ಮಾಹಿತಿ ಇರುವಲ್ಲಿ ಹೋಗಲು

ನೀವು ಬೈಬಲನ್ನು ನಂಬಶಕ್ತರೇಕೆಂಬುದಕ್ಕೆ ಕಾರಣ

ನೀವು ಬೈಬಲನ್ನು ನಂಬಶಕ್ತರೇಕೆಂಬುದಕ್ಕೆ ಕಾರಣ

ನೀವು ಬೈಬಲನ್ನು ನಂಬಶಕ್ತರೇಕೆಂಬುದಕ್ಕೆ ಕಾರಣ

ಬೈಬಲು ನಂಬಲರ್ಹವಲ್ಲವೆಂದು ಕೆಲವರನ್ನುತ್ತಾರೆ ಮತ್ತು ಅವರ ನೋಟಗಳು ವ್ಯಾಪಕವಾಗಿ ಸ್ವೀಕೃತಿಯನ್ನು ಪಡೆದಿವೆ. ಹೀಗೆ ಬೈಬಲೇನನ್ನುತ್ತದೋ ಅದು ಭರವಸಪಾತ್ರವಲ್ಲವೆಂದು ಅನೇಕರು ತಳ್ಳಿಬಿಡುತ್ತಾರೆ.

ಆದರೆ ಯೇಸು ತನ್ನ ತಂದೆಗೆ ಮಾಡಿದ ಪ್ರಾರ್ಥನೆಯಲ್ಲಿ ಏನಂದನೋ ಅದು ಭರವಸವನ್ನು ಕಟ್ಟುತ್ತದೆ: “ನಿನ್ನ ವಾಕ್ಯವೇ ಸತ್ಯವು.” ಮತ್ತು ಬೈಬಲು ತಾನೇ ದೇವರಿಂದ ಪ್ರೇರಿತವಾದದ್ದು ಎಂಬದಾಗಿ ಹೇಳಿಕೊಳ್ಳುತ್ತದೆ.—ಯೋಹಾನ 17:17; 2 ತಿಮೊಥೆಯ 3:16.

ಇದರ ಕುರಿತು ನಿಮ್ಮ ಯೋಚನೆಯೇನು? ಬೈಬಲನ್ನು ನಂಬಲಿಕ್ಕೆ ಅಲ್ಲಿ ದೃಢವಾದ ಮೂಲಾಧಾರವು ಇದೆಯೋ? ಅಥವಾ ಅದು ನಂಬಲರ್ಹವಲ್ಲ, ವಿರೋಧೋಕ್ತಿಯುಳ್ಳದ್ದು ಮತ್ತು ಅಸಂಗತವಾಗಿದೆ ಎಂಬದಕ್ಕೆ ನಿಜವಾಗಿಯೂ ಏನಾದರೂ ರುಜುವಾತು ಇದೆಯೋ?

ಅದು ವಿರೋಧೋಕ್ತಿಯುಳ್ಳದ್ದೋ?

ಬೈಬಲಿನಲ್ಲಿ ವಿರೋಧೋಕ್ತಿಗಳಿವೆಯೆಂದು ಕೆಲವರು ವಾದಿಸುತ್ತಾರಾದರೂ, ಅದರ ಒಂದು ನಿಜ ಉದಾಹರಣೆಯನ್ನು ಯಾರೆಂದಾದರೂ ನಿಮಗೆ ತೋರಿಸಿದ್ದಾರೋ? ಸೂಕ್ಷ್ಮ ಪರಿಶೀಲನೆಯನ್ನು ಎದುರಿಸಶಕ್ತವಾದ ಯಾವುದೇ ಒಂದನ್ನು ನಾವೆಂದೂ ಕಂಡಿಲ್ಲ. ಕೆಲವು ನಿರ್ದಿಷ್ಟ ಬೈಬಲ್‌ ದಾಖಲೆಗಳಲ್ಲಿ ಸ್ವಲ್ಪ ಭಿನ್ನತೆಗಳು ತೋರುವಂತಿರಬಹುದು ನಿಜ. ಆದರೆ ಸಮಸ್ಯೆಯು ಸಾಮಾನ್ಯವಾಗಿ ವಿವರಣೆಗಳ ಮತ್ತು ಕಾಲದ ಪರಿಸ್ಥಿತಿಗಳ ಕುರಿತಾದ ತಿಳುವಳಿಕೆಯ ಕೊರತೆಯೇ ಆಗಿರುತ್ತದೆ.

ಉದಾಹರಣೆಗೆ, ಕೆಲವರು ತಾವು ಯಾವುದನ್ನು ಬೈಬಲಿನ ಒಂದು ಅಸಂಗತತೆಯೆಂದೆಣಿಸುತ್ತಾರೋ ಅದರ ಕಡೆಗೆ ಗಮನಸೆಳೆಯುತ್ತಾ ಅನ್ನುವುದು: ‘ಕಾಯಿನನಿಗೆ ಅವನ ಪತ್ನಿಯು ದೊರೆತದ್ದು ಎಲ್ಲಿಂದ?’ ಅವರ ಭಾವನೆಯೇನಂದರೆ ಆದಾಮ ಮತ್ತು ಹವ್ವರಿಗೆ ಕಾಯಿನ ಮತ್ತು ಹೇಬೆಲರಿಬ್ಬರೇ ಮಕ್ಕಳು ಎಂಬದಾಗಿ. ಈ ಭಾವನೆಯು ಬೈಬಲೇನನ್ನುತ್ತದೋ ಅದರ ಒಂದು ತಪ್ಪು ತಿಳುವಳಿಕೆಯಲ್ಲಿ ಆಧರಿತವಾಗಿದೆ. ‘ಆದಾಮನು ಗಂಡು ಹೆಣ್ಣುಮಕ್ಕಳನ್ನು ಪಡೆದನು’ ಎಂಬದಾಗಿ ಬೈಬಲು ವಿವರಿಸುತ್ತದೆ. (ಆದಿಕಾಂಡ 5:4) ಹೀಗೆ ಕಾಯಿನನು ತನ್ನ ಸಹೋದರಿಯರಲ್ಲಿ ಒಬ್ಬಳನ್ನು ಅಥವಾ ಸೋದರಸೊಸೆಯನ್ನು ಮದುವೆಯಾಗಿರಶಕ್ಯವಿದೆ.

ಟೀಕಾಕಾರರು ಹೆಚ್ಚಾಗಿ ವಿರೋಧೋಕ್ತಿಗಳಿಗಾಗಿಯೇ ಹುಡುಕುತ್ತಿರುತ್ತಾರಾದ್ದರಿಂದ ಒಂದು ವೇಳೆ ಹೀಗೆ ಕೇಳಲೂಬಹುದು: ‘ಯೇಸುವಿನೊಂದಿಗೆ ವಿನಂತಿ ಮಾಡಲು ಒಬ್ಬ ಸೇನಾಧಿಕಾರಿಯೂ ಬಂದನೆಂದು ಬೈಬಲ್‌ ಲೇಖಕ ಮತ್ತಾಯನು ಹೇಳುವಾಗ, ಲೂಕನಾದರೋ ವಿನಂತಿ ಮಾಡಲು ಬಂದವರು ಕೆಲವು ಪ್ರತಿನಿಧಿಗಳು ಎನ್ನುತ್ತಾನೆ. ಇದರಲ್ಲಿ ಯಾವುದು ಸತ್ಯ?’ (ಮತ್ತಾಯ 8:5, 6; ಲೂಕ 7:2, 3) ಆದರೆ ಇದು ನಿಜವಾಗಿಯೂ ಒಂದು ವಿರೋಧೋಕ್ತಿಯೋ?

ಜನರ ಚಟುವಟಿಕೆ ಅಥವಾ ಕೆಲಸವು ಯಾರು ಅದಕ್ಕೆ ನಿಜವಾಗಿ ಜವಾಬ್ದಾರನೋ ಅವನದ್ದಾಗಿ ಎಣಿಸಲ್ಪಡುವಾಗ, ವಿವೇಚನೆಯುಳ್ಳ ವ್ಯಕ್ತಿಯೊಬ್ಬನು ವಿಭಿನ್ನತೆಯನ್ನು ವಾದಿಸಲಾರನು. ಉದಾಹರಣೆಗೆ ಬೀದಿಯೊಂದು ಪೌರ ಸಭಾಧ್ಯಕ್ಷನಿಂದ ಕಟ್ಟಲ್ಪಟ್ಟಿತ್ತೆಂಬ ವರದಿ ಬರುತ್ತದೆ. ಆದರೆ ಅದನ್ನು ನಿಜವಾಗಿ ಕಟ್ಟಿದವರು ಅವನ ಶಿಲ್ಪಿಗಳು ಮತ್ತು ಕಾರ್ಮಿಕರು, ಹೀಗಿರಲಾಗಿ ಆ ವರದಿ ತಪ್ಪೆಂದು ನೀವು ಪರಿಗಣಿಸುವಿರೋ? ನಿಶ್ಚಯವಾಗಿ ಇಲ್ಲ! ತದ್ರೀತಿಯಲ್ಲಿ, ಯೇಸುವಿಗೆ ವಿನಂತಿಸಲು ಬಂದವನು ಸೇನಾಧಿಕಾರಿಯೆಂದು ಮತ್ತಾಯನು ಹೇಳುವಾಗ ಲೂಕನಾದರೋ, ನಿರ್ದಿಷ್ಟ ಪ್ರತಿನಿಧಿಗಳಿಂದ ಅದು ಮಾಡಲ್ಪಟ್ಟಿತ್ತೆಂದು ಬರೆದದರಲ್ಲಿ ಯಾವ ಅಸಂಗತತೆಯೂ ಇರಲಾರದು.

ಹೀಗೆ ಅಧಿಕ ವಿವರವು ತಿಳಿದಾಗ, ಬೈಬಲಿನಲ್ಲಿವೆಯೆಂದು ನೆನಸಲಾಗುವ ವಿಭಿನ್ನತೆಗಳು ಮಾಯವಾಗುತ್ತವೆ.

ಚರಿತ್ರೆ ಮತ್ತು ವಿಜ್ಞಾನ

ಬೈಬಲಿನ ಚಾರಿತ್ರಿಕ ಸತ್ಯತೆಯು ಒಂದು ಸಮಯದಲ್ಲಿ ವಿಸ್ತಾರವಾಗಿ ಸಂದೇಹಿಸಲ್ಪಟ್ಟಿತ್ತು. ಉದಾಹರಣೆಗೆ, ಅಶ್ಶೂರ್ಯದ ರಾಜ ಸಾರ್ಗೋನ್‌, ಬಬಿಲೋನಿನ ಬೇಲ್ಶೆಚ್ಚರ್‌, ರೋಮನ್‌ ರಾಜ್ಯಪಾಲ ಪೊಂತ್ಯ ಪಿಲಾತ ಮುಂತಾದ ಬೈಬಲ್‌ ವ್ಯಕ್ತಿಗಳ ಅಸ್ತಿತ್ವವನ್ನು ಟೀಕಾಕಾರರು ಪ್ರಶ್ನಿಸಿದ್ದರು. ಆದರೆ ಇತ್ತೀಚಿನ ಸಂಶೋಧನೆಗಳು ಬೈಬಲಿನ ವೃತ್ತಾಂತವನ್ನು ಒಂದರ ಹಿಂದೊಂದರಂತೆ ದೃಢೀಕರಿಸಿವೆ. ಹೀಗೆ, ಚರಿತ್ರೆಗಾರ ಮೋಶೆ ಪರ್ಲಮ್ಯಾನರು ಬರೆದದ್ದು: “ಹಳೇ ಒಡಂಬಡಿಕೆಯ ಚಾರಿತ್ರಿಕ ಭಾಗಗಳ ಪ್ರಾಮಾಣ್ಯವನ್ನು ಸಹ ಸಂದೇಹಿಸಿದ್ದ ಸಂದೇಹವಾದಿಗಳು, ಈಗ ತಟ್ಟನೆ, ತಮ್ಮ ನೋಟಗಳನ್ನು ಬದಲಾಯಿಸಲು ತೊಡಗಿದ್ದಾರೆ.”

ಬೈಬಲಿನಲ್ಲಿ ನಾವು ಭರವಸವಿಡಬೇಕಾದರೆ, ವೈಜ್ಞಾನಿಕ ವಿಷಯಗಳಲ್ಲೂ ಅದು ನಿಷ್ಕೃಷ್ಟವಾಗಿರಲೇಬೇಕು. ಅದು ಹಾಗೆ ಇದೆಯೋ? ಬೈಬಲಿಗೆ ಪ್ರತಿವಿರುದ್ಧವಾಗಿ, ವೈಜ್ಞಾನಿಕರು ಸ್ವಲ್ಪವೇ ಹಿಂದೆ ಕಂಠೋಕ್ತವಾಗಿ ಹೇಳುತ್ತಿದ್ದರೇನಂದರೆ ವಿಶ್ವಕ್ಕೆ ಒಂದು ಪ್ರಾರಂಭವಿರಲಿಲ್ಲವೆಂಬದಾಗಿ. ಆದರೆ, ಇದನ್ನು ತಪ್ಪೆಂದು ಸಿದ್ಧಮಾಡಿದ ಹೊಸ ಸಮಾಚಾರಕ್ಕೆ ಸೂಚಿಸುತ್ತಾ ಜ್ಯೋತಿಶ್ಶಾಸ್ತ್ರಿ ರಾಬರ್ಟ್‌ ಜ್ಯಾಸ್ಟ್ರೋ ಇತ್ತೀಚೆಗೆ ಹೇಳಿದ್ದು: “ಜ್ಯೋತಿಶ್ಶಾಸ್ತ್ರ ರುಜುವಾತು ನಮ್ಮನ್ನು ವಿಶ್ವದಾರಂಭದ ಕುರಿತಾದ ಬೈಬಲಿನ ನೋಟದ ಕಡೆಗೆ ಹೇಗೆ ನಡಿಸುತ್ತೆಂಬುದನ್ನು ನಾವೀಗ ಕಾಣುತ್ತೇವೆ. ವಿವರಗಳು ಭಿನ್ನವಾಗಿವೆ, ಆದರೆ ಜ್ಯೋತಿಶ್ಶಾಸ್ತ್ರ ಮತ್ತು ಬೈಬಲಿನ ಆದಿಕಾಂಡ ವೃತ್ತಾಂತಗಳ ಮೂಲಘಟಕಗಳು ಒಂದೇ.”—ಆದಿಕಾಂಡ 1:1.

ಭೂಮಿಯ ಆಕಾರದ ವಿಷಯವಾದ ತಮ್ಮ ನೋಟಗಳನ್ನು ಸಹ ಜನರು ಬದಲಾಯಿಸಿದ್ದಾರೆ. ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲೊಪೀಡಿಯ ಅನ್ನುವುದು: “ಸಂಶೋಧಕ ನೌಕಾಯಾನಗಳು ಭೂಮಿಯು ಗೋಲಾಕಾರದಲ್ಲಿದೆ ಎಂದು ತೋರಿಸಿದೆ, ಅಧಿಕಾಂಶ ಜನರು ನಂಬಿದ್ದ ಪ್ರಕಾರ ಚಪ್ಪಟೆಯಲ್ಲ.” ಆದರೆ ಬೈಬಲು ಮೊದಲಿನಿಂದಲೂ ಸತ್ಯವೇ ಆಗಿರುತ್ತದೆ! ಆ ನೌಕಾಯಾನಗಳಿಗಿಂತ 2,000 ವರ್ಷಕ್ಕಿಂತಲೂ ಹೆಚ್ಚು ಮುಂಚೆಯೇ, ಯೆಶಾಯ 40:22ರಲ್ಲಿ (NW) ಬೈಬಲು ಅಂದದ್ದು: “ಭೂಮಿಯ ವೃತ್ತದ ಮೇಲೆ ನಿವಾಸಿಸುವಾತನಾದ ಒಬ್ಬನಿದ್ದಾನೆ.” ಇತರ ತರ್ಜುಮೆಗಳು “ಭೂ ಮಂಡಲ” (ಡುಏ), “ಉರುಟು ಭೂಮಿ” (ಮೊಫಟ್‌) ಎಂದು ಹೇಳಿವೆ.

ಹೀಗೆ ಜನರು ಹೆಚ್ಚನ್ನು ಕಲಿತಷ್ಟಕ್ಕೆ ಬೈಬಲಿನ ಭರವಸೆಯೋಗ್ಯತೆಗೆ ಇನ್ನಷ್ಟು ಹೆಚ್ಚು ರುಜುವಾತು ಅಲ್ಲಿದೆ. ಬ್ರಿಟಿಷ್‌ ಮ್ಯೂಸಿಯಂನ ಮಾಜಿ ಡೈರೆಕ್ಟರ್‌ ಸರ್‌ ಫ್ರೆಡರಿಕ್‌ ಕೆನ್ಯನ್‌ ಬರೆದದ್ದು: “ಏನನ್ನು ನಂಬಿಕೆಯು ಸೂಚಿಸುತ್ತದೋ ಅದನ್ನು ಈವಾಗಲೇ ಗಳಿಸಿದ ಫಲಿತಾಂಶಗಳು ದೃಢೀಕರಿಸುತ್ತವೆ; ಅದೇನೆಂದರೆ ಜ್ಞಾನದ ವೃದ್ಧಿಯಿಂದ ಬೈಬಲಿಗೆ ಲಾಭವೇ ಅಲ್ಲದೆ ಬೇರೇನಿಲ್ಲ.”

ಭವಿಷ್ಯತ್ತನ್ನು ಮುಂತಿಳಿಸುವದು

ಆದರೆ ಭವಿಷ್ಯತ್ತಿಗಾಗಿರುವ ಬೈಬಲಿನ ಕಾಲಜ್ಞಾನಗಳನ್ನು ‘ನೀತಿಯುಳ್ಳ ಹೊಸ ಆಕಾಶ ಮತ್ತು ಹೊಸ ಭೂಮಿಯ’ ಅದರ ವಾಗ್ದಾನಗಳನ್ನೂ ನಾವು ನಿಜವಾಗಿ ನಂಬಬಹುದೋ? (2 ಪೇತ್ರ 3:13; ಪ್ರಕಟನೆ 21:3, 4) ಒಳ್ಳೇದು, ಗತಕಾಲದಲ್ಲಿ ಬೈಬಲಿನ ನಂಬಲರ್ಹತೆಯ ದಾಖಲೆಯ ಕುರಿತಾಗಿ ಏನು? ನೂರಾರು ವರ್ಷಗಳ ಪೂರ್ವದಲ್ಲಿ ನುಡಿಯಲ್ಪಟ್ಟ ಪ್ರವಾದನೆಗಳು ಸಹ ತಪ್ಪಿಲ್ಲದೆ ಪೂರ್ಣವಾಗಿ ನೆರವೇರಿದ ಅನೇಕ ಸಂದರ್ಭಗಳು ಅಲ್ಲಿದ್ದವು!

ಉದಾಹರಣೆಗೆ, ಮಹಾ ಬಾಬೆಲಿನ ದೊಬ್ಬುವಿಕೆಯನ್ನು ಅದು ಸಂಭವಿಸುವ ಸುಮಾರು 200 ವರ್ಷ ಮುಂಚಿತವಾಗಿ ಬೈಬಲು ಮುಂತಿಳಿಸಿತ್ತು. ವಾಸ್ತವದಲ್ಲಿ, ಪರ್ಶಿಯನರೊಂದಿಗೆ ಮೈತ್ರಿ ಬೆಳೆಸಿದ ಮೇದ್ಯರು ಅದನ್ನು ದೊಬ್ಬಿಬಿಡುವವರಾಗಿ ಹೆಸರಿಸಲ್ಪಟ್ಟಿದ್ದರು. ಪರ್ಶಿಯದ ರಾಜನಾದ ಕೋರೇಷನ ಜನನವಿನ್ನೂ ಆಗ ಆಗಿರದಿದ್ದರೂ ಅವನು ಆ ವಿಜಯದಲ್ಲಿ ಪ್ರಾಮುಖ್ಯನಾಗಿರುವುದನ್ನು ಬೈಬಲು ಮುಂತಿಳಿಸಿತ್ತು. ಬಾಬೆಲಿನ ಆಶ್ರಯ ಜಲವಾಗಿದ್ದ ಯೂಫ್ರೆಟೀಸ್‌ ನದಿಯು “ಬತ್ತಿಹೋಗು”ವುದೆಂದೂ ಮತ್ತು “(ಬಾಬೆಲಿನ) ಹೆಬ್ಬಾಗಿಲುಗಳು ಮುಚ್ಚಲ್ಪಡಲಾರವೆಂದು” ಅದು ನುಡಿದಿತ್ತು.—ಯೆರೆಮೀಯ 50:38; ಯೆಶಾಯ 13:17-19; 44:27–45:1.

ಈ ವಿಶಿಷ್ಟ ವಿವರಗಳೆಲ್ಲಾ ನೆರವೇರಿದವೆಂಬದಾಗಿ ಚರಿತ್ರೆಗಾರ ಹೆರಾಡಟಸನೂ ವರದಿ ಮಾಡಿದ್ದಾನೆ. ಅದಲ್ಲದೆ ಬಬಿಲೋನು ಕಟ್ಟಕಡೆಗೆ ಜನನಿವಾಸವಿಲ್ಲದ ದಿಬ್ಬವಾಗುವುದೆಂದು ಬೈಬಲ್‌ ಮುಂತಿಳಿಸಿತ್ತು. ಅದಕ್ಕೆ ಸಂಭವಿಸಿದ್ದೂ ಅದೇ. ಇಂದು ಬಬಿಲೋನು ನಿರ್ಜನವಾದ ಹಾಳು ದಿಬ್ಬವಾಗಿ ಬಿದ್ದಿರುತ್ತದೆ. (ಯೆಶಾಯ 13:20-22; ಯೆರೆಮೀಯ 51:37, 41-43) ಈ ರೀತಿ ವಿಸ್ಮಯಕರ ನೆರವೇರಿಕೆಯನ್ನು ಪಡೆದ ಇನ್ನೂ ಅನೇಕ ಪ್ರವಾದನೆಗಳಿಂದ ಬೈಬಲು ತುಂಬಿರುತ್ತದೆ.

ಸದ್ಯದ ಲೋಕದ ವಿಷಯ ವ್ಯವಸ್ಥೆಯ ಕುರಿತಾಗಿ ಬೈಬಲು ಮುಂತಿಳಿಸಿರುವುದೇನು? ಅದನ್ನುವುದು: “ಈ ಲೋಕದ ಕೊನೆಯ ಯುಗವು ತೊಂದರೆಗಳಿಂದ ತುಂಬಿರುವ ಸಮಯವಾಗಿರುವುದು. ಮನುಷ್ಯರು ತಮ್ಮನ್ನೂ ಹಣವನ್ನೂ ಅಲ್ಲದೆ ಬೇರೇನನ್ನೂ ಪ್ರೀತಿಸರು; ಅವರು ಅಹಂಕಾರಿಗಳೂ ಬಡಾಯಿಕೋರರೂ ದೂಷಕರೂ ಆಗಿರುವರು; ಹೆತ್ತವರನ್ನು ಗೌರವಿಸದವರೂ ಕೃತಜ್ಞತೆಯಿಲ್ಲದವರೂ ಕರುಣಾರಹಿತರೂ ಮಮತೆ ಶೂನ್ಯರೂ ಆಗಿದ್ದು . . . ದೇವರ ಬದಲಾಗಿ ಭೋಗಗಳನ್ನು ಪ್ರೀತಿಸುವವರೂ ಧರ್ಮದ ವೇಷವನ್ನು ಧರಿಸಿಕೊಂಡು ಅದರ ವಾಸ್ತವಿಕತೆಯನ್ನು ಅಲ್ಲಗಳೆಯುವವರೂ ಆಗಿರುವರು.”—2 ತಿಮೊಥೆಯ 3:1-5, ದ ನ್ಯೂ ಇಂಗ್ಲಿಷ್‌ ಬೈಬಲ್‌.

ನಾವಿಂದು ಇದರ ನೆರವೇರಿಕೆಯನ್ನು ನಿಶ್ಚಯವಾಗಿಯೂ ಕಾಣುತ್ತಿದ್ದೇವೆ! ಆದರೆ “ಲೋಕದ ಕೊನೆಯ ಯುಗ”ಕ್ಕಾಗಿ ಬೈಬಲು ಇದನ್ನೂ ಮುಂತಿಳಿಸಿದೆ: “ಜನಕ್ಕೆ ವಿರೋಧವಾಗಿ ಜನವೂ, ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು; ಮತ್ತು ಅಲ್ಲಲ್ಲಿ ಬರಗಳು ಬರುವವು.” ಅದಲ್ಲದೆ “ಮಹಾಭೂಕಂಪಗಳಾಗವುವು. ಒಂದಾದ ಮೇಲೆ ಇನ್ನೊಂದು ಸ್ಥಳದಲ್ಲಿ ಅಂಟುರೋಗಗಳು ಬರುವವು.”—ಮತ್ತಾಯ 24:7; ಲೂಕ 21:11, NW.

ಬೈಬಲ್‌ ಪ್ರವಾದನೆಗಳು ಇಂದು ನಿಶ್ಚಯವಾಗಿಯೂ ನೆರವೇರಿಕೆಯನ್ನು ಪಡೆಯುತ್ತಾ ಇವೆ! ಹಾಗಾದರೆ, “ನೀತಿವಂತರೋ, ಭೂಮಿಯನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು” ಮತ್ತು ‘ಅವರು ಕತ್ತಿಗಳನ್ನು ಗುಳಗಳನ್ನಾಗಿ ಮಾಡುವರು . . . ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ’ ಮುಂತಾದ ಇನ್ನೂ ನೆರವೇರದೇ ಇರುವ ವಾಗ್ದಾನಗಳ ಕುರಿತಾಗಿಯೇನು?—ಕೀರ್ತನೆ 37:29; ಯೆಶಾಯ 2:4.

‘ಅದನ್ನು ನಂಬುವುದು ಕಷ್ಟ’ ಎಂದು ಕೆಲವರನ್ನಬಹುದು. ಆದರೆ ನಮ್ಮ ನಿರ್ಮಾಣಿಕನು ವಾಗ್ದಾನಿಸುವ ಯಾವದನ್ನಾದರೂ ಸಂದೇಹಿಸಲು ನಮಗೆ ನಿಜವಾಗಿ ಯಾವ ಕಾರಣವೂ ಇಲ್ಲ. ಆತನ ವಾಕ್ಯವು ಭರವಸಯೋಗ್ಯವು! (ತೀತ 1:2) ರುಜುವಾತನ್ನು ಅಧಿಕ ಪರೀಶೀಲಿಸುವ ಮೂಲಕವಾಗಿ ನಿಮಗದು ಇನ್ನಷ್ಟು ದೃಢೀಕರಿಸಲ್ಪಡುವುದು.

ಬೇರೆ ರೀತಿಯಲ್ಲಿ ಸೂಚಿಸಲ್ಪಡದಿರುವಲ್ಲಿ, ಬೈಬಲಿನ ಉದ್ಧರಣೆಗಳೆಲ್ಲವೂ ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಆಫ್‌ ದ ಹೋಲಿ ಸ್ಕ್ರಿಪ್ಚರ್ಸ್‌ನಿಂದ ತೆಗೆದವುಗಳು.

[ಪುಟ 5 ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಏನನ್ನು ನಂಬಿಕೆಯು ಸೂಚಿಸುತ್ತದೋ ಅದನ್ನು ಈವಾಗಲೇ ಗಳಿಸಿದ ಫಲಿತಾಂಶಗಳು ದೃಢೀಕರಿಸುತ್ತವೆ; ಅದೇನೆಂದರೆ, ಜ್ಞಾನದ ವೃದ್ಧಿಯಿಂದ ಬೈಬಲ್‌ಗೆ ಲಾಭವೇ ಅಲ್ಲದೆ ಬೇರೇನಿಲ್ಲ.”