ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 113

ರೋಮ್‌ನಲ್ಲಿ ಪೌಲನು

ರೋಮ್‌ನಲ್ಲಿ ಪೌಲನು

ಪೌಲನ ಕೈಗಳಲ್ಲಿ ಹಾಕಿರುವ ಬೇಡಿಯನ್ನು ನೋಡಿರಿ. ಅವನನ್ನು ಕಾವಲು ಕಾಯುತ್ತಿರುವ ರೋಮನ್‌ ಸೈನಿಕನು ನಿಮಗೆ ಕಾಣಿಸುತ್ತಿದ್ದಾನೋ? ಪೌಲನು ರೋಮ್‌ನಲ್ಲಿ ಸೆರೆವಾಸಿಯಾಗಿದ್ದಾನೆ. ರೋಮನ್‌ ಕೈಸರನು ಪೌಲನನ್ನು ಏನು ಮಾಡಬೇಕೆಂದು ನಿರ್ಣಯಿಸುವ ತನಕ ಅವನು ಅಲ್ಲೇ ಇರಬೇಕು. ಬಂಧನದಲ್ಲಿರುವ ಅವನನ್ನು ನೋಡಲು ಜನರಿಗೆ ಅನುಮತಿಯಿದೆ.

ಪೌಲನು ರೋಮ್‌ಗೆ ಬಂದು ಮೂರು ದಿನಗಳಾದ ಮೇಲೆ ಕೆಲವು ಯೆಹೂದ್ಯ ಮುಖಂಡರಿಗೆ ತನ್ನನ್ನು ಬಂದು ನೋಡುವಂತೆ ಹೇಳಿ ಕಳುಹಿಸುತ್ತಾನೆ. ಹಾಗೇ, ರೋಮ್‌ನಲ್ಲಿರುವ ಅನೇಕ ಯೆಹೂದ್ಯರು ಬರುತ್ತಾರೆ. ಪೌಲನು ಅವರಿಗೆ ಯೇಸುವಿನ ಕುರಿತು ಮತ್ತು ದೇವರ ರಾಜ್ಯದ ಕುರಿತು ಸಾರುತ್ತಾನೆ. ಕೆಲವರು ನಂಬಿ ಕ್ರೈಸ್ತರಾಗುತ್ತಾರೆ. ಆದರೆ ಇತರರು ನಂಬುವುದಿಲ್ಲ.

ಅದಲ್ಲದೆ, ತನ್ನನ್ನು ಕಾವಲು ಕಾಯುವ ಬೇರೆಬೇರೆ ಸೈನಿಕರಿಗೂ ಪೌಲನು ಸಾರುತ್ತಾನೆ. ತಾನಿಲ್ಲಿ ಬಂಧನದಲ್ಲಿದ್ದ ಎರಡು ವರ್ಷಗಳಲ್ಲಿ ಪೌಲನು ಸಾಧ್ಯವಾದ ಪ್ರತಿಯೊಬ್ಬನಿಗೆ ಸಾರುತ್ತಾನೆ. ಹೀಗೆ, ಕೈಸರನ ಮನೆಯವರೂ ದೇವರ ರಾಜ್ಯದ ಸುವಾರ್ತೆಯ ಕುರಿತು ಕೇಳುತ್ತಾರೆ. ಮಾತ್ರವಲ್ಲ, ಕೆಲವರು ಕ್ರೈಸ್ತರಾಗುತ್ತಾರೆ.

ಆದರೆ ಮೇಜಿನ ಮೇಲೆ ಬರೆಯುತ್ತಿರುವವನು ಯಾರು? ನೀವು ಊಹಿಸಬಲ್ಲಿರೋ? ಹೌದು, ಪೌಲನನ್ನು ಭೇಟಿಯಾಗಲು ಬಂದ ತಿಮೊಥೆಯನೇ ಅವನು. ದೇವರ ರಾಜ್ಯದ ಕುರಿತು ಸಾರಿದುದಕ್ಕಾಗಿ ತಿಮೊಥೆಯನು ಸಹ ಸೆರೆಮನೆಯಲ್ಲಿದ್ದನು. ಆದರೆ ಈಗ ಅವನನ್ನು ಬಿಡುಗಡೆಗೊಳಿಸಲಾಗಿದೆ. ಅವನು ಇಲ್ಲಿ ಪೌಲನಿಗೆ ಸಹಾಯಮಾಡಲು ಬಂದಿರುತ್ತಾನೆ. ತಿಮೊಥೆಯನು ಏನು ಬರೆಯುತ್ತಿದ್ದಾನೆಂದು ನಿಮಗೆ ಗೊತ್ತೋ? ನಾವು ನೋಡೋಣ.

ಕಥೆ 110ರಲ್ಲಿ ನಾವು ಓದಿದ ಫಿಲಿಪ್ಪಿ ಮತ್ತು ಎಫೆಸ ನಗರಗಳು ನಿಮಗೆ ನೆನಪಿವೆಯೇ? ಆ ನಗರಗಳಲ್ಲಿ ಸಭೆಗಳನ್ನು ಪ್ರಾರಂಭಿಸಲು ಪೌಲನು ಸಹಾಯಮಾಡಿದ್ದನು. ಈಗ ಅವನು ಸೆರೆಮನೆಯಿಂದ ಅಲ್ಲಿನ ಕ್ರೈಸ್ತರಿಗೆ ಪತ್ರಗಳನ್ನು ಬರೆಯುತ್ತಿದ್ದಾನೆ. ಈ ಪತ್ರಗಳನ್ನು ನಾವು ಬೈಬಲ್‌ನಲ್ಲಿ ನೋಡಬಹುದು. ಅವುಗಳನ್ನು ಎಫೆಸದವರಿಗೆ ಮತ್ತು ಫಿಲಿಪ್ಪಿಯದವರಿಗೆ ಎಂದು ಕರೆಯಲಾಗುತ್ತದೆ. ಫಿಲಿಪ್ಪಿಯದಲ್ಲಿರುವ ಕ್ರೈಸ್ತ ಮಿತ್ರರಿಗೆ ಏನು ಬರೆಯಬೇಕೆಂದು ಪೌಲನೀಗ ತಿಮೊಥೆಯನಿಗೆ ಹೇಳುತ್ತಿದ್ದಾನೆ.

ಫಿಲಿಪ್ಪಿಯದವರು ಪೌಲನಿಗೆ ಬಹಳ ದಯೆ ತೋರಿಸಿದ್ದಾರೆ. ಇಲ್ಲಿ ಸೆರೆಮನೆಯಲ್ಲಿರುವ ಅವನಿಗೆ ಒಂದು ಕೊಡುಗೆಯನ್ನು ಕಳುಹಿಸಿದ್ದಾರೆ. ಅದಕ್ಕಾಗಿ ಪೌಲನು ಅವರಿಗೆ ಕೃತಜ್ಞತೆ ಹೇಳುತ್ತಿದ್ದಾನೆ. ಆ ಕೊಡುಗೆಯನ್ನು ಪೌಲನಿಗೆ ತಂದು ಕೊಟ್ಟವನ ಹೆಸರು ಎಪಫ್ರೋದೀತ. ಆದರೆ ಅವನು ಕಾಯಿಲೆಬಿದ್ದು ಸಾಯುವ ಹಾಗಾದನು. ಈಗ ಅವನು ಗುಣಮುಖನಾಗಿ ಮನೆಗೆ ಹೋಗಲು ಸಿದ್ಧನಾಗಿದ್ದಾನೆ. ಅವನು ಫಿಲಿಪ್ಪಿಗೆ ಹಿಂದೆಹೋಗುವಾಗ ಪೌಲ ಮತ್ತು ತಿಮೊಥೆಯನಿಂದ ಈ ಪತ್ರವನ್ನು ತೆಗೆದುಕೊಂಡು ಹೋಗುವನು.

ಪೌಲನು ಸೆರೆಮನೆಯಲ್ಲಿರುವಾಗ ಇನ್ನೂ ಎರಡು ಪತ್ರಗಳನ್ನು ಬರೆಯುತ್ತಾನೆ. ಅವು ಸಹ ಬೈಬಲಿನಲ್ಲಿವೆ. ಒಂದು ಪತ್ರವು ಕೊಲೊಸ್ಸೆ ನಗರದಲ್ಲಿರುವ ಕ್ರೈಸ್ತರಿಗಾಗಿ ಇದೆ. ಅದರ ಹೆಸರೇನೆಂದು ನಿಮಗೆ ತಿಳಿದಿದೆಯೇ? ಅದನ್ನು ಕೊಲೊಸ್ಸೆಯವರಿಗೆ ಎಂದೇ ಕರೆಯಲಾಗುತ್ತದೆ. ಇನ್ನೊಂದು, ಕೊಲೊಸ್ಸೆಯಲ್ಲಿಯೇ ವಾಸಿಸುವ ಫಿಲೆಮೋನನೆಂಬ ಆಪ್ತ ಮಿತ್ರನಿಗೆ ಬರೆದ ಪತ್ರವಾಗಿದೆ. ಈ ಪತ್ರವು ಫಿಲೆಮೋನನ ಸೇವಕನಾದ ಒನೇಸಿಮನ ಕುರಿತಾಗಿದೆ.

ಒನೇಸಿಮನು ಫಿಲೆಮೋನನ ಬಳಿಯಿಂದ ರೋಮ್‌ಗೆ ಓಡಿಹೋಗಿದ್ದನು. ಬಳಿಕ ಪೌಲನು ಸೆರೆಯಲ್ಲಿದ್ದ ವಿಷಯವನ್ನು ಹೇಗೋ ತಿಳುಕೊಂಡು ಅವನನ್ನು ಭೇಟಿಯಾಗಲು ಬಂದನು. ಆಗ ಪೌಲನು ಒನೇಸಿಮನಿಗೆ ದೇವರ ರಾಜ್ಯದ ಕುರಿತು ಸಾರಿದನು. ಬೇಗನೆ ಒನೇಸಿಮನು ಸಹ ಕ್ರೈಸ್ತನಾದನು. ಈಗ ಒನೇಸಿಮನು ತಾನು ಓಡಿಬಂದದ್ದಕ್ಕಾಗಿ ತುಂಬಾ ವ್ಯಸನಪಡುತ್ತಾನೆ. ಆದುದರಿಂದ ಫಿಲೆಮೋನನಿಗೆ ಬರೆದ ಈ ಪತ್ರದಲ್ಲಿ ಪೌಲನು ಏನು ಬರೆಯುತ್ತಾನೆಂದು ನಿಮಗೆ ಗೊತ್ತೋ?

ಒನೇಸಿಮನನ್ನು ಕ್ಷಮಿಸುವಂತೆ ಪೌಲನು ಫಿಲೆಮೋನನನ್ನು ಕೇಳಿಕೊಳ್ಳುತ್ತಾನೆ. ‘ಅವನನ್ನು ನಿನ್ನ ಬಳಿಗೆ ನಾನು ಕಳುಹಿಸುತ್ತೇನೆ. ಆದರೆ ಈಗ ಅವನು ಕೇವಲ ನಿನ್ನ ಸೇವಕನಲ್ಲ, ಒಬ್ಬ ಒಳ್ಳೆಯ ಕ್ರೈಸ್ತ ಸಹೋದರನೂ ಆಗಿದ್ದಾನೆ’ ಎಂದು ಪೌಲನು ಅವನಿಗೆ ಬರೆಯುತ್ತಾನೆ. ಒನೇಸಿಮನು ಕೊಲೊಸ್ಸೆಗೆ ಹಿಂದಿರುಗುವಾಗ ಈ ಎರಡು ಪತ್ರಗಳನ್ನು ಅಂದರೆ ಪೌಲನು ಕೊಲೊಸ್ಸೆಯವರಿಗೆ ಮತ್ತು ಫಿಲೆಮೋನನಿಗೆ ಬರೆದ ಪತ್ರಗಳನ್ನು ತೆಗೆದುಕೊಂಡು ಹೋಗುತ್ತಾನೆ. ತನ್ನ ಸೇವಕನು ಒಬ್ಬ ಕ್ರೈಸ್ತನಾಗಿದ್ದಾನೆಂದು ತಿಳಿದಾಗ ಫಿಲೆಮೋನನಿಗೆಷ್ಟು ಆನಂದವಾಗುತ್ತದೆಂದು ನಾವು ಊಹಿಸಬಹುದು.

ಪೌಲನು ಫಿಲಿಪ್ಪಿಯವರಿಗೆ ಮತ್ತು ಫಿಲೆಮೋನನಿಗೆ ಬರೆದ ಪತ್ರದಲ್ಲಿ ಕೆಲವು ಸಂತೋಷದ ಸುದ್ದಿಯನ್ನು ಬರೆಯುತ್ತಾನೆ. ಅದೇನು ಗೊತ್ತೇ? ‘ನಾನು ತಿಮೊಥೆಯನನ್ನು ನಿಮ್ಮ ಬಳಿಗೆ ಕಳುಹಿಸುತ್ತೇನೆ. ಅಲ್ಲದೆ, ನಾನು ಸಹ ಬೇಗನೆ ಬಂದು ನಿಮ್ಮನ್ನು ಭೇಟಿಯಾಗುವೆನು’ ಅನ್ನುತ್ತಾನೆ ಪೌಲನು. ‘ನಾನು ತಂಗಲು ಸ್ಥಳವನ್ನು ಸಿದ್ಧಮಾಡು’ ಎಂದು ಫಿಲೆಮೋನನಿಗೆ ಬರೆಯುತ್ತಾನೆ.

ಪೌಲನು ಬಿಡುಗಡೆಯಾದಾಗ ಅನೇಕ ಸ್ಥಳಗಳಲ್ಲಿರುವ ತನ್ನ ಕ್ರೈಸ್ತ ಸಹೋದರ ಮತ್ತು ಸಹೋದರಿಯರನ್ನು ಭೇಟಿಯಾಗುತ್ತಾನೆ. ಆದರೆ ತರುವಾಯ ಪುನಃ ರೋಮ್‌ನಲ್ಲಿ ಅವನನ್ನು ಬಂದಿಸಲಾಗುತ್ತದೆ. ಈ ಬಾರಿ ತಾನು ಕೊಲ್ಲಲ್ಪಡುವೆನೆಂದು ಅವನಿಗೆ ತಿಳಿಯುತ್ತದೆ. ಆದುದರಿಂದ ಅವನು ತಿಮೊಥೆಯನಿಗೆ ಪತ್ರ ಬರೆದು ಬೇಗನೆ ಬರುವಂತೆ ಕೇಳಿಕೊಳ್ಳುತ್ತಾನೆ. ‘ನಾನು ದೇವರಿಗೆ ನಂಬಿಗಸ್ತನಾಗಿ ಉಳಿದಿದ್ದೇನೆ ಮತ್ತು ದೇವರು ನನಗೆ ಬಹುಮಾನವನ್ನು ಕೊಡುವನು’ ಎಂದು ಅವನು ಬರೆಯುತ್ತಾನೆ. ಅನಂತರ ಪೌಲನು ಕೊಲ್ಲಲ್ಪಡುತ್ತಾನೆ. ಅದಾಗಿ ಕೆಲವು ವರ್ಷಗಳಲ್ಲಿ ಯೆರೂಸಲೇಮ್‌ ಪುನಃ ನಾಶವಾಗುತ್ತದೆ. ಈ ಬಾರಿ ಅದು ರೋಮನ್ನರಿಂದ ನಾಶವಾಗುತ್ತದೆ.

ಆದರೆ ಬೈಬಲ್‌ನಲ್ಲಿ ಇನ್ನೂ ಹೆಚ್ಚು ವಿಷಯಗಳಿವೆ. ಯೆಹೋವ ದೇವರು ಬೈಬಲಿನ ಕೊನೆಯ ಪುಸ್ತಕಗಳನ್ನು ಅಪೊಸ್ತಲ ಯೋಹಾನನಿಂದ ಬರೆಸುತ್ತಾನೆ. ಇದರಲ್ಲಿ ಪ್ರಕಟನೆ ಪುಸ್ತಕವು ಸೇರಿದೆ. ಈ ಪುಸ್ತಕವು ಭವಿಷ್ಯತ್ತಿನ ಕುರಿತು ತಿಳಿಸುತ್ತದೆ. ಭವಿಷ್ಯದಲ್ಲೇನು ಕಾದಿದೆಯೆಂದು ನಾವೀಗ ತಿಳಿಯೋಣ.