ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 92

ಯೇಸು ಸತ್ತವರನ್ನು ಎಬ್ಬಿಸುತ್ತಾನೆ

ಯೇಸು ಸತ್ತವರನ್ನು ಎಬ್ಬಿಸುತ್ತಾನೆ

ನೀವು ಇಲ್ಲಿ ನೋಡುವ ಹುಡುಗಿಗೆ 12 ವಯಸ್ಸು. ಯೇಸು ಅವಳ ಕೈಯನ್ನು ಹಿಡಿದಿದ್ದಾನೆ. ಅವಳ ತಂದೆ ತಾಯಿ ಪಕ್ಕದಲ್ಲಿ ನಿಂತಿದ್ದಾರೆ. ಅವರು ಯಾಕೆ ಅಷ್ಟು ಸಂತೋಷಿತರಾಗಿದ್ದಾರೆಂದು ನಿಮಗೆ ಗೊತ್ತೇ? ನಾವು ನೋಡೋಣ.

ಹುಡುಗಿಯ ತಂದೆಯ ಹೆಸರು ಯಾಯೀರ. ಅವನೊಬ್ಬ ಪ್ರಮುಖ ವ್ಯಕ್ತಿ. ಒಂದು ದಿನ ಅವನ ಮಗಳು ಕಾಯಿಲೆ ಬಿದ್ದು ಹಾಸಿಗೆ ಹಿಡಿಯುತ್ತಾಳೆ. ಅವಳು ಸ್ವಲ್ಪವೂ ಗುಣಹೊಂದುವುದಿಲ್ಲ. ದಿನೇ ದಿನೇ ಅವಳ ಆರೋಗ್ಯ ಕೆಡುತ್ತದೆಯೇ ಹೊರತು ಸ್ವಲ್ಪವೂ ಮೇಲಾಗುವುದಿಲ್ಲ. ತಮ್ಮ ಆ ಪುಟ್ಟ ಮಗಳು ಬದುಕಿ ಉಳಿಯುವುದಿಲ್ಲವೆಂದು ಕಾಣುವುದರಿಂದ ಯಾಯೀರನಿಗೂ ಅವನ ಪತ್ನಿಗೂ ಬಹಳ ಚಿಂತೆಯಾಗುತ್ತದೆ. ಅವಳು ಅವರ ಒಬ್ಬಳೇ ಮಗಳಾಗಿದ್ದಾಳೆ. ಆದುದರಿಂದ ಯಾಯೀರನು ಯೇಸುವನ್ನು ಹುಡುಕಿಕೊಂಡು ಹೋಗುತ್ತಾನೆ. ಯೇಸು ಮಾಡುತ್ತಿರುವ ಅದ್ಭುತಗಳ ಕುರಿತು ಅವನು ಕೇಳಿದ್ದಾನೆ.

ಯಾಯೀರನು ಯೇಸುವನ್ನು ಕಂಡುಹಿಡಿದಾಗ ಅವನ ಸುತ್ತಲೂ ಒಂದು ದೊಡ್ಡ ಗುಂಪು ಕೂಡಿರುತ್ತದೆ. ಆದರೆ ಯಾಯೀರನು ಅಷ್ಟು ದೊಡ್ಡ ಗುಂಪಿನ ನಡುವೆಯಿಂದ ಹೇಗೋ ದಾರಿಮಾಡಿಕೊಂಡು ಹೋಗಿ ಯೇಸುವಿನ ಪಾದಗಳಿಗೆ ಬೀಳುತ್ತಾನೆ. ‘ನನ್ನ ಮಗಳು ತುಂಬ ಕಾಯಿಲೆ ಬಿದ್ದಿದ್ದಾಳೆ, ದಯವಿಟ್ಟು ಬಂದು ಆಕೆಯನ್ನು ವಾಸಿಮಾಡು’ ಎಂದವನು ಬೇಡಿಕೊಳ್ಳುತ್ತಾನೆ. ಬರುವುದಾಗಿ ಯೇಸು ಒಪ್ಪಿಕೊಳ್ಳುತ್ತಾನೆ.

ಅವರು ದಾರಿಯಲ್ಲಿ ನಡಿಯುತ್ತಿರುವಾಗ ಜನರ ಗುಂಪು ನೂಕುನುಗ್ಗುತ್ತಾ ಯೇಸುವಿನ ಹತ್ತಿರ ಬರಲು ಪ್ರಯತ್ನಿಸುತ್ತದೆ. ಆಗ ಯೇಸು ಥಟ್ಟನೆ ನಿಂತು, ‘ನನ್ನನ್ನು ಮುಟ್ಟಿದವರಾರು?’ ಎಂದು ಕೇಳುತ್ತಾನೆ. ತನ್ನಿಂದ ಶಕ್ತಿಯು ಹೊರಟಂತೆ ಅವನಿಗೆ ಅನಿಸುತ್ತದೆ. ಆದುದರಿಂದ ಅವನನ್ನು ಯಾರೋ ಮುಟ್ಟಿದರೆಂದು ಅವನಿಗೆ ಗೊತ್ತಾಗುತ್ತದೆ. ಆದರೆ ಯಾರು? ಹನ್ನೆರಡು ವರ್ಷಗಳಿಂದ ಅತ್ಯಂತ ರೋಗಪೀಡಿತಳಾಗಿದ್ದ ಒಬ್ಬಾಕೆ ಸ್ತ್ರೀಯೇ ಅವನನ್ನು ಮುಟ್ಟಿರುತ್ತಾಳೆ. ಅವಳು ಗುಂಪಿನೊಳಗೆ ನುಗ್ಗಿ ಯೇಸುವಿನ ಉಡುಪನ್ನು ಮುಟ್ಟಿದ ಕೂಡಲೆ ಗುಣಹೊಂದುತ್ತಾಳೆ!

ಇದನ್ನು ನೋಡಿ ಯಾಯೀರನಿಗೆ ನೆಮ್ಮದಿಯಾಗುತ್ತದೆ. ಯಾಕೆಂದರೆ ಯಾರನ್ನಾದರೂ ಗುಣಪಡಿಸುವುದು ಯೇಸುವಿಗೆಷ್ಟು ಸುಲಭವೆಂದು ಅವನೇ ಕಣ್ಣಾರೆ ನೋಡುತ್ತಾನೆ. ಆದರೆ ಆಗ ಒಬ್ಬನು ಬಂದು, ‘ಇನ್ನು ಯೇಸುವಿಗೆ ತೊಂದರೆಕೊಡಬೇಡ, ನಿನ್ನ ಮಗಳು ಸತ್ತುಹೋದಳು’ ಎಂದು ಯಾಯೀರನಿಗೆ ವಿಷಯ ತಿಳಿಸುತ್ತಾನೆ. ಯೇಸು ಇದನ್ನು ಕೇಳಿ, ‘ಚಿಂತಿಸಬೇಡ, ಅವಳು ಬದುಕುವಳು’ ಎಂದು ಯಾಯೀರನಿಗೆ ಹೇಳುತ್ತಾನೆ.

ಅವರು ಯಾಯೀರನ ಮನೆಗೆ ತಲಪಿದಾಗ ಜನರು ಎದೆ ಬಡುಕೊಳ್ಳುತ್ತಾ ಅಳುತ್ತಿದ್ದಾರೆ. ಆದರೆ ಯೇಸು, ‘ಅಳಬೇಡಿರಿ. ಆಕೆ ಸತ್ತಿಲ್ಲ, ನಿದ್ದೆಮಾಡುತ್ತಿದ್ದಾಳೆ ಅಷ್ಟೆ’ ಎಂದನ್ನುತ್ತಾನೆ. ಅದನ್ನು ಕೇಳಿ ಜನರು ನಗಾಡುತ್ತಾ ಯೇಸುವಿಗೆ ಗೇಲಿಮಾಡುತ್ತಾರೆ. ಏಕೆಂದರೆ ಆಕೆ ಸತ್ತುಹೋಗಿದ್ದಾಳೆಂದು ಅವರಿಗೆ ಗೊತ್ತುಂಟು.

ಆಗ ಯೇಸು ಹುಡುಗಿಯ ತಂದೆತಾಯಿಯನ್ನೂ ತನ್ನ ಅಪೊಸ್ತಲರಲ್ಲಿ ಮೂವರನ್ನೂ ಕರೆದುಕೊಂಡು ಆಕೆಯನ್ನು ಮಲಗಿಸಿದ್ದ ಕೋಣೆಯೊಳಗೆ ಹೋಗುತ್ತಾನೆ. ಅವನು ಅವಳ ಕೈಹಿಡಿದು, ‘ಏಳು!’ ಅನ್ನುತ್ತಾನೆ. ಆ ತಕ್ಷಣವೇ ಅವಳು, ಈ ಚಿತ್ರದಲ್ಲಿ ನೀವು ನೋಡುವಂತೆ ಜೀವಿತಳಾಗಿ ಎದ್ದು ನಡೆದಾಡುತ್ತಾಳೆ! ಆದುದರಿಂದಲೇ ಅವಳ ತಂದೆತಾಯಿಯ ಮುಖವು ಸಂತೋಷದಿಂದ ಆ ರೀತಿ ಅರಳಿದೆ.

ಈ ಪುಟ್ಟ ಹುಡುಗಿಯನ್ನಲ್ಲದೆ ಇನ್ನೂ ಕೆಲವರನ್ನು ಯೇಸು ಜೀವ ನೀಡಿ ಎಬ್ಬಿಸಿದ್ದಾನೆ. ಬೈಬಲ್‌ ತಿಳಿಸುವಂತೆ ಅವರಲ್ಲಿ ಮೊದಲನೇ ವ್ಯಕ್ತಿ ನಾಯಿನ್‌ ಊರಿನ ಒಬ್ಬ ವಿಧವೆಯ ಮಗನಾಗಿದ್ದಾನೆ. ತದನಂತರ, ಯೇಸು ಮರಿಯ ಮತ್ತು ಮಾರ್ಥಳ ತಮ್ಮನಾದ ಲಾಜರನನ್ನೂ ಸತ್ತವರೊಳಗಿಂದ ಎಬ್ಬಿಸುತ್ತಾನೆ. ಯೇಸು ದೇವರ ರಾಜ್ಯದಲ್ಲಿ ಅರಸನಾಗಿ ಆಳುವಾಗ, ಸತ್ತುಹೋಗಿರುವ ಇನ್ನೂ ಅನೇಕಾನೇಕ ಜನರನ್ನು ಬದುಕಿಸುವನು. ಅದಕ್ಕಾಗಿ ನಾವೆಷ್ಟು ಹರ್ಷಿಸಬೇಕಲ್ಲವೇ?