ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ ಹನ್ನೊಂದು

ನಿಮ್ಮ ಮನೆವಾರ್ತೆಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಿರಿ

ನಿಮ್ಮ ಮನೆವಾರ್ತೆಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಿರಿ

1. ಕುಟುಂಬಗಳಲ್ಲಿ ವಿಭಾಗಗಳನ್ನು ಉಂಟುಮಾಡಬಹುದಾದ ಕೆಲವು ವಿಷಯಗಳು ಯಾವುವು?

 ಯಾವ ಕುಟುಂಬಗಳಲ್ಲಿ ಪ್ರೀತಿ, ತಿಳಿವಳಿಕೆ, ಮತ್ತು ಶಾಂತಿಯು ಇದೆಯೊ ಅವುಗಳಿಗೆ ಸೇರಿರುವವರು ಧನ್ಯರು. ಅಪೇಕ್ಷಿತವಾಗಿ, ನಿಮ್ಮದು ಅಂತಹ ಒಂದು ಕುಟುಂಬವಾಗಿದೆ. ಶೋಚನೀಯವಾಗಿ ಅಗಣಿತ ಕುಟುಂಬಗಳು ಆ ವರ್ಣನೆಯನ್ನು ತಲಪಲು ತಪ್ಪಿಬಿದ್ದು, ಒಂದಲ್ಲಾ ಒಂದು ಕಾರಣದಿಂದಾಗಿ ವಿಭಾಗವಾಗಿವೆ. ಮನೆವಾರ್ತೆಗಳನ್ನು ಯಾವುದು ವಿಭಾಗಿಸುತ್ತದೆ? ಈ ಅಧ್ಯಾಯದಲ್ಲಿ ನಾವು ಮೂರು ವಿಷಯಗಳನ್ನು ಚರ್ಚಿಸುವೆವು. ಕೆಲವು ಕುಟುಂಬಗಳಲ್ಲಿ ಸದಸ್ಯರೆಲ್ಲರು ಒಂದೇ ಧರ್ಮದಲ್ಲಿ ಪಾಲಿಗರಾಗಿರುವುದಿಲ್ಲ. ಬೇರೆಯವುಗಳಲ್ಲಿ, ಮಕ್ಕಳಿಗೆ ಒಂದೇ ಸ್ವಾಭಾವಿಕ ಹೆತ್ತವರು ಇಲ್ಲದಿರಬಹುದು. ಇನ್ನು ಕೆಲವಲ್ಲಿ ಜೀವನೋಪಾಯವನ್ನು ಮಾಡುವ ಹೋರಾಟ ಅಥವಾ ಹೆಚ್ಚಿನ ಭೌತಿಕ ವಸ್ತುಗಳ ಅಭಿಲಾಷೆಯು ಕುಟುಂಬ ಸದಸ್ಯರನ್ನು ಪ್ರತ್ಯೇಕವಾಗುವಂತೆ ಒತ್ತಾಯಿಸುತ್ತದೆ. ಆದರೂ, ಒಂದು ಮನೆವಾರ್ತೆಯನ್ನು ವಿಭಾಗಿಸುವ ಪರಿಸ್ಥಿತಿಗಳು ಇನ್ನೊಂದನ್ನು ಪ್ರಭಾವಿಸದಿರಬಹುದು. ಯಾವುದು ವ್ಯತ್ಯಾಸವನ್ನುಂಟುಮಾಡುತ್ತದೆ?

2. ಕುಟುಂಬ ಜೀವನದಲ್ಲಿ ಮಾರ್ಗದರ್ಶನಕ್ಕಾಗಿ ಕೆಲವರು ಎಲ್ಲಿ ನೋಡುತ್ತಾರೆ, ಆದರೆ ಅಂತಹ ಮಾರ್ಗದರ್ಶನದ ಅತ್ಯುತ್ತಮ ಮೂಲವು ಯಾವುದು?

2 ದೃಷ್ಟಿಕೋನವು ಒಂದು ಕಾರಣಾಂಶ. ಇನ್ನೊಬ್ಬ ವ್ಯಕ್ತಿಯ ದೃಷ್ಟಿಕೋನವನ್ನು ತಿಳಿದುಕೊಳ್ಳಲು ನೀವು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾದರೆ, ಒಂದು ಐಕಮತ್ಯದ ಮನೆವಾರ್ತೆಯನ್ನು ಉಳಿಸಿಕೊಳ್ಳುವ ವಿಧವನ್ನು ನೀವು ಹೆಚ್ಚು ಸಂಭವನೀಯವಾಗಿ ಗ್ರಹಿಸಿಕೊಳ್ಳುವಿರಿ. ಎರಡನೆಯ ಕಾರಣಾಂಶವು, ನಿಮ್ಮ ಮಾರ್ಗದರ್ಶನೆಯ ಮೂಲವಾಗಿದೆ. ಅನೇಕ ಜನರು ತಮ್ಮ ಸಹಕರ್ಮಿಗಳ, ನೆರೆಯವರ, ವಾರ್ತಾ ಅಂಕಣಗಾರರ, ಅಥವಾ ಇತರ ಮಾನವ ಮಾರ್ಗದರ್ಶಿಗಳ ಬುದ್ಧಿವಾದವನ್ನು ಅನುಸರಿಸುತ್ತಾರೆ. ಕೆಲವರಾದರೊ ದೇವರ ವಾಕ್ಯವು ತಮ್ಮ ಸನ್ನಿವೇಶದ ಕುರಿತು ಏನನ್ನುತ್ತದೆಂದು ಕಂಡುಹಿಡಿದು, ಅನಂತರ ತಾವು ಕಲಿತ ವಿಷಯಗಳನ್ನು ಅನ್ವಯಿಸಿಕೊಂಡಿದ್ದಾರೆ. ಇದನ್ನು ಮಾಡುವುದು ಒಂದು ಕುಟುಂಬಕ್ಕೆ ಮನೆವಾರ್ತೆಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಹೇಗೆ ಸಹಾಯ ಮಾಡಬಲ್ಲದು?—2 ತಿಮೊಥೆಯ 3:16, 17.

ನಿಮ್ಮ ಗಂಡನು ಒಬ್ಬ ವಿಭಿನ್ನ ನಂಬಿಕೆಯವನಾಗಿದ್ದರೆ

3. (ಎ) ವಿಭಿನ್ನ ನಂಬಿಕೆಯ ಒಬ್ಬನನ್ನು ವಿವಾಹವಾಗುವ ವಿಷಯದಲ್ಲಿ ಬೈಬಲಿನ ಸಲಹೆಯೇನು? (ಬಿ) ಒಬ್ಬ ಜೊತೆಗಾರ್ತಿಯು ವಿಶ್ವಾಸದಲ್ಲಿದ್ದು ಇನ್ನೊಬ್ಬನು ಇಲ್ಲದಿರುವಲ್ಲಿ ಅನ್ವಯಿಸುವ ಕೆಲವು ಮೂಲಭೂತ ತತ್ವಗಳು ಯಾವುವು?

3 ಒಂದು ವಿಭಿನ್ನ ಧಾರ್ಮಿಕ ನಂಬಿಕೆಯ ಒಬ್ಬರೊಂದಿಗೆ ವಿವಾಹವಾಗುವ ವಿರುದ್ಧವಾಗಿ ಬೈಬಲು ಬಲವಾದ ಸಲಹೆಯನ್ನು ನೀಡುತ್ತದೆ. (ಧರ್ಮೋಪದೇಶಕಾಂಡ 7:3, 4; 1 ಕೊರಿಂಥ 7:39) ಆದರೂ, ನಿಮ್ಮ ವಿವಾಹದ ಅನಂತರ ನೀವು ಬೈಬಲಿನಿಂದ ಸತ್ಯವನ್ನು ಕಲಿತಿರಬಹುದು, ಆದರೆ ನಿಮ್ಮ ಗಂಡನು ಕಲಿಯಲಿಲ್ಲ. ಆಗೇನು? ನಿಶ್ಚಯವಾಗಿಯೂ ವಿವಾಹ ಪ್ರತಿಜ್ಞೆಗಳು ಇನ್ನೂ ಬಂಧಕವಾಗಿರುತ್ತವೆ. (1 ಕೊರಿಂಥ 7:10) ವಿವಾಹ ಬಂಧನದ ಶಾಶ್ವತತೆಯನ್ನು ಬೈಬಲು ಒತ್ತಿಹೇಳುತ್ತದೆ ಮತ್ತು ವಿವಾಹಿತ ಜನರು ತಮ್ಮ ಭಿನ್ನತೆಗಳಿಂದ ಪಲಾಯನಗೈಯುವ ಬದಲಿಗೆ ಅವನ್ನು ನೀಗಿಸಿಕೊಳ್ಳುವಂತೆ ಪ್ರೋತ್ಸಾಹಿಸುತ್ತದೆ. (ಎಫೆಸ 5:28-31; ತೀತ 2:4, 5) ಬೈಬಲಿನ ಧರ್ಮವನ್ನು ನೀವು ಅನುಸರಿಸುವುದನ್ನು ನಿಮ್ಮ ಗಂಡನು ಬಲವಾಗಿ ಆಕ್ಷೇಪಿಸುವುದಾದರೆ ಆಗೇನು? ಸಭಾ ಕೂಟಗಳಿಗೆ ಹೋಗುವುದರಿಂದ ಅವನು ನಿಮ್ಮನ್ನು ತಡೆಯಲು ಪ್ರಯತ್ನಿಸಬಹುದು, ಅಥವಾ ತನ್ನ ಹೆಂಡತಿಯು ಧರ್ಮದ ಕುರಿತು ಮಾತಾಡುತ್ತಾ, ಮನೆಯಿಂದ ಮನೆಗೆ ಹೋಗುವುದು ತನಗೆ ಮನಸ್ಸಿಲ್ಲ ಎಂದವನು ಹೇಳಬಹುದು. ನೀವೇನು ಮಾಡುವಿರಿ?

4. ತನ್ನ ಗಂಡನು ತನ್ನ ನಂಬಿಕೆಯಲ್ಲಿ ಪಾಲಿಗನಾಗದಿರುವಾಗ ಹೆಂಡತಿಯು ಯಾವ ವಿಧದಲ್ಲಿ ಸಹಾನುಭೂತಿಯನ್ನು ತೋರಿಸಬಹುದು?

4 ನಿಮ್ಮನ್ನು ಕೇಳಿಕೊಳ್ಳಿ, ‘ನನ್ನ ಗಂಡನು ಆ ರೀತಿಯಾಗಿ ಭಾವಿಸುವುದೇಕೆ?’ (ಜ್ಞಾನೋಕ್ತಿ 16:20, 23) ನೀವು ಮಾಡುತ್ತಿರುವುದನ್ನು ಅವನು ನಿಜವಾಗಿಯೂ ತಿಳಿದುಕೊಳ್ಳದಿರುವಲ್ಲಿ, ಅವನು ನಿಮ್ಮ ವಿಷಯದಲ್ಲಿ ಚಿಂತಿಸಬಹುದು. ಅಥವಾ ನೀವೀಗ ಅವರಿಗೆ ಪ್ರಾಮುಖ್ಯವಾದ ನಿರ್ದಿಷ್ಟ ಪದ್ಧತಿಗಳಲ್ಲಿ ಪಾಲಿಗರಾಗದಿರುವ ಕಾರಣ ಸಂಬಂಧಿಕರಿಂದ ಅವನು ಒತ್ತಡಕ್ಕೆ ಒಳಗಾಗಿರಬಹುದು. “ಮನೆಯಲ್ಲಿ ಒಬ್ಬಂಟಿಗನಾಗಿ, ನನಗೆ ತೊರೆಯಲ್ಪಟ್ಟ ಅನಿಸಿಕೆಯಾಯಿತು,” ಎಂದು ಒಬ್ಬ ಗಂಡನು ಹೇಳಿದನು. ತನ್ನ ಹೆಂಡತಿಯನ್ನು ಒಂದು ಧರ್ಮಕ್ಕೆ ಕಳೆದುಕೊಳ್ಳುತ್ತಿರುವ ಅನಿಸಿಕೆ ಈ ಮನುಷ್ಯನಿಗಾಯಿತು. ಆದರೂ ತಾನು ಒಂಟಿಗನಾಗಿದ್ದೇನೆಂದು ಅಂಗೀಕರಿಸಲು ಹೆಮ್ಮೆಯು ಅವನನ್ನು ತಡೆಯಿತು. ಯೆಹೋವನಿಗಾಗಿ ನಿಮ್ಮ ಪ್ರೀತಿಯು, ನೀವೀಗ ನಿಮ್ಮ ಗಂಡನನ್ನು ಮುಂಚಿಗಿಂತ ಕಡಿಮೆ ಪ್ರೀತಿಸುತ್ತೀರಿ ಎಂಬರ್ಥವಲ್ಲವೆಂಬ ಆಶ್ವಾಸನೆಯು ನಿಮ್ಮ ಗಂಡನಿಗೆ ಬೇಕಾಗಬಹುದು. ಅವನೊಂದಿಗೆ ಸಮಯ ಕಳೆಯಲು ಖಾತರಿಯಿಂದಿರ್ರಿ.

5. ಯಾರ ಗಂಡನು ಒಂದು ವಿಭಿನ್ನ ನಂಬಿಕೆಯವನಾಗಿದ್ದಾನೊ ಆ ಹೆಂಡತಿಯು ಯಾವ ಸಮತೆಯನ್ನು ಇಟ್ಟುಕೊಳ್ಳಬೇಕು?

5 ಆದರೂ, ಈ ಸನ್ನಿವೇಶವನ್ನು ನೀವು ವಿವೇಕದಿಂದ ನಿರ್ವಹಿಸಲಿರುವುದಾದರೆ ಇದಕ್ಕಿಂತಲೂ ಹೆಚ್ಚು ಪ್ರಮುಖವಾದ ವಿಷಯವು ಪರಿಗಣಿಸಲ್ಪಡಲೇಬೇಕು. ದೇವರ ವಾಕ್ಯವು ಹೆಂಡತಿಯರನ್ನು ಪ್ರೇರಿಸುವುದು: “ನಿಮ್ಮ ಗಂಡಂದಿರಿಗೆ ಅಧೀನರಾಗಿರಿ; ಇದು ಕರ್ತನಲ್ಲಿರುವವರಿಗೆ ಯೋಗ್ಯವಾಗಿದೆ.” (ಕೊಲೊಸ್ಸೆ 3:18) ಹೀಗೆ, ಸ್ವತಂತ್ರ ಭಾವದ ವಿರುದ್ಧ ಅದು ಎಚ್ಚರಿಸುತ್ತದೆ. ಅದಲ್ಲದೆ, “ಕರ್ತನಲ್ಲಿರುವವರಿಗೆ ಯೋಗ್ಯ”ವಾಗಿದೆ ಎಂದು ಹೇಳುವ ಮೂಲಕ, ಗಂಡನಿಗೆ ತೋರಿಸುವ ಅಧೀನತೆಯು, ಕರ್ತನಿಗೆ ಅಧೀನತೆಯನ್ನು ಸಹ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಈ ವಚನವು ಸೂಚಿಸುತ್ತದೆ. ಒಂದು ಸಮತೆಯು ಇರಲೇಬೇಕಾಗಿದೆ.

6. ಒಬ್ಬ ಕ್ರೈಸ್ತ ಹೆಂಡತಿಯು ಯಾವ ಮೂಲತತ್ವಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು?

6 ಒಬ್ಬ ಕ್ರೈಸ್ತನಿಗಾದರೊ, ಸಭಾ ಕೂಟಗಳನ್ನು ಹಾಜರಾಗುವುದು ಮತ್ತು ಒಬ್ಬನ ಬೈಬಲಾಧರಿತ ನಂಬಿಕೆಯ ಕುರಿತು ಇತರರಿಗೆ ಸಾಕ್ಷಿಕೊಡುವುದು, ಅಲಕ್ಷ್ಯ ಮಾಡಬಾರದಾಗಿರುವಂತಹ ಸತ್ಯಾರಾಧನೆಯ ಪ್ರಾಮುಖ್ಯ ಅಂಶಗಳಾಗಿವೆ. (ರೋಮಾಪುರ 10:9, 10, 14; ಇಬ್ರಿಯ 10:24, 25) ಹಾಗಾದರೆ, ಒಬ್ಬ ಮಾನವನು ದೇವರ ಒಂದು ವಿಶಿಷ್ಟ ಆವಶ್ಯಕತೆಯೊಂದಿಗೆ ಸಮ್ಮತಿಸದಂತೆ ನೇರವಾಗಿ ಆಜ್ಞಾಪಿಸುವುದಾದರೆ ನೀವೇನು ಮಾಡುವಿರಿ? ಯೇಸು ಕ್ರಿಸ್ತನ ಅಪೊಸ್ತಲರು ಘೋಷಿಸಿದ್ದು: “ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕಲ್ಲಾ.” (ಅ. ಕೃತ್ಯಗಳು 5:29) ಅವರ ಮಾದರಿಯು ಜೀವಿತದಲ್ಲಿನ ಅನೇಕ ಸನ್ನಿವೇಶಗಳಿಗೆ ಅನ್ವಯವಾಗುವ ಒಂದು ಪೂರ್ವನಿದರ್ಶನವನ್ನು ಒದಗಿಸುತ್ತದೆ. ಯೆಹೋವನಿಗಾಗಿ ಪ್ರೀತಿಯು ಆತನಿಗೆ ನ್ಯಾಯವಾಗಿ ಸಲ್ಲತಕ್ಕ ಭಕ್ತಿಯನ್ನು ಸಲ್ಲಿಸುವಂತೆ ನಿಮ್ಮನ್ನು ಪ್ರೇರಿಸುವುದೊ? ಅದೇ ಸಮಯದಲ್ಲಿ, ನಿಮ್ಮ ಗಂಡನೆಡೆಗೆ ನಿಮಗಿರುವ ಪ್ರೀತಿ ಮತ್ತು ಗೌರವವು ಅವನಿಗೆ ಸ್ವೀಕರಣೀಯವಾಗಿರುವಂತಹ ರೀತಿಯಲ್ಲಿ ಅದನ್ನು ಸಲ್ಲಿಸಲು ಪ್ರಯತ್ನಿಸುವಂತೆ ನಿಮ್ಮನ್ನು ಪ್ರಚೋದಿಸುವುದೊ?—ಮತ್ತಾಯ 4:10; 1 ಯೋಹಾನ 5:3.

7. ಯಾವ ದೃಢನಿಶ್ಚಯವು ಒಬ್ಬ ಕ್ರೈಸ್ತ ಹೆಂಡತಿಯಲ್ಲಿರಬೇಕು?

7 ಇದು ಯಾವಾಗಲೂ ಸಾಧ್ಯವಿರುವುದಿಲ್ಲವೆಂಬುದನ್ನು ಯೇಸು ಗಮನಿಸಿದನು. ಸತ್ಯಾರಾಧನೆಗೆ ವಿರೋಧದ ಕಾರಣ, ಕೆಲವು ಕುಟುಂಬಗಳ ವಿಶ್ವಾಸಿಗಳಾದ ಸದಸ್ಯರು, ತಮ್ಮ ಮತ್ತು ಕುಟುಂಬದ ಉಳಿದವರ ನಡುವೆ ಒಂದು ಖಡ್ಗವು ಬಂದಿರುತ್ತದೋ ಎಂಬಂತೆ ಪ್ರತ್ಯೇಕತೆಯ ಅನಿಸಿಕೆಯನ್ನು ಅನುಭವಿಸುವರು ಎಂದು ಅವನು ಎಚ್ಚರಿಸಿದ್ದನು. (ಮತ್ತಾಯ 10:34-36) ಜಪಾನಿನ ಒಬ್ಬ ಮಹಿಳೆಯು ಇದನ್ನು ಅನುಭವಿಸಿದಳು. ಅವಳು ತನ್ನ ಗಂಡನಿಂದ 11 ವರ್ಷ ವಿರೋಧಿಸಲ್ಪಟ್ಟಳು. ಅವನು ಅವಳೊಂದಿಗೆ ಕಠೋರವಾಗಿ ವರ್ತಿಸಿದನು ಮತ್ತು ಆಗಾಗ ಮನೆಗೆ ಬೀಗಹಾಕಿ ಅವಳನ್ನು ಹೊರಗಿರುವಂತೆ ಮಾಡಿದನು. ಆದರೆ ಅವಳು ತಾಳಿಕೊಂಡಳು. ಕ್ರೈಸ್ತ ಸಭೆಯಲ್ಲಿನ ಮಿತ್ರರು ಅವಳಿಗೆ ಸಹಾಯ ಮಾಡಿದರು. ಅವಳು ಎಡೆಬಿಡದೆ ಪ್ರಾರ್ಥಿಸಿ, 1 ಪೇತ್ರ 2:20ರಿಂದ ಬಹಳವಾಗಿ ಪ್ರೋತ್ಸಾಹವನ್ನು ಪಡೆದುಕೊಂಡಳು. ತಾನು ದೃಢವಾಗಿ ಉಳಿದಲ್ಲಿ ತನ್ನ ಗಂಡನು ಒಂದಾನೊಂದು ದಿನ ಯೆಹೋವನ ಸೇವೆಯಲ್ಲಿ ತನ್ನನ್ನು ಜೊತೆಗೂಡುವನೆಂಬ ಮನವರಿಕೆಯು ಈ ಕ್ರೈಸ್ತ ಮಹಿಳೆಗಾಯಿತು. ಮತ್ತು ಅವನು ಜೊತೆಗೂಡಿದನು ನಿಶ್ಚಯ.

8, 9. ತನ್ನ ಗಂಡನ ಮುಂದೆ ಅನಾವಶ್ಯಕ ಅಡ್ಡಿಗಳನ್ನು ಹಾಕುವುದನ್ನು ತಡೆಯಲು ಒಬ್ಬ ಹೆಂಡತಿಯು ಹೇಗೆ ಕ್ರಿಯೆಗೈಯಬೇಕು?

8 ನಿಮ್ಮ ಸಂಗಾತಿಯ ಮನೋಭಾವವನ್ನು ಪ್ರಭಾವಿಸಲಿಕ್ಕೆ ನೀವು ಮಾಡಬಲ್ಲ ಅನೇಕ ಪ್ರಾಯೋಗಿಕ ವಿಷಯಗಳಿವೆ. ಉದಾಹರಣೆಗಾಗಿ, ನಿಮ್ಮ ಗಂಡನು ನಿಮ್ಮ ಧರ್ಮಕ್ಕೆ ಆಕ್ಷೇಪಮಾಡಿದರೆ, ಬೇರೆ ಕ್ಷೇತ್ರಗಳಲ್ಲಿ ಅವನು ಆಕ್ಷೇಪಣೆಮಾಡಲು ಅವನಿಗೆ ಸಕಾರಣಗಳನ್ನು ಕೊಡಬೇಡಿರಿ. ಮನೆಯನ್ನು ಶುಚಿಯಾಗಿಡಿರಿ. ನಿಮ್ಮ ವೈಯಕ್ತಿಕ ತೋರಿಕೆಗೆ ಗಮನಕೊಡಿರಿ. ಪ್ರೀತಿ ಮತ್ತು ಗಣ್ಯತೆಯ ಅಭಿವ್ಯಕ್ತಿಗಳಲ್ಲಿ ಉದಾರವಾಗಿರ್ರಿ. ಟೀಕಿಸುವ ಬದಲಿಗೆ ಬೆಂಬಲವನ್ನು ಕೊಡುವವರಾಗಿರಿ. ಅವನ ತಲೆತನಕ್ಕಾಗಿ ನೀವು ಅವನೆಡೆಗೆ ನೋಡುತ್ತೀರೆಂಬುದನ್ನು ತೋರಿಸಿರಿ. ನಿಮಗೆ ತಪ್ಪುಮಾಡಲ್ಪಟ್ಟಿದೆಯೆಂದು ನೀವು ಭಾವಿಸಿದರೆ ಪ್ರತೀಕಾರ ನೀಡಬೇಡಿ. (1 ಪೇತ್ರ 2:21, 23) ಮಾನವ ಅಪರಿಪೂರ್ಣತೆಗಾಗಿ ರಿಯಾಯಿತಿಗಳನ್ನು ತೋರಿಸಿರಿ, ಮತ್ತು ಒಂದು ವಾಗ್ವಾದವು ಏಳುವಲ್ಲಿ ನಮ್ರತೆಯಿಂದ ಕ್ಷಮೆಬೇಡುವುದರಲ್ಲಿ ಮೊದಲಿಗರಾಗಿರಿ.—ಎಫೆಸ 4:26.

9 ಕೂಟಗಳಲ್ಲಿ ನಿಮ್ಮ ಉಪಸ್ಥಿತಿಯು ಅವನ ಊಟಗಳು ತಡವಾಗುವುದಕ್ಕೆ ಒಂದು ಕಾರಣವಾಗುವಂತೆ ಬಿಡಬೇಡಿರಿ. ನಿಮ್ಮ ಗಂಡನು ಮನೆಯಲ್ಲಿರದ ಸಮಯಗಳಲ್ಲಿ ಕ್ರೈಸ್ತ ಶುಶ್ರೂಷೆಯಲ್ಲಿ ಭಾಗವಹಿಸುವುದನ್ನು ಸಹ ನೀವು ಆರಿಸಿಕೊಳ್ಳಬಹುದು. ತನ್ನ ಗಂಡನಿಗೆ ಅದು ಅಸ್ವೀಕರಣೀಯವಾಗಿರುವಾಗ ಅವನಿಗೆ ಸಾರುವ ಗೊಡವೆಗೆ ಹೋಗದಿರುವುದು ಒಬ್ಬ ಕ್ರೈಸ್ತ ಹೆಂಡತಿಗೆ ವಿವೇಕಪ್ರದವಾಗಿದೆ. ಬದಲಾಗಿ, ಅವಳು ಅಪೊಸ್ತಲ ಪೇತ್ರನ ಸಲಹೆಯನ್ನು ಅನುಸರಿಸುತ್ತಾಳೆ: “ಸ್ತ್ರೀಯರೇ, ನಿಮ್ಮ ಗಂಡಂದಿರಿಗೆ ಅಧೀನರಾಗಿರಿ. ಅವರಲ್ಲಿ ಕೆಲವರು ದೇವರ ವಾಕ್ಯಕ್ಕೆ ಅವಿಧೇಯರಾಗಿದ್ದರೂ ನೀವು ನಿರ್ಮಲರಾಗಿಯೂ ಭಯಭರಿತರಾಗಿಯೂ ನಡೆದುಕೊಳ್ಳುವದನ್ನು ನೋಡಿ ವಾಕ್ಯೋಪದೇಶವಿಲ್ಲದೆ ತಮ್ಮ ಹೆಂಡತಿಯರಾದ ನಿಮ್ಮ ನಡತೆಯಿಂದಲೇ ಸನ್ಮಾರ್ಗಕ್ಕೆ ಬಂದಾರು.” (1 ಪೇತ್ರ 3:1, 2) ದೇವರಾತ್ಮದ ಫಲಗಳನ್ನು ಹೆಚ್ಚು ಪೂರ್ಣವಾಗಿ ಪ್ರದರ್ಶಿಸಲು ಕ್ರೈಸ್ತ ಹೆಂಡತಿಯರು ಶ್ರಮಿಸುತ್ತಾರೆ.—ಗಲಾತ್ಯ 5:22, 23.

ಹೆಂಡತಿಯು ಅನುಸಾರಿಣಿಯಾದ ಕ್ರೈಸ್ತಳಾಗಿಲ್ಲದಿರುವಾಗ

10. ತನ್ನ ಹೆಂಡತಿಯು ಒಂದು ವಿಭಿನ್ನ ನಂಬಿಕೆಯವಳಾಗಿರುವಲ್ಲಿ ವಿಶ್ವಾಸಿಯಾದ ಗಂಡನು ಅವಳ ಕಡೆಗೆ ಹೇಗೆ ಕ್ರಿಯೆಗೈಯಬೇಕು?

10 ಗಂಡನು ಅನುಸರಿಸುವ ಕ್ರೈಸ್ತನಾಗಿದ್ದು, ಹೆಂಡತಿಯು ಅನುಸಾರಿಣಿಯಾಗಿರದಿರುವಲ್ಲಿ ಏನು? ಅಂತಹ ಸನ್ನಿವೇಶಗಳಿಗಾಗಿ ಬೈಬಲು ನಿರ್ದೇಶನವನ್ನು ಕೊಡುತ್ತದೆ. ಅದು ಹೇಳುವುದು: “ಒಬ್ಬ ಸಹೋದರನಿಗೆ ಕ್ರಿಸ್ತನಂಬಿಕೆಯಿಲ್ಲದ ಹೆಂಡತಿಯಿರಲಾಗಿ ಆಕೆ ಅವನೊಂದಿಗೆ ಒಗತನಮಾಡುವದಕ್ಕೆ ಸಮ್ಮತಿಸಿದರೆ ಅವನು ಆಕೆಯನ್ನು ಬಿಡಬಾರದು.” (1 ಕೊರಿಂಥ 7:12) ಅದು ಗಂಡಂದಿರಿಗೆ ಸಹ ಪ್ರಬೋಧಿಸುವುದು: “ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ.”—ಕೊಲೊಸ್ಸೆ 3:19.

11. ತನ್ನ ಹೆಂಡತಿಯು ಒಬ್ಬ ಅನುಸರಿಸುವ ಕ್ರೈಸ್ತಳಾಗಿರದಿದ್ದರೆ, ಗಂಡನು ಹೇಗೆ ವಿವೇಚನಾಶಕ್ತಿಯನ್ನು ತೋರಿಸಿ, ಅವಳ ಮೇಲೆ ಜಾಣತನದಿಂದ ತಲೆತನವನ್ನು ನಡಿಸಬಲ್ಲನು?

11 ನಿಮಗಿಂತ ವಿಭಿನ್ನವಾದ ನಂಬಿಕೆಯುಳ್ಳ ಹೆಂಡತಿಯ ಗಂಡನು ನೀವಾಗಿರುವಲ್ಲಿ, ನಿಮ್ಮ ಹೆಂಡತಿಗೆ ಗೌರವ ತೋರಿಸುವುದಕ್ಕೆ ಮತ್ತು ಅವಳ ಭಾವನೆಗಳನ್ನು ಪರಿಗಣಿಸುವುದಕ್ಕೆ ವಿಶೇಷವಾಗಿ ಎಚ್ಚರವುಳ್ಳವರಾಗಿರಿ. ನೀವು ಅವುಗಳನ್ನು ಒಪ್ಪದಿದ್ದರೂ, ವಯಸ್ಕಳೋಪಾದಿ ತನ್ನ ಧಾರ್ಮಿಕ ನಂಬಿಕೆಗಳನ್ನು ಅನುಸರಿಸಲು ಸ್ವಲ್ಪಮಟ್ಟಿಗಿನ ಸ್ವಾತಂತ್ರ್ಯಕ್ಕೆ ಅವಳು ಅರ್ಹಳು. ನಿಮ್ಮ ನಂಬಿಕೆಯ ಕುರಿತಾಗಿ ಅವಳೊಂದಿಗೆ ಮೊದಲ ಬಾರಿ ಮಾತಾಡುವಾಗಲೇ, ಅವಳು ದೀರ್ಘ ಸಮಯದಿಂದ ಹಿಡಿದ ನಂಬಿಕೆಯನ್ನು ಒಂದು ಹೊಸ ನಂಬಿಕೆಯ ಸಲುವಾಗಿ ತ್ಯಜಿಸಿಬಿಡುವಂತೆ ನಿರೀಕ್ಷಿಸಬೇಡಿ. ಅವಳೂ ಅವಳ ಕುಟುಂಬದವರೂ ದೀರ್ಘಾವಧಿಯಿಂದ ನೆಚ್ಚಿರುವ ಧಾರ್ಮಿಕ ಪದ್ಧತಿಗಳು ಸುಳ್ಳೆಂದು ಥಟ್ಟನೆ ಹೇಳಿಬಿಡುವ ಬದಲಿಗೆ, ಶಾಸ್ತ್ರಗಳಿಂದ ಅವಳೊಡನೆ ತಾಳ್ಮೆಯಿಂದ ವಿವೇಚಿಸಲು ಪ್ರಯತ್ನಮಾಡಿರಿ. ಸಭೆಯ ಚಟುವಟಿಕೆಗಳಿಗಾಗಿ ನೀವು ಬಹಳ ಹೆಚ್ಚು ಸಮಯವನ್ನು ಕೊಡುವುದಾದರೆ, ಅಲಕ್ಷಿಸಲ್ಪಡುವ ಭಾವನೆಯು ಅವಳಿಗಾದೀತು. ಯೆಹೋವನನ್ನು ಸೇವಿಸುವ ನಿಮ್ಮ ಪ್ರಯತ್ನಗಳನ್ನು ಅವಳು ವಿರೋಧಿಸಬಹುದು, ಆದರೂ ಮೂಲಸಂದೇಶವು ಕೇವಲ ಹೀಗಿರಬಹುದು: “ನನಗೆ ನಿಮ್ಮ ಹೆಚ್ಚಿನ ಸಮಯದ ಅಗತ್ಯವಿದೆ!” ತಾಳ್ಮೆಯಿಂದಿರಿ. ನಿಮ್ಮ ಪ್ರೀತಿಪೂರ್ವಕ ಪರಿಗಣನೆಯಿಂದ ಸಕಾಲದಲ್ಲಿ ಅವಳು ಸತ್ಯಾರಾಧನೆಯನ್ನು ಸ್ವೀಕರಿಸುವಂತೆ ಸಹಾಯ ಮಾಡಲ್ಪಡಬಹುದು.—ಕೊಲೊಸ್ಸೆ 3:12-14; 1 ಪೇತ್ರ 3:8, 9.

ಮಕ್ಕಳನ್ನು ತರಬೇತು ಮಾಡುವುದು

12. ಗಂಡಹೆಂಡತಿಯರು ವಿಭಿನ್ನ ನಂಬಿಕೆಗಳವರಾಗಿರುವುದಾದರೂ, ತಮ್ಮ ಮಕ್ಕಳನ್ನು ತರಬೇತು ಮಾಡುವುದರಲ್ಲಿ ಶಾಸ್ತ್ರೀಯ ಮೂಲತತ್ವಗಳನ್ನು ಹೇಗೆ ಅನ್ವಯಿಸಬೇಕಾಗಿದೆ?

12 ಆರಾಧನೆಯಲ್ಲಿ ಐಕ್ಯವಾಗಿರದ ಒಂದು ಮನೆವಾರ್ತೆಯಲ್ಲಿ, ಮಕ್ಕಳ ಧಾರ್ಮಿಕ ಉಪದೇಶವು ಕೆಲವು ಸಾರಿ ಒಂದು ವಾದಾಂಶವಾಗುತ್ತದೆ. ಶಾಸ್ತ್ರೀಯ ಮೂಲತತ್ವಗಳು ಹೇಗೆ ಅನ್ವಯಿಸಲ್ಪಡಬೇಕು? ಮಕ್ಕಳಿಗೆ ಉಪದೇಶಮಾಡುವ ಪ್ರಧಾನ ಜವಾಬ್ದಾರಿಯನ್ನು ಬೈಬಲು ತಂದೆಗೆ ನೇಮಿಸುತ್ತದೆ, ಆದರೆ ತಾಯಿಗೆ ಸಹ ಒಂದು ಮಹತ್ವದ ಪಾತ್ರವಹಿಸಲಿಕ್ಕದೆ. (ಜ್ಞಾನೋಕ್ತಿ 1:8; ಹೋಲಿಸಿ ಆದಿಕಾಂಡ 18:19; ಧರ್ಮೋಪದೇಶಕಾಂಡ 11:18, 19.) ತಂದೆಯು ಕ್ರಿಸ್ತನ ತಲೆತನವನ್ನು ಸ್ವೀಕರಿಸದಿದ್ದರೂ, ಅವನು ಇನ್ನೂ ಕುಟುಂಬದ ತಲೆಯಾಗಿದ್ದಾನೆ.

13, 14. ತನ್ನ ಹೆಂಡತಿಯು ಮಕ್ಕಳನ್ನು ಕ್ರೈಸ್ತ ಕೂಟಗಳಿಗೆ ಒಯ್ಯುವುದನ್ನು ಅಥವಾ ಅವರೊಂದಿಗೆ ಅಭ್ಯಾಸ ಮಾಡುವುದನ್ನು ಗಂಡನು ನಿಷೇಧಿಸಿದರೆ ಅವಳೇನು ಮಾಡಬಲ್ಲಳು?

13 ಕೆಲವು ಅವಿಶ್ವಾಸಿ ತಂದೆಗಳು ಧಾರ್ಮಿಕ ವಿಷಯಗಳಲ್ಲಿ ತಾಯಿಯು ಮಕ್ಕಳಿಗೆ ಉಪದೇಶ ಮಾಡುವುದನ್ನು ಆಕ್ಷೇಪಿಸುವುದಿಲ್ಲ. ಇನ್ನಿತರರು ಆಕ್ಷೇಪಿಸುತ್ತಾರೆ. ಮಕ್ಕಳನ್ನು ಸಭಾ ಕೂಟಗಳಿಗೆ ಒಯ್ಯುವುದಕ್ಕೆ ನಿಮ್ಮ ಗಂಡನು ಪರವಾನಗಿಕೊಡಲು ನಿರಾಕರಿಸುವುದಾದರೆ ಮತ್ತು ಮನೆಯಲ್ಲಿ ನೀವು ಅವರೊಂದಿಗೆ ಬೈಬಲನ್ನು ಅಭ್ಯಾಸಿಸುವುದನ್ನು ಸಹ ನಿಷೇಧಿಸುವುದಾದರೆ ಏನು? ಈಗ ಅನೇಕ ಹಂಗುಗಳನ್ನು ನೀವು ಸಮತೆಯಲ್ಲಿಡಬೇಕಾಗುತ್ತದೆ—ಯೆಹೋವ ದೇವರೆಡೆಗಿನ ನಿಮ್ಮ ಹಂಗು, ನಿಮ್ಮ ತಲೆಯಾದ ಗಂಡನೆಡೆಗೆ ಮತ್ತು ನಿಮ್ಮ ಪ್ರಿಯ ಮಕ್ಕಳೆಡೆಗಿನ ನಿಮ್ಮ ಹಂಗು. ಇವನ್ನು ನೀವು ಹೇಗೆ ಸರಿಹೊಂದಿಸಬಲ್ಲಿರಿ?

14 ನಿಶ್ಚಯವಾಗಿಯೂ ಆ ವಿಷಯದ ಕುರಿತು ನೀವು ಪ್ರಾರ್ಥನೆ ಮಾಡುವಿರಿ. (ಫಿಲಿಪ್ಪಿ 4:6, 7; 1 ಯೋಹಾನ 5:14) ಆದರೆ ಕೊನೆಯಲ್ಲಿ ಯಾವ ಮಾರ್ಗವನ್ನು ತೆಗೆದುಕೊಳ್ಳುವುದೆಂದು ನಿರ್ಣಯಿಸಬೇಕಾದವರು ನೀವೇ. ನಿಮ್ಮ ಗಂಡನ ತಲೆತನವನ್ನು ನೀವು ಧಿಕ್ಕರಿಸುತ್ತಿಲ್ಲವೆಂಬುದನ್ನು ಅವನಿಗೆ ಸ್ಪಷ್ಟಪಡಿಸುತ್ತಾ ಜಾಣತನದಿಂದ ನೀವು ಮುಂದರಿಯುವುದಾದರೆ, ಕ್ರಮೇಣ ಅವನ ವಿರೋಧವು ಕಡಿಮೆಯಾಗಬಹುದು. ನಿಮ್ಮ ಮಕ್ಕಳನ್ನು ಕೂಟಗಳಿಗೆ ಒಯ್ಯಲು ಅಥವಾ ಅವರೊಂದಿಗೆ ಒಂದು ವಿಧಿವಿಹಿತ ಬೈಬಲಧ್ಯಯನ ಮಾಡಲು ನಿಮ್ಮ ಗಂಡನು ನಿಷೇಧಿಸಿದರೂ, ನೀವು ಮತ್ತೂ ಅವರಿಗೆ ಕಲಿಸಸಾಧ್ಯವಿದೆ. ನಿಮ್ಮ ದೈನಂದಿನ ಸಂಭಾಷಣೆಯ ಮೂಲಕ ಮತ್ತು ನಿಮ್ಮ ಉತ್ತಮ ಮಾದರಿಯ ಮೂಲಕ, ಯೆಹೋವನೆಡೆಗೆ ಪ್ರೀತಿ, ಆತನ ವಾಕ್ಯದಲ್ಲಿ ನಂಬಿಕೆ, ಹೆತ್ತವರಿಗೆ—ಅವರ ತಂದೆಯನ್ನೂ ಸೇರಿಸಿ—ಗೌರವ, ಬೇರೆಯವರೆಡೆಗೆ ಪ್ರೀತಿಯ ಹಿತಾಸಕ್ತಿ, ಮತ್ತು ಶುದ್ಧಾಂತಃಕರಣದ ಕೆಲಸ ಅಭ್ಯಾಸಗಳಿಗಾಗಿ ಗಣ್ಯತೆಯನ್ನು ಸ್ವಲ್ಪಮಟ್ಟಿಗೆ ಬೇರೂರಿಸಲು ಪ್ರಯತ್ನಿಸಿರಿ. ಕಟ್ಟಕಡೆಗೆ, ತಂದೆಯು ಆ ಸುಪರಿಣಾಮಗಳನ್ನು ಗಮನಿಸಿ ನಿಮ್ಮ ಪ್ರಯತ್ನಗಳ ಮೌಲ್ಯವನ್ನು ಗಣ್ಯಮಾಡಾನು.—ಜ್ಞಾನೋಕ್ತಿ 23:24.

15. ಮಕ್ಕಳ ಶಿಕ್ಷಣದಲ್ಲಿ ಒಬ್ಬ ವಿಶ್ವಾಸಿಯಾದ ತಂದೆಯ ಜವಾಬ್ದಾರಿಯೇನು?

15 ನೀವು ವಿಶ್ವಾಸಿಯಾಗಿರುವ ಒಬ್ಬ ಗಂಡನಾಗಿದ್ದರೆ ಮತ್ತು ನಿಮ್ಮ ಹೆಂಡತಿಯು ವಿಶ್ವಾಸಿಯಲ್ಲದಿದ್ದರೆ, “ಯೆಹೋವನ ಶಿಸ್ತು ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ” ನಿಮ್ಮ ಮಕ್ಕಳನ್ನು ಬೆಳೆಸುವ ಜವಾಬ್ದಾರಿಯನ್ನು ನೀವು ಹೊರಬೇಕು. (ಎಫೆಸ 6:4, NW) ಹಾಗೆ ಮಾಡುವಾಗ, ನಿಶ್ಚಯವಾಗಿಯೂ ನೀವು ನಿಮ್ಮ ಹೆಂಡತಿಯೊಂದಿಗೆ ದಯೆ, ಪ್ರೀತಿ ಮತ್ತು ವಿವೇಚನೆಯಿಂದ ವ್ಯವಹರಿಸಬೇಕು.

ನಿಮ್ಮ ಧರ್ಮವು ನಿಮ್ಮ ಹೆತ್ತವರ ಧರ್ಮವಾಗಿರದಿರುವಲ್ಲಿ

16, 17. ತಮ್ಮ ಹೆತ್ತವರದಕ್ಕಿಂತ ವಿಭಿನ್ನವಾದ ಒಂದು ನಂಬಿಕೆಯನ್ನು ಮಕ್ಕಳು ಸ್ವೀಕರಿಸುವಲ್ಲಿ, ಬೈಬಲಿನ ಯಾವ ಮೂಲತತ್ವಗಳನ್ನು ಅವರು ನೆನಪಿನಲ್ಲಿಡಬೇಕು?

16 ಚಿಕ್ಕ ಮಕ್ಕಳು ಸಹ ತಮ್ಮ ಹೆತ್ತವರಿಗಿಂತ ವಿಭಿನ್ನವಾದ ಧಾರ್ಮಿಕ ನೋಟಗಳನ್ನು ಸ್ವೀಕರಿಸುವುದೇನೂ ಈಗ ಅಪೂರ್ವವಲ್ಲ. ನೀವು ಹಾಗೆ ಮಾಡಿದ್ದೀರೊ? ಹಾಗಿರುವಲ್ಲಿ, ಬೈಬಲಿನಲ್ಲಿ ನಿಮಗೆ ಸಲಹೆಯಿದೆ.

17 ದೇವರ ವಾಕ್ಯವು ಹೇಳುವುದು: “ಮಕ್ಕಳೇ, ನೀವು ಕರ್ತನಲ್ಲಿರುವವರಿಗೆ ತಕ್ಕ ಹಾಗೆ ನಿಮ್ಮ ತಂದೆತಾಯಿಗಳ ಮಾತನ್ನು ಕೇಳಬೇಕು; ಇದು ಧರ್ಮ. . . . ನಿನ್ನ ತಂದೆತಾಯಿಗಳನ್ನೂ ಸನ್ಮಾನಿಸಬೇಕು.” (ಎಫೆಸ 6:1, 2) ಹೆತ್ತವರಿಗೆ ಹಿತಕರವಾದ ಗೌರವವನ್ನು ಇದು ಒಳಗೊಳ್ಳುತ್ತದೆ. ಹೆತ್ತವರಿಗೆ ವಿಧೇಯತೆಯು ಪ್ರಾಮುಖ್ಯವಾಗಿರುವಾಗ, ಸತ್ಯ ದೇವರ ಪರಿಗಣನೆಯಿಲ್ಲದೆ ಅದು ಸಲ್ಲಿಸಲ್ಪಡಬಾರದು. ಮಗನು ನಿರ್ಣಯಗಳನ್ನು ಮಾಡಲಾರಂಭಿಸಲು ಸಾಕಷ್ಟು ದೊಡ್ಡವನಾಗುವಾಗ, ಅವನು ತನ್ನ ಕೃತ್ಯಗಳಿಗಾಗಿ ಒಂದು ಹೆಚ್ಚು ಪ್ರಮಾಣದ ಜವಾಬ್ದಾರಿಯನ್ನು ಹೊರುತ್ತಾನೆ. ಇದು ಭೌತಿಕ ನಿಯಮದ ಸಂಬಂಧದಲ್ಲಿ ಮಾತ್ರವಲ್ಲ, ವಿಶೇಷವಾಗಿ ದೈವಿಕ ನಿಯಮದ ಸಂಬಂಧದಲ್ಲಿ ಸತ್ಯವಾಗಿದೆ. “ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ವಿಷಯವಾಗಿ ದೇವರ ಮುಂದೆ ಉತ್ತರಕೊಡಬೇಕು,” ಎಂದು ಹೇಳುತ್ತದೆ ಬೈಬಲು.—ರೋಮಾಪುರ 14:12.

18, 19. ತಮ್ಮ ಹೆತ್ತವರದಕ್ಕಿಂತ ವಿಭಿನ್ನವಾದ ಒಂದು ಧರ್ಮವು ಮಕ್ಕಳಿಗಿರುವುದಾದರೆ, ಅವರು ತಮ್ಮ ಹೆತ್ತವರಿಗೆ ತಮ್ಮ ನಂಬಿಕೆಯನ್ನು ಉತ್ತಮವಾಗಿ ತಿಳಿಯಲು ಹೇಗೆ ಸಹಾಯ ಮಾಡಬಲ್ಲರು?

18 ನಿಮ್ಮ ನಂಬಿಕೆಗಳು ನಿಮ್ಮ ಜೀವನದಲ್ಲಿ ಬದಲಾವಣೆಗಳನ್ನು ಉಂಟುಮಾಡುವುದಾದರೆ, ನಿಮ್ಮ ಹೆತ್ತವರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿರಿ. ಬೈಬಲ್‌ ಬೋಧನೆಗಳನ್ನು ನೀವು ಕಲಿತು ಅನ್ವಯಿಸಿಕೊಳ್ಳುವ ಪರಿಣಾಮವಾಗಿ, ನೀವು ಹೆಚ್ಚು ಗೌರವತೋರಿಸುವವರೂ, ಹೆಚ್ಚು ವಿಧೇಯರೂ, ನಿಮ್ಮಿಂದ ಅವರು ಅವಶ್ಯಪಡಿಸುವ ವಿಷಯದಲ್ಲಿ ಹೆಚ್ಚು ಶ್ರದ್ಧೆಯುಳ್ಳವರೂ ಆಗುವಲ್ಲಿ, ಅವರು ಸಂತೋಷಪಡುವ ಸಂಭವನೀಯತೆ ಇರುವುದು. ಆದರೆ ನಿಮ್ಮ ಹೊಸ ನಂಬಿಕೆಯು, ಅವರು ವೈಯಕ್ತಿಕವಾಗಿ ನೆಚ್ಚುವ ನಂಬಿಕೆಗಳನ್ನು ಮತ್ತು ಪದ್ಧತಿಗಳನ್ನು ನೀವು ತಿರಸ್ಕರಿಸುವಂತೆ ಮಾಡುವಲ್ಲಿ, ಅವರು ನಿಮಗೆ ಕೊಡುವಂತೆ ಅಪೇಕ್ಷಿಸಿದ ಒಂದು ಪರಂಪರೆಯನ್ನು ನೀವು ಧಿಕ್ಕರಿಸುತ್ತೀರೆಂಬ ಭಾವನೆಯನ್ನು ಅವರು ತಾಳಾರು. ನೀವು ಮಾಡುತ್ತಿರುವ ವಿಷಯವು ಸಮಾಜದಲ್ಲಿ ಜನಪ್ರಿಯವಾಗಿಲ್ಲದಿದ್ದರೆ ಅಥವಾ ಅದು ನಿಮ್ಮನ್ನು ಪ್ರಾಪಂಚಿಕವಾಗಿ ಸಮೃದ್ಧರಾಗಲು ನೆರವಾಗಸಾಧ್ಯವಿರುವ ಬೆನ್ನಟ್ಟುವಿಕೆಗಳಿಂದ ನಿಮ್ಮ ಗಮನವನ್ನು ತಿರುಗಿಸುವುದಾದರೆ, ಅವರು ನಿಮ್ಮ ಹಿತಾಸಕ್ತಿಗಾಗಿ ಭಯಪಡಲೂಬಹುದು. ಹೆಮ್ಮೆಯು ಸಹ ಒಂದು ಅಡಚಣೆಯಾಗಿರಬಲ್ಲದು. ನೀವು ಸರಿ ಮತ್ತು ತಾವು ತಪ್ಪು ಎಂದು ನೀವು ಕಾರ್ಯತಃ ಹೇಳುತ್ತಿದ್ದೀರಿ ಎಂದು ಅವರು ಭಾವಿಸಬಹುದು.

19 ಆದುದರಿಂದ, ಸಾಧ್ಯವಾದಷ್ಟು ಬೇಗ ನಿಮ್ಮ ಹೆತ್ತವರು ಸ್ಥಳಿಕ ಸಭೆಯ ಕೆಲವು ಹಿರಿಯರನ್ನು ಅಥವಾ ಪಕ್ವತೆಯುಳ್ಳ ಇತರ ಸಾಕ್ಷಿಗಳನ್ನು ಭೇಟಿಯಾಗುವಂತೆ ಏರ್ಪಡಿಸಲು ಪ್ರಯತ್ನಿಸಿರಿ. ನಿಮ್ಮ ಹೆತ್ತವರು ರಾಜ್ಯ ಸಭಾಗೃಹವನ್ನು ಭೇಟಿಮಾಡಿ ಅಲ್ಲಿ ಚರ್ಚಿಸಲ್ಪಡುವುದನ್ನು ತಾವಾಗಿಯೆ ಕೇಳುವಂತೆ ಮತ್ತು ಯೆಹೋವನ ಸಾಕ್ಷಿಗಳು ಯಾವ ತೆರದ ಜನರು ಎಂದು ಸಾಕ್ಷಾತ್ತಾಗಿ ನೋಡುವಂತೆ ಪ್ರೋತ್ಸಾಹಿಸಿರಿ. ಸಕಾಲದಲ್ಲಿ ನಿಮ್ಮ ಹೆತ್ತವರ ಮನೋಭಾವವು ಮೃದುವಾಗಬಹುದು. ಹೆತ್ತವರು ಕಠಿನ ವಿರೋಧವನ್ನು ತೋರಿಸುತ್ತಾ, ಬೈಬಲ್‌ ಸಾಹಿತ್ಯವನ್ನು ನಾಶಪಡಿಸಿ, ಮಕ್ಕಳನ್ನು ಕ್ರೈಸ್ತ ಕೂಟಗಳಿಗೆ ಉಪಸ್ಥಿತರಾಗಲು ನಿಷೇಧಿಸುವಾಗಲೂ, ಬೇರೆ ಕಡೆಗಳಲ್ಲಿ ಓದಲಿಕ್ಕೆ, ಜೊತೆ ಕ್ರೈಸ್ತರೊಂದಿಗೆ ಮಾತಾಡಲಿಕ್ಕೆ ಮತ್ತು ಅನೌಪಚಾರಿಕವಾಗಿ ಇತರರಿಗೆ ಸಾಕ್ಷಿಕೊಡಲಿಕ್ಕೆ ಮತ್ತು ನೆರವಾಗಲಿಕ್ಕೆ ಸಾಮಾನ್ಯವಾಗಿ ಅವಕಾಶಗಳಿರುತ್ತವೆ. ನೀವು ಯೆಹೋವನಿಗೆ ಪ್ರಾರ್ಥನೆಯನ್ನೂ ಮಾಡಬಲ್ಲಿರಿ. ಕೆಲವು ಯುವಕರಿಗೆ ತಾವು ಹೆಚ್ಚನ್ನು ಮಾಡುವ ಮುಂಚೆ, ತಮ್ಮ ಕುಟುಂಬದ ಹೊರಗೆ ಜೀವಿಸುವುದಕ್ಕೆ ಸಾಕಷ್ಟು ದೊಡ್ಡವರಾಗುವ ತನಕ ಕಾಯಬೇಕಾಗುತ್ತದೆ. ಆದರೂ ಮನೆಯಲ್ಲಿನ ಸನ್ನಿವೇಶವು ಯಾವುದೇ ಇರಲಿ, “ನಿಮ್ಮ ತಂದೆತಾಯಿಗಳನ್ನೂ ಸನ್ಮಾನಿಸು”ವುದನ್ನು ಮರೆಯಬೇಡಿರಿ. ಮನೆಯಲ್ಲಿನ ಶಾಂತಿಗೆ ನೆರವಾಗುವುದಕ್ಕೆ ನಿಮ್ಮ ಪಾಲನ್ನು ಮಾಡಿರಿ. (ರೋಮಾಪುರ 12:17, 18) ಎಲ್ಲದಕ್ಕಿಂತ ಹೆಚ್ಚಾಗಿ, ದೇವರೊಂದಿಗೆ ಶಾಂತಿಯನ್ನು ಬೆನ್ನಟ್ಟಿರಿ.

ಒಬ್ಬ ಮಲಹೆತ್ತವರಾಗಿರುವ ಪಂಥಾಹ್ವಾನ

20. ತಮ್ಮ ತಂದೆಯಾಗಲಿ ತಾಯಿಯಾಗಲಿ ಮಲಹೆತ್ತವರಲ್ಲೊಬ್ಬರಾಗಿರುವಲ್ಲಿ, ಮಕ್ಕಳಿಗೆ ಯಾವ ಭಾವನೆಗಳು ಇರಬಹುದು?

20 ಅನೇಕ ಮನೆಗಳಲ್ಲಿ ಅತಿ ಮಹತ್ತಾದ ಪಂಥಾಹ್ವಾನವನ್ನು ಒಡ್ಡುವ ಸನ್ನಿವೇಶವು ಧಾರ್ಮಿಕ ವಾಗ್ವಾದಗಳಲ್ಲ, ಮಲಕುಟುಂಬದ ಸಮಸ್ಯೆಗಳೇ. ಇಂದು ಅನೇಕ ಮನೆವಾರ್ತೆಗಳು ಒಬ್ಬರು ಅಥವಾ ಇಬ್ಬರೂ ಹೆತ್ತವರ ಹಿಂದಿನ ವಿವಾಹದಿಂದ ಬಂದ ಮಕ್ಕಳನ್ನು ಒಳಗೂಡುತ್ತವೆ. ಅಂತಹ ಒಂದು ಕುಟುಂಬದಲ್ಲಿ, ಮಕ್ಕಳು ದ್ವೇಷವನ್ನು, ತೀವ್ರ ಅಸಮಾಧಾನವನ್ನು ಅಥವಾ ಪ್ರಾಯಶಃ ನಿಷ್ಠೆಗಳ ಹೋರಾಟವನ್ನು ಅನುಭವಿಸಬಹುದು. ಪರಿಣಾಮವಾಗಿ, ಒಳ್ಳೇ ತಂದೆ ಅಥವಾ ತಾಯಿಯಾಗಿರಲು ಮಲಹೆತ್ತವರಲ್ಲೊಬ್ಬರು ಮಾಡುವ ಪ್ರಾಮಾಣಿಕ ಪ್ರಯತ್ನಗಳನ್ನು ಅವರು ಧಿಕ್ಕರಿಸಬಹುದು. ಒಂದು ಮಲಕುಟುಂಬವು ಯಶಸ್ವಿಯಾಗುವಂತೆ ಮಾಡಲಿಕ್ಕೆ ಯಾವುದು ಸಹಾಯ ಮಾಡಬಲ್ಲದು?

ಸ್ವಂತ ಹೆತ್ತವರಾಗಿರಲಿ ಮಲಹೆತ್ತವರಾಗಿರಲಿ, ಮಾರ್ಗದರ್ಶನಕ್ಕಾಗಿ ಬೈಬಲಿನ ಮೇಲೆ ಆತುಕೊಳ್ಳಿರಿ

21. ತಮ್ಮ ವಿಶೇಷ ಪರಿಸ್ಥಿತಿಗಳ ಮಧ್ಯೆಯೂ, ಮಲಹೆತ್ತವರು ಸಹಾಯಕ್ಕಾಗಿ ಬೈಬಲಿನ ಮೂಲತತ್ವಗಳಿಗೆ ಯಾಕೆ ನೋಡಬೇಕು?

21 ಈ ವಿಶೇಷ ಪರಿಸ್ಥಿತಿಗಳಲ್ಲೂ, ಬೇರೆ ಮನೆವಾರ್ತೆಗಳಲ್ಲಿ ಯಶಸ್ಸನ್ನು ತರುವ ಬೈಬಲ್‌ ಮೂಲತತ್ವಗಳು ಇಲ್ಲಿ ಸಹ ಅನ್ವಯಿಸುತ್ತವೆಂಬುದನ್ನು ತಿಳಿದುಕೊಳ್ಳಿರಿ. ಆ ಮೂಲತತ್ವಗಳನ್ನು ಅಸಡ್ಡೆಮಾಡುವುದು ತಾತ್ಕಾಲಿಕವಾಗಿ ಒಂದು ಸಮಸ್ಯೆಯನ್ನು ನೀಗಿಸುವಂತೆ ಕಾಣಬಹುದಾದರೂ, ತರುವಾಯ ಹೃದಯವೇದನೆಗೆ ನಡಿಸುವ ಸಂಭವನೀಯತೆಯು ಇರುವುದು. (ಕೀರ್ತನೆ 127:1; ಜ್ಞಾನೋಕ್ತಿ 29:15) ವಿವೇಕ ಮತ್ತು ವಿವೇಚನಾಶಕ್ತಿಯನ್ನು—ದೀರ್ಘಾವಧಿಯ ಪ್ರಯೋಜನಗಳನ್ನು ಮನಸ್ಸಿನಲ್ಲಿಟ್ಟವರಾಗಿ ದೈವಿಕ ತತ್ವಗಳನ್ನು ಅನ್ವಯಿಸಲು ವಿವೇಚನೆಯನ್ನು, ಮತ್ತು ಕುಟುಂಬ ಸದಸ್ಯರು ನಿರ್ದಿಷ್ಟ ವಿಷಯಗಳನ್ನು ಹೇಳುವುದೂ ಮಾಡುವುದೂ ಏಕೆಂದು ಗುರುತಿಸಲು ವಿವೇಚನಾಶಕ್ತಿಯನ್ನು, ಬೆಳೆಸಿಕೊಳ್ಳಿರಿ. ಸಹಾನುಭೂತಿಯ ಒಂದು ಅಗತ್ಯ ಸಹ ಅಲ್ಲಿದೆ.—ಜ್ಞಾನೋಕ್ತಿ 16:21; 24:3; 1 ಪೇತ್ರ 3:8.

22. ಮಲಹೆತ್ತವರನ್ನು ಸ್ವೀಕರಿಸುವುದಕ್ಕೆ ಮಕ್ಕಳಿಗೆ ಏಕೆ ಕಷ್ಟವಾಗಬಹುದು?

22 ನೀವು ಮಲಹೆತ್ತವರಲ್ಲಿ ಒಬ್ಬರಾಗಿದ್ದರೆ, ಕುಟುಂಬದ ಸ್ನೇಹಿತರೋಪಾದಿ, ಮಕ್ಕಳಿಂದ ಪ್ರಾಯಶಃ ಸ್ವೀಕರಿಸಲ್ಪಟ್ಟದ್ದನ್ನು ನೀವು ನೆನಪಿಸಿಕೊಳ್ಳಬಹುದು. ಆದರೆ ನೀವು ಅವರ ಮಲಹೆತ್ತವರಾದಾಗ, ಅವರ ಮನೋಭಾವವು ಬದಲಾಗಿರಬಹುದು. ಮಕ್ಕಳು ತಮ್ಮೊಂದಿಗೆ ಇನ್ನುಮೇಲೆ ಜೀವಿಸದ ಆ ಸ್ವಾಭಾವಿಕ ಹೆತ್ತವರಲ್ಲೊಬ್ಬನನ್ನು ನೆನಪಿಸುತ್ತಾ, ಗೈರುಹಾಜರಿರುವ ಹೆತ್ತವನೆಡೆಗೆ ತಮಗಿರುವ ಮಮತೆಯನ್ನು ನೀವು ಕಿತ್ತುಕೊಳ್ಳಲು ಬಯಸುತ್ತೀರೆಂಬ ಭಾವನೆಯುಳ್ಳವರಾಗಿ, ನಿಷ್ಠೆಗಳ ತಿಕ್ಕಾಟದೊಂದಿಗೆ ಒದ್ದಾಡುತ್ತಿರಬಹುದು. ನೀವು ಅವರ ತಂದೆಯಲ್ಲ ಅಥವಾ ಅವರ ತಾಯಿಯಲ್ಲ ಎಂದು ಕೆಲವೊಮ್ಮೆ ಅವರು ನಿರ್ದಯೆಯಿಂದ ನಿಮಗೆ ಜ್ಞಾಪಕಹುಟ್ಟಿಸಲೂಬಹುದು. ಅಂತಹ ಹೇಳಿಕೆಗಳು ನೋಯಿಸುತ್ತವೆ. ಆದರೂ, “ನಿನ್ನ ಮನಸ್ಸು ಕೋಪಕ್ಕೆ ಆತುರಪಡದಿರಲಿ.” (ಪ್ರಸಂಗಿ 7:9) ಮಕ್ಕಳ ಭಾವನೆಗಳೊಂದಿಗೆ ವ್ಯವಹರಿಸಲಿಕ್ಕಾಗಿ, ವಿವೇಚನಾಶಕ್ತಿ ಮತ್ತು ಸಹಾನುಭೂತಿಗಳು ಅಗತ್ಯ.

23. ಮಲಮಕ್ಕಳಿರುವ ಕುಟುಂಬದಲ್ಲಿ ಶಿಸ್ತನ್ನು ಹೇಗೆ ನಿರ್ವಹಿಸಬಹುದು?

23 ಒಬ್ಬನು ಶಿಸ್ತನ್ನು ನಿರ್ವಹಿಸುತ್ತಿರುವಾಗ ಆ ಗುಣಗಳು ನಿರ್ಣಾಯಕವಾಗಿವೆ. ಹೊಂದಿಕೆಯುಳ್ಳ ಶಿಸ್ತು ಅತ್ಯಾವಶ್ಯಕ. (ಜ್ಞಾನೋಕ್ತಿ 6:20; 13:1) ಮತ್ತು ಮಕ್ಕಳೆಲ್ಲರೂ ಒಂದೇ ರೀತಿ ಇರುವುದಿಲ್ಲವಾದುದರಿಂದ ಶಿಸ್ತು ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಭಿನ್ನವಾಗಿರಬಹುದು. ಕಡಿಮೆಪಕ್ಷ ಆರಂಭದಲ್ಲಿ ಹೆತ್ತವರಿಗಿರುವ ಈ ಅಂಶವನ್ನು ಸ್ವಾಭಾವಿಕ ಹೆತ್ತವರಲ್ಲೊಬ್ಬನೇ ನಿರ್ವಹಿಸುವುದು ಹೆಚ್ಚು ಒಳ್ಳೆಯದೆಂದು ಕೆಲವು ಮಲಹೆತ್ತವರು ಕಂಡುಕೊಳ್ಳುತ್ತಾರೆ. ಆದರೂ ಶಿಸ್ತಿನ ವಿಷಯದಲ್ಲಿ, ಮಲಮಗುವಿಗಿಂತ ತಮ್ಮ ಸ್ವಂತ ಮಗುವಿಗೆ ಹೆಚ್ಚು ಅನುಗ್ರಹ ತೋರಿಸದೆ ಇದ್ದು, ಹೆತ್ತವರಿಬ್ಬರೂ ಸಮ್ಮತಿಯಿಂದ ಅದನ್ನು ಸಮರ್ಥಿಸುವುದು ಅತ್ಯಾವಶ್ಯಕ. (ಜ್ಞಾನೋಕ್ತಿ 24:23) ವಿಧೇಯತೆಯು ಪ್ರಾಮುಖ್ಯ, ಆದರೆ ಅಸಂಪೂರ್ಣತೆಗಾಗಿ ರಿಯಾಯಿತಿಗಳು ನೀಡಲ್ಪಡಬೇಕು. ಅತಿರೇಕ ಪ್ರತಿವರ್ತನೆ ತೋರಿಸಬೇಡಿ. ಪ್ರೀತಿಯಿಂದ ಶಿಸ್ತುಗೊಳಿಸಿರಿ.—ಕೊಲೊಸ್ಸೆ 3:21.

24. ಒಂದು ಮಲಕುಟುಂಬದಲ್ಲಿ ವಿರುದ್ಧಲಿಂಗದ ಸದಸ್ಯರ ನಡುವೆ ನೈತಿಕ ಸಮಸ್ಯೆಗಳನ್ನು ತಡೆಯಲಿಕ್ಕೆ ಯಾವುದು ಸಹಾಯ ಮಾಡಬಲ್ಲದು?

24 ತೊಂದರೆಯನ್ನು ತಡೆಯಲು ಕುಟುಂಬ ಚರ್ಚೆಗಳು ಹೆಚ್ಚನ್ನು ಮಾಡಬಲ್ಲವು. ಇದು ಕುಟುಂಬಕ್ಕೆ ಜೀವನದಲ್ಲಿ ಅತಿ ಪ್ರಮುಖವಾದ ವಿಷಯಗಳನ್ನು ಕೇಂದ್ರಬಿಂದುವಾಗಿಡುವಂತೆ ನೆರವಾಗಬಲ್ಲದು. (ಹೋಲಿಸಿ ಫಿಲಿಪ್ಪಿ 1:9-11.) ಕುಟುಂಬದ ಗುರಿಗಳನ್ನು ಮುಟ್ಟುವ ವಿಷಯದಲ್ಲಿ ಅವನು ಹೇಗೆ ನೆರವಾಗಬಲ್ಲನು ಎಂದು ನೋಡುವುದಕ್ಕೆ ಅವರು ಪ್ರತಿಯೊಬ್ಬನಿಗೆ ಸಹಾಯವನ್ನು ಸಹ ಕೊಡಸಾಧ್ಯವಿದೆ. ಇದಕ್ಕೆ ಕೂಡಿಸಿ, ಬಿಚ್ಚುಮನಸ್ಸಿನ ಕುಟುಂಬ ಚರ್ಚೆಗಳು ನೈತಿಕ ಸಮಸ್ಯೆಗಳನ್ನು ತಡೆಯಬಲ್ಲವು. ಹುಡುಗಿಯರಿಗೆ ಉಡುಪನ್ನು ತೊಡುವ ಮತ್ತು ಮಲತಂದೆಯ ಮತ್ತು ಮಲಸೋದರರ ಮುಂದೆ ಸಭ್ಯತೆಯಿಂದ ವರ್ತಿಸುವ ವಿಧಾನವು ತಿಳಿದಿರುವ ಅಗತ್ಯವಿದೆ, ಮತ್ತು ಹುಡುಗರಿಗೆ ಮಲತಾಯಿ ಮತ್ತು ಮಲಸೋದರಿಯರ ಕಡೆಗೆ ಯೋಗ್ಯ ನಡವಳಿಕೆಯ ಕುರಿತು ಸಲಹೆಯ ಅಗತ್ಯವಿದೆ.—1 ಥೆಸಲೊನೀಕ 4:3-8.

25. ಒಂದು ಮಲಕುಟುಂಬದಲ್ಲಿ ಶಾಂತಿಯನ್ನು ಕಾಪಾಡಲು ಯಾವ ಗುಣಗಳು ಸಹಾಯ ಮಾಡಬಲ್ಲವು?

25 ಮಲಹೆತ್ತವರಲ್ಲಿ ಒಬ್ಬರಾಗಿರುವ ವಿಶೇಷ ಪಂಥಾಹ್ವಾನವನ್ನು ಸಂಧಿಸುವುದರಲ್ಲಿ, ತಾಳ್ಮೆಯುಳ್ಳವರಾಗಿರಿ. ಹೊಸ ಸಂಬಂಧಗಳನ್ನು ಬೆಳೆಸಿಕೊಳ್ಳಲು ಸಮಯ ತಗಲುತ್ತದೆ. ದೈಹಿಕವಾಗಿ ನಿಮಗೆ ಯಾವ ಸಂಬಂಧವೂ ಇರದ ಮಕ್ಕಳ ಪ್ರೀತಿ ಮತ್ತು ಗೌರವವನ್ನು ಗಳಿಸುವುದು ಒಂದು ದುರ್ದಮ ಕೆಲಸವಾಗಿರಸಾಧ್ಯವಿದೆ. ಆದರೆ ಅದು ಶಕ್ಯ. ಯೆಹೋವನನ್ನು ಸಂತೋಷಗೊಳಿಸುವ ಬಲವಾದ ಅಪೇಕ್ಷೆಯಿಂದ ಕೂಡಿದ, ವಿವೇಕವುಳ್ಳ ಮತ್ತು ವಿವೇಚಿಸುವ ಒಂದು ಹೃದಯವು, ಮಲಕುಟುಂಬದಲ್ಲಿ ಶಾಂತಿಗೆ ಕೀಲಿ ಕೈಯಾಗಿದೆ. (ಜ್ಞಾನೋಕ್ತಿ 16:20) ಅಂತಹ ಗುಣಗಳು ನಿಮಗೆ ಇತರ ಸನ್ನಿವೇಶಗಳನ್ನು ನಿಭಾಯಿಸಲು ಸಹ ನೆರವಾಗಬಲ್ಲವು.

ಭೌತಿಕ ಬೆನ್ನಟ್ಟುವಿಕೆಗಳು ನಿಮ್ಮ ಮನೆಯನ್ನು ವಿಭಾಗಿಸುತ್ತವೊ?

26. ಭೌತಿಕ ವಸ್ತುಗಳ ವಿಷಯದಲ್ಲಿ ಸಮಸ್ಯೆಗಳು ಮತ್ತು ಮನೋಭಾವಗಳು ಒಂದು ಕುಟುಂಬವನ್ನು ಯಾವ ವಿಧಗಳಲ್ಲಿ ವಿಭಾಗಿಸಬಹುದು?

26 ಭೌತಿಕ ವಸ್ತುಗಳ ಕುರಿತಾದ ಸಮಸ್ಯೆಗಳು ಮತ್ತು ಮನೋಭಾವಗಳು ಕುಟುಂಬಗಳನ್ನು ಅನೇಕ ವಿಧಗಳಲ್ಲಿ ವಿಭಾಗಿಸಬಲ್ಲವು. ವಿಷಾದಕರವಾಗಿ, ಕೆಲವು ಕುಟುಂಬಗಳು ಹಣಕಾಸಿನ ವಿಷಯ ವಾಗ್ವಾದದಿಂದ ಮತ್ತು ಐಶ್ವರ್ಯವಂತರಾಗಿರುವ—ಕಡಿಮೆಪಕ್ಷ ಸ್ವಲ್ಪ ಹೆಚ್ಚು ಐಶ್ವರ್ಯವಂತರಾಗುವ—ಅಪೇಕ್ಷೆಯಿಂದ ಭಂಗಗೊಳಿಸಲ್ಪಡುತ್ತವೆ. ಇಬ್ಬರೂ ಸಂಗಾತಿಗಳು ಹೊರಗೆ ಉದ್ಯೋಗ ಮಾಡುವಾಗ ಮತ್ತು “ನನ್ನ ಹಣ, ನಿನ್ನ ಹಣ” ಎಂಬ ಮನೋಭಾವವನ್ನು ಬೆಳೆಸಿಕೊಳ್ಳುವಾಗ, ವಿಭಾಗಗಳು ವಿಕಸಿಸಬಹುದು. ವಾಗ್ವಾದಗಳನ್ನು ದೂರಸರಿಸಿದರೂ, ಸಂಗಾತಿಗಳಿಬ್ಬರೂ ಕೆಲಸಮಾಡುವಾಗ ಒಬ್ಬರಿಗೊಬ್ಬರು ಸ್ವಲ್ಪ ಸಮಯವನ್ನೂ ಕೊಡಲಾಗದ ಒಂದು ಕಾಲತಖ್ತೆಯೊಳಗೆ ಅವರು ತಮ್ಮನ್ನು ಕಂಡುಕೊಳ್ಳಬಹುದು. ತಂದೆಗಳು ತಾವು ಮನೆಯಲ್ಲಿ ಎಂದೂ ಸಂಪಾದಿಸಸಾಧ್ಯವಾಗುವುದಕ್ಕಿಂತ ಹೆಚ್ಚು ಹಣವನ್ನು ಗಳಿಸುವುದಕ್ಕೋಸ್ಕರ ತಮ್ಮ ಕುಟುಂಬಗಳಿಂದ ಒಂದು ದೀರ್ಘ ಕಾಲಾವಧಿಯ ತನಕ—ತಿಂಗಳುಗಳು ಅಥವಾ ವರ್ಷಗಳ ವರೆಗೂ—ದೂರ ಜೀವಿಸುವುದು ಲೋಕದಲ್ಲಿ ಬೆಳೆಯುತ್ತಿರುವ ಒಂದು ಪ್ರವೃತ್ತಿ. ಇದು ಅತಿ ಗಂಭೀರವಾದ ಸಮಸ್ಯೆಗಳಿಗೆ ನಡಿಸಬಲ್ಲದು.

27. ಹಣಕಾಸಿನ ಒತ್ತಡದ ಕೆಳಗೆ ಒಂದು ಕುಟುಂಬಕ್ಕೆ ನೆರವಾಗಬಲ್ಲ ಕೆಲವು ಮೂಲತತ್ವಗಳು ಯಾವುವು?

27 ಈ ಸನ್ನಿವೇಶಗಳನ್ನು ನಿರ್ವಹಿಸಲಿಕ್ಕಾಗಿ, ಯಾವ ನಿಯಮಗಳನ್ನೂ ಸ್ಥಾಪಿಸಲು ಸಾಧ್ಯವಿಲ್ಲ, ಯಾಕಂದರೆ ವಿವಿಧ ಕುಟುಂಬಗಳು ವಿವಿಧ ಒತ್ತಡಗಳು ಮತ್ತು ಅಗತ್ಯಗಳೊಂದಿಗೆ ವ್ಯವಹರಿಸಬೇಕಾಗುತ್ತದೆ. ಆದರೂ ಬೈಬಲಿನ ಸಲಹೆಯು ಸಹಾಯ ಮಾಡಬಲ್ಲದು. ಉದಾಹರಣೆಗಾಗಿ, ಅನಾವಶ್ಯಕ ತೊಂದರೆಯನ್ನು ಕೆಲವು ಸಾರಿ “ಕೂಡಿ ಮಾತಾಡು”ವುದರಿಂದ ವರ್ಜಿಸಸಾಧ್ಯವಿದೆಯೆಂದು ಜ್ಞಾನೋಕ್ತಿ 13:10 (NW) ಸೂಚಿಸುತ್ತದೆ. ಇದರಲ್ಲಿ ಬರೇ ತನ್ನ ಸ್ವಂತ ನೋಟಗಳನ್ನು ಒಬ್ಬನು ಹೇಳುವುದಲ್ಲ, ಬದಲಾಗಿ ಬುದ್ಧಿವಾದವನ್ನು ಕೇಳುವುದು ಮತ್ತು ಬೇರೊಬ್ಬನ ಅಭಿಪ್ರಾಯಗಳೇನೆಂದು ಕಂಡುಹಿಡಿಯುವುದು ಒಳಗೂಡಿಸುತ್ತದೆ. ಅದಲ್ಲದೆ, ಒಂದು ವಾಸ್ತವಿಕ ಆಯವ್ಯಯದ ಅಂದಾಜುಪಟ್ಟಿಯನ್ನು ಮಾಡುವುದು ಕುಟುಂಬ ಪ್ರಯತ್ನಗಳ ಐಕ್ಯತೆಗೆ ನೆರವಾಗಬಲ್ಲದು. ವಿಶೇಷವಾಗಿ ಮಕ್ಕಳು ಮತ್ತು ಇತರ ಅವಲಂಬಿಗಳಿರುವಾಗ ಹೆಚ್ಚಿನ ಖರ್ಚನ್ನು ನಿರ್ವಹಿಸಲಿಕ್ಕಾಗಿ ಸಂಗಾತಿಗಳಿಬ್ಬರಿಗೂ—ಪ್ರಾಯಶಃ ತಾತ್ಕಾಲಿಕವಾಗಿ—ಹೊರಗೆ ಕೆಲಸ ಮಾಡುವುದು ಅವಶ್ಯವಾಗಿರುತ್ತದೆ. ವಿದ್ಯಮಾನವು ಹೀಗಿರುವಾಗ, ತನ್ನ ಹೆಂಡತಿಗಾಗಿ ತಾನು ಇನ್ನೂ ಸಮಯವನ್ನು ಬದಿಗಿರಿಸಿದ್ದೇನೆ ಎಂಬ ಆಶ್ವಾಸನೆಯನ್ನು ಗಂಡನು ಅವಳಿಗೆ ಕೊಡಬಲ್ಲನು. ಅವಳು ಸಾಮಾನ್ಯವಾಗಿ ಒಬ್ಬಳೇ ನಿರ್ವಹಿಸುತ್ತಿರಬಹುದಾದ ಕೆಲವು ಕೆಲಸಗಳಲ್ಲಿ ಅವನು ಮಕ್ಕಳೊಂದಿಗೆ ಪ್ರೀತಿಯಿಂದ ಸಹಾಯ ನೀಡಬಹುದು.—ಫಿಲಿಪ್ಪಿ 2:1-4.

28. ಆಚರಣೆಗೆ ತರಲ್ಪಡುವಲ್ಲಿ, ಒಂದು ಕುಟುಂಬವು ಐಕ್ಯದ ಕಡೆಗೆ ಕಾರ್ಯನಡಿಸುವಂತೆ ಯಾವ ಮರುಜ್ಞಾಪನಗಳು ಸಹಾಯ ಮಾಡುವವು?

28 ಆದರೂ, ಈ ವಿಷಯಗಳ ವ್ಯವಸ್ಥೆಯಲ್ಲಿ ಹಣವು ಒಂದು ಆವಶ್ಯಕತೆಯಾಗಿರುವಾಗ, ಅದು ಸಂತೋಷವನ್ನು ತರುವುದಿಲ್ಲ ಎಂಬುದನ್ನು ಮನಸ್ಸಿನಲ್ಲಿಡಿರಿ. ಅದು ಖಂಡಿತವಾಗಿಯೂ ಜೀವವನ್ನು ಕೊಡುವುದಿಲ್ಲ. (ಪ್ರಸಂಗಿ 7:12) ವಾಸ್ತವವಾಗಿ, ಭೌತಿಕ ವಿಷಯಗಳ ಮೇಲೆ ಅತಿರೇಕ ಒತ್ತು, ಆತ್ಮಿಕ ಮತ್ತು ನೈತಿಕ ಹಾನಿಯನ್ನು ಉಂಟುಮಾಡಬಲ್ಲದು. (1 ತಿಮೊಥೆಯ 6:9-12) ಜೀವಿತದ ಆವಶ್ಯಕತೆಗಳನ್ನು ಪಡೆಯುವ ನಮ್ಮ ಪ್ರಯತ್ನಗಳ ಮೇಲೆ ದೇವರ ಆಶೀರ್ವಾದವನ್ನು ಹೊಂದಿರುವ ಆಶ್ವಾಸನೆಯೊಂದಿಗೆ, ಆತನ ರಾಜ್ಯವನ್ನೂ ಆತನ ನೀತಿಯನ್ನೂ ಪ್ರಥಮವಾಗಿ ಹುಡುಕುವುದು ಎಷ್ಟು ಹೆಚ್ಚು ಉತ್ತಮವಾಗಿದೆ! (ಮತ್ತಾಯ 6:25-33; ಇಬ್ರಿಯ 13:5) ಆತ್ಮಿಕ ಅಭಿರುಚಿಗಳನ್ನು ಪ್ರಥಮವಾಗಿಡುವ ಮೂಲಕ ಮತ್ತು ಎಲ್ಲದಕ್ಕಿಂತ ಮೊದಲಾಗಿ ದೇವರೊಂದಿಗೆ ಶಾಂತಿಯನ್ನು ಬೆನ್ನಟ್ಟುವ ಮೂಲಕ, ನಿಮ್ಮ ಮನೆವಾರ್ತೆಯು, ನಿರ್ದಿಷ್ಟ ಸನ್ನಿವೇಶಗಳಿಂದಾಗಿ ಪ್ರಾಯಶಃ ಅದು ವಿಭಾಗಗೊಂಡಿರುವುದಾದರೂ, ಅತ್ಯಂತ ಪ್ರಾಮುಖ್ಯ ವಿಧಗಳಲ್ಲಿ ನಿಜವಾಗಿಯೂ ಐಕ್ಯವುಳ್ಳದ್ದಾಗಿ ಪರಿಣಮಿಸುವುದನ್ನು ನೀವು ಕಾಣಬಹುದು.