ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 114

ಎಲ್ಲಾ ದುಷ್ಟತನಗಳ ಅಂತ್ಯ

ಎಲ್ಲಾ ದುಷ್ಟತನಗಳ ಅಂತ್ಯ

ಇಲ್ಲಿ ನೀವೇನನ್ನು ನೋಡುತ್ತೀರಿ? ಬಿಳೀ ಕುದುರೆಗಳನ್ನು ಹತ್ತಿರುವ ಒಂದು ಸೈನ್ಯ ಬರುತ್ತಿರುವುದನ್ನು ನೋಡುತ್ತೀರಲ್ಲವೇ. ಆದರೆ ಅವರು ಎಲ್ಲಿಂದ ಬರುತ್ತಿದ್ದಾರೆಂದು ಗಮನಿಸಿರಿ. ಕುದುರೆಗಳು ಪರಲೋಕದಿಂದ ಮೇಘಗಳ ಮೇಲೆ ನಾಗಾಲೋಟದಿಂದ ದೌಡಾಯಿಸುತ್ತಿವೆ! ಪರಲೋಕದಲ್ಲಿ ನಿಜವಾಗಿ ಕುದುರೆಗಳಿವೆಯೋ?

ಇಲ್ಲ, ಇವು ನಿಜವಾದ ಕುದುರೆಗಳಲ್ಲ. ನಮಗಿದು ಹೇಗೆ ಗೊತ್ತು? ಹೇಗೆಂದರೆ ಕುದುರೆಗಳು ಮೇಘಗಳ ಮೇಲೆ ಓಡಲಾರವು, ಅಲ್ಲವೇ? ಆದರೆ ಪರಲೋಕದಲ್ಲಿ ಕುದುರೆಗಳಿವೆಯೆಂದು ಬೈಬಲು ಮಾತಾಡುತ್ತದೆ. ಯಾಕೆಂದು ನಿಮಗೆ ಗೊತ್ತೇ?

ಯಾಕೆಂದರೆ ಭೂಮಿಯಲ್ಲಿ ಒಂದು ಸಮಯದಲ್ಲಿ ಯುದ್ಧಗಳಿಗಾಗಿ ಕುದುರೆಗಳನ್ನು ಬಹಳವಾಗಿ ಉಪಯೋಗಿಸುತ್ತಿದ್ದರು. ಹೀಗೆ ಪರಲೋಕದಿಂದ ವ್ಯಕ್ತಿಗಳು ಕುದುರೆ ಹತ್ತಿ ಬರುವುದನ್ನು ಬೈಬಲ್‌ ತಿಳಿಸುವಾಗ, ಭೂಮಿಯಲ್ಲಿರುವ ಜನರೊಂದಿಗೆ ದೇವರು ಒಂದು ಯುದ್ಧವನ್ನು ಮಾಡಲಿದ್ದಾನೆಂದು ತೋರಿಸುತ್ತದೆ. ಆ ಯುದ್ಧದ ಹೆಸರೇನೆಂದು ನಿಮಗೆ ತಿಳಿದಿದೆಯೇ? ಅದರ ಹೆಸರು ಅರ್ಮಗೆದೋನ್‌. ಆ ಯುದ್ಧದಲ್ಲಿ ಭೂಮಿಯ ಮೇಲಿನ ಎಲ್ಲಾ ದುಷ್ಟತನವನ್ನು ನಿರ್ಮೂಲಮಾಡಲಾಗುತ್ತದೆ.

ಆ ಅರ್ಮಗೆದೋನ್‌ ಯುದ್ಧದಲ್ಲಿ ನಾಯಕತ್ವವನ್ನು ವಹಿಸುವವನು ಯೇಸುವೇ. ಯೆಹೋವನು ಯೇಸುವನ್ನು ತನ್ನ ಸರಕಾರದ ಅರಸನನ್ನಾಗಿ ಆರಿಸಿಕೊಂಡನು ಎಂಬುದು ನಿಮಗೆ ನೆನಪಿರಬಹುದು. ಆದುದರಿಂದಲೇ ಯೇಸು ಅರಸನ ಕಿರೀಟವನ್ನು ಧರಿಸಿದ್ದಾನೆ. ಅವನ ಹತ್ತಿರವಿರುವ ಆ ಕತ್ತಿಯು, ಅವನು ದೇವರ ಶತ್ರುಗಳನ್ನೆಲ್ಲಾ ಕೊಂದು ಹಾಕುವನೆಂಬದನ್ನು ಸೂಚಿಸುತ್ತದೆ. ದೇವರು ದುರ್ಜನರೆಲ್ಲರನ್ನು ನಾಶಮಾಡುವನು ಎಂಬ ವಿಷಯವನ್ನು ಕೇಳಿ ನಾವು ಆಶ್ಚರ್ಯಪಡಬೇಕೋ?

ಕಥೆ 10ಕ್ಕೆ ಪುಟವನ್ನು ತಿರುಗಿಸಿ ನೋಡಿರಿ. ಅಲ್ಲಿ ನೀವೇನನ್ನು ಕಾಣುತ್ತೀರಿ? ಕೆಟ್ಟ ಜನರನ್ನು ನಾಶಮಾಡಿದ ಮಹಾ ಜಲಪ್ರಳಯವನ್ನು ನೋಡುತ್ತೀರಿ ಅಲ್ಲವೇ? ಆ ಜಲಪ್ರಳಯವನ್ನು ತಂದವನು ಯಾರು? ಯೆಹೋವ ದೇವರು. ಈಗ 15ನೆಯ ಕಥೆಯನ್ನು ನೋಡಿರಿ. ಅಲ್ಲಿ ಏನು ಸಂಭವಿಸುತ್ತಿದೆ? ಯೆಹೋವನು ಕಳುಹಿಸಿದ ಬೆಂಕಿಯಿಂದ ಸೊದೋಮ್‌ ಮತ್ತು ಗೊಮೋರ ಎಂಬ ಪಟ್ಟಣಗಳು ನಾಶವಾಗುತ್ತಿವೆ.

ಕಥೆ 33ಕ್ಕೆ ಮಗುಚಿರಿ. ಐಗುಪ್ತ್ಯರ ಕುದುರೆಗಳಿಗೆ ಮತ್ತು ಯುದ್ಧ ರಥಗಳಿಗೆ ಏನಾಗುತ್ತಿದೆಯೆಂದು ನೋಡಿರಿ. ನೀರು ರಭಸದಿಂದ ಅವರ ಮೇಲೆ ಕುಸಿದು ಬೀಳುವಂತೆ ಮಾಡಿದವನಾರು? ಯೆಹೋವನೇ. ತನ್ನ ಜನರನ್ನು ರಕ್ಷಿಸುವುದಕ್ಕಾಗಿ ಅವನದನ್ನು ಮಾಡಿದನು. ಈಗ ಕಥೆ 36 ಮತ್ತು 76ನ್ನು ನೋಡಿರಿ. ತನ್ನ ಜನರಾದ ಇಸ್ರಾಯೇಲ್ಯರು ದುಷ್ಟಕಾರ್ಯಗಳನ್ನು ಮಾಡಿದಾಗ ಅವರು ಸಹ ನಾಶವಾಗುವಂತೆ ಯೆಹೋವನು ಅನುಮತಿಸಿದನು ಎಂಬದನ್ನು ನೀವು ಅಲ್ಲಿ ಕಾಣುವಿರಿ.

ಹೀಗಿರಲಾಗಿ, ಭೂಮಿಯ ಮೇಲಿನ ಎಲ್ಲಾ ದುಷ್ಟತನವನ್ನು ಅಂತ್ಯಗೊಳಿಸಲು ಯೆಹೋವನು ತನ್ನ ಸ್ವರ್ಗೀಯ ಸೇನೆಯನ್ನು ಕಳುಹಿಸುವನೆಂಬದಕ್ಕೆ ನಾವು ಆಶ್ಚರ್ಯಪಡಬಾರದು. ಆದರೆ ಅದರ ಬಳಿಕ ಸಿಗುವ ಆಶೀರ್ವಾದಗಳ ಕುರಿತು ತುಸು ಯೋಚಿಸಿರಿ! ಪುಟವನ್ನು ಮಗುಚಿರಿ, ನಾವು ನೋಡೋಣ.