ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 104

ಯೇಸು ಪರಲೋಕಕ್ಕೆ ಹಿಂದಿರುಗುತ್ತಾನೆ

ಯೇಸು ಪರಲೋಕಕ್ಕೆ ಹಿಂದಿರುಗುತ್ತಾನೆ

ದಿನಗಳು ದಾಟಿದಂತೆ ಯೇಸು ತನ್ನ ಹಿಂಬಾಲಕರಿಗೆ ಅನೇಕ ಸಾರಿ ಕಾಣಿಸಿಕೊಳ್ಳುತ್ತಾನೆ. ಒಮ್ಮೆ ಸುಮಾರು 500 ಮಂದಿ ಶಿಷ್ಯರು ಅವನನ್ನು ನೋಡುತ್ತಾರೆ. ಯೇಸು ಅವರಿಗೆ ಕಾಣಿಸಿಕೊಂಡು ಯಾವುದರ ಕುರಿತು ಮಾತಾಡುತ್ತಾನೆಂದು ನಿಮಗೆ ತಿಳಿದಿದೆಯೇ? ದೇವರ ರಾಜ್ಯದ ಕುರಿತು. ಈ ರಾಜ್ಯದ ಕುರಿತು ಕಲಿಸುವುದಕ್ಕಾಗಿ ಯೆಹೋವನು ಯೇಸುವನ್ನು ಭೂಮಿಗೆ ಕಳುಹಿಸಿದನು. ಯೇಸು ಸತ್ತವರೊಳಗಿಂದ ಎದ್ದ ಮೇಲೂ ಈ ಕೆಲಸವನ್ನು ಮಾಡುತ್ತಾ ಇರುತ್ತಾನೆ.

ದೇವರ ರಾಜ್ಯವೆಂದರೆ ಏನೆಂದು ನಿಮಗೆ ನೆನಪಿದೆಯೇ? ಹೌದು, ಆ ರಾಜ್ಯವು ಸ್ವರ್ಗದಲ್ಲಿರುವ ದೇವರ ನಿಜ ಸರಕಾರವಾಗಿದೆ. ಅದರ ಅರಸನಾಗುವಂತೆ ದೇವರು ಆರಿಸಿದಾತನು ಯೇಸುವಾಗಿದ್ದಾನೆ. ನಾವು ಈಗಾಗಲೇ ಕಲಿತ ಪ್ರಕಾರ, ಹಸಿದವರಿಗೆ ಯೇಸು ಆಹಾರ ಒದಗಿಸಿದನು. ರೋಗಿಗಳನ್ನು ವಾಸಿಮಾಡಿದನು. ಅಷ್ಟೇ ಅಲ್ಲ ಸತ್ತವರನ್ನು ಮತ್ತೆ ಬದುಕಿಸಿದನು ಸಹ! ಇವನ್ನೆಲ್ಲಾ ಮಾಡುವ ಮೂಲಕ ತಾನೆಂಥ ಒಳ್ಳೆಯ ಅರಸನಾಗಿ ಇರುವೆನೆಂದು ಯೇಸು ತೋರಿಸಿದನು.

ಹೀಗೆ ಯೇಸು ಅರಸನಾಗಿ ಪರಲೋಕದಿಂದ ಒಂದು ಸಾವಿರ ವರ್ಷ ಆಳುವಾಗ ಈ ಭೂಮಿ ಹೇಗಿರುವುದು? ಹೌದು, ಇಡೀ ಭೂಮಿಯು ಒಂದು ಸುಂದರ ಪರದೈಸಾಗಿ ಮಾಡಲ್ಪಟ್ಟಿರುವುದು. ಯುದ್ಧಗಳಾಗಲಿ, ಅಪರಾಧಗಳಾಗಲಿ, ರೋಗಗಳಾಗಲಿ ಇರುವುದಿಲ್ಲ. ಅಷ್ಟೇಕೆ, ಮರಣ ಸಹ ಇರುವುದಿಲ್ಲ. ಇದು ಸತ್ಯವಾಗಿದೆ. ಯಾಕೆಂದರೆ ಭೂಮಿಯು ಒಂದು ಪರದೈಸವಾಗಿ ಜನರು ಅದರಲ್ಲಿ ಆನಂದದಿಂದ ಜೀವಿಸಬೇಕೆಂಬ ಉದ್ದೇಶದಿಂದಲೇ ದೇವರು ಈ ಭೂಮಿಯನ್ನು ಉಂಟುಮಾಡಿದನು. ಆರಂಭದಲ್ಲಿ ಆತನು ಏದೆನ್‌ ತೋಟವನ್ನು ಮಾಡಿದ್ದೂ ಅದಕ್ಕಾಗಿಯೇ. ದೇವರು ಏನನ್ನು ಮಾಡಬಯಸಿದನೋ ಅದೆಲ್ಲವನ್ನೂ ಕೊನೆಗೆ ಯೇಸು ಮಾಡಿಮುಗಿಸುತ್ತಾನೆ.

ಈಗ ಯೇಸು ಪರಲೋಕಕ್ಕೆ ಹೋಗುವ ಸಮಯವು ಬರುತ್ತದೆ. ನಲ್ವತ್ತು ದಿನಗಳಿಂದ ಯೇಸು ತನ್ನ ಶಿಷ್ಯರಿಗೆ ಕಾಣಿಸಿಕೊಳ್ಳುತ್ತಿದ್ದಾನೆ. ಆದುದರಿಂದ ಅವನು ಪುನಃ ಜೀವಿತನಾಗಿದ್ದಾನೆ ಎಂಬುದರಲ್ಲಿ ಅವರಿಗೆ ಯಾವ ಸಂದೇಹವೂ ಇರುವುದಿಲ್ಲ. ಆದರೆ ಶಿಷ್ಯರನ್ನು ಬಿಟ್ಟುಹೋಗುವ ಮುಂಚೆ ಅವನು ಅವರಿಗನ್ನುವುದು: ‘ಪವಿತ್ರಾತ್ಮವನ್ನು ನೀವು ಹೊಂದುವ ತನಕ ಯೆರೂಸಲೇಮಿನಲ್ಲಿ ಉಳಿಯಿರಿ.’ ಪವಿತ್ರಾತ್ಮವು ದೇವರ ಕಾರ್ಯಕಾರಿ ಶಕ್ತಿಯಾಗಿದೆ. ಅದು ಬೀಸುವ ಗಾಳಿಯಂತೆ ಇದೆ. ಅದು ಯೇಸುವಿನ ಶಿಷ್ಯರಿಗೆ ದೇವರ ಚಿತ್ತವನ್ನು ಮಾಡಲು ಸಹಾಯ ಮಾಡುವುದು. ಕೊನೆಗೆ, ಯೇಸು ಅನ್ನುವುದು: ‘ನೀವು ಭೂಮಿಯ ಅತಿ ದೂರ ದೂರದ ಸ್ಥಳಗಳಲ್ಲೆಲ್ಲಾ ನನ್ನ ಕುರಿತು ಸಾರಬೇಕು.’

ಯೇಸು ಇದನ್ನು ಹೇಳಿದ ಬಳಿಕ ಒಂದು ಅಚ್ಚರಿಯ ಸಂಗತಿಯು ಸಂಭವಿಸುತ್ತದೆ. ನೀವಿಲ್ಲಿ ನೋಡುವಂತೆ, ಅವನು ಪರಲೋಕಕ್ಕೆ ಏರಿಹೋಗಲಾರಂಭಿಸುತ್ತಾನೆ. ಆಗ ಒಂದು ಮೇಘವು ಅವನನ್ನು ಮರೆಮಾಡುತ್ತದೆ. ಆಮೇಲೆ ಶಿಷ್ಯರು ಮತ್ತೆ ಯೇಸುವನ್ನು ಕಾಣುವುದಿಲ್ಲ. ಯೇಸು ಪರಲೋಕಕ್ಕೆ ಹೋಗುತ್ತಾನೆ. ಅಲ್ಲಿಂದ ಭೂಮಿಯ ಮೇಲಿನ ತನ್ನ ಹಿಂಬಾಲಕರನ್ನು ಅವನು ಆಳಲಾರಂಭಿಸುತ್ತಾನೆ.