ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 116

ನಾವು ಹೇಗೆ ಸದಾಕಾಲ ಜೀವಿಸಬಲ್ಲೆವು?

ನಾವು ಹೇಗೆ ಸದಾಕಾಲ ಜೀವಿಸಬಲ್ಲೆವು?

ಈ ಚಿಕ್ಕ ಹುಡುಗಿ ಮತ್ತು ಅವಳ ಸ್ನೇಹಿತರು ಏನನ್ನು ಓದುತ್ತಿದ್ದಾರೆಂದು ನೀವು ಹೇಳಬಲ್ಲಿರೋ? ಹೌದು, ನೀವು ಓದುತ್ತಿರುವ ಇದೇ ಪುಸ್ತಕ ಅಂದರೆ ಬೈಬಲ್‌ ಕಥೆಗಳ ನನ್ನ ಪುಸ್ತಕವನ್ನೇ ಓದುತ್ತಿದ್ದಾರೆ. ಅಷ್ಟೇ ಅಲ್ಲ, ನೀವು ಈಗ ಓದುತ್ತಿರುವ ಅದೇ ಕಥೆಯನ್ನು ಅಂದರೆ “ನಾವು ಹೇಗೆ ಸದಾಕಾಲ ಜೀವಿಸಬಲ್ಲೆವು?” ಎಂಬ ಕಥೆಯನ್ನು ಅವರು ಓದುತ್ತಿದ್ದಾರೆ.

ಅವರೇನನ್ನು ಕಲಿಯುತ್ತಿದ್ದಾರೆಂದು ನಿಮಗೆ ತಿಳಿದಿದೆಯೇ? ಮೊದಲನೆಯದಾಗಿ, ನಾವು ಸದಾಕಾಲ ಜೀವಿಸಬೇಕಾದರೆ ಯೆಹೋವ ದೇವರ ಕುರಿತು ಮತ್ತು ಆತನ ಮಗನಾದ ಯೇಸುವಿನ ಕುರಿತು ತಿಳಿಯಬೇಕಾದ ಅಗತ್ಯವಿದೆ. ಬೈಬಲ್‌ ಅನ್ನುವುದು: ‘ಒಬ್ಬನೇ ಸತ್ಯ ದೇವರ ಕುರಿತು ಮತ್ತು ಆತನು ಭೂಮಿಗೆ ಕಳುಹಿಸಿಕೊಟ್ಟ ಆತನ ಮಗನಾದ ಯೇಸು ಕ್ರಿಸ್ತನ ಕುರಿತು ಕಲಿಯುವಾಗಲೇ ನಿತ್ಯಜೀವನ.’

ಯೆಹೋವ ದೇವರ ಕುರಿತು ಮತ್ತು ಆತನ ಮಗನಾದ ಯೇಸುವಿನ ಕುರಿತು ನಾವು ಹೇಗೆ ಕಲಿಯಬಲ್ಲೆವು? ಒಂದು ವಿಧಾನವು ಬೈಬಲ್‌ ಕಥೆಗಳ ನನ್ನ ಪುಸ್ತಕವನು ಆರಂಭದಿಂದ ಅಂತ್ಯದ ತನಕ ಓದುವ ಮೂಲಕ. ಅದು ಯೆಹೋವನ ಕುರಿತು ಮತ್ತು ಯೇಸುವಿನ ಕುರಿತು ಬಹಳ ವಿಷಯಗಳನ್ನು ತಿಳಿಸುತ್ತದೆ ಅಲ್ಲವೇ? ಅವರು ಮಾಡಿರುವ ಅನೇಕ ಸಂಗತಿಗಳ ಕುರಿತು ಮತ್ತು ಇನ್ನೂ ಮಾಡಲಿರುವ ವಿಷಯಗಳ ಕುರಿತು ಅದು ತಿಳಿಸುತ್ತದೆ. ಆದರೆ ನಾವು ಈ ಪುಸ್ತಕವನ್ನು ಕೇವಲ ಓದುವುದಕ್ಕಿಂತಲೂ ಹೆಚ್ಚಿನದನ್ನು ಮಾಡುವ ಅಗತ್ಯವಿದೆ.

ಅಲ್ಲಿರುವ ಇನ್ನೊಂದು ಪುಸ್ತಕ ನಿಮಗೆ ಕಾಣುತ್ತಿದೆಯೇ? ಅದು ಬೈಬಲ್‌ ಆಗಿದೆ. ಈ ಪುಸ್ತಕದ ಕಥೆಗಳಿಗೆ ಆಧಾರವಾಗಿರುವ ಬೈಬಲಿನ ಭಾಗಗಳನ್ನು ಯಾರಾದರೂ ನಿಮಗೆ ಓದಿಹೇಳುವಂತೆ ಕೇಳಿಕೊಳ್ಳಿ. ನಾವೆಲ್ಲರೂ ಯೆಹೋವನನ್ನು ಯೋಗ್ಯ ರೀತಿಯಲ್ಲಿ ಸೇವಿಸಿ ನಿತ್ಯಜೀವವನ್ನು ಪಡೆಯಲಿಕ್ಕಾಗಿರುವ ಪೂರ್ಣ ಮಾಹಿತಿಯನ್ನು ಬೈಬಲ್‌ ಕೊಡುತ್ತದೆ. ಆದುದರಿಂದ ಬೈಬಲನ್ನು ಕ್ರಮವಾಗಿ ಅಧ್ಯಯನ ಮಾಡುವ ರೂಢಿಯನ್ನು ನಾವು ಬೆಳೆಸಿಕೊಳ್ಳಬೇಕು.

ಆದರೆ ಯೆಹೋವ ದೇವರ ಮತ್ತು ಯೇಸು ಕ್ರಿಸ್ತನ ಕುರಿತು ಕೇವಲ ಕಲಿತರೆ ಸಾಲದು. ಅವರ ಕುರಿತು ಮತ್ತು ಅವರ ಬೋಧನೆಗಳ ಕುರಿತು ನಾವು ಹೆಚ್ಚೆಚ್ಚು ಜ್ಞಾನ ಪಡೆದುಕೊಂಡಿದ್ದರೂ ನಮಗೆ ನಿತ್ಯಜೀವ ಸಿಗದೆ ಹೋಗಬಹುದು. ಹಾಗಾದರೆ, ಬೇರೆ ಯಾವುದರ ಅಗತ್ಯವಿದೆಯೆಂದು ನಿಮಗೆ ಗೊತ್ತಿದೆಯೇ?

ನಾವು ಕಲಿತ ವಿಷಯಗಳಿಗೆ ಹೊಂದಿಕೆಯಲ್ಲಿ ಜೀವಿಸುವ ಅಗತ್ಯವೂ ನಮಗಿದೆ. ಇಸ್ಕರಿಯೋತ ಯೂದನ ನೆನಪು ನಿಮಗಿದೆಯೇ? ತನ್ನ ಅಪೊಸ್ತಲರಾಗಿ ಯೇಸು ಆರಿಸಿಕೊಂಡ 12 ಮಂದಿಯಲ್ಲಿ ಅವನು ಒಬ್ಬನಾಗಿದ್ದನು. ಯೂದನಿಗೆ ಯೆಹೋವನ ಮತ್ತು ಯೇಸುವಿನ ಕುರಿತು ಬಹಳ ಜ್ಞಾನ ಇತ್ತು. ಆದರೆ ಅವನಿಗೆ ಏನು ಸಂಭವಿಸಿತು? ಕೆಲವು ಸಮಯದ ನಂತರ ಅವನು ಸ್ವಾರ್ಥಿಯಾದನು. ಯೇಸುವನ್ನು 30 ಬೆಳ್ಳೀ ನಾಣ್ಯಗಳಿಗಾಗಿ ಶತ್ರುಗಳಿಗೆ ಮಾರಿದನು. ಆದುದರಿಂದ ಯೂದನಿಗೆ ನಿತ್ಯಜೀವವು ಸಿಕ್ಕಲಾರದು.

ನಾವು 69ನೆಯ ಕಥೆಯಲ್ಲಿ ಕಲಿತ ಗೇಹಜಿಯ ಕುರಿತು ನಿಮಗೆ ನೆನಪಿದೆಯೇ? ಅವನಿಗೆ ಸೇರಿರದ ಕೆಲವು ವಸ್ತ್ರಗಳನ್ನು ಮತ್ತು ಹಣವನ್ನು ಅವನು ಆಶಿಸಿದನು. ಈ ವಸ್ತುಗಳನ್ನು ಪಡೆಯಲಿಕ್ಕಾಗಿ ಅವನು ಸುಳ್ಳು ಹೇಳಿದನು. ಆದರೆ ಯೆಹೋವನು ಅವನನ್ನು ಶಿಕ್ಷಿಸಿದನು. ನಾವು ಯೆಹೋವನ ನಿಯಮಗಳನ್ನು ಪಾಲಿಸದಿದ್ದರೆ ನಮ್ಮನ್ನು ಕೂಡ ಆತನು ಶಿಕ್ಷಿಸುವನು.

ಆದರೆ ಯೆಹೋವನನ್ನು ಯಾವಾಗಲೂ ನಂಬಿಗಸ್ತಿಕೆಯಿಂದ ಸೇವಿಸಿದ ಅನೇಕ ಸಜ್ಜನರು ಇದ್ದಾರೆ. ನಾವು ಅವರಂತಿರಲು ಬಯಸುತ್ತೇವೆ ಅಲ್ಲವೇ? ಬಾಲಕನಾದ ಸಮುವೇಲನು ಅನುಸರಿಸಲಿಕ್ಕೆ ಒಂದು ಉತ್ತಮ ಮಾದರಿಯಾಗಿದ್ದಾನೆ. ನಾವು 55ನೆಯ ಕಥೆಯಲ್ಲಿ ನೋಡಿದಂತೆ, ಯೆಹೋವನ ಗುಡಾರದಲ್ಲಿ ಆತನ ಸೇವೆಮಾಡಲು ಆರಂಭಿಸಿದಾಗ ಅವನು ಕೇವಲ ನಾಲ್ಕು ಅಥವಾ ಐದು ವರ್ಷದವನಾಗಿದ್ದನು ಎಂಬುದು ನಿಮಗೆ ನೆನಪಿದೆಯೇ? ಹಾಗಾದರೆ, ನೀವೆಷ್ಟೇ ಚಿಕ್ಕವರಾಗಿರಲಿ ಯೆಹೋವನ ಸೇವೆಯನ್ನು ನೀವು ಮಾಡಬಲ್ಲಿರಿ.

ನಿಶ್ಚಯವಾಗಿಯೂ, ನಾವೆಲ್ಲರೂ ಅನುಸರಿಸಲು ಬಯಸುವ ವ್ಯಕ್ತಿಯು ಯೇಸು ಕ್ರಿಸ್ತನಾಗಿದ್ದಾನೆ. 87ನೆಯ ಕಥೆಯಲ್ಲಿ ನೋಡಿದ ಪ್ರಕಾರ, ಅವನು ಚಿಕ್ಕ ಹುಡುಗನಾಗಿದ್ದಾಗಲೂ ದೇವಾಲಯದಲ್ಲಿ ತನ್ನ ಸ್ವರ್ಗೀಯ ತಂದೆಯ ಕುರಿತು ಇತರರಿಗೆ ತಿಳಿಸುತ್ತಿದ್ದನು. ನಾವು ಅವನ ಮಾದರಿಯನ್ನು ಅನುಸರಿಸೋಣ. ನಮ್ಮಿಂದ ಸಾಧ್ಯವಾದಷ್ಟು ಹೆಚ್ಚು ಜನರಿಗೆ ನಮ್ಮ ಒಳ್ಳೆಯ ದೇವರಾದ ಯೆಹೋವನ ಕುರಿತು ಮತ್ತು ಆತನ ಕುಮಾರನಾದ ಯೇಸು ಕ್ರಿಸ್ತನ ಕುರಿತು ತಿಳಿಸೋಣ. ನಾವು ಈ ಎಲ್ಲಾ ವಿಷಯಗಳನ್ನು ಮಾಡುವುದಾದರೆ, ಭೂಮಿಯ ಮೇಲೆ ದೇವರು ತರಲಿರುವ ಹೊಸ ಪರದೈಸಿನಲ್ಲಿ ಸದಾಕಾಲ ಜೀವಿಸುವೆವು.