ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 75

ಬಾಬೆಲಿನಲ್ಲಿ ನಾಲ್ವರು ಹುಡುಗರು

ಬಾಬೆಲಿನಲ್ಲಿ ನಾಲ್ವರು ಹುಡುಗರು

ಅರಸ ನೆಬೂಕದ್ನೆಚ್ಚರನು ಎಲ್ಲಾ ಸುಶಿಕ್ಷಿತ ಇಸ್ರಾಯೇಲ್ಯರನ್ನು ಬಾಬೆಲಿಗೆ ಕರೆದುಕೊಂಡು ಹೋಗುತ್ತಾನೆ. ಆಮೇಲೆ ಅವರಲ್ಲಿ ಅತ್ಯಂತ ಸುಂದರರೂ ನಿಪುಣರೂ ಆಗಿರುವ ಯುವಕರನ್ನು ಆರಿಸುತ್ತಾನೆ. ಅವರಲ್ಲಿ ನಾಲ್ವರು ಹುಡುಗರನ್ನೇ ನೀವಿಲ್ಲಿ ಕಾಣುತ್ತೀರಿ. ಒಬ್ಬನು ದಾನಿಯೇಲನು, ಬೇರೆ ಮೂವರನ್ನು ಬಬಿಲೋನ್ಯರು ಶದ್ರಕ್‌, ಮೇಶಕ್‌ ಮತ್ತು ಅಬೇದ್‌ನೆಗೋ ಎಂದು ಕರೆಯುತ್ತಾರೆ.

ತನ್ನ ಅರಮನೆಯಲ್ಲಿ ಸೇವೆಮಾಡುವುದಕ್ಕಾಗಿ ಈ ಯುವಕರನ್ನು ತರಬೇತುಗೊಳಿಸುವಂತೆ ನೆಬೂಕದ್ನೆಚ್ಚರನು ಏರ್ಪಾಡುಮಾಡುತ್ತಾನೆ. ಮೂರು ವರ್ಷಗಳ ತರಬೇತಿಯನ್ನು ನೀಡಿದ ಬಳಿಕ ಅತ್ಯಂತ ಬುದ್ಧಿವಂತರನ್ನು ಸಮಸ್ಯೆಗಳನ್ನು ಬಗೆಹರಿಸಲು ತನಗೆ ಸಹಾಯಮಾಡುವುದಕ್ಕೆ ಆರಿಸಿಕೊಳ್ಳುವನು. ತರಬೇತು ಹೊಂದುವಾಗ ಹುಡುಗರು ಸುದೃಢರೂ ಆರೋಗ್ಯವಂತರೂ ಆಗಿರಬೇಕೆಂಬುದು ಅರಸನ ಅಪೇಕ್ಷೆ. ಆದುದರಿಂದ ಅರಸನು ಅವರೆಲ್ಲರಿಗೆ ತಾನೂ ತನ್ನ ಕುಟುಂಬವೂ ಉಣ್ಣುವ ಅದೇ ಪುಷ್ಟಿಕರ ಆಹಾರ ಮತ್ತು ದ್ರಾಕ್ಷಾಮದ್ಯವನ್ನು ಕೊಡುವಂತೆ ತನ್ನ ಸೇವಕರಿಗೆ ಆಜ್ಞಾಪಿಸುತ್ತಾನೆ.

ಯುವಕ ದಾನಿಯೇಲನನ್ನು ನೋಡಿರಿ. ಅವನು ನೆಬೂಕದ್ನೆಚ್ಚರನ ಮುಖ್ಯ ಸೇವಕನಾದ ಅಶ್ಪೆನಜನಿಗೆ ಏನು ಹೇಳುತ್ತಿದ್ದಾನೆಂದು ನಿಮಗೆ ತಿಳಿದಿದೆಯೇ? ಅರಸನು ಉಣ್ಣುವ ಪುಷ್ಟಿಕರ ಆಹಾರವನ್ನು ತಾನು ತಿನ್ನಲಾರೆ ಕ್ಷಮಿಸು ಎಂದು ತಿಳಿಸುತ್ತಿದ್ದಾನೆ. ಅದನ್ನು ಕೇಳಿದ ಅಶ್ಪೆನಜನಿಗೆ ಚಿಂತೆಯಾಗುತ್ತದೆ. ‘ನೀವು ಇಂಥ ಅನ್ನ ಪಾನಗಳನ್ನು ತೆಗೆದುಕೊಳ್ಳಬೇಕೆಂದು ಅರಸನೇ ಆಜ್ಞೆಯಿತ್ತಿದ್ದಾನೆ. ಅರಸನು ನೋಡುವಾಗ ನೀವು ಬೇರೆ ಯುವಕರ ಹಾಗೆ ಸುದೃಢರಾಗಿ ಕಂಡುಬರದಿದ್ದರೆ ಅವನು ನನ್ನನ್ನು ಕೊಂದುಹಾಕುವನು’ ಎಂದು ಹೇಳುತ್ತಾನೆ ಅವನು.

ಆಗ ದಾನಿಯೇಲನು ತನ್ನನ್ನೂ ತನ್ನ ಮೂವರು ಮಿತ್ರರನ್ನೂ ನೋಡಿಕೊಳ್ಳಲು ಅಶ್ಪೆನಜನು ನೇಮಿಸಿದ್ದ ಪಾಲಕನ ಬಳಿಗೆ ಹೋಗಿ, ‘ದಯವಿಟ್ಟು ಹತ್ತು ದಿನಗಳ ಮಟ್ಟಿಗೆ ನಮ್ಮನ್ನು ಪರೀಕ್ಷಿಸು. ನಮಗೆ ತಿನ್ನಲು ಸ್ವಲ್ಪ ಕಾಯಿಪಲ್ಯ ಮತ್ತು ಕುಡಿಯಲು ನೀರನ್ನು ಒದಗಿಸು. ಆಮೇಲೆ ನಮ್ಮ ಮುಖಗಳನ್ನೂ ರಾಜನ ಆಹಾರವನ್ನು ಉಣ್ಣುವ ಯುವಕರ ಮುಖಗಳನ್ನೂ ಹೋಲಿಸಿ ಯಾರು ಪುಷ್ಟರಾಗಿ ಕಾಣುತ್ತಾರೆಂದು ನೀನೇ ನೋಡು’ ಎಂದು ವಿನಂತಿಸಿಕೊಳ್ಳುತ್ತಾನೆ.

ಪಾಲಕನು ಇದಕ್ಕೆ ಒಪ್ಪುತ್ತಾನೆ. ಹತ್ತು ದಿನಗಳ ಬಳಿಕ ನೋಡಿದರೆ ದಾನಿಯೇಲ ಮತ್ತು ಅವನ ಮೂವರು ಮಿತ್ರರೇ ಬೇರೆಲ್ಲಾ ಹುಡುಗರಿಗಿಂತ ಹೆಚ್ಚು ಆರೋಗ್ಯವಂತರಾಗಿ ಕಾಣುತ್ತಾರೆ. ಆದುದರಿಂದ ಅರಸನು ತಿಳಿಸಿದ ಆಹಾರಕ್ಕೆ ಬದಲಾಗಿ ಅವರು ಕಾಯಿಪಲ್ಯವನ್ನೇ ತಿನ್ನುವಂತೆ ಆ ಪಾಲಕನು ಅನುಮತಿ ನೀಡುತ್ತಾನೆ.

ಮೂರು ವರ್ಷಗಳ ಕೊನೆಯಲ್ಲಿ ಯುವಕರೆಲ್ಲರನ್ನು ನೆಬೂಕದ್ನೆಚ್ಚರನ ಬಳಿಗೆ ಕರೆದೊಯ್ಯಲಾಗುತ್ತದೆ. ಅವನು ಅವರೆಲ್ಲರನ್ನು ಮಾತಾಡಿಸಿ ನೋಡುತ್ತಾನೆ. ಕೊನೆಗೆ ದಾನಿಯೇಲನು ಮತ್ತು ಅವನ ಮೂವರು ಮಿತ್ರರು ಬೇರೆ ಎಲ್ಲರಿಗಿಂತಲೂ ಹೆಚ್ಚು ಬುದ್ಧಿವಂತರಾಗಿರುವುದನ್ನು ಅರಸನು ಕಂಡುಕೊಳ್ಳುತ್ತಾನೆ. ಆದುದರಿಂದ ಅರಮನೆಯಲ್ಲಿ ತನ್ನ ಸೇವೆ ಮಾಡುವಂತೆ ಅವರನ್ನು ನೇಮಿಸುತ್ತಾನೆ. ಅರಸನು ದಾನಿಯೇಲ, ಶದ್ರಕ್‌, ಮೇಶಕ್‌, ಅಬೇದ್‌ನೆಗೋ ಇವರಿಗೆ ಯಾವುದೇ ಪ್ರಶ್ನೆ ಕೇಳಲಿ ಇಲ್ಲವೆ ಕಷ್ಟದ ಸಮಸ್ಯೆಗಳನ್ನು ತಿಳಿಸಲಿ, ಅವರು ಬೇರೆ ಎಲ್ಲ ಜೋಯಿಸರಿಗಿಂತಲೂ ಎಲ್ಲಾ ವಿದ್ವಾಂಸರಿಗಿಂತಲೂ 10 ಪಟ್ಟು ಹೆಚ್ಚು ತಿಳಿದವರಾಗಿರುತ್ತಾರೆ.