ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 115

ಭೂಮಿಯ ಮೇಲೆ ಹೊಸ ಪರದೈಸ್‌

ಭೂಮಿಯ ಮೇಲೆ ಹೊಸ ಪರದೈಸ್‌

ಈ ಚಿತ್ರದಲ್ಲಿರುವ ದೊಡ್ಡ ದೊಡ್ಡ ಮರಗಳನ್ನು, ಅಂದಚೆಂದದ ಹೂವುಗಳನ್ನು, ಎತ್ತರವಾದ ಬೆಟ್ಟಗಳನ್ನು ನೋಡಿರಿ. ಇಲ್ಲಿ ಎಷ್ಟು ಚೆನ್ನಾಗಿದೆ ಅಲ್ಲವೇ? ಆ ಜಿಂಕೆಯು ಚಿಕ್ಕ ಹುಡುಗನ ಕೈಯಿಂದ ಏನನ್ನೋ ತಿನ್ನುತ್ತಾ ಇದೆ ನೋಡಿ. ಹುಲ್ಲುಹಾಸಿನ ಮೇಲೆ ಕೂತಿರುವ ಆ ಸಿಂಹಗಳನ್ನೂ ಅಲ್ಲಿ ನಿಂತಿರುವ ಕುದುರೆಗಳನ್ನೂ ನೋಡಿರಿ. ಇಂಥ ಒಂದು ರಮಣೀಯ ಸ್ಥಳದಲ್ಲಿ ಮನೆ ಕಟ್ಟಿ ಜೀವಿಸಲು ನಿಮಗೆ ಇಷ್ಟವಾಗುವುದಿಲ್ಲವೇ?

ಪರದೈಸವಾಗುವ ಭೂಮಿಯಲ್ಲಿ ನೀವು ಸದಾ ಜೀವಿಸಬೇಕೆಂಬುದೇ ದೇವರ ಇಷ್ಟ. ಇಂದು ಜನರು ಅನುಭವಿಸುವಂಥ ಯಾವುದೇ ಕಷ್ಟನೋವುಗಳು ನಿಮಗೆ ಬರಬಾರದೆಂದು ಆತನು ಬಯಸುತ್ತಾನೆ. ಆ ಹೊಸ ಪರದೈಸಿನಲ್ಲಿ ಜೀವಿಸುವವರಿಗೆ ಬೈಬಲ್‌ ವಾಗ್ದಾನಿಸುವುದು: ‘ದೇವರು ಅವರ ಸಂಗಡ ಇರುವನು. ಇನ್ನು ಮರಣವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ. ಹಳೆಯ ವಿಷಯಗಳು ಇಲ್ಲದೆ ಹೋಗುವುದು.’

ಈ ಆಶ್ಚರ್ಯಕರ ಬದಲಾವಣೆಯು ಸಂಭವಿಸುವಂತೆ ಯೇಸು ನೋಡಿಕೊಳ್ಳುವನು. ಅದು ಯಾವಾಗ ಎಂದು ನಿಮಗೆ ಗೊತ್ತಿದೆಯೇ? ಹೌದು, ಅವನು ಎಲ್ಲಾ ಕೆಟ್ಟತನವನ್ನು ಮತ್ತು ಎಲ್ಲಾ ಕೆಟ್ಟ ಜನರನ್ನು ತೆಗೆದುಹಾಕಿ ಭೂಮಿಯನ್ನು ಶುದ್ಧೀಕರಿಸಿದ ಮೇಲೆಯೇ ಅದು ಸಂಭವಿಸುವುದು. ಯೇಸು ಭೂಮಿಯಲ್ಲಿದ್ದಾಗ ಜನರನ್ನು ಎಲ್ಲಾ ತರದ ರೋಗಗಳಿಂದ ವಾಸಿಮಾಡಿದನು. ಸತ್ತವರನ್ನು ಸಹ ಜೀವಂತವಾಗಿ ಎಬ್ಬಿಸಿದನು ಎಂಬುದನ್ನು ನೆನಪಿಸಿಕೊಳ್ಳಿರಿ. ಯೇಸು ಇದನ್ನೆಲ್ಲಾ ಮಾಡಿದ್ದು ಯಾಕೆಂದು ಗೊತ್ತೇ? ತಾನು ದೇವರ ರಾಜ್ಯದ ರಾಜನಾಗಿ ಆಳುವಾಗ ಭೂಮಿಯಲ್ಲಿ ಏನೆಲ್ಲಾ ಮಾಡಲಿರುವನೆಂಬದನ್ನು ತೋರಿಸಲಿಕ್ಕಾಗಿಯೇ.

ಭೂಮಿಯ ಮೇಲಿನ ಹೊಸ ಪರದೈಸಿನಲ್ಲಿ ಎಷ್ಟು ಚೆನ್ನಾಗಿರುವುದೆಂದು ತುಸು ಯೋಚಿಸಿ ನೋಡಿ! ಯೇಸು ತಾನು ಆರಿಸಿಕೊಳ್ಳುವ ಕೆಲವು ಜನರೊಂದಿಗೆ ಸೇರಿ ಪರಲೋಕದಿಂದ ಆಳುವನು. ಆ ಸಹರಾಜರು ಭೂಮಿಯಲ್ಲಿರುವ ಪ್ರತಿಯೊಬ್ಬರನ್ನು ಕಾಳಜಿಯಿಂದ ನೋಡಿಕೊಂಡು ಅವರೆಲ್ಲರೂ ಸಂತೋಷವುಳ್ಳವರಾಗಿರುವಂತೆ ನೋಡಿಕೊಳ್ಳುವರು. ತನ್ನ ಹೊಸ ಪರದೈಸಿನಲ್ಲಿ ದೇವರು ಕೊಡುವ ನಿತ್ಯಜೀವವನ್ನು ನಾವು ಪಡೆದುಕೊಳ್ಳಲು ಏನು ಮಾಡಬೇಕು? ನಾವದನ್ನು ನೋಡೋಣ.