ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 97

ಯೇಸು ರಾಜನೋಪಾದಿ ಬರುತ್ತಾನೆ

ಯೇಸು ರಾಜನೋಪಾದಿ ಬರುತ್ತಾನೆ

ಕುರುಡರಾದ ಆ ಇಬ್ಬರು ಭಿಕ್ಷುಕರನ್ನು ವಾಸಿಮಾಡಿ ಸ್ವಲ್ಪ ಸಮಯ ಕಳೆದ ಬಳಿಕ ಯೇಸು ಯೆರೂಸಲೇಮಿನ ಸಮೀಪದಲ್ಲಿರುವ ಒಂದು ಚಿಕ್ಕ ಹಳ್ಳಿಗೆ ಬರುತ್ತಾನೆ. ಅವನು ತನ್ನ ಇಬ್ಬರು ಶಿಷ್ಯರನ್ನು ಕರೆದು, ‘ನಿಮ್ಮೆದುರಿಗಿರುವ ಹಳ್ಳಿಗೆ ಹೋಗಿರಿ. ಅಲ್ಲಿ ಒಂದು ಕತ್ತೇಮರಿಯನ್ನು ನೀವು ಕಾಣುವಿರಿ. ಅದನ್ನು ಬಿಚ್ಚಿ ನನ್ನ ಬಳಿಗೆ ತನ್ನಿರಿ’ ಎಂದು ಹೇಳಿ ಕಳುಹಿಸುತ್ತಾನೆ.

ಅದರಂತೆ ಅವರು ಹೋಗಿ ಕತ್ತೇಮರಿಯನ್ನು ತಂದಾಗ, ಯೇಸು ಅದರ ಮೇಲೆ ಕೂತುಕೊಳ್ಳುತ್ತಾನೆ. ಆಮೇಲೆ ಅವನು ಸ್ವಲ್ಪ ದೂರದಲ್ಲಿರುವ ಯೆರೂಸಲೇಮಿಗೆ ಆ ಕತ್ತೇಮರಿಯ ಮೇಲೆ ಸವಾರಿಮಾಡುತ್ತಾನೆ. ಅವನು ಪಟ್ಟಣದ ಸಮೀಪಕ್ಕೆ ಬರುವಾಗ ಜನರ ದೊಡ್ಡ ಗುಂಪು ಅವನನ್ನು ನೋಡಲು ಹೊರಗೆ ಬರುತ್ತದೆ. ಅವರಲ್ಲಿ ಹೆಚ್ಚಿನವರು ತಾವು ಹಾಕಿಕೊಂಡಿದ್ದ ಮೇಲಂಗಿಗಳನ್ನು ತೆಗೆದು ದಾರಿಯಲ್ಲಿ ಹಾಸುತ್ತಾರೆ. ಇತರರು ಖರ್ಜೂರ ಮರಗಳಿಂದ ಕೊಂಬೆಗಳನ್ನು ಕಡಿದು ಅವನ್ನು ಸಹ ದಾರಿಯಲ್ಲಿ ಹಾಸುತ್ತಾರೆ. ‘ಯೆಹೋವನ ಹೆಸರಿನಲ್ಲಿ ಬರುವ ರಾಜನಿಗೆ ಆಶೀರ್ವಾದ!’ ಎಂದು ಅವರೆಲ್ಲಾ ಆರ್ಭಟಿಸುತ್ತಾರೆ.

ಬಹಳ ಸಮಯದ ಹಿಂದೆ ಇಸ್ರಾಯೇಲಿನ ಹೊಸ ರಾಜರು ತಮ್ಮನ್ನು ಜನರಿಗೆ ತೋರಿಸಿಕೊಳ್ಳಲು ಕತ್ತೇಮರಿಯ ಮೇಲೆ ಕೂತು ಯೆರೂಸಲೇಮಿನೊಳಗೆ ಸವಾರಿಮಾಡುತ್ತಿದ್ದರು. ಈಗ ಯೇಸು ಸಹ ಹಾಗೆಯೇ ಮಾಡುತ್ತಿದ್ದಾನೆ. ಯೇಸು ತಮ್ಮ ರಾಜನಾಗುವುದು ತಮಗೆ ಇಷ್ಟವೆಂದು ಈ ಜನರು ತೋರಿಸಿಕೊಡುತ್ತಿದ್ದಾರೆ. ಆದರೆ ಇದು ಎಲ್ಲರಿಗೂ ಇಷ್ಟವಿಲ್ಲ. ಹೇಗೆ ಗೊತ್ತು? ಯೇಸು ದೇವಾಲಯಕ್ಕೆ ಹೋದಾಗ ಏನು ಸಂಭವಿಸುತ್ತದೋ ಅದರಿಂದ ನಾವಿದನ್ನು ತಿಳಿದುಕೊಳ್ಳಬಹುದು.

ದೇವಾಲಯದಲ್ಲಿ ಯೇಸು ಕುರುಡರನ್ನೂ ಕುಂಟರನ್ನೂ ವಾಸಿಮಾಡುತ್ತಾನೆ. ಎಳೆಯ ಮಕ್ಕಳು ಇದನ್ನು ಕಂಡು ಯೇಸುವಿಗೆ ಜಯಕಾರ ಕೂಗುತ್ತಾರೆ. ಇದನ್ನು ನೋಡಿ ಯಾಜಕರು ಸಿಟ್ಟುಗೊಂಡು, ‘ಮಕ್ಕಳು ಹೇಳುತ್ತಿರುವುದು ನಿನಗೆ ಕೇಳಿಸುತ್ತದೋ?’ ಎಂದು ಯೇಸುವನ್ನು ಪ್ರಶ್ನಿಸುತ್ತಾರೆ.

‘ಹೌದು, ಕೇಳಿಸುತ್ತದೆ’ ಎಂದು ಉತ್ತರಿಸುತ್ತಾನೆ ಯೇಸು. ಅವನು ಮತ್ತೂ ಹೇಳುವುದು: ‘ಸಣ್ಣ ಮಕ್ಕಳ ಬಾಯಿಂದಲೂ ದೇವರು ಸ್ತುತಿಯನ್ನು ಸಿದ್ಧಿಗೆ ತರುವನೆಂದು ಬೈಬಲ್‌ನಲ್ಲಿ ಬರೆದಿರುವುದನ್ನು ನೀವು ಓದಲಿಲ್ಲವೇ?’ ಹೀಗೆ ದೇವರು ನೇಮಿಸಿದ ರಾಜನನ್ನು ಸ್ತುತಿಸುವುದನ್ನು ಮಕ್ಕಳು ಮುಂದುವರಿಸುತ್ತಾರೆ.

ನಾವು ಸಹ ಆ ಮಕ್ಕಳಂತಿರಲು ಬಯಸುತ್ತೇವೆ ಅಲ್ಲವೇ? ನಾವು ದೇವರ ರಾಜ್ಯದ ಕುರಿತು ಮಾತಾಡುವಾಗ ಕೆಲವರು ಅದನ್ನು ನಿಲ್ಲಿಸಲು ಪ್ರಯತ್ನಿಸಬಹುದು. ಆದರೆ ಯೇಸು ಜನರಿಗಾಗಿ ಮಾಡಲಿರುವ ಆಶ್ಚರ್ಯಕರವಾದ ವಿಷಯಗಳ ಕುರಿತು ಇತರರಿಗೆ ತಿಳಿಸುವುದನ್ನು ನಾವು ಮುಂದುವರಿಸುತ್ತಾ ಇರುವೆವು.

ಯೇಸು ಭೂಮಿಯಲ್ಲಿದ್ದ ಸಮಯವು ಅವನು ರಾಜನಾಗಿ ಆಳಲಾರಂಭಿಸುವ ಸಮಯವಾಗಿರಲಿಲ್ಲ. ಹಾಗಾದರೆ ಆ ಸಮಯವು ಯಾವಾಗ ಬರುವುದು? ಯೇಸುವಿನ ಶಿಷ್ಯರು ಅದನ್ನು ತಿಳಿಯಲು ಬಯಸುತ್ತಾರೆ. ಇದರ ಕುರಿತು ನಾವು ಮುಂದೆ ಓದುವೆವು.