ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 77

ಅವರು ಅಡ್ಡಬೀಳುವುದಿಲ್ಲ

ಅವರು ಅಡ್ಡಬೀಳುವುದಿಲ್ಲ

ಈ ಮೂವರು ಯುವಕರ ಕುರಿತು ಕೇಳಿರುವ ನೆನಪು ನಿಮಗಿದೆಯೇ? ಹೌದು, ತಾವು ತಿನ್ನಬಾರದಾಗಿದ್ದ ಆಹಾರವನ್ನು ತಿನ್ನಲು ನಿರಾಕರಿಸಿದ ದಾನಿಯೇಲನ ಮಿತ್ರರೇ ಅವರು. ಬಾಬೆಲಿನವರು ಅವರನ್ನು ಶದ್ರಕ್‌, ಮೇಶಕ್‌ ಮತ್ತು ಅಬೇದ್‌ನೆಗೋ ಎಂದು ಕರೆದರು. ಆದರೆ ಈಗ ಅವರನ್ನು ನೋಡಿರಿ. ಈ ದೊಡ್ಡ ಪ್ರತಿಮೆಗೆ ಬೇರೆಲ್ಲರಂತೆ ಅವರೇಕೆ ಅಡ್ಡಬೀಳುತ್ತಿಲ್ಲ? ನಾವು ತಿಳಿಯೋಣ.

ಯೆಹೋವನು ತಾನೇ ಬರೆದುಕೊಟ್ಟ ದಶಾಜ್ಞೆಗಳೆಂಬ ನಿಯಮಗಳ ಕುರಿತು ನಿಮಗೆ ನೆನಪಿದೆಯೇ? ಅವುಗಳಲ್ಲಿ ಮೊದಲನೆಯದು ಹೀಗಿದೆ: ‘ನನ್ನ ಹೊರತು ನೀವು ಬೇರೆ ಯಾವ ದೇವರನ್ನೂ ಆರಾಧಿಸಬಾರದು.’ ಇಲ್ಲಿ ಈ ಯುವಕರು ಆ ಆಜ್ಞೆಗೆ ವಿಧೇಯರಾಗುತ್ತಿದ್ದಾರೆ. ಅವರಿಗದು ಅಷ್ಟೇನು ಸುಲಭವಲ್ಲದಿದ್ದರೂ ಹಾಗೇ ಮಾಡುತ್ತಿದ್ದಾರೆ.

ಬಾಬೆಲಿನ ಅರಸ ನೆಬೂಕದ್ನೆಚ್ಚರನು ತಾನು ನಿಲ್ಲಿಸಿದ ಈ ಪ್ರತಿಮೆಯನ್ನು ಆರಾಧಿಸುವುದಕ್ಕಾಗಿ ಅನೇಕ ಪ್ರಧಾನ ಪುರುಷರನ್ನು ಕರೆದಿದ್ದಾನೆ. ಅವನು ಈಗಷ್ಟೇ ಎಲ್ಲಾ ಜನರಿಗೆ ಆಜ್ಞೆಯಿತ್ತದ್ದೇನೆಂದರೆ: ‘ಕೊಳಲು, ಕಿನ್ನರಿ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೆ ನೀವು ಈ ಬಂಗಾರದ ಪ್ರತಿಮೆಗೆ ಅಡ್ಡಬಿದ್ದು ಪೂಜಿಸಬೇಕು. ಯಾವನು ಅಡ್ಡಬಿದ್ದು ಪೂಜಿಸುವುದಿಲ್ಲವೋ ಅವನನ್ನು ತಕ್ಷಣವೇ ಧಗಧಗನೆ ಉರಿಯುವ ಬೆಂಕಿಯಲ್ಲಿ ಹಾಕಲಾಗುವುದು.’

ಆದರೆ ಶದ್ರಕ್‌, ಮೇಶಕ್‌ ಮತ್ತು ಅಬೇದ್‌ನೆಗೋ ಆ ಪ್ರತಿಮಗೆ ಅಡ್ಡಬೀಳಲಿಲ್ಲವೆಂಬ ಸುದ್ದಿಯನ್ನು ಕೇಳುವಾಗ ನೆಬೂಕದ್ನೆಚ್ಚರನಿಗೆ ತುಂಬಾ ಸಿಟ್ಟುಬರುತ್ತದೆ. ಅವರನ್ನು ಹಿಡ್ಕೊಂಡು ಬನ್ನಿ ಎನ್ನುತ್ತಾನೆ ಅವನು. ಅಡ್ಡಬೀಳಲು ಅವರಿಗೆ ಇನ್ನೊಂದು ಅವಕಾಶವನ್ನು ಕೊಡುತ್ತಾನೆ. ಆದರೆ ಆ ಯುವಕರಿಗೆ ಯೆಹೋವನಲ್ಲಿ ಅಚಲ ಭರವಸೆ. ‘ನಾವು ಸೇವಿಸುವ ನಮ್ಮ ದೇವರು ನಮ್ಮನ್ನು ರಕ್ಷಿಸಶಕ್ತನು. ಒಂದುವೇಳೆ ಆತನು ನಮ್ಮನ್ನು ರಕ್ಷಿಸದಿದ್ದರೂ ಸರಿ ನಿನ್ನ ಬಂಗಾರದ ಪ್ರತಿಮೆಗೆ ನಾವು ಅಡ್ಡಬೀಳುವುದಿಲ್ಲ’ ಎಂದು ಅವರು ನೆಬೂಕದ್ನೆಚ್ಚರನಿಗೆ ಹೇಳುತ್ತಾರೆ.

ಇದನ್ನು ಕೇಳಿದಾಗ ನೆಬೂಕದ್ನೆಚ್ಚರನಿಗೆ ಇನ್ನೂ ಹೆಚ್ಚು ಕೋಪಬರುತ್ತದೆ. ಒಂದು ಆವಿಗೆಯು ಹತ್ತಿರದಲ್ಲೇ ಇರುತ್ತದೆ. ‘ಆವಿಗೆಯನ್ನು ಈಗಿರುವುದಕ್ಕಿಂತ ಏಳರಷ್ಟು ಹೆಚ್ಚಾಗಿ ಉರಿಸಿರಿ!’ ಎಂದು ಅವನು ತನ್ನ ಸೇವಕರಿಗೆ ಆಜ್ಞಾಪಿಸುತ್ತಾನೆ. ಇದಲ್ಲದೆ ತನ್ನ ಸೈನ್ಯದ ಅತಿ ಬಲಿಷ್ಠ ಪುರುಷರಿಗೆ ಶದ್ರಕ್‌, ಮೇಶಕ್‌ ಮತ್ತು ಅಬೇದ್‌ನೆಗೋರನ್ನು ಕಟ್ಟಿ ಆವಿಗೆಯೊಳಗೆ ಎಸೆಯಿರಿ ಎಂದು ಅಪ್ಪಣೆಕೊಡುತ್ತಾನೆ. ಆವಿಗೆಯೆಷ್ಟು ಬಿಸಿಯಾಗಿದೆಯೆಂದರೆ ಆ ಬಲಿಷ್ಠ ಪುರುಷರೇ ಅದರ ಜ್ವಾಲೆಗಳಿಂದ ಕೊಲ್ಲಲ್ಪಡುತ್ತಾರೆ. ಆದರೆ ಅವರು ಒಳಗೆಸೆದ ಮೂವರು ಯೌವನಸ್ಥರ ಕುರಿತೇನು?

ಅರಸನು ಆವಿಗೆಯೊಳಗೆ ನೋಡಿ ತುಂಬಾ ಭಯಭೀತನಾಗುತ್ತಾನೆ. ‘ನಾವು ಮೂವರನ್ನು ಕಟ್ಟಿ ಧಗಧಗನೆ ಉರಿಯುವ ಬೆಂಕಿಯ ಈ ಆವಿಗೆಯೊಳಗೆ ಎಸೆಯಲಿಲ್ಲವೋ?’ ಎಂದು ಸೇವಕರನ್ನು ಕೇಳುತ್ತಾನೆ.

‘ಹೌದು, ಅರಸನೇ’ ಎಂದು ಸೇವಕರು ಉತ್ತರಿಸುತ್ತಾರೆ.

‘ಆದರೆ ಬೆಂಕಿಯಲ್ಲಿ ನಾಲ್ವರು ತಿರುಗಾಡುತ್ತಿರುವುದನ್ನು ನಾನು ನೋಡುತ್ತೇನೆ. ಅವರು ಕಟ್ಟಲ್ಪಟ್ಟಿಲ್ಲ, ಬೆಂಕಿಯಿಂದ ಅವರಿಗೆ ಯಾವ ಹಾನಿಯೂ ಆಗಿಲ್ಲ. ನಾಲ್ಕನೆಯವನ ರೂಪವು ದೇವದೂತನ ರೂಪದಂತೆ ಇದೆ’ ಎಂದು ಅರಸನು ಹೇಳುತ್ತಾನೆ. ಅವನು ಆವಿಗೆಯ ಬಾಗಿಲ ಹತ್ತಿರ ಹೋಗಿ, ‘ಮಹೋನ್ನತ ದೇವರ ಸೇವಕರಾದ ಶದ್ರಕ್‌! ಮೇಶಕ್‌! ಅಬೇದ್‌ನೆಗೋ! ಹೊರಗೆ ಬನ್ನಿರಿ!’ ಎಂದು ಕೂಗುತ್ತಾನೆ.

ಅವರು ಹೊರಗೆ ಬಂದಾಗ, ಅವರಿಗೆ ಒಂದಿಷ್ಟೂ ಹಾನಿಯಾಗದಿರುವುದನ್ನು ಎಲ್ಲರೂ ನೋಡುತ್ತಾರೆ. ಆಗ ಅರಸನು ಹೇಳುವುದು: ‘ಶದ್ರಕ್‌, ಮೇಶಕ್‌ ಮತ್ತು ಅಬೇದ್‌ನೆಗೋ ಎಂಬವರ ದೇವರಿಗೆ ಸ್ತೋತ್ರವಾಗಲಿ! ಅವರು ತಮ್ಮ ದೇವರನ್ನು ಬಿಟ್ಟು ಬೇರೆ ಯಾವ ದೇವರಿಗೂ ಅಡ್ಡಬಿದ್ದು ಪೂಜಿಸದೆ ಇದ್ದ ಕಾರಣ ಆತನು ತನ್ನ ದೂತನನ್ನು ಕಳುಹಿಸಿ ಅವರನ್ನು ರಕ್ಷಿಸಿದ್ದಾನೆ.’

ಯೆಹೋವನಿಗೆ ನಂಬಿಗಸ್ತರಾಗಿ ಉಳಿಯುವ ವಿಷಯದಲ್ಲಿ ನಾವು ಅನುಸರಿಸಬೇಕಾದ ಉತ್ತಮ ಮಾದರಿ ಇದಾಗಿದೆಯಲ್ಲವೋ?