ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 98

ಆಲಿವ್‌ ಮರಗಳ ಗುಡ್ಡದ ಮೇಲೆ

ಆಲಿವ್‌ ಮರಗಳ ಗುಡ್ಡದ ಮೇಲೆ

ಇಲ್ಲಿ ಆಲಿವ್‌ ಮರಗಳ ಗುಡ್ಡದ ಮೇಲೆ ಕುಳಿತಿರುವವನು ಯೇಸು. ಅವನ ಸಂಗಡ ಕುಳಿತಿರುವ ನಾಲ್ವರು ಪುರುಷರು ಅವನ ಅಪೊಸ್ತಲರು. ಅವರು ಅಣ್ಣತಮ್ಮಂದಿರಾದ ಅಂದ್ರೆಯ ಮತ್ತು ಪೇತ್ರ, ಹಾಗೂ ಯಾಕೋಬ ಮತ್ತು ಯೋಹಾನ. ಅಲ್ಲಿ ದೂರದಲ್ಲಿ ನೀವು ಕಾಣುವಂಥದ್ದು ಯೆರೂಸಲೇಮಿನ ದೇವಾಲಯ.

ಯೇಸು ಕತ್ತೇಮರಿಯ ಮೇಲೆ ಕೂತು ರಾಜನೋಪಾದಿ ಯೆರೂಸಲೇಮನ್ನು ಪ್ರವೇಶಿಸಿ ಈಗ ಎರಡು ದಿನಗಳಾಗಿವೆ. ಇಂದು ಮಂಗಳವಾರ. ಬೆಳಿಗ್ಗೆ ಯೇಸು ದೇವಾಲಯದಲ್ಲಿದ್ದನು. ಅಲ್ಲಿ ಯಾಜಕರು ಯೇಸುವನ್ನು ಹಿಡಿದು ಕೊಲ್ಲಲಿಕ್ಕಾಗಿ ಸಂದರ್ಭ ನೋಡುತ್ತಿದ್ದರು. ಆದರೆ ಜನರು ಯೇಸುವನ್ನು ಇಷ್ಟಪಡುತ್ತಾರಾದ್ದರಿಂದ ಹಾಗೆ ಮಾಡಲು ಹೆದರಿದರು.

ಆ ಧಾರ್ಮಿಕ ಮುಖಂಡರನ್ನು ನೋಡಿ ಯೇಸು, ‘ಹಾವುಗಳೇ, ಸರ್ಪಜಾತಿಯವರೇ!’ ಎಂದು ಕರೆದು, ಅವರು ಮಾಡಿದ ಎಲ್ಲಾ ಕೆಟ್ಟ ಸಂಗತಿಗಳಿಗಾಗಿ ದೇವರು ಅವರನ್ನು ಶಿಕ್ಷಿಸುವನೆಂದು ಹೇಳಿದನು. ಆಮೇಲೆ ಯೇಸು ಆಲಿವ್‌ ಮರಗಳ ಈ ಗುಡ್ಡವನ್ನು ಹತ್ತಿ ಮೇಲೆ ಬಂದನು. ಆಗ ಈ ನಾಲ್ವರು ಅಪೊಸ್ತಲರು ಅವನಿಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ. ಅವರು ಯೇಸುವನ್ನು ಏನು ಕೇಳುತ್ತಿದ್ದಾರೆಂದು ನಿಮಗೆ ಗೊತ್ತೋ?

ಭವಿಷ್ಯತ್ತಿನಲ್ಲಿ ಆಗಲಿಕ್ಕಿರುವ ವಿಷಯಗಳ ಕುರಿತು ಅಪೊಸ್ತಲರು ಕೇಳುತ್ತಿದ್ದಾರೆ. ಭೂಮಿಯಲ್ಲಿರುವ ಎಲ್ಲಾ ಕೆಟ್ಟತನವನ್ನು ಯೇಸು ನಿರ್ಮೂಲ ಮಾಡುವನೆಂದು ಅವರಿಗೆ ತಿಳಿದಿದೆ. ಆದರೆ ಇದು ಯಾವಾಗ ಆಗಲಿದೆ? ರಾಜನಾಗಿ ಆಳುವುದಕ್ಕೆ ಯೇಸು ಪುನಃ ಯಾವಾಗ ಬರುವನು? ಎಂದು ತಿಳಿಯಲು ಅವರು ಇಷ್ಟಪಡುತ್ತಾರೆ.

ತಾನು ಪುನಃ ಬರುವಾಗ ಭೂಮಿಯಲ್ಲಿರುವ ತನ್ನ ಹಿಂಬಾಲಕರಿಗೆ ತನ್ನನ್ನು ನೋಡಲಾಗುವುದಿಲ್ಲವೆಂದು ಯೇಸುವಿಗೆ ಗೊತ್ತು. ಏಕೆಂದರೆ, ಆಗ ಆತನು ಪರಲೋಕದಲ್ಲಿರುತ್ತಾನೆ. ಅವನನ್ನು ಅವರು ನೋಡಸಾಧ್ಯವಿಲ್ಲ. ಆದುದರಿಂದ ತಾನು ಪರಲೋಕದಲ್ಲಿ ರಾಜನಾಗಿ ಆಳುವಾಗ ಭೂಮಿಯಲ್ಲಿ ಸಂಭವಿಸಲಿರುವ ಕೆಲವು ಸಂಗತಿಗಳನ್ನು ಯೇಸು ತನ್ನ ಅಪೊಸ್ತಲರಿಗೆ ತಿಳಿಸುತ್ತಾನೆ. ಈ ಸಂಗತಿಗಳಲ್ಲಿ ಕೆಲವು ಯಾವುವು?

ದೊಡ್ಡ ದೊಡ್ಡ ಯುದ್ಧಗಳಾಗುವುವು, ಅನೇಕ ಜನರು ಕಾಯಿಲೆ ಬೀಳುವರು, ಹಸಿವೆಯಿಂದ ನರಳುವರು, ಪಾತಕವು ಬಹಳ ಹೆಚ್ಚಾಗುವುದು ಮತ್ತು ಅಲ್ಲಲ್ಲಿ ದೊಡ್ಡ ದೊಡ್ಡ ಭೂಕಂಪಗಳಾಗುವುವು ಎಂದು ಯೇಸು ಹೇಳುತ್ತಾನೆ. ದೇವರ ರಾಜ್ಯದ ಸುವಾರ್ತೆಯು ಭೂಮಿಯ ಎಲ್ಲಾ ಕಡೆಗಳಲ್ಲಿ ಸಾರಲಾಗುವುದೆಂದೂ ಯೇಸು ಹೇಳುತ್ತಾನೆ. ಇವೆಲ್ಲಾ ನಮ್ಮ ಕಾಲದಲ್ಲಿ ಸಂಭವಿಸುತ್ತಿರುವುದನ್ನು ನಾವು ನೋಡುತ್ತೇವೋ? ನಿಶ್ಚಯವಾಗಿಯೂ ಹೌದು! ಆದುದರಿಂದ ಯೇಸು ಈಗ ಪರಲೋಕದಲ್ಲಿ ರಾಜನಾಗಿ ಆಳುತ್ತಿದ್ದಾನೆಂದು ನಾವು ಖಂಡಿತವಾಗಿ ಹೇಳಸಾಧ್ಯವಿದೆ. ಅವನು ಭೂಮಿಯ ಮೇಲಿನ ಕೆಟ್ಟತನವನ್ನೆಲ್ಲ ಬಹುಬೇಗನೆ ನಿರ್ಮೂಲಗೊಳಿಸುವನು.