ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ ಐದು

ನಿಮ್ಮ ಮಗುವನ್ನು ಶೈಶವದಿಂದ ತರಬೇತು ಮಾಡಿರಿ

ನಿಮ್ಮ ಮಗುವನ್ನು ಶೈಶವದಿಂದ ತರಬೇತು ಮಾಡಿರಿ

1, 2. ತಮ್ಮ ಮಕ್ಕಳನ್ನು ಬೆಳೆಸುವುದರಲ್ಲಿ ಯಾರ ಸಹಾಯಕ್ಕಾಗಿ ಹೆತ್ತವರು ನೋಡಬೇಕು?

 “ಪುತ್ರಸಂತಾನವು ಯೆಹೋವನಿಂದ ಬಂದ ಸ್ವಾಸ್ತ್ಯವು,” ಎಂದು ಸುಮಾರು 3,000 ವರ್ಷಗಳ ಹಿಂದೆ ಉದ್ಗರಿಸಿದರು ಒಬ್ಬ ಗುಣಗ್ರಾಹಿಯಾದ ಹೆತ್ತವರು. (ಕೀರ್ತನೆ 127:3) ಪಿತೃತ್ವದ ಆನಂದವು ಹೆಚ್ಚಿನ ವಿವಾಹಿತ ಜನರಿಗೆ ಲಭ್ಯವಿರುವ, ದೇವರಿಂದ ಬಂದ ಅಮೂಲ್ಯವಾದ ಒಂದು ಕೊಡುಗೆ. ಆದರೂ, ಆ ಸಂತೋಷದೊಂದಿಗೆ ಜವಾಬ್ದಾರಿಗಳನ್ನೂ ಪಿತೃತ್ವವು ತರುತ್ತದೆಂದು ಮಕ್ಕಳಿರುವವರು ಬೇಗನೆ ಗ್ರಹಿಸುತ್ತಾರೆ.

2 ವಿಶೇಷವಾಗಿ ಇಂದು, ಮಕ್ಕಳನ್ನು ಬೆಳೆಸುವುದು ಒಂದು ದುರ್ದಮವಾದ ಕೆಲಸ. ಆದರೂ, ಅನೇಕರು ಅದನ್ನು ಯಶಸ್ವಿಯಾಗಿ ನಡಸಿದ್ದಾರೆ ಮತ್ತು ಪ್ರೇರಿತ ಕೀರ್ತನೆಗಾರನು ಆ ವಿಧಕ್ಕೆ ಸೂಚಿಸುತ್ತಾ ಹೇಳುವುದು: “ಯೆಹೋವನು ಮನೇ ಕಟ್ಟದಿದ್ದರೆ ಅದನ್ನು ಕಟ್ಟುವವರು ಕಷ್ಟಪಡುವದು ವ್ಯರ್ಥ.” (ಕೀರ್ತನೆ 127:1) ಯೆಹೋವನ ಉಪದೇಶಗಳನ್ನು ನೀವು ಎಷ್ಟು ಒತ್ತಾಗಿ ಅನುಸರಿಸುತ್ತೀರೋ ಅಷ್ಟು ಉತ್ತಮವಾದ ಹೆತ್ತವರು ನೀವಾಗುವಿರಿ. ಬೈಬಲು ಅನ್ನುವುದು: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು.” (ಜ್ಞಾನೋಕ್ತಿ 3:5) ನಿಮ್ಮ ಮಗು ಬೆಳೆಸುವ 20 ವರ್ಷದ ಯೋಜನೆಗೆ ನೀವು ತೊಡಗುವಾಗ, ಯೆಹೋವನ ಸಲಹೆಗೆ ಕಿವಿಗೊಡಲು ನೀವು ಇಷ್ಟವುಳ್ಳವರಾಗಿದ್ದೀರೋ?

ಬೈಬಲಿನ ವೀಕ್ಷಣವನ್ನು ಸ್ವೀಕರಿಸುವುದು

3. ಮಕ್ಕಳನ್ನು ಬೆಳೆಸುವುದರಲ್ಲಿ ಯಾವ ಜವಾಬ್ದಾರಿಯು ತಂದೆಗಳಿಗೆ ಇದೆ?

3 ಭೂಸುತ್ತಲೂ ಇರುವ ಅನೇಕ ಮನೆಗಳಲ್ಲಿ, ಮಗುವಿನ ತರಬೇತನ್ನು ಅದು ಮುಖ್ಯವಾಗಿ ಹೆಂಗಸಿನ ಕೆಲಸವೆಂದು ಪುರುಷರು ವೀಕ್ಷಿಸುತ್ತಾರೆ. ತಂದೆಯ ಪಾತ್ರವನ್ನು ಪ್ರಧಾನವಾಗಿ ಕುಟುಂಬ ಪೋಷಣೆಗಾಗಿ ದುಡಿಯುವವನಾಗಿ ದೇವರ ವಾಕ್ಯವು ನಿರ್ದೇಶಿಸುತ್ತದೆ, ನಿಜ. ಆದರೆ ಅವನಿಗೆ ಮನೆಯಲ್ಲಿ ಜವಾಬ್ದಾರಿಗಳಿವೆಯೆಂದೂ ಅದು ಹೇಳುತ್ತದೆ. ಬೈಬಲ್‌ ಅನ್ನುವುದು: “ಮನೆಯ ಹೊರಗಿನ ನಿನ್ನ ಕೆಲಸವನ್ನು ಅಣಿಗೊಳಿಸು, ಹೊಲದಲ್ಲಿ ಅದನ್ನು ನಿನಗಾಗಿ ಸಿದ್ಧವಾಗಿಡು. ಆಮೇಲೆ ನಿನ್ನ ಮನೆವಾರ್ತೆಯನ್ನೂ ಬಲಪಡಿಸು.” (ಜ್ಞಾನೋಕ್ತಿ 24:27, NW) ದೇವರ ವೀಕ್ಷಣದಲ್ಲಿ, ತಂದೆತಾಯಿಯರು ಮಗುವಿನ ತರಬೇತಿನಲ್ಲಿ ಸಹಭಾಗಿಗಳು.—ಜ್ಞಾನೋಕ್ತಿ 1:8, 9.

4. ಗಂಡು ಮಕ್ಕಳನ್ನು ಹೆಣ್ಣುಗಳಿಗಿಂತ ಶ್ರೇಷ್ಠರೆಂದು ನಾವೇಕೆ ವೀಕ್ಷಿಸಬಾರದು?

4 ನಿಮ್ಮ ಮಕ್ಕಳನ್ನು ನೀವು ಹೇಗೆ ವೀಕ್ಷಿಸುತ್ತೀರಿ? ಏಷಿಯಾದಲ್ಲಿ “ಹೆಣ್ಣು ಕೂಸುಗಳು ಹೆಚ್ಚಾಗಿ ಉತ್ಸಾಹಶೂನ್ಯ ಸ್ವಾಗತವನ್ನು ಪಡೆಯುತ್ತವೆ,” ಎಂದು ವರದಿಗಳು ಹೇಳುತ್ತವೆ. ಲ್ಯಾಟಿನ್‌ ಅಮೆರಿಕದಲ್ಲಿ ಹುಡುಗಿಯರ ವಿರುದ್ಧ ಪಕ್ಷಪಾತವು ಇನ್ನೂ ಅಸ್ತಿತ್ವದಲ್ಲಿದೆ, “ಹೆಚ್ಚು ಸುಸಂಸ್ಕೃತ ಕುಟುಂಬಗಳಲ್ಲಿ” ಸಹ, ಎಂಬ ವರದಿಯುಂಟು. ಆದರೆ ಸತ್ಯ ಸಂಗತಿಯೇನಂದರೆ ಹುಡುಗಿಯರು ಎರಡನೆಯ ದರ್ಜೆಯ ಮಕ್ಕಳಾಗಿಲ್ಲ. ಪುರಾತನ ಕಾಲದ ಒಬ್ಬ ಖ್ಯಾತ ತಂದೆಯಾದ ಯಾಕೋಬನು ತನ್ನೆಲ್ಲ ಸಂತಾನವನ್ನು, ಆ ತನಕ ಹುಟ್ಟಿದ್ದ ಯಾವುದೇ ಪುತ್ರಿಯರನ್ನೂ ಸೇರಿಸಿ, “ದೇವರು . . . [ನನಗೆ] ಅನುಗ್ರಹಿಸಿಕೊಟ್ಟ ಮಕ್ಕಳೇ ಇವರು,” ಎಂದು ಬಣ್ಣಿಸಿದನು. (ಆದಿಕಾಂಡ 33:1-5; 37:35) ತದ್ರೀತಿ, ತನ್ನ ಬಳಿಗೆ ತರಲ್ಪಟ್ಟ ಎಲ್ಲ “ಚಿಕ್ಕ ಮಕ್ಕಳನ್ನು” (ಹುಡುಗರು ಮತ್ತು ಹುಡುಗಿಯರನ್ನು) ಯೇಸು ಆಶೀರ್ವದಿಸಿದನು. (ಮತ್ತಾಯ 19:13-15) ಅವನು ಯೆಹೋವನ ವೀಕ್ಷಣೆಯನ್ನು ಪ್ರತಿಬಿಂಬಿಸಿದನೆಂದು ನಾವು ನಿಶ್ಚಯದಿಂದಿರಬಲ್ಲೆವು.—ಧರ್ಮೋಪದೇಶಕಾಂಡ 16:14.

5. ಕುಟುಂಬದ ಗಾತ್ರದ ವಿಷಯದಲ್ಲಿ ದಂಪತಿಗಳ ನಿರ್ಣಯವನ್ನು ಯಾವ ಪರಿಗಣನೆಗಳು ಪ್ರಭಾವಿಸಬೇಕು?

5 ಒಬ್ಬ ಸ್ತ್ರೀಯು ಸಾಧ್ಯವಿರುವಷ್ಟು ಹೆಚ್ಚು ಮಕ್ಕಳಿಗೆ ಜನ್ಮ ಕೊಡುವಂತೆ ನಿಮ್ಮ ಸಮುದಾಯವು ನಿರೀಕ್ಷಿಸುತ್ತದೊ? ನ್ಯಾಯವಾಗಿ, ಒಬ್ಬ ವಿವಾಹಿತ ದಂಪತಿಗಳಿಗೆ ಎಷ್ಟು ಮಕ್ಕಳಿರಬೇಕೆಂಬುದು ಅವರ ವೈಯಕ್ತಿಕ ನಿರ್ಣಯ. ಹಲವಾರು ಮಕ್ಕಳಿಗೆ ಉಣಿಸಲು, ಉಡಿಸಲು, ಮತ್ತು ವಿದ್ಯೆಕೊಡಲು ಹೆತ್ತವರು ಸ್ಥಿತಿವಂತರಾಗಿರದಿದ್ದಲ್ಲಿ ಆಗೇನು? ತಮ್ಮ ಕುಟುಂಬದ ಗಾತ್ರವನ್ನು ನಿರ್ಣಯಿಸುವಾಗ ದಂಪತಿಗಳು ನಿಶ್ಚಯವಾಗಿಯೂ ಇದನ್ನು ಪರಿಗಣಿಸಬೇಕು. ತಮ್ಮ ಎಲ್ಲ ಮಕ್ಕಳನ್ನು ಪೋಷಿಸಲು ಶಕ್ತರಾಗದ ಕೆಲವು ದಂಪತಿಗಳು ಅವರಲ್ಲಿ ಕೆಲವರನ್ನು ಬೆಳೆಸಲಿಕ್ಕಾಗಿ ತಮ್ಮ ಸಂಬಂಧಿಕರಿಗೆ ವಹಿಸಿಕೊಡುತ್ತಾರೆ. ಈ ಪದ್ಧತಿಯು ಅಪೇಕ್ಷಣೀಯವೋ? ಖಂಡಿತವಾಗಿಯೂ ಅಲ್ಲ. ಮತ್ತು ಅದು ಹೆತ್ತವರನ್ನು ತಮ್ಮ ಮಕ್ಕಳ ಕಡೆಗಿನ ತಮ್ಮ ಹಂಗಿನಿಂದ ಮುಕ್ತಗೊಳಿಸುವುದಿಲ್ಲ. “ಯಾವನಾದರೂ ಸ್ವಂತ ಜನರನ್ನು, ವಿಶೇಷವಾಗಿ ತನ್ನ ಮನೆಯವರನ್ನು [“ಮನೆವಾರ್ತೆಯನ್ನು,” NW] ಸಂರಕ್ಷಿಸದೆ ಹೋದರೆ ಅವನು ಕ್ರಿಸ್ತನಂಬಿಕೆಯನ್ನು ತಿರಸ್ಕರಿಸಿ”ದ್ದಾನೆ ಎಂದು ಬೈಬಲ್‌ ಹೇಳುತ್ತದೆ. (1 ತಿಮೊಥೆಯ 5:8) ಜವಾಬ್ದಾರಿಯುತ ದಂಪತಿಗಳು ‘ತಮ್ಮ ಸ್ವಂತ ಜನರಿಗೆ ಒದಗಿಸಲು’ ಶಕ್ತರಾಗುವಂತೆ ತಮ್ಮ “ಮನೆವಾರ್ತೆಯ” ಗಾತ್ರವನ್ನು ಯೋಜಿಸಲು ಪ್ರಯತ್ನಿಸಬೇಕು. ಇದನ್ನು ಮಾಡಲಿಕ್ಕಾಗಿ ಅವರು ಸಂತಾನ ನಿರೋಧವನ್ನು ನಡಸಬಲ್ಲರೋ? ಅದು ಕೂಡ ಒಂದು ವ್ಯಕ್ತಿಗತ ನಿರ್ಣಯ, ಮತ್ತು ವಿವಾಹಿತ ದಂಪತಿಗಳು ಈ ಮಾರ್ಗವನ್ನು ನಿರ್ಣಯಿಸುವುದಾದರೆ, ಗರ್ಭ ನಿರೋಧಕ ಆಯ್ಕೆಯು ಸಹ ವೈಯಕ್ತಿಕ ಸಂಗತಿ. “ಪ್ರತಿಯೊಬ್ಬನು ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು.” (ಗಲಾತ್ಯ 6:5) ಆದರೂ, ಯಾವುದೇ ರೀತಿಯ ಗರ್ಭಪಾತವನ್ನು ಒಳಗೊಳ್ಳುವ ಸಂತಾನ ನಿರೋಧವು ಬೈಬಲ್‌ ಮೂಲತತ್ವಗಳಿಗೆ ವಿರುದ್ಧವಾಗುತ್ತದೆ. ಯೆಹೋವ ದೇವರು “ಜೀವದ ಬುಗ್ಗೆ” ಆಗಿದ್ದಾನೆ. (ಕೀರ್ತನೆ 36:9) ಆದುದರಿಂದ, ಒಂದು ಜೀವವನ್ನು ಅದು ಗರ್ಭತಾಳಿದ ಮೇಲೆ ನಾಶಪಡಿಸುವುದು ಯೆಹೋವನಿಗೆ ಘೋರ ಅಗೌರವವನ್ನು ತೋರಿಸುತ್ತದೆ ಮತ್ತು ಕೊಲೆಪಾತಕಕ್ಕೆ ಸರಿಸಮವಾಗಿದೆ.—ವಿಮೋಚನಕಾಂಡ 21:22, 23; ಕೀರ್ತನೆ 139:16; ಯೆರೆಮೀಯ 1:5.

ನಿಮ್ಮ ಮಗುವಿನ ಅಗತ್ಯಗಳನ್ನು ಪೂರೈಸುವುದು

6. ಒಂದು ಮಗುವಿನ ತರಬೇತು ಯಾವಾಗ ಆರಂಭಿಸತಕ್ಕದು?

6 ಜ್ಞಾನೋಕ್ತಿ 22:6 ಹೇಳುವುದು: “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು.” ಮಕ್ಕಳನ್ನು ತರಬೇತು ಮಾಡುವುದು ಹೆತ್ತವರ ಇನ್ನೊಂದು ದೊಡ್ಡ ಕರ್ತವ್ಯ. ಆದರೆ ಆ ತರಬೇತು ಯಾವಾಗ ಆರಂಭಗೊಳ್ಳಬೇಕು? ತೀರ ಮೊದಲಿನಿಂದಲೇ. ತಿಮೊಥೆಯು “ಚಿಕ್ಕಂದಿನಿಂದಲೂ” ತರಬೇತನ್ನು ಹೊಂದಿದ್ದನೆಂಬುದನ್ನು ಅಪೊಸ್ತಲ ಪೌಲನು ಗಮನಿಸಿದನು. (2 ತಿಮೊಥೆಯ 3:15) ಇಲ್ಲಿ ಉಪಯೋಗಿಸಲ್ಪಟ್ಟ ಗ್ರೀಕ್‌ ಶಬ್ದವು ಒಂದು ಚಿಕ್ಕ ಮಗುವಿಗೆ ಅಥವಾ ಅಜಾತ ಶಿಶುವಿಗೂ ನಿರ್ದೇಶಿಸಬಲ್ಲದು. (ಲೂಕ 1:41, 44; ಅ. ಕೃತ್ಯಗಳು 7:18-20) ಹೀಗೆ, ತಿಮೊಥೆಯನು—ಯೋಗ್ಯವಾಗಿಯೇ—ಅವನು ಅತಿ ಚಿಕ್ಕವನಿರುವಾಗಲೇ ತರಬೇತು ಪಡೆದನು. ಒಂದು ಮಗುವನ್ನು ತರಬೇತು ಮಾಡಲಾರಂಭಿಸಲು ಶೈಶವವು ಯೋಗ್ಯ ಸಮಯ. ಒಂದು ಎಳೆಯ ಕೂಸಿಗೂ ಜ್ಞಾನಕ್ಕಾಗಿ ಹಸಿವಿರುತ್ತದೆ.

7. (ಎ) ಹೆತ್ತವರಿಬ್ಬರೂ ತಮ್ಮ ಮಗುವಿನೊಂದಿಗೆ ಆಪ್ತ ಸಂಬಂಧವನ್ನು ವಿಕಸಿಸುವುದು ಯಾಕೆ ಪ್ರಾಮುಖ್ಯ? (ಬಿ) ಯೆಹೋವನ ಮತ್ತು ಆತನ ಏಕಜಾತ ಪುತ್ರನ ನಡುವೆ ಯಾವ ಸಂಬಂಧವು ಅಸ್ತಿತ್ವದಲ್ಲಿತ್ತು?

7 “ನಾನು ನನ್ನ ಮಗುವನ್ನು ಮೊದಲಾಗಿ ಕಂಡಾಗ,” ಒಬ್ಬ ತಾಯಿಯು ಹೇಳುವುದು, “ನಾನು ಅವನಲ್ಲಿ ಅನುರಕ್ತಳಾದೆ.” ಹೆಚ್ಚಿನ ತಾಯಂದಿರು ಅನುರಕ್ತರಾಗುತ್ತಾರೆ. ಜನನವನ್ನು ಹಿಂಬಾಲಿಸಿ ಅವರು ಒಂದುಗೂಡಿ ಸಮಯವನ್ನು ಕಳೆಯುವಾಗ, ತಾಯಿ ಮತ್ತು ಮಗುವಿನ ನಡುವಣ ಆ ಸುಂದರವಾದ ಅನುರಾಗವು ಬೆಳೆಯುತ್ತದೆ. ಮೊಲೆಯುಣ್ಣುವಿಕೆಯು ಆ ಆಪ್ತತೆಗೆ ಕೂಡಿಸುತ್ತದೆ. (ಹೋಲಿಸಿ 1 ಥೆಸಲೊನೀಕ 2:7.) ತಾಯಿ ತನ್ನ ಮಗುವನ್ನು ಮುದ್ದಿಸುವುದು ಮತ್ತು ಅದರೊಂದಿಗೆ ಮಾತಾಡುವುದು ಮಗುವಿನ ಭಾವಾತ್ಮಕ ಅಗತ್ಯಗಳನ್ನು ತುಂಬಿಸಲು ನಿಷ್ಕರ್ಷಕವಾಗಿದೆ. (ಹೋಲಿಸಿ ಯೆಶಾಯ 66:12.) ಆದರೆ ತಂದೆಯ ಕುರಿತೇನು? ಅವನೂ ತನ್ನ ಹೊಸ ಸಂತಾನದೊಂದಿಗೆ ಒಂದು ಆಪ್ತ ಸಂಪರ್ಕವನ್ನು ರೂಪಿಸತಕ್ಕದ್ದು. ಯೆಹೋವನು ತಾನೇ ಇದಕ್ಕೆ ಒಂದು ಮಾದರಿ. ಜ್ಞಾನೋಕ್ತಿ ಪುಸ್ತಕದಲ್ಲಿ, ತನ್ನ ಏಕಜಾತಪುತ್ರನೊಂದಿಗಿನ ಯೆಹೋವನ ಸಂಬಂಧದ ಕುರಿತು ನಾವು ಕಲಿಯುತ್ತೇವೆ. ಅಲ್ಲಿ ಅವನು ಹೀಗೆ ಪ್ರತಿನಿಧಿಸಲ್ಪಡುತ್ತಾನೆ: “ಯೆಹೋವನು ತನ್ನ ಸೃಷ್ಟಿಕ್ರಮದಲ್ಲಿ ಮೊದಲು ನನ್ನನ್ನು ನಿರ್ಮಿಸಿದನು; . . . [“ನಾನು ದಿನದಿನವೂ ಆತನಿಗೆ ವಿಶೇಷವಾಗಿ ಅಚ್ಚುಮೆಚ್ಚಿನವನಾದೆನು,” NW].” (ಜ್ಞಾನೋಕ್ತಿ 8:22, 30; ಯೋಹಾನ 1:14) ತದ್ರೀತಿಯಲ್ಲಿ, ಮಗುವಿನ ಜೀವಾರಂಭದಿಂದಲೇ ಒಬ್ಬ ಒಳ್ಳೆಯ ತಂದೆಯು ತನ್ನ ಮಗುವಿನೊಂದಿಗೆ ಒಂದು ಹೃದಯೋಲ್ಲಾಸ ತರುವ, ಪ್ರೀತಿಯುಳ್ಳ ಸಂಬಂಧವನ್ನು ಬೆಳೆಸಿಕೊಳ್ಳುತ್ತಾನೆ. “ತುಂಬ ಮಮತೆಯನ್ನು ತೋರಿಸಿರಿ,” ಅನ್ನುತ್ತಾನೆ ಒಬ್ಬ ಹೆತ್ತವ. “ಆಲಿಂಗನ ಮತ್ತು ಚುಂಬನಗಳಿಂದ ಯಾವ ಮಗುವೂ ಎಂದೂ ಸತ್ತದ್ದಿಲ್ಲ.”

8. ಶಿಶುಗಳಿಗೆ ಆದಷ್ಟು ಬೇಗ ಯಾವ ಮಾನಸಿಕ ಉತ್ತೇಜನವನ್ನು ಹೆತ್ತವರು ಕೊಡಬೇಕು?

8 ಆದರೆ ಕೂಸುಗಳಿಗೆ ಹೆಚ್ಚಿನದ್ದು ಅಗತ್ಯವಿದೆ. ಹುಟ್ಟಿದ ಕ್ಷಣದಿಂದ ಅವುಗಳ ಮಿದುಳುಗಳು ಮಾಹಿತಿಯನ್ನು ಸ್ವೀಕರಿಸಲು ಮತ್ತು ಸಂಗ್ರಹಿಸಲು ಸಿದ್ಧವಾಗಿರುತ್ತವೆ, ಮತ್ತು ಹೆತ್ತವರು ಇದರ ಪ್ರಾಮುಖ್ಯ ಮೂಲವಾಗಿರುತ್ತಾರೆ. ಭಾಷೆಯನ್ನು ಒಂದು ಉದಾಹರಣೆಯಾಗಿ ತೆಗೆದುಕೊಳ್ಳಿ. ಮಗುವು ಎಷ್ಟು ಚೆನ್ನಾಗಿ ಮಾತಾಡಲು ಮತ್ತು ಓದಲು ಕಲಿಯುತ್ತದೆ ಎಂಬುದು, “ತನ್ನ ಹೆತ್ತವರೊಂದಿಗೆ ಮಗುವಿನ ಆರಂಭದ ಪರಸ್ಪರ ಕ್ರಿಯಾ ವಿಧಾನದೊಂದಿಗೆ ಒತ್ತಾಗಿ ಸಂಬಂಧಿಸಿರುವುದಾಗಿ ನೆನಸಲಾಗುತ್ತದೆಂದು” ಸಂಶೋಧಕರು ಹೇಳುತ್ತಾರೆ. ಬಾಲ್ಯಾವಸ್ಥೆಯಿಂದಲೇ ನಿಮ್ಮ ಮಗುವಿನೊಂದಿಗೆ ಮಾತಾಡಿರಿ ಮತ್ತು ಓದಿರಿ. ಬೇಗನೆ ಅವನು ನಿಮ್ಮನ್ನು ಅನುಕರಿಸಲು ಬಯಸುವನು, ಮತ್ತು ತುಸು ಸಮಯದೊಳಗೇ ನೀವು ಅವನಿಗೆ ಓದಲು ಕಲಿಸುವವರಾಗುವಿರಿ. ಸಂಭವನೀಯವಾಗಿ, ಅವನು ಶಾಲೆಯನ್ನು ಪ್ರವೇಶಿಸುವ ಮುಂಚೆಯೇ ಓದಲು ಶಕ್ತನಾಗಿರುವನು. ಅಧ್ಯಾಪಕರು ಕೊಂಚವೇ ಇರುವ ಮತ್ತು ತರಗತಿಗಳು ನಿಬಿಡವಾಗಿರುವ ಒಂದು ದೇಶದಲ್ಲಿ ನೀವು ಜೀವಿಸುವುದಾದರೆ, ಅದು ವಿಶೇಷವಾಗಿ ಸಹಾಯಕರವಾಗಿರುವುದು.

9. ಯಾವ ಅತಿ ಪ್ರಾಮುಖ್ಯವಾದ ಗುರಿಯನ್ನು ಹೆತ್ತವರು ನೆನಪಿನಲ್ಲಿಡಬೇಕಾದ ಅಗತ್ಯವಿದೆ?

9 ಕ್ರೈಸ್ತ ಹೆತ್ತವರ ಪ್ರಾಮುಖ್ಯ ಚಿಂತನೆಯು ಮಗುವಿನ ಆತ್ಮಿಕ ಅಗತ್ಯಗಳನ್ನು ಪೂರೈಸುವುದೇ. (ಧರ್ಮೋಪದೇಶಕಾಂಡ 8:3ನ್ನು ನೋಡಿ.) ಯಾವ ಗುರಿಯಿಂದ? ತಮ್ಮ ಮಗುವು ಕ್ರಿಸ್ತನಂತಹ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವಂತೆ ಸಹಾಯ ಮಾಡುವ, ಕಾರ್ಯತಃ, “ನೂತನ ಸ್ವಭಾವ”ವನ್ನು ಧರಿಸುವ ಗುರಿಯಿಂದಲೇ. (ಎಫೆಸ 4:23) ಇದಕ್ಕಾಗಿ ಯೋಗ್ಯವಾದ ಕಟ್ಟುವ ಸಾಮಗ್ರಿಗಳನ್ನು ಮತ್ತು ಯೋಗ್ಯವಾದ ಕಟ್ಟುವ ವಿಧಾನಗಳನ್ನು ಪರಿಗಣಿಸುವ ಅಗತ್ಯ ಅವರಿಗಿದೆ.

ಸತ್ಯವನ್ನು ನಿಮ್ಮ ಮಗುವಿನ ಮನಸ್ಸಿಗೆ ನಾಟಿಸಿರಿ

10. ಯಾವ ಗುಣಗಳನ್ನು ಬೆಳೆಸಿಕೊಳ್ಳುವ ಅಗತ್ಯವು ಮಕ್ಕಳಿಗಿದೆ?

10 ಒಂದು ಕಟ್ಟಡದ ಗುಣಮಟ್ಟವು ಕಟ್ಟಡ ನಿರ್ಮಾಣದಲ್ಲಿ ಬಳಸಲ್ಪಟ್ಟ ಸಾಮಗ್ರಿಗಳ ತೆರದ ಮೇಲೆ ಬಹಳವಾಗಿ ಆತುಕೊಳ್ಳುತ್ತದೆ. ಕ್ರೈಸ್ತ ವ್ಯಕ್ತಿತ್ವಗಳನ್ನು ಕಟ್ಟಲು “ಚಿನ್ನ ಬೆಳ್ಳಿ ರತ್ನಗಳು” ಅತ್ಯುತ್ತಮವಾದ ರಚನಾ ಸಾಮಗ್ರಿಗಳಾಗಿವೆ ಎಂದು ಅಪೊಸ್ತಲ ಪೌಲನು ಹೇಳಿದನು. (1 ಕೊರಿಂಥ 3:10-12) ಇವು ನಂಬಿಕೆ, ವಿವೇಕ, ವಿವೇಚನಾಶಕ್ತಿ, ನಿಷ್ಠೆ, ಗೌರವ ಮತ್ತು ಯೆಹೋವನಿಗೂ ಆತನ ನಿಯಮಕ್ಕೂ ಪ್ರೀತಿಯ ಗಣ್ಯತೆಯಂತಹ ಗುಣಗಳನ್ನು ಪ್ರತಿನಿಧಿಸುತ್ತವೆ. (ಕೀರ್ತನೆ 19:7-11; ಜ್ಞಾನೋಕ್ತಿ 2:1-6; 3:13, 14) ಅತ್ಯಾರಂಭದ ಬಾಲ್ಯಾವಸ್ಥೆಯಿಂದಲೇ ಈ ಗುಣಗಳನ್ನು ವಿಕಸಿಸಿಕೊಳ್ಳಲು ಹೆತ್ತವರು ತಮ್ಮ ಮಕ್ಕಳಿಗೆ ಹೇಗೆ ಸಹಾಯ ಮಾಡಬಲ್ಲರು? ಬಹಳ ಕಾಲದ ಹಿಂದೆ ನಮೂದಿಸಲ್ಪಟ್ಟ ಒಂದು ಕಾರ್ಯಗತಿಯನ್ನು ಅನುಸರಿಸುವ ಮೂಲಕ.

11. ಇಸ್ರಾಯೇಲ್ಯ ಹೆತ್ತವರು ತಮ್ಮ ಮಕ್ಕಳಿಗೆ ದೈವಿಕ ವ್ಯಕ್ತಿತ್ವಗಳನ್ನು ವಿಕಸಿಸಿಕೊಳ್ಳಲು ಹೇಗೆ ಸಹಾಯ ಮಾಡಿದರು?

11 ಇಸ್ರಾಯೇಲ್‌ ಜನಾಂಗವು ವಾಗ್ದಾನ ದೇಶವನ್ನು ಪ್ರವೇಶಿಸುವ ತುಸು ಮುಂಚಿತವಾಗಿ ಯೆಹೋವನು ಇಸ್ರಾಯೇಲ್ಯ ಹೆತ್ತವರಿಗೆ ಹೇಳಿದ್ದು: “ನಾನು ಇಂದು ನಿಮಗೆ ಆಜ್ಞಾಪಿಸುತ್ತಿರುವ ಈ ಮಾತುಗಳು ನಿಮ್ಮ ಹೃದಯದಲ್ಲಿ ಇರುವವುಗಳಾಗಿ ಪರಿಣಮಿಸಬೇಕು; ಮತ್ತು ನೀವು ಇವನ್ನು ನಿಮ್ಮ ಪುತ್ರನಲ್ಲಿ ನಾಟಿಸಿ ನಿಮ್ಮ ಮನೆಯಲ್ಲಿ ನೀವು ಕುಳಿತುಕೊಳ್ಳುವಾಗಲೂ ದಾರಿಯಲ್ಲಿ ನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಅವುಗಳ ಕುರಿತು ಮಾತಾಡಬೇಕು.” (ಧರ್ಮೋಪದೇಶಕಾಂಡ 6:6, 7, NW) ಹೌದು, ಹೆತ್ತವರು, ಮಾದರಿಗಳು, ಸಂಗಡಿಗರು, ಸಂವಾದಕರು, ಮತ್ತು ಶಿಕ್ಷಕರಾಗಿರುವ ಅಗತ್ಯವಿದೆ.

12. ಹೆತ್ತವರು ಒಳ್ಳೆಯ ಮಾದರಿಗಳಾಗಿರುವುದು ಏಕೆ ಅತ್ಯಾವಶ್ಯಕವಾಗಿದೆ?

12 ಮಾದರಿಯಾಗಿರ್ರಿ. ಮೊದಲಾಗಿ, ಯೆಹೋವನು ಹೇಳಿದ್ದು: “ಈ ಮಾತುಗಳು ನಿಮ್ಮ ಹೃದಯದಲ್ಲಿರಬೇಕು.” ಅನಂತರ ಅವನು ಕೂಡಿಸಿದ್ದು: “ನೀವು ಇವನ್ನು ನಿಮ್ಮ ಪುತ್ರನಲ್ಲಿ ನಾಟಿ”ಸಬೇಕು. ಹೀಗೆ ದೈವಿಕ ಗುಣಗಳು ಮೊತ್ತಮೊದಲಾಗಿ ಹೆತ್ತವರ ಹೃದಯದಲ್ಲಿರಬೇಕು. ಹೆತ್ತವನು ಸತ್ಯವನ್ನು ಪ್ರೀತಿಸಿ ಅದಕ್ಕನುಸಾರ ಜೀವಿಸಬೇಕು. ಆಗ ಮಾತ್ರ ಅವನು ಮಗುವಿನ ಹೃದಯವನ್ನು ತಲಪಬಲ್ಲನು. (ಜ್ಞಾನೋಕ್ತಿ 20:7) ಯಾಕೆ? ಯಾಕಂದರೆ ತಾವು ಏನನ್ನು ಕೇಳುತ್ತಾರೋ ಅದಕ್ಕಿಂತ ತಾವು ನೋಡುವ ವಿಷಯಗಳಿಂದ ಮಕ್ಕಳು ಹೆಚ್ಚು ಪ್ರಭಾವಿತರಾಗುತ್ತಾರೆ.—ಲೂಕ 6:40; 1 ಕೊರಿಂಥ 11:1.

13. ತಮ್ಮ ಮಕ್ಕಳಿಗೆ ಗಮನಕೊಡುವುದರಲ್ಲಿ, ಕ್ರೈಸ್ತ ಹೆತ್ತವರು ಯೇಸುವಿನ ಮಾದರಿಯನ್ನು ಹೇಗೆ ಅನುಕರಿಸಬಲ್ಲರು?

13 ಸಂಗಡಿಗರಾಗಿರ್ರಿ. ಯೆಹೋವನು ಇಸ್ರಾಯೇಲಿನಲ್ಲಿದ್ದ ಹೆತ್ತವರಿಗೆ ಹೇಳಿದ್ದು: ‘ಮನೆಯಲ್ಲಿ ಕುಳಿತಿರುವಾಗಲೂ ದಾರಿಯಲ್ಲಿ ನಡೆಯುವಾಗಲೂ ಇವುಗಳ ವಿಷಯದಲ್ಲಿ ನಿಮ್ಮ ಮಕ್ಕಳೊಂದಿಗೆ ಮಾತಾಡಬೇಕು.’ ಹೆತ್ತವರೆಷ್ಟೇ ಕಾರ್ಯಮಗ್ನರಿರಲಿ, ಮಕ್ಕಳೊಂದಿಗೆ ಸಮಯವನ್ನು ಕಳೆಯುವುದನ್ನು ಇದು ಅವಶ್ಯಪಡಿಸುತ್ತದೆ. ಮಕ್ಕಳೊಂದಿಗೆ ತನ್ನ ಸಮಯವನ್ನು ಕಳೆಯುವುದಕ್ಕೆ ಅವರು ಅರ್ಹರೆಂದು ಯೇಸು ಭಾವಿಸಿದನೆಂಬುದು ವ್ಯಕ್ತ. ಅವನ ಶುಶ್ರೂಷೆಯ ಕೊನೆಯ ದಿನಗಳಲ್ಲಿ ಜನರು “ತಮ್ಮ ಚಿಕ್ಕ ಮಕ್ಕಳನ್ನು ಯೇಸುವಿನಿಂದ ಮುಟ್ಟಿಸಬೇಕೆಂದು ಆತನ ಬಳಿಗೆ” ತಂದರು. ಯೇಸುವಿನ ಪ್ರತಿಕ್ರಿಯೆ ಏನಾಗಿತ್ತು? ಅವನು “ಅವುಗಳನ್ನು ಅಪ್ಪಿಕೊಂಡು ಅವುಗಳ ಮೇಲೆ ಕೈಯಿಟ್ಟು ಆಶೀರ್ವದಿಸಿದನು.” (ಮಾರ್ಕ 10:13, 16) ಊಹಿಸಿರಿ, ಯೇಸುವಿನ ಜೀವನದ ಕೊನೆಯ ತಾಸುಗಳು ದಾಟಿಹೋಗುತ್ತಾ ಇದ್ದವು. ಆದರೂ, ಅವನು ಈ ಮಕ್ಕಳಿಗೆ ತನ್ನ ಸಮಯವನ್ನೂ ಗಮನವನ್ನೂ ಕೊಟ್ಟನು. ಎಂತಹ ಉತ್ತಮ ಪಾಠ!

14. ತಮ್ಮ ಮಗನೊಂದಿಗೆ ಸಮಯ ಕಳೆಯುವುದು ಹೆತ್ತವರಿಗೆ ಏಕೆ ಲಾಭದಾಯಕ?

14 ಸಂವಾದಕರಾಗಿರಿ. ನಿಮ್ಮ ಮಗನೊಂದಿಗೆ ಸಮಯವನ್ನು ಕಳೆಯುವುದು ಅವನೊಂದಿಗೆ ಸಂವಾದಿಸಲು ನಿಮಗೆ ಸಹಾಯ ಮಾಡುವುದು. ನೀವು ಎಷ್ಟು ಹೆಚ್ಚು ಸಂವಾದಿಸುತ್ತೀರೋ ಅಷ್ಟು ಉತ್ತಮವಾಗಿ ಅವನ ವ್ಯಕ್ತಿತ್ವವು ವಿಕಾಸಗೊಳ್ಳುತ್ತಿರುವ ವಿಧವನ್ನು ನೀವು ತಿಳಿದುಕೊಳ್ಳುವಿರಿ. ಆದರೂ ಸಂವಾದಿಸುವುದು ಮಾತಾಡುವುದಕ್ಕಿಂತ ಹೆಚ್ಚಿನದೆಂದು ನೆನಪಿಡಿರಿ. “ಕಿವಿಗೊಡುವ ಕಲೆಯನ್ನು ನನಗೆ ವಿಕಸಿಸಬೇಕಾಯಿತು,” ಎಂದಳು ಬ್ರೆಸಿಲ್‌ನ ಒಬ್ಬಾಕೆ ತಾಯಿ, “ನನ್ನ ಹೃದಯದಿಂದ ಆಲೈಸಿದೆನು.” ಅವಳ ಮಗನು ಅವಳೊಂದಿಗೆ ತನ್ನ ಭಾವನೆಗಳಲ್ಲಿ ಪಾಲಿಗನಾಗಲು ತೊಡಗಿದಾಗ ಅವಳ ತಾಳ್ಮೆಯು ಫಲಬಿಟ್ಟಿತು.

15. ವಿನೋದದ ವಿಷಯದಲ್ಲಿ ಏನನ್ನು ಮನಸ್ಸಿನಲ್ಲಿಡುವ ಅಗತ್ಯವಿದೆ?

15 ಮಕ್ಕಳಿಗೆ “ನಗುವ ಸಮಯ . . . ಕುಣಿದಾಡುವ ಸಮಯ,” ವಿನೋದಕ್ಕಾಗಿ ಸಮಯವು ಅಗತ್ಯ. (ಪ್ರಸಂಗಿ 3:1, 4; ಜೆಕರ್ಯ 8:5) ಹೆತ್ತವರು ಮತ್ತು ಮಕ್ಕಳು ಅದರಲ್ಲಿ ಒಂದುಗೂಡಿ ಆನಂದಿಸುವಾಗ ವಿನೋದವು ಅತ್ಯಂತ ಫಲದಾಯಕವಾಗಿರುತ್ತದೆ. ಅನೇಕ ಮನೆಗಳಲ್ಲಿ ವಿನೋದವೆಂದರೆ ಟೆಲಿವಿಷನ್‌ ವೀಕ್ಷಿಸುವುದು, ಒಂದು ಶೋಚನೀಯ ನಿಜತ್ವವಾಗಿದೆ. ಕೆಲವು ಟೆಲಿವಿಷನ್‌ ಕಾರ್ಯಕ್ರಮಗಳು ಮನೋರಂಜಕವಾಗಿರಬಹುದಾದರೂ, ಹೆಚ್ಚಿನವು ಸುಮೌಲ್ಯಗಳನ್ನು ನಾಶಗೊಳಿಸುತ್ತವೆ, ಮತ್ತು ಟೆಲಿವಿಷನ್‌ ವೀಕ್ಷಣೆಗೆ ಕುಟುಂಬದಲ್ಲಿ ಸಂವಾದವನ್ನು ಅಡಗಿಸಿಬಿಡುವ ಪ್ರವೃತ್ತಿಯಿದೆ. ಆದುದರಿಂದ ನಿಮ್ಮ ಮಕ್ಕಳೊಂದಿಗೆ ಏನಾದರೂ ರಚನಾತ್ಮಕ ವಿಷಯವನ್ನು ಯಾಕೆ ಮಾಡಬಾರದು? ಹಾಡಿರಿ, ಆಟವಾಡಿರಿ, ಸ್ನೇಹಿತರೊಂದಿಗೆ ಸಹವಸಿಸಿರಿ, ಸುಖಾನುಭವದ ಸ್ಥಳಗಳನ್ನು ಸಂದರ್ಶಿಸಿರಿ. ಅಂತಹ ಚಟುವಟಿಕೆಗಳು ಸಂವಾದವನ್ನು ಪ್ರೋತ್ಸಾಹಿಸುತ್ತವೆ.

16. ಹೆತ್ತವರು ತಮ್ಮ ಮಕ್ಕಳಿಗೆ ಯೆಹೋವನ ಕುರಿತು ಏನನ್ನು ಕಲಿಸಬೇಕು, ಮತ್ತು ಅವರು ಅದನ್ನು ಹೇಗೆ ಮಾಡಬೇಕು?

16 ಶಿಕ್ಷಕರಾಗಿರಿ. “ನೀವು [ಈ ಮಾತುಗಳನ್ನು] ನಿಮ್ಮ ಪುತ್ರನಲ್ಲಿ ನಾಟಿ”ಸಬೇಕು ಎಂದು ಯೆಹೋವನು ಹೇಳಿದನು. ಪೂರ್ವಾಪರ ವಚನಗಳು ಹೇಗೆ ಮತ್ತು ಏನನ್ನು ಕಲಿಸಬೇಕೆಂಬುದನ್ನು ನಿಮಗೆ ತಿಳಿಸುತ್ತವೆ. “ನೀವು ನಿಮ್ಮ ದೇವರಾದ ಯೆಹೋವನನ್ನು ಪೂರ್ಣ ಹೃದಯದಿಂದಲೂ ಪೂರ್ಣ ಪ್ರಾಣದಿಂದಲೂ ಪೂರ್ಣ ಶಕ್ತಿಯಿಂದಲೂ ಪ್ರೀತಿಸಬೇಕು.” (ಧರ್ಮೋಪದೇಶಕಾಂಡ 6:5) ಅನಂತರ, “ಈ ಮಾತುಗಳು . . . ನಿಮ್ಮ ಪುತ್ರನಲ್ಲಿ ನಾಟಿ”ಸಲ್ಪಡಬೇಕು. ಯೆಹೋವನಿಗೆ ಮತ್ತು ಆತನ ನಿಯಮಗಳಿಗೆ ಪೂರ್ಣಪ್ರಾಣದ ಪ್ರೀತಿಯನ್ನು ವಿಕಸಿಸುವ ಗುರಿಯನ್ನಿಟ್ಟು ಉಪದೇಶ ಮಾಡಿರಿ. (ಹೋಲಿಸಿ ಇಬ್ರಿಯ 8:10.) “ನಾಟಿ”ಸು ಎಂಬ ಪದಕ್ಕೆ ಪುನರಾವೃತ್ತಿ ಮಾಡುವ ಮೂಲಕ ಕಲಿಸು ಎಂಬರ್ಥವಿದೆ. ಹೀಗೆ ನಿಮ್ಮ ಮಕ್ಕಳು ಒಂದು ದೈವಿಕ ವ್ಯಕ್ತಿತ್ವವನ್ನು ಬೆಳೆಸುವಂತೆ ನೆರವಾಗುವ ಪ್ರಾಮುಖ್ಯ ವಿಧಾನವು, ಸುಸಂಗತವಾಗಿ ಆತನ ಕುರಿತು ಮಾತಾಡುವುದೇ ಎಂದು ಕಾರ್ಯತಃ ಯೆಹೋವನು ನಿಮಗೆ ಹೇಳುತ್ತಾನೆ. ಅವರೊಂದಿಗೆ ಒಂದು ನಿಯತ ಕಾಲಿಕ ಬೈಬಲಧ್ಯಯನ ನಡಸುವುದು ಇದರಲ್ಲಿ ಒಳಗೂಡುತ್ತದೆ.

17. ಹೆತ್ತವರು ತಮ್ಮ ಮಗುವಿನಲ್ಲಿ ಏನನ್ನು ವಿಕಸಿಸುವ ಅಗತ್ಯವಿದ್ದೀತು? ಯಾಕೆ?

17 ಮಗುವಿನ ಹೃದಯಕ್ಕೆ ಮಾಹಿತಿಯನ್ನು ತಲಪಿಸುವುದು ಸುಲಭವಲ್ಲವೆಂದು ಹೆಚ್ಚಿನ ಹೆತ್ತವರಿಗೆ ತಿಳಿದದೆ. ಅಪೊಸ್ತಲ ಪೇತ್ರನು ಜೊತೆ ಕ್ರೈಸ್ತರನ್ನು ಪ್ರಬೋಧಿಸಿದ್ದು: “ನವಜಾತ ಶಿಶುಗಳಂತೆ ವಾಕ್ಯಕ್ಕೆ ಸೇರಿರುವ ಅಮಿಶ್ರಿತ ಹಾಲಿಗಾಗಿ ಹಂಬಲವನ್ನು ಕಲ್ಪಿಸಿಕೊಳ್ಳಿರಿ.” (1 ಪೇತ್ರ 2:2, NW) “ಹಂಬಲವನ್ನು ಕಲ್ಪಿಸಿಕೊಳ್ಳಿರಿ” ಎಂಬ ಅಭಿವ್ಯಕ್ತಿಯು ಅನೇಕರಿಗೆ ಆತ್ಮಿಕ ಆಹಾರಕ್ಕಾಗಿ ಸ್ವಾಭಾವಿಕ ಹಸಿವು ಇರುವುದಿಲ್ಲವೆಂಬುದನ್ನು ಸೂಚಿಸುತ್ತದೆ. ತಮ್ಮ ಮಗುವಿನಲ್ಲಿ ಆ ಹಂಬಲವನ್ನು ಬೆಳೆಸುವ ವಿಧಾನಗಳನ್ನು ಕಂಡುಹಿಡಿಯುವ ಅಗತ್ಯವು ಹೆತ್ತವರಿಗಿರಬಹುದು.

18. ಹೆತ್ತವರು ಅನುಕರಿಸುವಂತೆ ಉತ್ತೇಜಿಸಲ್ಪಡುವ ಯೇಸುವಿನ ಕಲಿಸುವ ವಿಧಾನಗಳಲ್ಲಿ ಕೆಲವು ಯಾವುವು?

18 ದೃಷ್ಟಾಂತಗಳನ್ನು ಉಪಯೋಗಿಸುವ ಮೂಲಕ ಯೇಸು ಹೃದಯಗಳನ್ನು ತಲಪಿದನು. (ಮಾರ್ಕ 13:34; ಲೂಕ 10:29-37) ಮಕ್ಕಳಿಗೆ ಈ ಕಲಿಸುವ ವಿಧಾನವು ವಿಶೇಷವಾಗಿ ಪರಿಣಾಮಕಾರಿಯಾಗಿದೆ. ಪ್ರಾಯಶಃ ಬೈಬಲ್‌ ಕಥೆಗಳ ನನ್ನ ಪುಸ್ತಕ (ಇಂಗ್ಲಿಷ್‌) ಎಂಬ ಪ್ರಕಾಶನದಲ್ಲಿ ಕಂಡುಬರುವ ವರ್ಣರಂಜಿತವಾದ, ಆಸಕ್ತಿಭರಿತ ಕಥೆಗಳನ್ನುಪಯೋಗಿಸುವ ಮೂಲಕ ಬೈಬಲಿನ ಮೂಲತತ್ವಗಳನ್ನು ಕಲಿಸಿರಿ. * ಮಕ್ಕಳನ್ನು ಒಳಗೂಡಿಸಿಕೊಳ್ಳಿರಿ. ಬೈಬಲ್‌ ಘಟನೆಗಳ ಚಿತ್ರ ಬರೆಯುವುದರಲ್ಲಿ ಮತ್ತು ಅಭಿನಯಿಸುವುದರಲ್ಲಿ ಅವರು ತಮ್ಮ ಸೃಜನಾತ್ಮಕ ಶಕ್ತಿಯನ್ನು ಬಳಸುವಂತೆ ಬಿಡಿರಿ. ಯೇಸು ಪ್ರಶ್ನೆಗಳನ್ನು ಸಹ ಉಪಯೋಗಿಸಿದನು. (ಮತ್ತಾಯ 17:24-27) ನಿಮ್ಮ ಕುಟುಂಬ ಅಭ್ಯಾಸದ ಸಮಯದಲ್ಲಿ ಆತನ ವಿಧಾನವನ್ನು ಅನುಕರಿಸಿರಿ. ದೇವರ ನಿಯಮವೊಂದನ್ನು ಕೇವಲ ತಿಳಿಸಿಬಿಡುವ ಬದಲಾಗಿ, ಯೆಹೋವನು ಈ ನಿಯಮವನ್ನು ನಮಗೆ ಕೊಟ್ಟದ್ದೇಕೆ? ನಾವು ಅದನ್ನು ಪಾಲಿಸಿದರೆ ಏನಾಗುವುದು? ನಾವು ಅದನ್ನು ಪಾಲಿಸದೆ ಇದ್ದರೆ ಏನಾಗುವುದು? ಎಂಬಂತಹ ಪ್ರಶ್ನೆಗಳನ್ನು ಕೇಳಿರಿ. ಅಂತಹ ಪ್ರಶ್ನೆಗಳು ಒಂದು ಮಗುವಿಗೆ ವಿವೇಚಿಸಲು ಮತ್ತು ದೇವರ ನಿಯಮಗಳು ಪ್ರಾಯೋಗಿಕವೂ ಒಳ್ಳೆಯವೂ ಆಗಿವೆಯೆಂದು ಕಾಣಲು ಸಹಾಯ ಮಾಡುತ್ತವೆ.—ಧರ್ಮೋಪದೇಶಕಾಂಡ 10:13.

19. ತಮ್ಮ ಮಕ್ಕಳೊಂದಿಗೆ ವ್ಯವಹರಿಸುವಾಗ ಹೆತ್ತವರು ಬೈಬಲಿನ ಮೂಲತತ್ವಗಳನ್ನು ಅನುಸರಿಸುವುದಾದರೆ, ಯಾವ ಮಹಾ ಪ್ರಯೋಜನಗಳಲ್ಲಿ ಮಕ್ಕಳು ಆನಂದಿಸುವರು?

19 ಒಂದು ಮಾದರಿಯಾಗಿ, ಒಬ್ಬ ಸಂಗಡಿಗನಾಗಿ, ಒಬ್ಬ ಸಂವಾದಕನಾಗಿ ಮತ್ತು ಒಬ್ಬ ಶಿಕ್ಷಕನಾಗಿ ಇರುವ ಮೂಲಕ, ನೀವು ನಿಮ್ಮ ಮಗನಲ್ಲಿ ಅವನ ಅತಿ ಬಾಲ್ಯದ ವರ್ಷಗಳಿಂದಲೇ ಯೆಹೋವ ದೇವರೊಂದಿಗೆ ಒಂದು ಒತ್ತಾದ ವೈಯಕ್ತಿಕ ಸಂಬಂಧವನ್ನು ರೂಪಿಸಲು ನೆರವಾಗಬಲ್ಲಿರಿ. ಈ ಸಂಬಂಧವು ನಿಮ್ಮ ಮಗನು ಒಬ್ಬ ಕ್ರೈಸ್ತನೋಪಾದಿ ಸಂತೋಷಿತನಾಗಿರುವಂತೆ ಪ್ರೋತ್ಸಾಹಿಸುವುದು. ಸಮವಯಸ್ಕರ ಒತ್ತಡ ಮತ್ತು ಶೋಧನೆಗಳನ್ನು ಎದುರಿಸುವಾಗಲೂ ತನ್ನ ನಂಬಿಕೆಗನುಸಾರ ಜೀವಿಸಲು ಅವನು ಪ್ರಯಾಸಪಡುವನು. ಈ ಅಮೂಲ್ಯ ಸಂಬಂಧವನ್ನು ಗಣ್ಯಮಾಡಲು ಅವನಿಗೆ ಯಾವಾಗಲೂ ಸಹಾಯ ಮಾಡಿರಿ.—ಜ್ಞಾನೋಕ್ತಿ 27:11.

ಶಿಸ್ತಿನ ಅತ್ಯಾವಶ್ಯಕತೆ

20. ಶಿಸ್ತು ಎಂದರೇನು, ಮತ್ತು ಅದು ಹೇಗೆ ಅನ್ವಯಿಸಲ್ಪಡಬೇಕು?

20 ಮನಸ್ಸು ಮತ್ತು ಹೃದಯವನ್ನು ಸರಿಪಡಿಸುವ ತರಬೇತೇ ಶಿಸ್ತಾಗಿದೆ. ಮಕ್ಕಳಿಗೆ ಸತತವಾಗಿ ಇದರ ಅವಶ್ಯವಿದೆ. “[ತಮ್ಮ ಮಕ್ಕಳನ್ನು] ಯೆಹೋವನ ಶಿಸ್ತಿನಲ್ಲಿಯೂ ಮಾನಸಿಕ ಕ್ರಮಪಡಿಸುವಿಕೆಯಲ್ಲಿಯೂ ಬೆಳೆಸುತ್ತ” ಹೋಗುವಂತೆ ಪೌಲನು ತಂದೆಗಳಿಗೆ ಸಲಹೆ ನೀಡುತ್ತಾನೆ. (ಎಫೆಸ 6:4, NW) ಯೆಹೋವನು ಮಾಡುವ ಪ್ರಕಾರವೇ ಹೆತ್ತವರು ಪ್ರೀತಿಯಿಂದ ಶಿಸ್ತನ್ನು ನೀಡಬೇಕು. (ಇಬ್ರಿಯ 12:4-11) ಪ್ರೀತಿಯಲ್ಲಿ ಆಧಾರಿತವಾದ ಶಿಸ್ತನ್ನು ತರ್ಕಬದ್ಧವಾಗಿ ನಿರೂಪಿಸಸಾಧ್ಯವಿದೆ. ಆದಕಾರಣ, “ಉಪದೇಶವನ್ನು [“ಶಿಸ್ತನ್ನು,” NW] ಕೇಳಿರಿ,” ಎಂದು ನಮಗೆ ಹೇಳಲಾಗಿದೆ. (ಜ್ಞಾನೋಕ್ತಿ 8:33) ಶಿಸ್ತು ಹೇಗೆ ನೀಡಲ್ಪಡಬೇಕು?

21. ತಮ್ಮ ಮಕ್ಕಳನ್ನು ಶಿಸ್ತುಗೊಳಿಸುತ್ತಿರುವಾಗ ಯಾವ ಮೂಲತತ್ವಗಳನ್ನು ಹೆತ್ತವರು ಮನಸ್ಸಿನಲ್ಲಿಡಬೇಕು?

21 ತಮ್ಮ ಮಕ್ಕಳನ್ನು ಶಿಸ್ತುಗೊಳಿಸುವುದರಲ್ಲಿ, ಬೆದರಿಸುವ ಧ್ವನಿಯಲ್ಲಿ ಮಾತಾಡುವುದು, ಗದರಿಸುವುದು, ಅಥವಾ ಬೈದು ಅವಮಾನಿಸುವುದು ಮಾತ್ರ ಒಳಗೂಡುತ್ತದೆಂದು ಕೆಲವು ಹೆತ್ತವರು ನೆನಸುತ್ತಾರೆ. ಆದರೂ ಶಿಸ್ತಿನ ಅದೇ ವಿಷಯದಲ್ಲಿ ಪೌಲನು ಎಚ್ಚರಿಸುವುದು: “ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸ”ಬೇಡಿರಿ. (ಎಫೆಸ 6:4) ಕ್ರೈಸ್ತರೆಲ್ಲರು “ಎಲ್ಲರ ವಿಷಯದಲ್ಲಿ ಸಾಧು[ಗಳೂ] . . . ಎದುರಿಸುವವರನ್ನು ನಿಧಾನವಾಗಿ ತಿದ್ದು”ವವರೂ ಆಗಿರುವಂತೆ ಉತ್ತೇಜಿಸಲ್ಪಡುತ್ತಾರೆ. (2 ತಿಮೊಥೆಯ 2:24, 25) ದೃಢತೆಯ ಅಗತ್ಯವನ್ನು ಮನಗಾಣುತ್ತಿರುವಾಗಲೂ, ಕ್ರೈಸ್ತ ಹೆತ್ತವರು ತಮ್ಮ ಮಕ್ಕಳನ್ನು ಶಿಸ್ತುಗೊಳಿಸುವಾಗ, ಈ ಮಾತುಗಳನ್ನು ಮನಸ್ಸಿನಲ್ಲಿಡಲು ಪ್ರಯತ್ನಿಸುತ್ತಾರೆ. ಆದರೂ ಕೆಲವು ಬಾರಿ ವಿವೇಚನಾತರ್ಕವು ಸಾಲದು, ಮತ್ತು ಯಾವ ಶಿಕ್ಷೆಯನ್ನಾದರೂ ಕೊಡಬೇಕಾದೀತು.—ಜ್ಞಾನೋಕ್ತಿ 22:15.

22. ಮಗುವಿಗೆ ಶಿಕ್ಷೆಕೊಡುವ ಅಗತ್ಯವಿದ್ದಲ್ಲಿ, ಅವನು ಏನನ್ನು ತಿಳಿದುಕೊಳ್ಳುವಂತೆ ಸಹಾಯ ಮಾಡಲ್ಪಡಬೇಕು?

22 ವಿವಿಧ ಮಕ್ಕಳಿಗೆ ವಿವಿಧ ರೀತಿಯ ಶಿಸ್ತಿನ ಅವಶ್ಯವಿದೆ. ಕೆಲವರು “ಮಾತಿನಿಂದ ಮಾತ್ರ ಶಿಕ್ಷಿತ”ರಾಗಲಾರರು. ಅವಿಧೇಯತೆಗಾಗಿ ಆಗಿಂದಾಗ್ಗೆ ಶಿಕ್ಷೆಯನ್ನು ವಿಧಿಸುವುದು ಅವರಿಗೆ ಜೀವರಕ್ಷಕವಾಗಿರಬಹುದು. (ಜ್ಞಾನೋಕ್ತಿ 17:10; 23:13, 14; 29:19) ಆದರೆ ತನಗೆ ಶಿಕ್ಷೆಯು ಏಕೆ ಕೊಡಲ್ಪಡುತ್ತಿದೆಯೆಂದು ಮಗುವಿಗೆ ತಿಳಿಯಬೇಕು. “ಬೆತ್ತಬೆದರಿಕೆಗಳಿಂದ ಜ್ಞಾನವುಂಟಾಗುವದು.” (ಜ್ಞಾನೋಕ್ತಿ 29:15, ಓರೆಅಕ್ಷರಗಳು ನಮ್ಮವು; ಯೋಬ 6:24) ಅಷ್ಟಲ್ಲದೆ, ಶಿಕ್ಷೆಗೆ ಪರಿಮಿತಿಗಳಿವೆ. “ನಾನು ನಿನ್ನನ್ನು ತಕ್ಕ ಪ್ರಮಾಣದಲ್ಲಿ ಶಿಕ್ಷಿಸಲೇಬೇಕು” ಅಂದನು ಯೆಹೋವನು ತನ್ನ ಜನರಿಗೆ. (ಯೆರೆಮೀಯ 46:28ಬಿ, NW) ಮಗುವನ್ನು ಗಾಯಗೊಳಿಸುವ ಅಥವಾ ಘಾಸಿಗೊಳಿಸಲೂಬಹುದಾದ ಕ್ರೋಧಿತ ಚಾವಟಿಯೇಟುಗಳು ಅಥವಾ ತೀಕ್ಷ್ಣ ಹೊಡೆತಗಳನ್ನು ಬೈಬಲು ಖಂಡಿತವಾಗಿಯೂ ಅನುಮೋದಿಸುವುದಿಲ್ಲ ನಿಶ್ಚಯ.—ಜ್ಞಾನೋಕ್ತಿ 16:32.

23. ಒಬ್ಬ ಮಗುವು ತನ್ನ ಹೆತ್ತವರಿಂದ ಶಿಕ್ಷಿಸಲ್ಪಡುವಾಗ, ಅವನು ಏನನ್ನು ವಿವೇಚಿಸಲು ಶಕ್ತನಾಗಿರಬೇಕು?

23 ಯೆಹೋವನು ತನ್ನ ಜನರನ್ನು ತಾನು ಶಿಸ್ತುಗೊಳಿಸಲಿರುವೆನೆಂದು ಹೇಳಿದಾಗ, ಆತನು ಮೊದಲು ಅಂದದ್ದು: “ಭಯಪಡಬೇಡ, ನಾನು ನಿನ್ನೊಂದಿಗಿದ್ದೇನೆ.” (ಯೆರೆಮೀಯ 46:28ಎ) ತದ್ರೀತಿ, ಹೆತ್ತವರಿಂದ ಕೊಡಲ್ಪಡುವ ಶಿಸ್ತು ಯಾವುದೇ ಸೂಕ್ತವಾದ ರೂಪದಲ್ಲಿರಲಿ, ಮಗುವಿಗೆ ತಿರಸ್ಕರಿಸಲ್ಪಟ್ಟ ಭಾವನೆಯನ್ನು ಎಂದೂ ಕೊಡಬಾರದು. (ಕೊಲೊಸ್ಸೆ 3:21) ಬದಲಿಗೆ, ಹೆತ್ತವರು ‘ತನ್ನೊಂದಿಗೆ,’ ತನ್ನ ಪಕ್ಷದಲ್ಲಿ ಇರುವುದರಿಂದಾಗಿಯೇ ಶಿಸ್ತು ನೀಡಲ್ಪಡುತ್ತದೆಂಬ ಅನಿಸಿಕೆ ಮಗುವಿಗೆ ಆಗಬೇಕು.

ನಿಮ್ಮ ಮಗುವನ್ನು ಹಾನಿಯಿಂದ ಕಾಪಾಡಿರಿ

24, 25. ಈ ದಿನಗಳಲ್ಲಿ ಮಕ್ಕಳಿಗೆ ಸಂರಕ್ಷಣೆಯ ಅಗತ್ಯವಿರುವ, ಒಂದು ಅಸಹ್ಯವಾದ ಬೆದರಿಕೆಯು ಯಾವುದು?

24 ಅನೇಕ ಪ್ರಾಪ್ತ ವಯಸ್ಕರು ತಮ್ಮ ಬಾಲ್ಯಾವಸ್ಥೆಯನ್ನು ಒಂದು ಸಂತೋಷದ ಸಮಯವಾಗಿ ಜ್ಞಾಪಿಸಿಕೊಳ್ಳುತ್ತಾರೆ. ತಮ್ಮ ಹೆತ್ತವರು ಎಲ್ಲ ಪರಿಸ್ಥಿತಿಗಳ ಕೆಳಗೆ ತಮ್ಮನ್ನು ಪರಾಮರಿಸುವರೆಂಬ ಖಾತರಿ, ಒಂದು ಸುರಕ್ಷೆಯ ಹೃದಯೋಲ್ಲಾಸ ಭಾವವನ್ನು ಅವರು ಮರುಜ್ಞಾಪಿಸಿಕೊಳ್ಳುತ್ತಾರೆ. ತಮ್ಮ ಮಕ್ಕಳು ಆ ರೀತಿಯಾಗಿ ಭಾವಿಸುವಂತೆ ಹೆತ್ತವರು ಬಯಸುತ್ತಾರೆ, ಆದರೆ ಇಂದಿನ ಭ್ರಷ್ಟ ಜಗತ್ತಿನಲ್ಲಿ ಮಕ್ಕಳನ್ನು ಸುರಕ್ಷಿತವಾಗಿಡುವುದು ಮುಂಚಿಗಿಂತ ಹೆಚ್ಚು ಕಷ್ಟವಾಗಿರುತ್ತದೆ.

25 ಇತ್ತೀಚಿನ ವರ್ಷಗಳಲ್ಲಿ ಬೆಳೆದಿರುವ ಒಂದು ಹೇಯವಾದ ಬೆದರಿಕೆಯು ಮಕ್ಕಳ ಲೈಂಗಿಕ ಪೀಡನೆಯೇ. ಮಲೇಷ್ಯದಲ್ಲಿ ಮಕ್ಕಳ ಲೈಂಗಿಕ ಪೀಡನೆಯ ವರದಿಗಳು ಹತ್ತು ವರ್ಷಗಳ ಅವಧಿಯಲ್ಲಿ ನಾಲ್ಕು ಪಟ್ಟು ಹೆಚ್ಚಾಯಿತು. ಜರ್ಮನಿಯಲ್ಲಿ ಸುಮಾರು 3,00,000 ಮಕ್ಕಳು ಪ್ರತಿ ವರ್ಷ ಲೈಂಗಿಕವಾಗಿ ಅಪಪ್ರಯೋಗಿಸಲ್ಪಡುವಾಗ, ದಕ್ಷಿಣ ಅಮೆರಿಕದ ಒಂದು ದೇಶದಲ್ಲಾದರೋ, ಒಂದು ಅಧ್ಯಯನಕ್ಕನುಸಾರ, ವಾರ್ಷಿಕ ಸಂಖ್ಯೆಯು ತತ್ತರಗುಟ್ಟಿಸುವ 90,00,000ವಾಗಿದೆ ಎಂದು ಅಂದಾಜುಮಾಡಲ್ಪಟ್ಟಿದೆ! ದುರಂತಕರವಾಗಿ, ಈ ಮಕ್ಕಳಲ್ಲಿ ಹೆಚ್ಚಿನವರು ತಮ್ಮ ಸ್ವಂತ ಮನೆಯಲ್ಲಿ, ತಾವು ತಿಳಿದಿರುವ ಮತ್ತು ಭರವಸೆಯಿಡುವ ಸ್ವಂತ ಜನರಿಂದ ಪೀಡಿಸಲ್ಪಡುತ್ತಾರೆ. ಆದರೆ ಮಕ್ಕಳಿಗೆ ತಮ್ಮ ಹೆತ್ತವರಲ್ಲಿ ಒಂದು ಬಲವಾದ ರಕ್ಷೆಯು ಇರತಕ್ಕದ್ದು. ಹೆತ್ತವರು ಹೇಗೆ ಸಂರಕ್ಷಕರಾಗಿರಬಲ್ಲರು?

26. ಮಕ್ಕಳನ್ನು ಸುರಕ್ಷಿತವಾಗಿಡಬಲ್ಲ ಕೆಲವು ವಿಧಗಳು ಯಾವುವು, ಮತ್ತು ಜ್ಞಾನವು ಒಂದು ಮಗುವನ್ನು ಹೇಗೆ ಸಂರಕ್ಷಿಸಬಲ್ಲದು?

26 ಮಕ್ಕಳ ಪೀಡಕರಿಗೆ ವಿಶೇಷವಾಗಿ ಸುಲಭಭೇದ್ಯರಾಗಿರುವವರು, ಲೈಂಗಿಕತೆಯ ಕುರಿತು ಕೊಂಚವೇ ತಿಳಿದಿರುವ ಮಕ್ಕಳು ಎಂದು ಅನುಭವವು ತೋರಿಸುವುದರಿಂದ, ಒಂದು ದೊಡ್ಡ ಪ್ರತಿಬಂಧಕ ಹೆಜ್ಜೆಯು, ಮಗುವು ಇನ್ನೂ ಎಳೆಯದಾಗಿರುವಾಗಲೇ, ಅವನಿಗೆ ಶಿಕ್ಷಣ ನೀಡುವುದೇ. ಜ್ಞಾನವು “ದುರ್ಮಾರ್ಗದಿಂದಲೂ ಕೆಟ್ಟ ಮಾತನಾಡುವವರಿಂದಲೂ” ರಕ್ಷಣೆಯನ್ನು ಒದಗಿಸಬಲ್ಲದು. (ಜ್ಞಾನೋಕ್ತಿ 2:10-12) ಯಾವ ಜ್ಞಾನ? ನೈತಿಕವಾಗಿ ಯಾವುದು ಸರಿ ಮತ್ತು ತಪ್ಪು ಎಂಬ ಬೈಬಲಿನ ಮೂಲತತ್ವಗಳ ಜ್ಞಾನವೇ. ಕೆಲವು ವಯಸ್ಕರು ಕೆಟ್ಟ ವಿಷಯಗಳನ್ನು ನಡೆಸುತ್ತಾರೆ ಮತ್ತು ಜನರು ಅಯೋಗ್ಯ ಕೃತ್ಯಗಳನ್ನು ಮಾಡುವಂತೆ ಸೂಚಿಸುವಾಗ ಒಬ್ಬ ಎಳೆಯನು ಅದಕ್ಕೆ ವಿಧೇಯನಾಗಬೇಕಿಲ್ಲವೆಂಬ ಜ್ಞಾನ ಸಹ. (ಹೋಲಿಸಿ ದಾನಿಯೇಲ 1:4, 8; 3:16-18.) ಅಂತಹ ಉಪದೇಶವನ್ನು ಒಂದೇ ಸಲದ ಮಾತಾಗಿ ಪರಿಮಿತಗೊಳಿಸಬೇಡಿ. ಒಂದು ಪಾಠವನ್ನು ಚೆನ್ನಾಗಿ ನೆನಪಿನಲ್ಲಿಡುವ ಮುಂಚೆ ಅದನ್ನು ಪುನರಾವೃತ್ತಿ ಮಾಡುವ ಅಗತ್ಯವು ಹೆಚ್ಚಿನ ಎಳೆಯ ಮಕ್ಕಳಿಗಿದೆ. ಮಕ್ಕಳು ಸ್ವಲ್ಪ ದೊಡ್ಡವರಾದಂತೆ, ತಂದೆಯು ತನ್ನ ಮಗಳ ಏಕಾಂತದ ಹಕ್ಕನ್ನು ಮತ್ತು ತಾಯಿಯು ಮಗನದ್ದನ್ನು ಆದರಪೂರ್ವಕವಾಗಿ ಗೌರವಿಸುವರು—ಹೀಗೆ ಯಾವುದು ಯೋಗ್ಯವೋ ಅದರ ಕುರಿತ ಮಗುವಿನ ಅರಿವನ್ನು ಬಲಪಡಿಸುವರು. ಮತ್ತು ನಿಶ್ಚಯವಾಗಿ ಅಪಪ್ರಯೋಗದ ವಿರುದ್ಧ ಒಂದು ಉತ್ತಮ ಸುರಕ್ಷೆಯು ಹೆತ್ತವರಾದ ನಿಮ್ಮಿಂದ ನಿಕಟ ಮೇಲ್ವಿಚಾರಣೆಯೇ.

ದೈವಿಕ ಮಾರ್ಗದರ್ಶನವನ್ನು ಹುಡುಕಿರಿ

27, 28. ಒಂದು ಮಗುವನ್ನು ಬೆಳೆಸುವ ಪಂಥಾಹ್ವಾನವನ್ನು ಹೆತ್ತವರು ಎದುರಿಸುವಾಗ ಅವರ ಸಹಾಯದ ಮಹಾ ಮೂಲನು ಯಾರು?

27 ನಿಜವಾಗಿಯೂ, ಶೈಶವದಿಂದ ಒಂದು ಮಗುವಿನ ತರಬೇತಿಯು ಒಂದು ಪಂಥಾಹ್ವಾನವಾಗಿದೆ, ಆದರೆ ವಿಶ್ವಾಸಿ ಹೆತ್ತವರು ಆ ಪಂಥಾಹ್ವಾನವನ್ನು ಒಬ್ಬಂಟಿಗರಾಗಿ ಎದುರಿಸಲಿರುವುದಿಲ್ಲ. ಹಿಂದೆ ನ್ಯಾಯಸ್ಥಾಪಕರ ದಿನಗಳಲ್ಲಿ, ಮಾನೋಹನೆಂಬ ಪುರುಷನು ತಾನು ತಂದೆಯಾಗಲಿರುವನೆಂದು ತಿಳಿದಾಗ, ತನ್ನ ಮಗುವನ್ನು ಬೆಳೆಸುವುದರ ಕುರಿತಾದ ಮಾರ್ಗದರ್ಶನೆಗಾಗಿ ಅವನು ಯೆಹೋವನನ್ನು ಕೇಳಿದನು. ಯೆಹೋವನು ಅವನ ಪ್ರಾರ್ಥನೆಗಳನ್ನು ಉತ್ತರಿಸಿದನು.—ನ್ಯಾಯಸ್ಥಾಪಕರು 13:8, 12, 24.

28 ತದ್ರೀತಿಯಲ್ಲಿ ಇಂದು, ವಿಶ್ವಾಸಿ ಹೆತ್ತವರು ತಮ್ಮ ಮಕ್ಕಳನ್ನು ಬೆಳೆಸುವಾಗ, ಅವರು ಸಹ ಪ್ರಾರ್ಥನೆಯಲ್ಲಿ ಯೆಹೋವನೊಂದಿಗೆ ಮಾತಾಡಸಾಧ್ಯವಿದೆ. ಹೆತ್ತವರಾಗಿರುವುದು ಒಂದು ಕಷ್ಟದ ಕೆಲಸ, ಆದರೆ ಮಹಾ ಪ್ರತಿಫಲಗಳು ಅದರಲ್ಲಿವೆ. ಹವಾಯೀಯ ಒಬ್ಬ ಕ್ರೈಸ್ತ ದಂಪತಿಗಳು ಹೇಳುವುದು: “ಆ ಸಂದುಕಟ್ಟಿನ ಹದಿವರ್ಷಗಳ ಮುಂಚೆ ನಿಮ್ಮ ಮಗುವಿನ ತರಬೇತಿಗಾಗಿ 12 ವರ್ಷಗಳು ನಿಮಗಿವೆ. ಆದರೆ ಬೈಬಲ್‌ ಮೂಲತತ್ವಗಳನ್ನು ಅನ್ವಯಿಸಲು ನೀವು ಕಷ್ಟಪಟ್ಟು ಕೆಲಸಮಾಡಿದ್ದೀರಾದರೆ, ಹೃದಯಪೂರ್ವಕವಾಗಿ ಯೆಹೋವನ ಸೇವೆ ಮಾಡಬಯಸುತ್ತೇವೆಂದು ಅವರು ನಿರ್ಣಯಿಸುವಾಗ, ಅದು ಆನಂದ ಮತ್ತು ಸಮಾಧಾನವನ್ನು ಕೊಯ್ಯುವ ಸಮಯವಾಗಿರುತ್ತದೆ.” (ಜ್ಞಾನೋಕ್ತಿ 23:15, 16) ನಿಮ್ಮ ಮಗುವು ಆ ನಿರ್ಣಯವನ್ನು ಮಾಡುವಾಗ, ನೀವು ಸಹ ಈ ಉದ್ಗಾರವನ್ನೆತ್ತಲು ಪ್ರೇರಿಸಲ್ಪಡುವಿರಿ: “ಪುತ್ರ [ಮತ್ತು ಪುತ್ರಿಯರ] ಸಂತಾನವು ಯೆಹೋವನಿಂದ ಬಂದ ಸ್ವಾಸ್ತ್ಯವು.”

^ ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿ ಪ್ರಕಾಶಿತ.