್ಲಿದ್ದಳು. ಏಕೆಂದು ಗೊತ್ತಾ? ಅವಳಿಗೆ ಮಕ್ಕಳಿರಲಿಲ್ಲ. ತನಗೊಂದು ಮಗು ಬೇಕೆಂದು ಅವಳು ತುಂಬಾ ಬಯಸಿದ್ದಳು. ಹೀಗೆ ಒಂದು ದಿನ ಹನ್ನಳು ಯೆಹೋವನ ಗುಡಾರಕ್ಕೆ ಹೋದಾಗ ‘ಓ ಯೆಹೋವನೇ, ನನ್ನನ್ನು ಮರೆಯಬೇಡ! ನೀನು ನನಗೊಬ್ಬ ಮಗನನ್ನು ಕೊಟ್ಟಲ್ಲಿ, ಅವನು ತನ್ನ ಜೀವಮಾನವೆಲ್ಲಾ ನಿನ್ನ ಸೇವೆಮಾಡುವಂತೆ ಅವನನ್ನು ನಿನಗೇ ಕೊಟ್ಟುಬಿಡುತ್ತೇನೆಂದು ನಾನು ಹರಕೆ ಮಾಡುತ್ತೇನೆ’ ಎಂದು ಪ್ರಾರ್ಥನೆಮಾಡುತ್ತಾಳೆ.

ಹನ್ನಳು ಮಾಡಿದ ಪ್ರಾರ್ಥನೆಯನ್ನು ಯೆಹೋವನು ಲಾಲಿಸುತ್ತಾನೆ. ಕೆಲವು ತಿಂಗಳುಗಳ ತರುವಾಯ ಆಕೆ ಗರ್ಭಿಣಿಯಾಗಿ ಸಮುವೇಲನಿಗೆ ಜನ್ಮಕೊಡುತ್ತಾಳೆ. ಹನ್ನಳು ತನ್ನ ಈ ಪುಟ್ಟ ಮಗನನ್ನು ತುಂಬ ಪ್ರೀತಿಸಿದಳು. ಮಾತ್ರವಲ್ಲ, ಅವನಿನ್ನೂ ಚಿಕ್ಕವನಾಗಿರುವಾಗಲೇ ಯೆಹೋವನ ಕುರಿತು ಕಲಿಸಲಾರಂಭಿಸಿದಳು. ಅವಳು ತನ್ನ ಗಂಡನಿಗೆ ‘ಸಮುವೇಲನು ಮೊಲೆಬಿಟ್ಟ ಮೇಲೆ ಗುಡಾರದಲ್ಲಿ ಯೆಹೋವನ ಸೇವೆಮಾಡಲಿಕ್ಕಾಗಿ ನಾನು ಅವನನ್ನು ಅಲ್ಲಿಗೆ ಕರೆದುಕೊಂಡು ಹೋಗುವೆನು’ ಎಂದು ಹೇಳಿದಳು.

ಅದರಂತೆಯೇ ಹನ್ನ ಮತ್ತು ಎಲ್ಕಾನ ಸಮುವೇಲನನ್ನು ಕರೆತಂದಿರುವುದನ್ನು ನಾವು ಈ ಚಿತ್ರದಲ್ಲಿ ನೋಡುತ್ತೇವೆ. ಅವರು ಸಮುವೇಲನಿಗೆ ತುಂಬಾ ಚೆನ್ನಾಗಿ ಕಲಿಸಿಕೊಟ್ಟಿದ್ದಾರೆ. ಆದುದರಿಂದಲೇ ಯೆಹೋವನ ಗುಡಾರದಲ್ಲಿ ಸೇವೆಮಾಡಲು ಅವನು ಬಹಳ ಸಂತೋಷಪಡುತ್ತಾನೆ. ಪ್ರತಿ ವರ್ಷ ಹನ್ನ ಮತ್ತು ಎಲ್ಕಾನ ಈ ವಿಶೇಷ ಗುಡಾರದಲ್ಲಿ ಯೆಹೋವನನ್ನು ಆರಾಧಿಸಲು ಮತ್ತು ತಮ್ಮ ಚಿಕ್ಕ ಮಗನನ್ನು ನೋಡಲು ಬರುತ್ತಾರೆ. ಹಾಗೇ ಬರುವಾಗ ಪ್ರತಿ ವರ್ಷವೂ ಹನ್ನಳು ಸಮುವೇಲನಿಗಾಗಿ ಒಂದು ತೋಳಿಲ್ಲದ ಹೊಸ ಅಂಗಿಯನ್ನು ಹೊಲಿದು ತರುತ್ತಾಳೆ.

ವರ್ಷಗಳು ದಾಟಿಹೋಗುತ್ತವೆ. ಸಮುವೇಲನು ಯೆಹೋವನ ಗುಡಾರದಲ್ಲಿ ಸೇವೆಮಾಡುತ್ತಾ ಇರುತ್ತಾನೆ. ಯೆಹೋವನಿಗೂ ಅವನು ತುಂಬಾ ಇಷ್ಟವಾಗುತ್ತಾನೆ. ಜನರೂ ಅವನನ್ನು ಮೆಚ್ಚುತ್ತಾರೆ. ಆದರೆ ಮಹಾ ಯಾಜಕನಾದ ಏಲಿಯ ಪುತ್ರರಾದ ಹೊಫ್ನಿ ಮತ್ತು ಫೀನೆಹಾಸರು ಒಳ್ಳೆಯವರಲ್ಲ. ಅವರು ಕೆಟ್ಟ ಕೆಟ್ಟ ವಿಷಯಗಳನ್ನು ಮಾಡುತ್ತಾರೆ. ಅಷ್ಟೇ ಅಲ್ಲ ಇತರರೂ ಸಹ ಯೆಹೋವನಿಗೆ ಅವಿಧೇಯರಾಗುವಂತೆ ಮಾಡುತ್ತಾರೆ. ಇದಕ್ಕಾಗಿ ಏಲಿಯು ಅವರನ್ನು ಯಾಜಕ ಸೇವೆಯಿಂದ ತೆಗೆದುಹಾಕಬೇಕಿತ್ತು. ಆದರೆ ಅವನು ಹಾಗೆ ಮಾಡುವುದಿಲ್ಲ.

ಗುಡಾರದಲ್ಲಿ ನಡೆಯುತ್ತಿರುವ ಕೆಟ್ಟ ವಿಷಯಗಳನ್ನು ಸಮವೇಲನು ನೋಡುತ್ತಿರುತ್ತಾನೆ. ಆದರೆ ಅದರಿಂದಾಗಿ ತಾನು ಮಾಡುವ ಯೆಹೋವನ ಸೇವೆಯನ್ನು ಎಳೆಯ ಸಮುವೇಲನು ನಿಲ್ಲಿಸಿಬಿಡುವುದಿಲ್ಲ. ಆ ಸಮಯದಲ್ಲಿ ಯೆಹೋವನನ್ನು ನಿಜವಾಗಿ ಪ್ರೀತಿಸುವ ಜನರು ತೀರಾ ಕೊಂಚವಾಗಿದ್ದರಿಂದ ಯೆಹೋವನು ಮಾನವರೊಂದಿಗೆ ಬಹಳ ಸಮಯದಿಂದ ಮಾತಾಡಿರಲಿಲ್ಲ. ಆದರೆ, ಸಮುವೇಲನು ಬೆಳೆದು ಸ್ವಲ್ಪ ದೊಡ್ಡವನಾದಾಗ ಒಂದು ಘಟನೆ ನಡೆಯುತ್ತದೆ.

ಸಮುವೇಲನು ಗುಡಾರದಲ್ಲಿ ಮಲಗಿರುತ್ತಾನೆ. ಆಗ ಯಾರೋ ತನ್ನನ್ನು ಕರೆಯುತ್ತಿರುವ ಶಬ್ದವನ್ನು ಕೇಳಿ ನಿದ್ರೆಯಿಂದ ಎದ್ದುಬಿಡುತ್ತಾನೆ. ‘ಬಂದೆ’ ಎಂದು ಹೇಳುತ್ತಾ ಏಲಿಯ ಬಳಿಗೆ ಓಡಿ ಹೋಗಿ, ‘ಇಗೋ ಬಂದಿದ್ದೇನೆ, ನೀವು ನನ್ನನ್ನು ಕರೆದಿರಾ’ ಎಂದು ಕೇಳುತ್ತಾನೆ.

ಆದರೆ ಏಲಿ ‘ನಾನು ನಿನ್ನನ್ನು ಕರೆಯಲಿಲ್ಲ. ಹೋಗಿ ಮಲಗಿಕೋ’ ಎಂದು ಹೇಳುತ್ತಾನೆ. ಸಮುವೇಲನು ಹೋಗಿ ಮಲಗುತ್ತಾನೆ.

ಅನಂತರ ಎರಡನೆಯ ಬಾರಿ ‘ಸಮುವೇಲನೇ!’ ಎಂದು ಕರೆದ ಶಬ್ದ ಕೇಳಿಸುತ್ತದೆ. ಸಮುವೇಲನು ಎದ್ದು ಪುನಃ ಏಲಿಯ ಬಳಿಗೆ ಓಡುತ್ತಾನೆ. ‘ನೀವು ನನ್ನನ್ನು ಕರೆದಿರಲ್ಲಾ, ಇಗೋ ಇಲ್ಲಿದ್ದೇನೆ’ ಎನ್ನುತ್ತಾನೆ ಅವನು. ಆದರೆ ಏಲಿ ‘ನಾನು ನಿನ್ನನ್ನು ಕರೆಯಲಿಲ್ಲ, ಮಗನೇ. ಹೋಗಿ ಮಲಗಿಕೋ’ ಎಂದು ಹೇಳುತ್ತಾನೆ. ಸಮುವೇಲನು ಪುನಃ ಹೋಗಿ ಮಲಗಿಕೊಳ್ಳುತ್ತಾನೆ.

ಮತ್ತೆ ಮೂರನೆಯ ಸಾರಿ ‘ಸಮುವೇಲನೇ!’ ಎಂಬ ಸ್ವರ ಕೇಳಿಬರುತ್ತದೆ. ತಟ್ಟನೆ ಸಮುವೇಲನು ಏಲಿಯ ಬಳಿಗೆ ಓಡಿಹೋಗಿ ‘ಇಗೋ, ಬಂದಿದ್ದೇನೆ. ಈ ಬಾರಿ ನೀವು ನನ್ನನ್ನು ಖಂಡಿತ ಕರೆದಿರಲೇಬೇಕು’ ಎಂದು ಹೇಳುತ್ತಾನೆ. ಸಮುವೇಲನನ್ನು ಯೆಹೋವನೇ ಕರೆಯುತ್ತಿರಬೇಕೆಂದು ಏಲಿಗೆ ಈಗ ಗೊತ್ತಾಗುತ್ತದೆ. ಆದುದರಿಂದ ಅವನು ಸಮುವೇಲನಿಗೆ, ‘ಪುನಃ ಹೋಗಿ ಮಲಗಿಕೋ. ಮತ್ತೆ ಕರೆಯುವ ಸ್ವರ ಕೇಳಿದರೆ—ಯೆಹೋವನೇ, ಅಪ್ಪಣೆಯಾಗಲಿ. ನಿನ್ನ ದಾಸನು ಕೇಳುತ್ತಿದ್ದಾನೆಂದು ಹೇಳು’ ಎಂದು ತಿಳಿಸುತ್ತಾನೆ.

ಯೆಹೋವನು ಪುನಃ ಕರೆಯುವಾಗ ಸಮುವೇಲನು ಹಾಗೆಯೇ ಹೇಳುತ್ತಾನೆ. ಆಗ ಯೆಹೋವನು ತಾನು ಏಲಿಯನ್ನೂ ಅವನ ಪುತ್ರರನ್ನೂ ಶಿಕ್ಷಿಸಲಿದ್ದೇನೆಂದು ಸಮುವೇಲನಿಗೆ ತಿಳಿಸುತ್ತಾನೆ. ತದನಂತರ ಹೊಫ್ನಿ ಮತ್ತು ಫೀನೆಹಾಸರು ಫಿಲಿಷ್ಟಿಯರೊಂದಿಗೆ ನಡೆದ ಯುದ್ಧದಲ್ಲಿ ಸಾಯುತ್ತಾರೆ. ಈ ಸಂಗತಿಯನ್ನು ಏಲಿಯು ಕೇಳಿದಾಗ ಕುಸಿದು ಕೆಳಗೆ ಬಿದ್ದು ಕುತ್ತಿಗೆ ಮುರಿದು ಸಾಯುತ್ತಾನೆ. ಹೀಗೆ ಯೆಹೋವನ ಮಾತು ಸತ್ಯವಾಗುತ್ತದೆ.

ಸಮುವೇಲನು ಬೆಳೆದು ದೊಡ್ಡವನಾಗುತ್ತಾನೆ. ಅವನೇ ಇಸ್ರಾಯೇಲಿನ ಕೊನೆಯ ನ್ಯಾಯಸ್ಥಾಪಕನು. ಅವನು ಮುದುಕನಾದಾಗ ಜನರು, ‘ನಮ್ಮನ್ನು ಆಳಲು ಒಬ್ಬ ಅರಸನನ್ನು ಆರಿಸಿಕೊಡು’ ಎಂದು ಅವನನ್ನು ಕೇಳಿಕೊಳ್ಳುತ್ತಾರೆ. ಸಮುವೇಲನು ಇದಕ್ಕೆ ಸಮ್ಮತಿಸುವುದಿಲ್ಲ. ಯಾಕೆಂದರೆ ನಿಜವಾಗಿ ಯೆಹೋವನು ಅವರ ಅರಸನು. ಆದರೆ ಜನರು ಹೇಳಿದ ಹಾಗೆ ಮಾಡುವಂತೆ ಯೆಹೋವನು ಅವನಿಗೆ ಹೇಳುತ್ತಾನೆ.