ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 57

ದೇವರು ದಾವೀದನನ್ನು ಆರಿಸುತ್ತಾನೆ

ದೇವರು ದಾವೀದನನ್ನು ಆರಿಸುತ್ತಾನೆ

ಇಲ್ಲಿ ಏನು ಸಂಭವಿಸಿದೆಯೆಂದು ನಿಮಗೆ ಗೊತ್ತಾ? ಈ ಹುಡುಗನು ಕರಡಿಯಿಂದ ಈ ಚಿಕ್ಕ ಕುರಿಮರಿಯನ್ನು ಕಾಪಾಡಿದ್ದಾನೆ. ಕರಡಿ ಬಂದು ಆ ಕುರಿಮರಿಯನ್ನು ಹಿಡಿದುಕೊಂಡು ಹೋಗಿ ತಿಂದುಬಿಡಲಿಕ್ಕಿತ್ತು. ಆದರೆ ಈ ಹುಡುಗನು ಕರಡಿಯನ್ನು ಬೆನ್ನಟ್ಟಿಹೋಗಿ ಕುರಿಮರಿಯನ್ನು ರಕ್ಷಿಸಿದನು. ಕರಡಿಯು ತನ್ನ ಮೇಲೆ ಬಿದ್ದಾಗ, ಹುಡುಗನು ಕರಡಿಯನ್ನು ಅದುಮಿಹಿಡಿದು ನೆಲಕ್ಕೆ ಅಪ್ಪಳಿಸಿ ಸಾಯಿಸಿದನು! ಇನ್ನೊಂದು ಸಲ ಸಿಂಹದಿಂದ ಒಂದು ಕುರಿಯನ್ನು ಕಾಪಾಡಿದನು. ಇವನೊಬ್ಬ ಧೀರ ಹುಡುಗನಲ್ಲವೇ? ಅವನು ಯಾರೆಂದು ನಿಮಗೆ ಗೊತ್ತೋ?

ಇವನೇ ದಾವೀದನು. ಅವನು ಬೇತ್ಲೆಹೇಮ್‌ ಪಟ್ಟಣದಲ್ಲಿ ಜೀವಿಸುತ್ತಾನೆ. ರೂತ್‌ ಮತ್ತು ಬೋವಜರ ಮಗನಾದ ಓಬೇದನು ಇವನ ಅಜ್ಜ. ಅವರ ನೆನಪು ನಿಮಗಿದೆಯೇ? ದಾವೀದನ ತಂದೆಯ ಹೆಸರು ಇಷಯ. ದಾವೀದನು ತನ್ನ ತಂದೆಯ ಕುರಿಗಳನ್ನು ಕಾಯುತ್ತಾನೆ. ಯೆಹೋವನು ಸೌಲನನ್ನು ಅರಸನಾಗಿ ಆರಿಸಿಕೊಂಡು 10 ವರ್ಷಗಳ ಬಳಿಕ ದಾವೀದನು ಜನಿಸಿದನು.

ಒಂದು ದಿನ ಯೆಹೋವನು ಸಮುವೇಲನಿಗೆ, ‘ಸ್ವಲ್ಪ ವಿಶೇಷ ತೈಲವನ್ನು ತೆಗೆದುಕೊಂಡು ಬೇತ್ಲೆಹೇಮಿನಲ್ಲಿರುವ ಇಷಯನ ಮನೆಗೆ ಹೋಗು. ಅವನ ಪುತ್ರರಲ್ಲಿ ಒಬ್ಬನನ್ನು ನಾನು ಅರಸನನ್ನಾಗಿ ಆರಿಸಿಕೊಂಡಿದ್ದೇನೆ’ ಎಂದು ಹೇಳುತ್ತಾನೆ. ಅಂತೆಯೇ ಸಮುವೇಲನು ಇಷಯನ ಮನೆಗೆ ಹೋಗಿ ಹಿರಿಯ ಮಗನಾದ ಎಲೀಯಾಬನನ್ನು ಕಂಡು, ‘ನಿಶ್ಚಯವಾಗಿ ಯೆಹೋವನು ಆರಿಸಿಕೊಂಡವನು ಇವನೇ’ ಎಂದು ತನ್ನೊಳಗೆ ಅಂದುಕೊಳ್ಳುತ್ತಾನೆ. ಆದರೆ ಯೆಹೋವನು ಅವನಿಗೆ ಹೇಳುವುದು: ‘ನೀನು ಅವನ ಎತ್ತರವನ್ನೂ ಚೆಲುವನ್ನೂ ನೋಡಬೇಡ. ನಾನು ಅವನನ್ನು ಅರಸನನ್ನಾಗಿ ಆರಿಸಿಕೊಂಡಿಲ್ಲ.’

ಆಗ ಇಷಯನು ತನ್ನ ಮಗ ಅಬೀನಾದಾಬನನ್ನು ಸಮುವೇಲನ ಬಳಿಗೆ ಬರಮಾಡುತ್ತಾನೆ. ಆದರೆ ಸಮುವೇಲನು, ‘ಇಲ್ಲ, ಯೆಹೋವನು ಇವನನ್ನೂ ಆರಿಸಿಕೊಂಡಿರುವದಿಲ್ಲ’ ಎಂದು ಹೇಳುತ್ತಾನೆ. ಆಮೇಲೆ ಇಷಯನು ತನ್ನ ಮಗನಾದ ಶಮ್ಮನನ್ನು ಕರೆತರುತ್ತಾನೆ. ‘ಇಲ್ಲ, ಯೆಹೋವನು ಇವನನ್ನೂ ಆರಿಸಿಕೊಂಡಿಲ್ಲ’ ಎನ್ನುತ್ತಾನೆ ಸಮುವೇಲನು. ಇಷಯನು ತನ್ನ ಪುತ್ರರಲ್ಲಿ ಏಳು ಮಂದಿಯನ್ನು ಸಮುವೇಲನ ಬಳಿಗೆ ಬರಮಾಡುತ್ತಾನೆ, ಆದರೆ ಅವರಲ್ಲಿ ಯಾರನ್ನೂ ಯೆಹೋವನು ಆರಿಸುವುದಿಲ್ಲ. ‘ನಿನಗಿರುವುದು ಇಷ್ಟೇ ಮಂದಿ ಗಂಡುಮಕ್ಕಳೋ?’ ಎಂದು ಸಮುವೇಲನು ಕೇಳುತ್ತಾನೆ.

ಆಗ ಇಷಯನು ‘ಇವರೆಲ್ಲರಿಗಿಂತಲೂ ಚಿಕ್ಕವನು ಒಬ್ಬನಿದ್ದಾನೆ. ಆದರೆ ಅವನು ಕುರಿಮೇಯಿಸುವುದಕ್ಕೆ ಹೋಗಿದ್ದಾನೆ.’ ಎಂದನ್ನುತ್ತಾನೆ. ಬಳಿಕ ದಾವೀದನನ್ನು ಕರೆತಂದಾಗ, ಅವನು ಒಬ್ಬ ಸುಂದರ ಹುಡುಗನಾಗಿರುವುದನ್ನು ಸಮುವೇಲನು ನೋಡುತ್ತಾನೆ. ಯೆಹೋವನು ಸಮುವೇಲನಿಗೆ ‘ನಾನು ಆರಿಸಿಕೊಂಡವನು ಇವನೇ. ಎದ್ದು ಅವನ ಮೇಲೆ ತೈಲವನ್ನು ಹೊಯ್ದು ಅಭಿಷೇಕಿಸು’ ಎಂದು ತಿಳಿಸುತ್ತಾನೆ. ಸಮುವೇಲನು ಹಾಗೆಯೇ ಮಾಡುತ್ತಾನೆ. ದಾವೀದನು ಇಸ್ರಾಯೇಲ್ಯರ ಅರಸನಾಗುವ ಸಮಯವು ಮುಂದೆ ಬರಲಿದೆ.