ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 83

ಯೆರೂಸಲೇಮಿನ ಗೋಡೆಗಳು

ಯೆರೂಸಲೇಮಿನ ಗೋಡೆಗಳು

ಇಲ್ಲಿ ನಡೆಯುತ್ತಿರುವ ಕೆಲಸವನ್ನು ನೋಡಿರಿ. ಇಸ್ರಾಯೇಲ್ಯರು ಯೆರೂಸಲೇಮಿನ ಗೋಡೆಗಳನ್ನು ಕಟ್ಟುವುದರಲ್ಲಿ ಕಾರ್ಯಮಗ್ನರಾಗಿದ್ದಾರೆ. ರಾಜ ನೆಬೂಕದ್ನೆಚ್ಚರನು 152 ವರ್ಷಗಳ ಮುಂಚೆ ಯೆರೂಸಲೇಮನ್ನು ನಾಶಮಾಡಿದಾಗ ಅವನು ಗೋಡೆಗಳನ್ನು ಕೆಡವಿ ಪಟ್ಟಣದ ದ್ವಾರಗಳನ್ನು ಸುಟ್ಟುಹಾಕಿದ್ದನು. ಇಸ್ರಾಯೇಲ್ಯರು ಬಾಬೆಲಿನಿಂದ ಬಿಡುಗಡೆಹೊಂದಿ ಮೊದಲ ಸಲ ಸ್ವದೇಶಕ್ಕೆ ಹಿಂದಿರುಗಿದಾಗ ಗೋಡೆಗಳನ್ನು ಪುನಃ ಕಟ್ಟಿರಲಿಲ್ಲ.

ಇಷ್ಟು ವರ್ಷ ತಮ್ಮ ಪಟ್ಟಣದ ಸುತ್ತ ಗೋಡೆಯಿಲ್ಲದೆ ಜನರು ವಾಸಿಸಿದಾಗ ಅವರಿಗೆ ಹೇಗನಿಸಿರಬೇಕೆಂದು ನೀವೆಣಿಸುತ್ತೀರಿ? ಅವರಿಗೆ ತುಂಬಾ ಭಯವಾಗುತ್ತಿತ್ತು. ಅವರ ಶತ್ರುಗಳು ಸುಲಭವಾಗಿ ಒಳನುಗ್ಗಿ ಅವರನ್ನು ಆಕ್ರಮಿಸಬಹುದಿತ್ತು. ಆದರೆ ಈಗ ನೆಹೆಮೀಯನೆಂಬ ಈ ಮನುಷ್ಯನು ಗೋಡೆಗಳನ್ನು ಪುನಃ ಕಟ್ಟಲು ಅವರಿಗೆ ಸಹಾಯಮಾಡುತ್ತಿದ್ದಾನೆ. ನೆಹೆಮೀಯನು ಯಾರೆಂದು ನಿಮಗೆ ಗೊತ್ತೋ?

ಮೊರ್ದೆಕೈ ಮತ್ತು ಎಸ್ತೇರಳು ಜೀವಿಸುತ್ತಿರುವ ಆ ಶೂಷನ್‌ ಪಟ್ಟಣದಲ್ಲಿದ್ದ ಒಬ್ಬ ಇಸ್ರಾಯೇಲ್ಯನೇ ನೆಹೆಮೀಯನು. ನೆಹೆಮೀಯನು ಅರಸನ ಅರಮನೆಯಲ್ಲಿ ಕೆಲಸಮಾಡುತ್ತಿದ್ದನು. ಆದುದರಿಂದ ಅವನು ಮೊರ್ದೆಕೈ ಮತ್ತು ರಾಣಿ ಎಸ್ತೇರಳ ಒಬ್ಬ ಒಳ್ಳೇ ಸ್ನೇಹಿತನಾಗಿದ್ದಿರಬಹುದು. ಆದರೆ ನೆಹೆಮೀಯನು ಎಸ್ತೇರಳ ಗಂಡನಾದ ಅರಸ ಅಹೆಷ್ವೇರೋಷನ ಸೇವೆಮಾಡುತ್ತಿದ್ದನೆಂದು ಬೈಬಲ್‌ ಹೇಳುವುದಿಲ್ಲ. ಅವನು ನಂತರ ಬಂದ ಅರಸನಾದ ರಾಜ ಅರ್ತಷಸ್ತನ ಸೇವಕನಾಗಿದ್ದನು.

ಈ ಅರ್ತಷಸ್ತನು ಯಾರೆಂದು ನೆನಪಿದೆಯೋ? ಎಜ್ರನಿಗೆ ಯೆಹೋವನ ಆಲಯದ ದುರುಸ್ತಿಗಾಗಿ ಯೆರೂಸಲೇಮಿಗೆ ಕೊಂಡೊಯ್ಯಲು ಆ ಎಲ್ಲ ಹಣವನ್ನು ಕೊಟ್ಟ ಒಳ್ಳೆಯ ಅರಸನೇ ಅರ್ತಷಸ್ತನು. ಆದರೆ ಎಜ್ರನು ಪಟ್ಟಣದ ಹಾಳುಬಿದ್ದ ಗೋಡೆಗಳನ್ನು ಕಟ್ಟಲಿಲ್ಲ. ನೆಹೆಮೀಯನು ಈ ಕೆಲಸವನ್ನು ಮಾಡುತ್ತಾನೆ. ಹೇಗೆಂದು ನಾವು ನೋಡೋಣ.

ಆಲಯವನ್ನು ದುರುಸ್ತುಮಾಡಲು ಅರ್ತಷಸ್ತನು ಎಜ್ರನಿಗೆ ಹಣಕೊಟ್ಟು ಈಗ 13 ವರ್ಷಗಳಾಗಿವೆ. ನೆಹೆಮೀಯನು ಈಗ ಅರ್ತಷಸ್ತನ ಮುಖ್ಯ ಪಾನದಾಯಕನಾಗಿದ್ದಾನೆ. ಅಂದರೆ ಅವನು ಅರಸನಿಗೆ ಕುಡಿಯಲು ದ್ರಾಕ್ಷಾಮದ್ಯವನ್ನು ಕೊಡುವ ಕೆಲಸ ಮಾಡುತ್ತಿದ್ದಾನೆ. ಅರಸನಿಗೆ ಯಾರೂ ವಿಷಹಾಕಿ ಕೊಡದಂತೆ ಎಚ್ಚರಿಕೆಯಿಂದ ನೋಡಿಕೊಳ್ಳುವುದೇ ಅವನ ಕೆಲಸ. ಅದೊಂದು ಅತಿ ಪ್ರಾಮುಖ್ಯವಾದ ಕೆಲಸವಾಗಿದೆ.

ಒಂದು ದಿನ ನೆಹೆಮೀಯನ ಸಹೋದರ ಹನಾನಿ ಮತ್ತು ಇಸ್ರಾಯೇಲ್‌ ದೇಶದ ಬೇರೆ ಕೆಲವರು ನೆಹೆಮೀಯನನ್ನು ನೋಡಲು ಬರುತ್ತಾರೆ. ಇಸ್ರಾಯೇಲ್ಯರು ಪಡುತ್ತಿರುವ ತೊಂದರೆಗಳ ಕುರಿತು ಮತ್ತು ಯೆರೂಸಲೇಮಿನ ಗೋಡೆಗಳಿನ್ನೂ ಹಾಳುಬಿದ್ದಿರುವ ಕುರಿತು ಅವರು ತಿಳಿಸುತ್ತಾರೆ. ಇದರಿಂದ ನೆಹೆಮೀಯನು ಬಹಳ ಬೇಸರಗೊಳ್ಳುತ್ತಾನೆ. ಅಲ್ಲದೆ, ಅದರ ಕುರಿತು ಯೆಹೋವನಿಗೆ ಪ್ರಾರ್ಥಿಸುತ್ತಾನೆ.

ಒಂದು ದಿನ ನೆಹೆಮೀಯನ ಮುಖ ಬಾಡಿರುವುದನ್ನು ಅರಸನು ಕಂಡು, ‘ನೀನೇಕೆ ಬೇಸರಿದಿಂದ ಇದ್ದೀಯಾ?’ ಎಂದು ಕೇಳುತ್ತಾನೆ. ಯೆರೂಸಲೇಮ್‌ ಬಹು ದುರವಸ್ಥೆಗೆ ಒಳಗಾಗಿರುವುದರಿಂದ ಮತ್ತು ಗೋಡೆಗಳು ಇನ್ನೂ ಹಾಳುಬಿದ್ದಿರುವ ಕಾರಣದಿಂದಲೇ ಎಂದು ನೆಹೆಮೀಯನು ಹೇಳುತ್ತಾನೆ. ಅದಕ್ಕೆ ಅರಸನು ‘ನಿನ್ನ ಅಪೇಕ್ಷೆಯೇನು?’ ಎಂದು ಕೇಳುತ್ತಾನೆ.

‘ಗೋಡೆಗಳನ್ನು ತಿರುಗಿ ಕಟ್ಟುವುದಕ್ಕೋಸ್ಕರ ಯೆರೂಸಲೇಮಿಗೆ ಹೋಗಲು ನನಗೆ ಅಪ್ಪಣೆಯಾಗಬೇಕು’ ಅನ್ನುತ್ತಾನೆ ನೆಹೆಮೀಯನು. ಅರಸ ಅರ್ತಷಸ್ತನು ಬಹು ದಯಾಪರನು. ನೆಹೆಮೀಯನಿಗೆ ಹೋಗಲು ಅಪ್ಪಣೆಕೊಡುತ್ತಾನೆ. ಮಾತ್ರವಲ್ಲ ಕಟ್ಟುವ ಕೆಲಸಕ್ಕಾಗಿ ಮರಗಳನ್ನು ಪಡೆಯಲು ಅವನಿಗೆ ಸಹಾಯಮಾಡುತ್ತಾನೆ. ನೆಹೆಮೀಯನು ಬೇಗನೆ ಯೆರೂಸಲೇಮಿಗೆ ಬರುತ್ತಾನೆ. ತನ್ನ ಯೋಜನೆಗಳ ಕುರಿತು ಜನರಿಗೆ ತಿಳಿಸುತ್ತಾನೆ. ಅದನ್ನು ಕೇಳಿ ಅವರಿಗೆ ತುಂಬಾ ಇಷ್ಟವಾಗುತ್ತದೆ. ‘ಬನ್ನಿ, ನಾವು ಕಟ್ಟಲು ಪ್ರಾರಂಭಿಸೋಣ’ ಅನ್ನುತ್ತಾರೆ ಅವರು.

ಗೋಡೆಯು ಕಟ್ಟಲ್ಪಟ್ಟು ಮೇಲಕ್ಕೆ ಏರುತ್ತಿರುವುದನ್ನು ನೋಡಿ ಇಸ್ರಾಯೇಲ್ಯರ ಶತ್ರುಗಳು ಸಹಿಸುವುದಿಲ್ಲ. ‘ನಾವು ಅವರೊಳಗೆ ನುಗ್ಗಿ ಅವರನ್ನು ಕೊಂದುಹಾಕಿ, ಕಟ್ಟುವ ಕೆಲಸವನ್ನು ನಿಲ್ಲಿಸಿಬಿಡೋಣ’ ಎಂದು ಅವರು ಮಾತಾಡಿಕೊಳ್ಳುತ್ತಾರೆ. ನೆಹೆಮೀಯನು ಇದರ ಕುರಿತು ಕೇಳಿದಾಗ ಕೆಲಸಗಾರರಿಗೆ ಕತ್ತಿ ಬರ್ಜಿಗಳನ್ನು ಒದಗಿಸುತ್ತಾನೆ. ಅವರಿಗೆ ಅವನು ಹೇಳುವುದು: ‘ನಮ್ಮ ಶತ್ರುಗಳಿಗೆ ಹೆದರಬೇಡಿರಿ. ನಿಮ್ಮ ಸಹೋದರರಿಗಾಗಿ, ನಿಮ್ಮ ಮಕ್ಕಳಿಗಾಗಿ, ನಿಮ್ಮ ಪತ್ನಿಯರಿಗಾಗಿ ಮತ್ತು ನಿಮ್ಮ ಮನೆಗಳಿಗಾಗಿಯೂ ಕಾದಾಡಿರಿ.’

ಜನರು ಬಹು ಧೈರ್ಯವುಳ್ಳವರಾಗಿದ್ದಾರೆ. ಅವರು ತಮ್ಮ ಆಯುಧಗಳನ್ನು ಹಗಲಿರುಳು ಸಿದ್ಧವಾಗಿಡುತ್ತಾರೆ ಮತ್ತು ಕಟ್ಟುವ ಕೆಲಸವನ್ನು ಮುಂದುವರಿಸುತ್ತಾರೆ. ಆದುದರಿಂದ ಕೇವಲ 52 ದಿನಗಳಲ್ಲಿ ಗೋಡೆಗಳನ್ನು ಕಟ್ಟಿಮುಗಿಸಲಾಗುತ್ತದೆ. ಜನರು ಈಗ ಪಟ್ಟಣದೊಳಗೆ ನಿರ್ಭಯವಾಗಿ ಇರಬಲ್ಲರು. ಜನರಿಗೆ ದೇವರ ನಿಯಮಗಳ ಕುರಿತು ನೆಹೆಮೀಯ ಮತ್ತು ಎಜ್ರ ಕಲಿಸುತ್ತಾರೆ. ಜನರಲ್ಲಿ ಸಂತೋಷ ಚಿಮ್ಮುತ್ತದೆ.

ಹಾಗಿದ್ದರೂ, ಬಾಬೆಲಿಗೆ ಬಂದಿವಾಸಿಗಳಾಗಿ ಒಯ್ಯಲ್ಪಡುವ ಮುಂಚೆ ಇಸ್ರಾಯೇಲ್‌ ಹೇಗಿತ್ತೋ ಹಾಗೆ ಈಗ ಇರುವುದಿಲ್ಲ. ಅವರನ್ನು ಪಾರಸಿಯ ರಾಜ ಆಳುತ್ತಿದ್ದಾನೆ. ಅವರು ಆತನಿಗೆ ಸೇವೆ ಮಾಡಬೇಕಾಗಿದೆ. ಆದರೆ ಒಬ್ಬ ಹೊಸ ಅರಸನನ್ನು ಕಳುಹಿಸುವನೆಂದೂ ಈ ಅರಸನು ಜನರಿಗೆ ಶಾಂತಿಯನ್ನು ತರುವನೆಂದೂ ಯೆಹೋವನು ವಾಗ್ದಾನಿಸಿದ್ದಾನೆ. ಈ ಅರಸನು ಯಾರು? ಅವನು ಈ ಭೂಮಿಗೆ ಹೇಗೆ ಶಾಂತಿಯನ್ನು ತರುವನು? ಇದರ ಕುರಿತು ಹೆಚ್ಚೇನನ್ನಾದರೂ ತಿಳಿಯುವ ಮುಂಚೆ ಸುಮಾರು 450 ವರ್ಷಗಳು ದಾಟುತ್ತವೆ. ಅನಂತರ ಮುಖ್ಯವಾದ ಒಂದು ಕೂಸಿನ ಜನನವಾಗುತ್ತದೆ. ಆದರೆ ಅದು ಇನ್ನೊಂದು ಕಥೆ.

ನೆಹೆಮೀಯ 1 ರಿಂದ 6 ಅಧ್ಯಾಯಗಳು.