ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಅದು ಸತ್ಯವಾಗಿರಸಾಧ್ಯವಿಲ್ಲ!”

“ಅದು ಸತ್ಯವಾಗಿರಸಾಧ್ಯವಿಲ್ಲ!”

ನ್ಯೂ ಯಾರ್ಕ್‌ (ಅಮೆರಿಕ) ನ ಒಬ್ಬನು ಹೇಳುವುದು: “ನನ್ನ ಮಗ ಜಾನತನ್‌ ಕೆಲವು ಮೈಲು ದೂರದಲ್ಲಿದ್ದ ಮಿತ್ರರನ್ನು ಭೇಟಿ ಮಾಡುತ್ತಿದ್ದ. ನನ್ನ ಹೆಂಡತಿ ವಾಲೆಂಟೀನಳಿಗೆ ಅವನು ಅಲ್ಲಿ ಹೋಗುವುದು ಇಷ್ಟವಿರಲಿಲ್ಲ. ಆಕೆ ವಾಹನ ಸಂಚಾರದ ವಿಷಯ ಸದಾ ಭಯಪಡುತ್ತಿದ್ದಳು. ಆದರೆ ಅವನಿಗೆ ಎಲೆಕ್ಟ್ರಾನಿಕ್ಸ್‌ ಇಷ್ಟವಾಗಿತ್ತು, ಮತ್ತು ಅವನ ಮಿತ್ರರಿಗೆ ಒಂದು ಕಾರ್ಯಾಗಾರವಿತ್ತು ಮತ್ತು ಅಲ್ಲಿ ಅವನು ಪ್ರಾಯೋಗಿಕ ಅನುಭವವನ್ನು ಪಡೆಯಸಾಧ್ಯವಿತ್ತು. ನಾನು ನ್ಯೂ ಯಾರ್ಕಿನ ವೆಸ್ಟ್‌ ಮ್ಯಾನಹಾಟನ್‌ನಲ್ಲಿ ಮನೆಯಲ್ಲಿದ್ದೆ. ನನ್ನ ಹೆಂಡತಿ ತನ್ನ ಕುಟುಂಬಕ್ಕೆ ಭೇಟಿಕೊಡಲು ಪೋರ್ಟ ರೀಕೊಗೆ ಹೋಗಿದ್ದಳು. ‘ಜಾನತನ್‌ ಬೇಗ ಬರುವನು,’ ಎಂದು ನಾನು ಯೋಚಿಸಿದೆ. ಆಗ ಬಾಗಿಲ ಗಂಟೆ ಮೊಳಗಿತು. ‘ಅದು ಅವನು ಖಂಡಿತ.’ ಆದರೆ ಅವನಾಗಿರಲಿಲ್ಲ. ಅವರು ಪೊಲೀಸರು ಮತ್ತು ತುರ್ತು ವೈದ್ಯಕೀಯ ಕಾರ್ಮಿಕರಾಗಿದ್ದರು. ‘ಈ ಡ್ರೈವರನ ಲೈಸನ್ಸನ್ನು ಗುರುತಿಸುತ್ತೀರಾ?’ ಎಂದು ಕೇಳಿದ ಪೊಲೀಸ್‌ ಆಫೀಸರ್‌. ‘ಹೌದು. ಅದು ನನ್ನ ಮಗನದ್ದು, ಜಾನತನ್‌ನದ್ದು.’ ‘ನಿಮಗೆ ಕೊಡಲಿಕ್ಕಾಗಿ ನಮ್ಮಲ್ಲಿ ಕೆಟ್ಟ ಸುದ್ದಿ ಇದೆ. ಒಂದು ಅಪಘಾತ ನಡೆದಿದೆ. ಮತ್ತು . . . ನಿಮ್ಮ ಮಗ, . . . ನಿಮ್ಮ ಮಗ ಕೊಲ್ಲಲ್ಪಟ್ಟಿದ್ದಾನೆ.’ ನನ್ನ ಪ್ರಥಮ ಪ್ರತಿಕ್ರಿಯೆ, ‘ಅದು ಸತ್ಯವಾಗಿರಸಾಧ್ಯವಿಲ್ಲ!’ ಎಂದಾಗಿತ್ತು. ಆ ಭಯಂಕರ ಸುದ್ದಿ ನಮ್ಮ ಹೃದಯಗಳಲ್ಲಿ ಒಂದು ಗಾಯವನ್ನು, ವರ್ಷಗಳಾನಂತರ ಈಗ ಸಹ ವಾಸಿಯಾಗುತ್ತಾ ಇರುವ ಒಂದು ಗಾಯವನ್ನು ಉಂಟುಮಾಡಿತು.”

‘ನಿಮಗೆ ಕೊಡಲಿಕ್ಕಾಗಿ ನಮ್ಮಲ್ಲಿ ಕೆಟ್ಟ ಸುದ್ದಿ ಇದೆ. ಒಂದು ಅಪಘಾತ ನಡೆದಿದೆ. ಮತ್ತು . . . ನಿಮ್ಮ ಮಗ, . . . ನಿಮ್ಮ ಮಗ ಕೊಲ್ಲಲ್ಪಟ್ಟಿದ್ದಾನೆ.’

ಬಾರ್ಸಲೋನ (ಸ್ಪೆಯ್ನ್‌)ದ ಒಬ್ಬ ತಂದೆ ಬರೆಯುವುದು: “ಹಿಂದೆ 1960 ಗಳ ಸ್ಪೆಯ್ನ್‌ನಲ್ಲಿ, ನಾವು ಒಂದು ಸಂತುಷ್ಟ ಕುಟುಂಬವಾಗಿದ್ದೆವು. ನನ್ನ ಹೆಂಡತಿ ಮರೀಯ ಮತ್ತು ಅನುಕ್ರಮವಾಗಿ 13, 11, ಮತ್ತು 9 ವಯಸ್ಸಿನ ಡಾವೀಡ್‌, ಪಕೀಟೊ ಮತ್ತು ಈಸಬೆಲ್‌ ಎಂಬ ನಮ್ಮ ಮೂವರು ಮಕ್ಕಳು.

“ಮಾರ್ಚ್‌ 1963 ರಲ್ಲಿ ಒಂದು ದಿನ, ಪಕೀಟೊ ತೀವ್ರ ತಲೆಶೂಲೆಯಿದೆಯೆಂದು ಹೇಳುತ್ತಾ ಶಾಲೆಯಿಂದ ಮನೆಗೆ ಬಂದ. ಇದಕ್ಕೆ ಕಾರಣವೇನಾಗಿರಬಹುದೆಂದು ನಾವು ದಿಗಿಲುಗೊಂಡೆವು—ಆದರೆ ಹೆಚ್ಚು ಕಾಲಕ್ಕಲ್ಲ. ಮೂರು ತಾಸುಗಳು ಕಳೆದಾಗ ಅವನು ಸತ್ತಿದ್ದನು. ಮಿದುಳಿನ ರಕ್ತಸ್ರಾವ ಅವನ ಜೀವವನ್ನು ನಂದಿಸಿತ್ತು.

“ಪಕೀಟೊವಿನ ಸಾವು ಸಂಭವಿಸಿದ್ದು 30 ವರ್ಷಗಳ ಹಿಂದೆ. ಆದರೂ ಆ ನಷ್ಟದ ಆಳವಾದ ಬೇನೆ ಈ ದಿನವೂ ನಮ್ಮೊಂದಿಗಿದೆ. ಹೆತ್ತವರು ಒಂದು ಮಗುವನ್ನು ಕಳೆದುಕೊಂಡು ತಮ್ಮದಾದ ಯಾವುದೋ ನಷ್ಟವಾಗಿ ಹೋಗಿದೆ ಎಂದು ನೆನಸದಿರುವುದು—ಎಷ್ಟೇ ಸಮಯ ದಾಟಿರಲಿ ಅಥವಾ ಅವರಿಗೆ ಬೇರೆ ಎಷ್ಟೇ ಮಕ್ಕಳು ಇರಲಿ—ಅಸಾಧ್ಯ.”

ಹೆತ್ತವರು ಮಕ್ಕಳನ್ನು ಕಳೆದುಕೊಂಡ ಈ ಎರಡು ಅನುಭವಗಳು, ಒಂದು ಮಗು ಸಾಯುವಾಗ ಆಗುವ ಗಾಯವು ಎಷ್ಟು ಆಳ ಮತ್ತು ಎಷ್ಟು ಶಾಶ್ವತ ಎಂಬುದನ್ನು ಚಿತ್ರಿಸುತ್ತವೆ. ಹೀಗೆಂದು ಬರೆದ ಒಬ್ಬ ವೈದ್ಯರ ಮಾತುಗಳು ಎಷ್ಟು ಸತ್ಯ: “ಒಂದು ಮಗುವಿನ ಮರಣವು ಒಬ್ಬ ಪ್ರಾಯಸ್ಥನ ಮರಣಕ್ಕಿಂತ ಸಾಮಾನ್ಯವಾಗಿ ಹೆಚ್ಚು ಶೋಕಭರಿತ ಮತ್ತು ಯಾತನಾಮಯ, ಏಕೆಂದರೆ ಒಂದು ಮಗು ಕುಟುಂಬದಲ್ಲಿ ಕೊನೆಯದಾಗಿ ಸಾಯುವಂತೆ ನಿರೀಕ್ಷಿಸಲ್ಪಡುವ ವ್ಯಕ್ತಿಯಾಗಿದೆ. . . . ಯಾವುದೇ ಒಂದು ಮಗುವಿನ ಸಾವು, ಇನ್ನೂ ಅನುಭವಿಸಲಾಗಿಲ್ಲದ ಭಾವೀ ಸ್ವಪ್ನಗಳ, ಸಂಬಂಧಗಳ [ಮಗ, ಸೊಸೆ, ಮೊಮ್ಮಕ್ಕಳು], ಅನುಭವಗಳ ನಷ್ಟವನ್ನು ಪ್ರತಿನಿಧೀಕರಿಸುತ್ತದೆ.” ಮತ್ತು ಇಂತಹ ಅಗಾಧವಾದ ನಷ್ಟ ಪ್ರಜ್ಞೆ ಅಕಾಲ ಪ್ರಸವದಿಂದ ಶಿಶು ನಷ್ಟವಾದ ಯಾವುದೇ ಸ್ತ್ರೀಗೂ ಅನ್ವಯಿಸಬಲ್ಲದು.

ಒಬ್ಬ ವಿರಹಿಯಾದ ಪತ್ನಿ ವಿವರಿಸುವುದು: “ನನ್ನ ಗಂಡ ರಸೆಲ್‌, II ನೆಯ ಲೋಕ ಯುದ್ಧದಲ್ಲಿ ಶಾಂತ ಸಾಗರ ಯುದ್ಧಕ್ಷೇತ್ರದಲ್ಲಿ ವೈದ್ಯಕೀಯ ಸಹಾಯಕನಾಗಿ ಸೇವೆ ಮಾಡುತ್ತಿದ್ದರು. ಅವರು ಕೆಲವು ಭಯಂಕರ ಕದನಗಳನ್ನು ನೋಡಿ, ಪಾರಾಗಿದ್ದರು. ಅವರು ಅಮೆರಿಕಕ್ಕೆ ಮತ್ತು ಹೆಚ್ಚು ಪ್ರಶಾಂತ ಜೀವನಕ್ಕೆ ಹಿಂದೆ ಬಂದರು. ತರುವಾಯ ಅವರು ದೇವರ ವಾಕ್ಯದ ಶುಶ್ರೂಷಕರಾಗಿ ಸೇವೆ ಮಾಡಿದರು. ಅವರ 60 ಗಳ ಪ್ರಾಯದ ಆದಿಭಾಗದಲ್ಲಿ, ಅವರಲ್ಲಿ ಹೃದಯ ಸಮಸ್ಯೆಯ ಸೂಚನೆಗಳು ಆರಂಭಗೊಂಡವು. ಅವರು ಒಂದು ಸಕ್ರಿಯ ಜೀವನವನ್ನು ನಡೆಸಲು ಪ್ರಯತ್ನಿಸಿದರು. ಬಳಿಕ, ಜುಲೈ 1998 ರಲ್ಲಿ ಒಂದು ದಿನ, ಅವರಿಗೆ ಒಂದು ಭಾರೀ ಹೃದಯಾಘಾತವಾಗಿ ಅವರು ಸತ್ತರು. ಅವರ ಮರಣನಷ್ಟ ಧ್ವಂಸಕಾರಕವಾಗಿತ್ತು. ನನಗೆ ಅವರನ್ನು ಬೀಳ್ಕೊಡಲೂ ಆಗಲಿಲ್ಲ. ಅವರು ನನಗೆ ಕೇವಲ ಗಂಡನಾಗಿರಲಿಲ್ಲ. ನನ್ನ ಅತ್ಯುತ್ತಮ ಸ್ನೇಹಿತರಾಗಿದ್ದರು. ನಾವು ನಮ್ಮ ಜೀವನದಲ್ಲಿ 40 ವರ್ಷ ಭಾಗಿಗಳಾಗಿದ್ದೆವು. ಈಗ ನನಗೆ ಒಂದು ವಿಶೇಷ ಒಂಟಿತನವನ್ನು ಎದುರಿಸಬೇಕೆಂಬಂತೆ ತೋರಿತು.”

ಪ್ರತಿದಿನ ಲೋಕಾದ್ಯಂತ ಕುಟುಂಬಗಳನ್ನು ಹೊಡೆಯುವ ಸಾವಿರಾರು ದುರಂತಗಳಲ್ಲಿ ಇವು ಕೇವಲ ಕೆಲವು. ದುಃಖಿಸುತ್ತಿರುವ ಅಧಿಕಾಂಶ ಜನರು ನಿಮಗೆ ಹೇಳುವಂತೆ, ಮರಣವು ನಿಮ್ಮ ಮಗುವನ್ನೊ, ನಿಮ್ಮ ಗಂಡನನ್ನೊ, ನಿಮ್ಮ ಹೆಂಡತಿಯನ್ನೊ, ನಿಮ್ಮ ಹೆತ್ತವರನ್ನೊ, ನಿಮ್ಮ ಸ್ನೇಹಿತರನ್ನೊ ಕೊಂಡೊಯ್ಯುವಾಗ, ಅದು ಸತ್ಯವಾಗಿಯೂ, ಕ್ರೈಸ್ತ ಲೇಖಕ ಪೌಲನು ಕರೆದಂತೆ, “ಕಡೇ ಶತ್ರು” ವಾಗಿದೆ. ಅನೇಕ ವೇಳೆ ಆ ಭಯಂಕರ ವಾರ್ತೆಗೆ ಪ್ರಥಮ ಸ್ವಾಭಾವಿಕ ಪ್ರತಿಕ್ರಿಯೆಯು, “ಅದು ಸತ್ಯವಾಗಿರಸಾಧ್ಯವಿಲ್ಲ! ಅದನ್ನು ನಾನು ನಂಬುವುದಿಲ್ಲ,” ಎಂಬ ನಿರಾಕರಣೆಯಾಗಿರಬಹುದು. ಅನೇಕ ವೇಳೆ, ನಾವು ನೋಡಲಿರುವಂತೆ, ಇತರ ಪ್ರತಿಕ್ರಿಯೆಗಳು ಹಿಂಬಾಲಿಸಿ ಬರುತ್ತವೆ.—1 ಕೊರಿಂಥ 15:25, 26.

ಆದರೂ, ದುಃಖದ ಅನಿಸಿಕೆಗಳನ್ನು ನಾವು ಪರಿಗಣಿಸುವ ಮೊದಲು, ಕೆಲವು ಪ್ರಾಮುಖ್ಯ ಪ್ರಶ್ನೆಗಳನ್ನು ನಾವು ಉತ್ತರಿಸೋಣ. ಮರಣವೆಂದರೆ ಆ ವ್ಯಕ್ತಿಯ ಅಂತ್ಯವೆಂದು ಅರ್ಥವೊ? ನಮ್ಮ ಪ್ರಿಯರನ್ನು ನಾವು ಪುನಃ ನೋಡಬಲ್ಲೆವೆಂಬುದಕ್ಕೆ ಯಾವ ನಿರೀಕ್ಷೆಯಾದರೂ ಇದೆಯೆ?

ಒಂದು ನಿಜ ನಿರೀಕ್ಷೆ ಇದೆ

ಬೈಬಲ್‌ ಲೇಖಕ ಪೌಲನು, ಆ “ಕಡೇ ಶತ್ರು” ವಿನಿಂದ ಉಪಶಮನದ ನಿರೀಕ್ಷೆಯನ್ನು ನೀಡಿದನು. ಅವನು ಬರೆದುದು: “ಮರಣವು ಶೂನ್ಯತೆಗೆ ತರಲ್ಪಡಲಿರುತ್ತದೆ.” “ತೆಗೆದುಹಾಕಲ್ಪಡಬೇಕಾದ ಕೊನೆಯ ವಿರೋಧಿಯು ಮರಣವಾಗಿದೆ.” (1 ಕೊರಿಂಥ 15:26, ದ ನ್ಯೂ ಇಂಗ್ಲಿಷ್‌ ಬೈಬಲ್‌) ಪೌಲನು ಇದರ ಬಗೆಗೆ ಅಷ್ಟು ಖಾತ್ರಿಯಾಗಿರ ಸಾಧ್ಯವಾದದ್ದು ಏಕೆ? ಏಕೆಂದರೆ ಸತ್ತವರೊಳಗಿಂದ ಎಬ್ಬಿಸಲ್ಪಟ್ಟಿದ್ದ ಯೇಸು ಕ್ರಿಸ್ತನು ಅವನಿಗೆ ಕಲಿಸಿದ್ದನು. (ಅ. ಕೃತ್ಯಗಳು 9:3-19) ಪೌಲನು ಈ ಕಾರಣದಿಂದ ಸಹ ಹೀಗೆ ಬರೆಯಸಾಧ್ಯವಿತ್ತು: “ಮನುಷ್ಯ [ಆದಾಮ]ನ ಮೂಲಕ ಮರಣವು ಉಂಟಾದ ಕಾರಣ ಮನುಷ್ಯ [ಯೇಸು ಕ್ರಿಸ್ತ]ನ ಮೂಲಕ ಸತ್ತವರಿಗೆ ಪುನರುತ್ಥಾನವುಂಟಾಗುವುದು.”—1 ಕೊರಿಂಥ 15:21, 22.

ಯೇಸು ನಾಯಿನಿನ ವಿಧವೆಯೊಬ್ಬಳನ್ನು ಭೇಟಿಯಾಗಿ ಆಕೆಯ ಸತ್ತಿದ್ದ ಮಗನನ್ನು ನೋಡಿದಾಗ ಅತಿಯಾಗಿ ದುಃಖಪಟ್ಟನು. ಬೈಬಲಿನ ವೃತ್ತಾಂತ ನಮಗನ್ನುವುದು: “ಆತನು [ಯೇಸು] [ನಾಯಿನ್‌] ಊರಬಾಗಲಿನ ಹತ್ತಿರಕ್ಕೆ ಬಂದಾಗ ಸತ್ತಹೋಗಿದ್ದ ಒಬ್ಬನನ್ನು ಹೊರಗೆ ತರುತ್ತಿದ್ದರು. ಇವನು ತನ್ನ ತಾಯಿಗೆ ಒಬ್ಬನೇ ಮಗನು; ಆಕೆಯು ಗಂಡಸತ್ತವಳಾಗಿದ್ದಳು. ಆಕೆಯ ಸಂಗಡ ಗ್ರಾಮಸ್ಥರು ಅನೇಕರಿದ್ದರು. ಸ್ವಾಮಿಯು ಆಕೆಯನ್ನು ಕಂಡು ಕನಿಕರಿಸಿ—ಅಳಬೇಡ ಎಂದು ಆಕೆಗೆ ಹೇಳಿ ಚಟ್ಟದ ಹತ್ತಿರಕ್ಕೆ ಹೋಗಿ ಅದನ್ನು ಮುಟ್ಟಲು ಹೊತ್ತುಕೊಂಡವರು ನಿಂತರು. ಆಗ ಆತನು—ಯೌವನಸ್ಥನೇ, ಏಳು ಎಂದು ನಿನಗೆ ಹೇಳುತ್ತೇನೆ ಅಂದನು. ಅನ್ನುತ್ತಲೇ ಸತ್ತಿದ್ದವನು ಎದ್ದು ಕೂತುಕೊಂಡು ಮಾತಾಡುವದಕ್ಕೆ ತೊಡಗಿದನು. ಯೇಸು ಅವನನ್ನು ಅವನ ತಾಯಿಗೆ ಕೊಟ್ಟನು. ಎಲ್ಲರು ಭಯಹಿಡಿದವರಾಗಿ—ಮಹಾ ಪ್ರವಾದಿಯು ನಮ್ಮಲ್ಲಿ ಎದ್ದಿದ್ದಾನೆ, ದೇವರು ತನ್ನ ಜನರಿಗೆ ದರ್ಶನವನ್ನು ಅನುಗ್ರಹಿಸಿದ್ದಾನೆ ಎಂದು ದೇವರನ್ನು ಕೊಂಡಾಡುವವರಾದರು.” ಆ ವಿಧವೆಯ ಮಗನನ್ನು ಪುನರುತ್ಥಾನಗೊಳಿಸುವರೆ ಯೇಸು ಹೇಗೆ ಕನಿಕರದಿಂದ ಪ್ರಚೋದಿತನಾದನೆಂದು ಗಮನಿಸಿರಿ! ಅದು ಭವಿಷ್ಯತ್ತಿಗೆ ಕೊಡುವ ಮುನ್‌ ಸೂಚನೆಯನ್ನು ಭಾವಿಸಿರಿ!—ಲೂಕ 7:12-16

ಅಲ್ಲಿ, ಪ್ರತ್ಯಕ್ಷಸಾಕ್ಷಿಗಳ ಮುಂದೆ, ಯೇಸು ಒಂದು ಅವಿಸ್ಮರಣೀಯವಾದ ಪುನರುತ್ಥಾನವನ್ನು ನಿರ್ವಹಿಸಿದನು. ಅವನು ಈ ಘಟನೆಗೆ ಸ್ವಲ್ಪ ಸಮಯ ಮೊದಲು ಆಗಲೇ ಮುಂತಿಳಿಸಿದ್ದ ಪುನರುತ್ಥಾನದ, ಒಂದು “ನೂತನಾಕಾಶಮಂಡಲ”ದ ಕೆಳಗೆ ಭೂಮಿಯ ಮೇಲೆ ಜೀವನಕ್ಕೆ ಪುನಃ ಸ್ಥಾಪನೆಯ ಒಂದು ಸೂಚಕವಾಗಿತ್ತು. ಆ ಸಂದರ್ಭದಲ್ಲಿ ಯೇಸು ಹೀಗೆ ಹೇಳಿದ್ದನು: “ಇದಕ್ಕೆ ಆಶ್ಚರ್ಯಪಡಬೇಡಿರಿ, ಏಕೆಂದರೆ ಸ್ಮರಣೆಯ ಸಮಾಧಿಯಲ್ಲಿರುವವರೆಲ್ಲರು ಅವನ ಧ್ವನಿಯನ್ನು ಕೇಳಿ ಹೊರಬರುವ ಕಾಲ ಬರುತ್ತಿದೆ.”—ಪ್ರಕಟನೆ 21:1, 3, 4; ಯೋಹಾನ 5:28, 29, NW; 2 ಪೇತ್ರ 3:13.

ಪುನರುತ್ಥಾನಕ್ಕಿದ್ದ ಇತರ ಪ್ರತ್ಯಕ್ಷಸಾಕ್ಷಿಗಳಲ್ಲಿ ಪೇತ್ರನು ಮತ್ತು ಯೇಸುವನ್ನು ಅವನ ಪ್ರಯಾಣಗಳಲ್ಲಿ ಜೊತೆಗೊಂಡಿದ್ದ 12 ಮಂದಿಯಲ್ಲಿ ಬೇರೆ ಕೆಲವರು ಇದ್ದರು. ಪುನರುತ್ಥಾನಗೊಂಡಿದ್ದ ಯೇಸು ಗಲಿಲಾಯ ಸಮುದ್ರದ ಬಳಿ ಮಾತಾಡುವುದನ್ನು ಅವರು ಸಾಕ್ಷಾತ್‌ ಕೇಳಿದರು. ಆ ವೃತ್ತಾಂತ ನಮಗೆ ತಿಳಿಸುವುದು: “ಯೇಸು ಅವರಿಗೆ—ಬಂದು ಊಟಮಾಡಿರಿ ಎಂದು ಹೇಳಿದನು. ಶಿಷ್ಯರು ಆತನನ್ನು ಸ್ವಾಮಿಯವರೆಂದು ತಿಳಿದಿದ್ದರಿಂದ ನೀನಾರೆಂದು ವಿಚಾರಿಸುವದಕ್ಕೆ ಅವರಲ್ಲಿ ಒಬ್ಬರೂ ಧೈರ್ಯಪಡಲಿಲ್ಲ. ಯೇಸು ಬಂದು ರೊಟ್ಟಿಯನ್ನು ತೆಗೆದುಕೊಂಡು ಅವರಿಗೆ ಕೊಟ್ಟನು; ಹಾಗೆಯೇ ಮೀನನ್ನೂ ಕೊಟ್ಟನು. ಯೇಸು ಸತ್ತು ಜೀವದಿಂದೆದ್ದ ಮೇಲೆ ಶಿಷ್ಯರಿಗೆ ಕಾಣಿಸಿಕೊಂಡದ್ದು ಇದೇ ಮೂರನೆಯ ಸಾರಿ.”—ಯೋಹಾನ 21:12-14.

ಇದರಿಂದಾಗಿ ಪೇತ್ರನು ಸಂಪೂರ್ಣ ಮನವರಿಕೆಯಿಂದ ಹೀಗೆ ಬರೆಯ ಸಾಧ್ಯವಿತ್ತು: “ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯೂ ದೇವರೂ ಆಗಿರುವಾತನಿಗೆ ಸ್ತೋತ್ರವಾಗಲಿ. ಆತನು ಯೇಸು ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿದರ್ದಲ್ಲಿ ತನ್ನ ಮಹಾ ಕರುಣಾನುಸಾರವಾಗಿ ನಮ್ಮನ್ನು ತಿರಿಗಿ ಜೀವಿಸುವಂತೆ ಮಾಡಿ ಜೀವಕರವಾದ ನಿರೀಕ್ಷೆಯನ್ನು” ನಮ್ಮಲ್ಲಿ ಹುಟ್ಟಿಸಿದನು.—1 ಪೇತ್ರ 1:3.

ಅಪೊಸ್ತಲ ಪೌಲನು ಹೀಗೆಂದಾಗ ತನ್ನ ಭರವಸೆಯ ನಿರೀಕ್ಷೆಯನ್ನು ವ್ಯಕ್ತಪಡಿಸಿದನು: “ಧರ್ಮಶಾಸ್ತ್ರಕ್ಕನುಗುಣವಾಗಿರುವ ಮತ್ತು ಪ್ರವಾದಿಗಳ ಗ್ರಂಥಗಳಲ್ಲಿ ಬರೆದಿರುವ ಎಲ್ಲಾ ವಿಷಯಗಳನ್ನು ನಂಬುತ್ತೇನೆ. ಇದಲ್ಲದೆ ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದೆಂದು ಇವರು ದೇವರಲ್ಲಿ ನಿರೀಕ್ಷೆಯಿಟ್ಟಿರುವ ಪ್ರಕಾರವೇ ನಾನೂ ನಿರೀಕ್ಷೆಯುಳ್ಳವನಾಗಿದ್ದೇನೆ.”—ಅ. ಕೃತ್ಯಗಳು 24:14, 15.

ಹೀಗಿರುವುದರಿಂದ ತಮ್ಮ ಪ್ರಿಯರು ಭೂಮಿಯ ಮೇಲೆ ಪುನಃ ಆದರೆ ಅತಿ ಭಿನ್ನವಾದ ಪರಿಸ್ಥಿತಿಗಳ ಕೆಳಗೆ ಜೀವಿತರಾಗುವುದನ್ನು ನೋಡುವ ಸ್ಥಿರವಾದ ನಿರೀಕ್ಷೆ ಲಕ್ಷಾಂತರ ಜನರಿಗಿರಬಲ್ಲದು. ಆ ಪರಿಸ್ಥಿತಿಗಳು ಯಾವುವಾಗಿರುವುವು? ನಾವು ಕಳೆದುಕೊಂಡಿರುವ ಪ್ರಿಯರಿಗಿರುವ ಬೈಬಲಾಧಾರಿತ ನಿರೀಕ್ಷೆಯ ಹೆಚ್ಚಿನ ವಿವರಣೆಗಳನ್ನು ಈ ಬ್ರೋಷರಿನ “ಮೃತರಿಗಾಗಿ ಒಂದು ಖಾತ್ರಿಯಾದ ನಿರೀಕ್ಷೆ” ಎಂಬ ಅಂತಿಮ ವಿಭಾಗದಲ್ಲಿ ಚರ್ಚಿಸಲಾಗುವುದು.

ಆದರೆ ಮೊದಲು, ನೀವು ಒಬ್ಬ ಪ್ರಿಯನ ಅಗಲಿಕೆಯ ಕಾರಣ ದುಃಖಿಸುತ್ತಿರುವುದಾದರೆ ನಿಮಗಿರಬಹುದಾದ ಪ್ರಶ್ನೆಗಳನ್ನು ನಾವು ಪರಿಗಣಿಸೋಣ: ಈ ವಿಧದಲ್ಲಿ ದುಃಖಿಸುವುದು ಸಾಮಾನ್ಯವೊ? ನನ್ನ ದುಃಖದೊಂದಿಗೆ ನಾನು ಹೇಗೆ ಜೀವಿಸಬಲ್ಲೆ? ನಾನು ನಿಭಾಯಿಸಲು ಸಹಾಯಿಸುವಂತೆ ಇತರರು ಏನು ಮಾಡಬಲ್ಲರು? ದುಃಖಿಸುತ್ತಿರುವ ಇತರರಿಗೆ ನಾನು ಹೇಗೆ ಸಹಾಯ ಮಾಡಬಲ್ಲೆ? ಮತ್ತು ಪ್ರಧಾನವಾಗಿ, ಮೃತರಿಗಾಗಿರುವ ಒಂದು ಖಾತರಿ ನಿರೀಕ್ಷೆಯ ಕುರಿತು ಬೈಬಲು ಏನನ್ನುತ್ತದೆ? ನಾನು ನನ್ನ ಪ್ರಿಯರನ್ನು ಪುನಃ ಎಂದಾದರೂ ನೋಡುವೆನೊ? ಮತ್ತು ಎಲ್ಲಿ?