ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 58

ದಾವೀದ ಮತ್ತು ಗೊಲ್ಯಾತ

ದಾವೀದ ಮತ್ತು ಗೊಲ್ಯಾತ

ಫಿಲಿಷ್ಟಿಯರು ಪುನಃ ಇಸ್ರಾಯೇಲಿನ ವಿರುದ್ಧ ಯುದ್ಧಮಾಡಲು ಬರುತ್ತಾರೆ. ದಾವೀದನ ಮೂವರು ಅಣ್ಣಂದಿರು ಈಗ ಸೌಲನ ಸೈನ್ಯದಲ್ಲಿದ್ದಾರೆ. ಆದುದರಿಂದ ಒಂದು ದಿನ ಇಷಯನು ದಾವೀದನಿಗೆ, ‘ನಿನ್ನ ಅಣ್ಣಂದಿರಿಗೆ ಈ ಕಾಳು ಮತ್ತು ರೊಟ್ಟಿಗಳನ್ನು ತೆಗೆದುಕೊಂಡು ಹೋಗಿ ಕೊಟ್ಟು, ಅವರು ಹೇಗಿದ್ದಾರೆಂದು ನೋಡಿಕೊಂಡು ಬಾ’ ಎಂದು ಹೇಳುತ್ತಾನೆ.

ದಾವೀದನು ಸೇನಾ ಪಾಳೆಯಕ್ಕೆ ಆಗಮಿಸಿ ತನ್ನ ಸಹೋದರರನ್ನು ಹುಡುಕುವುದಕ್ಕಾಗಿ ರಣರಂಗಕ್ಕೆ ಓಡುತ್ತಾನೆ. ಆ ಸಮಯದಲ್ಲಿ ಫಿಲಿಷ್ಟಿಯನಾದ ದೈತ್ಯ ಗೊಲ್ಯಾತನು ಹೊರಗೆ ಬಂದು ಇಸ್ರಾಯೇಲ್ಯರಿಗೆ ಗೇಲಿಮಾಡುತ್ತಾನೆ. 40 ದಿನಗಳಿಂದ ಅವನು ಪ್ರತಿದಿನವೂ ಬೆಳಗ್ಗೆ, ಸಾಯಂಕಾಲ ಹೀಗೆ ಗೇಲಿ ಮಾಡುತ್ತಾ ಇರುತ್ತಾನೆ. ‘ನನ್ನೊಡನೆ ಯುದ್ಧಮಾಡಲು ನಿಮ್ಮಲ್ಲಿ ಒಬ್ಬ ಪುರುಷನನ್ನು ಆರಿಸಿರಿ. ಅವನು ನನ್ನನ್ನು ಸೋಲಿಸಿ ಕೊಂದರೆ ನಾವು ನಿಮ್ಮ ಸೇವಕರಾಗುವೆವು. ನಾನು ಅವನನ್ನು ಸೋಲಿಸಿ ಕೊಂದರೆ ನೀವು ನಮ್ಮ ಸೇವಕರಾಗಬೇಕು. ನಿಮ್ಮಿಂದಾದರೆ ನನ್ನೊಡನೆ ಕಾಳಗಕ್ಕೆ ಒಬ್ಬ ಪುರುಷನನ್ನು ಕಳುಹಿಸಿರಿ ನೋಡೋಣ’ ಎಂದು ಅವನು ಅರಚುತ್ತಾನೆ.

ದಾವೀದನು ಕೆಲವರು ಸೈನಿಕರ ಬಳಿ ಹೋಗಿ, ‘ಈ ಫಿಲಿಷ್ಟಿಯನನ್ನು ಕೊಂದು ಇಸ್ರಾಯೇಲ್ಯರಿಗೆ ಬಂದಿರುವ ಈ ಅವಮಾನವನ್ನು ತೆಗೆದುಹಾಕುವವನಿಗೆ ಸಿಕ್ಕುವುದೇನು?’ ಎಂದು ಕೇಳುತ್ತಾನೆ.

‘ಸೌಲನು ಆ ಮನುಷ್ಯನಿಗೆ ಅಪಾರ ಐಶ್ವರ್ಯವನ್ನು ಕೊಡುವನು ಮತ್ತು ತನ್ನ ಮಗಳನ್ನು ಅವನಿಗೆ ಕೊಟ್ಟು ಮದುವೆಮಾಡುವನು’ ಎಂದು ಆ ಸೈನಿಕರು ಉತ್ತರಿಸುತ್ತಾರೆ.

ಆದರೆ ಇಸ್ರಾಯೇಲ್ಯರೆಲ್ಲರೂ ಗೊಲ್ಯಾತನಿಗೆ ಭಯಪಡುತ್ತಾರೆ. ಯಾಕೆ ಗೊತ್ತಾ? ಅವನು ಬಹಳ ಎತ್ತರವಾಗಿದ್ದ ಬಲಿಷ್ಠ ಮನುಷ್ಯನಾಗಿದ್ದನು. ಅವನ ಎತ್ತರ 9ಅಡಿಗಿಂತಲೂ (ಸುಮಾರು 3 ಮೀಟರ್‌) ಹೆಚ್ಚು. ಅವನ ಗುರಾಣಿಯನ್ನು ಹೊರಲಿಕ್ಕಾಗಿ ಇನ್ನೊಬ್ಬ ಸೈನಿಕನೂ ಇದ್ದಾನೆ.

ದಾವೀದನು ಗೊಲ್ಯಾತನ ಸಂಗಡ ಯುದ್ಧಮಾಡಲು ಬಯಸುತ್ತಾನೆಂದು ಕೆಲವು ಸೈನಿಕರು ಅರಸ ಸೌಲನಿಗೆ ತಿಳಿಸುತ್ತಾರೆ. ಆದರೆ ಸೌಲನು ದಾವೀದನಿಗೆ ಹೇಳುವುದು: ‘ಈ ಫಿಲಿಷ್ಟಿಯನೊಡನೆ ನೀನು ಕಾದಾಡಲಾರೆ. ನೀನು ಇನ್ನೂ ಚಿಕ್ಕ ಹುಡುಗ. ಅವನಾದರೋ ತನ್ನ ಜೀವಮಾನವಿಡೀ ಸೈನಿಕನಾಗಿದ್ದವನು.’ ಅದಕ್ಕೆ ದಾವೀದನು, ‘ನಾನು ನನ್ನ ತಂದೆಯ ಕುರಿಗಳನ್ನು ಹಿಡಿದೊಯ್ದ ಕರಡಿಯನ್ನೂ ಸಿಂಹವನ್ನೂ ಕೊಂದುಹಾಕಿದ್ದೇನೆ. ಈ ಫಿಲಿಷ್ಟಿಯನಿಗೂ ಅದೇ ಗತಿಯಾಗುವುದು. ಯೆಹೋವನು ನನಗೆ ಸಹಾಯ ಮಾಡುವನು’ ಎಂದುತ್ತರಿಸುತ್ತಾನೆ. ಆದುದರಿಂದ ಸೌಲನು, ‘ಹೋಗು, ಯೆಹೋವನು ನಿನ್ನ ಸಂಗಡ ಇರಲಿ’ ಎಂದು ಹೇಳಿ ಕಳುಹಿಸುತ್ತಾನೆ.

ದಾವೀದನು ಒಂದು ಹಳ್ಳದ ಬಳಿಗೆ ಹೋಗಿ ಐದು ನುಣುಪಾದ ಕಲ್ಲುಗಳನ್ನು ಆರಿಸಿ ತನ್ನ ಚೀಲದಲ್ಲಿ ಹಾಕುತ್ತಾನೆ. ಅನಂತರ ಅವನು ತನ್ನ ಕವಣೆಯನ್ನು ತೆಗೆದುಕೊಂಡು ಆ ದೈತ್ಯನನ್ನು ಎದುರಿಸಲು ಹೋಗುತ್ತಾನೆ. ಅವನನ್ನು ನೋಡುವಾಗ ಗೊಲ್ಯಾತನಿಗೆ ನಂಬಲಿಕ್ಕೇ ಆಗುವುದಿಲ್ಲ. ದಾವೀದನನ್ನು ಕೊಲ್ಲುವುದು ತೀರ ಸುಲಭವೆಂದು ಅವನೆಣಿಸುತ್ತಾನೆ.

‘ಇಲ್ಲಿ ಬಾ, ನಿನ್ನನ್ನು ಕೊಂದು ನಿನ್ನ ದೇಹವನ್ನು ಮೃಗ ಪಕ್ಷಿಗಳಿಗೆ ಹಾಕುತ್ತೇನೆ’ ಎನ್ನುತ್ತಾನೆ ಗೊಲ್ಯಾತ. ಆದರೆ ದಾವೀದನು ಅನ್ನುವುದು: ‘ನೀನು ಈಟಿ, ಕತ್ತಿ, ಬರ್ಜಿಗಳೊಡನೆ ನನ್ನ ಬಳಿಗೆ ಬರುತ್ತೀ. ನಾನಾದರೋ ಯೆಹೋವನ ನಾಮದೊಡನೆ ನಿನ್ನ ಬಳಿಗೆ ಬರುತ್ತೇನೆ. ಈ ಹೊತ್ತು ಯೆಹೋವನು ನಿನ್ನನ್ನು ನನ್ನ ಕೈಗೆ ಒಪ್ಪಿಸಿಕೊಡುವನು ಮತ್ತು ನಾನು ನಿನ್ನನ್ನು ಕೊಂದುಹಾಕುವೆನು.’

ಹೀಗೆ ಹೇಳುತ್ತಾ ದಾವೀದನು ಗೊಲ್ಯಾತನ ಕಡೆಗೆ ಓಡುತ್ತಾನೆ. ತನ್ನ ಚೀಲದಿಂದ ಒಂದು ಕಲ್ಲನ್ನು ತೆಗೆದು ಅದನ್ನು ಕವಣೆಯಲ್ಲಿಟ್ಟು ತನ್ನೆಲ್ಲಾ ಶಕ್ತಿಯಿಂದ ಬೀಸಿ ಹೊಡೆಯುತ್ತಾನೆ. ಕಲ್ಲು ನೇರವಾಗಿ ಗೊಲ್ಯಾತನ ತಲೆಯೊಳಗೆ ಹೊಕ್ಕುತ್ತದೆ ಮತ್ತು ಅವನು ಸತ್ತು ನೆಲಕ್ಕೆ ಬೀಳುತ್ತಾನೆ! ತಮ್ಮ ರಣವೀರನು ಬೀಳುವುದನ್ನು ಫಿಲಿಷ್ಟಿಯರು ಕಂಡಾಗ ಅವರೆಲ್ಲರೂ ದಿಕ್ಕಾಪಾಲಾಗಿ ಓಡಿಹೋಗುತ್ತಾರೆ. ಇಸ್ರಾಯೇಲ್ಯರು ಅವರನ್ನು ಹಿಂದಟ್ಟಿ ಯುದ್ಧದಲ್ಲಿ ಜಯಸಾಧಿಸುತ್ತಾರೆ.