ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ ಹದಿಮೂರು

ವಿವಾಹವು ಮುರಿದುಹೋಗುವ ಹಂತದಲ್ಲಿರುವುದಾದರೆ

ವಿವಾಹವು ಮುರಿದುಹೋಗುವ ಹಂತದಲ್ಲಿರುವುದಾದರೆ

1, 2. ಒಂದು ವಿವಾಹವು ಒತ್ತಡದ ಕೆಳಗಿರುವಾಗ, ಯಾವ ಪ್ರಶ್ನೆಯು ಕೇಳಲ್ಪಡಬೇಕು?

 ಇಟಲಿಯ ಲೂಚೀಯ ಎಂಬ ಒಬ್ಬ ಸ್ತ್ರೀಯು 1988ರಲ್ಲಿ ಅತಿ ಖಿನ್ನಳಾಗಿದ್ದಳು. * ಅವಳ ವಿವಾಹವು ಹತ್ತು ವರ್ಷಗಳ ಬಳಿಕ ಈಗ ಕೊನೆಗೊಳ್ಳುವುದರಲ್ಲಿತ್ತು. ತನ್ನ ಗಂಡನೊಡನೆ ರಾಜಿಮಾಡಿಕೊಳ್ಳಲು ಅವಳು ಅನೇಕ ಸಲ ಪ್ರಯತ್ನಿಸಿದ್ದಳು, ಆದರೆ ಅದು ಕಾರ್ಯಸಾಧಕವಾಗಲಿಲ್ಲ. ಹೀಗೆ ಅಸಂಗತತೆಯ ಕಾರಣ ಅವಳು ಪ್ರತ್ಯೇಕವಾಸವನ್ನು ತೆಗೆದುಕೊಂಡು, ಈಗ ತನ್ನ ಇಬ್ಬರು ಪುತ್ರಿಯರನ್ನು ತಾನಾಗಿಯೇ ಬೆಳೆಸುವುದನ್ನು ಎದುರಿಸಿದಳು. ಆ ಸಮಯದೆಡೆಗೆ ಹಿನ್ನೋಡುತ್ತಾ, ಲೂಚೀಯ ನೆನಪಿಸಿಕೊಳ್ಳುವುದು: “ನಮ್ಮ ವಿವಾಹವನ್ನು ಯಾವುದೂ ರಕ್ಷಿಸಸಾಧ್ಯವಿರಲಿಲ್ಲವೆಂಬುದು ನನಗೆ ಖಂಡಿತ ಗೊತ್ತಿತ್ತು.”

2 ನಿಮಗೆ ವಿವಾಹದ ಸಮಸ್ಯೆಗಳಿರುವುದಾದರೆ, ನೀವು ಲೂಚೀಯಳನ್ನು ಅರ್ಥಮಾಡಿಕೊಳ್ಳಲು ಶಕ್ತರಾಗಿರಬಹುದು. ನಿಮ್ಮ ವಿವಾಹವು ತೊಂದರೆಗೊಳಗಾಗಿರಬಹುದು ಮತ್ತು ಅದನ್ನು ಇನ್ನೂ ಕಾಪಾಡಸಾಧ್ಯವಿದೆಯೇ ಎಂದು ನೀವು ಕುತೂಹಲಪಡುತ್ತಿರಬಹುದು. ವಿದ್ಯಮಾನವು ಹಾಗಿರುವಲ್ಲಿ, ವಿವಾಹವನ್ನು ಸಫಲಗೊಳಿಸಲು ಸಹಾಯಕ್ಕಾಗಿ ದೇವರು ಬೈಬಲಿನಲ್ಲಿ ಕೊಟ್ಟಿರುವ ಒಳ್ಳೆಯ ಬುದ್ಧಿವಾದವೆಲ್ಲವನ್ನು ನಾನು ಪಾಲಿಸಿದ್ದೇನೊ? ಎಂಬ ಈ ಪ್ರಶ್ನೆಯನ್ನು ಪರಿಗಣಿಸುವುದು ಸಹಾಯಕವಾಗುವುದನ್ನು ನೀವು ಕಾಣುವಿರಿ.—ಕೀರ್ತನೆ 119:105.

3. ವಿವಾಹ ವಿಚ್ಛೇದವು ಜನಪ್ರಿಯವಾಗಿರುವುದಾದರೂ, ವಿಚ್ಛೇದಗೊಂಡ ಅನೇಕ ವ್ಯಕ್ತಿಗಳು ಮತ್ತು ಅವರ ಕುಟುಂಬಗಳ ನಡುವೆ ಯಾವ ಪ್ರತಿಕ್ರಿಯೆಯು ವರದಿಸಲ್ಪಡುತ್ತದೆ?

3 ಗಂಡ ಮತ್ತು ಹೆಂಡತಿಯ ಮಧ್ಯೆ ಬಿಕ್ಕಟ್ಟುಗಳು ತೀವ್ರವಾಗುತ್ತಿರುವಾಗ, ವಿವಾಹವನ್ನು ಅಂತ್ಯಗೊಳಿಸುವುದೇ ಅತಿ ಸುಲಭ ಮಾರ್ಗಕ್ರಮವಾಗಿ ಕಂಡೀತು. ಆದರೆ, ಅನೇಕ ದೇಶಗಳು ಒಡೆದ ಕುಟುಂಬಗಳಲ್ಲಿ ತಲ್ಲಣಗೊಳಿಸುವ ವೃದ್ಧಿಯನ್ನು ಅನುಭವಿಸಿರುವಾಗ, ವಿಚ್ಛೇದಿತ ಪುರುಷ ಮತ್ತು ಸ್ತ್ರೀಯರ ಒಂದು ದೊಡ್ಡ ಪ್ರತಿಶತವು ಆ ಒಡೆತಕ್ಕಾಗಿ ವಿಷಾದಿಸುತ್ತದೆಂದು ಇತ್ತೀಚಿನ ಅಧ್ಯಯನಗಳು ಸೂಚಿಸುತ್ತವೆ. ಇವರಲ್ಲಿ ಅನೇಕರು, ದೈಹಿಕ ಮತ್ತು ಮಾನಸಿಕ ಇವೆರಡೂ ಆರೋಗ್ಯ ಸಮಸ್ಯೆಗಳನ್ನು, ತಮ್ಮ ವಿವಾಹದಲ್ಲಿ ಉಳಿಯುವವರಿಗಿಂತ ಅಧಿಕವಾಗಿ ಅನುಭವಿಸುತ್ತಾರೆ. ವಿಚ್ಛೇದದ ಮಕ್ಕಳ ಗೊಂದಲ ಮತ್ತು ಅಸಂತೋಷವು ಅನೇಕವೇಳೆ ಅನೇಕ ವರ್ಷಗಳ ವರೆಗೆ ಉಳಿಯುತ್ತದೆ. ಒಡೆದ ಕುಟುಂಬದ ಹೆತ್ತವರು ಮತ್ತು ಸ್ನೇಹಿತರು ಸಹ ಕಷ್ಟವನ್ನು ಅನುಭವಿಸುತ್ತಾರೆ. ಮತ್ತು ವಿವಾಹದ ಮೂಲಕರ್ತನಾದ ದೇವರು ಈ ಸನ್ನಿವೇಶವನ್ನು ವೀಕ್ಷಿಸುವ ವಿಧದ ಕುರಿತೇನು?

4. ಒಂದು ವಿವಾಹದಲ್ಲಿನ ಸಮಸ್ಯೆಗಳು ಹೇಗೆ ನಿರ್ವಹಿಸಲ್ಪಡಬೇಕು?

4 ಹಿಂದಿನ ಅಧ್ಯಾಯಗಳಲ್ಲಿ ಗಮನಿಸಿರುವಂತೆ, ವಿವಾಹವು ಒಂದು ಜೀವಾವಧಿಯ ಬಂಧವಾಗಿರಬೇಕೆಂದು ದೇವರು ಉದ್ದೇಶಿಸಿದನು. (ಆದಿಕಾಂಡ 2:24) ಹೀಗಿರಲಾಗಿ, ಅಷ್ಟೊಂದು ವಿವಾಹಗಳು ಮುರಿಯುವುದೇಕೆ? ಅದು ರಾತ್ರಿಬೆಳಗಾಗುವಷ್ಟರಲ್ಲಿ ಸಂಭವಿಸಲಿಕ್ಕಿಲ್ಲ. ಸಾಮಾನ್ಯವಾಗಿ ಎಚ್ಚರಿಕೆಯ ಸೂಚನೆಗಳು ಇರುತ್ತವೆ. ಒಂದು ವಿವಾಹದಲ್ಲಿ ಚಿಕ್ಕ ಚಿಕ್ಕ ಸಮಸ್ಯೆಗಳು ಕೊನೆಗೆ ದುಸ್ತರವಾಗಿ ತೋರುವ ತನಕ ಹೆಚ್ಚೆಚ್ಚು ದೊಡ್ಡದಾಗಿ ಬೆಳೆಯಬಲ್ಲವು. ಆದರೆ ಈ ಸಮಸ್ಯೆಗಳು ಬೈಬಲಿನ ಸಹಾಯದಿಂದ ತಕ್ಕ ಸಮಯದಲ್ಲಿ ನಿರ್ವಹಿಸಲ್ಪಡುವಲ್ಲಿ, ಅನೇಕ ದಾಂಪತ್ಯದ ಒಡೆತಗಳನ್ನು ತಪ್ಪಿಸಸಾಧ್ಯವಿದೆ.

ವಾಸ್ತವಿಕತೆಯುಳ್ಳವರಾಗಿರಿ

5. ಯಾವುದೇ ವಿವಾಹದಲ್ಲಿ ಯಾವ ವಾಸ್ತವಿಕ ಸನ್ನಿವೇಶವು ಎದುರಿಸಲ್ಪಡಬೇಕು?

5 ಕೆಲವು ಸಲ ಸಮಸ್ಯೆಗಳಿಗೆ ನಡೆಸುವ ಒಂದು ಕಾರಣವು, ವಿವಾಹ ಸಹಭಾಗಿಗಳಲ್ಲಿ ಒಬ್ಬರಲ್ಲಿ ಅಥವಾ ಇಬ್ಬರಲ್ಲೂ ಇರಬಹುದಾದ ಅವಾಸ್ತವಿಕವಾದ ನಿರೀಕ್ಷಣೆಗಳೇ. ಪ್ರಣಯ ಕಥೆಗಳು, ಜನಪ್ರಿಯ ಪತ್ರಿಕೆಗಳು, ಟೆಲಿವಿಷನ್‌ ಕಾರ್ಯಕ್ರಮಗಳು, ಮತ್ತು ಚಲನ ಚಿತ್ರಗಳು, ನಿಜ ಜೀವನದಿಂದ ತೀರ ಬೇರೆಯಾದ ನಿರೀಕ್ಷೆಗಳನ್ನು ಮತ್ತು ಸ್ವಪ್ನಗಳನ್ನು ನಿರ್ಮಿಸಬಲ್ಲವು. ಈ ಸ್ವಪ್ನಗಳು ಸತ್ಯವಾಗಿ ಪರಿಣಮಿಸದಾಗ, ವಂಚಿತವಾದ, ಅಸಂತುಷ್ಟವಾದ, ಹಾಗೂ ಕಹಿಯಾದ ಭಾವನೆಯನ್ನೂ ಒಬ್ಬ ವ್ಯಕ್ತಿಯು ತಾಳಸಾಧ್ಯವಿದೆ. ಆದರೂ ಇಬ್ಬರು ಅಪರಿಪೂರ್ಣ ವ್ಯಕ್ತಿಗಳು ವಿವಾಹದಲ್ಲಿ ಸಂತೋಷವನ್ನು ಹೇಗೆ ಕಂಡುಕೊಳ್ಳಬಲ್ಲರು? ಒಂದು ಯಶಸ್ವಿಯಾದ ಸಂಬಂಧವನ್ನು ಸಾಧಿಸುವುದಕ್ಕೆ ಪ್ರಯತ್ನದ ಅಗತ್ಯವಿದೆ.

6. (ಎ) ವಿವಾಹದ ಯಾವ ಸಮತೂಕದ ನೋಟವನ್ನು ಬೈಬಲು ನೀಡುತ್ತದೆ? (ಬಿ) ವಿವಾಹದಲ್ಲಿ ಭಿನ್ನಾಭಿಪ್ರಾಯಗಳಿಗೆ ಕೆಲವು ಕಾರಣಗಳು ಯಾವುವು?

6 ಬೈಬಲು ಪ್ರಾಯೋಗಿಕವಾಗಿದೆ. ಅದು ವಿವಾಹದ ಆನಂದಗಳನ್ನು ಅಂಗೀಕರಿಸುತ್ತದೆ, ಆದರೆ ವಿವಾಹವಾಗುವವರಿಗೆ “ಶರೀರಸಂಬಂಧವಾಗಿ ಕಷ್ಟ ಸಂಭವಿಸುವದು,” ಎಂದು ಸಹ ಅದು ಎಚ್ಚರಿಸುತ್ತದೆ. (1 ಕೊರಿಂಥ 7:28) ಈಗಾಗಲೇ ಗಮನಿಸಿರುವಂತೆ, ಇಬ್ಬರು ಸಹಭಾಗಿಗಳು ಅಪರಿಪೂರ್ಣರಾಗಿ ಪಾಪ ಪ್ರವೃತ್ತಿಯವರಾಗಿರುತ್ತಾರೆ. ಪ್ರತಿಯೊಬ್ಬ ಸಹಭಾಗಿಯ ಮಾನಸಿಕ ಮತ್ತು ಭಾವನಾತ್ಮಕ ರಚನೆ ಮತ್ತು ಪಾಲನೆ ಪೋಷಣೆಯು ಬೇರೆ ಬೇರೆಯಾಗಿರುತ್ತದೆ. ದಂಪತಿಗಳು ಕೆಲವೊಮ್ಮೆ ಹಣಕಾಸು, ಮಕ್ಕಳು, ಮತ್ತು ವಿವಾಹ ಸಂಬಂಧಿಗಳ ಕುರಿತಾಗಿ ಅಸಮ್ಮತಿಸುತ್ತಾರೆ. ಒಂದುಗೂಡಿ ಕೆಲಸಮಾಡಲಿಕ್ಕೆ ಇರುವ ಸಮಯದ ಅಭಾವ, ಮತ್ತು ಲೈಂಗಿಕ ಸಮಸ್ಯೆಗಳು ಸಹ ಕಲಹದ ಒಂದು ಮೂಲವಾಗಿರಸಾಧ್ಯವಿದೆ. * ಅಂತಹ ವಿಷಯಗಳೊಂದಿಗೆ ವ್ಯವಹರಿಸಲು ಸಮಯ ತಗಲುತ್ತದಾದರೂ ಧೈರ್ಯತೆಗೆದುಕೊಳ್ಳಿರಿ! ಹೆಚ್ಚಿನ ವಿವಾಹಿತ ದಂಪತಿಗಳು ಅಂತಹ ಸಮಸ್ಯೆಗಳನ್ನು ಎದುರಿಸಶಕ್ತರಾಗಿ ಪರಸ್ಪರ ಸ್ವೀಕರಣೀಯ ಪರಿಹಾರಗಳನ್ನು ಅಣಿಗೊಳಿಸಲು ಶಕ್ತರಾಗುತ್ತಾರೆ.

ಭಿನ್ನಾಭಿಪ್ರಾಯಗಳನ್ನು ಚರ್ಚಿಸಿರಿ

7, 8. ವಿವಾಹ ಸಹಭಾಗಿಗಳ ನಡುವೆ ಮನಸ್ತಾಪಗಳು ಅಥವಾ ತಪ್ಪಭಿಪ್ರಾಯಗಳು ಇದ್ದಲ್ಲಿ, ಅವನ್ನು ನಿರ್ವಹಿಸುವ ಶಾಸ್ತ್ರೀಯ ವಿಧಾನವು ಯಾವುದು?

7 ಮನಸ್ತಾಪಗಳನ್ನು, ತಪ್ಪಭಿಪ್ರಾಯಗಳನ್ನು, ಅಥವಾ ವೈಯಕ್ತಿಕ ಕುಂದುಕೊರತೆಗಳನ್ನು ಚರ್ಚಿಸುವಾಗ ಶಾಂತರಾಗಿ ಉಳಿಯಲು ಅನೇಕರಿಗೆ ಕಷ್ಟವಾಗಿ ಕಾಣುತ್ತದೆ. “ನನ್ನನ್ನು ತಪ್ಪುತಿಳಿದುಕೊಳ್ಳಲಾಗುತ್ತದೆ ಎಂಬ ಭಾವನೆ ನನಗಿದೆ,” ಎಂದು ಮುಚ್ಚುಮರೆಯಿಲ್ಲದೆ ಹೇಳುವ ಬದಲಾಗಿ, ಒಬ್ಬ ಜೊತೆಗಾರನು ಭಾವಪರವಶನಾಗಿ ಸಮಸ್ಯೆಯನ್ನು ಅತಿರೇಕಿಸಬಹುದು. ಅನೇಕರು ಹೀಗನ್ನುವರು: “ನೀನು ನಿನ್ನ ಚಿಂತೆಯನ್ನೇ ಮಾಡುವವನು,” ಅಥವಾ “ನೀನು ನನ್ನನ್ನು ಪ್ರೀತಿಸುವುದಿಲ್ಲ.” ಒಂದು ವಿವಾದದಲ್ಲಿ ಒಡಗೂಡಲು ಮನಸ್ಸಿಲ್ಲದವಳಾಗಿ, ಆ ಇನ್ನೊಬ್ಬ ಜೊತೆಗಾರ್ತಿಯು ಪ್ರತಿಕ್ರಿಯಿಸಲು ನಿರಾಕರಿಸಬಹುದು.

8 ಒಂದು ಹೆಚ್ಚು ಉತ್ತಮ ಮಾರ್ಗವು ಬೈಬಲಿನ ಸಲಹೆಗೆ ಲಕ್ಷ್ಯಕೊಡುವುದೇ: “ಕೋಪಮಾಡಬೇಕಾದರೂ ಪಾಪಮಾಡಬೇಡಿರಿ; ಸೂರ್ಯನು ಮುಳುಗುವದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ.” (ಎಫೆಸ 4:26) ಒಂದು ಸಂತೋಷಿತ ವಿವಾಹ ದಂಪತಿಗಳು, ತಮ್ಮ 60ನೆಯ ವಿವಾಹ ವಾರ್ಷಿಕೋತ್ಸವವನ್ನು ತಲಪಿದಾಗ, ಅವರ ಸಫಲ ವಿವಾಹದ ರಹಸ್ಯವೇನೆಂದು ಕೇಳಲ್ಪಟ್ಟರು. ಗಂಡನು ಹೇಳಿದ್ದು: “ಭಿನ್ನಾಭಿಪ್ರಾಯಗಳು ಅವೆಷ್ಟೇ ಚಿಕ್ಕದಾಗಿದ್ದಿರಲಿ, ಅವನ್ನು ನಿದ್ರೆಗೆ ಮುಂಚೆಯೆ ನಿವಾರಿಸಿಕೊಳ್ಳುವುದನ್ನು ನಾವು ಕಲಿತೆವು.”

9. (ಎ) ಶಾಸ್ತ್ರಗಳಲ್ಲಿ ಯಾವುದು ಸಂವಾದದ ಒಂದು ಆವಶ್ಯಕ ಭಾಗವಾಗಿ ಗುರುತಿಸಲ್ಪಡುತ್ತದೆ? (ಬಿ) ಅದಕ್ಕೆ ಧೈರ್ಯ ಮತ್ತು ನಮ್ರತೆಯು ಬೇಕಾದರೂ ವಿವಾಹ ಸಂಗಾತಿಗಳು ಆಗಾಗ ಏನು ಮಾಡುವ ಅಗತ್ಯವಿದೆ?

9 ಒಬ್ಬ ಗಂಡ ಮತ್ತು ಹೆಂಡತಿಯು ಭಿನ್ನಾಭಿಪ್ರಾಯಪಡುವಾಗ, ಅವರಲ್ಲಿ ಪ್ರತಿಯೊಬ್ಬನು “ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ” ಇರುವ ಅಗತ್ಯವಿದೆ. (ಯಾಕೋಬ 1:19) ಜಾಗ್ರತೆಯಿಂದ ಕಿವಿಗೊಟ್ಟ ಬಳಿಕ ಇಬ್ಬರೂ ಸಹಭಾಗಿಗಳು ತಪ್ಪಾಯಿತೆಂದು ಹೇಳುವ ಅಗತ್ಯವನ್ನು ಕಂಡಾರು. (ಯಾಕೋಬ 5:16) “ನಿನ್ನನ್ನು ನೋಯಿಸಿದುದಕ್ಕಾಗಿ ವಿಷಾದಿಸುತ್ತೇನೆ” ಎಂದು ಯಥಾರ್ಥವಾಗಿ ಹೇಳುವುದಕ್ಕೆ ನಮ್ರತೆ ಮತ್ತು ಧೈರ್ಯವು ಬೇಕು. ಆದರೆ ಈ ರೀತಿಯಲ್ಲಿ ಭಿನ್ನತೆಗಳನ್ನು ನಿರ್ವಹಿಸುವುದು, ವಿವಾಹಿತ ದಂಪತಿಗಳಿಗೆ ಅವರ ಸಮಸ್ಯೆಗಳನ್ನು ಬಗೆಹರಿಸಲು ಮಾತ್ರವಲ್ಲ, ಅವರು ಪರಸ್ಪರ ಸಾಂಗತ್ಯದಲ್ಲಿ ಹೆಚ್ಚು ಆನಂದವನ್ನು ಕಂಡುಕೊಳ್ಳುವಂತೆ ಮಾಡುವ ಒಂದು ಹೃದಯೋಲ್ಲಾಸ ಮತ್ತು ಆಪ್ತತೆಯನ್ನು ವಿಕಸಿಸುವಂತೆಯೂ ಸಹಾಯ ಮಾಡುವುದರಲ್ಲಿ ಅತ್ಯಂತ ಪರಿಣಾಮಕಾರಿಯಾಗಿರುವುದು.

ವಿವಾಹದಲ್ಲಿ ಸಲ್ಲತಕ್ಕದ್ದನ್ನು ಸಲ್ಲಿಸುವುದು

10. ಕೊರಿಂಥದ ಕ್ರೈಸ್ತರಿಗೆ ಪೌಲನು ಶಿಫಾರಸ್ಸು ಮಾಡಿದ ಯಾವ ಸಂರಕ್ಷಣೆಯು ಇಂದು ಒಬ್ಬ ಕ್ರೈಸ್ತನಿಗೆ ಅನ್ವಯಿಸಬಹುದಾಗಿದೆ?

10 ಅಪೊಸ್ತಲ ಪೌಲನು ಕೊರಿಂಥದವರಿಗೆ ಬರೆದಾಗ, ಅವನು ವಿವಾಹವನ್ನು ಶಿಫಾರಸ್ಸು ಮಾಡಿದ್ದು ‘ಜಾರತ್ವವು ಪ್ರಬಲವಾಗಿದ್ದ ಕಾರಣ’ದಿಂದಾಗಿ. (1 ಕೊರಿಂಥ 7:2) ಇಂದು ಲೋಕವು ಪುರಾತನ ಕೊರಿಂಥದಷ್ಟೇ, ಅಥವಾ ಅದಕ್ಕಿಂತಲೂ ಹೆಚ್ಚು ಕೆಟ್ಟದ್ದಾಗಿದೆ. ಲೋಕದ ಜನರು ಬಹಿರಂಗವಾಗಿ ಚರ್ಚಿಸುವ ಅನೈತಿಕ ವಿಷಯಗಳು, ಅವರು ಉಡುಪು ತೊಡುವ ಅಸಭ್ಯ ರೀತಿ, ಹಾಗೂ ಪತ್ರಿಕೆಗಳಲ್ಲಿ ಮತ್ತು ಪುಸ್ತಕಗಳಲ್ಲಿ, ಟಿವಿ ಮತ್ತು ಚಲನ ಚಿತ್ರಗಳಲ್ಲಿ ತೋರಿಸಲಾಗುವ ವಿಷಯಲಂಪಟ ಕಥೆಗಳೆಲ್ಲವೂ ಕೂಡಿ ಅನೈತಿಕ ಕಾಮಾಭಿಲಾಷೆಗಳನ್ನು ಪ್ರಚೋದಿಸುತ್ತವೆ. ತದ್ರೀತಿಯ ಪರಿಸರದಲ್ಲಿ ಜೀವಿಸುತ್ತಿದ್ದ ಕೊರಿಂಥದವರಿಗೆ ಅಪೊಸ್ತಲ ಪೌಲನು ಹೇಳಿದ್ದು: “ಕಾಮತಾಪಪಡುವದಕ್ಕಿಂತ ಮದುವೆ [“ವಿವಾಹ,” NW]ಮಾಡಿಕೊಳ್ಳುವದು ಉತ್ತಮವಷ್ಟೆ.”—1 ಕೊರಿಂಥ 7:9.

11, 12. (ಎ) ಗಂಡ ಮತ್ತು ಹೆಂಡತಿಯರು ಒಬ್ಬರಿಗೊಬ್ಬರು ಏನನ್ನು ಸಲ್ಲಿಸಲಿಕ್ಕಿದೆ, ಮತ್ತು ಯಾವ ಮನೋಭಾವದಿಂದ ಅದನ್ನು ಸಲ್ಲಿಸಬೇಕು? (ಬಿ) ವಿವಾಹದ ಸಲ್ಲಿಸುವಿಕೆಯು ತಾತ್ಕಾಲಿಕವಾಗಿ ಪ್ರತಿಬಂಧಿಸಲ್ಪಡಬೇಕಾಗುವಲ್ಲಿ ಪರಿಸ್ಥಿತಿಯನ್ನು ಹೇಗೆ ನಿರ್ವಹಿಸಬೇಕು?

11 ಆದುದರಿಂದ, ಬೈಬಲು ವಿವಾಹಿತ ಕ್ರೈಸ್ತರಿಗೆ ಆಜ್ಞಾಪಿಸುವುದು: “ಗಂಡನು ಹೆಂಡತಿಗೆ ಸಲ್ಲತಕ್ಕದ್ದನ್ನು ಸಲ್ಲಿಸಲಿ, ಹಾಗೆಯೇ ಹೆಂಡತಿಯು ಗಂಡನಿಗೆ ಸಲ್ಲಿಸಲಿ.” (1 ಕೊರಿಂಥ 7:3) ಕೊಡುವಿಕೆಯ ಮೇಲೆ ಒತ್ತುಹಾಕಿರುವುದನ್ನು ಗಮನಿಸಿರಿ—ಹಕ್ಕೊತ್ತಾಯದ ಮೇಲಲ್ಲ. ಪ್ರತಿಯೊಬ್ಬ ಸಹಭಾಗಿಯು ಇನ್ನೊಬ್ಬನ ಒಳಿತನ್ನು ಕುರಿತು ಚಿಂತಿಸುವುದಾದರೆ ಮಾತ್ರ ವಿವಾಹದಲ್ಲಿನ ಶಾರೀರಿಕ ಆಪ್ತತೆಯು ನಿಜವಾಗಿಯೂ ತೃಪ್ತಿಕರವಾಗಿರುತ್ತದೆ. ಉದಾಹರಣೆಗಾಗಿ, ತಮ್ಮ ಹೆಂಡತಿಯರೊಂದಿಗೆ “ವಿವೇಕದಿಂದ” ಒಗತನಮಾಡುವಂತೆ ಬೈಬಲು ಗಂಡಂದಿರಿಗೆ ಆಜ್ಞಾಪಿಸುತ್ತದೆ. (1 ಪೇತ್ರ 3:7) ಇದು ವಿಶೇಷವಾಗಿ ವಿವಾಹದಲ್ಲಿ ಸಲ್ಲತಕ್ಕದ್ದನ್ನು ಸಲ್ಲಿಸುವ ಮತ್ತು ಪಡೆದುಕೊಳ್ಳುವ ವಿಷಯದಲ್ಲಿ ಸತ್ಯವಾಗಿದೆ. ಒಬ್ಬ ಹೆಂಡತಿಯನ್ನು ಕೋಮಲವಾಗಿ ಉಪಚರಿಸದಿದ್ದಲ್ಲಿ, ವಿವಾಹದ ಈ ಅಂಶದಲ್ಲಿ ಆನಂದಿಸುವುದು ಆಕೆಗೆ ಕಷ್ಟಕರವಾಗಿ ಕಂಡೀತು.

12 ವಿವಾಹ ಸಂಗಾತಿಗಳು ವಿವಾಹದ ಸಲ್ಲಿಸುವಿಕೆಯನ್ನು ಒಬ್ಬರಿಗೊಬ್ಬರು ಕೊಡಲು ತಪ್ಪಬಹುದಾದ ಸಂದರ್ಭಗಳಿವೆ. ಹೆಂಡತಿಯ ವಿಷಯದಲ್ಲಿ, ತಿಂಗಳ ನಿರ್ದಿಷ್ಟವಾದ ಸಮಯಗಳಲ್ಲಿ ಅಥವಾ ಅವಳು ತುಂಬ ದಣಿದಿರುವಾಗ ಇದು ನಿಜವಾಗಿರಬಹುದು. (ಹೋಲಿಸಿ ಯಾಜಕಕಾಂಡ 18:19.) ಗಂಡನ ವಿಷಯದಲ್ಲೂ, ಅವನು ಕೆಲಸದಲ್ಲಿ ಒಂದು ಗಂಭೀರವಾದ ಸಮಸ್ಯೆಯನ್ನು ನಿರ್ವಹಿಸುತ್ತಿರುವಾಗ ಮತ್ತು ಭಾವನಾತ್ಮಕವಾಗಿ ದಣಿದಿರುವಾಗ ಇದು ನಿಜವಾಗಿರಬಹುದು. ಆ ಸನ್ನಿವೇಶವನ್ನು ಸಹಭಾಗಿಗಳಿಬ್ಬರೂ ಮುಚ್ಚುಮರೆಯಿಲ್ಲದೆ ಚರ್ಚಿಸಿ “ಪರಸ್ಪರ ಸಮ್ಮತಿ”ಯಿಂದ ಒಪ್ಪುವಲ್ಲಿ, ವಿವಾಹದ ಸಲ್ಲಿಸುವಿಕೆಯನ್ನು ಸಲ್ಲಿಸುವುದರಲ್ಲಿ ಇಂತಹ ತಾತ್ಕಾಲಿಕ ಪ್ರತಿಬಂಧದ ವಿದ್ಯಮಾನಗಳನ್ನು ಉತ್ತಮವಾಗಿ ನಿರ್ವಹಿಸಲಾಗುತ್ತದೆ. (1 ಕೊರಿಂಥ 7:5) ಸಹಭಾಗಿಗಳಲ್ಲಿ ಯಾರಾದರೊಬ್ಬರು ತಪ್ಪು ತೀರ್ಮಾನಕ್ಕೆ ಹಾರಿಬಿಡುವುದನ್ನು ಇದು ತಡೆಯುವುದು. ಆದರೂ, ಹೆಂಡತಿಯು ಬುದ್ಧಿಪೂರ್ವಕವಾಗಿ ಗಂಡನಿಗೆ ಅದನ್ನು ತಪ್ಪಿಸುವುದಾದರೆ ಅಥವಾ ಗಂಡನು ಪ್ರೀತಿಯ ರೀತಿಯಲ್ಲಿ ವಿವಾಹದ ಸಲ್ಲಿಸುವಿಕೆಯನ್ನು ಸಲ್ಲಿಸಲು ಬೇಕುಬೇಕೆಂದು ತಪ್ಪುವುದಾದರೆ, ಸಹಭಾಗಿಯು ಶೋಧನೆಗೆ ಒಳಗಾಗುವಂತೆ ಬಿಡಲ್ಪಟ್ಟಾನು. ಅಂತಹ ಒಂದು ಸನ್ನಿವೇಶದಲ್ಲಿ, ಒಂದು ವಿವಾಹದಲ್ಲಿ ಸಮಸ್ಯೆಗಳು ಏಳಬಹುದು.

13. ತಮ್ಮ ಯೋಚನೆಯನ್ನು ಶುದ್ಧವಾಗಿಡಲು ಕ್ರೈಸ್ತರು ಹೇಗೆ ಕೆಲಸಮಾಡಬಲ್ಲರು?

13 ಎಲ್ಲ ಕ್ರೈಸ್ತರಂತೆ, ದೇವರ ವಿವಾಹಿತ ಸೇವಕರು ಅಶುದ್ಧವೂ ಅಸ್ವಾಭಾವಿಕವೂ ಆದ ಕಾಮಾಭಿಲಾಷೆಗಳನ್ನು ಉಂಟುಮಾಡಬಲ್ಲ ಲಂಪಟ ಸಾಹಿತ್ಯವನ್ನು ವರ್ಜಿಸಲೇಬೇಕು. (ಕೊಲೊಸ್ಸೆ 3:5) ವಿರುದ್ಧಲಿಂಗದ ಸದಸ್ಯರೆಲ್ಲರೊಂದಿಗೆ ವ್ಯವಹರಿಸುವಾಗ ತಮ್ಮ ಆಲೋಚನೆ ಮತ್ತು ಕ್ರಿಯೆಗಳನ್ನು ಸಹ ಅವರು ಕಾಯಬೇಕು. ಯೇಸು ಎಚ್ಚರಿಸಿದ್ದು: “ಒಬ್ಬ ಸ್ತ್ರೀಗಾಗಿ ಕಾಮೋದ್ರೇಕವುಳ್ಳವನಾಗುವಂತೆ ಆಕೆಯನ್ನು ನೋಡುತ್ತಾ ಇರುವ ಪ್ರತಿಯೊಬ್ಬನು ಆಕೆಯೊಂದಿಗೆ ತನ್ನ ಹೃದಯದಲ್ಲಿ ಆಗಲೇ ವ್ಯಭಿಚಾರವನ್ನು ಮಾಡಿದ್ದಾನೆ.” (ಮತ್ತಾಯ 5:28, NW) ಕಾಮದ ಕುರಿತ ಬೈಬಲಿನ ಸಲಹೆಯನ್ನು ಅನ್ವಯಿಸಿಕೊಳ್ಳುವ ಮೂಲಕ ದಂಪತಿಗಳು ಶೋಧನೆಗೆ ಬೀಳುವುದನ್ನು ಮತ್ತು ವ್ಯಭಿಚಾರಗೈಯುವುದನ್ನು ವರ್ಜಿಸಲು ಶಕ್ತರಾಗಿರಬೇಕು. ಯಾವುದರಲ್ಲಿ ಕಾಮ ಸುಖವು ವಿವಾಹದ ಮೂಲಕರ್ತನಾದ ಯೆಹೋವನಿಂದ ಒಂದು ಹಿತಕರವಾದ ಕೊಡುಗೆಯಾಗಿ ಅಮೂಲ್ಯವೆಂದೆಣಿಸಲ್ಪಡುತ್ತದೊ ಆ ವಿವಾಹದಲ್ಲಿ, ಅವರು ಆನಂದಕರವಾದ ಆಪ್ತತೆಯನ್ನು ಅನುಭವಿಸುತ್ತಾ ಮುಂದರಿಯಬಲ್ಲರು.—ಜ್ಞಾನೋಕ್ತಿ 5:15-19.

ವಿವಾಹ ವಿಚ್ಛೇದಕ್ಕಿರುವ ಬೈಬಲ್‌ ಸಂಬಂಧಿತ ಆಧಾರಗಳು

14. ಯಾವ ದುಃಖದ ಸನ್ನಿವೇಶವು ತಾನೇ ಕೆಲವೊಮ್ಮೆ ಕಾಣಿಸಿಕೊಳ್ಳುತ್ತದೆ? ಏಕೆ?

14 ಸಂತೋಷಕರವಾಗಿ, ಹೆಚ್ಚಿನ ಕ್ರೈಸ್ತ ವಿವಾಹಗಳಲ್ಲಿ ಏಳುವ ಯಾವುದೇ ಸಮಸ್ಯೆಗಳನ್ನು ನಿಭಾಯಿಸಲಿಕ್ಕೆ ಸಾಧ್ಯವಿದೆ. ಕೆಲವೊಮ್ಮೆಯಾದರೊ, ವಿದ್ಯಮಾನವು ಹೀಗಿರುವುದಿಲ್ಲ. ಮನುಷ್ಯರು ಅಪರಿಪೂರ್ಣರೂ ಸೈತಾನನ ನಿಯಂತ್ರಣದ ಕೆಳಗಿರುವ ಪಾಪಮಯ ಲೋಕದಲ್ಲಿ ಜೀವಿಸುವವರೂ ಆಗಿರುವುದರಿಂದ, ಕೆಲವು ವಿವಾಹಗಳು ಒಡೆದುಹೋಗುವ ಹಂತವನ್ನು ತಲಪುತ್ತವೆಂಬುದು ನಿಶ್ಚಯ. (1 ಯೋಹಾನ 5:19) ಅಂತಹ ಒಂದು ಕ್ಲೇಶಕರ ಸನ್ನಿವೇಶವನ್ನು ಕ್ರೈಸ್ತರು ಹೇಗೆ ನಿಭಾಯಿಸಬೇಕು?

15. (ಎ) ಪುನರ್ವಿವಾಹವು ಸಾಧ್ಯವಾಗಿರುವ ವಿಚ್ಛೇದಕ್ಕಾಗಿರುವ ಏಕಮಾತ್ರ ಶಾಸ್ತ್ರೀಯ ಆಧಾರವು ಯಾವುದು? (ಬಿ) ಅಪನಂಬಿಗಸ್ತ ವಿವಾಹ ಸಂಗಾತಿಯನ್ನು ವಿಚ್ಛೇದಿಸುವ ವಿರುದ್ಧವಾಗಿ ಕೆಲವರು ನಿರ್ಣಯಿಸಿದ್ದಾರೆ ಏಕೆ?

15 ಈ ಪುಸ್ತಕದ ಅಧ್ಯಾಯ 2ರಲ್ಲಿ ತಿಳಿಸಲ್ಪಟ್ಟ ಪ್ರಕಾರ, ಪುನರ್ವಿವಾಹವು ಶಕ್ಯವಿರುವ ವಿಚ್ಛೇದಕ್ಕೆ ಏಕಮಾತ್ರ ಶಾಸ್ತ್ರೀಯ ಆಧಾರವು ಜಾರತ್ವವಾಗಿದೆ. * (ಮತ್ತಾಯ 19:9) ನಿಮ್ಮ ವಿವಾಹ ಸಂಗಾತಿಯು ಅಪನಂಬಿಗಸ್ತನಾಗಿದ್ದಾನೆಂಬ ನಿಶ್ಚಿತ ಪುರಾವೆಯು ನಿಮಗಿರುವಲ್ಲಿ, ಆಗ ಒಂದು ಕಷ್ಟದ ನಿರ್ಣಯವನ್ನು ನೀವು ಎದುರಿಸುತ್ತೀರಿ. ಆ ವಿವಾಹದಲ್ಲಿ ನೀವು ಮುಂದರಿಯುವಿರೊ ಇಲ್ಲವೆ ವಿಚ್ಛೇದವನ್ನು ಪಡೆಯುವಿರೊ? ಅದಕ್ಕೆ ನಿಯಮಗಳಿಲ್ಲ. ಕೆಲವು ಕ್ರೈಸ್ತರು ನಿಜವಾಗಿ ಪಶ್ಚಾತ್ತಾಪಿಯಾದ ಒಬ್ಬ ಸಹಭಾಗಿಯನ್ನು ಪೂರ್ತಿಯಾಗಿ ಕ್ಷಮಿಸಿದ್ದಾರೆ, ಮತ್ತು ಉಳಿಸಲ್ಪಟ್ಟ ವಿವಾಹವು ಒಳ್ಳೇದಾಗಿ ಪರಿಣಮಿಸಿದೆ. ಇತರರು ಮಕ್ಕಳ ಸಲುವಾಗಿ ವಿಚ್ಛೇದದ ವಿರುದ್ಧವಾಗಿ ನಿರ್ಣಯ ಮಾಡಿರುತ್ತಾರೆ.

16. (ಎ) ತಮ್ಮ ತಪ್ಪಿತಸ್ಥ ವಿವಾಹ ಸಂಗಾತಿಯನ್ನು ವಿಚ್ಛೇದಿಸಲಿಕ್ಕೆ ಕೆಲವರನ್ನು ಪ್ರಚೋದಿಸಿರುವ ಕೆಲವು ಕಾರಣಾಂಶಗಳು ಯಾವುವು? (ಬಿ) ಒಬ್ಬ ನಿರ್ದೋಷಿ ವಿವಾಹ ಸಂಗಾತಿಯು ವಿಚ್ಛೇದಿಸುವುದಕ್ಕೆ ಅಥವಾ ವಿಚ್ಛೇದಿಸದಿರುವುದಕ್ಕೆ ನಿರ್ಣಯವನ್ನು ಮಾಡುವಾಗ, ಅವರ ನಿರ್ಣಯವನ್ನು ಯಾರೂ ಟೀಕಿಸಬಾರದೇಕೆ?

16 ಮತ್ತೊಂದು ಕಡೆ, ಆ ಪಾಪಮಯ ಕೃತ್ಯವು ಗರ್ಭಧಾರಣೆಯಲ್ಲಿ, ಇಲ್ಲವೆ ಒಂದು ರತಿರವಾನಿತ ರೋಗದಲ್ಲಿ ಪರಿಣಮಿಸಿರಬಹುದು. ಅಥವಾ ಮಕ್ಕಳನ್ನು ಲೈಂಗಿಕವಾಗಿ ಅಪಪ್ರಯೋಗಿಸುವ ಒಬ್ಬ ಹೆತ್ತವನಿಂದ ರಕ್ಷಿಸುವ ಅಗತ್ಯವಿರಬಹುದು. ಸ್ಪಷ್ಟವಾಗಿ, ಒಂದು ನಿರ್ಣಯವನ್ನು ಮಾಡುವ ಮುಂಚೆ ಗಮನಿಸಬೇಕಾದ ಹೆಚ್ಚಿನ ವಿಷಯವಿದೆ. ಆದರೂ, ನಿಮ್ಮ ವಿವಾಹ ಸಹಭಾಗಿಯ ದಾಂಪತ್ಯ ದ್ರೋಹವನ್ನು ತಿಳಿದಾದ ಮೇಲೆ ನಿಮ್ಮ ಸಂಗಾತಿಯೊಂದಿಗೆ ಲೈಂಗಿಕ ಸಂಭೋಗವನ್ನು ನೀವು ಪುನರಾರಂಭಿಸುವಲ್ಲಿ, ನೀವು ನಿಮ್ಮ ಸಂಗಾತಿಯನ್ನು ಕ್ಷಮಿಸಿದ್ದೀರಿ ಮತ್ತು ವಿವಾಹದಲ್ಲಿ ಮುಂದುವರಿಯಲು ಅಪೇಕ್ಷಿಸುತ್ತೀರಿ ಎಂಬುದನ್ನು ಹೀಗೆ ನೀವು ಸೂಚಿಸುತ್ತೀರಿ. ಪುನರ್ವಿವಾಹಕ್ಕೆ ಶಾಸ್ತ್ರೀಯ ಸಾಧ್ಯತೆಯಿರುವ ವಿಚ್ಛೇದಕ್ಕೆ ಆಧಾರವು ಇನ್ನುಮುಂದೆ ಇರುವುದಿಲ್ಲ. ಯಾವನೂ ಅದರಲ್ಲಿ ತಲೆಹಾಕಿ ನಿಮ್ಮ ನಿರ್ಣಯವನ್ನು ಪ್ರಭಾವಿಸಲು ಪ್ರಯತ್ನಿಸಲೂಬಾರದು, ನೀವು ನಿರ್ಣಯವನ್ನು ಮಾಡುವಾಗ ಅದನ್ನು ಯಾವನೂ ಟೀಕಿಸಲೂಬಾರದು. ನೀವು ಏನು ನಿರ್ಣಯಿಸುತ್ತೀರೊ ಅದರ ಫಲಿತಾಂಶಗಳೊಂದಿಗೆ ನೀವು ಜೀವಿಸಬೇಕಾಗುವುದು. “ಪ್ರತಿಯೊಬ್ಬನು ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು.”—ಗಲಾತ್ಯ 6:5.

ಪ್ರತ್ಯೇಕವಾಸಕ್ಕೆ ಆಧಾರಗಳು

17. ಯಾವ ಜಾರತ್ವವೂ ಇರದಿದ್ದಲ್ಲಿ, ಪ್ರತ್ಯೇಕವಾಸ ಅಥವಾ ವಿಚ್ಛೇದದ ಮೇಲೆ ಯಾವ ಪರಿಮಿತಿಗಳನ್ನು ಶಾಸ್ತ್ರಗಳು ಇಡುತ್ತವೆ?

17 ವಿವಾಹ ಸಂಗಾತಿಯೊಬ್ಬನು ಜಾರತ್ವವನ್ನು ಗೈಯದಿದ್ದರೂ ಅವನಿಂದ ಪ್ರತ್ಯೇಕವಾಸವನ್ನು ಅಥವಾ ಒಂದುವೇಳೆ ವಿಚ್ಛೇದವನ್ನು ತೆಗೆದುಕೊಳ್ಳುವುದನ್ನು ಸಮರ್ಥಿಸಬಹುದಾದ ಸನ್ನಿವೇಶಗಳು ಇವೆಯೊ? ಹೌದು, ಆದರೆ ಅಂತಹ ಒಂದು ವಿದ್ಯಮಾನದಲ್ಲಿ, ಕ್ರೈಸ್ತನೊಬ್ಬನು ಪುನರ್ವಿವಾಹದ ನೋಟದಲ್ಲಿ ಬೇರೊಬ್ಬ ವ್ಯಕ್ತಿಯನ್ನು ಬೆನ್ನಟ್ಟಲು ಸ್ವತಂತ್ರನಾಗಿರುವುದಿಲ್ಲ. (ಮತ್ತಾಯ 5:32) ಇಂತಹ ಪ್ರತ್ಯೇಕವಾಸವನ್ನು ಬೈಬಲು ಪರಿಗಣನೆಗೆ ತೆಗೆದುಕೊಳ್ಳುತ್ತದಾದರೂ, ಅಗಲುವವನು “ಅವಿವಾಹಿತನಾಗಿರಬೇಕು ಇಲ್ಲವೆ ಪುನಃ ಸಮಾಧಾನಮಾಡಿಕೊಳ್ಳಬೇಕು” ಎಂದು ವಿಧಿಸುತ್ತದೆ. (1 ಕೊರಿಂಥ 7:11) ಪ್ರತ್ಯೇಕವಾಸವನ್ನು ಸೂಕ್ತವಾಗಿ ತೋರುವಂತೆ ಮಾಡಬಹುದಾದ ಕೆಲವು ವಿಪರೀತ ಸನ್ನಿವೇಶಗಳು ಯಾವುವು?

18, 19. ಪುನರ್ವಿವಾಹವು ಸಾಧ್ಯವಿಲ್ಲದಿದ್ದರೂ, ನ್ಯಾಯಬದ್ಧ ಪ್ರತ್ಯೇಕವಾಸ ಅಥವಾ ವಿಚ್ಛೇದದ ಸೂಕ್ತತೆಯನ್ನು ತೂಗಿನೋಡಲು ಜೊತೆಗಾರರನ್ನು ನಡೆಸುವ ಕೆಲವು ವಿಪರೀತ ಸನ್ನಿವೇಶಗಳು ಯಾವುವು?

18 ಒಳ್ಳೇದು, ಗಂಡನ ಪಕ್ಕಾ ಸೋಮಾರಿತನ ಮತ್ತು ದುರಭ್ಯಾಸಗಳಿಂದಾಗಿ ಒಂದು ಕುಟುಂಬವು ನಿರ್ಗತಿಕವಾಗಬಹುದು. * ಅವನು ಕುಟುಂಬದ ಆದಾಯವನ್ನು ಜೂಜಾಡಿ ಕಳೆದುಕೊಳ್ಳಬಹುದು, ಇಲ್ಲವೆ ಅಮಲೌಷಧ ಅಥವಾ ಮದ್ಯ ವ್ಯಸನಗಳನ್ನು ಪೂರೈಸಲು ಅದನ್ನು ಬಳಸಬಹುದು. ಬೈಬಲು ಅನ್ನುವುದು: “ಯಾವನಾದರೂ . . . ತನ್ನ ಮನೆವಾರ್ತೆಯ ಸದಸ್ಯರನ್ನು ಸಂರಕ್ಷಿಸದೆಹೋದರೆ ಅವನು ಕ್ರಿಸ್ತನಂಬಿಕೆಯನ್ನು ತಿರಸ್ಕರಿಸಿದವನೂ ನಂಬದವನಿಗಿಂತ ಕಡೆಯಾದವನೂ ಆಗಿದ್ದಾನೆ.” (1 ತಿಮೊಥೆಯ 5:8, NW) ಅಂಥ ಒಬ್ಬ ಮನುಷ್ಯನು ತನ್ನ ಮಾರ್ಗಗಳನ್ನು ಬದಲಾಯಿಸಲು ನಿರಾಕರಿಸುವುದಾದರೆ, ತನ್ನ ವ್ಯಸನಗಳ ಖರ್ಚಿಗೋಸ್ಕರ ಬಹುಶಃ ತನ್ನ ಹೆಂಡತಿಯು ಸಂಪಾದಿಸುವ ಹಣವನ್ನೂ ತೆಗೆದುಕೊಳ್ಳುವುದಾದರೆ, ಹೆಂಡತಿಯು ಒಂದು ನ್ಯಾಯಬದ್ಧ ಪ್ರತ್ಯೇಕವಾಸವನ್ನು ಪಡೆಯುವ ಮೂಲಕ, ತನ್ನ ಮತ್ತು ತನ್ನ ಮಕ್ಕಳ ಹಿತಾಸಕ್ತಿಯನ್ನು ಸಂರಕ್ಷಿಸಲು ಆಯ್ದುಕೊಳ್ಳಬಹುದು.

19 ಒಬ್ಬ ಜೊತೆಗಾರನು ತನ್ನ ಸಹಭಾಗಿಯ ಕಡೆಗೆ ಅತಿರೇಕವಾಗಿ ಹಿಂಸಾಚಾರಿಯಾಗಿ ಪ್ರಾಯಶಃ ಅವಳ ಆರೋಗ್ಯ ಮತ್ತು ಅವಳ ಜೀವಕ್ಕೂ ಅಪಾಯವಾಗುವಷ್ಟರ ಮಟ್ಟಿಗೆ ಪದೇ ಪದೇ ಹೊಡೆಯುವಲ್ಲಿ ಸಹ ಅಂತಹ ನ್ಯಾಯಬದ್ಧ ಕ್ರಮವು ಪರಿಗಣಿಸಲ್ಪಡಬಹುದು. ಅಷ್ಟಲ್ಲದೆ, ಒಬ್ಬ ಜೊತೆಗಾರನು ತನ್ನ ವಿವಾಹ ಸಂಗಾತಿಯನ್ನು ಅವಳು ಯಾವುದಾದರೊಂದು ವಿಧದಲ್ಲಿ ದೇವರ ಆಜ್ಞೆಗಳನ್ನು ಮುರಿಯುವಂತೆ ಸದಾ ಒತ್ತಾಯಿಸಲು ಪ್ರಯತ್ನಿಸುವುದಾದರೆ, ವಿಶೇಷವಾಗಿ ಈ ವಿಷಯಗಳು ಆತ್ಮಿಕ ಜೀವಿತಕ್ಕೆ ಅಪಾಯವಾಗುವ ಹಂತವನ್ನು ಮುಟ್ಟುವಲ್ಲಿ, ಬೆದರಿಕೆಗೆ ಗುರಿಯಾದ ಸಂಗಾತಿಯು ಪ್ರತ್ಯೇಕವಾಸವನ್ನು ಪರಿಗಣಿಸಬಹುದು. “ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾ”ಗುವ ಒಂದೇ ಮಾರ್ಗವು ಒಂದು ನ್ಯಾಯಬದ್ಧ ಪ್ರತ್ಯೇಕವಾಸವನ್ನು ಪಡೆದುಕೊಳ್ಳುವುದು ಎಂದು ಅಪಾಯದಲ್ಲಿರುವ ಜೊತೆಗಾರ್ತಿಯು ತೀರ್ಮಾನಿಸಬಹುದು.—ಅ. ಕೃತ್ಯಗಳು 5:29.

20. (ಎ) ಒಂದು ಕುಟುಂಬದ ಮುರಿತದ ವಿದ್ಯಮಾನದಲ್ಲಿ, ಪಕ್ವತೆಯ ಸ್ನೇಹಿತರು ಮತ್ತು ಹಿರಿಯರು ಏನನ್ನು ನೀಡಬಹುದು, ಮತ್ತು ಅವರು ಏನನ್ನು ನೀಡಬಾರದು? (ಬಿ) ವಿವಾಹಿತ ವ್ಯಕ್ತಿಗಳು ಪ್ರತ್ಯೇಕವಾಸ ಮತ್ತು ವಿಚ್ಛೇದಕ್ಕಿರುವ ಬೈಬಲ್‌ ನಿರ್ದೇಶಗಳನ್ನು ಏನು ಮಾಡಲು ಒಂದು ನೆವವಾಗಿ ಉಪಯೋಗಿಸಬಾರದು?

20 ಜೊತೆಗಾರರ ವಿಪರೀತ ದುರುಪಯೋಗದ ಎಲ್ಲ ವಿದ್ಯಮಾನಗಳಲ್ಲಿ, ಪ್ರತ್ಯೇಕವಾಸವನ್ನು ಪಡೆಯಲು ಅಥವಾ ಅವರೊಂದಿಗೆ ಉಳಿಯಲು ನಿರ್ದೋಷಿ ಸಂಗಾತಿಯ ಮೇಲೆ ಯಾರೂ ಒತ್ತಡವನ್ನು ಹಾಕಬಾರದು. ಪಕ್ವತೆಯ ಸ್ನೇಹಿತರು ಮತ್ತು ಹಿರಿಯರು ಬೆಂಬಲವನ್ನೂ ಬೈಬಲಾಧಾರಿತ ಸಲಹೆಯನ್ನೂ ಕೊಡಬಹುದಾದರೂ, ಒಬ್ಬ ಗಂಡ ಮತ್ತು ಹೆಂಡತಿಯ ಮಧ್ಯೆ ಏನು ನಡೆಯುತ್ತದೆಂಬ ಎಲ್ಲ ವಿವರಗಳನ್ನು ಇವರು ತಿಳಿಯಸಾಧ್ಯವಿಲ್ಲ. ಅದನ್ನು ಯೆಹೋವನು ಮಾತ್ರ ಕಾಣಶಕ್ತನು. ಕ್ರೈಸ್ತ ಹೆಂಡತಿಯೊಬ್ಬಳು ಒಂದು ವಿವಾಹದಿಂದ ಹೊರಬರಲು ಕ್ಷುಲ್ಲಕ ನೆವಗಳನ್ನು ಬಳಸಿದಲ್ಲಿ ದೇವರ ವಿವಾಹದೇರ್ಪಾಡನ್ನು ಆಕೆಯು ಗೌರವಿಸುವವಳಾಗುವುದಿಲ್ಲ ಎಂಬುದು ನಿಶ್ಚಯ. ಆದರೆ ಒಂದು ಅತ್ಯಂತ ಅಪಾಯಕರ ಸನ್ನಿವೇಶವು ಪಟ್ಟುಹಿಡಿಯುವುದಾದರೆ, ಅವಳು ಪ್ರತ್ಯೇಕವಾಸವನ್ನು ಆರಿಸಿಕೊಂಡಲ್ಲಿ ಯಾರೂ ಆಕೆಯನ್ನು ಟೀಕಿಸಬಾರದು. ಪ್ರತ್ಯೇಕವಾಸವನ್ನು ಹುಡುಕುವ ಒಬ್ಬ ಕ್ರೈಸ್ತ ಗಂಡನ ವಿಷಯದಲ್ಲೂ ನಿಖರವಾಗಿ ಇದೇ ವಿಷಯಗಳನ್ನು ಹೇಳಸಾಧ್ಯವಿದೆ. “ನಾವೆಲ್ಲರೂ ದೇವರ ನ್ಯಾಯಾಸನದ ಮುಂದೆ ನಿಲ್ಲಬೇಕಲ್ಲಾ.”—ರೋಮಾಪುರ 14:10.

ಮುರಿದ ವಿವಾಹವು ಉಳಿಸಲ್ಪಟ್ಟ ವಿಧ

21. ವಿವಾಹದ ಕುರಿತ ಬೈಬಲ್‌ ಸಲಹೆಯು ಕಾರ್ಯಸಾಧಕವೆಂದು ಯಾವ ಅನುಭವವು ತೋರಿಸುತ್ತದೆ?

21 ಆರಂಭದಲ್ಲಿ ತಿಳಿಸಲ್ಪಟ್ಟ ಲೂಚೀಯಳು ತನ್ನ ಗಂಡನಿಂದ ಪ್ರತ್ಯೇಕವಾದ ಮೂರು ತಿಂಗಳುಗಳ ಬಳಿಕ, ಅವಳು ಯೆಹೋವನ ಸಾಕ್ಷಿಗಳನ್ನು ಭೇಟಿಯಾಗಿ ಅವರೊಂದಿಗೆ ಬೈಬಲನ್ನು ಅಭ್ಯಾಸಿಸಲು ಪ್ರಾರಂಭಿಸಿದಳು. “ನನ್ನ ಅತ್ಯಾಶ್ಚರ್ಯಕ್ಕೆ,” ಅವಳು ವಿವರಿಸಿದ್ದು, “ಬೈಬಲು ನನ್ನ ಸಮಸ್ಯೆಗಳಿಗೆ ಪ್ರಾಯೋಗಿಕ ಪರಿಹಾರಗಳನ್ನು ಒದಗಿಸಿತು. ಕೇವಲ ಒಂದು ವಾರದ ಅಧ್ಯಯನದ ಅನಂತರ ನಾನು ಕೂಡಲೆ ನನ್ನ ಗಂಡನೊಂದಿಗೆ ರಾಜಿಯಾಗಲು ಬಯಸಿದೆ. ಬಿಕ್ಕಟ್ಟಿನಲ್ಲಿರುವ ವಿವಾಹಗಳನ್ನು ಉಳಿಸುವ ವಿಧವು ಯೆಹೋವನಿಗೆ ತಿಳಿದಿದೆ, ಯಾಕಂದರೆ ಆತನ ಬೋಧನೆಗಳು ಸಂಗಾತಿಗಳಿಗೆ ಒಬ್ಬರನ್ನೊಬ್ಬರು ಗೌರವದಿಂದ ಕಾಣುವುದು ಹೇಗೆಂಬುದನ್ನು ಕಲಿಸಲು ಸಹಾಯ ಮಾಡುತ್ತವೆ ಎಂದು ನಾನು ಇಂದು ಹೇಳಬಲ್ಲೆ. ಕೆಲವರು ಪ್ರತಿಪಾದಿಸುವಂತೆ, ಯೆಹೋವನ ಸಾಕ್ಷಿಗಳು ಕುಟುಂಬಗಳನ್ನು ವಿಭಾಗಿಸುತ್ತಾರೆಂಬುದು ಸತ್ಯವಲ್ಲ. ನನ್ನ ವಿದ್ಯಮಾನದಲ್ಲಿ, ಸರಿ ವಿರುದ್ಧವಾದುದು ಸತ್ಯವಾಯಿತು.” ಲೂಚೀಯ ಬೈಬಲ್‌ ಮೂಲತತ್ವಗಳನ್ನು ತನ್ನ ಜೀವಿತದಲ್ಲಿ ಅನ್ವಯಿಸಲು ಕಲಿತುಕೊಂಡಳು.

22. ವಿವಾಹಿತ ದಂಪತಿಗಳೆಲ್ಲರೂ ಯಾವುದರಲ್ಲಿ ಭರವಸೆಯಿಡಬೇಕು?

22 ಲೂಚೀಯ ಒಂದು ಅಪವಾದವಲ್ಲ. ವಿವಾಹವು ಒಂದು ಆಶೀರ್ವಾದವಾಗಿರಬೇಕು, ಹೊರೆಯಲ್ಲ. ಇದಕ್ಕಾಗಿಯೆ ಬರೆದಿರುವವುಗಳಲ್ಲೇ ಅತ್ಯುತ್ತಮವಾದ ವಿವಾಹ ಸಲಹೆಯ ಮೂಲವನ್ನು—ತನ್ನ ಅಮೂಲ್ಯ ವಾಕ್ಯವನ್ನು ಯೆಹೋವನು ಒದಗಿಸಿದ್ದಾನೆ. ಬೈಬಲು “ಬುದ್ಧಿಹೀನರಿಗೆ ವಿವೇಕಪ್ರದ”ವಾಗಿರಬಲ್ಲದು. (ಕೀರ್ತನೆ 19:7-11) ಮುರಿಯುವ ಹಂತದಲ್ಲಿದ್ದ ಅನೇಕ ವಿವಾಹಗಳನ್ನು ಅದು ಉಳಿಸಿದೆ ಮತ್ತು ಗಂಭೀರ ಸಮಸ್ಯೆಗಳಿದ್ದ ಬೇರೆ ಅನೇಕ ವಿವಾಹಗಳನ್ನು ಸುಧಾರಿಸಿದೆ. ಯೆಹೋವ ದೇವರು ಒದಗಿಸುವ ವಿವಾಹ ಸಲಹೆಯಲ್ಲಿ ವಿವಾಹಿತ ದಂಪತಿಗಳೆಲ್ಲರೂ ಪೂರ್ಣ ಭರವಸವಿಡುವಂತಾಗಲಿ. ಅದು ನಿಜವಾಗಿಯೂ ಕಾರ್ಯಸಾಧಕವಾಗಿದೆ!

^ ಹೆಸರನ್ನು ಬದಲಾಯಿಸಲಾಗಿದೆ.

^ ಈ ಕ್ಷೇತ್ರಗಳಲ್ಲಿ ಕೆಲವು ಹಿಂದಿನ ಅಧ್ಯಾಯಗಳಲ್ಲಿ ಚರ್ಚಿಸಲ್ಪಟ್ಟಿವೆ.

^ “ಜಾರತ್ವ” ಎಂದು ತರ್ಜುಮೆಯಾದ ಬೈಬಲಿನ ಪದದಲ್ಲಿ, ವ್ಯಭಿಚಾರ, ಸಲಿಂಗೀಕಾಮ, ಪಶು ಸಂಭೋಗ ಮತ್ತು ಜನನೇಂದ್ರಿಯಗಳ ಉಪಯೋಗವನ್ನು ಒಳಗೊಂಡಿರುವ ಉದ್ದೇಶಪೂರ್ವಕವಾದ ಇತರ ನಿಷಿದ್ಧ ಕೃತ್ಯಗಳು ಸೇರಿರುತ್ತವೆ.

^ ಒಬ್ಬ ಗಂಡನು ಸದುದ್ದೇಶವುಳ್ಳವನಾಗಿದ್ದರೂ, ಅನಾರೋಗ್ಯ ಅಥವಾ ಉದ್ಯೋಗ ಅವಕಾಶಗಳ ಅಭಾವದಂತಹ, ತನ್ನ ಹತೋಟಿಗೆ ಮೀರಿದ ಕಾರಣಗಳಿಂದ ತನ್ನ ಕುಟುಂಬಕ್ಕಾಗಿ ಒದಗಿಸಲು ಅಶಕ್ತನಾಗುವ ಸನ್ನಿವೇಶಗಳನ್ನು ಇದು ಒಳಗೊಳ್ಳುವುದಿಲ್ಲ.