ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 95

ಯೇಸು ಕಲಿಸುವ ವಿಧ

ಯೇಸು ಕಲಿಸುವ ವಿಧ

ಒಂದು ದಿನ ಯೇಸು ಒಬ್ಬ ಮನುಷ್ಯನಿಗೆ ಅವನು ತನ್ನ ನೆರೆಯವರನ್ನು ಪ್ರೀತಿಸಬೇಕೆಂದು ಹೇಳುತ್ತಾನೆ. ಅದಕ್ಕೆ ಆ ಮನುಷ್ಯನು, ‘ನನ್ನ ನೆರೆಯವರು ಯಾರು?’ ಎಂದು ಯೇಸುವನ್ನು ಕೇಳುತ್ತಾನೆ. ತನ್ನ ಸ್ವಂತ ಜಾತಿ, ಧರ್ಮಕ್ಕೆ ಸೇರಿದ ಜನರು ಮಾತ್ರ ತನ್ನ ನೆರೆಯವರೆಂದು ಆ ಮನುಷ್ಯನು ನೆನಸುತ್ತಾನೆ. ಆದರೆ ಯೇಸು ಅವನಿಗೆ ಏನು ಹೇಳುತ್ತಾನೆಂದು ನೋಡೋಣ.

ಕೆಲವು ಸಲ ಯೇಸು ಒಂದು ಕಥೆಯನ್ನು ಹೇಳುವ ಮೂಲಕ ಜನರಿಗೆ ಕಲಿಸುತ್ತಾನೆ. ಈಗಲೂ ಹಾಗೆಯೇ ಮಾಡುತ್ತಾನೆ. ಒಬ್ಬ ಯೆಹೂದ್ಯನ ಮತ್ತು ಒಬ್ಬ ಸಮಾರ್ಯದವನ ಕುರಿತು ಅವನು ಒಂದು ಕಥೆಯನ್ನು ಹೇಳುತ್ತಾನೆ. ಹೆಚ್ಚಿನ ಯೆಹೂದ್ಯರಿಗೆ ಸಮಾರ್ಯದವರನ್ನು ಕಂಡರೆ ಆಗುವುದಿಲ್ಲ ಎಂದು ನಾವೀಗಾಗಲೇ ಕಲಿತಿದ್ದೇವೆ. ಈಗ ಯೇಸು ಹೇಳುವ ಕಥೆ ಕೇಳಿ:

ಒಂದು ದಿನ ಒಬ್ಬ ಯೆಹೂದ್ಯನು ಬೆಟ್ಟದ ಮಾರ್ಗವಾಗಿ ಇಳಿದು ಯೆರಿಕೋವಿಗೆ ಹೋಗುತ್ತಿದ್ದನು. ಆಗ ಕಳ್ಳರು ಅವನ ಮೇಲೆ ಬಿದ್ದು ಅವನ ಹಣವನ್ನೆಲ್ಲಾ ದೋಚಿಕೊಂಡು ಸಾಯುವ ಹಾಗೆ ಹೊಡೆಯುತ್ತಾರೆ.

ಆಗ ಹೇಗೋ ಒಬ್ಬ ಯೆಹೂದ್ಯ ಯಾಜಕನು ಆ ಮಾರ್ಗವಾಗಿ ಬಂದನು. ಪೆಟ್ಟುಬಿದ್ದ ಮನುಷ್ಯನನ್ನು ಅವನು ಕಂಡನು. ಅವನೇನು ಮಾಡಿದನೆಂದು ನೀವೆಣಿಸುತ್ತೀರಿ? ಅವನು ವಾರೆಯಾಗಿ ರಸ್ತೆಯ ಆಚೇ ಪಕ್ಕಕ್ಕೆ ಹೊರಟುಹೋದನು. ಆಮೇಲೆ ದೈವಭಕ್ತನೊಬ್ಬ ಆ ಸ್ಥಳಕ್ಕೆ ಬಂದನು. ಅವನು ಒಬ್ಬ ಲೇವಿಯನಾಗಿದ್ದನು. ಅವನು ನಿಂತು ಗಾಯಗೊಂಡ ಆ ಮನುಷ್ಯನಿಗೆ ಏನಾದರೂ ಸಹಾಯಮಾಡಿದನೋ? ಇಲ್ಲ, ಅವನೂ ನಿಲ್ಲಲಿಲ್ಲ. ಯಾಜಕನು ಮತ್ತು ಲೇವಿಯನು ಈ ಮಾರ್ಗವಾಗಿ ಇಳಿದು ಹೋಗುತ್ತಿರುವುದನ್ನು ಅಗೋ, ನೀವು ದೂರದಲ್ಲಿ ಕಾಣಬಲ್ಲಿರಿ.

ಆದರೆ ಪೆಟ್ಟುಬಿದ್ದ ಮನುಷ್ಯನೊಂದಿಗೆ ಇಲ್ಲಿ ಯಾರಿದ್ದಾನೆಂದು ನೋಡಿರಿ. ಅವನು ಒಬ್ಬ ಸಮಾರ್ಯದವನು. ಅದೂ ಅಲ್ಲದೆ, ಅವನು ಯೆಹೂದ್ಯನಿಗೆ ಸಹಾಯಮಾಡುತ್ತಿದ್ದಾನೆ. ಅವನ ಗಾಯಗಳಿಗೆ ಮದ್ದನ್ನು ಹಚ್ಚುತ್ತಿದ್ದಾನೆ. ಬಳಿಕ, ಆ ಯೆಹೂದ್ಯನನ್ನು ಒಂದು ಸ್ಥಳಕ್ಕೆ ಕರೆದೊಯ್ದು ಅಲ್ಲಿ ವಿಶ್ರಾಂತಿಪಡೆದು ಗುಣಹೊಂದುವಂತೆ ಏರ್ಪಾಡನ್ನು ಸಹ ಮಾಡುತ್ತಾನೆ.

ಯೇಸು ಈ ಕಥೆಯನ್ನು ಹೇಳಿಮುಗಿಸಿ ತನಗೆ ಪ್ರಶ್ನೆ ಕೇಳಿದವನಿಗೆ ಹೀಗೆ ಹೇಳುತ್ತಾನೆ: ‘ಈ ಮೂವರಲ್ಲಿ ಯಾವನು ಗಾಯವಾದವನಿಗೆ ನೆರೆಯವನಾದನೆಂದು ನಿನಗೆ ತೋರುತ್ತದೆ ಹೇಳು? ಆ ಯಾಜಕನೋ ಲೇವಿಯನೋ ಅಥವಾ ಸಮಾರ್ಯದವನೋ?’

ಅದಕ್ಕೆ ಆ ಮನುಷ್ಯನು, ‘ಗಾಯಗೊಂಡಿರುವ ಆ ವ್ಯಕ್ತಿಗೆ ದಯೆತೋರಿಸಿದ ಆ ಸಮಾರ್ಯದವನೇ’ ಎಂದುತ್ತರಿಸುತ್ತಾನೆ.

ಯೇಸು ಅನ್ನುವುದು: ‘ಸರಿಯಾಗಿ ಹೇಳಿದಿ. ಹೋಗು ನೀನು ಕೂಡ ಅವನಂತೆಯೇ ಇತರರಿಗೆ ಸಹಾಯಮಾಡು.’

ಯೇಸು ಕಲಿಸುವ ವಿಧ ನಿಮಗೆ ಇಷ್ಟವಾಯಿತು ತಾನೇ? ಯೇಸು ಬೈಬಲ್‌ನಲ್ಲಿ ಏನು ಹೇಳುತ್ತಾನೋ ಅದಕ್ಕೆ ನಾವು ಕಿವಿಗೊಟ್ಟರೆ ಇನ್ನೂ ಅನೇಕ ಪ್ರಾಮುಖ್ಯ ಪಾಠಗಳನ್ನು ಕಲಿಯಬಲ್ಲೆವು, ಅಲ್ಲವೇ?