ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 111

ನಿದ್ದೆಹೋದ ಒಬ್ಬ ಹುಡುಗ

ನಿದ್ದೆಹೋದ ಒಬ್ಬ ಹುಡುಗ

ಓ! ಓ! ಇಲ್ಲೇನು ನಡಿಯುತ್ತಿದೆ? ನೆಲದ ಮೇಲೆ ಬಿದ್ದಿರುವ ಆ ಹುಡುಗನಿಗೆ ತುಂಬಾ ಪೆಟ್ಟಾಗಿದೆಯಾ? ಅಲ್ಲಿ ನೋಡಿರಿ! ಮನೆಯೊಳಗಿಂದ ಜನರು ಹೊರಬರುತ್ತಿದ್ದಾರೆ. ಅವರೊಂದಿಗೆ ಪೌಲನು ಇದ್ದಾನೆ. ತಿಮೊಥೆಯನು ಸಹ ಜೊತೆಗಿರುವುದು ನಿಮಗೆ ಕಾಣಿಸುತ್ತದೋ? ಈ ಹುಡುಗ ಅಗೋ ಮೇಲೆ ಇರುವ ಆ ಕಿಟಿಕಿಯಿಂದ ಬಿದ್ದನೋ?

ಹೌದು, ಆದದ್ದು ಅದೇ. ಇಲ್ಲಿ ತ್ರೋವದಲ್ಲಿ ಪೌಲನು ಶಿಷ್ಯರಿಗೆ ಒಂದು ಪ್ರಸಂಗಕೊಡುತ್ತಿದ್ದನು. ಮಾರಣೆ ದಿನ ಅವರೆಲ್ಲರನ್ನೂ ಬಿಟ್ಟು ಅವನು ಹಡಗು ಹತ್ತಿ ಪ್ರಯಾಣಿಸಬೇಕಿತ್ತು. ಬಹಳ ಸಮಯದ ನಂತರವೇ ಅವರನ್ನು ಮತ್ತೆ ನೋಡಲು ಸಾಧ್ಯವೆಂದು ಪೌಲನಿಗೆ ತಿಳಿದಿತ್ತು. ಆದುದರಿಂದ ಅವನು ನಡು ರಾತ್ರಿಯ ತನಕ ಅವರೊಂದಿಗೆ ಮಾತಾಡುತ್ತಲಿದ್ದನು.

ಯೂತಿಖನೆಂಬ ಈ ಹುಡುಗನು ಕಿಟಿಕಿಯ ಬಳಿ ಕೂತಿದ್ದನು. ಹಾಗೇಯೇ ಅವನಿಗೆ ಜೋರಾಗಿ ನಿದ್ದೆ ಬಂತು. ನಿದ್ದೆ ಮಾಡುತ್ತಾ ಮಾಡುತ್ತಾ ಅವನು ಮೂರನೆಯ ಮಾಳಿಗೆಯ ಕಿಟಿಕಿಯಿಂದ ಕೆಳಗೆ ನೆಲಕ್ಕೆ ಬಿದ್ದುಬಿಟ್ಟನು! ಆದುದರಿಂದಲೇ ಜನರ ಮುಖದಲ್ಲಿ ಅಷು ಕಳವಳ ಕಾಣಿಸುತ್ತಿದೆ. ಜನರು ಹೆದರಿಕೆಯಿಂದಲೇ ಹುಡುಗನನ್ನು ಎತ್ತಿನೋಡುತ್ತಾರೆ. ಅವರು ಅಂದುಕೊಂಡಂತೆಯೇ ಆಗಿದೆ. ಏನೆಂದರೆ ಹುಡುಗ ಸತ್ತಿದ್ದಾನೆ!

ಹುಡುಗ ಸತ್ತಿರುವುದನ್ನು ಪೌಲನು ಕಂಡಾಗ ಅವನ ಮೇಲೆ ಬಿದ್ದು ತಬ್ಬಿ ಹಿಡಿಯುತ್ತಾನೆ. ಆಮೇಲೆ ‘ಚಿಂತೆ ಮಾಡಬೇಡಿ. ಅವನು ಚೆನ್ನಾಗಿದ್ದಾನೆ!’ ಎಂದು ಪೌಲನು ತಿಳಿಸುತ್ತಾನೆ. ಹೌದು, ಅವನು ಹೇಳಿದ ಹಾಗೆಯೇ ಹುಡುಗನು ಚೆನ್ನಾಗಿದ್ದಾನೆ. ಅದೊಂದು ಅದ್ಭುತವಾಗಿದೆ! ಪೌಲನು ಸತ್ತುಹೋಗಿದ್ದ ಆ ಹುಡುಗನನ್ನು ಮತ್ತೆ ಬದುಕಿಸುತ್ತಾನೆ! ಅಲ್ಲಿರುವವರೆಲ್ಲರ ಮುಖಗಳು ಸಂತೋಷದಿಂದ ಅರಳುತ್ತವೆ.

ಅವರೆಲ್ಲರು ಪುನಃ ಮಾಳಿಗೆಯ ಮೇಲೆ ಹೋಗಿ ಊಟ ಮಾಡುತ್ತಾರೆ. ಹೊತ್ತಾರೆಯ ತನಕ ಪೌಲನು ಮಾತಾಡುತ್ತಾ ಇರುತ್ತಾನೆ. ಆದರೆ ಈಗ ಯೂತಿಖನು ಪುನಃ ನಿದ್ದೆಹೋಗುವುದಿಲ್ಲ! ಅನಂತರ ಪೌಲ, ತಿಮೊಥೆಯ ಮತ್ತು ಅವರೊಂದಿಗೆ ಪ್ರಯಾಣ ಮಾಡುವವರು ಹಡಗು ಹತ್ತುತ್ತಾರೆ. ಅವರು ಎಲ್ಲಿಗೆ ಹೋಗುತ್ತಿದ್ದಾರೆಂದು ನಿಮಗೆ ಗೊತ್ತೋ?

ಪೌಲನು ಈಗ ತನ್ನ ಮೂರನೆಯ ಸಾರುವ ಸಂಚಾರವನ್ನು ಮುಗಿಸಿ ತನ್ನ ಮನೆಗೆ ಹಿಂದಿರುಗುತ್ತಿದ್ದಾನೆ. ಈ ಸಾರುವ ಸಂಚಾರದಲ್ಲಿ ಪೌಲನು ಎಫೆಸ ನಗರದಲ್ಲಿಯೇ ಮೂರು ವರ್ಷ ಉಳಿಯುತ್ತಾನೆ. ಆದುದರಿಂದ, ಇದು ಅವನ ಎರಡನೆಯ ಸಂಚಾರಕ್ಕಿಂತಲೂ ಹೆಚ್ಚು ದೀರ್ಘವಾಗಿದೆ.

ತ್ರೋವವನ್ನು ಬಿಟ್ಟು ಹೊರಟ ಬಳಿಕ, ಆ ಹಡಗು ಮಿಲೇತದಲ್ಲಿ ಸ್ವಲ್ಪ ಹೊತ್ತು ನಿಲ್ಲುತ್ತದೆ. ಈ ಮಿಲೇತದಿಂದ ಎಫೆಸ ನಗರವು ಕೇವಲ ಕೆಲವು ಮೈಲು ದೂರವಿದೆಯಷ್ಟೇ. ಆದುದರಿಂದ, ಪೌಲನು ಕೊನೆಯ ಬಾರಿ ಮಾತಾಡಲಿಕ್ಕಾಗಿ ಮಿಲೇತಕ್ಕೆ ಬರುವಂತೆ ಎಫೆಸ ಸಭೆಯ ಹಿರೀ ಪುರುಷರಿಗೆ ಹೇಳಿ ಕಳುಹಿಸುತ್ತಾನೆ. ಅವರೊಂದಿಗೆ ಮಾತಾಡಿದ ನಂತರ, ಹಡಗು ಹೊರಡುವ ಸಮಯ ಬರುತ್ತದೆ. ಪೌಲನು ಹೊರಟು ಹೋಗುವುದನ್ನು ಕಾಣುವಾಗ ಅವರೆಷ್ಟು ದುಃಖಪಡುತ್ತಾರೆ!

ಕಟ್ಟಕಡೆಗೆ ಹಡಗು ಕೈಸರೈಯಕ್ಕೆ ಬರುತ್ತದೆ. ಪೌಲನು ಇಲ್ಲಿ ಶಿಷ್ಯ ಫಿಲಿಪ್ಪನ ಮನೆಯಲ್ಲಿ ಉಳುಕೊಳ್ಳುತ್ತಾನೆ. ಆಗ, ಪ್ರವಾದಿ ಅಗಬನು ಪೌಲನನ್ನು ಎಚ್ಚರಿಸುತ್ತಾನೆ. ಯೆರೂಸಲೇಮಿಗೆ ಹೋದಾಗ ಪೌಲನನ್ನು ಸೆರೆಗೆ ಹಾಕಲಾಗುವುದು ಎಂದು ಅವನು ಹೇಳುತ್ತಾನೆ. ಅವನು ಹೇಳಿದಂತೆಯೇ ಆಗುತ್ತದೆ. ಪೌಲನು ಕೈಸರೈಯದಲ್ಲಿ ಎರಡು ವರ್ಷ ಸೆರೆಯಲ್ಲಿರುತ್ತಾನೆ. ಬಳಿಕ, ರೋಮನ್‌ ಚಕ್ರವರ್ತಿ ಕೈಸರನ ಮುಂದೆ ವಿಚಾರಣೆಗೆ ಒಳಗಾಗುವಂತೆ ಪೌಲನನ್ನು ರೋಮ್‌ಗೆ ಕಳುಹಿಸಲಾಗುತ್ತದೆ. ರೋಮ್‌ಗೆ ಪ್ರಯಾಣಿಸುವಾಗ ಏನು ಸಂಭವಿಸುತ್ತದೆಂದು ನಾವು ನೋಡೋಣ.